ಬಾಂಬೆ ಹೀರೋಯಿನ್ ಅನುಷ್ ಚಾವ್ಲಾ ಶೂಟಿಂಗ್ ಸೆಟ್ ಗೆ ಕಾಲಿಡುತ್ತಿದ್ದಂತೆ ಸೆಟ್ ನಲ್ಲಿದ್ದವರ ಪರಿಸ್ಥಿತಿ ಏನಾಯಿತು? ನಿರ್ದೇಶಕ ರಾಣಾ ಮತ್ತು ಹೀರೊ ಶಯನ ಕುಮಾರ್ ಹೇಗೆ ಪ್ರತಿಕ್ರಿಯಿಸುತ್ತಾರೆ. ಮುಂದೆ ಓದಿ ಜನುಮ ಜನುಮದ ಪ್ರೀತಿಯ ಕತೆ…
‘ಹಾಯ್ …ಗುಡ್ ಮಾರ್ನಿಂಗ್ ಡೈರೆಕ್ಟರ್ ಸಾಬ್.’
ಹಾಗಂದವಳೇ ರಭಸದಿಂದ ಬಂದು ರಾಣಾರ ಕೆನ್ನೆಗೆ ಮುದ್ದಿಸಿಯೇ ಬಿಟ್ಟಳು. ಪ್ರೋಡ್ಯೂಕ್ಷನ್ ಬಾಯ್ ತುಟಿಯಲ್ಲೇ ನಕ್ಕ. ರಾಣಾ ಗಲಿಬಿಲಿಗೊಂಡರು. ಕಂಡ ಕಂಡವರನ್ನು ಮುದ್ದಿಸುವ ಸಂಸ್ಕೃತಿ ಬಾಲಿವುಡ್ಡಿನಲ್ಲಿ ಇರುವುದು ನಿಜ.ಆದ್ರೆ ಇದು ಸ್ಯಾಂಡಲ್ ವುಡ್ಡು.ಇಲ್ಲಿ ಆ ಸಂಸ್ಕೃತಿ ಬರಬಾರದು. ಆದ್ರೆ ಹಿಂದಿ ನಟಿಯರು ಆಗಮಿಸಿದಷ್ಟೂ ಹೊಸ ನೀರು ಬಂದು ಹಳೇ ನೀರನ್ನು ಕೊಚ್ಚಿಕೊಂಡು ಹೋದಂತಾಗುತ್ತದೆ.
‘ಬೈಠಿಯೇ ಮೇಡಂ, ನಾಷ್ಟಾ ಹೋಗಯಾ?’
ರಾಣಾ ಕೇಳಿದ್ದೆ ಸಾಕಾಯಿತು. ರೋಶನಿ ಮೇಡಂ ಇವರ ಪಕ್ಕದಲ್ಲಿಯೇ ಕುರ್ಚಿ ಹಾಕಿಕೊಂಡು ಕೂತುಬಿಟ್ಟಳು.
‘ನೋ ಆಪ್ ಕೆ ಸಾಥ್ ಛೋಡಕೆ ಕೈಸೆ ಖಾಊ೦? ನಾನು ನಿಮ್ಮ ಜೊತೆ ನಾಷ್ಟಾ ಮಾಡ್ತೀನಿ. ಔರ್ ನಿಮ್ದು ಜೊತೆ ಲೊಕೇಶನ್ ಗೂ ನಮ್ದು ಬರತದೆ.’
‘ಮಾಲೂಮ್ ಹುಆ. ಪ್ರೊಡಕ್ಷನ್ ಮ್ಯಾನೇಜರ್ ಬೋಲ್ತಾ ಥಾ.’
ಫೋಟೋ ಕೃಪೆ : google
ನಮ್ದುಕೆ ಸಾಥ್ ಕನಡಾ ಮೆ ಮಾತಾಡು. ಈ ಸಿನಿಮಾ ಫಿನಿಶ್ ಆಗೋದ್ರೊಳ್ಗೆ ನಮ್ದು ಮಗಳು ಮತ್ತು ನಾನು ಪ್ಯೂರ್ ಕನಡಾ ಬೋಲುದಕ್ಕ ಸುರು ಮಾಡ್ತೀವಿ. ಬಾಲಿ ಉಡ್ಡದಾಗ ಬಹುತ್ ಲೋಗ್ ನಮ್ದುಕೆ ಕಣ್ ಪೂಜು ಮಾಡ್ಕೋತ್ತಾರೆ. ಯಾಕೆಂದ್ರೆ ನಮ್ದು ಮತ್ತು ನಮ್ದು ಡಾಟರ್ ಒಂದೇ ಥರ ಹೈ. ಅವ್ರು ನಮ್ದುಕೆ ಒಮ್ಮೊಮ್ಮೆ ಅನುಷಾ ಬೇಟಾ ಅಂದ್ ಬಿಡ್ತಾರೆ.
ಹೀರೋಯಿನ್ ಅಮ್ಮ ನಕ್ಕು ಹೇಳಿದಾಗ ರಾಣಾ ಮಾತಾಡಲಿಲ್ಲ. ಇವಳಿಂದ ದೂರವಿದ್ದಷ್ಟೂ ಕ್ಷೇಮ ಅಂದುಕೊಂಡರು. ಪ್ರೊಡಕ್ಷನ್ ಬಾಯ್ ಇಬ್ಬರಿಗೂ ತಿಂಡಿ ಹಾಕಿಕೊಟ್ಟ. ಮಗಳು ಅನುಷ್ ಚಾವ್ಲಾ ಎಲ್ಲಿ ಎಂದು ತಪ್ಪಿಯೂ ಕೇಳಲಿಲ್ಲ ರಾಣಾ.
‘ಐ ಲವ್ ಕನಡಾ… ಐ ಲವ್ ಸ್ಯಾಂಡಲ್ ವುಡ್ …ಐ ಲವ್ ಆಲ್ಸೋ ಯೂ…’
ರೋಶನಿ ಅಮ್ಮ ತನ್ನ ತೋಳನ್ನು ರಾಣಾರ ತೋಳಿನಲ್ಲಿ ಸೇರಿಸಿದಾಗ ಬೆಚ್ಚಿಬಿದ್ದ ಅವರು ದಿಗ್ಗನೆ ಮೇಲೆದ್ದರು.
***
ಫೋಟೋ ಕೃಪೆ : google
ಸಮಯ ಎಂಟೂವರೆ. ಬಗ್ಗನಮನೆ ಕಾಫಿ ಎಸ್ಟೇಟಿನ ಮನೆಯ ಆವರಣದಲ್ಲಿ ಚಿತ್ರೀಕರಣದ ಇಡೀ ತಂಡ ಸಜ್ಜಾಗಿ ನಿಂತಿತ್ತು. ಬೆಟ್ಟದ ಮೇಲಿನ ಈ ಮನೆ ಸಿನಿಮಾಕ್ಕೆ ಹೇಳಿ ಮಾಡಿಸಿದಂತಿತ್ತು. ಮಡಿಕೇರಿಯಿಂದ ಹತ್ತು ಕಿಮೀ.ದೂರವಿರುವ ಈ ಮನೆಗೆ ಬರಬೇಕೆಂದರೆ ಎತ್ತರದ ಘಾಟು ರಸ್ತೆಗಳು ಹತ್ತಿಬರಬೇಕು. ದೂರದಲ್ಲಿ ಬೆಟ್ಟದ ತುದಿಗೆ ತಾಗಿಕೊಂಡು ಮೋಡಗಳು ಸಾಲಾಗಿ ಚಲಿಸುತ್ತಿದ್ದವು. ಇಳಿಜಾರಿನ ಕಾಫಿ ಎಸ್ಟೇಟಿನಲ್ಲಿ ಇತರರು ಹೋಗುತ್ತಿರಲಿಲ್ಲ. ಅಲ್ಲಿ ಕಾಲಿಟ್ಟರೆ ಉಂಬಳಗಳ ಕಾಟ.
ಕೆಮರಾಮನ್ ತಂಗವೇಲು ಟ್ರಾಲಿ ಹಾಕಿಕೊಂಡು ಲೈಟಿಂಗ್ ವ್ಯವಸ್ಥೆ ಮಾಡಿಕೊಂಡಿದ್ದ. ಸಹಾಯಕ ನಿರ್ದೇಶಕರಿಬ್ಬರೂ ಇತರ ಕಲಾವಿದರಿಗೆ ಸೂಚನೆ ಕೊಡುತ್ತಿದ್ದರು. ಹೊಗೆರಾಮ ಸಿನಿಮಾದ ಯಜಮಾನನ ಗತ್ತಿನಲ್ಲಿದ್ದ. ಕೈಕೆಳಗಿನ ಓಡಾಡಿಕೊಂಡಿದ್ದ. ಚಿತ್ರೀಕರಣ ನೋಡಲು ಜನ ಸೇರತೊಡಗಿದ್ದರು.
ಇಡೀ ತಂಡ ಈಗ ನಿರ್ದೇಶಕ ರಾಣಾರು ಬರುವುದನ್ನೇ ಕಾಯುತ್ತಿತ್ತು. ನಾಯಕಿ ಪಾತ್ರದ ಅನುಷ್ ಚಾವ್ಲಾ ಇನ್ನೂ ಬಂದಿರಲಿಲ್ಲ. ಯೂನಿಟ್ ಹುಡುಗರು ಹಿಂದಿಯ ಈ ಹುಡುಗಿಯನ್ನು ನೋಡಲು ತುದಿಗಾಲಿನ ಮೇಲೆ ನಿಂತಿದ್ದರು.
ಸ್ವಲ್ಪ ದೂರದಲ್ಲಿ ಸಿನಿಮಾದ ಹೀರೋ ಶಯನಕುಮಾರ ಮೇಕಪ್ ಮಾಡಿಕೊಂಡು ಸ್ಟೈಲಾಗಿ ಕೂತವರು ಸಿಗರೇಟು ಎಳೆಯುತ್ತಿದ್ದ. ಅಲ್ಲಿ ಕಂಡ ಸಹಾಯಕ ನಿರ್ದೇಶಕ ಪುಟ್ಸಾಮಿಯನ್ನು ನೋಡಿ ಗತ್ತುತೋರಿಸಿಕೊಂಡ.
ಫೋಟೋ ಕೃಪೆ : google
‘ಎನ್ರಯ್ಯಾ…? ಫಸ್ಟ್ ಶಾಟ್ ನಿಮ್ದೇ ಇರುತ್ತೆ ಸಾರ್ ಅಂತೇಳಿ. ಆರು ಗಂಟೆಗೇ ಕಾರು ಕಳಿಸ್ತೀರ. ಇಲ್ಲಿ ನೋಡಿದ್ರೆ ಮೇಕಪ್ಪು ಹಾಕ್ಕೊಂಡು ಗಂಟೆಗಟ್ಟಲೇ ಕೂತ್ಕೋಬೇಕು. ಎನ್ರಯ್ಯಾ ಇದೂ…’ ಎಂದು ಉಗಿಯುತ್ತಿದ್ದ. ಪಾಪ ಸಹಾಯಕ ನಿರ್ದೇಶಕರು ಏನ್ ತಾನೇ ಮಾಡಿಯಾರು. ಅವರು ಅಸಹಾಯಕರಾಗಿದ್ದರು.
ಅದೇ ಹೊತ್ತಿಗೆ ನಿರ್ದೇಶಕ ರಾಣಾರ ಕಾರು ಎಸ್ಟೇಟಿನ ರಸ್ತೆಯಲ್ಲಿ ಧೂಳು ಎಬ್ಬಿಸುತ್ತ ಘಾಟು ಏರಿಕೊಂಡು ಮನೆಯ ಗೇಟಿನೊಳಗೆ ಪ್ರವೇಶಿಸಿತು.
ಸ್ವಲ್ಪ ದೂರದಲ್ಲಿ ಸಿನಿಮಾದ ಹೀರೋ ಶಯನಕುಮಾರ ಮೇಕಪ್ ಮಾಡಿಕೊಂಡು ಸ್ಟೈಲಾಗಿ ಕೂತವರು ಸಿಗರೇಟು ಎಳೆಯುತ್ತಿದ್ದ. ಅಲ್ಲಿ ಕಂಡ ಸಹಾಯಕ ನಿರ್ದೇಶಕ ಪುಟ್ಸಾಮಿಯನ್ನು ನೋಡಿ ಗತ್ತು ತೋರಿಸಿಕೊಂಡ.
ಫೋಟೋ ಕೃಪೆ : google
‘ಡೈರೆಕ್ಟ್ರು ಬಂದ್ರು ಕನ್ಲಾ…’ ಎಂದು ಯೂನಿಟ್ಟು ಹುಡುಗರು ಎದ್ದು ನಿಂತರು. ಅದುವರೆಗೆ ಸೊಟ್ಟ ಮುಖ ಮಾಡಿಕೊಂಡಿದ್ದ ಹೀರೋ ಶಯನ ಕುಮಾರ್ ಕೈಯಲ್ಲಿನ ಸಿಗರೇಟು ಬಿಸಾಕಿ ಡೈರೆಕ್ಟರ್ ಗೆ ಗುಡ್ ಮಾರ್ನಿಂಗ್ ಹೇಳಲು ಮುಂದೆ ಬಂದ.
ಕಾರು ನಿಂತಿತು. ಅದೆಲ್ಲಿದ್ದನೋ. ಹೊಗೆರಾಮ ಓಡಿ ಬಂದು ಕಾರಿನ ಬಾಗಿಲು ತೆರೆದ. ಎಲ್ಲರೂ ಅದರ ಬಾಗಿಲು ಕಡೆ ನೋಡಿದರು. ಅಚ್ಚರಿ! ತೆರೆದ ಕಾರಿನ ಬಾಗಿಲಿನಿಂದ ಮೊದಲು ಎರಡು ಬಿಳಿ ಕಾಲುಗಳು ನೆಲಕ್ಕುರಿದವು.
‘ಬಾಂಬೆ ಹುಡ್ಗಿ ಬಂದ್ಲು ಕನ್ಲಾ..’
ಯೂನಿಟ್ಟು ಹುಡುಗರು ರೆಪ್ಪೆ ಅಲುಗಾಡಿಸದೆ ನೋಡಿದರು.
‘ಡೈರೆಕ್ಟರ್ ಕಾರಿನಲ್ಲೇ ಬರ್ತಾಳಲ್ಲಪ್ಪಾ…ಆಗ್ಲೇ ಅಡ್ಜೆಸ್ಟ್ ಮೆಂಟಾ? ಎಂದೂ ಪಿಸುಗುಟ್ಟಿದರು. ಕಮಿಟ್ ಮೆಂಟ್ ಕನ್ಲಾ’ ಅಂದ ಇನ್ನೊಬ್ಬ.
ಫೋಟೋ ಕೃಪೆ : google
ಕಾಲು ನೋಡಿದ್ರೇ ಗೊತ್ತಾಗುತ್ತೆ. ಮಸ್ತಾಗವಳೆ ಎಂದೂ ಅಂದುಕೊಂಡರು. ಈಗ ಬಣ್ಣದ ಛತ್ರಿಯೊಂದು ಹೊರಬಂತು. ಆ ಮೇಲೆ ಮಿಡಿ ತೊಟ್ಟ ರೋಶನಿ ಮೇಡಮ್ಮು ಗುಲಾಬಿಯ ಹಾಗೆ ನಗುತ್ತ ಪೂರ್ತಿ ಕೆಳಗಿಳಿದಳು. ಒಮ್ಮೆ ಎಲ್ಲರ ಕಡೆ ನೋಡಿ ಅವರತ್ತ ಕುಶಾಲು ಹಸ್ತ ಅಲುಗಾಡಿಸಿದಳು.
ಇವಳ ಮುಖ ಕಂಡದ್ದೇ ತಡ, ಹುಡುಗರು ಒಂದು ಕಾಲದ ಮಾಲಾಶ್ರೀಯನ್ನು ನೋಡಿದ ಹಾಗೆ ಬೆಚ್ಚಿಬಿದ್ದರು. ಪಾಪ ಅವರಿಗೆ ಈಕೆ ಹಿಂದಿಯಿಂದ ಬಂದ ಹೀರೋಯಿನ್ ಅನುಷ್ ಚಾವ್ಲಾಳ ಅಮ್ಮ ಎಂಬುದು ಗೊತ್ತಾಗಲಿಲ್ಲ. ಎಂಥ ಸಿನಿಮಾ ನಟಿಯನ್ನೂ ಮೀರಿಸುವ ಹಾಗಿತ್ತು ಈ ತಾಯಿಯ ಡ್ರೆಸ್ಸು -ಮೇಕಪ್ಪು.
ಎಲ್ಲರಿಗಿಂತ ಖುಷಿ ಪಟ್ಟವನೆಂದರೆ ಹೀರೋ ಶಯಕುಮಾರ್. ತನಗೆ ನಾಯಕಿಯಾಗಿ ಹಿಂದಿ ಹುಡುಗಿ ಬರುತ್ತಾಳೆ ಎಂಬುದೇ ಅವನಿಗೆ ದೊಡ್ಡ ಸಂಭ್ರಮವಾಗಿತ್ತು. ಆ ಮೇಕಪ್ಪಿನಲ್ಲಿ ರೋಶನಿ ಮೇಡಮ್ಮನ್ನು ನೋಡಿ ಖುಷಿಯಾಗಿ ಹೋದ. ಆಕೆಯೊಡನೆ ಮಾಡಬೇಕಾದ ಡ್ಯುಯೆಟ್ ಸ್ಯಾಂಗ್ ಗಳನ್ನೂ ಕಲ್ಪಿಸಿಕೊಂಡ.
ವಾರೆವ್ಹಾ …ಕಾಶ್ಮೀರದ ಆಪಲ್ ಆಗವಳೆ.ಭಾರೀ ಫಿಗರು. ಬರತೀನಿ ಅಂದ್ರೆ ಒಂದಿನ ಮಂಡ್ಯಕ್ಕೆ ಕರಕೊಂಡು ಹೋಗಬೇಕು. ಅಲ್ಲಿ ಅಪ್ಪನ ತೆಂಗಿನ ತೋಟ ತೋರಿಸಬೇಕು. ನೋಡಿದ್ರೇ ಏನಂತಾಳೋ.’
ಆತ ತಡ ಮಾಡಲಿಲ್ಲ ಮುಂದೆ ಹೋದವನೇ,
ಐ ಆಯಾಮ್ ಶಯನ ಕುಮಾರ್. ಹೀರೋ ಆಫ್ ದಿಸ್ ಸಿನಿಮಾ.’
ಮುಂದೆ ಇನ್ನೂ ಏನೇನೋ ಹೇಳಬೇಕೆಂದಿದ್ದ. ಆಗಲೇ ಮೊಸಳೆ ಬಾಯಿಗೆ ಸಿಕ್ಕವನ ಹಾಗಾದ. ರೋಶನಿ ಮೇಡಮ್ಮು ಕಣ್ಣು ಮಿಟುಕಿಸದವಳೇ ಅವನತ್ತ ಜಾರಿದಳು.
ಫೋಟೋ ಕೃಪೆ : her way
ಓ ಮೈ ಗಾಡ್, ವಂಡರ್ ಫುಲ್ ಗೈ. ಯು ಆರ್ ವೆರಿ ನಾಟಿ…ಮಿ ಶಯನ್…’
ಅಂದವಳೇ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಎಲ್ಲರೂ ತಬ್ಬಿಬ್ಬಾದರು. ಹೀರೋ ಶಯನಾಸನದಲ್ಲಿ ಬಿದ್ದವಂತೆ ಆನಂದ ತುಂದಿಲನಾದ. ಯೂನಿಟ್ಟು ಹುಡುಗರು- ನೋಡ್ರಲೋ ಸಖತ್ತಾಗವಳೇ. ನಮ್ಮ ಕನ್ನಡದ ಹುಡುಗೀರು ತಬ್ಬಿಕೊಳ್ಳೋದಿರಲಿ. ಕೈ ಕೈ ಕುಲುಕೋದಕ್ಕೂ ಹಿಂದ್ಮುಂದೆ ನೋಡ್ತವೆ. ಅದ್ಕೇ ಕಣರೋ. ನಮ್ಮ ಪ್ರೊಡ್ಯೂಸರ್ ಗಳು ಬಾಂಬೆ ರೈಲು ಹತ್ತೋದು.’ ಎಂದೆಲ್ಲ ಆಡಿಕೊಂಡರು.
(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)
[ ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)