ಜನುಮ ಜನುಮಕೂ – ಭಾಗ ೨

‘ಜನುಮ ಜನುಮಕೂ’ ಕಾದಂಬರಿಯು ಕನ್ನಡದ ಪ್ರಮುಖ ವಾರಪತ್ರಿಕೆ ಸುಧಾದಲ್ಲಿ ಹದಿಮೂರು ಕಂತುಗಳಲ್ಲಿ ಪ್ರಕಟವಾಯಿತು.ಸಾಕಷ್ಟು ಜನ ನನಗೂ ಪತ್ರಿಸಿ, ಇದು ನಿಜವಾಗಲೂ ನಡೆದ ಸತ್ಯ ಕಥೆಯೇ? ಎಂದು ಪ್ರಶ್ನಿಸಿದ್ದಾರೆ. ಒಂದು ಜನ್ಮದಲ್ಲಿ ಕಳೆದುಕೊಂಡ ಪ್ರೀತಿಯನ್ನು ಇನ್ನೊಂದು ಜನ್ಮದಲ್ಲಿ ಪಡೆಯುವ ಛಲತೊಟ್ಟ ಒಂದು ಹೆಣ್ಣು ಆತ್ಮದ ಕತೆಯಿದು.

ಛೇ ಛೇ …ನೀವು ತಪ್ಪು ತಿಳಿದಿರಿ ಡೈರೆಕ್ಟರ್ ಸಾಹೇಬರ್. ನಿರ್ಮಾಪಕ ರೊಕ್ಕಾ ಬಿಚ್ಚಬೇಕು ಅಂದ್ರ…ಹೀರೋಯಿನ್ ಪಾರ್ಟು ಮಾಡುವಾಕಿನೂ ಬಿಚ್ಚವ್ವಾ ಆಗಾಕಬೇಕು. ನೋಡ್ರಿ, ಒಣಾ ಮಾತಿನಿಂದ ಹೊಟ್ಟೆ ತುಂಬೂದಿಲ್ಲ ಸಾಹೇಬ್ರ, ನನ್ನ ಸಿನಿಮಾದಾಗ ಪಾರ್ಟು ಮಾಡಿದರ ಒಂದು ಕೋಟಿ ಬಿಚ್ಚತೀನಿ ಅಂದದ್ದ ತಡಾ. ಈ ಹಿಂದಿ ಹುಡುಗಿ ಚಾವ್ಲಾ ತಡಾಕಿಲೆ ಕಾಯಾಗಿನ ಬಾವಲಿ ಆದ್ಲು . ನೀವು ಏನರ ಅನ್ರಿ. ನಮ್ಮ ಕನ್ನಡದ ಹುಡುಗ್ಯಾರು ಕಲಿಯೋದು ಬಾಳ ಐತಿ. ನಾನು ಹಿಂದಿ ಹುಡುಗೀನ ಸಿನಿಮಾಕ್ಕ ತಂದೀನಿ. ನೀವು ನನಗ ಛಲೋ ಸಿನಿಮಾ ಕೊಡಬೇಕು ಅಷ್ಟ…

ರಾಣಾ ಮಾತನಾಡಲಿಲ್ಲ. ಸಿನಿಮಾ ಶೂಟಿಂಗ್ ಶುರುವಾಗುವ ಮೊದಲು ಹೀಗೆ ಗೊಂದಲ ಮಾಡಿಕೊಳ್ಳುವುದು ಇವರಿಗೆ ಬೇಕಾಗಿರಲಿಲ್ಲ. ಆದರೂ ತಡೆಯಲಾಗಲಿಲ್ಲ. ಕನಿಷ್ಠ ಎರಡನೇ ಹಿರೋಯಿನ್ನ ಪಾತ್ರಕ್ಕಾದರೂ ಕನ್ನಡ ಹುಡುಗಿಯನ್ನು ತರಬೇಕು. ಈ ಸಿನಿಮಾದಲ್ಲಿ ಕನ್ನಡ ಹುಡುಗಿ ಹಾಗೂ ಹಿಂದಿ ಹುಡುಗಿ ಒಟ್ಟಾಗಿ ಅಭಿನಯಿಸಲಿ. ಜನ ಯಾರನ್ನು ಇಷ್ಟಪಡುತ್ತಾರೋ ನೋಡೋಣ ಎಂದು ತಮ್ಮಲ್ಲೇ ಅಂದುಕೊಂಡರು.
ಮತ್ತೆ ಕುಡಿಯುವುದು ಬೇಡವೆನಿಸಿತು. ಮೇಲೆದ್ದರು.

‘ನನಗೆ ಸಾಕು ಪಾಟೀಲ್ರೆ, ನಾಳೆ ಬೇಗ ಏಳಬೇಕು. ನಾಳೆಯ ಲೊಕೇಶನ್ ಚಂಗಪ್ಪ ಅವರ ಬಗ್ಗನಮನೆ ಕಾಫಿ ಎಸ್ಟೇಟ್. ಬೇಗ ಹೋರಾಡಬೇಕು. ಶೂಟಿಂಗ್ ಬೇಗ ಶುರು ಆದ್ರೆ ಒಳ್ಳೆಯದಲ್ಲವ?’.

ಇವರ ಅವಸರ ಕಂಡು ಚಂದೂ ಪಾಟೀಲ ಮತ್ತೆ ಮಾತಾಡಲಿಲ್ಲ. ತನ್ನ ಪಾಡಿಗೆ ತಾನು ವಿಸ್ಕಿ ಹೀರುತ್ತಾಳೆ ಇದ್ದ. ಹೊರಗೆ ಕೂತಿದ್ದ ಮ್ಯಾನೇಜರ್ ಹೊಗೆರಾಮನನ್ನು ನೋಡಿದ ರಾಣಾ ನಾಳೆಯ ತಾಯಾರಿಯ ಬಗ್ಗೆ ಕೆಲವು ಸೂಚನೆ ಕೊಟ್ಟು ಮಲಗಲು ಹೊರಟೇಬಿಟ್ಟರು. ಅಷ್ಟರಲ್ಲಿ ಚಂದೂ ಪಾಟೀಲರ ಫೋನ್ ರಿಂಗಣಿಸಿತು. ಆ ಕಡೆಯಿಂದ ಅನುಷ್ ಚಾವ್ಲಾ ದನಿ ಕೇಳುತ್ತಲೂ ದಿಢೀರನೆ ಎದ್ದ ಪಾಟೀಲ.

‘ಯೆಸ್…ಆ ರಹಾ ಹೂ೦’

ಅಂದದ್ದಷ್ಟೇ ಕೇಳಿಸಿತು. ನೋಡಿದರೆ ಪಾಟೀಲ ಮಾಯ. ಹೊಗೆರಾಮ ಸುಮ್ಮನೆ ನಕ್ಕ. ಅವ್ಳು ಇವ್ನಿಗೆ ಹೊಗೆ ಹಾಕೋದು ಗ್ಯಾರಂಟಿ – ಅಂದ ಮೆಲ್ಲಗೆ.
***

ಫೋಟೋ ಕೃಪೆ : stocksy united (ಸಾಂದರ್ಭಿಕ ಚಿತ್ರ )

ಬೆಳಗಾಗಿದೆ. ಹೊಸ ದಿನಕ್ಕೆ ಮಡಿಕೇರಿ ಸಜ್ಜಾಗಿದೆ. ಶೂಟಿಂಗ್ ಗೆ ತಾಯಾರಾಗಿ ಕಾರು ಬರುವುದನ್ನೇ ಕಾಯುತ್ತಿದ್ದ ರಾಣಾ ಕೋಣೆಯಿಂದ ಬಾಲ್ಕನಿಗೆ ಬಂದರು. ಒಮ್ಮೆ ಇಡೀ ಮಡಿಕೇರಿಯನ್ನು ಕಣ್ಣಲ್ಲಿ ತುಂಬಿಕೊಂಡರು. ಬೆಳಗಿನ ಹೊತ್ತು ಮಡಿಕೇರಿ ನೋಡಲು ಚಂದ. ಗುಡ್ಡ-ಬೆಟ್ಟಗಳ ಮೇಲೆ ಹಂಚು ಮತ್ತು ತಾರಸಿ ಮನೆಗಳು. ಹಾವಿನಂತೆ ಅಲ್ಲಲ್ಲಿ ಮಲಗಿದ ರಸ್ತೆಗಳು. ಇದರ ನಡುವೆ ಹರಿದು ಹೋಗುವ ನೀರಿನ ಕಾಲುವೆಗಳು. ಎಲ್ಲವನ್ನೂ ನೋಡುತ್ತಿದ್ದಂತೆ ಈ ಪಟ್ಟಣದಲ್ಲೂ ಒಮ್ಮೆ ಶೂಟ್ ಮಾಡಬೇಕು ಎಂದು ಅನಿಸಿತು. ಇದರ ನಡುವೆ ರಾತ್ರಿ ನಿರ್ಮಾಪಕನೊಂದಿಗೆ ನಡೆದ ಆ ಕಿರಿಕ್ಕೂ ನೆನಪಾಯಿತು.

ಏನೇ ಇದ್ದರೂ ಕೋಟಿ ರೂಪಾಯಿ ಕೊಟ್ಟು ಆ ಹಿಂದಿ ಹುಡುಗಿಯನ್ನು ಸಿನಿಮಾಕ್ಕೆ ತರಬೇಕಾಗಿರಲಿಲ್ಲ. ನಮ್ಮ ಕನ್ನಡದ ಹುಡುಗಿಯೇ ಸಾಕಾಗಿತ್ತು. ಎಲ್ಲ ನಿರ್ಮಾಪಕನ ತೆವಲು ಅಷ್ಟೇ.

ಜೇಬಿನಲ್ಲಿದ್ದ ಸೆಲ್ ರಿಂಗಾಯಿತು. ತೆಗೆದು ನೋಡಿದರೆ ಬೆಂಗಳೂರಿಂದ ಮಗಳು ಬಬ್ಳಿ.

ಫೋಟೋ ಕೃಪೆ : depositephotos

‘ಹಲೋ, ಡ್ಯಾಡ್ ಕಂಗ್ರಾಟ್ಸ್. ನಿಮ್ಮ ಹೊಸ ಸಿನಿಮಾ ಶುರು ಅಲ್ವ ಇವತ್ತು. ಕಂಗ್ರಾಟ್ಸ್ ಹೇಳೋಕೆ ಮಾಡಿದೆ. ‘

‘ಥ್ಯಾಂಕ್ಸ್ ಪುಟ್ಟಿ. ಕಾಲೇಜ್ ಗೆ ಹೊರಡಲಿಲ್ವ?’

‘ಈಗ ಹೊರಟಿ ಡ್ಯಾಡ್. ಸ್ಕೂಟಿ ತಗೀತಾ ಇದ್ದೆ. ಹತ್ತೋಕ್ಮುಂಚೆ ಹೇಳೋಣಾಂತ ಫೋನ್ ಮಾಡಿದೆ’.

ಥ್ಯಾಂಕ್ಸ್ ಮ್ಮ …ಥ್ಯಾಂಕ್ಸ್ ..ರಸ್ತೇಲಿ ಹುಷಾರಾಗಿ ಸ್ಕೂಟಿ ಓಡ್ಸು. ಗೊತ್ತಲ್ಲ ಬೆಂಗಳೂರು ಟ್ರಾಫಿಕ್ಕು.

ಈಗ ದನಿ ಬದಲಾಯಿತು. ಆಗಲೇ ಅವರ ಹೆಂಡತಿ ಶಾಂತಮ್ಮ ಮಗಳ ಕೈಯಿಂದ ಫೋನು ಕಿತ್ತುಕೊಂಡಿದ್ದರು.
ಏನ್ರೀ…ಇವತ್ತು ನಿಮ್ಮ ಹೊಸಾ ಸಿನಿಮಾ ಶೂಟಿಂಗು ಪೂಜಾ ಮಾಡಿಸಾಕ. ನೀವು ಹುಷಾರು. ಸಿನಿಮಾ ಛಲೋ ಬರಬೇಕು ನೋಡ್ರಿ ಮತ್ತ…

‘ಥ್ಯಾಂಕ್ಸ್ ಶಾಂತಾ. ಎಲ್ಲ ಚನ್ನಾಗಿ ನಡೀತಿದೆ. ಈಗ ಲೊಕೇಶನ್ ಗೆ ಹೋರಡ್ತಾ ಇದೀನಿ. ಎರಡು ತಿಂಗಳಲ್ಲಿ ಸಿನಿಮಾ ಮುಗಿಸ್ಬೇಕು. ಇನ್ನಿಬ್ಬರು ಪ್ರೊಡ್ಯೂಸರು ಕಾಯ್ತಾ ಇದ್ದಾರೆ. ಈ ವರ್ಷಕ್ಕೆ ಮೂರೂ ಸಿನಿಮಾ ಸಾಕು ನನ್ಗೆ’.

‘ಅಯ್ಯ ಸಾಕು ಬಿಡ್ರಿ, ಇನ್ನೊಂದ್ ವರ್ಷ ಆದ್ರ ಆತು. ಬಬ್ಳಿ ಇಂಜಿನೀರು ಆಗ್ತಾಳ. ಆ ಮ್ಯಾಲ ಆಕೀ ಲಗ್ನ ಮಾಡಬೇಕು. ಬರೀ ಸಿನಿಮಾ ಅಂತ ಕುಂತ್ರ ಇದನ್ಯಾರು ಮಾಡವ್ರು?’

‘ಆಯ್ತು ಶಾಂತಾ… ಆಯ್ತು. ಮನೇಲಿ ಒಬ್ಬಳೇ ಇರ್ತೀಯ, ಹುಷಾರು’ ಅಷ್ಟರಲ್ಲಿ ಶಾಂತಮ್ಮನ ಕಣ್ಣಲ್ಲಿ ನೀರೇ ಬಂದಿದ್ದವು. ತನ್ನ ಗಂಡ ಎಲ್ಲೇ ಇದ್ದರೂ ತನ್ನ ಕಾಳಜಿ ಮಾಡುತ್ತಾರಲ್ಲ ಎಂದು. ಫೋನ್ ಕಟ್ಟಾಗಿತ್ತು. ರಾಣಾರ ಕಣ್ಣಲ್ಲಿ ಹೆಂಡತಿ ಶಾಂತಮ್ಮ, ಇಂಜಿನಿಯರಿಂಗ್ ಓದುತ್ತಿರುವ ಮಗಳು ಬಾಬುಲಿಯ ಮುಖಗಳು ತುಂಬಿ ಬಂದಿದ್ದವು’.

ಫೋಟೋ ಕೃಪೆ : ABC

‘ಸಾರ್ …’

ದನಿ ಕೇಳಿದ ರಾಣಾ ತಿರುಗಿ ನೋಡಿದರು. ಹೊಗೆರಾಮ ಬಾಗಿಲಲ್ಲಿ ನಿಂತಿದ್ದ. ಖಡಖ್ ಇಸ್ತ್ರಿ ಮಾಡಿದ ಜುಬ್ಬಾ ಹಣೆಯ ಮೇಲೆ ಎರಡಿಂಚು ಅಡ್ಡ ಎಳೆದ ಕುಕುಮದ ಗೆರೆ. ಹೆಗಲಿಗೆ ತೂಗು ಹಾಕಿದ ಚೀಲ. ಇವರನ್ನು ನೋಡಿ ಗುಡ್ ಮಾರ್ನಿಂಗ್ ಹೇಳಿದ.

‘ಎಲ್ಲ ರೆಡಿ ಸರ್.ಯೂನಿಟ್ಟು ಹುಡುಗ್ರು ಜನರೇಟ್ರು ಕೆಮರಾ ಲೊಕೇಶನ್ನಿಗೆ ಹೋಗಿಯಾಯ್ತು.ಎಲ್ಲರ ತಿಂಡಿ ಅಲ್ಲೇ ಆಗುತ್ತೆ. ನೀವು ಇಲ್ಲೇ ತಿಂಡಿ ಮಾಡಿಬಿಡಿ. ಒಳ್ಳೆ ಹೋಟ್ಲು ನೋಡಿದೀನಿ,ತರಸ್ತೀನಿ’.

‘ಮತ್ತೆ ಪ್ರೊಡ್ಯೂಸರು ತಿಂಡಿ ತಿನ್ನಲ್ವಾ?’

ಈಗ ಹೊಗೆರಾಮ ಅತ್ತಿತ್ತ ನೋಡಿ ಮೆಲ್ಲಗೆ ಹೇಳಿದ.

‘ಸಾರ್… ನಿಮ್ಮತ್ರ ಅಂತ ಹೇಳ್ತಿದೀನಿ. ಆ ಬಾಂಬೆ ಹುಡುಗಿ ಇವರನ್ನ ಸುಮ್ನೆ ಬಿಡೋಲ್ಲ ಸಾರ್. ಪೂರ್ತಿ ಹೊಗೆ ಹಾಕ್ಸೆ ಹೋಗ್ತಾಳೆ. ಈಗ್ ನೋಡಿ ಜತೆಗೆ ಅಂತ ತಾಯಿನ್ ಕರ್ಕೊಂಡು ಬಂದಿದ್ದಾಳೆ. ಆ ತಾಯಿನೋ ಕೇಳ್ಬೇಡಿ. ನಿನ್ನೆ ರಾತ್ರಿ ಮೂರು ಬಾಟ್ಲು ಬೀರು ಒಬ್ಬಳೇ ಕುಡಿದಿದ್ದಾಳೆ ಸಾರ್. ಅದರ್ ಮೇಲೆ ವಿಸ್ಕೀನೂ ಬೇಕು ಅಂತಿದ್ದಳಂತೆ. ಹೋಟ್ಲಿನವ್ರು ಕೊಟ್ಟಿಲ್ಲ ಅಷ್ಟೇ. ಪ್ರೊಡ್ಯೂಸರು ರಾತ್ರಿಯೆಲ್ಲ ಅಲ್ಲೇ ಇದ್ರಂತೆ…’

ಅದನ್ನು ಕೇಳಿದ್ದೆ ತಡ. ರಾಣಾರ ಮೈ ಆ ಬೆಳಗಿನಲ್ಲೇ ಉರಿದುಹೋಯ್ತು.’ ಹೌದಾ? ಅದಕ್ಕೇ ನಾನು ಹೇಳಿರೋದು. ಈ ಪ್ರೊಡ್ಯೂಸರಿಗೆ ಯಾಕೆ ಅರ್ಥ ಆಗ್ತಿಲ್ಲವೋ. ಕನ್ನಡದ ಹುಡುಗಿಯಾಗಿದ್ರೆ ಹೆದರಿಕೊಂಡು ತನ್ನ ಪಾಡಿಗೆ ತಾನೀರೊಳು. ಈಗ ನೋಡು ಈ ಕೋಟಿ ರೂಪಾಯಿ ಆರ್ಟಿಸ್ಟು ಇನ್ನೂ ಏನೇನು ಅವಾಂತರ ಮಾಡ್ತಳೋ’.

ರಾಣಾ ಚಿಂತಿತರಾದರು.ಅದನ್ನು ಗಮನಿಸಿದ ಹೊಗೆರಾಮ ಸಮಾಧಾನಿಸುವ ಹಾಗೆ-

‘ಸಾರ್… ಇವರನ್ನ ಬಿಟ್ಟುಬಿಡಿ. ನೀವು ಇನ್ನೊಂದು ಕ್ಯಾರೆಕ್ಟ್ ತಂದು ಅದನ್ನು ಕನ್ನಡ ಹುಡುಗಿಗೆ ಕೊಡಿ.ಬ್ಯಾಲನ್ಸ್ ಆಗುತ್ತೆ. ಇಲ್ಲದಿದ್ರೆ ಸಿನಿಮಾ ಕೈಕೊಟ್ರೆ ಎಲ್ರುಗೂ ಕೆಟ್ಟ ಹೆಸರು ಸಾರ್. ನಾಳೆ ಗಾಂಧಿನಗರದ ಮಂದಿ ಕ್ಯಾಕರಿಸಿ ಉಗೀತಾರೆ’.

ರಾಣಾ ಮಾತಾಡಲಿಲ್ಲ. ಮೌನಕ್ಕೆ ಶರಣಾದರು. ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ತಿಳಿಯುತ್ತೆ. ಆದ್ರೆ ದುಡ್ಡು ಹಾಕೋ ನಿರ್ಮಾಪಕನಿಗೆ ತಿಳಿಯುತ್ತಿಲ್ಲವಲ್ಲ ಎಂದು ಸಂಕಟಪಟ್ಟರು.

‘ಸರಿ ಬಿಡು..ಪಾಟೀಲರು ಬಂದ್ರೆ ಒಟ್ಟಿಗೆ ತಿಂಡಿ ತರಿಸು. ಅವರ ಜತೇನೇ ತಿಂಡಿ ಮಾಡ್ತೀನಿ. ಲೊಕೇಶನ್ ಗೆ ಹೊತ್ತಾಗ್ತದೆ.’

ಫೋಟೋ ಕೃಪೆ : Pinterest

ಹೊಗೆರಾಮ ನಕ್ಕ.

ಸಾರ್, ಪ್ರೊಡ್ಯುಸರ್ ಬರೋಲ್ಲ. ಹಿರೋಯಿನ್ನಿಗೆ ಬೇರೆ ಕಡೆಯ ತಿಂಡಿ ಬೇಕಂತೆ. ಪ್ರೊಡ್ಯೂಸರ್ ಆಕೆಯೊಬ್ಬಳನ್ನೇ ತಮ್ಮ ಕಾರಿನಲ್ಲಿ ಎತ್ತಾಕೊಂಡು ಹೋಗಿದ್ದಾರೆ. ಅವಳ ತಾಯಿ ರೋಶನಿ ಚಾವ್ಲಾ ನಿಮ್ಮ ಜತೆ ಕಾರಿನಲ್ಲಿ ಬತ್ತಾಳಂತೆ ಲೊಕೇಶನ್ ಗೆ ಪ್ರೊಡ್ಯೂಸರೇ ಹೇಳಿದ್ರು.
ರಾಣಾರಿಗೆ ಏನು ಹೇಳಲೂ ತಿಳಿಯಲಿಲ್ಲ. ಯಾಕೋ ಇದು ಅತಿಯಾಯಿತು ಅನ್ನಿಸಿತು. ಶೂಟಿಂಗ್ ಶುರುವಾಗುವ ದಿನ ಯಾವುದೇ ಕಿರಿಕ್ ಬೇಡ ಎಂದು ಸಹಿಸಿಕೊಂಡರು.

‘ನಾನು ಎಲ್ರ ಹಾಗೆ ನಿನಗೆ ಹೊಗೆರಾಮ ಅನ್ನೋದಿಲ್ಲ. ರಘುರಾಮ ಅಂತಾನೇ ಕರೀತೀನಿ. ಒಂದ್ ಕೆಲಸ ಮಾಡು. ಈ ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಇರ್ತಾಳೆ. ಅದೂ ಕನ್ನಡದ ಹುಡುಗಿ. ಹೊಸ ಹುಡುಗೀನೇ ಬೇಕು. ಟಾಲೆಂಟೆಡ್ ಲೋಕಲ್ ಹುಡುಗಿಯಾದ್ರೂ ಪರವಾಗಿಲ್ಲ. ಬೇಗ ಹುಡ್ಕು.’

‘ಸಾರ್ ಹುಡುಕಿದೀನಿ. ಕೂರ್ಗಿ ಹುಡುಗಿ. ನಾಟ್ಯ- ಪಾಟ್ಯಾ ಮಾಡಿ ಗೊತ್ತಂತೆ. ನೋಡೋಕು ಚನ್ನಾಗವಳೇ.ನೀನು ಹೂ೦ ಅಂದ್ರೆ ಇವತ್ತೇ ಕರೆಸ್ತೀನಿ.’

‘ಹೌದಾ? ಹಾಗ್ರಿದ್ರೆ ಲಂಚ್ ಅವರ ನಲ್ಲಿ ಬರೋಕ್ ಹೇಳು ಹಾ೦ … ಜ್ಯೂನಿಯರ್ ಅರ್ಟಿಸ್ಟೆಲ್ಲಾ ಮೇಕಪ್ ಮಾಡಿಕೊಂಡಿರಾ?

‘ಮಾಡ್ಕೊಂಡವ್ರೆ ಸಾರ್. ನಾನ್ ಬಿಡ್ತೀನಾ? ಹೊಗೆ ಹಾಕ್ಲಿ ಬಿಡ್ತೀನಿ ಅಷ್ಟೇಯಾ. ಅವ್ರೇನು ಬಿಡಿ ಸಾರ್. ಹೆದರ್ಕೊಂಡು ಕೂತಿರ್ತವೆ. ಲೋಕೇಶ್ ನ್ ಗೆ ನೀವು ಬಂದ್ರೆ ಸಾಕು. ಶೂಟಿಂಗ್ ಶುರುವಾಗುತ್ತೆ.’

‘ಹ್ಯಾಗಯ್ಯ ಶುರುವಾಗುತ್ತೆ? ಹೀರೋಯಿನ್ ಪ್ರೊಡ್ಯೂಸರ್ ಜತೆ ಮೇಯೋಕೆ ಹೋಗಿಲ್ವ? ಅವ್ಳು ಬಂದ್ಮೇಲೆ ತಾನೆ ಮುಂದಿನ ಕೆಲ್ಸ?’

‘ಅದ್ಸರಿ ಸಾರ್. ಬೇರೆಯವರಾದ್ರೆ ನನ್ನ ಕಂಡ್ರೆ ಹೆದರ್ತಾರೆ. ಹೊಗೆ ಮಶೀನು ಅಂದ್ಕೊಂಡು ಅಡ್ಡ ಮಲಗಿಬಿಡ್ತಾರೆ.ಆದ್ರೆ ಈ ಹೀರೋಯಿನ್ ಗೆ ಹೇಳೋಕ್ ಆಗುತ್ತಾ? ಬಾಂಡ್ಲಿಲೀ ಹಾಕಿ ಹುರಿದುಬಿಡ್ಲಾಳೆ.ಭಾರೀ ಡೇಂಜರು ಸಾರ್ ಈ ಪರದೇಶಿ ಹೀರೋಯಿನ್ ಸಾವಾಸ.’

‘ಆಯ್ತಪ್ಪ ಬೇಗ ತಿಂಡಿ ಕಲ್ಸು. ನಾನೂ ರೆಡಿಯಾಗಬೇಕು. ಹಾಗೇ ಹೀರೋ ಶಯನಕುಮಾರ್ ರೆಡಿಯಾಗಿದ್ರೆ ಹೊರಡೋಕ್ ಹೇಳು. ಹೀರೋಯಿನ್ ಬರೊಕ್ಮುಂಚೆ ಅವ್ನ ಮೇಲೆ ಒಂದಷ್ಟು ಶಾಟ್ಸ್ ತಕ್ಕೊಳ್ಳೋಣ’.

ಹೊಗೆರಾಮ ತಲೆಯಾಡಿಸಿದವನೇ ಅಲ್ಲಿಂದ ಹೊರಟುಬಿಟ್ಟ.

ರಾಣಾ ಬಾಲ್ಕನಿಯಿಂದ ತಮ್ಮ ಕೋಣೆಗೆ ಹಿಂದಿರುಗಿದರು.

ತಿಂಡಿ ಬಂತು. ಪ್ರೊಡಕ್ಷನ್ ಹುಡುಗ ತಟ್ಟೆ ಸಮೇತ ಒಳಗೆ ಬರುತ್ತಲೂ ಅವರ ಹಿಂದೆ ಬಂದವರನ್ನು ನೋಡಿ ರಾಣಾರಿಗೆ ಅಚ್ಚರಿಯಾಯಿತು.

ಅರೇ. ಹೀರೋಯಿನ್ ಅನುಷ್ ಚಾವ್ಲಾಳ ಅಮ್ಮ ರೋಶನಿ ಚಾವ್ಲಾ.ರಾಣಾ ಆಕೆಯನ್ನು ನಖ- ಶಿಖಾಂತ ನೋಡಿದರು.

ಫೋಟೋ ಕೃಪೆ : Etsy

ವಿಚಿತ್ರ ಡ್ರೆಸ್ಸು. ಮೊಣಕಾಲ ಮೇಲೆ ಕಂದು ಬಣ್ಣದ ಮಿಡಿ. ಅದರ ಮೇಲೆ ಸ್ಲೀವ್ ಲೆಸ್ ಟಾಪ್, ವಿಚಿತ್ರವಾಗಿ ಕಟ್ಟಿದ್ದ ತಲೆಕೂದಲು. ತೀಡಿದ ಹುಬ್ಬು. ನೀಲಿ ಕಣ್ಣುಗಳು. ದಟ್ಟವಾಗಿ ಲೇಪಿಸಿದ ಕೆಂಪು ಲಿಪ್ ಸ್ಟಿಕ್ಕು. ಬಿಳೀ ಕಾಲಿಗೆ ಒಪ್ಪುವ ಹೈಹೀಲ್ಡ್.ಅರ್ಧ ತೆರೆದ ಎದೆ. ನೋಡಿದರೆ ನಲವತ್ತೈದು ವಯಸ್ಸಿನ ಹೆಂಗಸು ಅನ್ನುವಂತಿರಲಿಲ್ಲ. ಇವಳೇ ನಾಯಕಿ ಅನ್ನುವ ಭ್ರಮೆ ಹುಟ್ಟಿಸುವ ಹಾಗಿದ್ದಳು ಅಮ್ಮ ರೋಶನಿ ಚಾವ್ಲಾ. ಗರ ಬಡಿದವರಂತೆ ಕೂತರು ರಾಣಾ.

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW