ಪ್ರತಿಭಾವಂತ ನಟ ಪ್ರಸಾದ್ ವಸಿಷ್ಠಅವರ ವಿಶಿಷ್ಟವಾದ ಸಂದರ್ಶನ

ಚಿತ್ರರಂಗದ ಮಡಿಲಿಗೆ ಹೊಸ ಪ್ರತಿಭೆಗಳ ಆಗಮನ ಸದಾ ಇದ್ದೆ ಇದೆ. ಆ ಕಲಾದೇವಿಯ ಮಡಿಲು ತರ ತರದ ವೈವಿಧ್ಯಮಯ ಕಲಾವಿದರಿಂದ ತುಂಬಿ ತುಳುಕುತ್ತಿರುತ್ತದೆ. ನಮ್ಮ “ಆಕೃತಿ ಕನ್ನಡ” ಅಂತಾ ಹೊಸ ಪ್ರತಿಭೆಗಳನ್ನು ಗುರುತಿಸಿ, ಅವರ ಮೇಲೆ ಬೆಳಕನ್ನು ಮೂಡಿಸುವ ಪ್ರಯತ್ನಕ್ಕೆ ಮೊದಲ ಆದ್ಯತೆ ನೀಡುತ್ತದೆ.

ಈ ಹೊಸ ಪ್ರತಿಭೆಗಳ ಸಾಲಿಗೆ ಶ್ರೀ ಪ್ರಸಾದ್ ವಸಿಷ್ಠ ತಮ್ಮ ವಿಶಿಷ್ಟ ನಟನೆಯಿಂದ ಭರವಸೆಯ ಕಲಾವಿದನಾಗಿ ಎದ್ದು ಕಾಣುತ್ತಾರೆ. ಹೆಣ್ಣು ಹೊನ್ನು ಮಣ್ಣು, ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಬುಗುರಿ, ದಾದ ಈಸ್ ಬ್ಯಾಕ್, ಮುಗುಳುನಗೆ, ದೇವರು ಬೇಕಾಗಿದ್ದಾರೆ ಚಿತ್ರದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಗುರುತಿಸಿಕೊಂಡಿದ್ದಾರೆ. ಈಗ ಎಎಂಆರ್ ರಮೇಶ್ ರವರ ಮಹಾಕಾಂಕ್ಷೆಯ ವೆಬ್ ಸೀರೀಸ್ “ವೀರಪ್ಪನ್ ಹಂಗರ್ ಫಾರ್ ಕಿಲ್ಲಿಂಗ್” ನಲ್ಲಿ ರೋಚಕವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಮ್ಮ ಆಕೃತಿವತಿಯಿಂದ ಒಂದು ಸಣ್ಣ ಸಂದರ್ಶನಕ್ಕಾಗಿ ನಮ್ಮ ಲೇಖಕರಾದ ಶ್ರೀ ಲೇಖನ ನಾಗರಾಜ್ ಹಾಗೂ ಶ್ರೀ ಕು ಶಿ ಚಂದ್ರಶೇಖರ್ ಅವರು ಪ್ರಸಾದ್ ರವರನ್ನು ಸಂಪರ್ಕಿಸಿದಾಗ ಸಂಕೋಚದಿಂದಲೇ ಒಪ್ಪಿಕೊಂಡರು. ಅವರ ಕಲಾರಂಗದಲ್ಲಿನ ಗುರಿ, ಅಭಿಲಾಷೆ, ಅಭಿಪ್ರಾಯ ಹೀಗೆ ಕೆಲವನ್ನು ಈ ಸಂದರ್ಶನದಲ್ಲಿ ಕಾಣಬಹುದು.

(ಆಕೃತಿ ಕನ್ನಡದ ಲೇಖಕರಾದ ಕು. ಶಿ ಚಂದ್ರಶೇಖರ್ ಅವರು ಸಿನಿಮಾ ನಟ ಪ್ರಸಾದ ವಸಿಷ್ಠ ಅವರ ಸಂದರ್ಶನದಲ್ಲಿ ತೊಡಗಿರುವ ಕ್ಷಣ)

ಕು. ಶಿ : ಪ್ರಸಾದ್ ರವರೆ ನಿಮ್ಮ ಹುಟ್ಟೂರು,ಬಾಲ್ಯ ಹಾಗೂ ಶಿಕ್ಷಣದ ಬಗ್ಗೆ ತಿಳಿಸಿ.
ಪ್ರಸಾದ್ : ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಬೆಳಿದಿದ್ದು ಹಾಗೂ ಶಿಕ್ಷಣ ಮುಗಿಸಿದ್ದು ತುಮಕೂರಿನಲ್ಲಿ. ಚಿಕ್ಕಂದಿನಿಂದ ಶ್ರೀ ಗಳ ಸಿದ್ದಗಂಗಾ ಸಂಸ್ಥೆಯಲ್ಲಿ ಕಲಿಯಲು ತುಂಬಾ ಆಸಕ್ತಿಯಿತ್ತು.ನಾನಾ ಕಾರಣದಿಂದ ಆಗಿರಲಿಲ್ಲಾ . ಮುಂದೆ ಬಿ.ಇ ಶಿಕ್ಷಣಕ್ಕೆ ಬೇರೆ ಕಾಲೇಜಿನಲ್ಲಿ ಸೀಟು ಸಿಕ್ಕರೂ ಶ್ರೀ ಗಳ ಮೇಲಿನ ಪ್ರೀತಿ ಅಭಿಮಾನದಿಂದ. ಅವರದೇ ಸಂಸ್ಥೆಯಲ್ಲಿ ಬಿ ಎಸ್.ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಗ್ರಿ ಮುಗಿಸಿದೆ. ಮುಂದೆ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಎಂ.ಬಿ.ಎ ಪದವೀದರನಾದೆ. ತುಮಕೂರು ಎಂದರೆ ನನಗೆ ಅತೀವ ಪ್ರೀತಿ. ಯಾಕೆಂದರೆ, ನನ್ನಲ್ಲಿ ಕಲೆಯ ಬಗ್ಗೆ ಆಸಕ್ತಿ ಹುಟ್ಟಿದ್ದು ಆ ನೆಲದ ಮಣ್ಣಿನಲ್ಲೇ. ಹಾಗೂ ನನಗೆ ವಿದ್ಯೆ ಹೇಳಿಕೊಟ್ಟ ಗುರುಗಳೆಲ್ಲರೂ ಅಲ್ಲಿನವರೇ. ಮತ್ತು ಅವರ ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ ಎಂದು ನಂಬಿಕೆ.

ಕು. ಶಿ : ಚಿತ್ರರಂಗದ ಮೇಲೆ ಆಸಕ್ತಿ ಹೇಗೆ ಶುರುವಾಯಿತು…? ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಚಿತ್ರರಂಗದ ನಂಟು ಇತ್ತೆ….?
ಪ್ರಸಾದ್ : ಕಲೆ ಎಂಬುದು ಪ್ರತಿ ಮಗುವಿನಲ್ಲೇ ಇರುತ್ತದೆ, ನಟಿಸುವುದು, ಹಾಡುವುದು,ಚಿತ್ರ ಬಿಡಿಸುವುದು. ಮುಂತಾದ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ. ಅದು,ಮನೆಯವರ ಹಾಗೂ ಹಿರಿಯರ,ಪ್ರೋತ್ಸಾಹ ದಿಂದ ಬೆಳಕಿಗೆ ಬರುತ್ತದೆ. ನನಗೆ ಚಿಕ್ಕಂದಿನಲ್ಲೇ ಸಿನಿಮಾ ಅಂದರೆ ತುಂಬಾ ಆಸಕ್ತಿ. ಬಿಡುಗಡೆಯಾಗುತಿದ್ದ ಯಾವ ಸಿನಿಮಾವನ್ನು ನೋಡದೆ ಬಿಡುತಿರಲಿಲ್ಲ. ಸಿನಿಮಾ ನೋಡುತ್ತಿರುವಾಗಲೇ, ಮುಂದಿನ ದೃಶ್ಯ ಹೀಗೆ ಬರುತ್ತದೆ ಎಂದು ಹೇಳಿಬಿಡುತ್ತಿದ್ದೆ. ಹೀಗಾಗಿ ನನ್ನ ಮನೆಯವರು ನನ್ನ ʼಡೈರೆಕ್ಟರ್ʼ ಎಂದೇ ರೇಗಿಸುತಿದ್ದರು. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ, ಏಕಪಾತ್ರಭಿನಯ ಮಾಡುತ್ತಿದ್ದೆ. ಇದೆಲ್ಲಕ್ಕೂ ನಮ್ಮ ಮನೆಯವರ ಹಾಗೂ ಶಾಲೆಯ ಪ್ರೋತ್ಸಾಹ ಸದಾ ಇರುತಿತ್ತು.

ಕು ಶಿ : ನೀವು ಚಿತ್ರರಂಗ ಅಥವಾ ಕಿರುತೆರೆಗೆ ಬರಲು ಮಾಡಿದ ಪ್ರಯತ್ನಗಳು ಹೇಗಿತ್ತು?
ಪ್ರಸಾದ್ : ನನಗೆ ಈ ರಂಗದಲ್ಲಿ ಯಾರು ಗಾಡ್ ಫಾದರ್ ಎಂದೇನು ಇಲ್ಲಾ. ಒಂದು ದಿನ ಸ್ವಪ್ರಯತ್ನದಿಂದ ಬೆಂಗಳೂರಿಗೆ ಬಂದು, ಏನು ತಿಳಿಯದೆ ಸುಮ್ಮನೆ ‘ರವೀಂದ್ರ ಕಲಾಕ್ಷೇತ್ರ’ದ ಆವರಣದಲ್ಲಿ ನಿಂತುಬಿಟ್ಟೆ. ಆ ದಿನ ನನ್ನ ನೆನಪಿನಲ್ಲಿ ಸದಾ ಇರುತ್ತದೆ. ಮುಂದೆ ಏನು…? ಹೇಗೆ…? ಎಂದು ಚಿಂತಿಸುತ್ತಿದ್ದ ನನಗೆ ಅಲ್ಲಿನ ಕಾವಲು ಸಿಬ್ಬಂದಿಯೊಬ್ಬರು, ‘ಏನು ಯೋಚಿಸುತ್ತ ನಿಂತಿದೀಯಪ್ಪ’ ಎಂದು ಕೇಳಿದರು. ಆಗ ನನ್ನ ಕನಸ್ಸನ್ನು ಅವರ ಹತ್ತಿರ ಹೇಳಿಕೊಂಡೆ. ಅವರು ನನಗೆ, ಯಾವುದಾದರೂ ನಟನೆಗೆ ಸಂಬಂಧಪಟ್ಟ ಸಂಸ್ಥೆಯಲ್ಲಿ ಸೇರಿಕೊಳ್ಳಿ. ಅಲ್ಲಿ  ಚಿತ್ರರಂಗದ ವಿವಿಧ ಕಲಾವಿದರ ಪರಿಚಯವಾಗುವುದೆಂದು ಮಾರ್ಗದರ್ಶನ ಮಾಡಿದರು. ಹೀಗೆ ಅವರೇ ನನ್ನ ಚಿತ್ರರಂಗದ ಪ್ರಯಾಣಕ್ಕೆ ಮೊದಲ ದಿಕ್ಸೂಚಿಯಾದರು. ಮುಂದೆ ನಟನೆಯ ಕೋರ್ಸ್ ಮಾಡುತ್ತಾ ಪಾರ್ಟ್ ಟೈಮ್ ಕೆಲಸ ಮಾಡುತ್ತಿದಾಗ ನಮ್ಮಗುರುಗಳಲ್ಲೊಬ್ಬರು ಅಚಾನಕ್ಕಾಗಿ ಸಿಕ್ಕಾಗ ಅವರು ಧಾರವಾಹಿ ನಿರ್ದೇಶನ ಮಾಡುತ್ತಿರುವುದಾಗಿ ಹೇಳಿದರು. ಮತ್ತು ಅದರಲ್ಲಿ ಒಂದು ಪಾತ್ರವನ್ನು ಮಾಡುತೀರಾ? ಎಂದು ಕೇಳಿದರು. ಆಗ ಅವರ “ಹೆಣ್ಣು ಹೊನ್ನು ಮಣ್ಣು” ಎಂಬ ಧಾರಾವಾಹಿಯಿಂದ ನನ್ನ ಮೊದಲ ಪ್ರವೇಶವಾಯಿತು. ಚಂದನದಲ್ಲಿ ಪ್ರಸಾರವಾದ ಈ ಧಾರಾವಾಹಿ ತುಂಬಾ ಜನಪ್ರಿವಾಯಿತು. ನಾನು ಮೊದಲು ಗುರುತಿಸಿಕೊಂಡಿದ್ದು ಚಂದನದಲ್ಲಿ ವಾಹಿನಿಯಲ್ಲಿ ಎಂದು ಹೇಳಿಕೊಳ್ಳೋಕೆ ತುಂಬಾ ಹೆಮ್ಮೆಯಾಗುತ್ತದೆ. ನಾವು ಈಗಲೂ ಅನೇಕ ಸದಾಭಿರುಚಿಯ ಕಾರ್ಯಕ್ರಮಗಳನ್ನು, ಮನೆ ಮಂದಿಯೆಲ್ಲಾ ಕೂತು ಚಂದನ ವಾಹಿನಿಯಲ್ಲಿ ನೋಡುತ್ತೇವೆ.

ಕುಶಿ : ನೀವು ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಮೊದಲ ಅನುಭವ ಹೇಗಿತ್ತು?
ಪ್ರಸಾದ್: “ಪುಟ್ಟಗೌರಿ ಮದುವೆ” ಧಾರಾವಾಹಿಯಲ್ಲಿನ ನನ್ನ ನಟನೆ ನೋಡಿ ಸಿನಿಮಾ ನಿರ್ದೇಶಕರಾದ ʼಎಮ್.ಡಿ ಶ್ರೀಧರ್ʼ ರವರು ತಮ್ಮ ʼಬುಗುರಿʼ ಚಿತ್ರದಲ್ಲಿ ನನಗೊಂದು ಪಾತ್ರ ಕೊಟ್ಟರು ಹಾಗೆ ದಾದ ಈಸ್ ಬ್ಯಾಕ್ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದೆ ಆನಂತರ ʼಯೋಗರಾಜಭಟ್ʼ ರವರ ಜೊತೆ ಸಿನಿಮಾ ಹಿನ್ನಲೆ ಕೆಲಸದಲ್ಲಿ ತೊಡಗಿಕೊಂಡೆ. ಅವರು,ನಂತರ ತಮ್ಮ “ಮುಗುಳುನಗೆ” ಸಿನಿಮಾದಲ್ಲಿ ಮಂಡ್ಯದ ಹುಡುಗನ ಪಾತ್ರವನ್ನು ಕೊಟ್ಟರು. ಆಮೇಲೆ ಹಲವಾರು ಸಿನಿಮಾದಲ್ಲಿ ಅವಕಾಶ ಹುಡುಕಿಕೊಂಡು ಬಂದಿತು.

ಕುಶಿ: ಬೆಳ್ಳಿತೆರೆ ಹಾಗೂ ಕಿರುತೆರೆ ನಿಮಗೆ ಇವೆರಡರಲ್ಲಿ ಯಾವುದು ಮುಖ್ಯ ಅನಿಸುತ್ತದೆ?
ಪ್ರಸಾದ್: ಕಲಾವಿದರಿಗೆ ಈ ಎರಡು ರಂಗಗಳು ತುಂಬಾ ಮುಖ್ಯ. ಯಾಕೆಂದರೆ, ಎರಡರಲ್ಲೂ ಮಾಡೋದು ನಟನೆಯೇ ಅವಕಾಶಗಳಿಗಾಗಿ ದೊಡ್ಡ ಪೈಪೋಟಿಯೇ ಇರುವಾಗ. ಎಲ್ಲಿ ನಮಗೆ ಅವಕಾಶ ಸಿಗುತ್ತದೋ,ಅಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸಿದ್ದರಿರಬೇಕು.

ಕು ಶಿ : ಇಂದು ಈ ಎರಡೂ ರಂಗದಲ್ಲಿ ಕಂಠದಾನ ಕಲಾವಿದರ (Dubbing Artist) ಹಾಗೂ ಡಬ್ಬಿಂಗ್ ಪ್ರಾಮುಖ್ಯತೆ ಹೇಗೆ?
ಪ್ರಸಾದ್: ಎಷ್ಟೋ ಮುಖ್ಯ ಕಲಾವಿದರ ನಟನೆಗೆ ಕಂಠದಾನ ಕಲಾವಿದರು ಧ್ವನಿಯಾಗಿ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ. ನಟನೆಗೆ ಜೀವ ಕೊಡೊ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಬಹು ಮುಖ್ಯಪಾತ್ರದಾರಿಗಳಾಗಿದ್ದಾರೆ. ಇಂದು ಈ ಕರೋನ ಕಾರಣದಿಂದಾಗಿ ಎಷ್ಟೋ ಕಲಾವಿದರು ಹಾಗೂ ತಂತ್ರಜ್ಞರಿಗೆ ದುಡಿಮೆ ಇಲ್ಲದಂತಾದಾಗ ಡಬ್ಬಿಂಗ್ ಆಸರೆಯಾಗಿ ನೇರವಾಗಿದೆ. ಆದರೆ ಅದು ಶಾಶ್ವತವಲ್ಲ. ಮುಂದೆ ಎಲ್ಲಾ ತೆರವಾದಾಗ ಡಬ್ಬಿಂಗ್ ಸಂಸ್ಕೃತಿ, ಸ್ಥಳೀಯ ಸಂಸ್ಕೃತಿಗಳಿಗೆ ಮಾರಕವಾಗದಿದ್ದರೆ ಅಷ್ಟೇ ಸಾಕು.

ಕು ಶಿ : ನೀವು ಸದ್ಯಕ್ಕೆ ಯಾವ ಚಲನಚಿತ್ರದಲ್ಲಿ ನಟಿಸುತ್ತಿದೀರಾ….?
ಪ್ರಸಾದ್ : ಸೈನೆಡ್ ಹಾಗೂ ಅಟ್ಟಹಾಸ ಖ್ಯಾತಿಯ ಎ.ಎಂ.ಆರ್ ರಮೇಶ್ ರವರ ವೀರಪ್ಪನ್ ಹಂಗರ್ ಫಾರ್ ಕಿಲ್ಲಿಂಗ್ ವೆಬ್ ಸೀರೀಸ್ ನಲ್ಲಿ ಎ.ಸಿ.ಪಿ ಪೊಲೀಸ್ ಪಾತ್ರಧಾರಿಯಾಗಿ ನಟಿಸುತ್ತಿದ್ದೇನೆ. ಈ ವೆಬ್ ಸೀರೀಸ್ ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬರುತ್ತಿದೆ. ಸಂತಸದ ವಿಷಯವೆಂದರೆ ಇದರಲ್ಲಿ, ಸುನೀಲ್ ಶೆಟ್ಟಿ, ಸುರೇಶ ಒಬೆರಾಯ್, ವಿವೇಕ್ ಒಬೆರಾಯ್, ಮೋಹಿತ್ ರೈನಾರಂತಹ ನಟದಿಗ್ಗಜರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರುಗಳ ಸರಿ ಸಮಾನವಾಗಿ ನಟಿಸುವುದು ನಿಜಕ್ಕೂ ನನಗೆ ಅದ್ಬುತ ಅವಕಾಶ. ಹಾಗೂ ಈ ಅವಕಾಶ ಮಾಡಿಕೊಟ್ಟ ಎ.ಎಂ.ಆರ್. ರಮೇಶ್ ರವರಿಗೆ ನಾನು ಚಿರಋಣಿ.

ಕು ಶಿ: ಇಂದಿನ ದಿನಗಳಲ್ಲಿ ಉತ್ತಮ ಕಥೆಯ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಅಪರೂಪಕ್ಕೊಂದು ಎನ್ನುವಂತಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ರಸಾದ್ : ಇಂದು ಹೆಚ್ಚಾಗಿ ನಮ್ಮಲ್ಲಿ ಹೊಸ ಬರಹಗಾರರಿಗೆ ಅವಕಾಶ ಸಿಗುತ್ತಿಲ್ಲಾ. ಅವರಲ್ಲಿನ ಕಥೆಗಿಂತ ಮೊದಲು ಅನುಭವ ನೋಡುತ್ತಾರೆ. ಬರಹಗಾರರಲ್ಲಿನ ಪ್ರತಿಭೆ ಗುರುತಿಸುವುದು ತುಂಬಾ ಮುಖ್ಯ. ಬರಹಗಾರರಿಗೆ ಮಹತ್ವ ಕೊಟ್ಟರೆ ನಮ್ಮಲ್ಲಿ ಇಂದಿಗು ಸದಭಿರುಚಿಯಾ ಚಿತ್ರಗಳು ಖಂಡಿತ ಬರುತ್ತದೆ.

ಕು ಶಿ : ಹೆಚ್ಚು ಕಡಿಮೆ ಮುಕ್ಕಾಲು ವರ್ಷದ ನಂತರ ಚಿತ್ರಮಂದಿರಗಳು ತೆರೆದಿದೆ ಹಾಗೂ ʼಆಕ್ಟ್ 1978ʼ ಚಿತ್ರ ಬಿಡುಗಡೆಯಗಿದೆ. ಇದರ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಾ?
ಪ್ರಸಾದ್ : ಚಿತ್ರಮಂದಿರಗಳು ತೆರೆದು ಆಕ್ಟ್ 1978 ಚಿತ್ರ ಬಿಡುಗಡೆಯಾಗಿರುವುದು ನಿಜಕ್ಕೂ ಖುಷಿಯ ವಿಷಯ. ಈ ಚಿತ್ರವನ್ನು ನಿರ್ದೇಶಕರಾದ ಮನ್ಸೂರೆಯವರ ತಂಡ, ನಿಜಕ್ಕೂ ಕಷ್ಟ ಪಟ್ಟು ಅದ್ಭುತವಾಗಿ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ಮತ್ತೆ ಒಳ್ಳೆಯ ವಿಮರ್ಶೆಗಳು ಬರುತ್ತಿವೆ. ಪ್ರೇಕ್ಷಕ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿದರೆ ನಿಜವಾಗಲೂ ಚಲನಚಿತ್ರೋದ್ಯಮ ಚೇತರಿಸಿಕೊಳ್ಳುತ್ತದೆ. ಹಾಗೂ ಸಾಲಿನಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆಗೆಗೊಳಿಸಲು ಕಾಯುತ್ತಿರುವ ನಿರ್ಮಾಪಕರಿಗೆ ಹೆಚ್ಚು ಧೈರ್ಯ ಬರುತ್ತದೆ.

(‘ಪುಟ್ಟಗೌರಿ ಧಾರಾವಾಹಿಯಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಸಂದ ಗೌರವ)

ಕು ಶಿ : ಚಿತ್ರರಂಗದಲ್ಲಿನ ನಿಮ್ಮ ಮುಂದಿನ ಕನಸುಗಳೇನು…..?
ಪ್ರಸಾದ್ : ಕಲಾವಿದನಾಗಿ ಇದುವರೆಗೂ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆಯಬೇಕು. ಎಂಬುದೇ ನನ್ನ ಬಹು ದೊಡ್ಡ ಕನಸು. ಈ ಕನಸು ನನಸಾದರೆ ನಿಜಕ್ಕೂ ಅದು ನನ್ನ ವೃತ್ತಿರಂಗದಲ್ಲಿಯೇ ಒಂದು ಅವಿಸ್ಮರಣೀಯ.

(ಆಕೃತಿ ಕನ್ನಡದ ಲೇಖಕರಾದ ಕು. ಶಿ ಚಂದ್ರಶೇಖರ್, ನಾಗರಾಜ್ ಲೇಖನ್ ಮತ್ತು ಸಿನಿಮಾ ನಟ ಪ್ರಸಾದ ವಸಿಷ್ಠ)

ಆ ತಾಯಿ ಭುವನೇಶ್ವರಿಯು ನಿಮ್ಮ ಆಸೆಗಳನ್ನೆಲ್ಲ ಈಡೇರಿಸಲಿ, ನಿಮ್ಮ ಮುಂದಿನ ವೆಬ್ ಸೀರೀಸ್ ನಲ್ಲಿ ಒಬ್ಬ ಸ್ಫುರದ್ರೂಪಿ ಪೊಲೀಸ್ ಅಧಿಕಾರಿಯಾಗಿ ನೋಡುವ ಅವಕಾಶ ಎಲ್ಲ ಪ್ರೇಕ್ಷಕರಿಗೂ ಸಿಗಲಿ ನಿಮ್ಮ ಎಲ್ಲ ಚಿತ್ರಗಳು ಯಶಸ್ವಿಯಾಗಲೆಂದು ನಮ್ಮ ಆಕೃತಿ ಕನ್ನಡದಿಂದ ಶುಭ ಹಾರೈಸುತ್ತೇವೆ. 


  • ಕು ಶಿ ಚಂದ್ರಶೇಖರ್ ಹಾಗೂ ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW