ಕಷ್ಟಗಳ ಸರಮಾಲೆ ತೊಟ್ಟ ಕಲಾವಿದ ಎಂ ಎಸ್ ಉಮೇಶ್

‘ಉಳ್ಳವರು ಆಡಿ, ಬೆಂಜ್ ಕಾರು ಕೊಳ್ಳುವರು,ನಾನೇನು ಮಾಡಲಿ ಬಡವನಯ್ಯ ಮೊಪೈಡ್ ಬೈಕ್ ನನ್ನ ಪಾಲಿಗೆ ಎನ್ನುವಂತೆ ಕಲಾವಿದನ ಪರಿಸ್ಥಿತಿಯನ್ನು ಕೂಗಿ ಹೇಳುತ್ತಿತ್ತು.

ಹದಿನೈದು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಸಂದರ್ಶನ ಮಾಡಲು ಬೆಳ್ಳಂಬೆಳಗ್ಗೆ ಆ ದೊಡ್ಡ ಕಲಾವಿದನ ಮನೆಯನ್ನು ಹುಡುಕಿಕೊಂಡು ಹೊರಟೆ. ಜೆಪಿ ನಗರದ ೩ ನೇಯ ಹಂತದಲ್ಲಿದ್ದ ಆ ಕಲಾವಿದನ ಮನೆಯನ್ನು ಹೇಗೋ ಪತ್ತೆ ಹಚ್ಚಿದೆ. ತೆರೆಯ ಮೇಲೆ ಒಬ್ಬ ಕಲಾವಿದನನ್ನು ನೋಡುವಾಗ ಅವರ ನೈಜ್ಯ ಬದುಕಿನಲ್ಲೂ ಹೀಗೆ ಐಷಾರಾಮಿಯಾಗಿರಬಹುದು ಎನ್ನುವ ಸಣ್ಣ ಕಲ್ಪನೆ ನೋಡುಗರ ಮನಸ್ಸಿನಲ್ಲಿ ಮೂಡಿರುತ್ತದೆ. ಅದೇ ರೀತಿ ೩೫೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಆ ಕಲಾವಿದನ ಮನೆಯ ಮುಂದೆ ಆಡಿ, ಬೆಂಜ್ ಕಾರ್ ಗಳು ಇರುತ್ತವೆ ಎಂದು ನಾನು ಅಂದುಕೊಂಡಿದ್ದೆ. ಕೊನೆ ಪಕ್ಷ ಮಾರುತಿ ೮೦೦ ಕಾರ್ ಆದರೂ ಇರುತ್ತದೆ ಎಂದು ಕೊಂಡಿದ್ದೆ.ಆದರೆ ಅದ್ಯಾವುದು ಅವರ ಮನೆ ಮುಂದೆ ಕಾಣಲಿಲ್ಲ.ಕೇವಲ ಕಂಡಿದ್ದು ಹಳೆಯ ಮೊಪೆಡ್ ಬೈಕ್ ಮಾತ್ರ. ಆ ಬೈಕ್ ಕೂಡ ಮುಂದೆ ಹೋಗಲೋ-ಬೇಡವೋ ಅನ್ನುವ ಸ್ಥಿತಿಯಲ್ಲಿತ್ತು.’ಉಳ್ಳವರು ಆಡಿ, ಬೆಂಜ್ ಕಾರು ಕೊಳ್ಳುವರು,ನಾನೇನು ಮಾಡಲಿ ಬಡವನಯ್ಯ ಮೊಪೈಡ್ ಬೈಕ್ ನನ್ನ ಪಾಲಿಗೆ ಎನ್ನುವಂತೆ ಕಲಾವಿದನ ಪರಿಸ್ಥಿತಿಯನ್ನು ಕೂಗಿ ಹೇಳುತ್ತಿತ್ತು. ಅದೆಲ್ಲವನ್ನು ನೋಡುತ್ತಾ ಹೆಜ್ಜೆ ಮುಂದೆ ಹಾಕಿದೆ. ಇನ್ನೇನು ಬಾಗಿಲ ಪಕ್ಕದಲ್ಲಿದ್ದ ಬೆಲ್ ಬಟನ್ ಒತ್ತಬೇಕು ಎನ್ನುವಷ್ಟರಲ್ಲಿ ಬಾಗಿಲು ತೆರೆದಿರುವುದನ್ನು ಗಮನಿಸಿದೆ.

ಬಾಗಿಲಲ್ಲೇ ನಿಂತು ಒಳಗೆ ಇಣುಕಿ ನೋಡಿದೆ. ಈಳಗೇ ಮಣೆ ಮೇಲೆ ಕೂತು ತರಕಾರಿ ಹೆಚ್ಚುತ್ತಿದ್ದ ಆ ಹೆಂಗಸನ್ನು ನೋಡಿ, ಆ ದೊಡ್ಡ ಕಲಾವಿದನ ಅರ್ಧಾ೦ಗಿನಿಯೇ ಇರಬೇಕೆಂದು ಊಹಿಸಿದೆ. ಹಲ್ಲು ಕಿರಿಯುತ್ತ ‘ಅಮ್ಮ ನಮಸ್ತೆ, ನಾನು ಬೆಳಿಗ್ಗೆ ಸರ್ ಗೆ ಕಾಲ್ ಮಾಡಿದ್ದೆ. ಪತ್ರಿಕೆಯೊಂದಕ್ಕೆ ಅವರ ಸಂದರ್ಶನ ಮಾಡಲು ಬಂದಿದ್ದೇನೆ. ಸರ್ ಇದ್ದಾರಾ ಅಮ್ಮ?’ ಎಂದೇ. ನಾನು ಚಪ್ಪಲಿ ತಗೆದು ಒಳಗೆ ನುಗ್ಗಿದ್ದನ್ನು ನೋಡಿ, ನಗುತ್ತಲೇ ನನ್ನ ಮುಂದೆ ಪ್ಲಾಸ್ಟಿಕ್ ಖುರ್ಚಿಯನ್ನಿಟ್ಟರು. ಮತ್ತು ಸರ್ ನನ್ನು ಕರೆಯಲು ಒಳಗೆ ಹೋದರು.

ನಾನು ಆ ಪ್ಲಾಸ್ಟಿಕ್ ಖುರ್ಚಿ ಮೇಲೆ ಕೂತು ಮನೆಯನ್ನು ಒಂದು ಸುತ್ತು ಕಣ್ಣಾಡಿಸಿದೆ. ಚಿಕ್ಕದಾದ ಹಾಲ್, ದಿನ ಲೆಕ್ಕ ಹಾಕಲು ಗೋಡೆಯ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್, ಮೂರೂ ಪ್ಲಾಸ್ಟಿಕ್ ಖುರ್ಚಿಗಳನ್ನು ಬಿಟ್ಟರೆ ಆ ಮನೆಯಲ್ಲಿ ನೋಡುವಂತದ್ದು ಏನು ಇರಲಿಲ್ಲ.ಆ ಮೇಲೆ ನನಗೆ ಭಯ ಹುಟ್ಟಿದ್ದು, ೩೫೦ ಸಿನಿಮಾ ಮಾಡಿದ್ದ ಆ ಕಲಾವಿದನ ಗತ್ತು-ಗಮ್ಮತ್ತಿನ ಮೇಲೆ. ನಾನು ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾರೆ ಎನ್ನುವ ಆತಂಕಗಳು ಶುರುವಾದವು.ಆ ಭಯದಲ್ಲೇ ಕೂತಿದ್ದೆ. ಅಷ್ಟರಲ್ಲಿ ಒಳಗಿಂದ ಬಂದ ಆ ಕಲಾವಿದ ನನ್ನ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಖುರ್ಚಿಯನ್ನು ಎಳೆದುಕೊಂಡು ಕೂತರು. ಅವರ ಜೊತೆ ಮಾತಿಗೆ ಇಳಿದ ಮೇಲೆ ತಿಳಿಯಿತು ಆ ಕಲಾವಿದ ಕೇವಲ ಪ್ರತಿಭೆಯಲ್ಲಿ ಅಷ್ಟೇ ಶ್ರೀಮಂತನಲ್ಲ, ಗುಣದಲ್ಲೂ ಅಷ್ಟೇ ಶ್ರೀಮಂತನೆಂದು. ಅಷ್ಟು ಸರಳ ಮತ್ತು ಅಷ್ಟೇ ಸ್ವಾಭಿಮಾನಿ ಕಲಾವಿದ ಅವರು.

ಇಷ್ಟೆಲ್ಲ ಹೇಳಿದ ಮೇಲೆ ಆ ಕಲಾವಿದ ಯಾರು? ಎನ್ನುವುದು ನಿಮ್ಮನ್ನು ಕಾಡುತ್ತಿರಬಹುದು. ಆ ಪ್ರಶ್ನೆಗೆ ಮೊದಲು ತೆರೆ ಎಳೆದು ಮುಂದಕ್ಕೆ ಹೋಗುತ್ತೇನೆ. ‘ಅಯ್ಯೋ… ಇವರು ಅಪಾರ್ಥ ಮಾಡ್ಕೊಬಿಟ್ರಲ್ಲ…’ ಅವರ ಸಿನಿಮಾದ ಈ ಜನಪ್ರಿಯ ಡೈಲಾಗ್ ಕೇಳಿದ ಮೇಲೆ ಆ ಕಲಾವಿದನ್ಯಾರು ಎನ್ನುವುದು ನಿಮಗೆ ಗೊತ್ತಾಗಿರಬಹುದು. ಹೌದು, ನಿಮ್ಮ ಊಹೆ ನಿಜ. ಅದೇ ನಮ್ಮ ಕನ್ನಡದ ಹೆಮ್ಮೆಯ ಹಾಸ್ಯ ಕಲಾವಿದ ಎಂ ಎಸ್ ಉಮೇಶ್.

ಮೊನ್ನೆ ಉಮೇಶ ಅವರ ಹಳೆಯ ಸಿನಿಮಾವನ್ನು ನೋಡುವಾಗ ಈ ಹಾಸ್ಯ ದೊರೆ ಈಗ ಎಲ್ಲಿದ್ದಾರೆ ? ಹೇಗಿದ್ದಾರೆ? ಎನ್ನುವ ಹತ್ತಾರು ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಒಂದು ಸಿನಿಮಾ ಗೆದ್ದಾಗ ಮಾಧ್ಯಮದವರಿಂದ ಪ್ರೇಕ್ಷಕ ವರ್ಗದವರೆಗೂ ತಿಂಗಳಾನುಗಂಟಲೇ ಆ ಸಿನಿಮಾವನ್ನು ಹೊಗಳಿ ಹೊಗಳಿ ಇಡುತ್ತಾರೆ. ಅದೇ ಸಿನಿಮಾ ಒಂದು ವರ್ಷ ಕಳೆಯುತ್ತಿದ್ದಂತೆ ಸಿನಿಮಾದ ನಾಯಕನನ್ನು ಹೊರತು ಪಡಿಸಿ ಅದರಲ್ಲಿನ ಬಹುತೇಕ ಎಲ್ಲ ಕಲಾವಿದರನ್ನು ಮರೆತು ಬಿಡುತ್ತೇವೆ. ಹೀಗೆ ಮತ್ತೆ ಹೊಸ ಸಿನಿಮಾ ಬರುತ್ತದೆ. ಮತ್ತೆ ಹೊಗಳುತ್ತೇವೆ, ಮತ್ತೆ ಮರೆಯುತ್ತೇವೆ. ಈ ಹೊಗಳಿಕೆ ಮತ್ತು ಮರೆಯುವಿಕೆಯ ಮಧ್ಯೆ ಎಷ್ಟೋ ಕಲಾವಿದರ ಶ್ರಮವನ್ನು ಸುಲಭವಾಗಿ ಮರೆತುಬಿಡುತ್ತೇವೆ.

ಹೀಗೆ ಮರೆತು ಹೋದ ಕಲಾವಿದರಲ್ಲಿ ಉಮೇಶ್ ಕೂಡ ಒಬ್ಬರು. ತಮ್ಮ ನಾಲ್ಕನೇಯ ವಯಸ್ಸಿನಲ್ಲಿ ಹಿರಣ್ಣಯ್ಯ ನಾಟಕ ಕಂಪನಿಯ ಮೂಲಕ ಬಾಲ ನಟರಾಗಿ ರಂಗಭೂಮಿಯನ್ನು ಪ್ರವೇಶಿಸಿದ ಅವರು, ಮುಂದೆ ಖ್ಯಾತ ನಾಟಕ ಕಂಪನಿಯಲ್ಲಿ ಒಂದಾಗಿದ್ದ ಗುಬ್ಬಿವೀರಣ್ಣ ಕಂಪನಿಯನ್ನು ಸೇರಿಕೊಂಡರು. ರಂಗಭೂಮಿಯಲ್ಲಿನ ಅವರ ಅಮೋಘ ಅಭಿನಯವನ್ನು ಕಂಡ ಪುಟ್ಟಣ್ಣ ಕಣಗಾಲ್ ಅವರು ಬಿ.ಆರ್.ಪಂತಲು ನಿರ್ದೇಶನದ ‘ಮಕ್ಕಳ ಸೈನ್ಯ’ ಸಿನಿಮಾಕ್ಕೆ ಉಮೇಶ ಅವರನ್ನು ಶಿಫಾರಸ್ಸು ಮಾಡಿದರು. ೧೯೬೦ ರಲ್ಲಿ ಬೆಳ್ಳಿ ಪರದೆ ಪ್ರವೇಶಿಸಿದ ಉಮೇಶ್ ಅವರು ಕೆಲವು ವರ್ಷಗಳ ಕಾಲ ಸಿನಿಮಾಗಳಲ್ಲಿ ಬಾಲನಟರಾಗಿ ನಟಿಸಿದರು. ಆದರೆ ಅವರಿಗೆ ೧೫ ವರ್ಷ ತುಂಬುತ್ತಿದ್ದಂತೆ ಸಿನಿಮಾದಲ್ಲಿ ಇವರನ್ನು ಬಾಲ ಕಲಾವಿದರನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಯಿತು. ಆಗ ಸಿನಿಮಾದಲ್ಲಿ ಅವಕಾಶಗಳು ಇವರ ಕೈ ಜಾರ ತೊಡಗಿದವು. ಆಗ ಜೀವನೋಪ್ಪಾಯಕ್ಕಾಗಿ ಮತ್ತೆ ರಂಗಭೂಮಿಯತ್ತ ಮುಖ ಮಾಡಬೇಕಾಯಿತು.ಆದರೆ ಆ ಸಮಯದಲ್ಲಿ ರಂಗಭೂಮಿಯಲ್ಲಿಯೂ ಅವಕಾಶಗಳಿಗಾಗಿ ಪೇಚಾಡುವಂತೆ ಮಾಡಿತು.ಆ ಸಂದರ್ಭದಲ್ಲಿಅವರ ಕೈ ಹಿಡಿದವರು ಅದೇ ನಿರ್ದೇಶಕ ಪುಟ್ಟಣ್ಣ ಕಣಗಾಲ್. ತಮ್ಮ ‘ಕಥಾ ಸಂಗಮ’ದಲ್ಲಿ ಅವಕಾಶ ಕೊಡುವುದರ ಮೂಲಕ ಉಮೇಶ್ ಅವರನ್ನು ಮತ್ತೆ ಸಿನಿಮಾ ರಂಗಕ್ಕೆ ಎಳೆತಂದರು.

ಹೀಗೆ ೧೯೮೦ರಲ್ಲಿ ಶುರುವಾದ ಅವರ ಬಣ್ಣದ ಬದುಕು ೨೦೦೦ ಇಸ್ವಿಯವರೆಗೂ ಪ್ರೇಕ್ಷಕರಿಗೆ ಸಾಕಷ್ಟು ಸಿನಿಮಾಗಳನ್ನೂ ಕೊಟ್ಟಿದ್ದಾರೆ. ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ. ಅವರ ನಟನೆಯ ‘ಗೋಲ್ಮಾಲ್ ಕೃಷ್ಣ’, ರಮೇಶ್ ಅರವಿಂದ ನಿರ್ದೇಶನದ ಬೊಚ್ಚು ಬಾಯಿ ಮುದುಕಿಯ ಪಾತ್ರದ ‘ವೆಂಕಟ ಇನ್ ಸಂಕಟ’ಸೇರಿದಂತೆ ಸುಮಾರು ೩೫೦ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿದ್ದಾರೆ ಮತ್ತು ಎಲ್ಲರನ್ನು ನಗಿಸಿದ್ದಾರೆ. ಅವರ ರಂಗಭೂಮಿಯಲ್ಲಿನ ಸೇವೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತುಸಿನಿಮಾದಲ್ಲಿನ ಸೇವೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಇವರಿಗೆ ನೀಡಿ ಗೌರವಿಸಲಾಗಿದೆ.

ಉಮೇಶ್ ಅವರು ಎಂದೂ ಹಣಕ್ಕಾಗಿ ಅಥವಾ ಶೋಕಿಗಾಗಿ ಸಿನಿಮಾ ಮಾಡಿದವರಲ್ಲ.ಕಲಾ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ ಅತ್ಯಂತ ಸ್ವಾಭಿಮಾನಿ ಕಲಾವಿದ. ಎದೆ ಎತ್ತರಕ್ಕೆ ಬೆಳೆದ ಮಗನ ಕಳೆದು ಕೊಂಡಾಗ ಅವರ ಬಳಿ ನಯಾ ಪೈಸೆ ಕೂಡಾ ಇರಲಿಲ್ಲ. ಆಗ ಸಹಕಲಾವಿದರು ಮಗನ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದ್ದರು. ಇದು ಉಮೇಶ ಅವರ ಅಂದಿನ ಬದುಕಿನ ಹಳೆಯ ಕಹಿ ನೆನಪುಗಳಿರಬಹುದು. ಅಷ್ಟು ದೊಡ್ಡ ಕಲಾವಿದನ ಆರ್ಥಿಕ ಪರಿಸ್ಥಿತಿ ಅಂದು ಹೇಗೆ ಇತ್ತೋ, ಹಾಗೆಯೇ ಇಂದು ಕೂಡಾ ಹಾಗೆ ಇದೆ. ಬಹುಶಃ ಈ ವಿಚಾರ ಎಷ್ಟೋ ಜನರಿಗೆ ಗೊತ್ತಿದೆಯೋ, ಇಲ್ಲವೋ?ಗೊತ್ತಿಲ್ಲ.

ಉಮೇಶ ಅವರಿಗೆ ವಯಸ್ಸಾಗಿದೆ. ವಯಸ್ಸಿನ ಜೊತೆಗೆ ಸಕ್ಕರೆ ಖಾಯಿಲೆ, ಬಿಪಿ ಇತರೆ ಕಾಯಿಲೆಗಳು ಅವರನ್ನು ಬಿಡದ ಆಪ್ತ ಗೆಳೆಯರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಚಿತ್ರರಂಗದವರನ್ನು ಕೇಳುವುದು ಒಂದೇ ಒಂದು ಮಾತು ‘ಸಿನಿಮಾಕ್ಕೆ ಕೋಟಿಗಟ್ಟಲೆ ಹಣ ಹೂಡುವಾಗ ನಮ್ಮಂತಹ ಹಸಿದ ಕಲಾವಿದನಿಗೆ ಒಂದು ಅವಕಾಶ ಕೊಡಿ. ನನ್ನ ಖಾಯಿಲೆಗೆ ಔಷಧಿ ತಗೆದುಕೊಳ್ಳಲು ಸಾಕಷ್ಟು ಹಣಬೇಕು.ಆ ದುಡ್ಡನ್ನು ನನಗೆ ಸನ್ಮಾನ ಮಾಡಿದ ಬಂದ ಹಣದಲ್ಲಿ ಭರಿಸುತ್ತಿದ್ದೇನೆ. ಆದರೆ ನನ್ನ ನೆಚ್ಚಿಕೊಂಡು ಬದುಕುತ್ತಿರುವ ನನ್ನ ಕುಟುಂಬವನ್ನು ನೋಡಿಕೊಳ್ಳಲು ನನಗೆ ಸಿನಿಮಾದಲ್ಲಿ ಅವಕಾಶ ಬೇಕು. ನಾನು ದುಡಿಯುತ್ತೇನೆ. ಅವಕಾಶ ಕೊಡಿ ಎಂದು ಒಂದು ಕಾರ್ಯಕ್ರಮದಲ್ಲಿ ಅವರ ತಮ್ಮ ಅಳಲು ಹೇಳಿಕೊಂಡಾಗ ಮುಂದೆ ಕೂತಿದ್ದ ಎಷ್ಟೋ ಪ್ರೇಕ್ಷಕರ ಕಣ್ಣುಗಳು ತೇವವಾದವು. ಇದು ಉಮೇಶ ಅವರ ಒಬ್ಬರ ನೋವಿನ ಕತೆಯಲ್ಲ,ಇವರಂತೆ ಸಾಕಷ್ಟು ಕಲಾವಿದರು ನೋವಿನಲ್ಲಿದ್ದಾರೆ. ಆಡಿ, ಬೆಂಜ್ , ವಿದೇಶ ಸುತ್ತುವ ಎಷ್ಟೋ ಐಷಾರಾಮಿ ಇಂದಿನ ಕಲಾವಿದರುಗಳು ತಮ್ಮ ಸಹ ಕಲಾವಿದರ ಕಷ್ಟಗಳನ್ನು ಆಲಿಸಬೇಕು ಮತ್ತು ಉಳ್ಳವರು ಅಂಥವರಿಗೆ ಸಹಾಯ ಮಾಡಬೇಕು.

ಬೆಳ್ಳಿತೆರೆಯಲ್ಲಿ ಎಷ್ಟೋ ವೃದ್ಧ ಕಲಾವಿದರು ತಮ್ಮ ಬದುಕಿನ ಬವಣೆಯನ್ನು ನಿರ್ವಹಿಸಲಾಗದೆ ಬೀದಿಪಾಲಾಗಿದ್ದಾರೆ. ಆಲದ ಮರ ಹಳೆಯದಾದರೂ ಅದರ ಬೇರುಗಳ ವಿಸ್ತಾರ ದೊಡ್ಡದು. ಅದರಂತೆ ಕಲಾವಿದನಿಗೆ ವಯಸ್ಸಾದರೂ ಅವರ ಅನುಭವ ದೊಡ್ಡದು. ಸಿನಿಮಾಕ್ಕೆ ಕೋಟಿಗಂಟಲೇ ಹಣ ಸುರಿಯುವಾಗ ಆ ಸಿನಿಮಾಗಳಲ್ಲಿ ಒಬ್ಬ ಕನ್ನಡದ ಹಳೆಯ ಕಲಾವಿದರಿಗೆ ಅವಕಾಶವನ್ನು ಕೊಟ್ಟರೆ ಅವರ ಬದುಕಿಗೆ ಎಷ್ಟೋ ಸಹಾಯವಾಗಬಲ್ಲದು. ಚಿತ್ರರಂಗದವರು ಅಸಹಾಯಕ ವೃದ್ಧ ಕಲಾವಿದರಿಗೆ ವೃದ್ದಾಶ್ರಮಗಳನ್ನು ಕಟ್ಟುವ ಮೂಲಕ ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬಹುದು. ತಮ್ಮಲ್ಲಿನ ಕಲಾವಿದನ ನೋವನ್ನು ಪೂರ್ತಿಭರಿಸಲಾಗದಿದ್ದರೂ, ಸ್ವಲ್ಪ ಮಟ್ಟಿಗಾದರು ಸಹಾಯ ಹಸ್ತವನ್ನು ಚಾಚಬಹುದು. ಇಲ್ಲಿ ಚಿತ್ರರಂಗದವರು ಮನಸ್ಸು ಮಾಡಬೇಕಷ್ಟೆ. ಕಲಾವಿದ ಸತ್ತ ಮೇಲೆ ನೆನೆಯುವುದಕ್ಕಿಂತ ಅವರು ಬದುಕಿದ್ದಾಗ ನೆನೆದರೇ ಎಷ್ಟೋ ನೊಂದ ಕಲಾವಿದನ ಬದುಕಿಗೆ ಆಸರೆ ಆಗಬಹುದಲ್ಲವೇ ?…

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW