ನಾನು ಕಂಡಂತೆ ಮಾನುಭಾವರು – ೨
‘ತಡೀರಿ ! ಚಪ್ಪಲೀಲೆ ಹೊಡ್ಕೋತೀನಿ…’ಆರ್. ನಾಗೇಶ್ ಹೀಗೆ ಹೇಳಿದ್ದೇಕೆ?
ರಂಗ ಭೂಮಿಯಲ್ಲಿ ಕೆಲವರು ಕೆಲಸ ಮಾಡಿ ಪ್ರಸಿದ್ಧರಾಗುತ್ತಾರೆ. ಕೆಲವರು ಲಾಬಿ ಮಾಡುತ್ತ ಪ್ರಸಿದ್ಧರಾಗುತ್ತಾರೆ. ಲಾಬಿ ಮಾಡುವವರು. ದುಡ್ಡು ಮಾಡುತ್ತಾರೆ. ಬರೀ ಕೆಲಸ ಮಾಡುವವರು ಉರಿದು ಹೋಗುವ ನಕ್ಷತ್ರಗಳಾಗುತ್ತಾರೆ. ಕನ್ನಡದ ಪ್ರತಿಭಾವಂತ ರಂಗ ನಿರ್ದೇಶಕರ ಸಾಲಿನಲ್ಲಿ ಶ್ರೀ ಆರ್.ನಾಗೇಶ್‌ರದು ವಿಶಿಷ್ಠ ಹೆಸರು. ಅವರು ಉರಿದು ಹೋದ ನಕ್ಷತ್ರ. ಲಾಬಿ ಮಾಡಲು ಅವರ ಬಳಿ ಜಾತಿ, ಗುಂಪುಗಳ ಟ್ರಂಪ್ ಕಾರ್ಡ ಇರಲಿಲ್ಲ. ಇದ್ದದ್ದು ನೇರ ಮಾತುಗಳು. ಅವು ಸ್ನೇಹಕ್ಕಿಂತ ದ್ವೇಷವನ್ನೇ ಹೆಚ್ಚಾಗಿ ಉಣ್ಣಿಸಿದವು. ಸಿಜಿಕೆ, ಕಪ್ಪಣ್ಣ, ಪ್ರಸನ್ನ, ಬಿ.ಜಯಶ್ರೀ, ನಾಗಾಭರಣ, ಆರ್.ನಾಗೇಶ್ ಆಗ ಭರದಿಂದ ನಾಟಕ ಮಾಡಿಸುತ್ತಿದ್ದ ಕಾಲ. ತಬರನ ಕತೆ, ಈಡಿಪಸ್, ಕುರಿ, ಹುತ್ತವ ಬಡಿದರೆ, ಹೀಗೆ ಹಲವಾರು ಯಶಸ್ವಿ ನಾಟಕಗಳನ್ನು ನಿರ್ದೇಶಿಸಿ ಹೆಸರು ಮಾಡಿದವರು.
ತಮ್ಮ ವಿಶಿಷ್ಠ ಶಿಸ್ತಿಗೆ ಹೆಸರಾಗಿದ್ದ ನಾಗೇಶ ಕೋಪಿಷ್ಠರೂ ಹೌದು. ರಿಹರ್ಸಲ್‌ಗಳಲ್ಲಿ ಅವರ ಕೋಪದ ಸಾಕ್ಷಾತ್ಕಾರವಾಗುತ್ತಿದ್ದು ಸರ್ವೇ ಸಾಮಾನ್ಯವಾಗಿತ್ತು. ಕೆಲವರಿಗೆ ಕಪಾಳ ಮೋಕ್ಷವೂ ಆಗುತ್ತಿತ್ತಂತೆ. ಆಗಿನ ಕಲಾವಿದರು ರಂಗನಿಷ್ಠರು ಹಾಗೂ ತಂಡ ನಿಷ್ಠರಾಗಿದ್ದರಿಂದ ಅವರಿಗೆ ಕಲಿಯಬೇಕೆನ್ನುವ ಉತ್ಕಟೇಚ್ಛೆಯಿತ್ತು. ಯಾರೂ ಅಪಾರ್ಥ ಮಾಡಿಕೊಳ್ಳುತ್ತಿರಲಿಲ್ಲ.
ಹೆದರಿಕೊಂಡೆ ರಿಹರ್ಸಲ್‌ಗೆ ಬರುತ್ತಿದ್ದರು. ಮತ್ತು ನಿರ್ದೇಶಕರ ಸೂಚನೆಗಳನ್ನು ಅಸಕ್ತಿ ಯಿಂದಲೇ ಸ್ವೀಕರಿಸುತ್ತಿದ್ದರು. ಅವರದೂ ನನ್ನದೂ ತುಂಬ ಹಳೆಯ ಸ್ನೇಹ. ಧಾರವಾಡ ಕೆಡೆಗೆ ಬಂದಾಗಲೆಲ್ಲ ಪೋನು ಮಾಡುತ್ತಿದ್ದರು. ನಾನು ದಾಂಡೇಲಿಯಂದ ಹೋಗಿ ಭೇಟಿಯಾಗುತ್ತಿದ್ದೆ. ಅದ್ಯಾಕೋ. ಅವರಿಗೆ ನಾನೆಂದರೆ ತುಂಬ ಪ್ರೀತಿ. ಅದು ಅವರ ಸಾವಿನ ಸಂದರ್ಭದ ಹತ್ತಿರದವರೆಗೂ ಇತ್ತು. ನಾನು ಬೆಂಗಳೂರಿಗೆ ವಾಸ್ತವ್ಯ ಸ್ಥಳಾಂತರಿಸಿದಾಗ ಜೆ.ಪಿ. ನಗರದ ನನ್ನ ಮನೆಗೆ ವಾರದಲ್ಲಿ ನಾಲ್ಕು ಸಲವಾದರೂ ಬಂದು ಚಹಾ ಕುಡಿದು ಹೋಗುತ್ತಿದ್ದರು.
ಇಂತಪ್ಪ ನಾಗೇಶರಿಗೆ ರಾಜ್ಯ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು.
ಆ ಸಂದರ್ಭದ ಕತೆ ಇದು. ಅವರನ್ನು ಖುದ್ದಾಗಿ ಅಭಿನಂದಿಸಲು ಹೋಗಬೇಕೆಂದುಕೊಂಡೆ. ಆದರೆ ಅವರೋ ಕಾಲಿಗೆ ಗಾಲಿ ಕಟ್ಟಿಕೊಂಡ ಮನುಷ್ಯ. ಇದ್ದ ಕಡೆ ಇರುವವರಲ್ಲ. ಯೋಚಿಸಿ ನಾನೇ ಫೋನು ಮಾಡಿದೆ. ನಿಮ್ಮನ್ನು ಅಭಿನಂದಿಸಬೇಕಿದೆ. ಎಲ್ಲಿ ಸಿಗುತ್ತೀರಿ ಎಂದು ನೇರವಾಗಿ ಕೇಳಿದೆ. ನಕ್ಕ ಅವರು ಏನೂ ಬೇಡ. ನಾನೇ ಒಂದು ಊಟ ಹಾಕಿಸುತ್ತೇನೆ. ಇಂಥ ದಿನ ಇಂಥಲ್ಲಿ ಊಟ. ನಿಮ್ಮ ಡೈರೀಲಿ ಬರಕೊಂಡು ಬಿಡಿ ಅಂದರು. ಅವರು ಡೈರಿ ಅಂದ ಕೂಡಲೇ ಅದು ಪಕ್ಕಾ ಎಂದೇ ಅರ್ಥ. ನಾನು ಆ ದಿನ ಸರಿಯಾಗಿ ಅವರು ಹೇಳಿದ ಜಾಗಕ್ಕೆ ಹೋದೆ. ನೋಡಿದರೆ ಯಾರೂ ಇಲ್ಲ. ಬೆಂಗಳೂರು ಟ್ರಾಫಿಕ್ಕು ಹೀಗೇನೆ. ಕಾಯ್ದ ನಂತರ ಜನರ ಮಧ್ಯದಲ್ಲಿ ಇವರ ತಲೆ ಕಂಡು ಸಮಾಧಾನವಾಯಿತು. ನಮಸ್ತೆ ಶೇಖರ ಜೀ ಅಂದರು. ಪ್ರತಿ ವಂದಿಸಿದರು. ಬಂದವರು ಅವರೊಬ್ಬರೇ. ಕ್ಷಮಿಸಿ. ಬರೋದು ತಡವಾಯಿತು. ಬನ್ನಿ ಎಂದು ಹೇಳುತ್ತಲೇ ಒಳ ನುಗ್ಗಿದರು. ಒಂದು ಕಡೆ ಕೂತೆವು. ಖುಶಿ ಹಂಚಿಕೊಂಡೆ. ಅವರಿಗೂ ಖುಶಿಯಾಗಿತ್ತು. ಪ್ರಶಸ್ತಿಗಿಂತ ಅದರ ಜೊತೆ ಬರುವ ಲಕ್ಷ ರೂಪಾಯಿಯೇ ಘನವಾದದ್ದು ಎಂದು ಹೇಳಿ ನಕ್ಕರು. ಹೌದು ಅದಕ್ಕಾಗಿಯೇ ಅಲ್ಲವೇ ಲಾಬಿ ಪ್ರಶಸ್ತಿ ಅಂತ ಅನ್ನೋದು ಎಂದೂ ಸೇರಿಸಿದರು. ನಾನು ತಕ್ಷಣ ಕೇಳಿದೆ. ಅಂದ್ರೆ? ನೀವೂ ಲಾಬೀ ಮಾಡಿದ್ರಾ? ಇಷ್ಟು ವರ್ಷದ ಸಾಧನೆಗೂ…. ಮನ್ನಣೆ ಇಲ್ವಾ? ಆಗ ನಾಗೇಶ ನೊಂದು ನುಡಿದರು. ನಾನು ಅರ್ಜಿ ಒಂದನ್ನು ಕೊಟ್ಟೆ. ಅದೇ ಪ್ರಮಾದವಾಯಿತೇನೋ ಎಂದು ಅನ್ನಿಸಿತು. ಆತ್ಮ ಸಾಕ್ಷಿ ಇದ್ದವರು ಹಾಗೆ ಮಾಡಬಾರದು. ಆದರೆ ವ್ಯವಸ್ಥೆ ಎಲ್ಲವನ್ನೂ ಮಾಡಿಸುತ್ತದೆ ನೋಡಿ. ಆದರೆ ನಾನು ಅಷ್ಟು ಕೆಲಸ ಮಾಡಿದ್ದೇನೆ. ಅರ್ಹತೆ ಇದೆ ಎಂದು ನನಗೆ ಅನ್ನಿಸಿದಾಗಲೇ ನಾನು ಅರ್ಜಿ ಹಾಕಿದ್ದು. ಆದರೆ ಲಾಬಿ ಮಾಡಲು ಹೋಗಲಿಲ್ಲ. ರಂಗ ಸ್ನೇಹಿತರೂ ಬೆಂಬಲಿಸಿದರು. ಆದ್ರೆ ಮಂತ್ರಿ ಮಾನ್ಯರ ಮನೆಗೆ ನಾನು ಹೋಗಲಿಲ್ಲ ಎಂಬುದೇ ನನಗೆ ಸಮಾಧಾನ.
ಅವರ ಮಾತಿನಲ್ಲಿ ಸಮಾಧಾನವಿತ್ತು. ಅಷ್ಟರಲ್ಲಿ ವೇಟರ್ ಬಂದ. ಅವರೇ ಆರ್ಡರ್ ಮಾಡಿದರು. ಅದೇ ಹೊತ್ತಿಗೆ ಆಚೆ ಟೇಬಲ್ ಬಳಿ ನಮ್ಮನ್ನೇ ದುರುಗುಟ್ಟಿ ನೋಡುತ್ತಿದ್ದ ಅಜಮಾಸು ಮೂವತೈದರ ಆಸು ಪಾಸಿನ ವ್ಯಕ್ತಿಯೊಬ್ಬ ಎದ್ದು ಬಳಿ ಬಂದ. ನೇರವಾಗಿ ನಾಗೇಶ್ ಹತ್ತಿರ ನಿಂತು ಕೈಮುಗಿದ. ಅವರಿಗೆ ಅಚ್ಚರಿ. ನನಗೆ ಯಾರೋ ಪರಿಚಯದವನು ಇರಬೇಕು ಎಂದು ಅನಿಸಿತು.
”ಸರ್ರ… ನಾನ್ರೀ…. ಯಾಕ? ನೆನಪಾಗಲಿಲ್ಲರೀ. ನಿಮ್ಮ ಬಾಜೂನ ಕುಂತಿದ್ನೆಲರೀ ಮೊನ್ನೆ” ಅಂದ. ನಾಗೇಶ್ ಪಿಳ್ ಪಿಳ್ ಕಣ್ಣು ಬಿಟ್ಟರು.
”ಎಲ್ಲಿ !… ಯಾವಾಗ… ! ಎಲ್ಲಿ ನನ್ನ ಬಾಜೂ ಕೂತಿದ್ರಿ? ಗೊತ್ತಾಗಲಿಲ್ಲ” ಎಂದೂ ಅಂದರು.
”ಅಽಽರೀಪಾ. ರಾಜ್ಯೋತ್ಸವ ಪ್ರಶಸ್ತಿ ದಿನಾ. ವೇದಿಕೆ ಮ್ಯಾಲ ನಿಮ್ಮ ಜೋಡೀನ ಕುಂತಿದ್ನೀ. ನೀಮ್ಮ ಜೋಡೀನ ಮಾನ್ಯ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡಕೊಂಡ್ನೆಲ್ಲ. ದುರುಗಣ್ಣ ಪಡಸಾಲಿ [ಹೆಸರು ಬದಲಿಸಲಾಗಿದೆ] ಅಂತ ನನ್ನ ಬಗ್ಗೆ ವರ್ಣನಾ ಮಾಡಿದ್ರಲ್ಲರೀ ಮೈಕಿನಾಗ. ನೀವು ತಗೊಂಡ ಪ್ರಶಸ್ತೀನ ನಾನೂ ತಗೊಂಡೆ ನೋಡ್ರಿ” ಅಷ್ಟು ಹೇಳಿದ ಆತ ನಾಗೇಶರ ಪ್ರತಿಕ್ರಿಯೆಗೂ ಕಾಯದೆ ಅವರಿಗೆ ಹಸ್ತ ಲಾಘವ ಕೊಟ್ಟ. ಅಷ್ಟಕ್ಕೇ ಬಿಡದೆ ”ನಾನೂ- ನೀವೂ ಈಗ ರಾಜ್ಯ ಪ್ರಶಸ್ತಿ ವಿಜೇತರು. ಹೊಡೀರಿ ಹಲಗಿ” ಅಂದು ಬಿಟ್ಟ. ನಾಗೇಶರ ತಣ್ಣಗಿದ್ದ ಕೋಪದ ಹಾವು ಬುಸ್ ಅನ್ನಲು ಸುರು ಮಾಡಿತು. ಅದನ್ನು ಗುರುತಿಸಿದ ನಾನು ಆ ವ್ಯಕ್ತಿಗೆ ಕೇಳಿದೆ. ”ಯಾವ ಪ್ರಾಕಾರದಲ್ಲಿ ನಿಮಗೆ ಪ್ರಶಸ್ತಿ ಬಂತು?” ”ರಂಗಭೂಮೀರಿ. ನಾಟಕ ಪ್ರಾಕಾರದೊಳಗ” ಈಗ ಸುಸ್ತಾಗುವ ಸರತಿ ನನ್ನದು. ಇನ್ನೂ ನಲವತ್ತೂ ದಾಟಿಲ್ಲ. ಉತ್ತರ ಕರ್ನಾಟಕದಲ್ಲಿ ರಂಗಭೂಮಿಗಾಗಿ ಜೀವಮಾನವನ್ನೇ ತೇಯ್ದ ಅನೇಕ ಕಲಾವಿದರು ಮೂಲೆಗುಂಪಾಗಿದ್ದಾರೆ. ಒಪ್ಪೊತ್ತು ಊಟಕ್ಕೂ ಗತಿಯಿಲ್ಲದೆ ಒದ್ದಾಡುತ್ತಿದ್ದಾರೆ. ಅಂಥವರನ್ನು ಈ ಪ್ರಶಸ್ತಿಯನ್ನು ಕೊಡುವವರು ಗಮನಿಸುವುದಿಲ್ಲವೆ?
”ಏನು? ರಂಗಭೂಮಿ? ದುರುಗಣ್ಣನವರೇ… ರಂಗಭೂಮಿಯಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ದೀರಿ. ನೀವೇನು ನಟರಾ?ನಿರ್ದೇಶಕರಾ? ಸಂಘಟಕರಾ? ಏನು ನೀವು. ನಿಮ್ಮ ಬಗ್ಗೆ ನಾನು ಎಲ್ಲೂ ಕೇಳಿಲ್ಲ” ಅಂದರು ನಾಗೇಶ. ಅವರ ದನಿಗೆ ತುಸು ಗಲಿಬಿಲಿಗೊಂಡ ಆ ವ್ಯಕ್ತಿ- ”ಛೇ ನಿಮ. ಅವೆಲ್ಲಾ ಯಾಕ ಬೇಕರೀ. ಮೂರು ಚುನಾವಣೆಯೊಳಗ ಓಡಾಡಿ ಅವರ ಕೆಲಸಾ ಮಾಡೇನಿ. ಈ ಸರತಿ ಅವ್ರು ಇದನ್ನ ಕೊಡಿಸದಿದ್ದರ ನಾ ಬಿಡತಿದ್ನೇನು. ಊರೊಳಗ ಕಾಲು ಹಾಕೂದಕ್ಕ ಬಿಡತಿರಲಿಲ್ಲ. ಅಂಥಾ ಸೂಳೇಮಗಾ ಅದೇನ್ರೀ ನಾ”
ಈಗ ನಾಗೇಶ ದೂರ್ವಾಸರಾದರು. ಥಟ್ಟನೇ ಮೇಲೆದ್ದು ಆರ್ಡರ್ ತಗೆದುಕೊಳ್ಳಲು ಬಂದಿದ್ದ ಮಾಣಿಗೆ ”ಒಂದ್ನಿಮಿಷ ನಿಲ್ಲು” ಅಂದರು. ಕೂಡಲೇ ತಮ್ಮ ಕಾಲಿನ ಹಳೆಯ ಚಪ್ಪಲ್ಲನ್ನು ಕೈಗೆ ತಗೆದುಕೊಂಡರು. ಆ ಪ್ರಶಸ್ತಿ ವಿಜೇತ ಪಡಸಾಲಿ ಬೆರಗಿನಿಂದ ನೋಡುತ್ತಿರುವಾಗಲೇ ಪಟಪಟನೇ ಚಪ್ಪಲಿಯಿಂದ ಕೆನ್ನೆಗೆ ಹೊಡೆದುಕೊಂಡು ಬಿಟ್ಟರು. ಮಾಣಿ ಸಮೇತ ನಾನೂ ಗಾಬರಿಯಾದೆ. ”ನಿಮ್ಮಂಥವರ ಜೊತೆ ನನಗೂ ನಾಟಕಕ್ಕಾಗಿ ಪ್ರಶಸ್ತಿ ಕೊಟ್ರಲ್ಲ ಅವ್ರು. ಅದಕ್ಕೆ ಹೊಡೆದುಕೊಂಡೆ. ಆಯ್ತು ನೀವಿನ್ನು ಹೋಗಿ ಸ್ವಾಮಿ” ಎಂದು ಅವನನ್ನು ಕಳಿಸಿ ಬಿಟ್ಟರು. ಆತ ಪೆಚ್ಚು ಮೋರೆ ಹಾಕಿಕೊಂಡು ಭಯದಿಂದಲೇ ಹೋದ. ನಂತರ ಮಾಣಿಗೆ ”ಎರಡು ಜ್ಯೂಸು ಕೊಡಿ. ಊಟ ಹೇಳ್ತೀನಿ” ಅಂದು ತಮ್ಮನ್ನು ಸುಧಾರಿಸಿಕೊಂಡರು. ನಿಧಾನವಾಗಿ ನಾನು ಕೇಳಿದೆ. ”ಏನ್ ನಾಗೇಶ್ ಸಾರ್. ಇಷ್ಟೊಂದು ಕೋಪ….?”
”ಇಲ್ಲ ಶೇಖರ್. ಕೋಪ ಅಲ್ಲ ಅದು ದುಃಖ. ಇವ್ನು ರಂಗ ಭೂಮಿಗೆ ಏನೂ ಮಾಡಿಲ್ಲ. ಮಾಡಿದ್ದು ಪಕ್ಷದ ಸೇವೆ. ಇವ್ನಿಗೆ ರಂಗಭೂಮಿ ಹೆಸರಲ್ಲಿ ಪ್ರಶಸ್ತಿ. ನಾನು ನಲವತೈದು ವರ್ಷ ಕೆಲ್ಸ ಮಾಡೀದೀನಿ. ನನಗೂ ಅವ್ನಿಗೂ ಒಂದೇ ತಕ್ಕಡಿ. ಯಾವ ನ್ಯಾಯ ಇದು? ಪ್ರಶಸ್ತಿ ಖುಶಿ ಕರಗೋಯ್ತು” ಅಂದರು ಖೇದದಿಂದ. ನಾನೇ ಸಮಾಧಾನಿದೆ. ‘ಅರ್ಹರಿಗೆ ಸಿಗಬೇಕಾದ ಪ್ರಶಸ್ತಿಗಳನ್ನು ದೋಚುತ್ತಾರಲ್ಲ ಇವ್ರು. ನಾಯಿಗಳು’. ಎಂದರು. ನಂತರ ಮಾಮೂಲಿನಂತೆ ಊಟ ಮಾಡಿದೆವು. ನಂತರ ಇಬ್ಬರೂ ಬಸ್ಸು ಹತ್ತಲು ಮಾರ್ಕೆಟ್ ಕಡೆ ನಡೆದವು.
ಲೇಖನ : ಹೂಲಿಶೇಖರ (ನಾಟಕಕಾರರು, ಚಿತ್ರ ಸಂಭಾಷಣಕಾರರು)