ನಮ್ಮಪ್ಪನ ಆಸ್ತಿ ತಿಂದು ನೀರು ಕುಡದೆ ಎಂದು ಚಿಕ್ಕಪ್ಪನ ಮೇಲೆ ಹಗೆ ಸಾಧಿಸುತ್ತಿದ್ದ ಅಣ್ಣನ ಮಕ್ಕಳಿಗೆ ದಾರಿ ದೀಪವಾದ ಅದೇ ಚಿಕ್ಕಪ್ಪನ ಪ್ರೀತಿಯ ಕತೆ. ಕತೆಗಾರ ಪ್ರಭಾಕರ ತಾಮ್ರಗೌರಿ ಅವರು ಸಂಬಂಧದ ಎಳೆಯನ್ನುಅರ್ಥಪೂರ್ಣವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಓದಿ…
ಕತೆಯ ಮುಂದೊರೆದ ಭಾಗ :
ಎರಡು ಮೂರು ದಿವಸ ರಾಯರಿಗೆ ಇದೇ ಯೋಚನೆಯಾಯ್ತು . ಆಸ್ತೀಲಿ ಭಾಗ ಮಾಡೋದು ಆಶ್ಚರ್ಯವಲ್ಲ . ಆದರೆ , ಅದನ್ನು ಅವರು ಉಳಿಸ್ಕೊತಾರ್ಯೆ ….? ಅಥವಾ ಏನಾದರೂ ಮಾಡ್ಕೊಳ್ಲಿಎಂದು ಅವರ ಪಾಲಿನದನ್ನು ಅವರಿಗೆ ಕೊಟ್ಟುಬಿಡಬೇಕೇ ….? ಅಥವಾ ಮಕ್ಕಳು ಬುದ್ಧಿವಂತರಾಗಿ ಒಂದು ದಡ ಸೇರೋದನ್ನು ಕಾಣಬೇಕೇ …? ಅಂತ ಯೋಚಿಸಿದ್ದರು . ” ಯಾಕೆ ಅಷ್ಟೊಂದು ಯೋಚನೆ ಮಾಡ್ತೀರಾ ? ಅವರದ್ದನ್ನು ಅವರಿಗೆ ಕೊಟ್ಟು ಕಳಿಸಿ . ಅವರು ಏನು ಬೇಕಾದರೂ ಮಾಡ್ಕೊಳ್ಲಿ ….” ಅಂದಿದ್ದರು ಸೀತಮ್ಮ . ಆದರೂ , ರಾಯರು ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಿದರು .
ಸಂಪೂರ್ಣ ಆಸ್ತಿಯೆಲ್ಲಾ ರಾಯರ ಹೆಸರಿನಲ್ಲಿಯೇ ಇತ್ತು . ರಾಯರ ತಂದೆಗೆ ಕಿರಿಯ ಮಗನ ಮೇಲೆಯೇ ಹೆಚ್ಚಿನ ಪ್ರೀತಿ . ” ನಾನು ಸತ್ತ ಮೇಲೆ ನೀವು ಪಾಲು ಮಾಡ್ಕೊಳ್ಳಿ ” ಎಂದು ಆಸ್ತಿಯನ್ನೆಲ್ಲಾ ಕಿರಿಯ ಮಗನ ಹೆಸರಿಗೇ ಬರೆದಿದ್ದರು . ಅದಕ್ಕೆ ಅಣ್ಣನ ವಿರೋಧವೂ ಇರಲಿಲ್ಲ . ” ಕಾಲಕ್ರಮೇಣ ಆಸ್ತಿಯನ್ನು ಪಾಲು ಮಾಡಿಕೊಳ್ಳೋಣ . ಆದರೆ , ಸಾಧ್ಯವಾದಷ್ಟು ದಿನ ಒಟ್ಟಿಗೇ ಅನ್ಯೋನ್ನವಾಗಿರೋಣ ” ಅಂದುಕೊಂಡಿದ್ದರು . ಮತ್ತೆರಡು ದಿನ ಬಿಟ್ಟು ಪುನಃ ವಸಂತ ಆಸ್ತಿಯ ವಿಚಾರ ಎತ್ತಿದಾಗ , ರಾಯರು ಕಡ್ಡಿ ತುಂಡು ಮಾಡಿದಂತೆ ನಿರ್ಧಾರದ ಧ್ವನಿಯಲ್ಲಿ ಹೇಳಿದ್ದರು . ” ಆಸ್ತೀನ ಈಗ ಭಾಗ ಮಾಡಲು ಸಾಧ್ಯವಿಲ್ಲ . ತೋಟದ ಮೇಲೆ ಬೇಕಾದಷ್ಟು ಸಾಲದ ಹೊರೆ ಇದೆ . ಅವೆಲ್ಲಾ ತೀರದ ಹೊರತು ಪಾಲು ಅಸಾಧ್ಯ ! ಅಲ್ಲದೇ , ಸಧ್ಯಕ್ಕೆ ಪಾಲು ಮಾಡುವ ವಿಚಾರ ನನಗಿಲ್ಲ …..” ವಸಂತ ಕೋಪೋದ್ರಿಕ್ತನಾಗಿದ್ದ . ಮನಸ್ಸಿಗೆ ಬಂದಂತೆಲ್ಲ ಮಾತನಾಡಿದ . ಭಾಗತ್ತೆಯೂ ಬಂದು ಹಠ ಹಿಡಿದಳು . ರಾಯರೂ ಹಠ ಹಿಡಿದಿದ್ದರು .
ಫೋಟೋ ಕೃಪೆ : The Economic Times
” ಚಿಕ್ಕಪ್ಪ ನೀವು ಹೀಗೆ ಮಾಡಿದರೆ ನಾವು ಕೋರ್ಟಿಗೆ ಹೋಗಬೇಕಾಗುತ್ತೆ ” ಅಂತ ಹೆದರಿಸಿದ ವಸಂತ .ರಾಯರು ಸಾವಧಾನದಿಂದ , ” ನಿನಗೆ ಅದೇ ಇಷ್ಟವಾದರೆ ಹಾಗೇ ಮಾಡು . ಕೋರ್ಟಿನಲ್ಲಿಯೇ ಇತ್ಯರ್ಥವಾಗಲಿ ” ಅಂದಿದ್ದರು . ದೊಡ್ಡ ರಾದ್ಧಾಂತವಾಯಿತು . ಸೀತಮ್ಮ ಗಂಡನ ನಡವಳಿಕೆಯನ್ನು ನೋಡಿ , ” ಇದೇನೂಂದ್ರೆ …..” ಪ್ರಶ್ನಿಸಿದಾಗ , ” ನೀನು ಸುಮ್ನಿರು . ಇದೆಲ್ಲಾ ನಿಂಗೆ ಗೊತ್ತಾಗೋಲ್ಲ ” ಅಂದು ಪತ್ನಿಯ ಬಾಯಿ ಮುಚ್ಚಿಸಿದ್ದರು . ಹೀಗೇ ಮತ್ತೆರಡು ದಿನ ಕಳೆಯುವಷ್ಟರಲ್ಲಿ ಭಾಗತ್ತೆಯೂ , ಅವಳ ಮಕ್ಕಳೂ ಮನೆ ಖಾಲಿ ಮಾಡಿದರು . ಎಲ್ಲರೂ ರಾಯರನ್ನು ಹೆದರಿಸಿಯೇ ಹೋದರು . ಭಾಗತ್ತೆ ತನ್ನ ಅಕ್ಕನ ಊರಿಗೆ ಹೋದಳು . ಆ ದಿನಗಳಲ್ಲಿ ರಾಯರ ಹೃದಯ ಭಾರವಾಗಿತ್ತು . ವಿಚಾರ ತಿಳಿದ ಕೆಲವರು ರಾಯರಿಗೆ ತಿಳುವಳಿಕೆ ಹೇಳಿದರು . ಇನ್ನೂ ಕೆಲವರು , ” ಅಣ್ಣನ ಅಸ್ತಿಯನ್ನೇ ನುಂಗಿ ಹಾಕಿ ಅವರ ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿದ್ದಾನೆ ” ಅಂತ ಜರೆದರು .
ಭಾಗತ್ತೆಯ ಅಕ್ಕನ ಊರಿನಲ್ಲಿ ರಾಯರ ಸ್ನೇಹಿತ ಅನಂತಯ್ಯನವರು ಇದ್ದರು . ರಾಯರು ಅವರಿಗೆ ಒಂದು ಪತ್ರ ಬರೆದು ಎಲ್ಲ ವಿವರಗಳನ್ನು ತಿಳಿಸಿ ಆ ಹುಡುಗರಿಗೆ ಈ ರೀತಿ ಸಹಾಯ ಮಾಡು . ನಾನು ಆಗಾಗ್ಗೆ ಹಣ ಕಳಿಸ್ತಾ ಇರ್ತೀನಿ ಅಂತ ಬರೆದಿದ್ದರು . ಒಂದೆರಡು ಬಾರಿ ಹೋಗಿ ಭಾಗತ್ತೆಯನ್ನೂ , ಮತ್ತು ಅವಳ ಮಕ್ಕಳನ್ನೂ ಮರೆಯಿಂದ ನೋಡಿ ಬಂದಿದ್ದರು . ವಸಂತ ಬಿಸಿನೆಸ್ ಪ್ರಾರಂಭ ಮಾಡ್ತೀನಿ ಅಂತ ತಾಯಿಯ ಒಡವೆಗಳನ್ನು ಮಾರಿದ್ದ . ಬಂದ ಹಣದಲ್ಲಿ ಒಂದಿಷ್ಟನ್ನು ಹಾಕಿ ಪ್ರಾರಂಭ ಮಾಡಿದ ವ್ಯಾಪಾರ ಕೈ ಹತ್ತಲಿಲ್ಲ . ಮತ್ತೆಲ್ಲೋ ವ್ಯಾಪಾರ ಮಾಡ್ತೀನಿ ಅಂತ ಅನಂತಯ್ಯನವರಿಂದ ಪಡೆದ ಐದು ಸಾವಿರವೂ ನಷ್ಟವಾಗಿ ಹೋಯ್ತು . ಕೊನೆಗೆ ಅನಂತಯ್ಯನವರ ಬೆಂಬಲದಿಂದಾಗಿ ಒಂದು ಬ್ಯಾಂಕಿನಲ್ಲಿ ಅವನಿಗೆ ಕೆಲಸ ಸಿಕ್ಕಿತು . ಇನ್ನಿಬ್ಬರ ಓದು ಒಂದು ಹಂತಕ್ಕೆ ಬಂದು ಅವರಿಗೂ ಕೆಲಸವಾಗಬೇಕಿತ್ತು . ರಾಯರು ಅನಂತಯ್ಯನವರಿಗೆ ಪತ್ರ ಬರೆದು ” ಆ ಹುಡುಗರನ್ನು ಇಂಥ ಕಡೆ ಕರೆದುಕೊಂಡು ಹೋಗಿ . ಅಲ್ಲಿ ನಾನು ಹೇಳಿದೆ ಅಂತ ತಿಳಿಸಿ . ಅವರು ಕೆಲಸ ಕೊಡ್ತಾರೆ ” ಅಂತ ತಿಳಿಸಿದ್ದರು .

ಹಾಗೇ ಇನ್ನಿಬ್ಬರು ಹುಡುಗರಿಗೂ ಕೆಲಸ ಸಿಕ್ಕಿತ್ತು. ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದರು. ಅನಂತಯ್ಯನವರು ರಾಯರಿಂದ ಪಡೆಯುತ್ತಿದ್ದ ಹಣವನ್ನು ಭಾಗತ್ತೆಯವರಿಗೂ ಮತ್ತು ಅವರ ಮಕ್ಕಳಿಗೂ ಅನುಮಾನ ಬಾರದ ಹಾಗೆ ಸಹಾಯ ರೂಪದಲ್ಲಿ ಕೊಡುತ್ತಿದ್ದರು. ಭಾಗತ್ತೆಗೆ ಅನಂತಯ್ಯನವರ ಪರಿಚಯವಿತ್ತು. ಸ್ವಲ್ಪ ದಿನಗಳಲ್ಲಿಯೇ ರಾಯರಿಗೆ ಕೋರ್ಟಿನ ನೋಟೀಸು ಬಂದಿತ್ತು. ವಸಂತ ದಾವಾ ಹೂಡಿದ್ದ. ರಾಯರು ಕೇಸನ್ನು ಎರಡು ಮೂರು ಬಾರಿ ಮುಂದೂಡಿ ಬಂದಿದ್ದರು. ಭಾಗತೆಯೂ, ಅವರ ಮಕ್ಕಳೂ ಎಷ್ಟು ಹಗೆತನ ಸಾಧಿಸುತ್ತಿದ್ದರೆಂದರೆ ಅಕಸ್ಮಾತ್ ಎದುರಿಗೆ ಸಿಕ್ಕರೆ ಯಾರೋ ಅಪರಿಚಿತರನ್ನು ಕಂಡಂತೆ ಹೊರಟು ಹೋಗುತ್ತಿದ್ದರು. ಅನಂತಯ್ಯನವರ ಎದುರಿನಲ್ಲಿ ರಾಯರನ್ನು ಚೆನ್ನಾಗಿ ಬೈದಿದ್ದರಂತೆ. ಆ ವಿಚಾರವನ್ನು ಅನಂತಯ್ಯನವರೇ ರಾಯರಿಗೆ ತಿಳಿಸಿದ್ದರು. ಅದನ್ನೋದಿ ರಾಯರಿಗೆ ನಗು ಬಂದಿತ್ತು. ಬಹಳ ದಿವಸಗಳ ನಂತರ ಬಂದ ಅನಂತಯ್ಯನವರ ಪತ್ರದಲ್ಲಿ ಭಾಗತ್ತೆಯ ಮಕ್ಕಳು ಈಗ ಬಹಳ ಬುದ್ಧಿವಂತರಾಗಿರುವ ವಿಚಾರ ಬರೆದಿದ್ದರು . ” ವಸಂತನಿಗೆ ಈಗ ಬಿಸಿನೆಸ್ ಮಾಡುವ ಹುಚ್ಚು ಹೋಗಿದೆ . ಬ್ಯಾಂಕ್ ಕೆಲಸದಿಂದ ಬರುವ ಸಂಬಳವನ್ನು ಹಿತಮಿತವಾಗಿ ಖರ್ಚು ಮಾಡುತ್ತಿದ್ದಾನೆ . ಅಲ್ಲದೇ , ಯಾವ ಕೆಟ್ಟ ಹವ್ಯಾಸಗಳೂ ಇಲ್ಲ . ಇನ್ನಿಬ್ಬರು ಮಕ್ಕಳು ಬುದ್ಧಿವಂತರೇ ….. ತಮ್ಮ ಸ್ಥಿತಿ ಗತಿಗಳನ್ನು ಅರಿತುಕೊಂಡಿದ್ದಾರೆ . ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಪಾದಿಸಿ ರಾತ್ರಿ ಕಾಲೇಜಿನಲ್ಲಿ ಒಬ್ಬನು ಪದವಿಗೂ , ಇನ್ನೊಬ್ಬನು ತಾಂತ್ರಿಕ ಶಿಕ್ಷಣಕ್ಕೂ ಹೋಗುತ್ತಿದ್ದಾರೆ .”
“ನಿಮ್ಮ ಹೆಸರು ಹೇಳಿ , ನಾನೇ ಅವನಿಗೆ ತಾಂತ್ರಿಕ ಶಿಕ್ಷಣಕ್ಕೆ ಸೀಟು ಕೊಡಿಸಿದೆ. ನನ್ನ ಅಭಿಪ್ರಾಯದ ಪ್ರಕಾರ ಈಗ ಅವರಿಗೆ ಆಸ್ತಿ ಭಾಗ ಕೊಟ್ಟರೆ ಸರಿ ಹೋದೀತು . ಅಲ್ಲದೇ , ಭಾಗತ್ತೆಗೂ ಈಗ ತಾಳ್ಮೆ ಬಂದಿದೆ . ಆಕೆ ಮೊದಲಿನಂತೆ ದುಡುಕೋದಿಲ್ಲ . ಆದರೆ , ಆಸ್ತಿಯ ಆಸೆ ಇನ್ನೂ ಹೋಗಿಲ್ಲ . ಭಾಗತ್ತೆಯೂ , ಅವರ ಮಕ್ಕಳೂ ಇಷ್ಟು ವರ್ಷಗಳ ಜೀವನಾನುಭವದಿಂದ ಅಲ್ಪ ಸ್ವಲ್ಪ ಪಾಠ ಕಲಿತಿರುವುದರಿಂದ ಈಗ ಅವರಿಗೆ ಬಾರೋ ಆಸ್ತಿಯನ್ನು ರೂಢಿಸಿಕೊಂಡು ಹೋಗ್ತಾರೆಯೇ ವಿನಾ ಕಳೆಯೋದಿಲ್ಲ ಅಂತ ನನ್ನ ನಂಬಿಕೆ . ಬೇಕಿದ್ದರೆ ನೀವೇ ಒಂದುಸಾರಿ ಬಂದು ಅವರನ್ನು ನೋಡಿ ನಿರ್ಧಾರ ಮಾಡಿ …..” ಅಂತ ವಿವರವಾಗಿ ಬರೆದಿದ್ದರು .
ಸೀತಮ್ಮನೂ, ” ಇಷ್ಟು ವರ್ಷ ಅವರ ಆಸ್ತಿಯ ಜವಾಬ್ದಾರಿ ಹೊತ್ತಿದ್ದು ಸಾಕು . ಇನ್ನು ಅವರ ಪಾಲಿನ ಆಸ್ತಿಯನ್ನು ಅವರಿಗೆ ಕೊಟ್ಟುಬಿಡಿ ….” ಅಂತ ಅಂದ ಮೇಲೆ ರಾಯರಿಗೆ ಅದೇ ಸರಿಯೆನಿಸಿತ್ತು . ಇಷ್ಟು ವರ್ಷಗಳ ವಿಚಾರವನ್ನೆಲ್ಲ ಎದುರಿಗೆ ಕುಳಿತು ಮಾತನಾಡಲು ಆಗದು . ಅಲ್ಲದೇ , ನಮ್ಮನ್ನು ಕಂಡು ಆಕೆ ಒಳಗೆ ಬನ್ನಿ ಅಂತ ಕರೆಯುವವಳೂ ಅಲ್ಲ ….” ನಮ್ಮ ಮಾತುಗಳನ್ನು ಕೇಳುವಷ್ಟು ತಾಳ್ಮೆಯೂ ಆಕೆಗಿರೋಲ್ಲ ಅಂತ ವಿಚಾರ ಮಾಡಿ ರಾಯರು ಅತ್ತಿಗೆಗೆ ಒಂದು ದೀರ್ಘವಾದ ಪತ್ರವನ್ನು ಬರೆದಿದ್ದರು . ಆಕೆ ತಮ್ಮಿಂದ ದೂರವಾದರೂ ಅನಂತಯ್ಯನವರ ಮುಖಾಂತರ ತಾವು ಸಹಾಯ ಮಾಡುತ್ತಿದ್ದುದನ್ನು ತಿಳಿಸಿ , ಮುಂದಿನ ವಾರ ಮನೆಗೆ ಬಂದು ವ್ಯವಹಾರವನ್ನು ಬಗೆಹರಿಸುವುದಾಗಿ ತಿಳಿಸಿದ್ದರು .
ತೋಟವನ್ನು ಸರಿಯಾಗಿ ಎರಡು ಭಾಗ ಮಾಡಿ , ಒಂದು ಪಾಲನ್ನು ಭಾಗತ್ತೆಯ ಹೆಸರಿಗೆ ಬರೆಸಿ , ಆ ಪತ್ರವನ್ನು ಇಟ್ಟುಕೊಂಡು ಆಕೆ ಮನೆ ಬಿಟ್ಟ ವರ್ಷದಿಂದ ಆಕೆಯ ಭಾಗದ ತೋಟದಲ್ಲಿ ಬಂದ ಉತ್ಪನ್ನದ ಒಟ್ಟೂ ಮೊತ್ತ , ಅದರಲ್ಲಿ ಈಗಾಗಲೇ ಅನಂತಯ್ಯನವರ ಮುಖಾಂತರ ಕೊಟ್ಟಿರುವ ಹಣ , ಇನ್ನು ಕೊಡಬೇಕಾಗಿರುವ ಹಣ ……..ಮುಂತಾದ ಖರ್ಚು , ವೆಚ್ಚ ಆದಾಯಗಳನ್ನು ತೋರಿಸುವ ಒಂದು ಪಟ್ಟಿಯನ್ನು ತಯಾರಿಸಿ ಹಣವನ್ನು ತೆಗೆದುಕೊಂಡು ಹೊರಟರು . ಜೊತೆಯಲ್ಲಿ ಪತ್ನಿ ಸೀತಮ್ಮ . ಅನಂತಯ್ಯನವರು ಕೂಡ ರಾಯರನ್ನು ನಿರೀಕ್ಷಿಸುತ್ತಿದ್ದರು .
ರಾಯರಿಗೆ ಆಶ್ಚರ್ಯವಾಗುವಂತೆ ವಸಂತ , ಆನಂದ , ಆದಿತ್ಯ ಮೂವರು ಬಸ್ ಸ್ಟಾಂಡಿನಲ್ಲಿ ಕಾಯುತ್ತಿದ್ದರು . ಎಲ್ಲರ ಮುಖದಲ್ಲೂ ಶರಣಾಗತ ಕಳೆ . ಅನಂತಯ್ಯನವರೂ ಅವರ ಸಂಗಡ ಬಂದಿದ್ದರು . ” ಬನ್ನಿ ಚಿಕ್ಕಪ್ಪ , ಚಿಕ್ಕಮ್ಮ ….” ಅಂತ ಹೇಳುತ್ತಾ ವಸಂತ ರಾಯರ ಕೈಯಿಂದ ಬ್ಯಾಗ್ ತೆಗೆದುಕೊಂಡ . ” ಎಷ್ಟು ವರ್ಷ ಆಗೋಗಿತ್ತು ಚಿಕ್ಕಪ್ಪ ನಿಮ್ಮನು ನೋಡಿ ….” ಅಂದರು ಆನಂದ ಆದಿತ್ಯ . ಭಾಗತ್ತೆ ಬಾಗಿಲಿನಲ್ಲಿಯೇ ಕಾಯುತ್ತಿದ್ದಳು . ರಾಯರು ಒಳಗೆ ಹೋಗಿ ಕೂತೊಡನೆ ವಸಂತ , ಆನಂದ, ಆದಿತ್ಯ ರಾಯರ ಕಾಲಿಗೆರಗಿ , ” ಚಿಕ್ಕಪ್ಪ ನಮ್ಮನ್ನು ಕ್ಷಮಿಸಿಬಿಡಿ ….ನಿಮ್ಮ ಒಳ್ಳೆ ತನವನ್ನು , ವಿಶಾಲ ಹೃದಯವನ್ನು ತಿಳಿಯುವಷ್ಟು ತಾಳ್ಮೆ ನಮಗಿರಲಿಲ್ಲ ” ಅಂದರು . ” ನಾನು ಏನೇನೋ ಅಂದಿದ್ದೆ … ಪತ್ರ ಕೂಡ ಬರೆದಿದ್ದೆ . ನೀನು ಚಿಕ್ಕವನಾದ್ರೂ ನಿನ್ನ ಹತ್ತಿರ ಕ್ಷಮೆ ಕೇಳೋಕ್ಕೆ ನಂಗೇನೂ ಸಂಕೋಚ ಇಲ್ಲ ….” ಅಂದಳು ಭಾಗತ್ತೆ.
” ಆಮೇಲೆ ವ್ಯವಹಾರದ ಕುರಿತು ಮಾತನಾಡಿದ ರಾಯರು ಆಸ್ತಿ ಭಾಗದ ಪತ್ರವನ್ನೂ , ಲೆಕ್ಕಪತ್ರದ ಕಾಗದವನ್ನೂ ಅವರಿಗೆ ಕೊಟ್ಟು , ” ನೀವೆಲ್ಲಾ ಅಂದ್ಕೊಂಡಿದ್ದ ಹಾಗೆ ನಾನು ನಿಮ್ಮ ಭಾಗದ ಆಸ್ತೀನ ನುಂಗಿಹಾಕಬೇಕು ಅಂದ್ಕೊಂಡಿರಲಿಲ್ಲ …..ನೀವು ನನ್ನನ್ನು ತಪ್ಪು ತಿಳಿದಿದ್ದೀರಿ. ನೀವು ಕೇಳಿದಾಗಲೇ ನಾನು ಆಸ್ತಿ ಭಾಗ ಮಾಡಿಕೊಟ್ಟಿದ್ರೆ ಇಷ್ಟು ಹೊತ್ತಿಗೆ ಅದು ನಿಮ್ಮಲ್ಲಿ ಇರ್ತಿರಲಿಲ್ಲ . ಅದಕ್ಕೇ ಹುಡುಗರಿಗೆ ಜವಾಬ್ದಾರಿ ಬರೋವರ್ಗೂ ಕಾಯಬೇಕಾಯಿತು. ಜವಾಬ್ದಾರಿ ತಾನೇ ತಾನಾಗಿ ಬರೋಲ್ಲ. ಜೀವನಾನುಭವ ಜವಾಬ್ದಾರೀನ ಕಲಿಸುತ್ತೆ . ಇನ್ನು ನಿಮ್ಮ ಆಸ್ತೀನ ನಿಮಗೆ ಬಿಟ್ಟು ಕೊಡೋಕೆ ನನಗೆ ಯಾವ ಅನುಮಾನವೂ ಇಲ್ಲ …” ಅಂದರು ರಾಯರು. ಚಿಕ್ಕಪ್ಪನ ವಿರುದ್ಧ ಹೂಡಿದ್ದ ದಾವಾ ಈ ಕೂಡಲೇ ವಾಪಸ್ ಪಡೆಯಬೇಕು ಅಂದುಕೊಂಡ ವಸಂತ ” .
- ಪ್ರಭಾಕರ ತಾಮ್ರಗೌರಿ ( ಕತೆಗಾರ -ಕವಿ )