ಪಾರಂಪಾರಿಕ ಸಂಭ್ರಮದ ಜಾತ್ರೆ: ಕಡಲೆಕಾಯಿ ಪರಿಷೆ

ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ರಸ್ತೆ ರಸ್ತೆಗಳಲ್ಲಿ ಜಾತ್ರೆ ಸಂಭ್ರಮ ಕಟ್ಟುತ್ತದೆ, ಇದಕ್ಕೆ ಐತಿಹಾಸಿಕ ಕತೆ ಇದೆ,ಕಡಲೆಕಾಯಿ ಪರಿಷೆ ಕುರಿತು ಸೌಮ್ಯ ಸನತ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಚುಮು-ಚುಮು ಚಳಿಯಲ್ಲಿ ಪರಿವಾರದೊಂದಿಗೆ, ಗೆಳೆಯರ ಸಹಿತ, ಬಸವನಗುಡಿಯಲ್ಲಿ ಕಳ್ಳೆಕಾಯ್ … ಕಳ್ಳೆಕಾಯ್…ಗರುಮ ಗರಂ ಕಳ್ಳೇಕಾಯಿ…ತಾಜಾ ತಾಜಾ ಕಳ್ಳೆಕಾಯ್..ಬೆಂಗಳೂರು ಕರಗದ.. ಬಸವನ ಪರಿಷೇಯ.. ಬಡವರ ಬಾದಾಮಿ ಕಳ್ಳೇಕಾಯ್… ಎಂದು ಹಾಡು ಗುನುಗುತ್ತಾ, ಕೈಯಲ್ಲಿ ಕಡಲೆಕಾಯಿ ಪೊಟ್ಟಣ್ಣ ಹಿಡಿದು ತಿನ್ನುತ್ತಾ ಅಲೆಯುವುದೇ ಒಂದು ರೀತಿಯ ಮನೋಲ್ಲಾಸ ಸಂಭ್ರಮ ಸಂತೋಷ. ಅಲ್ವಾ …!!! ಬಡವರ ಬಾದಾಮಿಯೆಂದೇ ಹೆಸರಾದ ಹಸಿ ಕಡಲೆಕಾಯಿ, ಹುರಿದದ್ದು, ಬೇಯಿಸಿದ ಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಬೇಕಾದ ಕಡ್ಲೆಕಾಯಿ, ಇದೆಲ್ಲಾ ಸಿಗುವುದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ.

ಕಡಲೆಕಾಯಿ ಪರಿಷೆ :

ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ರಸ್ತೆ ರಸ್ತೆಗಳಲ್ಲಿ ಜಾತ್ರೆ ಸಂಭ್ರಮ ಕಳೆಕಟ್ಟುತ್ತದೆ. ಅಕ್ಕ ಪಕ್ಕದ ಜಿಲ್ಲೆಗಳಿಂದ ಕಡೆಕಾಯಿ ಪರಿಷೆಗೆ  ಆಗಮಿಸುತ್ತದೆ.

ಇದು ಬಸವನಗುಡಿ ಬೆಂಗಳೂರಿನಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಮೇಳ. ಎರಡು ದಿನಗಳ ಜಾತ್ರೆಯಲ್ಲಿ ವಾರದ ಮುಂಚೆಯಿಂದಲೂ ರಾಜ್ಯದ ಇತರ ಭಾಗಗಳಿಂದ ರೈತರು ಬಸವಣ್ಣನಿಗೆ ಅರ್ಪಿಸಲು ತಮ್ಮ ಮೊದಲ ಬೆಳೆಯಾದ ಶೇಂಗಾವನ್ನು ತರುತ್ತಾರೆ. ಕಡಲೆಕಾಯಿ ಪರಿಷೆಯು ಐತಿಹಾಸಿಕ ಹಬ್ಬವಾಗಿದ್ದು, ಇದನ್ನು 1537 ರಿಂದ ಇಲ್ಲಿಯವರೆಗೆ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್​ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವ ಕಾರಣ ನಂದಿಗೆ ಈ ದಿನಗಳು ಪ್ರಿಯ. ಹಾಗಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ.

ಫೋಟೋ ಕೃಪೆ :google

ಐತಿಹ್ಯ: ಬೆಂಗಳೂರು ಬೆಳೆದು ಮಹಾ ನಗರವಾಗುವ ಮೊದಲು, ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಹಾಗೂ ಕಡಲೇ ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಸಾಕಷ್ಟು ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.

ಈ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿ ಬಂದು ಗುಡ್ಡ ಏರಿ ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಈಶ್ವರನೇ ತಮ್ಮ ರಕ್ಷಣೆಗೆ ತನ್ನ ವಾಹನವನ್ನು ಕಳಿಸಿದ್ದಾನೆಂದು ತಿಳಿದು ಕೈಲಾಸದಿಂದ ಧರೆಗಿಳಿದು ಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಬಸವನು ತನಗೆ ಪ್ರಿಯವಾದ ಕಡಲೆಕಾಯಿಯನ್ನು ತಿನ್ನುತ್ತಿದ್ದನೆಂದು ತಿಳಿದು, ಅದನ್ನು ತಪ್ಪಿಸಿದಕ್ಕಾಗಿ ಪಶ್ಚಾತ್ತಾಪ ಪಟ್ಟು ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿ ಅಲ್ಲಿ ಅವನಿಗೆ ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿ ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿ ಪೂಜಿಸಲು ಪ್ರಾರಂಭಿಸಿದರು.ನಂತರ ಬೆಂಗಳೂರಿನ ನಿರ್ಮಾತವಾದ ಕೆಂಪೇಗೌಡರು ದಕ್ಷಿಣ ಶೈಲಿಯಲ್ಲಿರುವ ಈಗಿನ ದೇವಸ್ಥಾನ ಕಟ್ಟಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಇಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಂದು ಅಲ್ಲಿಗೆ ಬರುವ ಭಕ್ತರು ಸಹ ಕಡಲೆಕಾಯಿಯನ್ನು ಕೊಂಡು ಬಸವಣ್ಣನಿಗೆ ಅರ್ಪಿಸುತ್ತಾರೆ. ಆಗ ಕಲ್ಲಾದ ಬಸವ ಬೆಳೆಯುತ್ತಲೇ ಹೋದ. ಇನ್ನು ಬೆಳೆದರೆ ಪೂಜಿಸಲು ಆಗುವುದಿಲ್ಲವೆಂದು ಆತನ ತಲೆ ಮೇಲೆ ದೊಡ್ಡ ಮೊಳೆ ಹೊಡೆದಿದ್ದಾರೆ. ಅಂದಿನಿಂದ ಅವನ ಬೆಳವಣಿಗೆ ನಿಂತಿದೆ. ಆ ಮೊಳೆ ತ್ರಿಶೂಲದ ರೂಪದಲ್ಲಿ ಇಂದಿಗೂ ಕಾಣುತ್ತದೆ.

ಫೋಟೋ ಕೃಪೆ :google

ದೇವಾಲಯದ ವಾಸ್ತು ಶಿಲ್ಪ : ದೇವಾಲಯದ ಮುಂದೆ ಸುಂದರವಾದ ಧ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರದಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಅಂದವಾದ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿ ಎಂದು ಹೇಳುತ್ತಾರೆ.

ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದು ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಿಷೆ ಎಂದೇ ಖ್ಯಾತವಾಗಿದೆ. ಈ ಜಾತ್ರೆಗೆ ಬಸವನ ಭಕ್ತರು ಬಂದು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. ಭಕ್ತರು ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ತಾಳಿ ಆ ಸಿಪ್ಪೆಯನ್ನು ತಿನ್ನುತ್ತಾನೆ ಎಂದು ಇಂದಿಗೂ ಜನ ನಂಬಿದ್ದಾರೆ.

ಫೋಟೋ ಕೃಪೆ :google

ಬೆಂಗಳೂರಿನ ಸುತ್ತಮುತ್ತಲ ಕಡಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ಬೆಳೆದ ಶ್ರಮಕ್ಕೆ ಪ್ರತಿಫಲ ಪಡೆಯಲು ರಸ್ತೆ ಅಂಚಲ್ಲಿ ಕಡಲೆಕಾಯಿ ರಾಶಿ ಸುರಿದು ಗ್ರಾಹಕರ ನೀರಿಕ್ಷೆಯಲ್ಲಿರುತ್ತಾರೆ. ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ. ಬೆಳೆಗಾರರ ಹಾಗೂ ಗ್ರಾಹಕನನ್ನು ಒಂದು ಗೂಡಿಸುವುದು ಈ ಜಾತ್ರೆಯ ವಿಶೇಷ.

ರಾಮಕೃಷ್ಣ ಆಶ್ರಮದಿಂದ ಆರಂಭವಾಗಿ ಕಾಮತ್ ಬ್ಯೂಗಲ್‌ರಾಕ್ ಹೋಟೆಲ್ ತನಕ ರಸ್ತೆ ಅಂಚಲ್ಲಿ ಹರಡಿದ ರಾಶಿರಾಶಿ ಹಸಿದು, ಹುರದಿದ್ದು, ಎರಡು ಬೀಜ, ಮೂರು ಬೀಜಗಳ ಕಡಲೆಕಾಯಿ ರುಚಿ ಸವಿ ಸವಿಯಲು ಕಾಣ ಸಿಗುತ್ತವೆ. ಕೇವಲ ಕಡಲೆ ಕಾಯಿ ಪರಿಷೆ ಮಾತ್ರವಲ್ಲದೇ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಿಕೆಗಳು ಇರುತ್ತವೆ. ಜಾತ್ರೆ ಎಂದರೆ ಕೇಳಬೇಕೇ? ಕೆಲವರು ಭಕ್ತಿ-ಭಾವದಲ್ಲಿ ಮಿಂದೆದ್ದರೆ, ಹಲವರು ಅಲ್ಲಿನ ಆಟಿಕೆಗಳಲ್ಲಿ ಕೂತು ಆಡಿ ಸಂಭ್ರಮಿಸುತ್ತಾರೆ. ಮತ್ತೆ ಕೆಲವರು ಬಳೆ, ಓಲೆ ಸೇರಿದಂತೆ ಜಾತ್ರೆಯಲ್ಲಿ ಸಿಗುವ ತರಹೇವಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕಡ್ಲೆಪುರಿ, ಬೆಂಡು-ಬತ್ತಾಸು, ಕಲ್ಯಾಣ ಸೇವೆಯೂ ಇರುತ್ತದೆ.

ಕೊನೆಯದಾಗಿ…ನೀವು ಬಸವನಗುಡಿಯಲ್ಲಿರುವಾಗ, ವಿದ್ಯಾರ್ಥಿ ಭವನ, ಬ್ರಾಹ್ಮಣರ ಕಾಫಿ ಬಾರ್, ರೋಟಿ ಘರ್ ಮತ್ತು ಕಾಮತ್ ಬ್ಯೂಗಲ್ ರಾಕ್‌ನಂತಹ ಪ್ರಸಿದ್ಧ ಆಹಾರ ಮಳಿಗೆಗಳನ್ನು ಹಿಡಿಯಲು ಮರೆಯದಿರಿ. ಜಾತ್ರೆಯ ಸ್ಥಳದಲ್ಲಿಯೇ ಇರುವ ಬಸವನ ಗುಡಿ, ದೊಡ್ಡ ಗಣಪತಿ, ದೊಡ್ಡ ಬಸವ ಮತ್ತು ಗೋವರ್ಧನ ದೇವಸ್ಥಾನ (ಪುತ್ತಿಗೆ ಮಠ) ಮುಂತಾದ ದೇವಸ್ಥಾನಗಳನ್ನು ನೀವು ನೋಡಲು ಪ್ರಯತ್ನಿಸಬಹುದು.

ಪ್ರತೀ ವರ್ಷದಂತೆ ಬೆಂಗಳೂರಿನ ಸಾಂಸ್ಕೃತಿಕ ಹಿರಿಮೆಯ ಸಂಕೇತವಾಗಿರುವ ಬಸವನಗುಡಿ ಕಡಲೆಕಾಯಿಗೆ ಪರಿಷೆಗೆ ಬೆಂಗಳೂರು ಮಾತ್ರವಲ್ಲದೇ ನಗರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಂದ ಬರುವ ಭಕ್ತರು ಬಂದು ಬಸವಣ್ಣನ ಕೃಪೆಗೆ ಪಾತ್ರವಾಗುತ್ತಾರೆ .


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW