ಕಲೆ ಸಂಸ್ಕೃತಿ, ಆಚಾರ ವಿಚಾರ ಯಾವುದೇ ಇರಲಿ ತಲೆ ತಲೆಮಾರುಗಳವರೆಗೂ ಕೊಂಡೊಯ್ಯುವುದು ಸಾಹಿತ್ಯ.ಪದಗಳ ಮೂಲಕವೇ ಹೆಣ್ಣನ್ನು ಸಾರ್ವಜನಿಕವಾಗಿ ಬೆತ್ತಲಾಗಿಸುವ ಕೀಳು ಮನೋಭಾವ ನಿಜಕ್ಕೂ ಅಪಾಯಕಾರಿ ಬೆಳವಣಿಗೆ.ಲೇಖಕಿ ಗೀತಾಂಜಲಿ ಎನ್ ಎಮ್ ಅವರ ಹೆಣ್ಣಿನ ಕುರಿತಾದ ಚಿಂತನ ಲೇಖನವನ್ನು ತಪ್ಪದೆ ಓದಿ…
ಹೆಣ್ಣು ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿರುವುದು ಸತ್ಯ. ಆದರೆ ಈ ಶೋಷಣೆಯ ಕಥೆಗಳು ಸಾಹಿತ್ಯದಲ್ಲಿ ಮೂಡಿಬಂದಾಗ, ಕೆಲವೊಮ್ಮೆ ಅವು ಆಕೆಯ ಧ್ವನಿಯಾಗುವುದಕ್ಕಿಂತಲೂ ಓದುಗರನ್ನು ಆಕರ್ಷಿಸುವ ‘ಸಾಮಗ್ರಿ’ಯಾಗಿ ಪರಿಣಮಿಸುತ್ತವೆ. ಮೊದಲೆಲ್ಲಾ ಕಣ್ಣೀರು, ನೋವು, ಹಿಂಸೆ, ಕಷ್ಟ, ಇವುಗಳನ್ನೆಲ್ಲಾ ಹೆಚ್ಚು ಮಸಾಲೆ ಹಾಕಿ ಬರೆದು, ಓದುಗರ ಮನಸ್ಸನ್ನು ಸೆಳೆಯಲು ಪ್ರಯತ್ನಿಸುವ ಪ್ರವೃತ್ತಿ ಇತ್ತು.
ಆದರೆ ಈಗ ಕಾಲ ಮೀರಿದಂತೆ ಮಿತಿಗಳೂ ಮಿತಿ ಮೀರುತ್ತಿರುವುದು ಸಮಾಜದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿ ಪ್ರತೀ ಹೆಣ್ಣನ್ನು ಅಣುಕಿಸುತ್ತಿದೆ. ಸಾಹಿತ್ಯದ ಹೆಸರಿನಲ್ಲಿ ಕನಿಷ್ಠ ಪದಗಳ ಮೂಲಕ ಹೆಣ್ಣನ್ನು ಬೆತ್ತಲಾಗಿಸುತ್ತಿರುವುದು ಹೆಣ್ಣಿನ ಗೌರವಕ್ಕೆ ಚ್ಯುತಿ ತರುವುದರ ಜೊತೆಗೆ ದುಡ್ಡಿಗಾಗಿ ಹೆಣ್ಣನ್ನು ಬಂಡವಾಳವನ್ನಾಗಿ ಉಪಯೋಗಿಸಿಕೊಳ್ಳುತ್ತಿರುವ ಸಮಾಜದ ಹೀನ ಸಂಸ್ಕೃತಿಗೆ ಸಾಕ್ಷಿಯಾಗಿದೆ.
ಸಾಹಿತ್ಯ ಎಂದರೆ ಅದು ಪೂಜನೀಯ. ಅದಕ್ಕೊಂದು ಗೌರವವಿದೆ. ಕಲೆ ಸಂಸ್ಕೃತಿ, ಆಚಾರ ವಿಚಾರ ಯಾವುದೇ ಇರಲಿ ತಲೆ ತಲೆಮಾರುಗಳವರೆಗೂ ಕೊಂಡೊಯ್ಯುವುದು ಸಾಹಿತ್ಯ. ಇಂತಹ ಪವಿತ್ರವಾದ ಸಾಹಿತ್ಯದ ಮೂಲಕ ಹೆಣ್ಣಿನ ದೇಹವನ್ನು ‘ಆಕರ್ಷಕ ವಸ್ತು’ಯಾಗಿ ಚಿತ್ರಿಸುವುದು, ಸೃಜನಾತ್ಮಕ ಕಲೆಯಲ್ಲ. ಇದು ಒಂದು ರೀತಿಯ ಸಂಸ್ಕೃತಿಯ ಕುಸಿತ. ಪದಗಳ ಮೂಲಕವೇ ಹೆಣ್ಣನ್ನು ಸಾರ್ವಜನಿಕವಾಗಿ ಬೆತ್ತಲಾಗಿಸುವ ಕೀಳು ಮನೋಭಾವ ನಿಜಕ್ಕೂ ಅಪಾಯಕಾರಿ ಬೆಳವಣಿಗೆ.
ಹೆಣ್ಣು ಎಂದರೆ ಕೇವಲ ದೇಹವಲ್ಲ, ಆಕೆ ಒಂದು ಮನಸ್ಸು, ಒಂದು ವ್ಯಕ್ತಿತ್ವ, ಒಂದು ಚೈತನ್ಯ. ಆದರೆ ಕೆಲ ಬರಹಗಳಲ್ಲಿ ಆಕೆಯ ಚಿಂತನೆ, ಕನಸು, ಅವಳ ಸಾಧನೆಗಳನ್ನೆಲ್ಲ ಬದಿಗಿಟ್ಟು, ದೇಹವನ್ನೇ ಕೇಂದ್ರವಾಗಿಸಿ ಚಿತ್ರಿಸಲಾಗುತ್ತದೆ. ಇದರಿಂದ ಯುವ ಜನಾಂಗದ ಮನಸ್ಸಿನಲ್ಲಿ ಮೇಲೆ ಹೆಣ್ಣಿನ ಬಗ್ಗೆ ತಪ್ಪಾದ ದೃಷ್ಟಿಕೋನ ರೂಪುಗೊಳ್ಳುತ್ತದೆ.
ಮೊದಲೇ ಹೆಣ್ಣೆಂದರೆ ತಾತ್ಸಾರ, ಶೋಷಣೆ, ಅತ್ಯಾಚಾರ, ಲೈಂಗಿಕ ಕಿರುಕುಳ ಇತ್ಯಾದಿಗಳು ನಿತ್ಯವೂ ನೆಡೆಯುತ್ತಿರುವ ಬೆನ್ನಲ್ಲೇ ಇಂಥ ಕೀಳು ಮಟ್ಟದ ಸಾಹಿತ್ಯ ಮತ್ತಷ್ಟು ಪ್ರಚೊದನೆಗೆ ದಾರಿ ಮಾಡಿಕೊಡುವುದರಲ್ಲಿ ಸಂಶಯವಿಲ್ಲ.
ನಿನ್ನೆ ಮೊನ್ನೆಯಿಂದ “ಸೆರಗು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರಿಗೆ ಅದು catchy, bold, modern ಅನ್ನಿಸಬಹುದು, ಆದರೆ
ಹೆಣ್ಣುಮಕ್ಕಳಿಗೆ ಇದು ಅಸಹ್ಯ, ಅವಮಾನಕಾರಿ ಎನ್ನಿಸುತ್ತದೆ. ಆದರೆ ಈ ಗದ್ದಲದ ಮಧ್ಯೆ ಕೇಳಬೇಕಾದ ಮುಖ್ಯ ಪ್ರಶ್ನೆ ಈ ಹಾಡು ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು ಇಷ್ಟೇ ಎಂದು ತೋರಿಸುತ್ತಿದೆಯೋ? ಅಥವಾ ಆಕೆಯ ಮೈಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ದುಡ್ಡು ಬಾಚಿಕೊಳ್ಳುತ್ತಿದೆಯೋ?.
‘ಸೆರಗು’ ಎಂಬ ಪದವೇ ಸ್ವತಃ ಹೆಣ್ಣಿನ ವಸ್ತ್ರ, ಗೌರವ, ಪೂಜ್ಯ, ಲಜ್ಜೆಯ ಸಂಕೇತವಾಗಿ ಪರಿಗಣಿಸಲಾಗಿದೆ. ಪ್ರತೀ ಮಕ್ಕಳ ಭರವಸೆ ಪ್ರೀತಿ, ಅಭಯ, ಮಮತೆಯ ಮಡಿಲು ಸೆರಗು
ಅದೊಂದು ಭಾವನಾತ್ಮಕ ನಂಟು. ‘ಸೀರೆಯೂ ಒಂದು ಭಾರತೀಯ ಸಂಸ್ಕೃತಿ’ ಇಲ್ಲಿ ಸೀರೆಗೆ ವಿಶೇಷ ಮಹತ್ವ ಇದೆ. ತಲೆ ಮೇಲೆ ಸೇರುಗು ಹಾಕಿಕೊಳ್ಳುವುದು ಮರ್ಯಾದೆ ಮತ್ತು ಗೌರವದ ಸಂಕೇತ. ಆದರೆ ಈ ಹಾಡಿನಲ್ಲಿ ಅದೇ ಪದವನ್ನು ಬಳಸಿಕೊಂಡು ಅದೇ ಸೆರಗನ್ನು ಸರಿಸು ಎಂದು ಹೆಣ್ಣಿನ ದೇಹವನ್ನು ಕೆಟ್ಟದಾಗಿ ಚಿತ್ರಿಸುವ, ಕೆಟ್ಟದಾಗಿ ಗಮನ ಸೆಳೆಯುವ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಕೇವಲ ಒಂದು ಹಾಡು ಅಲ್ಲ ಇದು ಒಂದು ಕೀಳು ಮನೋಭಾವದ ಕೀಳು ಅಭಿರುಚಿಯ ಪ್ರತಿಬಿಂಬ.
ಭಾಷೆ, ನೆಲ, ಜಲದ ಸೊಗಡು ಗೊತ್ತಿಲ್ಲದವರನ್ನು ಕರೆತಂದು ದುಡ್ಡಿಗಾಗಿ ಐಟಂ ಸಾಂಗ್ ಹೆಸರಿನಲ್ಲಿ ಸಾಹಿತ್ಯವನ್ನು ದುರುಪಯೋಗ ಪಡಿಸಿಕೊಳ್ಳುವುದು, ಹೆಣ್ಣಿನ ಮಾನ, ಗೌರವ ವ್ಯಕ್ತಿತ್ವವನ್ನು ಮರೆಮಾಡಿ, ದೇಹವನ್ನೇ ಮುಂದಿಟ್ಟುಕೊಂಡು ಕಳಪೆ ಸಾಹಿತ್ಯದ ಮೂಲಕ ಆಕರ್ಷಿಸುವುದು, ಹಣಮಾಡುವುದು ಕಲೆ ಆಗುತ್ತದೆಯಾ? ಹಾಡಿನ ಮೂಲಕ ತೋರಿಸುವ ಆ ಹೆಣ್ಣು ಬೇರೆ ಮನೆ ಮಗಳೇ ಇರಬಹುದು ಆದರೆ ಎಲ್ಲಾ ಹೆಣ್ಣಿನ ಮಾನ ಒಂದೇ ಅಲ್ಲವೇ, ಎಲ್ಲರೂ ಅದೇ ಸೀರೆಯ ಮಾಡಿಲ್ಲಲ್ಲಿಯೇ ಅಲ್ಲವೇ ಬೆಳೆದಿರುವುದು.
ಮನೋರಂಜನೆ, ಕಲೆ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಹೆಣ್ಣಿನ ಮೇಲಿನ ಶೋಷಣೆಯನ್ನು ಸಾಮಾನ್ಯಗೊಳಿಸಲಾಗುತ್ತಿದೆಯಾ? ನಾವು ಕಲೆಯನ್ನು ನೋಡುತ್ತಿದ್ದೀವಾ? ಅಥವಾ ಮಾರುಕಟ್ಟೆಗೆ ಸಿದ್ಧವಾದ ಹೆಣ್ಣಿನ ರೂಪವನ್ನಾ? ಕಲೆ ಎಂದರೆ ಪ್ರಶ್ನೆ ಕೇಳುವುದು, ಚಿಂತೆ ಹುಟ್ಟಿಸುವುದು, ಅವಮಾನ ಮಾಡುವುದಲ್ಲ. ಕಲೆ ಎಂದರೆ ಗೌರವ ಅದು ನಮ್ಮ ಸಂಸ್ಕೃತಿಯ
ಪ್ರತೀಕ, ಸಕರಾತ್ಮಕ ಚಿಂತನೆಯ ದಾರಿ. Trend ಅನ್ನೋ ಹೆಸರಿನಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ.
ಸೆರಗು ಕಿತ್ತು ಹಾಕಿಸಿದರೆ ನಿಮಗೆ ದುಡ್ಡು ಬರಬಹುದು ಗೌರವ ಖಂಡಿತ ಬರಲಾರದು. ಹೆಣ್ಣನ್ನು ಹಾಡಿನ ಸಾಲು ಮಾಡಬೇಡಿ ಬದಲು ಅವಳ ತ್ಯಾಗ ಹಾಗೂ ಕೊಡುಗೆಯನ್ನು ಇತಿಹಾಸದ ಸಾಲಾಗಿ ಬರೆಯಿರಿ. ಇದು ಒಂದು ಹಾಡಾ? ಅಥವಾ ಹೆಣ್ಣಿನ ಗೌರವದ ಹರಾಜಾ?ಹೆಣ್ಣಿನ ಸೆರಗು ಅನ್ನೋದು ಒಂದು ಗೌರವದ ಸಂಕೇತ. ಆದರೆ ಇವತ್ತು ಅದನ್ನ ‘attention’ ಪಡೆಯೋ ಸಾಧನವಾಗಿಸಿರುವುದು ಎಷ್ಟರ ಮಟ್ಟಿಗೆ ಸರಿ.
ಹೆಣ್ಣಿನ ದೇಹವನ್ನು ಸಾಲು ಸಾಲಾಗಿ ವರ್ಣಿಸಿ, ಅದನ್ನ ‘bold content’ ಅಂತ ಕರೆಯುವುದು ಮತ್ತು ‘bold content’ ಹೆಸರಿನಲ್ಲಿ ತಮ್ಮ ಕೆಟ್ಟ ಉದ್ದೇಶವನ್ನು ಮೆರೆಮಾಚುವುದು ಎಷ್ಟರ ಮಟ್ಟಿನ ನ್ಯಾಯ?. ಇದು bold ಅಲ್ಲ cheap, ಇದು art ಅಲ್ಲ ಇದು exploitation. ಒಂದು ಹಾಡಿನಲ್ಲಿ ಹೆಣ್ಣಿನ ಕನಸುಗಳು ಸಾಲುಗಳು ಆಗುವುದಿಲ್ಲವಾ? ಆಕೆಯ ಸಾಧನೆಗಳು lyrics ಆಗೋದಿಲ್ಲವಾ? ಯಾಕೆ ಅವಳ ದೇಹವೇ ನಿಮ್ಮ content ಅಗಬೇಕಾ?
ಇದು ಕೇವಲ ಒಂದು ಹಾಡಿನ ವಿಷಯ ಅಲ್ಲ. ಇದು ಒಂದು dangerous mindset. ಇಂದು ಹಾಡುಗಳಲ್ಲಿ ಬರುತ್ತದೆ. ನಾಳೆ ನಿತ್ಯ ಬದುಕಿನಲ್ಲೂ normal ಆಗುತ್ತದೆ. ಕಲೆ ಇಲ್ಲಿ ಕೊಲೆಯಾಗುತ್ತಿದೆ. ಇಲ್ಲಿ ಚಪ್ಪಾಳೆ ತಟ್ಟುತ್ತಿರುವುದು ಕಲೆಗಲ್ಲ ಹೆಣ್ಣಿನ ಶೋಷಣೆಗೆ, ಅವಮಾನಕ್ಕೆ ಅನ್ನುವುದು ನೆನಪಿರಲಿ.
- ಗೀತಾಂಜಲಿ ಎನ್ ಎಮ್ – ಕೊಡಗು.
