ಹಾಸ್ಯ ಬ್ರಹ್ಮ,ಕಲಾಭಿಮಾನಿಗಳ ಬಾಲಣ್ಣ …

ದುರಾದೃಷ್ಟದ ಕೂಸೆಂದು ಬಾಲಕೃಷ್ಣರವರನ್ನು ನೋಡುತ್ತಿದ್ದ ಅಂದಿನ ಸಮಾಜ, ಮುಂದೆ ಕಲಾರಸಿಕರ ಬಾಲಣ್ಣರಾದರು. ನಾಗರಾಜ್ ಲೇಖನ ಅವರ ಲೇಖನದಲ್ಲಿ ಅಂಥಹ ಮಹಾನ್ ಕಲಾವಿದನನ್ನು ಮತ್ತೆ ನೆನಪಿಸಿಕೊಳ್ಳುವಂತೆ ಆಗಿದೆ. ಮುಂದೆ ಓದಿ… 

ನಮ್ಮ ಕನ್ನಡಿಗರನ್ನು ಹಲವು ದಶಕಗಳ ಕಾಲ ತಮ್ಮ ಸೂಕ್ಷ್ಮ ಅಭಿನಯದಿಂದ ರಂಜಿಸಿದ ಬಾಲಣ್ಣರವರನ್ನು ಕಲಾಭಿಮಾನಿಗಳು ಹೇಗೆ ಮರೆಯೋಕೆ ಆಗತ್ತೆ ಅಲ್ವಾ….? ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ಕಲಾವಿದರು ನಮ್ಮ ಬಾಲಣ್ಣ. ಬಾಲಣ್ಣನವರ ಮೂಲ ಹೆಸರು ಟಿ.ಎನ್‌ ಬಾಲಕೃಷ್ಣ. ಅವರ ಸ್ನೇಹದ ವ್ಯಕ್ತಿತ್ವದಿಂದ ಎಲ್ಲರಿಗು ಬಾಲಣ್ಣ ಎಂದೆ ಹೆಸರಾದರು. ಬಾಲಣ್ಣ ಎಲ್ಲರ ಥರ ಸಾಮಾನ್ಯವಾದ ಕಲಾ ಪ್ರತಿಭೆಯಾಗಿರಲಿಲ್ಲ. ಯಾಕೆಂದರೆ ಚಿಕ್ಕವರಿರುವಾಗಲೆ ಇವರಿಗೆ ಶ್ರವಣ ದೋಷವಿತ್ತು. ನಂತರ ಪೂರ್ಣವಾಗಿ ಶ್ರವಣ ಹೀನರಾದರು. ಆದರು ಕೇವಲ ತುಟಿ ಚಲನೆಗಳ ಮೂಲಕವೇ ಶಬ್ದ ಗ್ರಹಿಸಿ, ಸಂಭಾಷಣೆಯನ್ನು ಅರ್ಥೈಸಿಕೊಂಡು, ಐದು ದಶಕಗಳ ಕಾಲ ೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯವನ್ನು ತೋರಿಸಿ, ಮನೆ ಮಾತಾದವರು. ಇಂದಿಗೆ ಬಾಲಣ್ಣನವರು ನಮ್ಮಿಂದ ದೂರವಾಗಿ ೨೫ ವರ್ಷಗಳಾದವು. ಆದರೆ ಅವರ ಕಲಾ ಜೀವನ ಮಾತ್ರ ಇಂದಿನ ಎಷ್ಟೊ ಜನಕ್ಕೆ ಸ್ಫೂರ್ತಿಯಾಗಿದೆ ನಿಜ.

ಬಾಲಕೃಷ್ಣರವರು ಹುಟ್ಟಿದ್ದು, ಹಾಸನ ಜಿಲ್ಲೆಯ ಅರಸೀಕೆರೆಯ ತೀರಾ ಬಡಕುಟು೦ಬದಲ್ಲಿ.

ಫೋಟೋ ಕೃಪೆ : tnbalakrishna.org

ನವೆಂಬರ್‌ ೦೨, ೧೯೧೧ ರಂದು ತಂದೆ – ತಾಯಿಗಳಿಗೆ ಏಕೈಕ ಪುತ್ರನಾಗಿ ಜನಿಸಿದರು. ಇವರ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದರು. ತಾಯಿ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆದು ತುಂಬಾ ಬಡತನದಲ್ಲಿ ಜೀವನ ನಡೆಸುತ್ತಿದ್ದರ೦ತೆ. ಹೀಗಿರುವಾಗ ಒಮ್ಮೆ ದುರಾದೃಷ್ಟವೆಂಬುವುದು ಇದಕ್ಕಿದಂತೆ ಈ ಶ್ರಮಜೀವಿಗಳ ಮೇಲೆ ಬಿದ್ದಿತು. ಇವರ ತಂದೆ ತೀವ್ರವಾದ ಖಾಯಿಲೆಗೆ ತುತ್ತಾದರು. ತಾಯಿ ಕಂಡ ಕಂಡಲ್ಲಿ ಭಿಕ್ಷೆ ಬೇಡಿ ಹಣ ಹೊಂದಿಸಲು ಪ್ರಯತ್ನಿಸಿದರು ವಿಫಲವಾಯಿತು. ಮುಂದೆ ಜೀವನವೇ ಮತ್ತಷ್ಟು ಕಷ್ಟವಾಯಿತು. ಕೊನೆಗೆ ತಾಯಿ ಬೇರೆ ದಾರಿ ತೋಚದೆ ಇದ್ದ ಒಬ್ಬ ಮಗ ಬಾಲಕೃಷ್ಣ ಅವರನ್ನು ೪ ನೇ ವಯಸ್ಸಿನಲ್ಲಿಯೇ ಮಂಡಿ ವ್ಯಾಪಾರಿಯೊಬ್ಬರಿಗೆ ೮ ರೂಪಾಯಿಗೆ ಮಾರಿದರ೦ತೆ. ಅಲ್ಲಿಗೆ ಬಾಲಕೃಷ್ಣ ಅವರ ಸ್ವಂತ ಮನೆಯ ಋಣ ತೀರಿತು. ವ್ಯಾಪಾರಿಯ ಪತ್ನಿ ಬಾಲಕೃಷ್ಣರವರನ್ನು ಶಾಲೆಗೆ ಸೇರಿಸಿದರು.

ಆದರೆ ಬಾಲ್ಯವು ಕೂಡ ಬಾಲಣ್ಣನವರಿಗೆ ದುರಾದೃಷ್ಟವೇ ಆಗಿತ್ತು. ಓದುತ್ತಿರುವಾಗಲೆ ತಮ್ಮ ೮ ನೇ ವಯಸ್ಸಿನಲ್ಲಿಯೆ ಯಾವುದೋ ಕಪೋಲಕ್ಕೆ ಬಿದ್ದ ಏಟಿನಿಂದ ಕಿವುಡರಾದರು. ಇದು ಇವರ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟವಾಯಿತು. ನಂತರ ಸಾಕುತಾಯಿ ಇವರನ್ನು ಶಾಲೆ ಬಿಡಿಸಿ ಮನೆಗೆಲಸಕ್ಕೆ ಹಾಕಿದರು.

ಫೋಟೋ ಕೃಪೆ : chitraloka.com

ದುರಾದೃಷ್ಟದ ಕೂಸೆಂದು ಬಾಲಕೃಷ್ಣರವರನ್ನು ಸುತ್ತ-ಮುತ್ತಿಲಿನವರು ನೋಡುವ ದೃಷ್ಠಿಯೆ ಬೇರೆಯಾಗಿತ್ತು. ಶ್ರವಣಹೀನರಾದ ಇವರನ್ನು ಎಲ್ಲರು ಹೀನ ಮಗುವೆಂದೆ ಅವಮಾನಿಸುತ್ತಿದ್ದರು. ಕಲಿಕೆ ನಿಲ್ಲಿಸಿದ ಬಾಲಣ್ಣನವರಿಗೆ ಆವಾಗಲೆ ಕಲೆಯ ಕಡೆಗೆ ಆಸಕ್ತಿ ಬಂದಿತು. ತನ್ನ ಸಹಪಾಠಿಗಳೊಂದಿಗೆ ಬೀದಿ ನಾಟಕವಾಡುವುದು, ಗ್ರಾಮ ನಾಟಕಗಳಲ್ಲಿ ಅಭಿನಯಿಸುವುದನ್ನು ರೂಢಿಸಿಕೊಂಡರು. ಒಂದು ದಿನ ನಾಟಕಕ್ಕೆ ಹಣ ಸಾಲದಾದಾಗ ಸಾಕು ತಂದೆಯ ಜೇಬಿನಿಂದ ದುಡ್ಡು ತಗೆಯುವುದನ್ನು ಸಾಕು ತಾಯಿ ನೋಡಿದರಂತೆ ಮತ್ತು ಬಾಲಣ್ಣಗೆ ಕಳ್ಳನ ಪಟ್ಟ ಕಟ್ಟಿ ಮನೆಯಿಂದ ಹೊರ ಹಾಕಿದರು. ಅಲ್ಲಿಗೆ ಇದ್ದ ಆ ಸಾಕು ಮನೆಯ ಋಣ ಬಾಲಣ್ಣನವರಿಗೆ ಮುಗಿಯಿತು. ಮುಂದೆ ಹೋದಲೆಲ್ಲಾ ಮಲಗಲು ಬೀದಿಯೆ ಅವರಿಗೆ ಮನೆಯಾಯಿತು. ನಾಟಕ ಕಂಪನಿಯ ಗೇಟ್‌ ಕಾಯುವುದು, ಫಲಕ ಬರೆಯುವುದು, ಪೋಸ್ಟರ್ ಅಂಟಿಸುವುದೇ, ಹೊಟ್ಟೆ ತುಂಬಿಸಿಕೊಳ್ಳಲು ಅವರ ಕಾಯಕವಾಯಿತು.

ಹೀಗೆ ಬಾಲಣ್ಣ ಶ್ರಮ ಜೀವನ ನಡೆಸುತ್ತಿರುವಾಗ ನಾಟಕ ಕಂಪನಿಯೊಂದರಲ್ಲಿʼಟಿಕೇಟ್‌ ಕಲೆಕ್ಟರ್‌ʼ ಆಗಿ ಕೆಲಸಕ್ಕೆ ಸೇರಿದರು. ಒಮ್ಮೆ ಕೆಲಸ ಮಾಡುತ್ತಿರುವಾಗ ಅಂದು ʼಶ್ರೀ ರಾಮ ಪಟ್ಟಾಭಿಶೇಕʼ ಎಂಬ ನಾಟಕದಲ್ಲಿ ಅಭಿನಯಿಸಬೇಕಿದ್ದ ಒಬ್ಬ ಕಲಾವಿದ ಅಸ್ವಸ್ಥನಾಗಿ ಬಾರದಿದ್ದಾಗ.ಅನಿವಾರ್ಯವಾಗಿ ಆ ಪಾತ್ರವನ್ನು ಬಾಲಣ್ಣನವರು ಮಾಡಬೇಕಾಗಿ ಬಂತು.ಅಲ್ಲಿಯೇ ಅವರಿಗೆ ʼಕಲಾದೇವಿʼ ಆಶೀರ್ವದಿಸಿದಳು.ಅವರೊಳಗಿನ ಕಲಾ ಪ್ರತಿಭೆ ಏನೆಂಬುದು ಅಲ್ಲಿದ್ದ ಜನರಿಗೆಲ್ಲಾ ಗೊತ್ತಾಯಿತು.ಆಮೇಲೆ ಬಾಲಣ್ಣನವರು ಕಲಾ ಜೀವನದಿಂದ ಹಿಂದಿರುಗಿ ನೋಡಲೆ ಇಲ್ಲಾ.ನಾಟಕ ರಂಗವೆ ಮುಖ್ಯ ನೈಜ್ಯ ಮಾಧ್ಯಮವಾಗಿದ್ದ ಅಂದಿನ ಕಾಲದಲ್ಲಿ.ಅವರ ಪ್ರತಿಭೆಗೆ ಬಹಳಷ್ಟು ನಾಟಕ ಕಂಪನಿಗಳು ಅವಕಾಶ ಕೊಟ್ಟವು.ʼಕೃಷ್ಣಲೀಲಾʼ ಅವರು ನಟಿಸಿದ ಮೊದಲ ನಾಟಕ. ನಂತರದಲ್ಲಿ ಲಕ್ಷ್ಮಾಸನ ನಾಟಕ ಮಂಡಳಿ, ಗೌರಿಶಂಕರ ನಾಟಕ ಮಂಡಳಿಗಳಲ್ಲಿ ಅಭಿನಯಿಸಿ ಹೆಸರುವಾಸಿಯಾದರು. ಆಮೇಲೆ ಅಂದಿನ ಜನಪ್ರಿಯ ನಾಟಕ ಮಂಡಳಿಯಾದಂತಹ ʼಗುಬ್ಬಿ ವೀರಣ್ಣʼ ರಂಗಭೂಮಿಗೆ ಪ್ರವೇಶ ಮಾಡಿದರು.ಅಲ್ಲಿ ಡಾ.ರಾಜ್‌ ಕುಮಾರ್‌,ಜಿ.ವಿ ಅಯ್ಯರ್‌,ನರಸಿಂಹ ರಾಜು ಎಲ್ಲರೊಂದಿಗು ಪಾತ್ರ ಮಾಡಿದರು.ಬರೀ ಅಭಿನಯವಷ್ಟೆ ಅಲ್ಲದೆ ೫೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದರು. ನಿರ್ದೆಶನದಲ್ಲೂ ತೊಡಗಿಸಿಕೊಂಡಿದ್ದರು. ಅವರ ನೀಲಾಂಜನೆ, ಚಿತ್ರಾಂಗದೆ ಎಂಬ ನಾಟಕಗಳು ತುಂಬಾ ಹೆಸರುವಾಸಿಯಾಗಿತ್ತು.

ಫೋಟೋ ಕೃಪೆ : manatelangana.news (ನಿರ್ದೇಶಕ ಬಿ.ಆರ್.‌ ಪಂತುಲು)

ಒಂದು ಬಾರಿ ಅಂದಿನ ಪ್ರಸಿದ್ಧ ನಿರ್ದೇಶಕರಾದಂತಹ  ಬಿ.ಆರ್.‌ ಪಂತುಲು ಅವರು ನಾಟಕ ಕಂಪನಿಗೆ ಬಂದಿದ್ದರು. ಅಲ್ಲಿ ಬಾಲಣ್ಣನವರ ಅಭಿನಯ ಚತುರತೆ ಕಂಡು ತಮ್ಮ ಮುಂದಿನ ಚಿತ್ರವಾದ ʼರಾಧಾ ರಮಣʼ ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟರು. ಈ ಚಿತ್ರ ೧೯೪೩ ರಲ್ಲಿ ಬಂದಿತು. ಚಿತ್ರವು ಹೆಸರು ಗಳಿಸುವುದರ ಜೊತೆಗೆ ಕಲಾವಿದರಿಗು ಒಳ್ಳೇಯ ಹೆಸರು ತಂದು ಕೊಟ್ಟಿತು. ನಾಯಕಿಯಾದಂತಹ ʼಎಂ.ವಿ ರಾಜಮ್ಮʼರವರು ಈ ಚಿತ್ರದ ಮೂಲಕ ಕನ್ನಡದ ಮೊದಲ ಮಹಿಳಾ ನಿರ್ಮಾಪಕಿ ಕೂಡ ಆದರು. ನಂತರದ ದಿನಗಳಲ್ಲಿ ಬಾಲಣ್ಣ ಸಂಪೂರ್ಣವಾಗಿ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿಯೆ ತಮ್ಮನ್ನು ತೊಡಗಿಸಿಕೊಂಡರು. ಇವರ ನಂತರ ಚಿತ್ರರಂಗ ಪ್ರವೇಶಿಸಿದ ಹಿರಿಯ ಕಲಾವಿದರಿಂದ ಹಿಡಿದು ಕಿರಿಯ ಕಲಾವಿದರೊಂದಿಗು  ಸ-ಕಲಾ ಚತುರರಾಗಿ ಎಲ್ಲಾ ಥರದ ಪಾತ್ರಗಳಲ್ಲು ನಟಿಸಿ ಸೈ ಎನಿಸಿಕೊಂಡಿದ್ದರು.

ಗಂಧದ ಗುಡಿ, ಬಂಗಾರದ ಮನುಷ್ಯ, ಮೂಗನ ಸೇಡು, ಕಾಮನಬಿಲ್ಲು, ಗರುಡಧ್ವಜ, ಅಶ್ವಮೇಧ, ರಣಭೇರಿಯಂತಹ ಚಿತ್ರಗಳಲ್ಲಿ ಅವರ ವಿಭಿನ್ನ ಶೈಲಿಯ ಅಭಿನಯ ನೋಡಬಹುದು. ಬರಿ ಒಂದೇ ಪಾತ್ರಕ್ಕೆ ಬಾಲಣ್ಣ ಸೀಮಿತವಾಗಿರಲಿಲ್ಲ. ಹಾಸ್ಯದಿಂದ ಹಿಡಿದು, ಖಳನಾಯಕನ ಪಾತ್ರದವರೆಗೂ ನಟಿಸಿದ್ದರು. ಅದಕ್ಕೆ ಅವರನ್ನು ರಂಗಭೂಮಿಯಿಂದಲೆ ʼಕಲಾಭೀಷ್ಮʼ ಎಂದು ಕರೆಯುತ್ತಿದ್ದರಂತೆ. ಡಾ.ರಾಜ್‌ಕುಮಾರ್‌,ವಿಷ್ಣುವರ್ಧನ್‌, ಶಂಕ್ರಣ್ಣ, ದ್ವಾರಕೀಶ್‌, ಅಂಬರೀಷ್ ರವರೊಂದಿಗೆ ಉತ್ತಮ ಬಾಂಧವ್ಯವಿತ್ತು. ಅವರೊಟ್ಟಿಗೆ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಜೊತೆ ಗೋಕಾಕ್‌ ಚಳುವಳಿಯಲ್ಲು ಕೂಡ ಭಾಗವಹಿಸಿದ್ದರು. ಶಂಕರ್‌ ನಾಗ್‌, ದ್ವಾರಕೀಶ್ ರವರೊಂದಿಗಿನ ಅವರ ‘ಕಿಲಾಡಿ ಅಭಿನಯವಂತು’ ಮರೆಯೋಕೆ ಸಾಧ್ಯವಿಲ್ಲಾ. ಇಷ್ಟೆ ಅಲ್ಲದೆ ಬಾಲಣ್ಣ ಒಬ್ಬ ನಟರಾಗಿ ಮಾತ್ರ ಎಲ್ಲರಿಗು ಗೊತ್ತು. ಅದರ ಜೊತೆಗೆ ಅವರು ಒಳ್ಳೇಯ ಬರಹಗಾರ, ಸಾಹಿತಿ ಹಾಗೂ ಸಂಭಾಷಣೆಗಾರರು ಕೂಡ ಹೌದು. ‘ಪಂಚರತ್ನ’, ‘ಭಕ್ತ ಮಲ್ಲಿಕಾರ್ಜುನ’ ಚಿತ್ರಗಳಿಗೆ ಬರವಣಿಗೆ ಕೂಡ ಮಾಡಿದ್ದಾರೆ. ‘ರಣಧೀರ ಕಂಠೀರವ’, ‘ಕಲಿತರೂ ಹೆಣ್ಣೇ’ ಎಂಬ ಎರಡು ಚಿತ್ರಕ್ಕೆ ಸಹ ನಿರ್ಮಾಪಕರಾಗಿಯು ಕೆಲಸ ಮಾಡಿದ್ದಾರೆ. ಇವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ‘ಬಂಗಾರದ ಮನುಷ್ಯ’ ಚಿತ್ರದ ಉತ್ತಮ ನಟನೆಗೆ ಉತ್ತಮ ಪೋಷಕ ನಟ ಪ್ರಶಸ್ತಿಗಳು ಸಿಕ್ಕಿದೆ. ಕನ್ನಡ ಚಿತ್ರಗಳನ್ನು ಚಿತ್ರೀಕರಿಸಲು ಇಲ್ಲಿನ ನಿರ್ಮಾಪಕರುಗಳು ಬೇರೆ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಲು.

ಫೋಟೋ ಕೃಪೆ : tnbalakrishna.org (ಬಾಲಣ್ಣ ಸಮಾಧಿ)

ತಾವೆ ಒಂದು ಸ್ವಂತ ಸ್ಟೂಡಿಯೋವನ್ನು ನಿರ್ಮಿಸಬೇಕೆಂಬುದು ಬಾಲಣ್ಣನವರ ಬಹುದೊಡ್ಡ ಕನಸಾಗಿತ್ತು. ಅದಕ್ಕಾಗಿ ೧೯೬೩ ರಲ್ಲಿ ತಮ್ಮ ಜೀವನದ ಶ್ರಮವೆಲ್ಲಾ ಹಾಕಿ ಪ್ರಯತ್ನಿಸಿದರು.ಅದರ ಯೋಜನೆ ರೂಪಿಸಿ ಅಂದಿನ ಮುಖ್ಯಮಂತ್ರಿಯಾದಂತಹ ಎಸ್.ನಿಜಲಿಂಗಪ್ಪನವರಿಗೆ ಮನವಿ ಸಲ್ಲಿಸಿ ಜಾಗ ನೀಡಲು ವಿನಂತಿಸಿಕೊಂಡರು.ಆಗ ಸರ್ಕಾರ ಅವರಿಗೆ ಕೆಂಗೇರಿಯಲ್ಲಿ ೨೦ ಎಕರೆ ಜಾಗವನ್ನು ೬೦೦೦ ರೂಪಾಯಿಗಳಿಗೆ ನೀಡಿತು. ೧೯೬೫ ರಲ್ಲಿ ಸ್ಟುಡಿಯೋ ಕೆಲಸಗಳು ಪ್ರಾರಂಭವಾದವು. ಸ್ಟುಡಿಯೋಗೆ ಹಣ ಸಾಲದಿದ್ದಾಗ ತಾವೆ ಸ್ವತಃ ತಿರುಗಿ ಸಾರ್ವಜನಿಕರ ಹತ್ತಿರ ಹಣ ಸಂಗ್ರಹಿಸಿದರು. ಕೊನೆಗೆ ಸ್ಟುಡಿಯೋ ನಿರ್ಮಾಣವು ಆಯಿತು. ಕನ್ನಡಿಗರ ಅಭಿಮಾನದ ಸಂಕೇತವಾಗಿ ಅದಕ್ಕೆ ʼಅಭಿಮಾನ್‌ ಸ್ಟುಡಿಯೋʼ ಎಂದು ಹೆಸರನ್ನು ಇಟ್ಟರು. ಸ್ಟುಡಿಯೋದಲ್ಲಿ ಚಿತ್ರೀಕರಣವು ಪ್ರಾರಂಭವಾಯಿತು.

ಆದರೆ ನಮ್ಮವರು ಮಾತ್ರ ಕಾರಣ ಹೇಳಿ ಪಕ್ಕದ ರಾಜ್ಯಕ್ಕೆ ಹೋಗುವುದು ನಿಲ್ಲಲಿಲ್ಲ. ಮತ್ತೆ ಕೆಲವೊಂದು ಕಾರಣಗಳಿಂದ ಬಾಲಣ್ಣ ತಮ್ಮ ವೃದ್ಧಾಪ್ಯದಲ್ಲಿ ಸಂಕಟಕ್ಕೆ ಸಿಲುಕಿದರು. ಮಾನಸಿಕವಾಗಿ ನೊಂದುಕೊಂಡರು. ತಮ್ಮ ಮಡದಿಯ ಮರಣದ ನಂತರ ಕುಗ್ಗಿ ಹೋದರು. ಕಿರಿಯ ಮಗಳ ಮನೆಯಲ್ಲಿ ಕೆಲವುದಿನ ಉಳಿದುಕೊಂಡಿದ್ದರು. ನಂತರ ಅನಾರೋಗ್ಯಕ್ಕೆ ತುತ್ತಾದರು. ತಮ್ಮ ಕೊನೆಯ ಚಿತ್ರವಾದ ʼಯಮಕಿಂಕರʼ ಚಿತ್ರಕ್ಕೆ ತಾವೆ ಸ್ವತಃ ಡಬ್‌ ಮಾಡಿದ್ದರಂತೆ. ಕೊನೆಗೆ ಆರೋಗ್ಯ ತೀವ್ರ ಹದಗೆಟ್ಟಾಗ ಹಾಸಿಗೆ ಹಿಡಿದರು.

ಫೋಟೋ ಕೃಪೆ : tnbalakrishna.org

ಚಿತ್ರರಂಗ ಕಲಾವಿದರೆಲ್ಲಾ ಅವರನ್ನು ನೋಡಲು ಹೋದಾಗ ತಮ್ಮ ಸ್ಟುಡಿಯೋವನ್ನು ಉಳಿಸಿ, ಬೆಳಿಸಿರಿ ಎಂದು ಹೇಳುತ್ತಿದ್ದರಂತೆ. ಅಂದಿನ ಮುಖ್ಯಮಂತ್ರಿ ʼದೇವೆಗೌಡರುʼ ಸಹ ಅವರನ್ನು ನೋಡಲು ಹೋದಾಗ ಹಾಸಿಗೆಯಿಂದ ಎದ್ದು ನನ್ನ ಸ್ಟುಡಿಯೋ ಒಂದನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದರಂತೆ. ಕೆಲ ದಿನಗಳ ನಂತರ ೧೯ ಜುಲೈ ೧೯೯೫ ರಂದು ಸಾಯಂಕಾಲ ಬಾಲಣ್ಣ ತಮ್ಮ ೮೪ ನೇ ವಯಸ್ಸಿನಲ್ಲಿ ಅಪಾರ ಕನ್ನಡ ಕಲಾಭಿಮಾನಿ ಬಳಗವನ್ನು ಬಿಟ್ಟು ಬಹುದೂರ ಹೋಗುತ್ತಾರೆ. ನಂತರ ಅವರನ್ನು ಅವರ ಕನಸಿನ ಕೂಸಾದ ಅಭಿಮಾನ್‌ ಸ್ಟುಡಿಯೋದಲ್ಲಿಯೆ, ಅವರ ಧರ್ಮಪತ್ನಿ ಪಕ್ಕದಲ್ಲಿಯೆ ಅವರಿಗೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಅಭಿಮಾನ್‌ ಸ್ಟುಡಿಯೋದಲ್ಲಿ ಇಂದಿಗೂ ಅವರ ಸಮಾಧಿಯನ್ನು ನೋಡಬಹುದು.

ಫೋಟೋ ಕೃಪೆ : commons.wikimedia

ವಿಷ್ಣುವರ್ಧನ್‌ ಮತ್ತು ಬಾಲಣ್ಣನವರ ಬಾಂಧವ್ಯಕ್ಕೆ ಸಾಕ್ಷಿಯಾಗಿ ವಿಷ್ಣುದಾದರಿಗೂ ಅಭಿಮಾನ್‌ ಸ್ಟುಡಿಯೋದಲ್ಲಿಯೆ ಅಂತಿಮ ನಮನ ಸಲ್ಲಿಸಿದ್ದು. ಅವರ ಸಮಾಧಿಯನ್ನು ಇಲ್ಲಿಯೆ ನೋಡಬಹುದು. “ಕೊನೆಯ ಕ್ಷಣದಲ್ಲೂ ಬಾಲಣ್ಣನವರ ಸ್ಟುಡಿಯೋ ಮೇಲಿನ ಅಭಿಮಾನ ಕೇಳಿದಾಗ ಇಂದು ಆ ಸ್ಟೂಡಿಯೋ ನೋಡಿದಾಗ.ನಿಜಾ ಮನಸ್ಸಿಗೆ ತುಂಬಾ ನೋವಾಗುತ್ತದೆ”.ಏನೋ ಕಾರಣಾಂತರಗಳಿಂದ ಇಂದಿಗೂ ಅಭಿಮಾನ್‌ ಸ್ಟುಡಿಯೋ ಚಿತ್ರೀಕರಣವಿಲ್ಲದೆ ಬರಿದಾಗಿದೆ. ನಮ್ಮ ಐದಾರು ಸರ್ಕಾರಗಳು ಬ೦ದು ಹೋದರು. ಸಮಸ್ಯೆ ಕೇಳುತ್ತಲೆ ಇದೆ ಹೊರತು೨೫ ವರ್ಷವಾದರು ಪರಿಹಾರ ಮಾತ್ರ ಆಗಿಲ್ಲಾ. ಎಲ್ಲಾ ಚೆನ್ನಾಗಿದ್ದರೆ ವಿಷ್ಣುದಾದರ ಸುಂದರ ಸ್ಮಾರಕ ಕೂಡ ಇಲ್ಲಿಯೆ ಆಗಬೇಕಿತ್ತು. ಎಷ್ಟೊಂದು ಒಳ್ಳೇಯ ಚಿತ್ರಗಳು, ರಿಯಾಲಿಟಿ ಶೋ ಗಳು ಕೂಡ ಇಲ್ಲಿಯೆ ನಡೆಯುತ್ತಿದ್ದವು ನಿಜ. ಆದರೆ ಬಾಲಣ್ಣನವರ ಮನಸು, ಕೋಟ್ಯಾಂತರ ಕನ್ನಡಾಭಿಮಾನಿಗಳ ಕನಸು ಕೂಡ ಬರಿ ಕನಸಾಗಿಯೆ ಉಳಿದಿದೆ. ಇನ್ನು ಮುಂದಾದರು ದೇವರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವಂತಾಗಲಿ. ಬಾಲಣ್ಣನವರ ಕನಸಿನ ಕೂಸು ಎದ್ದು ಓಡಾಡುವಂತಾಗಲಿ ಎಂದು ನಮ್ಮ ಆಕೃತಿ ಕನ್ನಡ ಬಳಗ ಆಶಿಸುತ್ತದೆ.


  • ಲೇಖನ್ ನಾಗರಾಜ (ಹರಡಸೆ ಹೊನ್ನಾವರ)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW