ಖ್ಯಾತ ಹಿರಿಯ ಪತ್ರಕರ್ತ ಕಾಮರೂಪಿ ಅವರಿಗೆ ಅಕ್ಷರ ನಮನ…

ಖ್ಯಾತ ಸಾಹಿತಿ ‘ಕಾಮರೂಪಿ’ ಎಂಎಸ್​​​​ ಪ್ರಭಾಕರ ಅವರಿಗೆ ಅಕ್ಷರನಮನ, ಕಾಮರೂಪಿ ಅವರು ವೃತ್ತಿ ಜೀವನದಲ್ಲಿ ಇಂಗ್ಲಿಷ್ ಅಧ್ಯಾಪರಾಗಿದ್ದರು ಮತ್ತು ಇಂಗ್ಲಿಷ್ ಪತ್ರಿಕೆಯಲ್ಲಿ ಸ್ವಲ್ಪವರ್ಷಗಳ ಕಾಲ ದುಡಿದು, ಸೃಜನಶೀಲ ಬರವಣಿಗೆಯನ್ನಾಗಿ ಆಯ್ದುಕೊಂಡಿದ್ದು ಕನ್ನಡ. ಅವರ ಪೂರ್ತಿ ಹೆಸರು ಮೋಟನಹಳ್ಳಿ ಸೂರಪ್ಪ ಪ್ರಭಾಕರ್. ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರ ನೆನಪಿನಗುಚ್ಛದಲ್ಲಿ ‘ಕಾಮರೂಪಿ’ ಮುಂದೆ ಓದಿ…

ಕಾಮರೂಪಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ ‘ಕಾಮರೂಪಿ’ ಎಂ.ಎಸ್.ಪ್ರಭಾಕರ್ ಇಂದು ನಮ್ಮನ್ನು ಅಗಲಿದ್ದಾರೆ. ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಎಂಬ ನವ್ಯ ಕಥಾಸಂಕಲನ, ‘ಕುದುರೆ ಮೊಟ್ಟೆ’ ಮತ್ತು ‘ಅಂಜಿಕಿನ್ನ್ಯಾತಕಯ್ಯ’ ಎಂಬ ಅಸ್ತಿತ್ವವಾದಿ ನವ್ಯ ಕಾದಂಬರಿಗಳನ್ನು ನೀಡುವ ಮೂಲಕ ಕನ್ನಡದಲ್ಲಿ ತಮ್ಮದೇ ವ್ಯಕ್ತಿವಿಶಿಷ್ಟ ಛಾಪು ಮೂಡಿಸಿದವರು.

ತುಮಕೂರಿನಲ್ಲಿ 1990 ರಲ್ಲಿ ತುಮಕೂರಿನ ಎಚ್ಎಂಟಿ ಗಡಿಯಾರ ಕಾರ್ಖಾನೆಯ ನೌಕರರು ಆಯೋಜಿಸಿದ್ದ ನಾಟಕ ಸ್ಪರ್ಧೆಯಲ್ಲಿ ಕಾಮರೂಪಿಯವರ ‘ಕುದುರೆ ಮೊಟ್ಟೆ’ ಕಾದಂಬರಿಯ ರಂಗರೂಪ ಪ್ರದರ್ಶನಕ್ಕೆ ಬಹುಮಾನ ಬಂದಿತ್ತು. ಆ ನಾಟಕ ಪ್ರದರ್ಶನವನ್ನು ನಾನು ನೋಡಿದಾಗ ಮೊದಲ ಸಲ ‘ಕಾಮರೂಪಿ’ ಎಂಬ ಹೆಸರು ನನ್ನ ಕರ್ಣಪಟಲದ ಮೇಲೆ ಬಿದ್ದು ಹೃದಯದಲ್ಲಿ ಅಚ್ಚಾಗಿತ್ತು.

2017 ರಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರೊಂದಿಗೆ ನಾನು ಕೋಲಾರದಲ್ಲಿದ್ದ ಕಾಮರೂಪಿಯವರ ಪೂರ್ವಿಕರ ಪುರಾತನ ಮನೆಗೆ ಹೋಗಿ ಆಪ್ತವಾಗಿ ಭೇಟಿಯಾಗಿ ಸಾಹಿತ್ಯ, ರಾಜಕಾರಣ, ಪತ್ರಿಕೆ ಮುಂತಾದ ಅನೇಕ ಸಂಗತಿಗಳನ್ನು ಕುರಿತು ನಾವು ಸುದೀರ್ಘವಾಗಿ ಚರ್ಚಿಸಿದ ನೆನಪುಗಳು ಹಸಿರಾಗಿವೆ. ಮುಂದೊಮ್ಮೆ ಕೋಲಾರದ ಆದಿಮ‌ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಲಾಗಿದ್ದ ವಿಚಾರ ಸಂಕಿರಣದಲ್ಲಿ ನಾನು, “ಸಮಾಜಮುಖಿ ಹೋರಾಟಗಳು ಮತ್ತು ಸವಾಲುಗಳು” ಎಂಬ ವಿಷಯವನ್ನು ಕುರಿತು ಮಾತಾಡಿದಾಗ ಕಾಮರೂಪಿಯವರು ನನ್ನ ಮಾತನ್ನು ಅತ್ಯಂತ ಶ್ರದ್ಧೆಯಿಂದ ಆಲಿಸಿದರು.

ಫೋಟೋ ಕೃಪೆ : google

ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ಅವರ ಸಂಬಂಧಿಕರ ಮನೆಯಲ್ಲಿ ಆಗಾಗ ಉಳಿದುಕೊಳ್ಳುತ್ತಿದ್ದ ಕಾಮರೂಪಿಯವರನ್ನು ನಾನು ಅಲ್ಲಿ ಭೇಟಿಯಾದದ್ದೇ ಹೆಚ್ಚು. ಕುವೆಂಪು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ ಅವರ ಮಾರ್ಗದರ್ಶನದಲ್ಲಿ ಕಾಮರೂಪಿ ಅವರ ಸಾಹಿತ್ಯ ಕುರಿತು ಸಂಶೋಧನೆ ಕೈಗೊಳ್ಳಲು ಒಬ್ಬ ಸಂಶೋದನಾರ್ಥಿಯನ್ನು ಹುಡುಕಿ ಒಪ್ಪಿಸಿ ಕರೆತಂದು ಕಾಮರೂಪಿಯವರ ಎದುರಿಗೆ ನಿಲ್ಲಿಸಿದ್ದೆ. ಕಾಮರೂಪಿ ಕೂಡಾ ಸಮ್ಮತಿಸಿದ್ದರು. ಆ ಸಂಶೋಧನಾರ್ಥಿ ಕಾಮರೂಪಿಯವರ ಜೊತೆಯಲ್ಲಿ ಎರಡ್ಮೂರು ಭೇಟಿಗಳಲ್ಲಿ ಅವನ ಅಲ್ಪಮತಿಯನ್ನು ಪ್ರದರ್ಶಿಸಲು ಹೋಗಿ, ಅವನ ವಿರುದ್ಧ ಕಾಮರೂಪಿಯವರು ಜಮದಗ್ನಿಯಂತೆ ಸಿಡಿದು “ನಿನ್ನಂಥವನು ನನ್ನ ಸಾಹಿತ್ಯ ಕುರಿತು ಪಿಎಚ್.ಡಿ ಮಾಡಿ ಕನ್ನಡಕ್ಕೆ ಆಗಬೇಕಾದ ಯಾವುದೇ ಲಾಭವಿಲ್ಲ ತೊಲಗು” ಎಂದು ಓಡಿಸಿದ್ದರು.‌ ಆ ಹುಡುಗ ಇದನ್ನೆಲ್ಲಾ ನನ್ನ ಬಳಿ ಹೇಳಿಕೊಂಡು ಕಣ್ಣೀರಾಕಿದ್ದ.

ಅದೊಂದು ದಿನ ಕಾಮರೂಪಿಯವರು ಗೌಹಾಟಿಗೆ ಹೊರಟಿದ್ದರು. ರೈಲು ಪ್ರಯಾಣ. ಯಶವಂತಪುರದ ಯಾವುದೋ ಅಪಾರ್ಟ್ಮೆಂಟಿನ ಮನೆಯಲ್ಲಿ ಕಾಮರೂಪಿಯವರು ಬಾಡಿಗೆಗೆ ನೆಲೆಸಿದ್ದರು. ಅವರೇ ಕೈಯಾರೆ ಕಾಫಿ ಕಾಯಿಸಿ ನನಗೆ ಕುಡಿಯಲು ಕೊಟ್ಟಿದ್ದರು. ತುಪ್ಪದಲ್ಲಿ ಹುರಿದ ಬಾದಾಮಿ ಮುಂತಾದ ಡ್ರೈಫ್ರೂಟ್ಸ್ ತಿನ್ನಲು ಕೊಟ್ಟು ರೈಲಿಗೆ ಹೊರಡುವ ಸಮಯ ಹತ್ತಿರಾಗುವವರೆಗೂ ನನ್ನೊಂದಿಗೆ ಮಾತಾಡುತ್ತಾ ಕೈಹಿಡಿದು ಕುಳ್ಳಿರಿಸಿಕೊಂಡರು. ಇದೆಲ್ಲವೂ ಈಗ ನೆನಪಾಗುತ್ತಿದೆ.

ಹೇಳಬೇಕಾದ ಮಾತು : ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ, ” ನೀವು ವಿಮರ್ಶಕರು ಇವತ್ತಿನ ಕವಿಗಳಿಗೆ ಹೈಪ್ ಕೊಟ್ಟು ಬರೆದು ಜನಪ್ರಿಯತೆ ತಂದುಕೊಡುತ್ತೀರಿ. ಜನಪ್ರಿಯತೆಯ ಅಮಲಿನಲ್ಲಿ ಕವಿ ಎನ್.ಕೆ.ಹನುಮಂತಯ್ಯ ತನ್ನ ಬದುಕಿನ ವಾಸ್ತವವನ್ನು ಅರಿಯದೆ ಆತ್ಮಹತ್ಯೆ ಮಾಡಿಕೊಂಡ” ಎಂದು ನನ್ನ ಮಾರ್ಗದರ್ಶಕರಾದ ಡಾ.ರಹಮತ್ ತರೀಕೆರೆಯವರಿಗೆ ಹೇಳುತ್ತಾ ನನ್ನೆದುರು ವಿಮರ್ಶಕರ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು ಕಾಮರೂಪಿ. ಇಂತಹ ನಿರ್ಭೀತ ವ್ಯಕ್ತಿತ್ವದ ಕಾಮರೂಪಿ ಎಂ.ಎಸ್ . ಪ್ರಭಾಕರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು.


  • ಡಾ.ವಡ್ಡಗೆರೆ ನಾಗರಾಜಯ್ಯ – ರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW