ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಅವರ ಉತ್ತಮ ಭವಿಷ್ಯವನ್ನು ರೂಪಿಸುವುದು ಪಾಲಕರ ಹೊಣೆಗಾರಿಕೆಯೇ ಹೊರತು, ಹೆತ್ತು ಸಮಾಜಕ್ಕೆ ಬಿಡುವುದಲ್ಲ. ಪಾಲಕರ ಹೊಣೆಗಾರಿಕೆಯ ಬಗ್ಗೆ ಡಾ.ರೂಪೇಶ್ ಅವರ ಲೇಖನಿಯಲ್ಲಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಮುಂದೆ ಓದಿ…
ಫೋಟೋ ಕೃಪೆ :bostonlitdistrict
ಖಲೀಲ್ ಗಿಬ್ರಾನ್ ಹೇಳುತ್ತಾರೆ,
ತಂದೆ-ತಾಯಿ ಬಿಲ್ಲಿನಂತೆ, ದೇವನೆಂಬ ಬತ್ತಳಿಕೆಯಿಂದ ಸಿಕ್ಕ ಬಾಣದಂತೆ ಮಕ್ಕಳು.
ಆ ಬಾಣ ಅದರದೇ ಆದ ವೇಗದಲ್ಲಿ ಹೋಗುತ್ತಿರುವಾಗ ನೀವು ಅದನ್ನು ಹಿಡಿದು ನಿಮಗೆ ಬೇಕಾದ ದಿಕ್ಕಿಗೆ ತಿರುಗಿಸುವುದು ತಪ್ಪು. ಹಾಗೆ ತಿರುಗಿಸಿದಾಗ ಆ ವೇಗಕ್ಕೆ,
ಬಾಣವು ನಿಮಗೆ ಬೇಕಾದ ದಿಕ್ಕಿಗೂ,
ಬಾಣ ತಾನೇ ನಿರ್ದರಿಸಿದ ದಿಕ್ಕಿಗೂ
ತಲುಪುವುದಿಲ್ಲ.
ಬಾಣ ಹೂಡುವಾಗ ಅದು ಗುರಿಯತನಕ ಸಂಚರಿಸುವ ಮಾರ್ಗ ತಂದೆ ತಾಯಿಯರು ನಿರಾತಂಕ ಮಾಡಿರಬೇಕು. ಅಂದರೆ ಬಾಣ ಓಡಾಡುವ ಸ್ಥಳ (ಆರೋಗ್ಯಕರ ಸಮಾಜವಾಗಿರಬೇಕು) ಅಡ್ಡಿಗಳು ಇರಬಾರದು.
ನನ್ನ ತಂದೆ ವಿವರಿಸಿದ ಮಹಾಭಾರತ ಕಥೆಯ ಒಂದು ಭಾಗ ನೆನಪಾಗುತ್ತಿದೆ…
ಯುದ್ದ ಮುಗಿದು, ಗಾಂಧಾರಿ ಕುರುಕ್ಷೇತ್ರಕ್ಕೆ ಬಂದು, ತನ್ನ ಕಣ್ಣ ಪಟ್ಟಿಯನ್ನು ಬಿಚ್ಚಿ ನೋಡಿದಾಗ…
ಸಂಪೂರ್ಣ ಕೆಂಪು ಬಣ್ಣದಿಂದ ಭೂಮಿ ಹೊದ್ದು ಕೊಂಡಂತೆ ಇತ್ತು.ಚಿನ್ನ-ಭಿನ್ನವಾದ ಕುದುರೆ, ಆನೆ, ಸೈನಿಕರ ಒಡಲು-ಮಾಂಸ ಯಾವುದೆಂದು ಅರಿಯದೆ ಚದುರಿದೆ. ಅದರಲ್ಲಿ ಕಷ್ಟಪಟ್ಟು ತನ್ನ ಒಂದೊಂದು ಮಕ್ಕಳ ಮೃತ ಶರೀರದ ಹತ್ತಿರ ಹೋಗಿ ,ಆ ಶರೀರದ ಕೆಲ ಭಾಗಗಳನ್ನು ಎತ್ತಿ ಎದೆಗೆ ಅಪ್ಪಿಕೊಂಡು , ಯಾರು ಕೇಳದ ರೀತಿ ಅಳಲು ಪ್ರಯತ್ನಿಸಿದರೂ, ಅವಳರಿಯದೇ ಅವಳ ಧ್ವನಿ ಆಗಸ ಕೇಳುವಷ್ಟು ರೋಧನೆಯಾಗುತ್ತದೆ.
ಕಾಲುಗಳು ಶಕ್ತಿ ಕಳೆದುಕೊಂಡು ನೆಲಕ್ಕುರುಳುತ್ತಾಳೆ.
ಮನಸ್ಸಿನ ನೋವು ಎದ್ದೇಳಲೂ ಅನುವು ಮಾಡದೆ, ಆ ಕೆಂಬಣ್ಣದ ಮಣ್ಣಿನಲ್ಲೇ ಹೊರಳುತ್ತಾ , ಕಣ್ಣೀರು ಹನಿಗಳು , ಕುರುಕ್ಷೇತ್ರ ಭೂಮಿಯಲ್ಲಿನ ಹೆಪ್ಪು ಗಟ್ಟಿ ದ ರಕ್ತವನ್ನು ಸವರುತ್ತದೆ. ಅವಳನ್ನೇ ಹಿಂಬಾಲಿಸಿ ಪಾಂಡವರೊಂದಿಗೆ-ಕೃಷ್ಣನೂ ಇದ್ದರು.
ಫೋಟೋ ಕೃಪೆ : jansatta
“ಹೇ ಭಗವಂತಾ….
ನಾನು ಇಷ್ಟೊಂದು ಮಕ್ಕಳಿಗೆ ಜನ್ಮವಿತ್ತರೂ,
ಒಬ್ಬನನ್ನಾದರೂ ನನ್ನ ಅಂತ್ಯ ತರ್ಪಣಕ್ಕಾಗಿ,
ಶ್ರಾದಕ್ಕಾಗಿ ನೀನು ಕಾಪಾಡಲಿಲ್ಲವಲ್ಲಾ?
ಬಾಕಿ ನೀನು ಇಡಲಿಲ್ಲವಲ್ಲ?
ನಿನ್ನ ಆಸರೆಯಲ್ಲಿ ನೋಡಿಕೊಳ್ಳಲಿಲ್ಲವಲ್ಲಾ…”ಎಂದು ಮಮ್ಮಲ ಮರುಗಿದಳು.
ಗಾಂಧಾರಿಯ ವಿಡಂಬನೆ ಕೇಳಿ,
ಶ್ರೀ ಕೃಷ್ಣ “….ಮಕ್ಕಳನ್ನು ಬೆಳೆಸಿ, ಸಮಾಜಕ್ಕೆ ಬಿಡುವ ಮೊದಲು ಅವರನ್ನು ಸಮಾಜಮುಖಿಯಾಗಿ ಮಾಡುವಂತೆ ನೋಡಿಕೊಳ್ಳದ ಪೋಷಕರು ನೀವು. ತಂದೆ – ತಾಯಿಯೇ ನೋಡಿಕೊಳ್ಳದ ಮಕ್ಕಳನ್ನು ಭಗವಂತ ಹೇಗೆ ತಾನೆ ನೋಡಿಕೊಳ್ಳುತ್ತಾನೆ?” ಎನ್ನುತ್ತಾರೆ.
ಫೋಟೋ ಕೃಪೆ : shutterstock
ಈ ಭೂಮಿಯಲ್ಲಿ ಆಹಾರ ಹುಡುಕಿ ತನ್ನ ಮರಿಗಳೊಂದಿಗೆ ಓಡಾಡುವ ಹೇಂಟೆ(ತಾಯಿ)ಕೋಳಿ, ತನ್ನ ಮರಿಗಳನ್ನು ಕಾಗೆ, ಗಿಡುಗ, ನಾಯಿ…. ಮುಂತಾದವುಗಳ ಆಕ್ರಮಣದಿಂದ ಕಾಪಾಡಿಕೊಂಡು ಹೋಗುವುದು ನಾನು ನನ್ನ ಮನೆಯಲ್ಲಿ ಅಂದೂ ಇಂದೂ ನೋಡುತ್ತಿದ್ದೆ. ಕೆಲವೊಮ್ಮೆ ಹೇಂಟೆ ಆಹಾರಕ್ಕಾಗಿ ಭೂಮಿಯನ್ನು ತನ್ನ ಕಾಲಿನ ಉಗುರಿನಿಂದ ಕೆದಕುತ್ತದೆ. ನಂತರ ಆಹಾರವಿಲ್ಲದಿದ್ದರೆ ಆ ಕೆದಕಿದ ಸ್ಥಳ ಮುಚ್ಚಿ ಮುಂದಕ್ಕೆ ಹೋಗುತ್ತದೆ. ಒಂದು ವೇಳೆ ಕೆದಕಿ ಆಹಾರ ಸಿಕ್ಕರೆ ಮರಿಗಳನ್ನು ಅಲ್ಲಿಗೇ ಕರೆದು ತಿನ್ನಲು ಹೇಳುತ್ತದೆ. ಅಂದರೆ ಭೂಮಿ ಎಷ್ಟೇ ವಿಶಾಲವಾದರೂ ಅದರಲ್ಲಿ ಕೆಲವೊಂದು ಕಡೆ ಆಹಾರ ಇರುತ್ತದೆ. ಕೆಲವೊಂದು ಕಡೆ ಇರುವುದಿಲ್ಲ.
ಅದೇ ರೀತಿ ಈ ಭೂಮಿಯಲ್ಲಿ ಜನಿಸಿ ಹೋದ/ಇರುವ ಆದರ್ಶ ವ್ಯಕ್ತಿಗಳ ಸನ್ನಡತೆಯನ್ನು ಮಕ್ಕಳಿಗೆ ತೋರಬೇಕು. ಅವರ(ಸಜ್ಜನರ)ಲ್ಲಿ ಇದ್ದೊ ಇಲ್ಲದೆಯೋ ಇರುವ ಕೆಟ್ಟದನ್ನು ಮಾತ್ರ ತೋರುವವರಿ(ಶಕುನಿಗಳಿ)೦ದ ಮಕ್ಕಳನ್ನು ದೂರವಿಡಬೇಕು.ಅದನ್ನು ಸದಾ ಹೇಳುವ ಶಕುನಿಗಳಿಂದ ಮಕ್ಕಳೂ , ಮಕ್ಕಳಿಗೆ ನೆರಳಾಗಿರುವ ಹಿರಿಯರಾದ ನಾವೂ ದೂರವಿರಬೇಕು.
ಫೋಟೋ ಕೃಪೆ : attitudefirst (ಸಾಂದರ್ಭಿಕ ಚಿತ್ರ)
ಮಕ್ಕಳ ಪ್ರಶ್ನೆಗಳಿಗೆ ನಾವು ಸ್ಪಷ್ಟವಾದ ವೈಜ್ಞಾನಿಕ ಉತ್ತರ ಕೊಡಬೇಕು. ಉತ್ತರ ಗೊತ್ತಿಲ್ಲದಿದ್ದರೆ “ಗೊತ್ತಿಲ್ಲ” ಎಂದು ಹೇಳಿ ಅವರು ಅದನ್ನು ಹುಡುಕುವಂತೆ ಅಥವಾ ನಾವು ಅದನ್ನು ಹುಡುಕಿ ಹೇಳಲು ಶೃಮಿಸಬೇಕು.ಅಲ್ಲವೇ ಬಲ್ಲವರಿಂದ ಅವರಿಗೆ ಹೇಳಿಸಿ ಬಿಡಬೇಕು. ಹಿಂದೆ ನಾನು ತರಂಗ ದಲ್ಲಿ ಬರುತ್ತಿದ್ದ ಬಾಲವನದಲ್ಲಿ ಕಾರಂತಜ್ಜ ಓದಿ ತುಂಬಾ ಸಂಶಯಗಳಿಗೆ ಪೂರ್ಣ ವಿರಾಮ ಹಾಕುತ್ತಿದ್ದೆ.
ನಾನು ನನ್ನ ಮಗಳು ” ಅಪ್ಪ ನಾ ಹೇಗೆ ಹುಟ್ಟಿದೆ ?” ಎಂದು ಕೇಳಿದಾಗ, ನಾಲ್ಕು ವರುಷದ ಅಂಗನವಾಡಿಗೆ ಹೋಗುತ್ತಿದ್ದ ಅವಳಿಗೆ ಸುಳ್ಳು ಹೇಳಿದ್ದೆ…
” ಅರಣ್ಯದಲ್ಲಿ ನಾನೂ ನಿನ್ನ ತಾಯಿಯೂ ಓಡಾಡುವಾಗ , ದಾರಿ ಕಾಣದಾಗಿತ್ತು. ನಿನ್ನ ಕಣ್ಣಿನ ಕಾಂತಿ ಹೊಳೆಯುವುದು ನೋಡಿ… ನಿನ್ನನ್ನು ಎತ್ತಿ, ನಿನ್ನ ಕಣ್ಣಿನ ಬೆಳಕಿನಿಂದ ಕಾಡಿನಿಂದ ಹೊರ ಬಂದಿವಿ” ಎಂದು.
ಆದರೆ ಅವಳು ಐದನೇ ತರಗತಿಯಲ್ಲಿದ್ದಾಗ ನನ್ನ ಮಡದಿ ಅವಳಿಗೆ ” ಗಂಡು- ಹೆಣ್ಣು ಕಲಿತು ಸ್ವಂತ ನೌಕರಿ ಪಡೆದ ನಂತರ, ಅವರ ಕುಟುಂಬದವರು ಮದುವೆ ಮಾಡಿಸಿ, ಪ್ರಣಯಿಸಲು ಬಿಟ್ಟು…” ಎಂದು ಎಲ್ಲಾ ವಿವರಿಸಿದಳು.
ಫೋಟೋ ಕೃಪೆ : Time of india (ಸಾಂದರ್ಭಿಕ ಚಿತ್ರ)
ಅಂದರೆ ಕೆಲವು ವಯಸ್ಸಿನವರೆಗೂ ಮಕ್ಕಳಿಗೆ ಕೆಲವೊಂದು ಸತ್ಯದಿಂದ ದೂರವಿಡಬೇಕು. ನಂತರ ಸುಳ್ಳು ಏನೆಂದು ತಿಳಿಸಿಕೊಡಬೇಕು.ಅಂದರೆ ಒಂದು ಹರೆಯದ ನಂತರ, ಯೌವನಕ್ಕೆ ಕಾಲು ಇಡುವ ಮಕ್ಕಳನ್ನು ಸಮಾಜದ ಆಸ್ತಿಯಾಗಿ ನಾವು ಪೋಷಕರು ಪರಿವರ್ತಿಸಬೇಕು ನಂತರ ಆರೋಗ್ಯಯುತ ಸಮಾಜಕ್ಕೆ ಸಮರ್ಪಿಸಬೇಕು.
ತುಂಬಾ ಬರೆಯಲು ತವಕ/ ಆಸೆ ಆಗುತ್ತಿದೆ. ಆದರೂ ನಿಲ್ಲಿಸುತ್ತೇನೆ.
ನಿಮ್ಮವ ನಲ್ಲ
ರೂಪು
- ಡಾ.ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)