ವನ್ಯಜೀವಿ ಛಾಯಾಗ್ರಹಣ ಎಂಬುದು ಸಾಹಸಮಯ. ಕ್ಯಾಮೆರಾ ಕೈಯಲ್ಲಿದ್ದಾಕ್ಷಣ ಕಾಡಿಗೆ ಹೊರಟು ಬಿಡುವುದು ಸರಿಯಲ್ಲ. ನಾವು ಭೇಟಿ ನೀಡುತ್ತಿರುವುದು zoo ಗಲ್ಲ, ನೈಜ್ಯ ಪ್ರಾಣಿಗಳಿರುವ ಸ್ಥಳ.ಹಾಗಾಗಿ ಕಾಡುಗಳ ಕುರಿತು ಮೊದಲೆ ತಿಳಿದುಕೊಂಡಿದ್ದರೇ ಒಳಿತು – ಮಾಲತೇಶ ಅಂಗೂರ, ಮುಂದೆ ಓದಿ…
ಇತ್ತೀಚಿನದಿನಗಳಲ್ಲಿ ಕೆಲಸದ ಒತ್ತಡ ಹಾಗೂ ಕೆಲವು ಕಾರಣಗಳಿಗೆ ಅತಿಯಾದ ಆಲೋಚನೆ ಮಾಡಿದ ಕಾರಣಕ್ಕೆ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರಾಗಿತ್ತು. ವೈದ್ಯರಬಳಿ ಹೋದ ಸಂದರ್ಭದಲ್ಲಿ ಅವರ ತಿಳಿಸಿದ್ದು, “ಬಿಪಿ ಹೆಚ್ಚಾಗಿದೆ, ಹೆಚ್ಚಿಗೆ ಆಲೋಚಿಸಬೇಡಿ. ಸಕ್ಕರೆಮಟ್ಟ ಹೆಚ್ಚಾಗಿದೆ”. “ಮಾತ್ರೆಗಳಲ್ಲಿ ಬದಲಾವಣೆ ಮಾಡುವೆ, ಒಂದರ ಬದಲು ಎರಡುಮಾತ್ರೆಗಳನ್ನು ತಗೆದುಕೊಳ್ಳಿ” ಎಂದು ತರೇವಾರಿ ಮಾತ್ರೆಗಳನ್ನು ಬರೆದರು”. “ಈ ಒತ್ತಡದ ಬದುಕಿಗೆ ಕೇವಲ ಮಾತ್ರೆಗಳಿಂದ ಮುಕ್ತಿ ಸಾಧ್ಯವೆ? ಎನ್ನುವ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಏಕಿಲ್ಲ? ಖಂಡಿತವಾಗಿಯು ಇದೆ. ಅದು “ನಾವು ಅನಸರಿಸುವ ಜೀವನ ಶೈಲಿಯಲ್ಲಿ. ವೈದ್ಯರು ನೀಡುವ ಚಿಕಿತ್ಸೆಯ ಜೊತೆಗೆ ಆರೋಗ್ಯಕರ ಹವ್ಯಾಸಗಳನ್ನು ನಾವು ಅಳವಡಿಸಿಕೊಂಡರೆ ಖಂಡಿತವಾಗಿ ಸ್ವಲ್ಪಮಟ್ಟಿಗಾದರೂ ಒತ್ತಡ ಮುಕ್ತರಾಗಿ ನಾವು ಇರಬಹುದಾಗಿದೆ”.
“ಕೆಲವರು ಒತ್ತಡಗಳಿಂದ ಹೊರಬರಲು ಜ್ಞಾನ, ಪ್ರಾರ್ಥನೆ, ಯೋಗದ ಮೊರೆ ಹೋಗುತ್ತಾರೆ.” “ಇನ್ನು ಕೆಲವರು ವಾಯುವಿಹಾರ, ಟಿವಿ ವೀಕ್ಷಣೆ, ಸಂಗೀತ ಆಲಿಕೆ, ದೇವಸ್ಥಾನಗಳಿಗೆ ಭೇಟಿ ನೀಡುವುದು ಉಂಟು. ಇನ್ನು ಕೆಲವರು ಅದರಲ್ಲಿ ನನ್ನಂತ ಕೆಲವರು ಕಾಡು ಮೇಡುಗಳಲ್ಲಿ ಅಲೆಯುವುದು, ವನ್ಯಜೀವಿಗಳನ್ನು ವೀಕ್ಷಿಸುವುದು, ಅವುಗಳ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು, ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾಡು ಮೇಡುಗಳಲ್ಲಿ ಅಲೆದಾಡುತ್ತ ಪ್ರಕೃತಿಯ ಸಹಜತೆಯಲ್ಲಿ ತನ್ಮಯವಾಗುವುದು ಉಂಟು”!.

“ಕಳೆದ ಹತ್ತಾರು ವರ್ಷಗಳಿಂದ ಬಿಡುವಿನ ಸಮಯದಲ್ಲಿ ಕಾಡು ಮೇಡು ಅಲೆದಾಡುತ್ತಾ ಬಂದಿರುವ ನನಗೆ ವನ್ಯಜೀವಿಗಳ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಬಲು ಇಷ್ಟವಾದ ಕೆಲಸವಾಗಿದೆ”. “ಕಳೆದವಾರ ಅಂದರೆ ಜೂನ್೯ ಮತ್ತು ೧೦ರಂದು ಆಸ್ಪತ್ರೆಯ ನೆಪಮಾಡಿಕೊಂಡು ಎರಡದಿನ ಮೈಸೂರಿನಿಂದ ೯೦ಕಿ.ಮೀ ದೂರ ಇರುವ ಹುಣಸೂರಿನಂದ ೪೭ಕಿ.ಮೀ. ದೂರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಓಡಾಡಿ, ಕೆಲವು ವನ್ಯಜೀವಿಗಳ ಛಾಯಾಚಿತ್ರಗಳನ್ನು ಕ್ಯಾಮೇರಾದಲ್ಲಿ ಸೆರಹಿಡಿದುಕೊಂಡು ಬಂದಿರುವೆ”
“ನಾನು ಚಿತ್ರಿಸಿದ ಚಿತ್ರಗಳನ್ನು ಗಮನಿಸಿದಾಗ ಅಂತ ತೃಪ್ತಿ ತರಲಿಲ್ಲ! ಆದರೂ ಪರವಾಗಿಲ್ಲ ಎಂದು ನನ್ನ ಬೆನ್ನು ನಾನೆ ಚಪ್ಪರಿಸಿಕೊಳ್ಳುವ ಮಟ್ಟಿಗೆ ಚಿತ್ರಗಳು ಮೂಡಿಬಂದಿವೆ”. (ಈ ಚಿತ್ರಗಳನ್ನು ಗಮನಿಸಿ ನಿಮ್ಮ ಅಭಿಪ್ರಾಯ ತಿಳಿಸಿರಿ) ಈ ರೀತಿಯ ಛಾಯಾಗ್ರಹಣವನ್ನು ವೈಲ್ಡ್ ಲೈಫ್ ಫೋಟೋಗ್ರಾಫಿ ಅಥವಾ ವನ್ಯಜೀವಿ ಛಾಯಾಗ್ರಹಣ ಎಂದು ಕರೆಯಲಾಗುತ್ತದೆ.

ಹಲವಾರು ವರ್ಷಗಳಲ್ಲಿ ಸಾಕಷ್ಟು ಕಾಡುಗಳಿಗೆ ಭೇಟಿ ನೀಡಿದ್ದೆನಾದರೂ ನಾಗರಹೊಳೆಕಾಡಿಗೆ ನಾನು ಭೇಟಿ ನೀಡಿರಲಿಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ನ್ಯಾಷನಲ್
ಪಾರ್ಕ್ ಎಂದು ಕರೆಯಲಾಗುತ್ತದೆ), ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಮತ್ತು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿತವಾಗಿದೆ.ಈ ಉದ್ಯಾನವನವನ್ನು೧೯೯೯ ರಲ್ಲಿ ಪ್ರಾಜೆಕ್ಟ್ ಟೈಗರ್ ಹುಲಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಯಿತು.
“ಈ ಉದ್ಯಾನವನ ಬ್ರಹ್ಮಗಿರಿ ಬೆಟ್ಟಗಳ ಮತ್ತು ದಕ್ಷಿಣ ಕೇರಳ ರಾಜ್ಯದ ಕೆಳಭಾಗಕ್ಕೆ ಹರಡುವ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇದೆ”. ಈ ಉದ್ಯಾನವನ ಬಂಡೀಪುರ ನ್ಯಾಷನಲ್ ಪಾರ್ಕ್‌ನ ವಾಯುವ್ಯ ದಿಕ್ಕಿನಲ್ಲಿ ಇದೆ. ಕಬಿನಿ ಜಲಾಶಯ ಎರಡು ಉದ್ಯಾನಗಳನ್ನು ಪ್ರತ್ಯೇಕಿಸುತ್ತದೆ. ಪಕ್ಕದ ಬಂಡೀಪುರ ರಾಷ್ಟ್ರೀಯ ಉದ್ಯಾನ, ಮುದುಮಲೈ ರಾಷ್ಟ್ರೀಯ ಉದ್ಯಾನ ಮತ್ತು ವಯನಾಡ್ ವನ್ಯಜೀವಿ ಅಭಯಾರಣ್ಯ ಇದು ಒಟ್ಟಿಗೆ ದಕ್ಷಿಣ ಭಾರತದ ರಕ್ಷಿತ ಪ್ರದೇಶವಾಗಿದೆ.

ಈಕಾಡಿನಲ್ಲಿ ನಾಗರಹಾವಿನ ರೀತಿಯಲ್ಲಿ ಹರಿದ ನಾಗರಹೊಳೆಯ ಕಾರಣಕ್ಕೆ “ಈ ಉದ್ಯಾನವನಕ್ಕೆ ನಾಗರಹೊಳೆ ಎಂದು ಉಲ್ಲೇಖಿಸಲಾಗಿದೆ”. “ಈ ಪಾರ್ಕ್ ಒಡೆಯರ್ ರಾಜವಂಶದ ರಾಜರು, ಮೈಸೂರು ಕಿಂಗ್ಡಮ್ ಮಾಜಿ ಆಡಳಿತಗಾರರ ವಿಶೇಷ ಬೇಟೆಯ ಮೀಸಲು ಜಾಗ ಆಗಿತ್ತು”. ಇದನ್ನು ವನ್ಯಜೀವಿಗಳ ಅಭಯಾರಣ್ಯ ಎಂದು ೧೯೫೫ ರಲ್ಲಿ ಸ್ಥಾಪಿಸಲಾಯಿತು.
“ನಾಗರಹೊಳೆ ಶ್ರೀಮಂತ ಕಾಡುಪ್ರದೇಶ, ಸಣ್ಣ ಹೊಳೆಗಳು, ಬೆಟ್ಟಗಳು, ಕಣಿವೆಗಳು ಮತ್ತು ಜಲಪಾತಗಳನ್ನು ಹೊಂದಿದೆ. ಅನೇಕ ಹುಲಿಗಳು, (ನನಗೆ ಹುಲಿ ದರ್ಶನವಾಗಲಿಲ್ಲ) ಕಾಡೆಮ್ಮೆಗಳು ಮತ್ತು ಆನೆಗಳು, ಕರಡಿ, ಚಿರತೆ, ತರೇವಾಗಿ ಜಿಂಕೆಗಳು, ಸಾಂಬಾರಜಿಂಕೆಗಳು ಕಂಡು ಬಂದವು. (ಹುಲಿಯ ಪ್ರೀಯವಾದ ಆಹಾರ) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ. ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ, ಗುಡ್ಡ, ಕಣಿವೆಗಳಿಂದ ಮತ್ತು ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ”.
“ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ ಮತ್ತು ರಾಷ್ಟ್ರಪಕ್ಷಿ ನವಿಲುಗಳು ಇಲ್ಲಿ ಸುರಕ್ಷಿತವಾಗಿವೆ”. “೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು ಜಿಂಕೆ, ಕಾಡು ಕುರಿ, ಕರಡಿ, ಚಿರತೆ, ಆನೆ, ಕಾಡುಪಾಪ, ನೀರುನಾಯಿ, ಮೊಸಳೆ, ಹೆಬ್ಬಾವು, ಮರಕುಟುಕ, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, ಗಿಡುಗ, ಹದ್ದು, ಡೇಗೆ, ಪ್ಯಾಂಗೋಲಿನ್, ಹಾರುವ ಅಳಿಲುಗಳಿಗೆ ತಾಣವಾಗಿದೆ. ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ, ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ”.

ಕಬಿನಿ, ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆಗಳು ಇಲ್ಲಿಯ ಪ್ರಮುಖ ನದಿಗಳು. ’ನಾಗರ’ ಎಂದರೆ ಹಾವಿನ ರೀತಿಯಲ್ಲಿ ಹರಿಯುವ ನದಿ, ತೊರೆಗಳು ಇಲ್ಲಿ ಹರಿಯುವುದರಿಂದ ನಮ್ಮ ಜನಪದರು ಈ ಕಾಡುಗಳನ್ನು ’ನಾಗರಹೊಳೆ’ ಎಂದರು. ಈ ನದಿಗಳು ಹಲವಾರು ಸುಂದರ ಜಲಪಾತಗಳನ್ನೂ ಸೃಷ್ಟಿಸಿವೆ.
ಇಂತ “ನಾಗರಹೊಳೆಕಾಡಿನಲ್ಲಿ ವನ್ಯಜೀವಿ ಛಾಯಾಗ್ರಹಣನಿಜಕ್ಕೂ ಒಂದು ಸವಾಲಿನ ಕೆಲಸವಾಗಿದೆ. ಛಾಯಾಗ್ರಹಣ ಎನ್ನುವುದು ಒಂದು ಅದ್ಭುತವಾದ ಕಲೆಯಾಗಿದೆ. ತಾಂತ್ರಿಕವಾಗಿ ಬಳಸುವ ಕ್ಯಾಮೆರಾಗಳ ಕುರಿತು ಸ್ಪಷ್ಟ ಜ್ಞಾನ ಹೊಂದಿರಬೇಕಾಗಿರುವುದೂ ಅಲ್ಲದೆ ಪ್ರಕೃತಿಯ ಕುರಿತು ಗೌರವ, ಪ್ರೀತಿ ಆದರಗಳನ್ನೂ ಸಹ ಹೊಂದಿರಬೇಕು. ವನ್ಯಜೀವಿ ಛಾಯಾಗ್ರಾಹಕರಾಗಿ ಕೆಲವು ನೀತಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ”.
ಮುಖ್ಯವಾಗಿ ತಿಳಿದುಕೊಳ್ಳ ಬೇಕಾಗಿರುವ ಅಂಶವೆಂದರೆ, ಮನುಷ್ಯರಂತೆ ಪ್ರಾಣಿ ಪಕ್ಷಿಗಳೂ ಸಹ ಭಾವನಾ ಜೀವಿಗಳಾಗಿರುತ್ತವೆ. ಒಂದೊಮ್ಮೆ ಅವುಗಳಿಗೆ ಪ್ರತಿರೋಧ ಎದುರಾದಲ್ಲಿ ಅಥವಾ ಕಿರಿಕಿರಿ ಉಂಟಾದಲ್ಲಿ ಅವು ಕೆರಳಬಹುದು. ಇಲ್ಲವೆ ಭಯದಿಂದ ಓಡಬಹುದು, ಇಲ್ಲವೆ ಆಕ್ರಮಣವನ್ನೂ ಸಹ ಮಾಡಬಹುದು. ಆದ್ದರಿಂದ ಅವುಗಳಿಗೆ ತೊಂದರೆ ಕೊಡದ ರೀತಿಯಲ್ಲಿ ನಿಧಾನವಾಗಿ ನಾವು ನಮ್ಮ ಕಾರ್ಯದಲ್ಲಿ ಮಗ್ನರಾಗಬೇಕು. ಮೇಲಾಗಿ “ಕಾಡು ಪ್ರದೇಶ ಕಾಡು ಪ್ರಾಣಿಗಳದ್ದು, ಅಲ್ಲಿ ಅವು ಸರ್ವ ಸ್ವತಂತ್ರ, ಅವುಗಳ ಸ್ವಚ್ಛಂದ ಸ್ಥಳಕ್ಕೆ ನಾವು ಹೋಗಿದ್ದೇವೆ ಎನ್ನುವ ಅರಿವು ನಮಗಿರಬೇಕು”. ಹೀಗೆ “ಕಾಡಿನಲ್ಲಿ ನಾವಿದ್ದ ಚೀಪು ಸಾಗುತ್ತಿರಬೇಕಾದರೆ ಕರಡಿಯೊಂದು ನಾವು ಕಳಿತಿದ್ದ ಜೀಪನ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಅರಣ್ಯ ಇಲಾಖೆಯ ಚೀಪ ಚಾಲಕ ಚಾಣಾಕ್ಷತನದಿಂದ ಕರಡಿಯ ದಾಳಿಯಿಂದ ಕಾಪಾಡಿದ”.
“ವನ್ಯಜೀವಿ ಛಾಯಾಗ್ರಾಹಕರಲ್ಲಿ ತಾಳ್ಮೆ ಬಹಳ ಮುಖ್ಯ. ಪ್ರಾಣಿ ಪಕ್ಷಿಗಳು ಕಾಡುಗಳಲ್ಲಿ ತಮಗೆ ಬೇಕಾದ ಹಾಗೆ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತವೆ. ನಮಗೆ ಬೇಕಾದ ಕೋನಗಳಲ್ಲಿ ಅವುಗಳ ಛಾಯಾಚಿತ್ರಗಳನ್ನು ತಕ್ಷಣ ಸೆರೆ ಹಿಡಿಯುವುದು ಕಷ್ಟಕರ”. ಆದ್ದರಿಂದ ಸಾಕಷ್ಟು ತಾಳ್ಮೆಯಿಂದ ಇದ್ದು ಚಿತ್ರಗಳನ್ನು ಸೆರೆ ಹಿಡಿಯ ಬೇಕಾಗುತ್ತದೆ. “ನಾಗರಹೊಳೆ ಕಾಡಿನಲ್ಲಿ ನಾನು ಕಾಡೆಮ್ಮೆ, ಆನೆಗಳ ಹಾಗೂ ಕರಡಿ ಸೇರಿದಂತೆ ವಿವಿಧ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸುಮಾರು ೫೦೦ಮೀಟರ್ ದೂರದಲ್ಲಿದ್ದು ಸೆರೆಹಿಡಿದಿರುವೆ. ಕರಡಿ ಪ್ರಕರಣ ಬಿಟ್ಟರೆ ಎಲ್ಲಿಯು ಸಹ ಆತಂಕದ ಕ್ಷಣಗಳು ಎದುರಾಗಲಿಲ್ಲ”!.

“ಕಾಡಿನಲ್ಲಿ ಓಡಾಡಬೇಕಾದರೆ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬಾರದು. ಸಾಧ್ಯವಿದ್ದಷ್ಟು ಅರಣ್ಯ ಬಣ್ಣಕ್ಕೆ ಪೂರಕವಾದ ಮಿಲಟರಿ ಮಾದರಿಯ ಕಂದು ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳಿತು. ಹುಲಿ, ಕರಡಿ, ಆನೆ, ಚಿತರೆ ಮುಂತಾದ ಕಾಡು ಪ್ರಾಣಿಗಳ ಚಿತ್ರಗಳನ್ನು ಸೆರೆ ಹಿಡಿಯುವಾಗ ಸಾಕಷ್ಟು ಜಾಗರೂಕತೆ ವಹಿಸಬೇಕು, ಸುರಕ್ಷಿತ ಅಂತರವನ್ನು ಕಾಪಾಡಿಕೊಂಡಿರಬೇಕು. ಮೇಲಾಗಿ ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದಾಗಲಿ,ಕಲ್ಲು ಎಸೆಯುವದಾಗಲಿ, ಯಾವುದೇ ರೀತಿಯ ತೊಂದರೆ, ಕೀಟಲೆಗಳನ್ನು ನೀಡಬಾರದು”.
“ಕಾಡುಗಳಲ್ಲಿ ಸಾಮಾನ್ಯವಾಗಿ ಒಂದು ಜೀವಿಯು ಬದುಕಲು ಮತ್ತೊಂದು ಜೀವಿಯ ಮೇಲೆ ಅವಲಂಬಿತವಾಗಿರುವುದರಿಂದ ಬೇಟೆಗಳು ಜರುಗುತ್ತಲೇ ಇರುತ್ತವೆ. ಅದಕ್ಕಾಗಿ ಕಾಡಿನ ನ್ಯಾಯ ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ಸಂಚರಿಸುವ ವೇಳೆ ಭೇಟೆ ಪ್ರಸಂಗಗಳು ಜರುತ್ತಲೇ ಇರುತ್ತವೆ. ಆ ರೀತಿಯ ಪ್ರಸಂಗಳನ್ನು ಸಾಧ್ಯವಾದ ಮಟ್ಟಿಗೆ ಕ್ಯಾಮೇರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಬೇಕು. ಇಲ್ಲವೇ ನಮಗೆ ಅದೃಷ್ಟ ಇಲ್ಲವೆಂದು ನಮ್ಮ ಪಾಡಿಗೆ ನಾವಿರಬೇಕು”.

“ವನ್ಯಜೀವಿ ಛಾಯಾಗ್ರಹಣ ಎಂಬುದು ಸಾಹಸ ಪ್ರಧಾನವಾಗಿರುವುದರಿಂದ ಹಲವರು ಇದರತ್ತ ಆಕರ್ಷಿತರಾಗಿ ಕ್ಯಾಮೆರಾ ಕೊಂಡು ಕೊಂಡು ಕಾಡಿಗೆ ಹೊರಟೆಬಿಡುತ್ತಾರೆ. ಈ ರೀತಿ ನಡೆ ಸರಿಯಲ್ಲ. ನಾವು ಭೇಟಿ ನೀಡುತ್ತಿರುವ ಅಭಯಾರಣ್ಯ ಅಥವಾ ಕಾಡುಗಳ ಕುರಿತು ಮೊದಲೆ ವಿವರವಾಗಿ ತಿಳಿದುಕೊಳ್ಳಬೇಕು. ಕೆಲವು ಸಾಕಷ್ಟು ಅಪಾಯಕರ ಸ್ಥಳಗಳಾಗಿರುವುದರಿಂದ ಅವುಗಳ ಕುರಿತು ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ಪ್ರಾಣಾಪಯಗಳಿಂದ ತಪ್ಪಿಸಿ ಕೊಳ್ಳಬಹುದು”. “ಸಾಮಾನ್ಯವಾಗಿ ಈ ಚಟುವಟಿಕೆಯಲ್ಲಿ ಅರಣ್ಯ ಇಲಾಖೆಯ ಅನುಮತಿಯು ಬೇಕಾಗಿರುವುದು ಅವಶ್ಯಕವಾಗಿರುವುದರಿಂದ ಮೊದಲೆ ಈ ಕುರಿತು ಸಮಗ್ರವಾಗಿ ಯೋಜನೆ ರೂಪಿಸಿ ಅನುಮತಿಯನ್ನು ಪಡೆಯುವುದು ಉತ್ತಮ”.
“ಇನ್ನೂ ಕ್ಯಾಮೆರಾ ಹಾಗೂ ಇತರೆ ವಿಷಯಗಳಿಗೆ ಬಂದರೆ ಅತ್ಯುತ್ತಮ ಗುಣ ಮಟ್ಟದ ಕ್ಯಾಮೆರಾಗಳನ್ನು ಹೊಂದಿರುವುದು ಉತ್ತಮ. ಅಲ್ಲದೆ ಕ್ಯಾಮೆರಾ ಕುರಿತು ಅದನ್ನು ನಿಖರವಾಗಿ ಬಳಸುವಿಕೆ, ತಾಂತ್ರಿಕ ಜ್ಞಾನ ಇರಲೇಬೇಕು. ಛಾಯಾಗ್ರಹಣಕ್ಕೆ ಹೊರಡುವ ಮುಂಚೆಯೆ ಕ್ಯಾಮೆರಾ ಕುರಿತು ಸಕಲ ಸಿದ್ಧತೆಗಳನ್ನು ಮೊದಲೆ ಮಾಡಿಟ್ಟುಕೊಳ್ಳಬೇಕು”. “ಬ್ಯಾಟರಿ ಚಾರ್ಚ ಆಗಿದೆಯೋ ಇಲ್ಲವೋ? ಕ್ಯಾಮರಾ ಸುಸ್ಥಿತಿಯಲ್ಲಿದೆಯೋ ಇಲ್ಲವೋ? ಅದರ ಜೊತೆಗೆ ಕಾಡಿನಲ್ಲಿ ಊಟ, ಉಪಹಾರ ದೊರೆಯದ ಕಾರಣಕ್ಕೆ ನೀರು, ಬಿಸ್ಕಿಟ್‌ಗಳನ್ನು ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇನ್ನೊಂದು ಗಮನಿಸ ಬೇಕಾದ ಸಂಗತಿ ಎಂದರೆ ನಾವು ತಿನ್ನುವ ಆಹಾರಪದಾರ್ಥಗಳ ಮೇಲೆ ಪ್ಲಾಸ್ಟಿಕ್ ಪೌಚುಗಳು, ಬಾಟಲಿಗಳನ್ನು ಕಾಡಿನಲ್ಲೆ ಎಲ್ಲೆಂದರಲ್ಲಿ ಬಿಸಾಡುವುದು ಅಕ್ಷಮ್ಮ ಅಪರಾಧವಾಗಿದೆ. ಅವುಗಳನ್ನು ಸುರಕ್ಷಿತವಾಗಿ ನಿಮ್ಮ ಬಳಿಯಲ್ಲಿ ಇಟ್ಟು ಕೊಂಡಿದ್ದು ಕಾಡಿನಿಂದ ಹೊರ ಬಂದ ತಕ್ಷಣ ಅದಕ್ಕೆ ಮೀಸಲಾದ ಜಾಗದಲ್ಲೆ ಹಾಕಬೇಕು.
ಈ ರೀತಿಯ ಎಲ್ಲ ಸಿದ್ದತೆಗಳೊಂದಿಗೆ ಎರಡುದಿನಗಳ ಕಾಡು ಮೇಡಿನ ಸುತ್ತಾಟದಲ್ಲಿ ಕೆಲವು ವನ್ಯಜೀವಿಗಳ ಛಾಯಾಚಿತ್ರಗಳನ್ನು ನಾನು ಸೆರೆಹಿಡಿದಿರುವೆ. ಕಾಡು ಮೇಡಿನ ಸುತ್ತಾಟ ನಿಜಕ್ಕೂ ನನಗೆ ಹೊಸ ಚೈತನ್ಯ ನೀಡಿದ್ದು, ಆರೋಗ್ಯದಲ್ಲಿ ತಕ್ಕಮಟ್ಟಿಗೆ ಚೇತರಿಕೆ ಕಂಡು ಬಂದಿದೆ. ಕಾಡಿನಲ್ಲಿ ನಾನು ಸೆಹಿಡಿದಿರುವ ಕೆಲವು ಚಿತ್ರಗಳು ಇಲ್ಲಿವೆ.
- ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಲೇಖನ: ಮಾಲತೇಶ ಅಂಗೂರ, ಹಾವೇರಿ.
