ಜಗತ್ತಿನಲ್ಲಿ ಈಗ ಇರುವ ಭಾಷೆಗಳ ಸಂಖ್ಯೆ ಸುಮಾರು 3000.ಇರುವ ಲಿಪಿಗಳ ಸಂಖ್ಯೆ ಕೇವಲ 150+.ಆ ಲಿಪಿಗಳಲ್ಲೆಲ್ಲ ಕನ್ನಡವು ಸುಂದರ, ಶ್ರೇಷ್ಠ ಎನ್ನುವುದು ಮತ್ತಷ್ಟು ದೊಡ್ಡ ಸಂಗತಿ. ಕನ್ನಡದ ಬಗೆಗೆ ಅಭಿಮಾನ ತಳೆಯಲು ಇದಕ್ಕಿಂತ ಏನು ಬೇಕು? ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಕೆ. ರಾಜಕುಮಾರ್ ಅವರ ಲೇಖನಿಯಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನ….ತಪ್ಪದೆ ಮುಂದೆ ಓದಿ…
ಕನ್ನಡ ಲಿಪಿ ಅತ್ಯಂತ ಸುಂದರ. ಹತ್ತಾರು ಲಿಪಿಗಳ ನಡುವೆ ಕನ್ನಡ ಗೊತ್ತಿಲ್ಲದವರೂ ಸಹ ಇದನ್ನು ಸುಂದರ ಲಿಪಿ ಎಂದು ತೋರಿಸುತ್ತಾರೆ. ಕನ್ನಡ ಮೊದಲು ಉದ್ದುದ್ದ ಇತ್ತು. ಸೋರೆಕಾಯಿ, ಹೀರೆಕಾಯಿ, ನಾಟಿ ಪಡವಲ ಕಾಯಿಯಂತೆ. ಆದರೆ ಕ್ರಮೇಣ ತನ್ನ ಆಕಾರವನ್ನು. ದುಂಡಾಗಿಸಿಕೊಂಡಿತು. ಅದರ ಸೌಂದರ್ಯವನ್ನು ಕಂಡು ಮರುಳಾಗದವರಿಲ್ಲ. ನೋಟವಷ್ಟೇ ಅಲ್ಲ; ಅದರ ಆಂತರ್ಯವನ್ನೂ ಕಂಡು ಬೆರಗಾಗದವರಿಲ್ಲ.
ಅದನ್ನು ಆದರ್ಶ ಲಿಪಿ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಆಡುವ ಅಷ್ಟೂ ಸಂಗತ ಧ್ವನಿಗಳನ್ನು ನಿಖರವಾಗಿ, ಖಚಿತವಾಗಿ, ನಿರ್ದುಷ್ಟವಾಗಿ, ನಿಸ್ಸಂದಿಗ್ಧವಾಗಿ ಉಚ್ಚರಿಸಬಹುದು. ಇಂಗ್ಲಿಷಿನಂತೆ ಒಂದು ಪದಕ್ಕೆ ಹಲವು ಸ್ಪೆಲಿಂಗ್ ಅಥವಾ ಕಾಗುಣಿತ ನಮ್ಮ ಕನ್ನಡ ಪದಗಳಿಗಿಲ್ಲ. ಹಾಗಾಗಿ ಅದು ಬಹುತೇಕ ತರ್ಕಬದ್ಧ. ಕವಿರಾಜಮಾರ್ಗಕಾರನು ಕನ್ನಡಿಗರನ್ನು ವಿವೇಕಿಗಳು ಎಂದಿದ್ದಾನೆ. ಕನ್ನಡ ಲಿಪಿಯೂ ವಿವೇಕಯುತವಾದುದೇ!
ಅಮೆರಿಕದ ವಾಷಿಂಗ್ಟನ್.ನಲ್ಲಿ ಅರ್ಧ ಶತಮಾನದ ಹಿಂದೆ ನಡೆದ ವಿಶ್ವಲಿಪಿ ಪ್ರದರ್ಶನದಲ್ಲೂ ನಮ್ಮ ಲಿಪಿ ಎಲ್ಲರ ಕಣ್ಣು ಕೋರೈಸಿತು. ಲಿಪಿತಜ್ಞರು ಅದರ ವಿಕಾಸದ ನಕ್ಷೆ ನೋಡಿದರು, ಬೆರಳಚ್ಚು, ಕೊರೆಯಚ್ಚು, ಕಲ್ಲಚ್ಚು, ಉಬ್ಬಚ್ಚು, ಹಸ್ತಪ್ರತಿಗಳಲ್ಲಿ ಕನ್ನಡ ಲಿಪಿ ಹೇಗೆ ಕಾಣುತ್ತದೆ ಎಂದು ಪರಾಮರ್ಶಿಸಿದರು. ಪ್ರದರ್ಶನ ವೀಕ್ಷಿಸಿ ಮುದಗೊಂಡರು; ಮನಸಾಮೋದಗೊಂಡರು. ಇದು ನಡೆದಿದ್ದು ಭಾರತದಲ್ಲಲ್ಲ. ನಮ್ಮದಲ್ಲದ ಅಮೆರಿಕದಲ್ಲಿ. ಭೂದಾನ ಚಳವಳಿಯ ನಾಯಕ ಆಚಾರ್ಯ ವಿನೋಬಾ ಭಾವೆ ಅವರು ಗಳವೆತ್ತಿ ಕನ್ನಡವು ವಿಶ್ವದ ಲಿಪಿಗಳ ರಾಣಿ ಎಂದು ಆ ಮೊದಲೇ ಸಾರಿದ್ದರು!

ಫೋಟೋ ಕೃಪೆ :google
ವಾಷಿಂಗ್ಟನ್ನಿನಲ್ಲಿ ಕನ್ನಡಕ್ಕೆ ಲಿಪಿ ತಜ್ಞರಿಂದ, ವೈಯಾಕರಣಿಗಳಿಂದ ಅಂತಹುದೇ ಪ್ರಶಂಸೆ ವ್ಯಕ್ತವಾಯಿತು. ಸಂತ, ಸಮಾಜ ಸುಧಾರಕ ವಿನೋಬಾ ಅವರ ನುಡಿ ನಿಜವಾಯಿತು; ದುಡಿಯಾಯಿತು, ಡಿಂಡಿಮವಾಯಿತು. ನಾವು ಕನ್ನಡಿಗರು. ಅತ್ಯಂತ ಸುಂದರ ಲಿಪಿ ಹಾಗೂ ಶ್ರೀಮಂತ ಪರಂಪರೆಯ ವಾರಸುದಾರರು. ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ.
ಜಗತ್ತಿನಲ್ಲಿ ಈಗ ಇರುವ ಭಾಷೆಗಳ ಸಂಖ್ಯೆ ಸುಮಾರು 3000. ಇರುವ ಲಿಪಿಗಳ ಸಂಖ್ಯೆ ಕೇವಲ 150+. ಭಾಷೆಯೊಂದಕ್ಕೆ ಲಿಪಿ ಇರುವುದೇ ದೊಡ್ಡ ಸಂಗತಿ. ಆ ಲಿಪಿಗಳಲ್ಲೆಲ್ಲ ಕನ್ನಡವು ಸುಂದರ, ಶ್ರೇಷ್ಠ ಎನ್ನುವುದು ಮತ್ತಷ್ಟು ದೊಡ್ಡ ಸಂಗತಿ. ಕನ್ನಡದ ಬಗೆಗೆ ಅಭಿಮಾನ ತಳೆಯಲು ಇದಕ್ಕಿಂತ ಏನು ಬೇಕು?
ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಮೂಲ ಲಿಪಿ ಬ್ರಾಹ್ಮೀ. ಸಂಸ್ಕೃತದ ದೇವನಾಗರಿ ಲಿಪಿಗೂ ಇದುವೇ ಮೂಲ.
1) ಕನ್ನಡ, ತೆಲುಗು ಲಿಪಿಗಳಲ್ಲಿ ಸಾಮ್ಯತೆ ಇದೆ. ಆದರೆ ಭಾಷೆಗಳು ದೂರ ದೂರ!
2) ಕನ್ನಡ, ತಮಿಳು ಲಿಪಿಗಳು ಭಿನ್ನ, ಭಿನ್ನ. ಆದರೆ ಭಾಷೆಗಳು ಹತ್ತಿರ, ಹತ್ತಿರ!
3) ಕನ್ನಡಕ್ಕಿಂತ ಪ್ರಾಚೀನತೆಯಲ್ಲಿ ತಮಿಳು ಭಾಷೆ ಸ್ವಲ್ಪ ಹಳೆಯದು. ಆದರೆ ಕನ್ನಡ ಲಿಪಿ ತಮಿಳು ಲಿಪಿಗಿಂತ 300 ವರ್ಷಗಳ ಮೊದಲೇ ವಿಕಸನಗೊಂಡಿತ್ತು. ಷಡಕ್ಷರ ಶೆಟ್ಟರ್ ಇದನ್ನು ತಮ್ಮ ಸಂಶೋಧನೆಗಳ ಮೂಲಕ ಸಾದರಪಡಿಸಿದ್ದಾರೆ. ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ’ ಕೃತಿ ಈ ಕುರಿತು ಸಮೃದ್ಧ ಮಾಹಿತಿಯನ್ನು ನೀಡುತ್ತದೆ.
ಕನ್ನಡ ವರ್ಣಮಾಲೆಯು ಋ, ಅಂ, ಅಃ, ಶ, ಷ ಹಾಗೂ ಮಹಾಪ್ರಾಣ ಅಕ್ಷರಗಳಾದ ಖ, ಘ, ಛ, ಝ, ಠ, ಢ, ಥ, ಧ, ಫ, ಭ ಇವುಗಳನ್ನು ಸಂಸ್ಕೃತ ವರ್ಣಮಾಲೆಯಿಂದ ಎರವಲು ಪಡೆದಿದೆ. ಕಾರಣ ಕನ್ನಡವು ಸಂಸ್ಕೃತ ಪದಗಳನ್ನು ಯಥೇಚ್ಛವಾಗಿ ಸ್ವೀಕರಿಸಿದೆ. ಆ ಧ್ವನಿಗಳನ್ನು ಉಚ್ಚರಿಸುವ ಸಲುವಾಗಿ ಈ ಅಕ್ಷರಗಳ ಸ್ವೀಕರಣದ ಅಗತ್ಯ ಬಿತ್ತು. ತೆಲುಗು ಮತ್ತು ಮಲಯಾಳಂ ಸಹ ಇದೇ ವಿವೇಕವನ್ನು ಮೆರೆದಿವೆ.
ಆದರೆ ತಮಿಳು ಹಟಕ್ಕೆ ಬಿತ್ತು. ಪದಗಳನ್ನು ಸ್ವೀಕರಿಸಿದರೂ ಅಕ್ಷರಗಳನ್ನು ಸ್ವೀಕರಿಸಲಿಲ್ಲ! ಹಾಗಾಗಿ ಅದರಲ್ಲಿ ಮಹಾಪ್ರಾಣ ಅಕ್ಷರಗಳು ಇಲ್ಲ. ಪದಗಳಿವೆ! ಇದರಿಂದಾಗಿ ಉಚ್ಚಾರಣೆಯಲ್ಲಿ ವಿಪರೀತ ತೊಡಕು ಉಂಟಾಗುತ್ತದೆ. ಅಘೋಷ ಕ, ಚ, ಟ, ತ, ಪ ವರ್ಣಗಳ ಸಂವಾದಿ ಘೋಷ ವರ್ಣಗಳಾದ ಗ, ಜ, ಡ, ದ, ಬ ಸಹ ಲಿಪಿಯಲ್ಲಿ ಕಾಣಸಿಗವು. ವರ್ಗೀಯ ವ್ಯಂಜನಗಳಲ್ಲಿ 10 ಮಾತ್ರ ಉಂಟು. ವರ್ಗಾರಂಭದ 5 ಅಕ್ಷರಗಳು ಮತ್ತು ಅವುಗಳ 5 ಅನುನಾಸಿಕ ಅಕ್ಷರಗಳು. ಜಕಾರಕ್ಕೆ ವಿಶೇಷ ಪ್ರಾತಿನಿಧ್ಯ ಇದೆ. ಹಾಗಾಗಿ ವರ್ಗೀಯ ವ್ಯಂಜನಗಳು 11 ಆಗುತ್ತವೆ. ಇದಕ್ಕೆ ಹೆಚ್ಚುವರಿ ಣ ಸೇರಿಕೊಂಡು 12 ಆಗುತ್ತವೆ.
ಕನ್ನಡ ವರ್ಣಮಾಲೆಯಲ್ಲಿ 25 ವರ್ಗೀಯ ವ್ಯಂಜನಗಳಿವೆ. 9 ಅವರ್ಗೀಯ ವ್ಯಂಜನಗಳಿವೆ. ಆರಂಭದಲ್ಲಿ 13 ಸ್ವರಗಳು, 2 ಯೋಗವಾಹಗಳಿವೆ. ಹೀಗೆ ಅ ಇಂದ ಳ ವರೆಗೆ ಒಟ್ಟು 49 ಅಕ್ಷರಗಳಿವೆ.
ಕನ್ನಡವು ತನ್ನಲ್ಲಿರುವ ಎಲ್ಲ ಸಂಗತ ಧ್ವನಿಗಳನ್ನೂ ನಿಖರವಾಗಿ ಉಚ್ಚರಿಸಲು ಸಾಧ್ಯ. ಕನ್ನಡ ಎಲ್ಲಿಯೂ ಮಡಿವಂತಿಕೆಯನ್ನು ಮೆರೆಯಲಿಲ್ಲ. ಅಗತ್ಯಬಿದ್ದಾಗ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿತು. ಸ್ವೀಕರಿಸಿದ ಕೆಲವು ಪದಗಳ ಸ್ವರೂಪವನ್ನು ತನ್ನ ಧ್ವನಿಯ ಜಾಯಮಾನಕ್ಕೆ ತಕ್ಕಂತೆ ಬದಲಿಸಿತು. ಹೊಂದಿಕೊಳ್ಳುವ ಕೆಲವನ್ನು ಹಾಗೆಯೇ ಬದಲಾವಣೆ ಇಲ್ಲದೆಯೇ ಉಳಿಸಿಕೊಂಡಿತು. ಕನ್ನಡ ಯಾವ ಭಾಷೆಗೂ ಶರಣಾಗಲಿಲ್ಲ; ವಶವಾಗಲಿಲ್ಲ. “ಪರವಶವಾದೆನು ಅರಿಯುವ ಮುನ್ನವೇ” ಎಂದು ಯಾವ ಭಾಷೆಗೂ ಮರುಳಾಗಲಿಲ್ಲ. ಅದು ಏಕಕಾಲದಲ್ಲಿ ಗಾಂಭೀರ್ಯವನ್ನೂ ಮೆರೆಯಿತು; ನಮ್ರತೆಯನ್ನೂ ಉಳಿಸಿಕೊಂಡಿತು. ಅದರ ಸ್ವೀಕರಣ ಸಾಮರ್ಥ್ಯ ದೊಡ್ಡದು.
ತಮಿಳು; ಸಂಸ್ಕೃತದ ಪ್ರಭಾವದಿಂದ ದೂರ ಎಂದು ಹುಸಿ ನುಡಿಯಲಾಗುತ್ತಿದೆ. ತಮಿಳು ಸಹ ಸಂಸ್ಕೃತವನ್ನು ಸ್ವೀಕರಿಸಿದೆ. ಪ್ರಮಾಣ ಕಡಿಮೆ. ಆದರೆ ಸ್ವೀಕರಿಸಿದ ಪದಗಳ ಮಹಾಪ್ರಾಣ ಧ್ವನಿಗಳನ್ನು ಕೈಬಿಟ್ಟು ಸ್ವಪ್ರತಿಷ್ಠೆ ಮೆರೆದಿದೆ. ಇದರಿಂದ ಗೊಂದಲ ಹೆಚ್ಚಿದೆ.
ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕೆಲವರ ಹೆಸರನ್ನು ಗಮನಿಸಿ: ಕಾಮರಾಜ, ಕರುಣಾನಿಧಿ, ಎಂ.ಜಿ. ರಾಮಚಂದ್ರನ್, ಜಾನಕಿ, ಜಯಲಲಿತಾ. ಈ ಹೆಸರುಗಳೆಲ್ಲವೂ ಸಂಸ್ಕೃತ ಮೂಲವೇ ಅಲ್ಲವೆ?

ಫೋಟೋ ಕೃಪೆ :google
#ಅನುಬಂಧ1:
ತಮಿಳು ಭಾಷೆ ಕನ್ನಡಕ್ಕಿಂತ ಪ್ರಾಚೀನ ಎಂದು ಇದೇ ಬರೆಹದಲ್ಲಿ ಹೇಳಿರುವೆ. ಲಿಖಿತ ಆಧಾರಗಳ ಜೊತೆಗೆ ರಾಜಕೀಯ ಒತ್ತಡವನ್ನು ತಮಿಳುನಾಡು ಸೃಷ್ಟಿಸಿತು. ಸಂಸ್ಕೃತವನ್ನು ಯುನೆಸ್ಕೋ ಸಂಸ್ಥೆ ಅಭಿಜಾತ ಭಾಷೆ ಎಂದು ಮೊದಲೇ ಘೋಷಿಸಿದೆ. ಆದರೆ ಭಾರತ ಸರ್ಕಾರ ಹಾಗೆ ಘೋಷಿಸುವಂತಿರಲಿಲ್ಲ! ವಿಪರ್ಯಾಸ. ತಮಿಳು ಭಾಷೆಯನ್ನು ಮೊದಲು ಶಾಸ್ತ್ರೀಯ ಭಾಷೆಯೆಂದು ಘೋಷಿಸಬೇಕು. ಅನಂತರ ಒಂದು ವರ್ಷ ಬಿಟ್ಟು ಸಂಸ್ಕೃತವನ್ನು ಘೋಷಿಸಬಹುದು ಎಂದು ‘UPA ONE’ ಸರ್ಕಾರಕ್ಕೆ ಬೆಂಬಲ ಕೊಡುವಾಗ ಕರುಣಾನಿಧಿ ಷರತ್ತು ಹೇರಿದ್ದರು. ಕನ್ನಡಕ್ಕೆ ಈ ಪಟ್ಟ ಸಿಗಬಾರದೆಂದು ಕರುಣಾನಿಧಿ, ಚಿದಂಬರಂ ಅವರು ಇನ್ನಿಲ್ಲದಂತೆ ಚಿತಾವಣೆ ನಡೆಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮೇಲೂ ಒತ್ತಡ ಹೇರಿದರು. ಕಥೆ ಮತ್ತಷ್ಟು ರೋಚಕವಾಗಿದೆ. ಎಲ್ಲವನ್ನೂ ಇಲ್ಲಿ ಹೇಳುವಂತಿಲ್ಲ.
ಕನ್ನಡವು ಕೋರ್ಟಿಗೆ ಹೋಗಿ ಈ ಸ್ಥಾನವನ್ನು ಪಡೆದುಕೊಳ್ಳಬೇಕಾಯಿತು. ಈ ಸ್ಥಾನ ದೊರೆತು15 ವರ್ಷವಾದರೂ ಕೇಂದ್ರದಿಂದ ಕನ್ನಡಕ್ಕೆ ಸೂಕ್ತ ಅನುದಾನವಿಲ್ಲ. ಇದ್ದರೂ ಕನ್ನಡಕ್ಕೆ ಅದು ಯಃಕಶ್ಚಿತ್. ತಮಿಳಿಗೆ #ಭೀಮಪಾಲು.
ಕನ್ನಡ ಲಿಪಿಯು ತಮಿಳು ಲಿಪಿಗಿಂತ ಸುಮಾರು 300 ವರ್ಷಗಳ ಮೊದಲೇ ವಿಕಾಸವಾಗಿತ್ತು ಎಂಬುದನ್ನು ಡಾ. ಷ. ಷಟ್ಟರ್ ಅವರ ಕೃತಿಯನ್ನು ಆಧರಿಸಿ ಉಲ್ಲೇಖಿಸಿರುವೆ.
ಪ್ರೋಟೋ ದ್ರವಿಡಿಯನ್: ಹೌದು. ಮೂಲ ದ್ರಾವಿಡದಿಂದಲೇ ಇವೆಲ್ಲವೂ ಕವಲೊಡೆದಿದ್ದು. ತಮಿಳು ತುಸು ಮೊದಲು. ಅನಂತರ ಉಳಿದವು ಎಂದು ದಾಖಲಾಗಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ತಮಿಳು ಗಿಟ್ಟಿಸಿದ್ದು ಹೇಗೆ ಎಂದು ಅರಿಯಲು ದೆಹಲಿ (13 ದಿನ) ಮತ್ತು ತಮಿಳುನಾಡು (ಎರಡು ಸಲ)ಗಳ ಸಚಿವಾಲಯಗಳಿಗೆ ಹೋಗಿ ಕ್ಷೇತ್ರಕಾರ್ಯ ಮಾಡಿ, ಮಾಹಿತಿ ಸಂಗ್ರಹಿಸಿದ್ದೆ. ಸ್ವಂತ ಉಮೇದು ಮತ್ತು ಖರ್ಚಿನಲ್ಲಿ. ಭಾಷಾ ಕ್ಷೇತ್ರಕಾರ್ಯಕ್ಕಾಗಿ ಆಂಧ್ರಪ್ರದೇಶ, ಉತ್ತರಪ್ರದೇಶಗಳಿಗೂ ಹಲವು ಹಂತಗಳಲ್ಲಿ ಹೋಗಿಬಂದಿರುವೆ.
#ಅನುಬಂಧ2:
‘ಎಲ್ಲರ ಕನ್ನಡ’ ಎಂಬ ಒಂದು ಚಳವಳಿ ನಡೆಯುತ್ತಿದೆ. ಕನ್ನಡವನ್ನು ಮಹಾಪ್ರಾಣ ಅಕ್ಷರಗಳಿಂದ ಮುಕ್ತಗೊಳಿಸುವ ಉದ್ದೇಶ ಅದರದು. ಆಗ ಕನ್ನಡ ಅದರ ಬಳಕೆದಾರರಿಗೆ ಸುಲಭವಾಗುತ್ತದೆ ಎಂಬ ಉದ್ದೇಶ ಅದರ ಪ್ರತಿಪಾದಕರದು. ಇದೊಂದು ನಿರರ್ಥಕ ಪ್ರಯತ್ನ. ಭಾಷೆಯ ಚಲನೆ ಸದಾ ಮುಂದಕ್ಕೆ. ಅದು ಹಿಂತಿರುಗಿ ನೋಡಬಲ್ಲದೇ ಹೊರತು ಹಿಂಚಲಿಸದು. ಮಹಾಪ್ರಾಣ ಅಕ್ಷರಗಳು ಕಷ್ಟ ಎಂಬ ಭ್ರಾಮಕ ನಿಲುವು ತಳೆದು ಮತ್ತೆ ವರ್ಗಭೇದಗಳನ್ನು ಸೃಷ್ಟಿಸಲು ಹೊರಟಂತಿದೆ. ಕನ್ನಡ ಬಳಕೆಯು ಸ್ಥಾಯಿರೂಪವನ್ನು ಪಡೆದುಕೊಂಡಿರುವಾಗ ಅದನ್ನು ಕದಲಿಸಲು ಹೊರಟಿರುವುದು ಅನಪೇಕ್ಷಿತ. ನಮ್ಮ ಆಧುನಿಕ ಭಾಷಾವಿಜ್ಞಾನಿಗಳು ಗೊಂದಲವನ್ನು ಹೆಚ್ಚಿಸದೆ ತಿಳಿಗೊಳಿಸಬೇಕು. ಸಮಸ್ಯೆಯ ಭಾಗವಾಗದೆ, ಪರಿಹಾರದ ಭಾಗವಾಗಬೇಕು.
#ಅನುಬಂಧ3: ಯುನೆಸ್ಕೋ ಸಂಸ್ಥೆ ಈ 7 ಭಾಷೆಗಳನ್ನು ಮಾತ್ರ ಶಾಸ್ತ್ರೀಯ ಭಾಷೆಗಳೆಂದು ಮಾನ್ಯ ಮಾಡಿದೆ:
ಕ್ಲಾಸಿಕಲ್ ಚೈನೀಸ್, ಲ್ಯಾಟೀನ್, ಅರೇಬಿಕ್, ಪರ್ಷಿಯನ್, ಸಂಸ್ಕೃತ, ಹೀಬ್ರು ಮತ್ತು ಗ್ರೀಕ್.
ಬಹುಭಾಷಿಕ ಪರಿಸರವುಳ್ಳ ಭಾರತದಲ್ಲಿ:
ತಮಿಳು, ಸಂಸ್ಕೃತ, ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯ ನುಡಿಗಳು ಶಾಸ್ತ್ರೀಯ ಭಾಷೆಗಳೆಂದು ಕೇಂದ್ರ ಸರ್ಕಾರದಿಂದ ಘೋಷಿಸಲ್ಪಟ್ಟಿವೆ.
ಉಳಿದ ಪಟ್ಟಿ, ಸಮೀಕ್ಷೆಗಳು ಹುರುಳಿಲ್ಲದವು.
#ಅನುಬಂಧ4:
ಈ ಮೊಗಬರೆಹ ಭಾಷಾವಿಜ್ಞಾನವನ್ನು ಕುರಿತಾದದ್ದು. ಇದು ಮೊಗಮಿತ್ರರಿಗೆ ತಲಪುವುದೋ, ಇಲ್ಲವೋ ಎಂಬ ದುಗುಡವಿತ್ತು. ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿ ಸಮಾಧಾನವಾಯಿತು. ಹಾಗಾಗಿ ಓದುಗರನ್ನು ತಲಪಲು ಸಾಧ್ಯವಾಗುವಂತೆ ಹೇಗೆ ಬರೆಯುವುದು ಎಂಬುದಕ್ಕೆ ಕೆಲವು ಗುಟ್ಟಿನ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳನ್ನಾಗಿಸಿರುವೆ. ದಯವಿಟ್ಟು ಓದಿ ತಿಳಿಸಿ.
ಬರೆಯುವವರು ತಾವು ಓದುಗರ ಸ್ಥಾನದಲ್ಲಿ ನಿಂತು ಆಲೋಚಿಸಬೇಕು. ಇದು ಸಂಕೀರ್ಣ ವಿಷಯ. ಇದನ್ನು ಹೇಗೆ ದಾಟಿಸಿದರೆ ಸಂವಹನ ಸಾಧ್ಯವಾಗುತ್ತದೆ ಎಂದು ಲೆಕ್ಕ ಹಾಕಬೇಕು. ಸರಳವಾದ ವಿಷಯವಾಗಿದ್ದರೆ, ಅದನ್ನು ಆಲಂಕಾರಿಕವಾಗಿ ಸಾದರಪಡಿಸಿದರೂ ಅಡ್ಡಿಯಿಲ್ಲ. ಅಂತಹ ಕಡೆ ‘ಪ್ರಸಾಧನ’ ಮೆರಗು ನೀಡುತ್ತದೆ.
ವಿಷಯ ಸಂಕೀರ್ಣವಾಗಿದ್ದರೆ ಅದನ್ನು ಅಭಿವ್ಯಕ್ತಿಸುವಾಗ ಸರಳ ಹಾಗೂ ಆಪ್ತ ಪ್ರಸ್ತುತಿ ಇದ್ದರೆ ಚೆನ್ನ. ಕಾಫಿ ಕಡುವಾಗಿದ್ದಾರೆ ಅದಕ್ಕೆ ತುಸು ಹಾಲು, ಒಂದಿನಿತು ಸಕ್ಕರೆ ಹಾಕಿ ಲೈಟಾಗಿಸಬಹುದು! ಅಂತೆಯೇ ಲೈಟಾಗಿದ್ದರೆ ತುಸು ಕಾಫಿ ಪುಡಿ ಹಾಕಿ ಕಡುವಾಗಿಸಬಹುದು. ಬರೆಹವನ್ನೂ ಅಂತೆಯೇ. ಪಾಕ ಹದಗೆಡದಂತೆ, ಅದು ಅಳ್ಳಕವಾಗದಂತೆ, ಅದರ ಬಿಸಿ ಆರದಂತೆ ನೋಡಿಕೊಳ್ಳಬೇಕು. ಅದು ಇಂಗುವಿನ ಒಗ್ಗರಣೆ ಹಾಕಿದ ಘಮಭರಿತ ರುಚಿಕಟ್ಟಾದ ತಿಳಿ ಸಾರಿನಂತಾದರೆ ಸಾಕು. ಬರೆಹಗಾರ ತಾನು ಓದಿದ್ದನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಿ ಪಚನಕ್ರಿಯೆಗೆ ಒಳಪಡಿಸಬೇಕು. ಆಗ ಅಭಿವ್ಯಕ್ತಿ ನಿಸ್ಸಂದಿಗ್ಧವಾಗಿ ಹೆಚ್ಚು ಜನರನ್ನು ತಲಪುತ್ತದೆ.
ಸರಳತೆ ಎಂಬುದನ್ನು ಬರೆಹದಲ್ಲಿ ಜಾಳು, ಜಾಳು ಎಂದೆನಿಸದಂತೆ ಪ್ರಸ್ತುತಪಡಿಸಬೇಕು.
ಬರೆವಣಿಗೆ ಎಂಬುದು ಒಂದು ಅಂಕಗಣಿತ. ಮುಖ್ಯವಾಗಿ ಬರೆದಿದ್ದನ್ನು ತಿದ್ದಿ, ತೀಡಿ ಮಂಡಿಸಬೇಕು. ಕನ್ನಡದ ವಾಕ್ಯಗಳು ಸಾಮಾನ್ಯವಾಗಿ ದೀರ್ಘವಲ್ಲ. ಇಂಗ್ಲಿಷಿನಲ್ಲಿ ಅವು ಲಗಾಮು ಇಲ್ಲದೆ ಸುದೀರ್ಘವಾಗಿ ವಿಸ್ತರಿಸಿಕೊಳ್ಳಬಲ್ಲವು.
ಕನ್ನಡದಲ್ಲಿ ಸಣ್ಣ ಸಣ್ಣ ವಾಕ್ಯಗಳಲ್ಲಿ ಸಂಕೀರ್ಣ ಭಾವವನ್ನು ಹಿಡಿದಿಡಬಹುದು. ಓದುಗರೂ ತೊಡಕಿಲ್ಲದೆ ಅರ್ಥಮಾಡಿಕೊಳ್ಳಬಹುದು. ಬರೆಹವು ಬರೆಯುವವನ ಶಕ್ತಿ, ಸಾಮರ್ಥ್ಯದ ಅಥವಾ ಆಡಂಬರದ ಪ್ರಸ್ತುತಿಯಲ್ಲ. ಆದರೆ ಅವನು ನಿರೂಪಣೆಯಲ್ಲಿ ಸಾಧಿಸಿರುವ ಕಲಾತ್ಮಕತೆ ಅವನನ್ನು ಮೇಲೇರಿಸಿ ನಿಲ್ಲಿಸುತ್ತದೆ. ಪಾರದರ್ಶಕತೆ, ನಿಖರತೆಗಳು ಓದುಗ ವಲಯವನ್ನು ವಿಸ್ತರಿಸುತ್ತವೆ .
ಮಿಗಿಲಾಗಿ ಬರೆಹವು ಸೃಜನಶೀಲತೆಯ ಎರಕ ಹೊತ್ತುಕೊಂಡಿದ್ದರೆ, ವಾಚಕರ ನೆನಪಿನಿಂದ ಮಾಸದೆ ಉಳಿಯುತ್ತದೆ. ಸೃಜನಶೀಲತೆ ಇಲ್ಲದಿದ್ದರೆ ಅದು ಪತ್ರಿಕಾ ವರದಿಯಂತೆ ಗೋಚರಿಸುತ್ತದೆ. ಕಥೆ, ಕಾವ್ಯ, ಕಾದಂಬರಿ, ನಾಟಕ ಪ್ರಕಾರಗಳು ಅಷ್ಟೇ ಅಲ್ಲದೆ ಲೇಖನ, ವಿಮರ್ಶೆಗಳೂ ಸಹ ಸೃಜನಶೀಲತೆಯ ಲೇಪ ಹೊತ್ತಿದ್ದರೆ ಅಂತಹವನ್ನು ಓದುವುದೇ ಒಂದು ಮಹಾಭಾಗ್ಯ.
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು.
