ಕನ್ನಡ ಹೋರಾಟಗಾರ ಡಾ.ಪಿ.ವಿ ನಾರಾಯಣ ಇನ್ನಿಲ್ಲ

ನಮ್ಮನ್ನು ಸಾಕಿ ಸಲಹುತ್ತಿದ್ದ ಹೆಮ್ಮರಗಳು ಒಂದೊಂದಾಗಿ ಧರೆಗರುಳುತ್ತಿವೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೃತಿಗಳನ್ನು ನೀಡಿರುವ ಡಾ.ಪಿ.ವಿ ನಾರಾಯಣ ಕರ್ನಾಟಕದ ಹಿತಚಿಂತಕರಾಗಿ, ಕನ್ನಡಪರ ಹೋರಾಟಗಾರಾಗಿ, ಕನ್ನಡಪರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅವರಿಗೆ ಅಕ್ಷರ ನಮನಗಳು…

ಡಾ.ಪಿ.ವಿ.ನಾರಾಯಣ ನನ್ನನ್ನು ಪೊರೆದ ಹಿರಿಯರಲ್ಲಿ ಪ್ರಮುಖರು. ಪಂಪನನ್ನು ತಮ್ಮ ಹೃದಯಕ್ಕೆ ಬಹಳ ಹತ್ತಿರವಾಗಿ ಇಟ್ಟುಕೊಂಡಿದ್ದ ಅವರು ಪಂಪನ ಎರಡೂ ಕಾವ್ಯಗಳ ಕುರಿತು ಹೊಸ ಅರಿವನ್ನು ನನ್ನಲ್ಲಿ ಮೂಡಿಸಿದರು. ಹಳೆಗನ್ನಡ ಕಾವ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದ ಪಿ.ವಿ.ನಾರಾಯಣ ಅವರ ಚಂಪೂ ನುಡಗನ್ನಡಿ, ಹಳೆಗನ್ನಡ ಪದ ಸಂಪದ, ಪಂಪನ ನುಡಿಗಣಿ ನನ್ನ ಪಾಲಿಗೆ ಸದಾ ಅಕ್ಷಯ ಪಾತ್ರೆಯಂತಿದ್ದವು. ಪದದ ಬೆನ್ನು ಹತ್ತಿ ಅದರ ಸ್ವರೂಪ ಹುಡುಕುವಲ್ಲಿ ಅಗ್ರಗಣ್ಯರಾಗಿದ್ದ ಅವರು ವಿಶೇಷವಾಗಿ ಅದರ ಕವಿ ಪ್ರಯೋಗಗಳನ್ನು ನಿಖರವಾಗಿ ದಾಖಲಿಸುತ್ತಿದ್ದರು. ನಾನು ‘ವಿಜಯವಾಣಿ’ಯಲ್ಲಿದ್ದಾಗ ಅವರಿಂದ ‘ಪದ ಸಂಪದ’ ಎನ್ನುವ ಅಂಕಣವನ್ನು ಬರೆಸಿದ್ದೆ. ನಿಘಂಟು ರೂಪಿಸುವಲ್ಲಿ ಶಾಸ್ತ್ರೀಯ ನೆಲೆಗಳನ್ನು ಬಲ್ಲ ಅವರು ಯಾವುದೇ ಪದದ ಕುರಿತು ಅನುಮಾನ ಬಂದರೆ ಕ್ಷಣಮಾತ್ರದಲ್ಲಿ ಪರಿಹರಿಸ ಬಲ್ಲವರಾಗಿದ್ದರು. ನಾನಂತೂ ಈ ಸದುಪಯೋಗವನ್ನು ಹಲವಾರು ಸಲ ಪಡೆದು ಕೊಂಡಿದ್ದೇನೆ.

ಹಳೆಗನ್ನಡದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರೂ ಆಧುನಿಕ ಸಾಧ್ಯತೆಗಳಿಗೆ ಅವರು ಸದಾ ತೆರೆದು ಕೊಂಡಿದ್ದರು. ಬ್ಲಾಗ್ ಬರೆಯಲು ಆರಂಭಿಸಿದ ಹಳೆಯ ತಲೆಮಾರಿನ ಮೊದಲಿಗರು ಅವರೇ ಇರಬೇಕು. ಅವರ ‘ಇದು ನಿಚ್ಚಂ ಪೊಸದು’ ಹಲವು ಹೊಸ ಸಾಧ್ಯಿತೆಗಳನ್ನು ಅನ್ವೇಷಿಸಿದ ಮಾಲಿಕೆ. ಪಿ.ವಿ.ಎನ್ ಅವರಿಗೆ ಕುತೂಹಲವಿದ್ದಿದ್ದು ಸಾಹಿತ್ಯ ಮತ್ತು ಅನ್ಯ ಕ್ಷೇತ್ರಗಳ ಬಗ್ಗೆ ಇದ್ದ ಸಂಬಂಧಗಳ ಕುರಿತು.ಚಲನಚಿತ್ರ ಮತ್ತು ಸಾಹಿತ್ಯದ ಸಂಬಂಧದ ಕುರಿತು ಅವರು ಸದಾ ಆಸಕ್ತರು. ಅವರೇ ಬಹಳ ಒಳ್ಳೆಯ ಸ್ಕಿಪ್ಟ್ ರೈಟರ್, ದೂರದರ್ಶನದಲ್ಲಿ ವಚನ ಸಾಹಿತ್ಯದ ಕುರಿತು ಮಾಲಿಕೆ ಬಂದಾಗ ಅದರ ಸ್ಕಿಪ್ಟ್ ಅವರು ಬರೆದಿದ್ದು ಇಂದಿಗೂ ಮಾದರಿಯಾಗಿದೆ. ಅವರು ಬಿ.ಎಂ.ಶ್ರೀ ಪ್ರತಿಷ್ಟಾನದ ಅಧ್ಯಕ್ಷರಾಗಿದ್ದಾಗ ‘ಕವಿ ಚಿತ್ರ’ ಎಂಬ ಚಲನಚಿತ್ರವಾದ ಕಾದಂಬರಿಗಳ ಮಾಲಿಕೆ ಮೂಡಿ ಬಂದಿತು.ಚಲನಚಿತ್ರ ಪ್ರದರ್ಶನ ಕಾದಂಬರಿ ಕುರಿತು ಇರುವ ಸಂಬಂಧದ ಚರ್ಚೆ ನಿಜಕ್ಕೂ ಹೊಸ ಸಾಧ್ಯತೆಯನ್ನೇ ನೀಡಿತ್ತು. ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ನಾಗತಿಹಳ್ಳಿ ಚಂದ್ರಶೇಖರ್, ಭಗವಾನ್, ಎನ್.ಎಸ್.ಶಂಕರ್ ಹೀಗೆ ಚಿತ್ರರಂಗದ ದಿಗ್ಗಜರೆಲ್ಲರೂ ಸಾಹಿತ್ಯ ಸಂಶೋಧನೆಯ ಕ್ಷೇತ್ರ ಬಿ.ಎಂ.ಶ್ರೀ ಪ್ರತಿಷ್ಟಾನಕ್ಕೆ ಬಂದರು. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ನನಗೆ ವಹಿಸಿದ್ದರು. ಈ ಮಾಲಿಕೆ ರೂಪಿಸುವಲ್ಲಿ ಅವರ ಒಡನಾಟದಿಂದ ನಾನು ಕಲಿತಿದ್ದು ಅಪಾರ. ಅವರ ಪ್ರೇರಣೆಯಿಂದಲೇ ಚಿತ್ರಕಥೆಯ ಕುರಿತ ಕೋರ್ಸ್ ಆರಂಭವಾಯಿತು. ವೈಯಕ್ತಿಕ ಕಾರಣದಿಂದ ಅದನ್ನು ನಾನು ಮುಂದುವರೆಸಲಿಲ್ಲ. ಈ ಕುರಿತು ನನ್ನ ಮೇಲೆ ಅವರಿಗೆ ಅಸಮಧಾನವಿತ್ತು. ಅವರು ಕನ್ನಡ ಅನ್ನದ ಭಾಷೆಯಾಗ ಬೇಕು ಎಂದು ಸದಾ ತುಡಿಯುತ್ತಿದ್ದ ನೈಜ ನೆಲೆಯ ಕನ್ನಡ ಹೋರಾಟಗಾರಗಿದ್ದರು.

ನೇರ ಮಾತಿನ ಪಿ.ವಿ.ಎನ್, ಹಲವರ ನಿಷ್ಟೂರಕ್ಕೂ ಪಾತ್ರರಾಗಿದ್ದರು. ಅವರು ತಮ್ಮ ವಿಚಾರಗಳಿಗೆ ಸದಾ ಬದ್ದರು. ಒಮ್ಮೆ ಭಾರತೀಯ ವಿದ್ಯಾ ಭವನದಲ್ಲಿ ವ್ಯಾಸ ಪ್ರಶಸ್ತಿ ಪ್ರಧಾನ ಮಾಡಲು ಕೊನೆ ಘಳಿಗೆಯಲ್ಲಿ ಅವರನ್ನು ಕರೆದಿದ್ದೆ. ನಮ್ಮೆಲ್ಲರ ನಿರೀಕ್ಷೆ ಮೀರಿ ಉಪನಿಷತ್ತುಗಳ ಸ್ವರೂಪದ ಬಗ್ಗೆ ಅದ್ಭುತ ಎನ್ನುವ ಉಪನ್ಯಾಸವನ್ನು ನೀಡಿದ್ದರು. ಅವರು ಬಿ.ಎಂ.ಶ್ರೀ ಪ್ರತಿನಿಷ್ಟಾನದ ಅಧ್ಯಕ್ಷರಾಗಿದ್ದಾಗ ನಿತ್ಯವೂ ಅವರ ಜೊತೆಗೆ 3-4 ಗಂಟೆಗಳನ್ನು ಕಳೆಯುವ ಸೌಭಾಗ್ಯ ಸಿಕ್ಕಿತ್ತು. ಬರುವುದು ಹತ್ತು ನಿಮಿಷ ತಡವಾದರೂ ಹತ್ತಾರು ಸಲ ಪೋನ್ ಮಾಡುತ್ತಿದ್ದರು. ಬೇಂದ್ರೆ, ಮಾಸ್ತಿಯವರ ಒಡನಾಟದಿಂದ ಹಿಡಿದು ಪಂಪ-ಕುಮಾರ ವ್ಯಾಸರ ಲೋಕದವರೆಗೆ ಅವರು ನನ್ನ ಅರಿವನ್ನು ವಿಸ್ತರಿಸಿದ ಕ್ರಮವೇ ವಿಶಿಷ್ಟ.

ಡಾ.ಪಿ.ವಿ.ನಾರಾಯಣ ನನ್ನ ಬದುಕಿನ ಕಷ್ಟದ ದಿನಗಳಲ್ಲಿ ಕೈ ಹಿಡಿದು ನಡೆಸಿದ್ದರು. ಸೋತಾಗ ಸಂತೈಸಿದ್ದರು, ಗೆದ್ದಾಗ ಬೆನ್ನು ತಟ್ಟಿದ್ದರು. ಬದುಕುವ ರೀತಿಯನ್ನು ಕಲಿಸಿದ್ದರು. ಈ ಎಲ್ಲಾ ಕಾರಣಗಳಿಗೆ ನನ್ನ ಜೀವನದಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದ್ದೇ ಇದೆ. ಇನ್ನು ಅವರಿರುವುದಿಲ್ಲ. ಆದರೆ ಅವರು ಕಲಿಸಿದ ಪಾಠಗಳಿವೆ. ಅದರ ಕನ್ನಡಿಯಲ್ಲಿಯೇ ಮುಂದೆ ಸಾಗುತ್ತೇನೆ.
ಹೋಗಿ ಬನ್ನಿ ಸರ್, ನಮಸ್ಕಾರಗಳು.


  • ಎನ್.ಎಸ್.ಶ್ರೀಧರ ಮೂರ್ತಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW