ಲೇಖನ : ಶಾಲಿನಿ ಹೂಲಿ ಪ್ರದೀಪ್
ನನಗೂ ಈ ಧಾರವಾಹಿಗಳಿಗೂ ಆಗಿ ಬರೋಲ್ಲ. ನಾನು ಧಾರಾವಾಹಿಗಳ ಮೇಲೆ ಒಂದು ರೀತಿಯ ನಿಷ್ಠುರತೆಯನ್ನು ಬೆಳೆಸಿಕೊಂಡವಳು. ಅದಕ್ಕೆ ಹಲವಾರು ಕಾರಣಗಳಿದ್ದವು. ಮುಖ್ಯವಾಗಿ ಬಹುತೇಕ ಧಾರಾವಾಹಿಗಳಲ್ಲಿ ಸ್ವಂತಿಕೆ ಇಲ್ಲದಿರುವಿಕೆ. ಮರಾಠಿ – ಹಿಂದಿ ಇತರೆ ಭಾಷೆಗಳಿಂದ ಕನ್ನಡಕ್ಕೆ ತರುವ ಕತೆಗಳನ್ನು ನೋಡುವುದಕ್ಕಿಂತ ನೇರವಾಗಿ ಅದೇ ಭಾಷೆಗಳಲ್ಲಿ ನೋಡಿದರೆ ಮೂಲ ಕತೆಗೆ ಪೆಟ್ಟು ಬೀಳುವುದಿಲ್ಲ ಎನ್ನುವುದು ನನ್ನ ನಂಬಿಕೆಯಾಗಿತ್ತು. ಹೀಗೆ ಹಲವಾರು ಕಾರಣಗಳಿಂದ ನಾನು ಧಾರಾವಾಹಗಳಿಂದ ದೂರ ಉಳಿದಿದ್ದೆ.
ಆದರೆ ಈ ಹಾಳಾದ್ದು ಕೊರೋನಾ ಲಾಕ್ ಡೌನ್ ಬಂದು ನನ್ನ ಜೀವನ ಶೈಲಿಯನ್ನೇ ಉಲ್ಟಾಮ್ ಪಲ್ಲಟ ಮಾಡಿ ಬಿಟ್ಟಿದೆ. ಮತ್ತದೇ ಬೇಸರ…ಅದೇ ಸಂಜೆ… ಅದೇ ಏಕಾಂತವಾದಾಗ ಧಾರವಾಹಿ ಎನ್ನುವ ಮಾಯೆಯೊಳಗೆ ಬಿದ್ದೆ. ಇದರೊಳಗೆ ಒಮ್ಮೆ ಬಿದ್ದರೆ ಎದ್ದೇಳುವುದು ಕಷ್ಟ. ನನಗು ಹಾಗೆ ಆಯಿತು. ಇಷ್ಟು ವರ್ಷ ನೋಡಿರದದ್ದು ನಾಲ್ಕು ಜನ್ಮಕ್ಕೂ ಆಗುವಷ್ಟು ಲಾಕ್ ಡೌನ್ ನಲ್ಲಿ ಧಾರಾವಾಹಿಗಳನ್ನು ನೋಡುತ್ತಿದ್ದೇನೆ.
ಅದರ ಪರಿಣಾಮ ಒಂದಾದ ಮೇಲೊಂದರಂತೆ ಧಾರಾವಾಹಿಗಳನ್ನು ನೋಡುತ್ತಾ ಇದ್ದೇನೆ. ಈಗಿನ ಧಾರಾವಾಹಿಗೂ ಹಿಂದಿನ ಧಾರಾವಾಹಿಗೂ ಅಜಗಜಾಂತರ ವ್ಯತ್ಯಾಸಗಳನ್ನ ನಾನು ಕಂಡೆ. ಈಗಿನ ಧಾರಾವಾಹಿಗಳು ಹಿಂದಿನ ಧಾರಾವಾಹಿಗಳಂತೆ ನಾಲ್ಕು ಗೋಡೆಗಳ ಮಧ್ಯೆ ಚಿತ್ರೀಕರಣವಾಗುವುದಿಲ್ಲ. ಬದಲಾಗಿ ಅರಮನೆಯಂತಹ ಮನೆ, ಆ ಮನೆಯೊಳಗೆ ಆಳು ಕಾಳುಗಳು, ಮನೆಯ ಹೊರಗೆ ಬಿಮ್ಎಂ ಡಬ್ಲ್ಯೂ, ಬೆಂಜ್ ಐಷಾರಾಮಿ ಕಾರುಗಳು. ನಿಜ ಜೀವನದಲ್ಲಿ ಕಥಾನಾಯಕ ಇಂತಹ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾನೋ ಇಲ್ಲವೋ ಆದರೆ ತೆರೆಯ ಮೇಲಂತೂ ಅವನ ಸ್ಟೈಲ್ ಬೇರೆ, ಲುಕ್ ಬೇರೆ. ಧಾರಾವಾಹಿಯ ತುಂಬಾ ಐಶಾರಾಮಿ ದೃಶ್ಯಗಳದ್ದೇ ಕಾರುಬಾರು.
ಕಿರುತೆರೆಯಲ್ಲಿ ಧಾರವಾಹಿಗಳು ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಸಾಕಷ್ಟು ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಬೆಳೆಯಲಿ, ಪ್ರತಿಭೆ ಇದ್ದ ಕಡೆ ಬೆಳವಣಿಗೆ ಇದ್ದೆ ಇರುತ್ತದೆ. ಇದು ನಿಜಕ್ಕೂ ಸಂತೋಷದ ವಿಷಯ.
ಆದರೆ ಬೆಳೆಯುವ ಭರಾಟೆಯಲ್ಲಿ ಸಮಾಜಕ್ಕೆ ತಾವುಗಳು ಏನು ಸಂದೇಶವನ್ನು ನೀಡುತ್ತಿದ್ದೇವೆ ಎನ್ನುವುದನ್ನು ಒಮ್ಮೆ ಅವಲೋಕಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ.
ಮೊನ್ನೆಯಷ್ಟೇ ಅಮ್ಮ ತ್ಯಾಗದ ಪ್ರತೀಕವಲ್ಲ, ಪ್ರೀತಿಯ ಪ್ರತೀಕ ಎಂದು ಅಮ್ಮಂದಿರ ದಿನ ಅಮ್ಮನನ್ನು ನೆನೆದೆವು. ಆದರೆ ಈ ಧಾರಾವಾಹಿಗಳು ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಕತ್ತಿ ಮಸೆಯುವ ದೃಶ್ಯಗಳನ್ನು ಸೃಷ್ಟಿಸಿ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಜಿಗುಪ್ಸೆ, ತಿರಸ್ಕಾರ ಮೂಡುವಂತೆ ಮಾಡುತ್ತಿರುವುದು ಸರಿಯಲ್ಲ.
ನಾಲಿಗೆಗೆ ಎಲುಬಿಲ್ಲ ಎನ್ನುವುದು ಗೊತ್ತು. ಆದರೆ ಸಂಭಾಷಣೆಗೆ ಏನೇ ಅನ್ನುವುದು ಇಲ್ಲವೇ?. ಅವುಗಳಲ್ಲಿ ನಾನು ಕೇಳಿದ ಸಂಭಾಷಣೆಗಳಲ್ಲಿ ನಾಯಕ ನಾಯಕಿಗೆ ಹೇಳುವ ಮಾತಿದು ‘ಮುಚ್ಕೊಂಡು ಹೋಗಲೇ’. ಈ ರೀತಿಯ ಸಂಭಾಷಣೆಗಳನ್ನು ಹೇಳುವವರಿಗಿಂತ ಕೇಳುಗರಿಗೆ ಹೆಚ್ಚು ಮುಜುಗುರವಾಗುತ್ತದೆ. ಸಿರಿವಂತಿಕೆ ಬೇಕಿರುವುದು ನಮ್ಮ ಭಾಷೆಯಲ್ಲಿ ಅಂದರೆ ಸಂಭಾಷಣೆಯಲ್ಲಿ ಅದೇ ಇಲ್ಲದ ಮೇಲೆ ಬೇರೆಲ್ಲ ಕಡೆ ಸಿರಿವಂತಿಕೆ ತೋರಿಸಿದರೆ ಏನು ಪ್ರಯೋಜನ ?. ತನ್ನ ಸ್ವಾರ್ಥಕ್ಕಾಗಿ ಗರ್ಭಿಣಿಯ ಮೇಲೆ ದ್ವೇಷ ಸಾಧಿಸಿ, ಅವಳ ಮಗುವನ್ನು ಕೊಲ್ಲುವ ಕ್ರೂರ ನಾದಿನಿ. ತನ್ನ ಅಕ್ಕನನ್ನೇ ಮಾರಾಟ ಮಾಡಲು ನಿಂತಿರುವ ಭಾವಿ ಭಾವನಿಗೆ ಸಹಕಾರ ನೀಡುವ ತಂಗಿ. ಇಂತಹ ಧಾರಾವಾಹಿಗಳನ್ನು ನೋಡುವಾಗ ಮನಸ್ಸೆಲ್ಲ ಹಿಂಡಿ ಹೋಗುತ್ತದೆ.
ಧಾರಾವಾಹಿಗಳನ್ನು ನೋಡುವವರಲ್ಲಿ ಮುಕ್ಕಾಲು ಭಾಗ ಗೃಹಿಣಿಯರು, ವೃದ್ದರು. ಅವರ ಆರೋಗ್ಯದ ಮೇಲೆ, ಸಂಸಾರದ ಮೇಲೆ ಇಂತಹ ಧಾರಾವಾಹಿಗಳು ದುಷ್ಪರಿಣಾಮ ಬೀರುತ್ತಿರುವುದು ಸತ್ಯ. ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಇರುವಂತೆ ಧಾರಾವಾಹಿಗಳಿಗೂ ಬೇಕು. ಹೆಣ್ಣನ್ನು ಕ್ರೂರವಾಗಿ ತೋರಿಸುವ ದೃಶ್ಯಗಳಿಗೆ ಕತ್ತರಿ ಹಾಕಲೇಬೇಕು. ಸಂಬಂಧಗಳಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳನ್ನ ಇಂದಿನ ಧಾರಾವಾಹಿಗಳು ಮಾಡುತ್ತಿವೆ.
ಕತೆಯಲ್ಲಿ ಹೊಸತನವಿದೆಯೇ? ಅದು ಇಲ್ಲ. ಶ್ರೀಮಂತ ಹಾಗು ಬಡವರ ಮಧ್ಯೆದಲ್ಲಿ ನಡೆಯುವ ದ್ವೇಷ, ಪ್ರೀತಿಯ ಕತೆ. ಚಾನೆಲ್ ಗಳು ಬೇರೆ ಬೇರೆಯಾದರು ಕತೆ ಮಾತ್ರ ಒಂದೆ. ಒಬ್ಬರಿಗೊಬ್ಬರು ಕತೆಯನ್ನು ಕದ್ದಂತೆ ಕಾಣುತ್ತದೆ. ಕತೆ ಏನೇ ಇರಲಿ, ಉದ್ದೇಶ ಒಳ್ಳೆದಿರಬೇಕು. ಹೆಣ್ಣನ್ನು ಕ್ರೂರವಾಗಿ, ಕೆಟ್ಟದಾಗಿ ತೋರಿಸಿ, ಟಿ. ಆರ್. ಪಿ ಗಿಟ್ಟಿಸಿ ಕೊಳ್ಳಬೇಕಾ ಎನ್ನುವ ಪ್ರಶ್ನೆ ದೊಡ್ಡದಾಗಿ ಕಾಣುತ್ತದೆ. ಧಾರಾವಾಹಿಗಳು ಸಮಾಜದ ಒಳಿತನ್ನು ಮನದಲ್ಲಿಟ್ಟುಕೊಂಡು ಪಾತ್ರಗಳ ಸೃಷ್ಠಿಸಬೇಕು. ಧಾರಾವಾಹಿಗಳೆಂದರೆ ಮನೆಯೊಂದು ಮೂರೂ ಬಾಗಿಲಿಗೆ ಪ್ರೇರಣೆಯಾಗಬಾರದು.
ಲೇಖನ : ಶಾಲಿನಿ ಹೂಲಿ ಪ್ರದೀಪ್
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ –ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಹಿಂದಿನ ಬರಹಗಳು :
- ಅಂಗವೈಕಲ್ಯ ಮನಸ್ಸಿಗೆ ಹೊರತು ದೇಹಕ್ಕಲ್ಲ – ಅರುಣಿಮಾ ಸಿನ್ಹಾ
- ಒಬ್ಬ ಸಾಧಕನಿಗೆ ಪ್ರಶಸ್ತಿಯೇ ಕೈಗನ್ನಡಿಯೇ ?
- ಸ್ತಬ್ದತೆ ಜಗತ್ತಿಗೆ ಆದರೆ ಗೃಹಿಣಿಗಲ್ಲ
- ಹೊಸ ನೋಟದ ನಿರ್ದೇಶಕ ಟಿ.ಎಸ್. ನಾಗಾಭರಣ