‘ಕನ್ನಡದ ಕಿಡಿ’ ಕೃತಿ ಪರಿಚಯ

ಶ್ರೀಮತಿ ರಾಧಾ ಟೇಕಲ್ ಅವರು ಲೇಖಕರು, ಪ್ರಖ್ಯಾತ ಪತ್ರಕರ್ತರು ಹಾಗೂ ಕಟ್ಟಾ ಗಾಂಧೀವಾದಿಗಳಾದ ಸಿದ್ದವನಹಳ್ಳಿ ಕೃಷ್ಣಶರ್ಮರ ಏಳನೆಯ ಮಗಳು.  ಜುಲೈ ನಾಲ್ಕರಂದು ಅವರ ತಂದೆ ಸಿದ್ಧವನಹಳ್ಳಿ ಕೃಷ್ಣಶರ್ಮರವರ ಬಗ್ಗೆ ಬರೆದ ‘ಕನ್ನಡದ ಕಿಡಿ’ ಪುಸ್ತಕ ಬಿಡುಗಡೆಯಾಗಿದ್ದು ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯುತ್ತಮ ಕೊಡುಗೆಯಾಗಿದೆ ಈ ಕೃತಿಯ ಕುರಿತು ಸುಜಾತಾ ರವೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ :ಕನ್ನಡದ ಕಿಡಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಬದುಕು ಬರಹ
ಲೇಖಕಿ : ರಾಧಾ ಟೇಕಲ್
ಪ್ರಥಮ ಮುದ್ರಣ ೨೦೨೨
ಪ್ರಕಾಶಕರು : ಸಂಸ್ಕೃತಿ ಬುಕ್ ಏಜೆನ್ಸೀಸ್

ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಹದಿನೆಂಟನೇ ಅಡ್ಡರಸ್ತೆಗೆ ಸರ್ಕಾರ ಸಿದ್ದವನಹಳ್ಳಿ ಕೃಷ್ಣಶರ್ಮರ ಹೆಸರನ್ನಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ಕಾಲೇಜಿನ ದಿನಗಳಲ್ಲಿ ಬರೆದ ಕಥೆಯಿಂದ ಇವರ ಸಾಹಿತ್ಯ ಯಾನ ಆರಂಭವಾಯಿತು. ತಂದೆಯ ಸಲಹೆಯಂತೆ ಓದು ಮುಗಿಸಿದ ನಂತರ ಆಂಡಾಳಮ್ಮ ಎಂಬ ತೆಲುಗು ಅನುವಾದಿತ ಕಾದಂಬರಿಯಿಂದ ಇವರ ಹವ್ಯಾಸ ಮುಂದುವರಿಯಿತು. ಯುದ್ದನಪುಡಿ ಸುಲೋಚನಾರಾಣಿ ಎಂಬ ಪ್ರಸಿದ್ಧ ತೆಲುಗು ಕಾದಂಬರಿಕಾರ್ತಿಯವರ ಕಥೆಗಳನ್ನು ಆರಾಧನಾ ಮತ್ತು ಹೊಂಗನಸು, ಸಿ ಆನಂದರಾಮ್ ಅವರ “ಏದಿ ಸತ್ಯಂ ಏದ ಸತ್ಯಂ” ಕಾದಂಬರಿಯನ್ನು “ಯಾವುದು ಸತ್ಯ” ಎಂದು ತೆಲುಗುವಿನ ಅವಸರಾಲ ರಾಮಕೃಷ್ಣರಾವ್ ಅವರ ಮಕ್ಕಳ ಕಥೆ ಕೇಟು ಡೂಪ್ಲಿಕೇಟು ಎಂದೂ ಅನುವಾದಿಸಿದ್ದಾರೆ.

ಇವರ ಊರಿಗಿಟ್ಟ ಕೊಳ್ಳಿ ಎಂಬ ಕಥೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಾಗೂ ಮಯೂರ ,ಕರ್ಮವೀರ ವಾರ ಪತ್ರಿಕೆಗಳಲ್ಲಿ ಪುಟ್ಟ ಕಥೆಗಳು ಅಚ್ಚಾದವು. ಕಸ್ತೂರಿ ಮಾಸಿಕದಲ್ಲೂ ಇವರ ಲೇಖನಗಳು ಪ್ರಕಟವಾಗಿವೆ. ಇವರ ಸಾಹಿತ್ಯದ ಸೃಜನಶೀಲತೆ ಹಲವು ಆಯಾಮಗಳಲ್ಲಿ ಹರಡಿಕೊಂಡಿದೆ. ಇವರು ಲೇಖಕಿ ಅಂಕಣಕಾರ್ತಿ, ಕಥೆಗಾರ್ತಿ, ಕಾದಂಬರಿಗಾರ್ತಿ ಅಷ್ಟೇ ಅಲ್ಲ ಅನುವಾದಕಾರ್ತಿ ಕೂಡ.

ಸಾಂಸಾರಿಕ ಜವಾಬ್ದಾರಿಗಳ ನಡುವೆ ಬರವಣಿಗೆಯ ಕೆಲಸ ಮುಂದೆ ಸಾಗದಿದ್ದರೂ ಅನೇಕ ಜವಾಬ್ದಾರಿಯುತ ಸಾಮಾಜಿಕ ಕೆಲಸಗಳಲ್ಲಿ ವ್ಯಸ್ತರಾದದ್ದು ಇವರ ವೈಶಿಷ್ಟ್ಯ. ಮಂಡ್ಯದ ಶಾರದಾ ಸಮಾಜದ ಕಾರ್ಯದರ್ಶಿಯಾಗಿ ಸತತ ಹನ್ನೆರಡು ವರ್ಷಗಳ ಕಾಲ ಸೇವೆ ಸ್ವರ್ಣಸಂದ್ರ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ಸದಸ್ಯೆ ಹಾಗೂ ಕಾರ್ಯದರ್ಶಿಯಾಗಿ 6 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇವರದು.ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಮೂಲಕವೂ ಹಲವಾರು ಸಾಹಿತಿಗಳಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡುತ್ತಿದ್ದಾರೆ.

ಪತಿಯ ನಿವೃತ್ತಿಯ ನಂತರ ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಬರವಣಿಗೆಯ ಪುನರಾರಂಭ. ಸ್ನೇಹಿತರು ಬಂಧುಗಳು ಇವರುಗಳ ಕೋರಿಕೆ ಮೇಲೆ ಸಣ್ಣ, ಹಾಸ್ಯ ಕಥೆ, ಪ್ರಸಂಗಗಳು, ಕವನಗಳು ಮುಂತಾದುವುಗಳನ್ನು ಬರೆದರು. 3 ವರ್ಷದ ಹಿಂದೆ ಸೂರ್ಯದೇವರ ರಾಮಮೋಹನ ರಾವ್ ಅವರ ಹತ್ತು ಕೃತಿಗಳನ್ನು ಸತತವಾಗಿ ಅನುವಾದ ಮಾಡಿದ ಮಹತ್ಕಾರ್ಯ ಇವರದು . ತಂದೆಯವರ ರಾಮಾವತಾರ ಪುನರ್ಮುದ್ರಣ ಕಾರ್ಯದಲ್ಲಿಯೂ ತೊಡಗಿದ್ದರು. ಈಚೆಗೆ ಜುಲೈ ನಾಲ್ಕರಂದು ಇವರ ತಂದೆಯವರ ಬಗ್ಗೆ ಬರೆದ ಕನ್ನಡದ ಕಿಡಿ ಪುಸ್ತಕ ಬಿಡುಗಡೆಯಾಗಿದ್ದು ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯುತ್ತಮ ಕೊಡುಗೆ.

ಸಿದ್ಧವನಹಳ್ಳಿ ಕೃಷ್ಣಶರ್ಮ ಹೆಸರು ಕೇಳುತ್ತಲೇ ಮಿಂಚಿನ ಸಂಚಲನ ಮೂಡಿಸುವಂತಹ ಅಪ್ರತಿಮ ಗಾಂಧಿ ವಿಚಾರವಾದಿ, ಅದ್ಭುತ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ವಾಗ್ಮಿ, ಲೇಖಕ, ಅನುವಾದಕ, ಸಹಕಾರಿ ಕ್ಷೇತ್ರದ ಹರಿಕಾರ, ಶ್ರೇಷ್ಠ ಪತ್ರಕರ್ತ, ಸರ್ವೋದಯ ಚಳವಳಿಯ ಹಿಂಬಾಲಕ ಹೇಳುತ್ತಾ ಹೋದಷ್ಟೂ ಮುಗಿಯದ ವಿಶೇಷಣಗಳನ್ನೆಲ್ಲ ಆವಾಹಿಸಿಕೊಂಡಿರುವ ನಿಸ್ವಾರ್ಥ ನಾಡು ನುಡಿಗಳ ಸೇವಕ . 1 ಸಂಸ್ಥೆಯಿಂದಲೂ ಆಗದಷ್ಟು ಅಗಾಧ ಪ್ರಮಾಣದ ಸೇವೆ ಇವರಿಂದ ಸಂದಿದೆ. ತಮ್ಮ ತಂದೆಯ ಬದುಕು ಬರಹಗಳ ಬಗ್ಗೆ ಹೇಳುತ್ತಾ ನಾವು ತಿಳಿಯದ ಎಷ್ಟೋ ಕುತೂಹಲಕಾರಿ ಸಂಗತಿಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ ಲೇಖಕಿಯವರು ಈ ಪುಸ್ತಕದಲ್ಲಿ .ಇದನ್ನು ಓದಿದಾಗ ನನಗೆ ತಕ್ಷಣ ನೆನಪಿಗೆ ಬಂದದ್ದು ಕಗ್ಗದ ಈ ಸಾಲುಗಳು

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದದ್ಭುತವ? ಮನುಜರೊಳಗಾಗಾಗ ತೋರ್ಪ ಮಹನೀಯಗುಣ ವನುವಾದ ಬೊಮ್ಮನದು ಮಂಕುತಿಮ್ಮ.

ಬರೀ ಒಂದು ವ್ಯಕ್ತಿಯಾಗದೆ ಕರ್ತೃತ್ವದ ಶಕ್ತಿಯಾಗಿ ಸಾಮಾಜಿಕ ಸೇವೆಯ ನಾನಾ ರಂಗಗಳಲ್ಲಿ ತಮ್ಮ ಛಾಪೊತ್ತಿದ ಈ ಮಹನೀಯರ ಗುಣ ಮತ್ತು ತಮ್ಮ ಸೇವೆಗೆ ಬೆಲೆ ತೆಗೆದುಕೊಳ್ಳದೆ ನಿರಾಕರಿಸಿದ ಇವರ ನಿಸ್ವಾರ್ಥತೆ ಇಂದಿನ ಈ ಸ್ವಾರ್ಥ ಪ್ರಪಂಚದಲ್ಲಿ ನಿಜಕ್ಕೂ ಒಂದು ವಿಸ್ಮಯ . ನೋಡಿ ಅಳವಡಿಸಿಕೊಳ್ಳಬೇಕಾದ, ಕಂಡು ತಿಳಿಯಬೇಕಾದ, ಓದಿ ಅರಿಯಲೇಬೇಕಾದ ಮಹಾನ್ ನಿದರ್ಶನವೇ…ಹಾಗಾಗಿಯೇ ಈ ಕೃತಿಯ ಓದು ನಿಜಕ್ಕೂ ಅವಶ್ಯ .

ಜುಲೈ 4 ೧೯೦೪ರಲ್ಲಿ ಜನಿಸಿದ ಸಿದ್ಧವನಹಳ್ಳಿ ಕೃಷ್ಣಶರ್ಮರ ತಂದೆ ರಂಗಾಚಾರ್ ಮತ್ತು ತಾಯಿ ಶೇಷಮ್ಮನವರು . ಇವರ ತಂದೆಯ ತಾತಂದಿರು ಮೈಸೂರು ಪರಕಾಲ ಮಠದ ಕಾರ್ಯಕರ್ತರಾಗಿದ್ದರೆ ಅವರ ಅಣ್ಣಂದಿರು ಪರಕಾಲಮಠದ ಸ್ವಾಮಿಗಳಾಗಿದ್ದ ಪ್ರಕಾಂಡ ಪಂಡಿತರಾದ ಶ್ರೀ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು ಅಂದಿನ ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದವರು.

ಹಾಗಾಗಿ ವಿದ್ವತ್ ಸಂಸ್ಕಾರ ಸುಸಂಸ್ಕೃತ ನಡವಳಿಕೆ ಹಾಗೂ ಅಗಾಧ ಪಾಂಡಿತ್ಯ ಇವರಿಗೆ ರಕ್ತಗತವಾಗಿಯೇ ಬಂದಿದ್ದು ಸಹಜ. ಪ್ರಾಥಮಿಕ ಮಾಧ್ಯಮಿಕ ತರಗತಿಗಳಲ್ಲಿ ಓದುವಾಗಲೇ ಇವರಲ್ಲಿ ಕನ್ನಡದ ಅಭಿರುಚಿ ಬೆಳೆಯತೊಡಗಿತ್ತು . ಹೈಸ್ಕೂಲಿನಲ್ಲಿ ಪರಿಶೀಲನೆಗೆಂದು ಬಂದಿದ್ದ ಇನ್ಸ್ ಪೆಕ್ಟರ್ ಅವರ ಬಗ್ಗೆಯೇ ಕವನ ರಚಿಸಿ ಹಾಡಿದ ಬಾಲಕನ ಬಗ್ಗೆ ಎಲ್ಲರಿಗೂ ಹೆಮ್ಮೆ ಅಭಿಮಾನ ಇದ್ದದ್ದೂ ಸಹ ಸ್ವಾಭಾವಿಕ . ನಂತರ ಪದವಿ ಪರೀಕ್ಷೆ ಬರೆಯಲು ಮೈಸೂರಿಗೆ ಬಂದರು ಆಗ ಭುಗಿಲೆದ್ದಿದ್ದ ಸ್ವಾತಂತ್ರ ಸಂಗ್ರಾಮದ ಕರೆಗೆ ಓ ಗೊಟ್ಟು ಚಳುವಳಿಯಲ್ಲಿ ಭಾಗಿಯಾದರು . ಪಂಡಿತ ತಾರಾನಾಥರ ಪ್ರೇಮಾಯತನ ಆಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮನೆಯವರು ಎಲ್ಲಿ ಸನ್ಯಾಸಿಯಾಗಿ ಬಿಡುತ್ತಾನೋ ಎಂದು ಹೆದರಿ ಆತುರದಿಂದ ಮದುವೆ ಸಹ ಮಾಡಿದರು . ನಂತರ ಹೈದರಾಬಾದಿನಲ್ಲಿ ಶಿಕ್ಷಕ ವೃತ್ತಿ ಹಿಡಿದು ಅಲ್ಲಿ ಕನ್ನಡ ಪರ ಕೆಲಸ ಮಾಡುತ್ತಾ ಜೊತೆಜೊತೆಗೇ ಸ್ವಾತಂತ್ರ ಚಳವಳಿಯ ಖಾದಿ ಪ್ರಚಾರ, ಪ್ರಭಾತ್ ಫೇರಿ, ರಾಷ್ಟ್ರೀಯ ಹಾಡುಗಳನ್ನು ಸಾರ್ವಜನಿಕವಾಗಿ ಹಾಡುವುದು ಇವೆಲ್ಲವುಗಳನ್ನು ಸಾಂಗವಾಗಿ ನಡೆಸುತ್ತಾ ಬಂದು ನಿಜಾಮರ ಆಗ್ರಹಕ್ಕೆ ಗುರಿಯಾಗಿ ಗಡೀಪಾರಾಗಿ ಮತ್ತೆ ಚಿತ್ರದುರ್ಗಕ್ಕೆ ಬಂದರು .ಬೇಂದ್ರೆಯವರು ನಡೆಸುತ್ತಿದ್ದ ಗೆಳೆಯರ ಗುಂಪಿನ ಸದಸ್ಯರಾಗಿ ನಡೆಸುತ್ತಿದ್ದ ವಿಶ್ವಕರ್ನಾಟಕ ಪತ್ರಿಕೆಯ ಸಹಸಂಪಾದಕತ್ವವನ್ನು ವಹಿಸಿ ಯುವಜನರಲ್ಲಿ ರಾಷ್ಟ್ರೀಯ ಭಾವನೆ ನಿಸ್ವಾರ್ಥ ಮನೋಭಾವ ಬೆಳೆಸುವ ಕಾರ್ಯದಲ್ಲಿ ತೊಡಗಿದರು . ಜತೆಗೆ ಭೂದಾನ ಹಾಗೂ ಸಹಕಾರ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು .ವಿಶ್ವ ಕರ್ನಾಟಕದ ತೀ.ತಾ ಶರ್ಮ ಮತ್ತು ಇವರದು ಒಂದೇ ರೀತಿಯ ಬರವಣಿಗೆ. ಹರಿತವಾದ ಭಾಷೆ, ಓದುಗರಲ್ಲಿ ಕಿಚ್ಚೆಬ್ಬಿಸುವ ಪದ ಪ್ರಯೋಗ, ರಾಷ್ಟ್ರೀಯ ಭಾವನೆಗಳನ್ನು ಬಡಿದೆಬ್ಬಿಸುವ ದಿಟ್ಟತನದ ಬರವಣಿಗೆ ಸಾಮಾನ್ಯವಾಗಿದ್ದವು . ಇದು ಪತ್ರಿಕೆಯು ಸರಕಾರದ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಯಿತು . ಇದಲ್ಲದೆ ಬೇರೆ ಪತ್ರಿಕೆಗಳಲ್ಲಿ ಮಾತಿನ ಮಂಟಪ, ಚಿಂತನ ಮಂಥನ ಹರಟೆಮಲ್ಲರು ಇತ್ಯಾದಿ ಅಂಕಣಗಳನ್ನು ಬರೆಯುತ್ತಿದ್ದರು. ಇವರ ಅಂಕಣಕ್ಕಾಗಿಯೇ ಮುಗಿಬಿದ್ದು ಪತ್ರಿಕೆಗಳನ್ನು ತೆಗೆದುಕೊಳ್ಳುವ ಓದುಗವೃಂದವೇ ಇತ್ತು.

ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಹಲವಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ ಅದಕ್ಕೆ ಸೇರಿದಂತೆ ಬೆಂಗಳೂರು ಎಜುಕೇಶನ್ ಸೊಸೈಟಿ ಇದರಲ್ಲಿ ಪ್ರಮುಖವಾದುದು . ಅಲ್ಲದೆ ಹೈದರಾಬಾದಿನಲ್ಲಿ ಕೆಲವೊಂದು ಸಂಘಗಳನ್ನು ಸ್ಥಾಪಿಸಿದ ಕೀರ್ತಿ ಇವರದು . ಆರ್ಥಿಕ ರಂಗದಲ್ಲಿ ಸಹಕಾರ ಬ್ಯಾಂಕ್ ಗಳಾದ ಶ್ರೀರಾಮ ಕೋ ಆಪರೇಟಿವ್ ಬ್ಯಾಂಕ್, ಶ್ರೀ ಆಂಜನೇಯ ಕೋ ಆಪರೇಟಿವ್ ಬ್ಯಾಂಕ್, ಗಣೇಶನಗರ ನಿವೇಶನದಾರರ ಸಂಘ, ಮೈಸೂರಿನ ವಿದ್ಯೋದಯ ಸಭಾ, ಶ್ರೀನಿವಾಸ ಮಂದಿರ ಧರ್ಮಸಂಸ್ಥೆ, ಬೆಂಗಳೂರು ನಗರ ಪುಸ್ತಕ ಭಂಡಾರ, ಪ್ರಭಾತ್ ಸಾಹಿತ್ಯ ಇವು ಅವುಗಳಲ್ಲಿ ಕೆಲವು . ೪೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು ಸಾಮಾಜಿಕ ಸೇವೆ ಸಲ್ಲಿಸಿದ ಮಹಾನುಭಾವರು . ಅನುವಾದ ಇವರ ಆಸಕ್ತಿಯ ಪ್ರಮುಖ ಕ್ಷೇತ್ರವಾದರೂ ಇವರು ಗಾಂಧಿಸಾಹಿತ್ಯ ವಿನೋಬಾ ಸಾಹಿತ್ಯ ಸರ್ವೋದಯ ಸಾಹಿತ್ಯ ವ್ಯಕ್ತಿ ಚತ್ರ ಧಾರ್ಮಿಕ ಮುಂತಾದವುಗಳಿಗೆ ಸಂಬಂಧಿಸಿದಂತೆ ರಚಿಸಿರುವ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆಯೇ ನೂರನಲವತ್ತಕ್ಕೂ ಹೆಚ್ಚು . ವಿಶ್ವಕರ್ನಾಟಕ, ಜಯಕರ್ನಾಟಕ, ಜೀವನ, ಸರ್ವೋದಯ, ಕನ್ನಡ ಹರಿಜನ, ಕನ್ನಡನುಡಿ, ವಾಹಿನಿ, ಭೂದಾನ ಈ ಪತ್ರಿಕೆಗಳಿಗೆ ಸಂಪಾದಕರಾಗಿ; ಅಂಕಣಕಾರರಾಗಿ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಪ್ರಜಾಮತ, ಕರ್ಮವೀರ, ವಾಣಿ, ಕನ್ನಡಪ್ರಭ ಇವುಗಳಲ್ಲಿ ರಾರಾಜಿಸಿದ್ದಾರೆ ಜವಹರ್ ಲಾಲ್ ನೆಹರು ಅವರ “ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ” ಯನ್ನು “ಜಗತ್ಕಥಾವಲ್ಲರಿ” ಎಂಬ ಹೆಸರಿನಲ್ಲಿ ತೀ ತಾ ಶರ್ಮ ಹಾಗೂ ಕೃಷ್ಣ ಶರ್ಮ ಇಬ್ಬರೂ ಸೇರಿ ಅನುವಾದಿಸಿದ್ದಾರೆ. ಯಾರು ಯಾವ ಭಾಗವನ್ನು ಅನುವಾದಿಸಿದ್ದಾರೆ ಎಂದೇ ಗೊತ್ತುಪಡಿಸಲಾಗದಷ್ಟು ಸಾಮ್ಯ ಇವರಿಬ್ಬರ ಶೈಲಿ .ಇನ್ನು ಭಾಷಣಕ್ಕೆ ನಿಂತರೆ ಅತ್ಯಂತ ಆಕರ್ಷಕ ಶೈಲಿ. ಕೇಳುಗರನ್ನು ಮಂತ್ರಮುಗ್ದಗೊಳಿಸುವಂತಹ ಮೋಡಿ. ನೆಹರು, ಗಾಂಧಿ, ವಿನೋಬಾ ಭಾವೆ ಮುಂತಾದ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಭೇಟಿ ಕೊಟ್ಟಾಗ ಮಾಡುತ್ತಿದ್ದ ಹಿಂದಿ ಭಾಷಣಗಳಿಗೆ ಅಲ್ಲೇ ಸ್ಥಳದಲ್ಲಿಯೇ ಭಾಷಾಂತರ ಮಾಡಿ ಹೇಳುತ್ತಿದ್ದುದು ಇವರ ವೈಶಿಷ್ಟ್ಯ. ಮೂಲ ಭಾಷಣಕ್ಕಿಂತ ಇವರ ಕನ್ನಡದ ಸೊಗಡಿನ ಭಾಷಣಗಳು ಎಲ್ಲರನ್ನು ಸೆಳೆಯುತ್ತಿದ್ದವು. ಒಮ್ಮೆ ಅಂತಹ ಸಭೆಯಲ್ಲಿ ತನ್ನ ತಂದೆಯವರ ಭಾಷಣದ ಹೊಗಳಿಕೆಯನ್ನು ಕೇಳುವ ಸುಯೋಗ ಲೇಖಕಿಯವರದಾಗಿತ್ತಂತೆ. ಆದರೆ ತಮ್ಮ ಕುಟುಂಬದವರ ಎಲ್ಲಿಯೂ ಹೇಳಿಕೊಳ್ಳಬಾರದು ಎಂಬ ಕಟ್ಟಪ್ಪಣೆಯಿಂದ ಅವರು ನಮ್ಮ ತಂದೆ ಎಂದು ಹೇಳದೆ ಸುಮ್ಮನಾದರಂತೆ.

ಇದು ಹೊರ ಪ್ರಪಂಚಕ್ಕೆ ತಿಳಿದಿರುವ ಕೃಷ್ಣಶರ್ಮರು. ಮಗಳಾಗಿ ಕೆಲವೊಂದು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ . ಭಗವದ್ಗೀತೆ ಕೈಲಿ ಹಿಡಿದು ಮದುವೆ ಹುಡುಗಿಯ ಮುಖವನ್ನು ನೋಡದೆ ತಾಳಿ ಕಟ್ಟಿದ ತಂದೆ , ಬಾಲ್ಯದಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಹಾವು ಬಂದು ಹೆಡೆ ಬಿಚ್ಚಿ ನಿಂತಿದ್ದು ಇವೇ ಮೊದಲಾದುವು .ಆದರೆ ತುಂಬ ವಿಶಿಷ್ಟವಾದ ತಿಳಿಯಲೇಬೇಕಾದ ಸಂಗತಿಗಳೆಂದರೆ ಇಷ್ಟು ದೊಡ್ಡ ರಾಜಕೀಯ ಧುರೀಣರ ಪರಿಚಯಗಳಿದ್ದು ಅವರು ತಾವಾಗಿ ಮುಂದೆ ಬಂದು ಸ್ಥಾನಮಾನ ಪದವಿಗಳನ್ನು ನೀಡುತ್ತೇನೆಂದರೂ ನಿರಾಕರಿಸಿ ತಾವು ತಾವಾಗಿಯೇ ಉಳಿದ ಕೃಷ್ಣಶರ್ಮರ ನಿಸ್ವಾರ್ಥ ಧೀಮಂತ ವ್ಯಕ್ತಿತ್ವದ ವರ್ಣನೆ .ಪ್ರಜಾ ಸರ್ಕಾರ ಬಂದು ಆತ್ಮೀಯರಾದ ಬುರ್ಗುಲ ರಾಮಕೃಷ್ಣರಾವ್ ಅವರು ಮುಖ್ಯಮಂತ್ರಿಗಳಾದಾಗ ಮಂತ್ರಿಪದವಿ ಕೊಡುತ್ತೇನೆ ನಮ್ಮ ಜೊತೆ ಕೆಲಸ ಮಾಡಿ ಎಂದಾಗ ಖಡಾಖಂಡಿತವಾಗಿ ನಿರಾಕರಿಸಿದ ತಮ್ಮ ತಂದೆಯವರ ಗುಣವನ್ನು ಮೆಚ್ಚಿ ಬರೆಯುತ್ತಾರೆ ಲೇಖಕಿ .ಹಾಗೆಯೇ ಮೊದಲಿಗೆ ಜವಹರ್ ಲಾಲ್ ನೆಹರು ಆಹ್ವಾನಿಸಿದ 1 ಕೆಲಸವನ್ನು ನಿರಾಕರಿಸಿ ನಂತರ ಗಾಂಧಿಯವರೇ ಹೇಳಿದ ಮೇಲೆ ಒಪ್ಪಿ ಮಾಡಿಕೊಟ್ಟರಂತೆ. ನೆಹರು ಅವರು ಪ್ರಧಾನಮಂತ್ರಿ ಆದ ಮೇಲೂ ತಮಗಿದ್ದ ಪರಿಚಯದ ಯಾವುದೇ ಉಪಯೋಗ ಮಾಡಿಕೊಳ್ಳದೆ ಸಾಮಾನ್ಯರಂತೆ ಇದ್ದ ಇಂಥ ವ್ಯಕ್ತಿತ್ವವನ್ನು ಈ ದಿನಗಳಲ್ಲಿ ಕಾಣಲುಂಟೆ ?ಮುಂದೆ ನಿಜಲಿಂಗಪ್ಪನವರು ಮಂತ್ರಿಯಾಗಿದ್ದಾಗಲೂ ಅಷ್ಟೊಂದು ಸ್ನೇಹವಿದ್ದರೂ ದುರ್ಬಳಕೆ ಮಾಡಿಕೊಳ್ಳದೆ ಇದ್ದುದು, ಇವರು ಹೇಳಿದ ಕೆಲಸವನ್ನು ಗಣ್ಯರು ತಕ್ಷಣವೇ ನೆರವೇರಿಸಿ ಕೊಡುತ್ತಿದ್ದುದು ಇವರಿಗೆ ಇದ್ದ ಗೌರವದ ಸ್ಥಾನವನ್ನು ಸೂಚಿಸುತ್ತದೆ . ಹಾಗಾಗಿಯೇ ಬೇಂದ್ರೆಯವರು ಇವರದು ಸಿಂಹಗರ್ಜನೆ ಎಂದು ಹೊಗಳಿ “ಸ್ನೇಹ ಮಮತೆಗಳ ಸ್ವಾದ ಅವನು ಬಲ್ಲ ಗೆಳೆಯ ಕಿಟ್ಟು ನ ಸತ್ಕಾರ ಸಂಧಿ ನನಗೂ ಇಷ್ಟ” ಎಂದಿರುವುದು . ಬೇಂದ್ರೆಯವರನ್ನು ಶರ್ಮಾ ಅವರು ದತ್ತಣ್ಣ ಎಂದರೆ ಬೇಂದ್ರೆಯವರು ಇವರನ್ನು ಕಿಟ್ಟಣ್ಣ ಎಂದೇ ಕರೆಯುತ್ತಿದ್ದುದು .ತಮ್ಮ ಪ್ರಚೋದನಕಾರಿ ಕಟು ಹರಿತ ಭಾಷೆ ಶೈಲಿ ಲೇಖನಗಳಿಂದ ಆಗಾಗ ಸರಕಾರದ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಸಿ ಕೃ ಅವರು ಆಗಾಗ ಸೆರೆಮನೆಗೆ ಹೋಗಿ ಬರುತ್ತಿದ್ದುದು ಸಾಮಾನ್ಯವಾಗಿಬಿಟ್ಟಿತ್ತು ಎಂದು ಹೇಳುತ್ತಾರೆ ಲೇಖಕಿಯವರು.

ಇಷ್ಟೆಲ್ಲಾ ಕಾರ್ಯಭಾರಗಳ ನಡುವೆಯೂ ಸಂಸಾರವನ್ನು ನಿರ್ಲಕ್ಷಿಸದೆ ಮಕ್ಕಳಿಗೆ ಕ್ವಾಲಿಟಿ ಟೈಮ್ ಕೊಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ . ಬೆಳಿಗ್ಗೆ ಮಕ್ಕಳ ಸ್ನಾನಕ್ಕೆ ಬಿಸಿ ನೀರು ತೋಡಿಕೊಡುತ್ತಿದ್ದುದು ಅವರ ಕೆಲಸವೇ ಅಂತೆ . ಯಾರೊಬ್ಬರೂ ಅಸ್ವಸ್ಥರಾದರೂ ರಾತ್ರಿಯೆಲ್ಲ ಅವರ ಶುಶ್ರೂಷೆ ಮಾಡುತ್ತಿದ್ದ ತಂದೆಯ ವಾತ್ಸಲ್ಯ ವನ್ನು ನೆನೆಸಿಕೊಳ್ಳುತ್ತಾ ಭಾವುಕರಾಗುತ್ತಾರೆ . ಒಮ್ಮೆ ಲೇಖಕಿಯವರು ತೀವ್ರಕಾಯಿಲೆಯಿಂದ ಡಾಕ್ಟರೇ ಕೈಬಿಡುವ ಪರಿಸ್ಥಿತಿ ಬಂದಾಗಲೂ ತಮ್ಮ ತೀವ್ರ ನಿಗಾ ಹಾಗೂ ಶುಶ್ರೂಷೆಯಿಂದ ಮಗಳನ್ನು ಬದುಕಿಸಿ ಕೊಂಡರು ಎಂದು ಲೇಖಕಿಯವರ ಹಿರಿಯಣ್ಣ ತಿಳಿಸುತ್ತಾರೆ.

ಇವರ ಸೋದರ ಸೋದರಿಯರು ನೆನಪು ಮಾಡಿಕೊಂಡಂತೆ ಮನೆಯಲ್ಲಿ ಯಾರಾದರೂ ಇದ್ದೇ ಇರುತ್ತಿದ್ದರು. ಹಲವರಿಗೆ ಆಶ್ರಯ ಕೊಟ್ಟು ಅವರ ಬರವಣಿಗೆಗೆ ಒಂದು ಗುರಿ ಗಮ್ಯ ಕೊಟ್ಟ ಹೆಗ್ಗಳಿಕೆ ಇವರದು. ತಾವು ಬರೆಯುವುದು ತಮ್ಮ ಕೃತಿಗಳನ್ನು ಬೆಳಕಿಗೆ ತರುವುದು ಅತಿ ಸಾಮಾನ್ಯ ಆದರೆ ಶರ್ಮಾ ಅವರು ಬೆಳೆಸಿದ ಶಿಷ್ಯಸಮೂಹ ಪ್ರೋತ್ಸಾಹಿಸಿದ ಬರಹಗಾರರ ಸಂಖ್ಯೆ ಲೆಕ್ಕಕ್ಕೆ ಇಲ್ಲ . ತರಾಸು, ಬಿ ಎಸ್ ರಾಮಾಚಾರ್ (ಬಿಸ್ರಾ), ನಾಡಿಗ ಕೃಷ್ಣಮೂರ್ತಿ, ಅರ್ಚಿಕ ವೆಂಕಟೇಶ್, ಕೆ ಎಸ್ ನಾರಾಯಣಸ್ವಾಮಿ ಇವರೆಲ್ಲ ತಮ್ಮ ಬಾಳಿನಲ್ಲಿ ಕೃಷ್ಣಶರ್ಮರು ಬೀರಿದ ಪ್ರಭಾವ ಕೊಟ್ಟ ಪ್ರೋತ್ಸಾಹ ನೆರವುಗಳನ್ನು ಬಹಳವಾಗಿ ಸ್ಮರಿಸಿ ಶರ್ಮರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.

ತಿರುಮಲೆ ರಾಜಮ್ಮ (ಭಾರತಿ) ಅವರು ಬಾಲ್ಯದಿಂದ ಇವರನ್ನು ಕಂಡಿದ್ದವರು ಅಕ್ಕನ ಸ್ಥಾನದಲ್ಲಿದ್ದವರು ಭಾವುಕರಾಗಿ ತಮ್ಮ ಸಿ ಕೃ ಅವರ ನಡುವಿನ ಬಾಂಧವ್ಯದ ಬಗ್ಗೆ ಬರೆಯುತ್ತಾರೆ. ಬಸವರಾಜ ಕಟ್ಟಿಮನಿ ಅವರು ತಮ್ಮ ಜ್ವಾಲಾ ಮುಖಿ ಎಂಬ ಕಾದಂಬರಿಯಲ್ಲಿ ಸೃಜಿಸಿದ ರಾಯರು ಎಂಬುದು 1 ಮುಖ್ಯ ಪಾತ್ರ .ಅದಕ್ಕೆ ಪ್ರೇರಣೆ ಸಿ.ಕೃ ಅವರೇ ಎಂದು ಹೇಳುತ್ತಾರೆ.

ಶ್ರೀ ಕೆ ಎಸ್ ನಾರಾಯಣಸ್ವಾಮಿ ಅವರು ಹೇಳಿದಂತೆ “ನಮ್ಮಂಥವರ ಬಾಳಿನಲ್ಲಿ ಶರ್ಮಾಜಿ ಹಚ್ಚಿಟ್ಟ ದೀಪ ದಾರಿದೀಪ ಅತ್ಯಂತ ಮೌಲಿಕ ಮಹತ್ವವುಳ್ಳ ಆಸ್ತಿ ನಮ್ಮ ಕೃತಜ್ಞತೆಯ ನಮನ ದಿನದಿನವೂ ಅವರಿಗೆ ಸಲ್ಲುತ್ತದೆ .”

ಅರ್ಚಿಕ ವೆಂಕಟೇಶ ಅವರ ನುಡಿಗಳು

“ಸೂರ್ಯ ಬೆಳಿಗ್ಗೆ ಹುಟ್ಟುತ್ತಾನೆ ಎಲ್ಲರಿಗೂ ಬೇಕಾಗುವ ಬಿಸಿಲು ಬೆಳಕು ಕೊಡುತ್ತಾನೆ ಯಾರೊಬ್ಬರ ಹೊಗಳಿಕೆಗಾಗಿ ಅಲ್ಲವಲ್ಲ. ಹಾಗೆ ಶರ್ಮರ ಸೇವೆ . ಶರ್ಮರು ಸಾಹಿತ್ಯ ನಿರ್ಮಾಣ ಮಾಡಿ ದೊಡ್ಡವರಾದವರಲ್ಲ ಹುಟ್ಟಿನಿಂದಲೇ ದೊಡ್ಡವರು. ಇಂಥಾ ಧೀಮಂತರನ್ನು ಪಡೆದ ನಾಡು ಧನ್ಯ. ಅವರ ಬಳಿ ಕೆಲಸ ಕಲಿತು ಮಾಡುವ ಸುಯೋಗ ನನ್ನದು ನಾನು ಧನ್ಯ”

ಲೇಖಕಿಯವರು ಮೌಲಿಕವಾದ ಈ ಮಾತುಗಳನ್ನು ಸ್ಮರಿಸಿ ಹೊಗಳಿಕೆಗೆ ಅಲ್ಲ ನನ್ನ ತಂದೆ ಇತರರ ಮೇಲೆ ಬೀರಿದ ಪ್ರಭಾವವನ್ನು ನೋಡಿ ನಾನೇ ಧನ್ಯೆ ಎಂದುಕೊಳ್ಳುವೆ ಎನ್ನುತ್ತಾರೆ . ಅಂತಹ ಪುಣ್ಯಾತ್ಮನ ಮಗಳು ನಾನು ಎಂದು ಹೇಳಿಕೊಳ್ಳುವ ಸೌಭಾಗ್ಯಕ್ಕಿಂತ ಬೇರೇನು ಬೇಕು ಎಂದು ತಮ್ಮ ಸಾರ್ಥಕತೆ ಮೆರೆದಿದ್ದಾರೆ.

ಹಾಗೆಯೇ ತಮ್ಮ ತಾಯಿ ಪ್ರಮೀಳಮ್ಮನವರ ಬಗ್ಗೆ ಮಕ್ಕಳಿಗೆಲ್ಲ ಅತ್ಯಂತ ಪ್ರೀತಿ ಹಾಗೂ ಗೌರವ. ಸಾಕಷ್ಟು ಸ್ಥಿತಿವಂತ ಮನೆತನದಿಂದ ಬಂದಿದ್ದರೂ ಬಡತನದ ಕಷ್ಟಗಳಿಗೆ ಹೊಂದಿಕೊಂಡು ನಿಯಮಿತ ಆದಾಯವಿಲ್ಲದಿದ್ದರೂ ಅತಿಥಿಗಳು ಮತ್ತು ಮಕ್ಕಳ ಯೋಗಕ್ಷೇಮ ಗಳನ್ನು ವಿಚಾರಿಸಿ ಕ್ಲುಪ್ತಕಾಲದಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ ತಮ್ಮ ತಾಯಿ ಅನ್ವರ್ಥವಾಗಿ ತಮ್ಮ ತಂದೆಯ ಸಹಧರ್ಮಿಣಿಯಾಗಿದ್ದರು ಎಂದು ಸ್ಮರಿಸುತ್ತಾರೆ.

ಅಲ್ಲದೆ ತಮ್ಮ ತಂದೆ ಮಕ್ಕಳ ಬಾಂಧವ್ಯ ಮತ್ತು ತಮ್ಮ ತಂದೆಯವರ ವೈಯಕ್ತಿಕ ಜೀವನ ಉಪಕಥೆಯಂತೆ ಅಲ್ಲಲ್ಲಿ ಬರುತ್ತದೆಯೇ ವಿನಃ ಒಬ್ಬ ಅಸಾಮಾನ್ಯ ಚಿಂತನಕಾರ ಸಾವಿರಾರು ಜನರ ಮನದಲ್ಲಿ ಸದೃಢವಾಗಿ ನೆಲೆಸಿ ಪ್ರಭಾವ ಬೀರಿದ ರೀತಿ ಬರೆಯುವುದು ನನ್ನ ಮುಖ್ಯ ಉದ್ದೇಶ ಎನ್ನುವ ಲೇಖಕಿಯವರ ನುಡಿಗಳು ನಿಜಕ್ಕೂ ಮಹತ್ವಪೂರ್ಣ ಹಾಗೂ ಶ್ಲಾಘನೀಯ . ಅವರ ಮಾತುಗಳಲ್ಲಿ ತಮ್ಮ ತಂದೆಯ ಬಗ್ಗೆ ಕೇಳಿ “ಒಬ್ಬ ತಂದೆ ತನ್ನ ಮಕ್ಕಳನ್ನು ಮಾತ್ರ ಗಮನಿಸಬಲ್ಲ ಒಬ್ಬ ಶಿಕ್ಷಕ ತನ್ನ ಪರಿಧಿಯಲ್ಲಿ ಬಂದ ಶಿಷ್ಯರನ್ನು ಮಾತ್ರವೇ ಮುಂದಕ್ಕೆ ನಡೆಸಬಲ್ಲ. ಆದರೆ ನಮ್ಮ ಅಣ್ಣ ಸ್ವಾರ್ಥಿಯಂತೆ ತನ್ನ ಮಕ್ಕಳ ಕ್ಷೇಮ ಮಾತ್ರ ನೋಡದೆ ತಮ್ಮ ದಾರಿಯನ್ನು, ತಮ್ಮ ಶಿಸ್ತನ್ನು ಅನುಸರಿಸದವರೆಲ್ಲರ ದಾರಿದೀಪವಾಗಿದ್ದರು. ಇಂಥಾ ಬದುಕು ವಿರಳ. ನಿಸ್ವಾರ್ಥ ಸೇವೆಯ ಮನೋಭಾವ ಎಲ್ಲರಿಗೂ ಸಾಧ್ಯವಿಲ್ಲ. ನಮ್ಮ ಅಣ್ಣ ಅಂಥಾ ಕೆಲವರಿಗೆ ಮಾತ್ರ ಸುಸಾಧ್ಯ” .ಎಷ್ಟು ಸಮಂಜಸ ನುಡಿಗಳು ಅಲ್ಲವೇ?

ಇಂತಹ ಉದಾತ್ತ ವ್ಯಕ್ತಿತ್ವದ ಗುಣಗಳನ್ನು ನೋಡಿದಾಗ ಡಿವಿಜಿಯವರ ವನಸುಮ ಕವನದ ಸಾಲುಗಳು ನೆನಪು ಬರದೆ ಇದ್ದೀತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು

ವನಸುಮಕ್ಕೆ ಅನ್ವರ್ಥನಾಮ ಎಂಬಂತೆ ಬದುಕಿ ಬಾಳಿದ ಮಹನೀಯರು ಸಿದ್ಧವನಹಳ್ಳಿ ಕೃಷ್ಣಶರ್ಮರು.

ಒಮ್ಮೆ ತಮ್ಮ ಗೆಳತಿಯ ಪತಿಯಿಂದ ತಮ್ಮ ಹಿರಿಯಣ್ಣನವರ ಕಾರ್ಯದಕ್ಷತೆ ನಿಸ್ಪೃಹತೆ ಪ್ರಾಮಾಣಿಕತೆಯ ಬಗ್ಗೆ ಕೇಳಿ ಮುದಗೊಳ್ಳುತ್ತಾರೆ ಲೇಖಕಿ. ಆದರೆ ಶರ್ಮರ ಬಗ್ಗೆ ತಿಳಿದ ಮೇಲೆ ಅವರ ಮಕ್ಕಳು ಅವರದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದಕ್ಕೆ ಇದು ನಿದರ್ಶನ . ನಾನು ತಿಳಿದಂತೆ ಲೇಖಕಿ ರಾಧಾ ಟೇಕಲ್ ಹಾಗೇ ಅವರ ಸೋದರಿ ಸಂಧ್ಯಾ ಸಿದ್ಧವನಹಳ್ಳಿ ಅವರೂ ನಿಸ್ವಾರ್ಥ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದು ಯಾವುದೇ ಪ್ರಚಾರವನ್ನು ಬಯಸದೆ ಎಲೆಮರೆಯ ಕಾಯಂತೆ ತಮ್ಮ ತಂದೆಯವರಂತೆಯೇ ಕಾರ್ಯ ನಿರ್ವಹಿಸುತ್ತಿದ್ದಾರೆ .

ಇದಷ್ಟೇ ಅಲ್ಲ ಲೇಖಕಿ ಹಾಗೂ ಅವರ ಸೋದರ ಸೋದರಿಯರು ಮತ್ತು ಅವರ ಅಳಿಯ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಹಿರಿಯ ಸಾಹಿತಿಗಳ ಜೊತೆಗಿನ ಭೇಟಿಗಳು, ಹಾಗೂ ಇನ್ನಿತರ ಸ್ವಾರಸ್ಯಕರ ಸಂಧರ್ಭಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಅದನ್ನೆಲ್ಲ ನೀವು ಪುಸ್ತಕದಲ್ಲೇ ಓದಬೇಕು.

ಕಾಲೇಜಿನಲ್ಲಿ ಪರಿಚಯ ಕೇಳಿದಾಗ an able daughter of a noble journalist ಎಂದು ಪರಿಚಯಿಸಿಕೊಂಡ ರಾಧಾ ಟೇಕಲ್ ಅವರು ತಮ್ಮ ಗೆಳತಿ ಸಂಧ್ಯಾರೆಡ್ಡಿಯವರ ಜುಲುಮೆಯಿಂದ ಪುಸ್ತಕ ಬರೆಯಲು ಆರಂಭಿಸಿದರು . ಇದಕ್ಕೆ ಈ ಹಿಂದೆ ಅವರ ತಾಯಿಯವರು ನಿಮ್ಮ ಅಣ್ಣನ ಬಗ್ಗೆ ಪುಸ್ತಕ ಬರಿ ಎಂದು ಹೇಳಿದ್ದು 1ಪ್ರೇರಕ ಶಕ್ತಿ .”ಜನ್ಮದಾತರ ಋಣ ಸಲ್ಲಿಸಲು ಎಂದಿಗೂ ಆಗದು ಆದರೆ ಇದೊಂದು ಸಣ್ಣ ಪ್ರಯತ್ನ ನನ್ನದು” ಎನ್ನುವ ವಿನಮ್ರ ನಿವೇದನೆ ಲೇಖಕಿ ಅವರದು. ಈ ಕಾರ್ಯಕ್ಕೆ ಸಹಕರಿಸಿದವರಿಗೆಲ್ಲ ವಂದನೆ ಸಲ್ಲಿಸಿದ್ದಾರೆ ಇದು ನನ್ನೊಬ್ಬಳ ಮಾತಲ್ಲ ಇಡೀ ಕುಟುಂಬದ ದ್ವನಿಯಾಗಿ ನಾನು ಬರೆದಿರುವುದು ಎಂಬುದು ಅವರ ನುಡಿಗಳು.

ಪುಸ್ತಕಕ್ಕೆ ಬೇಕಾದ ಕೆಲವೊಂದು ವಿವರಗಳನ್ನು ಒದಗಿಸಿ ಕೊಟ್ಟು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಶ್ರೀಯುತ ರಾಜೇಂದ್ರ ಪಾಟೀಲ ಅವರು ತಮ್ಮ ಮುನ್ನುಡಿಯಲ್ಲಿ “ಒಂದು ಹಂತದಲ್ಲಿ ಕೃಷ್ಣ ಶರ್ಮರೇ ತಮ್ಮ ಮಗಳಲ್ಲಿ ಆವಾಹನೆಯಾಗಿ ಅವರೇ ಬರೆಯುತ್ತಿದ್ದಾರೇನೋ ಎನ್ನಿಸುತ್ತದೆ” ಎಂದಿದ್ದಾರೆ.

ಮೌಲ್ಯಗಳು ನಶಿಸುತ್ತಾ ಹೋಗಿ, ಮಾಡಿದ ಕೆಲಸಗಳಿಗೆಲ್ಲಾ ಪ್ರತಿಫಲ ಬಯಸುವ ಕಾಲ ಬಂದಿರುವಾಗ, ದೇಶಕ್ಕಾಗಿ ನಾಡು ನುಡಿಗಾಗಿ ತಮ್ಮ ತನು ಮನ ಧನಗಳನ್ನೆಲ್ಲ ಸಮರ್ಪಣೆಗೈದು ಬದಲಾಗಿ ಬೇರೇನನ್ನೂ ಆಶಿಸದ ಇಂತಹ ನಿಸ್ಪೃಹ ಪ್ರಾಮಾಣಿಕ ನಿರ್ಮಲ ಜೀವಿಗಳ ಚರಿತೆಯ ಓದು ಸ್ವಲ್ಪವಾದರೂ ಜನ ಮನೋಭಾವಗಳಲ್ಲಿ ಪರಿವರ್ತನೆ ತಂದು ಸಮಯ ಸುಧಾರಿಸುವಲ್ಲಿ ಕಿಂಚಿತ್ತಾದರೂ ಪ್ರಯೋಜನ ತರಲಿ ಎಂಬ ಆಶಯ . ಬೆಳಕಿಗೆ ಬಾರದ ಅದೆಷ್ಟೋ ವಿಷಯಗಳನ್ನು ತಿಳಿಸಿಕೊಟ್ಟ ರಾಧಮ್ಮ ನಿಮಗೆ ಅನಂತ ಧನ್ಯವಾದಗಳು ಮತ್ತು ವಂದನೆಗಳು .ಬರವಣಿಗೆಯ ಶೈಲಿ ತುಂಬಾ ಸೊಗಸಾಗಿದೆ ನಿರೂಪಣೆ ಹೃದ್ಯವಾಗಿದೆ, ಆಪ್ತವಾಗಿದೆ, ಕೆಲವೆಡೆ ಕಣ್ಣನ್ನು ಆರ್ದ್ರವಾಗಿಸುತ್ತದೆ. ಬರೀ ನಿಮ್ಮ ದೃಷ್ಟಿಕೋನದಲ್ಲಿ ಅಲ್ಲದೆ ಎಲ್ಲರ ಮಾತುಗಳನ್ನು ಇಲ್ಲಿ ಹೇಳಿರುವುದು ಅವರ ವ್ಯಕ್ತಿತ್ವಕ್ಕೆ ಮೂರನೆಯ ಆಯಾಮವನ್ನು ಒದಗಿಸಿದಂತೆ ಆಗಿದೆ.

ನಿಮ್ಮಿಂದ ಮತ್ತಷ್ಟು ಸ್ವತಂತ್ರ ಕೃತಿಗಳು, ಅನುವಾದ ಕೃತಿಗಳು ಹೊರಬಂದು ಸಾಹಿತ್ಯ ಕ್ಷೇತ್ರದಲ್ಲಿ ರಾರಾಜಿಸಲಿ. ನಿಮ್ಮ ಉತ್ತಮ ಮಾರ್ಗದರ್ಶನ, ಆಶೀರ್ವಾದಗಳು ನಮ್ಮೆಲ್ಲರ ಮೇಲಿರಲಿ ಎಂದು ಆ ಭಗವಂತನಲ್ಲಿ ಕೋರುವೆ.

ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮರ ಅವರು ರಚಿಸಿದ ಈಗಲೂ ಬೆಂಗಳೂರು ಎಜುಕೇಷನ್ ಸೊಸೈಟಿ ಹಾಗೂ ಗಾಂಧಿ ಮಲ್ಲೇಶ್ವರಂ ಗಾಂಧಿ ಸಂಘದಲ್ಲಿ ಪ್ರಾರ್ಥನೆಯಾಗಿ ಹಾಡುವ ಈ ಕೃತಿಯೊಂದಿಗೆ ಲೇಖನಕ್ಕೆ ಮುಕ್ತಾಯ

ಭಿನ್ನಮತಗಳ ಗೊಡವೆಯೇತಕೆ
ಚೆನ್ನ ನೀನೊಬ್ಬನಿರಲು॥

ತೋಡಿಯಾದರೂ ವೇಣು ಮಾ
ಕಾಂಬೋಧಿಯಾದರೂ ನಾಟಿಯಾದರೂ
ಭೇದವಿಲ್ಲದೆ ನಿನ್ನ ನಾಮವ
ಪಾಡಲಿಲ್ಲವೆ ಎಲ್ಲವೂ ॥

ಕಾವಿಯುಟ್ಟರೂ ಸೀರೆ ಉಟ್ಟರೂ
ಠೀವಿಯುಡುಪನು ತೊಟ್ಟು ನಲಿದರೂ
ಯಾವ ವೇಷದಿ ಬಂದು ನಿಂತರು
ತಾಯಿ ಕಂದನ ತಿಳಿಯಳೇ॥

ಕಲ್ಲುಸಕ್ಕರೆ ತರುವಳೊಬ್ಬಳು
ಬೆಲ್ಲ ಬಾಳೆಯ ಹಣ್ಣನೊಬ್ಬಳು
ಇಲ್ಲದವಳು ತಾ ಕೈಯ ಮುಗಿದಳು
ಎಲ್ಲಾ ನಿನ್ನಡಿಗಾಗಿದೆ ॥


  • ಸುಜಾತಾ ರವೀಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading