ಕಲಾಶ್ರೀ ಶಾಮಮೂರ್ತಿ -ಇವರಿಗೆ ರಂಗಭೂಮಿಯೇ ಮಹಾಮನೆ

ನಾನು ಕಂಡಂತೆ ಮಹಾನುಭಾವರು -೧

ನನ್ನ ಆಪ್ತ ಸ್ನೇಹಿತರೂ ರಂಗ ನಿರ್ದೇಶಕ ಮತ್ತು ರಂಗ ಸಂಘಟಕರೂ ಆದ ಎಸ್‌. ಶಾಮಮೂರ್ತಿ ಯವರು ಐವತ್ತು ವರ್ಷಗಳ ಕಾಲ ನಾಟಕವನ್ನೇ ಉಸಿರಾಗಿಸಿಕೊಂಡಿದ್ದವರು. ಭದ್ರಾವತಿಯ ಎಂ.ಪಿ.ಎಂ ನಲ್ಲಿ ಉದ್ಯೋಗಿಯಾಗಿದ್ದ ಇವರು ಕಾರ್ಮಿಕ ರಂಗ ಭೂಮಿಗೆ ಕೊಟ್ಟ ಉಡುಗೊರೆ ಬಹು ದೊಡ್ಡದು. ಎಂ.ಪಿ.ಎಂ. ನ ವಿಕಸಂ [ವಿದ್ಯಾರ್ಥಿ ಕಲಾ ಸಂಘ] ತಂಡಕ್ಕೆ ಅರವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಭದ್ರಾವತಿಯ ರಂಗ ಕಲಾವಿದರಿಗೆಲ್ಲ ಇದು ಮಾತೃ ಸಂಸ್ಥೆಯಾಗಿದೆ. ಆರಂಭದಲ್ಲಿ ಈ ತಂಡ ಸೇರಿಕೊಂಡ ಶಾಮಮೂರ್ತಿಯವರು ಉಸಿರಿರುವವರೆಗೆ ಈ ತಂಡಕ್ಕೆ ನಿಷ್ಠರಾಗಿಯೇ ಕೆಲಸ ಮಾಡಿದರು. ಮೊದಲು ನಟರಾಗಿದ್ದ ಇವರು ಅನೇಕ ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಪಾತ್ರ ಮಾಡಿದರು. ಇವರು ಅಭಿನಯಿಸುತ್ತಿದ್ದ ಟಿಪ್ಪೂ ಸುಲ್ತಾನ ಪಾತ್ರ ಇವರಿಗೆ ಬಹು ಹೆಸರು ತಂದು ಕೊಟ್ಟಿತು. ಮುಂದೆ ಇವರು ರಂಗ ಸಂಘಟನೆ ಮತ್ತು ನಿರ್ದೇಶನದತ್ತ ಹೊರಳಿದರು. ಮೊದಲು ಇವರು ಐತಿಹಾಸಿಕ ನಾಟಕಗಳನ್ನೇ ಹೆಚ್ಚು ನಿರ್ದೇಶಿಸಿದರು. ಭದ್ರಾವತಿಯಲ್ಲಿ ಒಳ್ಳೆಯ ಹಾಡುಗಾರರಿದ್ದರು. ಅವರನ್ನೆಲ್ಲ ಸೇರಿಸಿ ಒಂದು ಗಟ್ಟಿಯಾದ ಮೇಳ ಸಿದ್ಧ ಮಾಡಿಕೊಂಡರು. ಮತ್ತು ಮುಂದೆ ಈ ಸಂಗೀತ ಮೇಳವನ್ನು ನಾಟಕಕ್ಕೆ ಬಳಸಿಕೊಂಡು ಜನಾಕರ್ಷಣೆ ಹೆಚ್ಚುವಂತೆ ಮಾಡಿದರು. ಈ ತಂಡಕ್ಕೆ ಶಾಮಮೂರ್ತಿಯವರು ಐವತ್ತು ವರ್ಷಗಳ ಕಾಲ ನಾಟಕ ನಿರ್ದೇಶನ ಮಾಡಿದ್ದಾರೆ. ಸ್ಥಳೀಯ ನಾಟಕಕಾರರಲ್ಲದೆ ಜಾನಪದ ತಜ್ಞ ಗೋ.ರು.ಚ, ಗಿರೀಶ ಕಾರ್ನಾಡ, ಚಂದ್ರಶೇಖರ್‌ ಕಂಬಾರ, ನಿಸರ್ಗಪ್ರಿಯ, ಹೂಲಿ ಶೇಖರ್ ಮುಂತಾದವರ ನಾಟಕಗಳನ್ನು ರಂಗಕ್ಕೆ ತಂದು ಜನಪ್ರಿಯ ಗೊಳಿಸಿದ್ದಾರೆ.

ಇವರ ನಿರ್ದೇಶನವೆಂದರೆ ಬೆಂಗಳೂರಿಂದಲೂ ಕಲಾವಿದರು ಬಂದು ಬಣ್ಣ ಹಚ್ಚುತ್ತಿದ್ದರು. ಅವರಲ್ಲಿ ಶ್ರೀಮತಿಯರಾದ ಗಿರಿಜಾ ಲೋಕೇಶ, ಉಮಾಶ್ರೀ, ಭಾಗ್ಯಶ್ರೀ ಪ್ರಮುಖರು. ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಚಿತ್ರನಟ ದೊಡ್ಡಣ್ಣ ಇವರ ಸಹಕಾರದಿಂದಲೇ ಚಿತ್ರರಂಗಕ್ಕೆ ಬರುವಂತಾಯಿತು. ಮನಸ್ಸು ಮಾಡಿದ್ದರೆ ಇವರೂ ಚಿತ್ರರಂಗಕ್ಕೆ ಹಾರಬಹುದಿತ್ತು. ಅವಕಾಶಗಳೂ ಬಂದಿದ್ದವು. ಆದರೆ ರಂಗಭೂಮಿಯೇ ನನ್ನ ಕ್ಷೇತ್ರವೆಂದು ಗಟ್ಟಿಯಾಗಿ ಉಳಿದುಬಿಟ್ಟರು. ರಂಗಭೂಮಿಯ ಕಾರಣದಿಂದಲೇ ರಾಜ್ಯವನ್ನೆಲ್ಲ ಸುತ್ತಾಡಿದರು. ರಾಜ್ಯದ ರಂಗಗಣ್ಯರ ಸಂಪರ್ಕ ಸಾಧಿಸಿದರು. ತಂಡಕ್ಕೆಂದುಬೆಳಕಿನ ವ್ಯವಸ್ಥೆ, ಧ್ವನಿ ವ್ಯವಸ್ಥೆ, ರಂಗ ಪರಿಕರಗಳ ವ್ಯವಸ್ಥೆಯನ್ನೂ ಮಾಡಿಕೊಂಡರು. ಸಂಸ್ಕೃತಿ ಇಲಾಖೆ ಸಹಾಯ ಹಸ್ತವನ್ನೂ ನೀಡಿತು.

ನಾಟಕ ಸಾಮಾಜಿಕವೇ ಇರಲಿ. ಐತಿಹಾಸಿಕ-ಪೌರಾಣಿಕವೇ ಇರಲಿ. ಎಲ್ಲಕ್ಕೂ ಸರಿ ಹೊಂದುವಂಥ ವೇಷ-ಭೂಷಣಗಳನ್ನು ಹೊಂದಿಸಿಟ್ಟುಕೊಂಡಿದ್ದು ಇವರ ರಂಗಪ್ರೀತಿಯೇ ಕಾರಣ. ಶಾಮಮೂರ್ತಿ ಯವರ ರಂಗ ಶಿಸ್ತು ಅಪ್ರತಿಮವಾದದ್ದು. ಅಂದಿನ ನಾಟಕಕ್ಕೆ ಏನು ಬೇಕೋ ಅದೆಲ್ಲವನ್ನೂ ಶಿಸ್ತುಬದ್ಧ ವಾಗಿ ಹೊಂದಿಸಿಟ್ಟುಕೊಂಡು ಅಷ್ಟೇ ಶಿಸ್ತುಬದ್ಧವಾಗಿ ತಗೆದಿಡುತ್ತಿದ್ದರು. ಲೆಕ್ಕ ಇಡುವುದರಲ್ಲಿ ಅವರು ತುಂಬ ಗಮನಕೊಡುತ್ತಿದ್ದರು. ನಾಟಕದ ಮರುದಿನ ಎಲ್ಲ ಕಲಾವಿದ, ರಂಗತಂತ್ರನ್ನು ಕರೆದು ಚಹಾ ಕೊಟ್ಟು ನಾಟಕಕ್ಕಾದ ಖರ್ಚು, ಉಳಿಕೆ ಎಲ್ಲವನ್ನು ತಗೆದು ಎದುರಿಡುತ್ತಿದ್ದರು. ಯಾರಿಗೂ ಅನುಮಾನವೇ ಇರುತ್ತಿರಲಿಲ್ಲ. ಕಾರಣಕ್ಕಾಗಿಯೇ ಕಲಾವಿದರಿಗೆಲ್ಲ ಶಾಮಮೂರ್ತಿ ಅಂದರೆ ಗೌರವವಿತ್ತು. ಕಲಾವಿದರಿಗೆ ಯಾವುದಾದರೂ ಸಣ್ಣ ಪುಟ್ಟ ತೊಂದರೆಯಾದರೂ ಅಲ್ಲಿ ಶಾಮಮೂರ್ತಿ ಹಾಜರಿರುತ್ತಿದ್ದರು. ಮನೆಯ ಹಿರಿಯಣ್ಣನಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದರು.

ರಂಗಭೂಮಿ ಅಂದರೆ ಒಂದು ಕುಟುಂಬ ಸಾರ್‌. ಇಲ್ಲಿ ಎಲ್ಲರೂ ಒಂದೇ ಥರ ಇರೋದಿಲ್ಲ. ಶಿಸ್ತು-ಸಹಕಾರ ಇಲ್ಲಿ ತುಂಬ ಮುಖ್ಯ ಅನ್ನುತ್ತಿದ್ದರು. ಅವರು ವಿಕಸಂ ತಂಡಕ್ಕೆ ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. ಬೆನಕನ ಕೆರೆ, ಜೋಕುಮಾರ ಸ್ವಾಮಿ, ಹಲಗಲಿ ಬೇಡರದಂಗೆ, ಹಾವು ಹರಿದಾಡತಾವ, ಸ್ವರ್ಗಸ್ಥ, ತದ್ರೂಪಿ, ಹಯವದನ ಮುಂತಾದ ನಾಟಕಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ನಟರಾಗಿಯೂ ಶಾಮಮೂರ್ತಿ ಗಮನ ಸೆಳೆದಿದ್ದರು. ಅನೇಕ ಪ್ರತಿಷ್ಠಿತ ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಪ್ರಶಸ್ತಿಗಳನ್ನು ಬಾಚಿ ತಂದ ಕೀರ್ತಿ ಅವರದು. ಭದ್ರಾವತಿಯ ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಅಲ್ಲಿಯ ವಿಕಸಂ ತಂಡವನ್ನು ರಾಜ್ಯದಲ್ಲಿ ಪ್ರತಿಭಾನ್ವಿತ ತಂಡವನ್ನಾಗಿ ಮುಂಚೂಣಿಯಲ್ಲಿ ತಂದು ನಿಲ್ಲಿಸಿದ್ದರು. ಬೆಂಗಳೂರು, ದೆಹಲಿ, ಮುಂಬಯಿಗಳಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅವರಿಗೆ ರಂಗಸ್ನೇಹಿತರಿದ್ದರು. ಅಪ್ರತಿಮ ಕಲಾಪ್ರೇಮಿಯಾಗಿದ್ದ ಅವರಿಗೆ ಕಲಾವಿದ ರೆಂದರೆ ಅತ್ಯಂತ ಪ್ರೀತಿ. ಶಿವಮೊಗ್ಗ ಜಿಲ್ಲೆಯ ಹಿರಿ-ಕಿರಿ ಕಾಲಾವಿದರಿಗೆ ಶಾಮಮೂರ್ತಿಯೆಂದರೆ ಅಷ್ಟೇ ಪ್ರೀತಿ. ಅಶಕ್ತ ಕಲಾವಿದರು ಕಂಡರೆ ಕೈಗೆ ಸಿಕ್ಕ ಅಷ್ಟೂ ಹಣವನ್ನು ಅಲ್ಲಿಯೇ ಅವರಿಗೆ ಕೊಟ್ಟದ್ದನ್ನು ನಾನೇ ನೋಡಿದ್ದೇನೆ. ಅಂಥ ಉತ್ಕಟ ಉದಾರ ಹೃದಯಿ ಕಲಾ ಪ್ರೇಮಿ ಅವರು

ಒಮ್ಮೆ ರಾಜ್ಯ ಮಟ್ಟದ ಸ್ಪರ್ಧೆಯೊಂದಕ್ಕೆ ಹಯವದನ ನಾಟಕವನ್ನು ಸಿದ್ಧಮಾಡಿ ಕೊಂಡು ಒಯ್ದಿದ್ದರು. ಪ್ರದರ್ಶನ ಇನ್ನೇನು ಸುರುವಾಗಬೇಕು. ಅಷ್ಟರಲ್ಲಿ ಅವರ ಹಳ್ಳಿಯಿಂದ ಪೋನು ಬಂದಿತು. ತಂದೆ ನಿಧನರಾಗಿದ್ದರು. ಇವರೇ ಹಿರಿಯ ಮಗ. ಹೋಗಲೇಬೇಕು. ಕಲಾವಿದರು ನಾವು ನಿಭಾಯಿಸುತ್ತೇವೆ. ನೀವು ಕಾರು ಮಾಡಿಕೊಂಡು ಈಗಲೇ ಹೊರಡಿ ಅಂದರು. ಆದರೆ ಶಾಮಮೂರ್ತಿ ಒಪ್ಪಲಿಲ್ಲ. ಕಲಾವಿದರು ಕಷ್ಟಪಟ್ಟು ನಾಟಕ ಕಲಿತಿದ್ದಾರೆ. ಪ್ರಶಸ್ತಿ ಬರುತ್ತೋ ಇಲ್ಲವೋ. ಪ್ರದರ್ಶನ ಮುಗಿಸದೆ ಹೋಗಲಾರೆ ಎಂದು ಬಂದ ಅಳುವನ್ನು ನುಂಗಿಕೊಂಡೇ ಬೆಳಕು ನಿರ್ವಹಿಸಿದರು. ಪ್ರದರ್ಶನ ಎಲ್ಲೂ ವ್ಯತ್ಯಯವಾಗದೆ ಮುಗಿಯಿತು. ಮತ್ತು ನಾಟಕ ಪ್ರದರ್ಶನ ಮುಗಿಯುತ್ತಲೇ ಕಲಾವಿದರಿಗೆ – ನೀವೆಲ್ಲ ಭಧ್ರಾವತಿಗೆ ಹೊರಡಿ ಎಂದು ಅವರ ಕೈಗೆ ಖರ್ಚಿನ ಹಣವನ್ನಿತ್ತು ತಾವು ಸರಿ ರಾತ್ರಿಯಲ್ಲಿಯೇ ಹಳ್ಳಿಗೆ ಧಾವಿಸಿದರು. ಮತ್ತು ತಂದೆಯ ಎಲ್ಲ ಕಾರ್ಯಗಳನ್ನು ಮುಗಿಸಿದರು. ಮುಂದೆ ಸ್ಪರ್ಧೆಯಲ್ಲಿ ಇವರ ನಾಟಕ ಪ್ರದರ್ಶನಕ್ಕೆ ಮೊದಲ ಪಾರಿತೋಷಕ ಮತ್ತು ಇವರಿಗೆ ಕಲಾಶ್ರೀ ಎಂಬ ಬಿರುದು ಪ್ರಕಟವಾಯಿತು. ತಂದೆಯ ಸಾವಿನ ಸೂತಕ ದಿನ ಸಿಕ್ಕ ಕಲಾಶ್ರೀ ಎಂಬ ಬಿರುದನ್ನು ಶಾಮಮೂರ್ತಿ ಕಣ್ಣೀರಿಟ್ಟು ಸ್ವೀಕರಿಸಿದರು. ಮತ್ತು ಆ ಬಿರುದನ್ನು ಕೊನೆಯವರೆಗೂ ತಮ್ಮ ಹೆಸರಿನ ಮುಂದೆ ಜೋಡಿಸಿಕೊಂಡರು. ನನ್ನ ತಂದೆಯೇ ಕಲಾಶ್ರೀ ಆಗಿ ಬಂದೊದಗಿದರು ಎಂದು ಆರ್ದ್ರಭಾವದಿಂದ ನನ್ನ ಬಳಿ ಎಷ್ಟೋ ಬಾರಿ ಹೇಳಿಕೊಂಡರು.

ನಾಟಕದ ರಿಹರ್ಸಲ್‌ ಮುಗಿಯುವವರೆಗೆ ತುಂಬ ಶಿಸ್ತು, ಮತ್ತು ಅಷ್ಟೇ ಖಡಕ್‌ ಆಗಿರುತ್ತಿದ್ದರು. ರಂಗ ಶಿಸ್ತು ಇಲ್ಲದಿದ್ದರೆ ನಾಟಕ ಮಾಡೋಕಾಗಲ್ಲ ಸಾರ್‌ ಅನ್ನುತ್ತಿದ್ದರು. ಅವರ ಶಿಸ್ತಿಗೆ ಕಲಾವಿದರು ಅಷ್ಟೇ ಗೌರವ ಕೊಡುತ್ತಿದ್ದರು. ಅವರಿಗೆ ಸಿಕ್ಕ ಪ್ರಶಸ್ತಿಗಳು, ಫಲಕಗಳಿಗೆ ಲೆಕ್ಕವಿಲ್ಲ. ಒಂದು ಅವಧಿಗೆ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದರು. ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಬಂದವು. ನನಗೆ ವಯಕ್ತಿಕವಾಗಿ ಸಂತೋಷವೆಂದರೆ ನನಗೂ ಅವರಿಗೂ ಒಂದೇ ವರ್ಷ ನಾಟಕ ಅಕಾಡೆಮಿ ಪ್ರಶಸ್ತಿ ಬಂದದ್ದು.

ಅವರು ವಿಕಸಂ ಹೆಸರಿನಲ್ಲಿ ಒಂದು ಚಿಕ್ಕ ಕಚೇರಿಯನ್ನೂ ಮಾಡಿಕೊಂಡಿದ್ದರು. ಅಲ್ಲಿ ಒಂದು ಪುಟ್ಟ ನಾಟಕ ಪುಸ್ತಕಗಳ ಗ್ರಂಥಾಲಯವನ್ನೂ ಹೊಂದಿದ್ದರು. ಅದರಲ್ಲಿ ಕನ್ನಡದ ಪ್ರಸಿದ್ಧರ ಮತ್ತು ಅಪ್ರಸಿದ್ಧರ ನಾಟಕ ಪುಸ್ತಕಗಳು ನೋಡಲು ಸಿಗುತ್ತಿದ್ದವು. ಅವರ ರಂಗಶಿಸ್ತಿನಲ್ಲಿ ಊಟ ತಿಂಡಿಗೆ ಅವಕಾಶವಿರಲಿಲ್ಲ. ರಿಹರ್ಸಲ್‌ ಮುಗಿದು ಎಲ್ಲ ಕಲಾವಿದರನ್ನು ಊಟಕ್ಕೆ ಕಳಿಸಿ ನಂತರ ತಾವು ಊಟ ಮಾಡುತ್ತಿದ್ದರು. ಪ್ರದರ್ಶನವಿದ್ದಾಗಲಂತೂ ಪರದೆ- ಲೈಟು ಮೈಕುಗಳನ್ನು ಬಿಚ್ಚಿ, ಮೇಕಪ್‌, ಕಾಸ್ಟೂಮ್‌ಗಳ ಲೆಕ್ಕ ತಗೆದುಕೊಂಡು ಅವುಗಳನ್ನು ಪೆಟ್ಟಿಗೆಗೆ ಸೇರಿಸಿ, ಬೀಗ ಹಾಕಿದ ನಂತರವೇ ಊಟದ ಕಡೆ ಗಮನ. ಅಷ್ಟೊತ್ತಿಗಾಗಲೇ ಎಲ್ಲರೂ ಊಟ ಮಾಡಿರುತ್ತಿದ್ದರು. ಇವರು ತಟ್ಟೆಯ ಮುಂದೆ ಕೂತಾಗ ಎಷ್ಟೋ ಸಲ ಮಧ್ಯರಾತ್ರಿ ಮೀರಿರುತ್ತಿತ್ತು. ಊಟದ ಕಡೆಗೆ ಗಮನ ಕೊಡದಿರುವುದೇ ಅವರ ಅನಾರೋಗ್ಯಕ್ಕೆ ಮೂಲವಾಯಿತೆಂದು ಅವರ ಶಿಷ್ಯರಲ್ಲಿ ಅನೇಕರು ಹೇಳುತ್ತಾರೆ.

ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರಿಗೆ ಡಯಾಲಿಸಸ್‌ ಮಾಡುವುದು ಅನಿವಾರ್ಯ ವಾಯಿತು. ದಿನ ಬಿಟ್ಟು ದಿನ ಡಯಾಲಿಸಸ್‌ ನಡೆಯುವಾಗಲೂ ನಾಟಕವನ್ನು ಬಿಟ್ಟಿರಲಿಲ್ಲ ಅವರು. ಮೈಸೂರಲ್ಲಿ ಡಯಾಲಿಸಸ್‌. ಭದ್ರಾವತಿಯಲ್ಲಿ ನಾಟಕದ ರಿಹರ್ಸಲ್‌. ಇದರ ಜೊತೆಗೆ ಸಕ್ಕರೆ ಖಾಯಿಲೆಗೆ ನಿತ್ಯ ಇನ್‌ಶೂಲೆನ್ಸ ಸೂಜಿ. ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿದರು. ತನಗಾಗಿ, ತನ್ನ ಸಂಸಾರಕ್ಕಾಗಿ ಒಂದು ಸ್ವಂತ ಮನೆಯನ್ನೂ ಮಾಡಿಕೊಳ್ಳಲಿಲ್ಲ.ಈ ಬಗ್ಗೆ ನಾನು ಅವರನ್ನು ಕೇಳಿದಾಗ ಸುಮ್ಮನೆ ನಕ್ಕರು. ”ಪರಮಾತ್ಮ ನಮಗಾಗಿ ಜಗತ್ತನ್ನೇ ಸೃಷ್ಟಿಸಿ ಕೊಟ್ಟಿದ್ದಾನೆ. ಇದನ್ನೇ ನಮ್ಮ ಮನೆ ಅಂದರಾಯಿತು. ಈ ಮನೆಯಲ್ಲಿ ಎಷ್ಟೊಂದು ಜನ ಬಂಧುಗಳಿ ದ್ದಾರೆ ನೋಡಿ. ನಾವು ಕಟ್ಟಿದ ಪುಟ್ಟ ಮನೆಯಲ್ಲಿರುವ ಹಾಗೆ ಇಲ್ಲಿಯೂ ಪ್ರೀತಿಸುವವರಿದ್ದಾರೆ. ದ್ವೇಷಿಸು ವವರಿದ್ದಾರೆ. ಅದು ಮನುಷ್ಯನ ಸಹಜಧರ್ಮ”. ಅಂದರು.

ಅವರಲ್ಲಿ ಎಂಥ ಆತ್ಮ ಶಕ್ತಿಯಿತ್ತೋ. ಅಂಥದ್ದರಲ್ಲಿಯೇ ಭವ್ಯ ಭಾರತ ಎಂಬ ನಾಟಕಗಳ ಗುಚ್ಛ ಆಯೋಜಿಸಿ ರಂಗಕ್ಕೆ ತಂದರು. ಅವುಗಳನ್ನು ನಾನೇ ರಚಿಸಿದ್ದೆ. ಪ್ರದರ್ಶನ ನೋಡಲು ಭದ್ರಾವತಿಗೆ ಹೋದಾಗ ಶಾರೀರಿಕವಾಗಿ ಇಳಿದು ಹೋದ ಕಲಾಶ್ರೀ ಯವರನ್ನು ನೋಡಿ ತುಂಬ ನೊಂದುಕೊಂಡೆ. ಇಂಥ ಸ್ಥಿತಿಯಲ್ಲೂ ನಿಮಗೆ ನಾಟಕ ಬೇಕಾ ಎಂದೂ ಕೇಳಿದೆ. ಅವರು ನಗುತ್ತ ಹೇಳಿದ್ದು ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ. ”ನಾಟಕ ನನ್ನ ಉಸಿರು ಸಾರ್‌. ಅದು ನಿಂತ ದಿನವೇ ಈ ಶಾಮಮೂರ್ತಿ ಇರೋದಿಲ್ಲ” ಅಂದರು. ಅವತ್ತು ಪ್ರದರ್ಶನಕ್ಕೆ ಅತಿಥಿಯಾಗಿ ಬಂದಿದ್ದ ಕಪ್ಪಣ್ಣನವರೂ ಅವರನ್ನು ನೋಡಿ ಮರುಗಿದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ವ ಪ್ರಶಸ್ತಿಗಳೂ ಅವರಿಗೆ ಸಂದಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರನ್ನು ಕುರಿತು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿತ್ತು. ತಾವು ಅನಾರೋಗ್ಯ ಪೀಡಿತರಾದಾಗಲೂ ನಾಟಕವನ್ನು ಬಿಡಲಿಲ್ಲ. ಆಸ್ಪತ್ರೆಯಲ್ಲಿರುವುದಕ್ಕಿಂತ ಹೆಚ್ಚಾಗಿ ರಂಗ ಮಂದಿರದಲ್ಲಿ ಸಮಯ ಕಳೆದರು. ಇಂಥ ಅಪರೂಪದ ರಂಗ ಜೀವಿಯನ್ನು ಕೊನೆಗೂ ಅನಾರೋಗ್ಯ ಬಿಡಲಿಲ್ಲ. ಹೆಡಮುರಿಗೆ ಕಟ್ಟಿ ಸಾವಿನ ಮನೆಗೆ ಒಯ್ದೇ ಬಿಟ್ಟಿತು. ಅವರು ತೀರಿಕೊಳ್ಳುವ ಮೂರು ದಿನಗಳ ಮುಂಚೆ ಅವರೇ ನನಗೆ ಫೋನು ಮಾಡಿ ಮಾತಾಡಿದರು. ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ” ಸಾರ್‌. ಸಾರೀ… ನೀವು ಫೋನು ಮಾಡಿದಾಗ ಫೋನು ತಗೆದುಕೊಳ್ಳಲಾಗಲಿಲ್ಲ. ಮಲಗಿದವನು ಮಲಗೇ ಬಿಟ್ಟೆ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ಹೇಳಿ.” ಅಂದರು. ನಾನು ಗಾಬರಿಯಿಂದ ಕೇಳಿದೆ. ”ನಾನು ನಾಳೆಯೇ ಬರ್ತೀನಿ ನಿಮ್ಮನ್ನ ನೋಡೋಕೆ” ಅಂದೆ. ಕೂಡಲೇ ಅವರು- ”ಸಧ್ಯಕ್ಕೆ ಬೇಡ ಸಾರ್‌. ಎರಡು ದಿನ ಹೋಗ್ಲಿ. ಫೋನು ಮಾಡಿಸ್ತೀನಿ. ಥ್ಯಾಂಕ್ಸ ಸಾರ್‌” ದನಿ ಸೋತಿತ್ತು. ನಾನು ಏನೋ ಹೇಳಲು ಹೋದೆ. ಫೋನು ಆ ಕಡೆಯಿಂದ ಕಟ್‌ ಆಯಿತು. ನಾನು ಬಹಳ ಹೊತ್ತು ಮಂಕಾಗಿ ಕೂತಿದ್ದೆ. ಮುಂದೆ ಮೂರನೇ ದಿನಕ್ಕೆ ಅವರ ಮಗನಿಂದ ಫೋನು ಬಂತು. ”ಅಂಕಲ್‌ … ಅಪ್ಪ ಹೋದ್ರು ಈ ಮಧ್ಯಾನ” ಅಂದ. ಎರಡು ದಿನದ ಹಿಂದೆ ಶಾಮಮೂರ್ತಿ ಪೋನಿನಲ್ಲಿ ಹೇಳಿದ್ದರು. ಈಗ ಬರಬೇಡಿ. ಎರಡು ದಿನ ಬಿಟ್ಟು ಫೋನು ಮಾಡಿಸ್ತೀನಿ ಅಂದಿದ್ದರು. ಅದಕ್ಕೆ ಸರಿಯಾಗಿ ಈಗ ಮಗನಿಂದ ಫೋನು. ತಮ್ಮ ಸಾವು ಅವರಿಗೆ ಮೊದಲೇ ತಿಳಿದಿತ್ತೇನೋ. ಕೂಡಲೇ ಮೈಸೂರಿಗೆ ಧಾವಿಸಿದೆ.

ತಮ್ಮ ಬದುಕಿನುದ್ದಕ್ಕೂ ರಂಗ ಮಂದಿರವೇ ತನ್ನ ಮನೆ. ಕಲಾವಿದರೇ ಬಂಧುಗಳು ಎಂದು ತಿಳಿದು ಬದುಕಿದ ಕಲಾಶ್ರೀ ಶಾಮಮೂರ್ತಿಯವರು ತಮ್ಮ ದುಡುಮೆಯ ಹೆಚ್ಚಿನ ಭಾಗವನ್ನು ರಂಗ ಪರಿಕರಗಳು, ರಂಗಪ್ರಯೋಗಗಳು, ರಂಗ ಗೆಳೆಯರಿಗಾಗಿಯೇ ಖರ್ಚು ಮಾಡಿದರು. ಇಂಥ ಕಲಾವಿದ ತೀರಿದ ನಂತರ ಅವರ ಮನೆಯವರು ಬ್ಯಾಂಕಿಗೆ ಹೋದಾಗ ಅಲ್ಲಿ ಕಲಾಶ್ರೀಯ ಪಾಸ್‌ ಬುಕ್‌ ನಲ್ಲಿ ಇದ್ದುದು ಕೇವಲ ಒಂದು ಸಾವಿರದಾ ಇನ್ನೂರು ರೂಪಾಯಿ ಮಾತ್ರ. ತಮ್ಮ ಉಳಿಕೆಯ ಹಣವನ್ನೆಲ್ಲ ನಾಟಕಕ್ಕೇ ಖರ್ಚು ಮಾಡಿದ್ದರು. ಅವರ ಹೆಂಡತಿಗೆ ಅವರು ಕೊನೆಗಾಲಲ್ಲಿ ಕೂಡಿಟ್ಟ ಹಣ ಅಷ್ಟೇ. ರಂಗ ನಿರ್ದೇಶಕ, ರಂಗ ಸಂಘಟಕ, ರಂಗ ನಟ ಎಂದು ಹೊರಗೆ ದೊಡ್ಡ ಹೆಸರಿನ ಗಂಟು ಮಾಡಿಟ್ಟ ಕಲಾವಿದ ಎಂದೂ ತನಗೆ, ತನ್ನವರಿಗೆ ಹಣ ಬೇಕೆಂದು ಕೂಡಿಡಲಿಲ್ಲ. ಬಂಧುಗಳೇ ಸೇರಿ ದಿನಕರ್ಮ ಮಾಡಿದರು. ನಿಜವಾದ ಕಲಾವಿದರು ಬದುಕುವುದೇ ಹೀಗೆ. ಅಥವಾ ಅವನ ಬದುಕೇ ಹಾಗೆ.

ಲೇಖನ – ಹೂಲಿ ಶೇಖರ್‌ (ಖ್ಯಾತ ನಾಟಕಕಾರ,ಚಿತ್ರಕತೆ ಸಂಭಾಷಣಕಾರ) aakritikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW