ಕನ್ನಡಮ್ಮನ ತೇರು ಬಳಗ ಸಾಹಿತ್ಯಸೇವೆಗಾಗಿ ಮುಡುಪಾಗಿ ಇಟ್ಟಂತಹ ಒಂದು ಬಳಗ. ಈ ಬಳಗದ ವಿಶೇಷತೆ ಏನೆಂದರೆ ಛಂದೋಬದ್ಧ ರಚನೆಗಳನ್ನು ಕಲಿಸಿಕೊಡಲಾಗುತ್ತದೆ. ಬಳಗದಿಂದ ಕಲಿತು ಸ್ವತಂತ್ರ ಕವಿತೆಗಳನ್ನು ಬರೆಯುತ್ತಿರುವ ಕವಿಗಳು ಹಾಗು ಕವಿಯತ್ರಿಯರ ಮನದ ಮಾತನ್ನು (ಭಾಗ೪) ತಪ್ಪದೆ ಮುಂದೆ ಓದಿ…
ಕನ್ನಡಮ್ಮನ ತೇರು ಬಳಗದ ಕಿರುಪರಿಚಯ :
(ಕನ್ನಡಮ್ಮನ ತೇರು ಛಂದೋಬದ್ಧ ಕಾವ್ಯ ರಚನೆಯಲ್ಲಿ ಹಲವು ಪ್ರಕಾರಗಳಿದ್ದು ಹಳೆಗನ್ನಡ ಹಾಗು ನಡುಗನ್ನಡ ಕಾಲಘಟ್ಟದಲ್ಲಿ ಛಂದೋಬದ್ಧ ಕಾವ್ಯ ರಚನೆಗಳು ಉತ್ತುಂಗದ ಸ್ಥಿತಿಯಲ್ಲಿದ್ದವು. ಕಾಲ ಕಳೆದಂತೆ ಪರಕೀಯರ ಆಕ್ರಮಣ ಹಾಗು ನವ್ಯ ನವೋದಯ ಸಾಹಿತ್ಯದ ಬಳಕೆಯಿಂದ ಹಲವು ಕನ್ನಡ ಸಾಹಿತ್ಯ ಪ್ರಕಾರಗಳ ಬಳಕೆ ಕಡಿಮೆಯಾದವು.
ಕನ್ನಡ ಸಾಹಿತ್ಯದಲ್ಲಿ ಮಾತ್ರಗಣ, ಅಕ್ಷರಗಣ ಹಾಗು ಅಂಶಗಣ ಆಧಾರಿತ ಪದ್ಯಗಳನ್ನು ಕಾಣಬಹುದು. ಇವುಗಳಲ್ಲಿ ಸಾಕಷ್ಟು ಮಾದರಿಯಲ್ಲಿ ಪದ್ಯಗಳನ್ನು ರಚಿಸಿಬಹುದು. ಛಂದೋಬದ್ಧ ರಚನೆಗಳನ್ನು ಕಲಿಸುವ ದೃಷ್ಟಿಯಿಂದಲೇ ಕನ್ನಡಮ್ಮನ ತೇರು ಬಳಗವನ್ನು ಪ್ರಾರಂಭಿಸಿದ್ದು ಈಗಾಗಲೇ ಸಾವಿರಾರು ಕವಿಮನಗಳು ಛಂದಸ್ಸು ಕಲಿತು ಬರೆಯಲು ಪ್ರಾರಂಭಿಸಿದ್ದಾರೆ.)

ಕನ್ನಡಮ್ಮನ ತೇರು ಬಳಗವನ್ನು ನವೆಂಬರ್ ೧, ೨೦೨೨ ರಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಹಾಗು ಶಕುಂತಲಾ ಪಿ ಆಚಾರ್ ರವರು ಸ್ಥಾಪಿಸುರುತ್ತಾರೆ.
ಶ್ರೀಮತಿ ವಿಜಯಲಕ್ಷ್ಮಿ ಎಸ್
ಶ್ರೀಮತಿ ಸಹನಾ ಎಲ್.ಪಿ,
ಶ್ರೀಮತಿ ಮಂಗಳಗೌರಿ ಭಟ್
ಶ್ರೀಮತಿ ಸುಜಾತಾ ರವೀಶ್
ಶ್ರೀಯುತ ಜಗದೀಶ್ ನಾಗರಾಜು
ಶ್ರೀಯುತ ಅಮೃತಗೌಡ ಪಾಟೀಲ್
ಶ್ರೀಮತಿಭುವನೇಶ್ವರಿ ಪ್ರೇಮರವರು ಹಲವು ಆಯೋಜನೆಗಳನ್ನು ಹಮ್ಮಿಕೊಂಡ ನಿರ್ವಾಹಕರ ಸ್ಥಾನ ನಿರ್ವಹಿಸುತಿದ್ದಾರೆ.
” ಕನ್ನಡಮ್ಮನ ತೇರು” ಬಳಗದ ವಾರ್ಷಿಕೋತ್ಸವದ ದಿನ ಹತ್ತಿರ ಬಂದಿತೆನ್ನುವಂತೆ ಇಷ್ಟು ಬೇಗ ಈ ಸಮೂಹದ ವಾರ್ಷಿಕೋತ್ಸವವಾ ಅನ್ನಿಸಿತು. ಗ್ರೂಪ್ ನಲ್ಲಿ ಕಲಿಯುತ್ತ ಹೋದಂತೆ ಸಮಯ ಹೋದದ್ದೆ ತಿಳಿಯಲಿಲ್ಲ. ನಿಜವಾಗಿಯೂ ಹೆಸರಿಗೆ ತಕ್ಕ ಹಾಗೆ ನಮ್ಮೆಲ್ಲರೊಂದಿಗೆ ಕನ್ನಡದ ಪಾಠವನ್ನು ಹೇಳಿಕೊಡುತ್ತ ಕನ್ನಡಮ್ಮನ ತೇರನ್ನು ಎಳೆಯುತ್ತಿದ್ದಾರೆಂದರೆ ತಪ್ಪಾಗಲಾರದು.
ನನ್ನನ್ನು ಈ ಗ್ರೂಪ್ ಗೆ ಮಾಧುರಿ ದೇಶಪಾಂಡೆ ಅವರು ಕರೆತಂದಿದ್ದು ಅಂತ ಅನ್ನಿಸುತ್ತದೆ. ಅವರಿಗೆ ನನ್ನ ಧನ್ಯವಾದಗಳು. ಈ ಮೊದಲು ಬಹಳಷ್ಟು ಸಮೂಹಗಳಲ್ಲಿ ಇದ್ದೆ ಬರೆಯುವುದು ಕಡಿಮೆ ಮಾಡಿದ್ದೆ. ಮತ್ತೇಕೆ ಬೇರೆ ಗ್ರೂಪ್ ಅಂತ ಅನ್ನಿಸಿದರೂ ಸೇರಿದೆ. ನಾನು ಸೇರದೆ ಇದ್ದರೆ ಬಹಳಷ್ಟು ನಷ್ಟವಾಗ್ತಿತ್ತು. ಕಾರಣ ಇಲ್ಲಿ ನಾನು ಕಲೆತದ್ದು ಬಹಳ ಇದೆ. ಮೊದಲೆಲ್ಲ ಕವನ ಬರೆಯುವುದೆಂದರೆ ಅದು ‘ ಕಬ್ಬಿಣದ ಕಡಲೆ’ ಅಂತ ತಿಳಿದುಬಿಟ್ಟಿದ್ದೆ ಅಂಥಹುದರಲ್ಲಿ ಛಂದಸ್ಸು ಕಲೆಯುವುದು ಇನ್ನೂ ಕಷ್ಟ ಅಂತ ಕಥೆ ಲೇಖನ ಬರೆಯುವುದರಿಂದ ಶುರುವಾದ ನನ್ನ ಬರವಣಿಗೆ ಆಗಾಗ ಕವನಗಳನ್ನು ಬರೆಯುವ ಮಟ್ಟಕ್ಕೆ ಸುಧಾರಿಸಿಕೊಂಡೆ. ಹಂತ ಹಂತವಾಗಿ ಆದಿಪ್ರಾಸಗಳಲ್ಲಿ ಕವನ ಬರೆಯುವುದನ್ನು ಕಲೆತೆ. ಈ ಸಮೂಹಕ್ಕೆ ಬಂದಾಗ ಛಂದಸ್ಸಿನ ಬಗ್ಗೆ ಓದಿದಾಗ ಆರು ಸಾಲಿನ ಆದಿ ಪ್ರಾಸ ಅದಕ್ಕೂ ನಿಯಮ. ಮೊದ ಮೊದಲು ಬಹಳಷ್ಟು ಕಷ್ಟವೆನಿಸಿದರೂ ಗ್ರೂಪ್ ನಲ್ಲಿ ತಾಳ್ಮೆಯಿಂದ ಕಲಿಸುವ ಗುರುಗಳು ಇರುವುದರಿಂದ ಬಹಳಷ್ಟು ತಪ್ಪುಗಳನ್ನು ತಾಳ್ಮೆಯಿಂದ ತಿದ್ದಿ ಹೇಳಿ ಕಲಿಯಲು ಅನುಕೂಲವಾಯ್ತು. ಬಹಳಷ್ಟು ಉತ್ಸಾಹದಿಂದ ಕಲೆತುಕೊಂಡೆ. ಮೊದಲೆಲ್ಲ ಲಘು ಗುರು ಹಾಕುವುದು ಕಲೆತು ಮರೆತುಹೋಗಿದ್ದೆವು. ಈ ಸಮೂಹದಿಂದ, ವಿಜಯಲಕ್ಷ್ಮಿ, ಎಸ್ ಮೇಡಮ್, ಬಿಟ್ಟೀರ ಚೋಂದಮ್ಮ, ಸಹನಾ ಮೇಡಮ್, ಶಕುಂತಲಾ ಆಚಾರ, ಮಂಗಳಗೌರಿ ಮೇಡಮ್, ಮಂಜುಳಾ ಮೇಡಮ್, ಚೆನ್ನಕೇಶವ ಲಾಳನಕಟ್ಟೆ ಸರ್ ಇವರೆಲ್ಲರಿಂದ ಮತ್ತೆ ಸರಿಯಾಗಿ ಕಲಿಯುವಂತಾಯಿತು. ಇವರೆಲ್ಲರಿಗೂ ಮನದಾಳದ ಧನ್ಯವಾದಗಳು.
ಸುಮ್ಮನೆ ಹಾಗೆ ಕವನಗಳನ್ನು ಬರೆದಾಗ ಏನೋ ಸಮಾಧಾನವಾಗುತ್ತಿರಲಿಲ್ಲ. ಕನಿಷ್ಠ ಪಕ್ಷ ಆದಿ ಅಂತ್ಯ ಪ್ರಾಸದಲ್ಲಾದರೂ ಕವನ ಬರೆಯಬೇಕು ಅಂತ ಅನ್ನಿಸುವುದುಂಟು. ಲಯಬದ್ಧವಾದ ಕವನ ಬರೆಯಬೇಕು ಅಂತ ಅನ್ನಿಸುವುದು. ಇದಕ್ಕೆಲ್ಲ ಒಂದು ಒಳ್ಳೆಯ ವೇದಿಕೆ ಸಿಕ್ಕಂತಾಯಿತು ನನಗೆ. ಛಂದಸ್ಸು, ಮುಕ್ತಕ, ರಗಳೆಗಳು, ಏಳೆ ಪದ್ಯಗಳನ್ನು ಕಲೆಯುವುದಕ್ಕೆ ಸಾಧ್ಯವಾಯಿತು. ಮೊದಲೆಲ್ಲ ಛಂದಸ್ಸು ಬರೆಯುವಾಗ ಪುಸ್ತಕಗಳಲ್ಲಿ ಲಘು ಗುರು ಹಾಕಿ ಬರೆದು ನಂತರ ಟೈಪ್ ಮಾಡಿ ಕಳಿಸುತ್ತಿದ್ದೆ. ಬರೆಯುತ್ತ ಬರೆಯುತ್ತ ಈಗ ರೂಢಿ ಆಗಿ ನೇರವಾಗಿ ಟೈಪ್ ಮಾಡಿ ಕಳಿಸುತ್ತೆನೆ. ಇದೆಲ್ಲ ಸಾಧ್ಯವಾಗಿದ್ದು ಈ ಕನ್ನಡಮ್ಮನ ತೇರು ಬಳಗದಿಂದ ಅಂತ ಹೇಳಲು ಸಂತೋಷವೆನಿಸುತ್ತದೆ. ಕಲಿಕೆ ನಿರಂತರ ಅದು ನಿಂತ ನೀರಾಗಬಾರದು ಅಂತಾರೆ. ನಾನು ಕಲೆತ ಕವಿತೆಗಳನ್ನು ಓದಿದವರು ಬಹಳ ಇಷ್ಟಪಟ್ಟು ಹೊಗಳಿದಾಗ ಸಾರ್ಥಕ ಭಾವನೆ ಮೂಡುತ್ತದೆ. ಇದೆಲ್ಲದಕೂ ಕಾರಣ ಕನ್ನಡಮ್ಮನ ತೇರು ಬಳಗದ ನಿರ್ವಾಹಕ ವೃಂದ ಹಾಗೂ ಪ್ರೋತ್ಸಾಹಿಸುವ ಎಲ್ಲಾ ಕವಿಮನದ ಸದಸ್ಯರು.
- ಅಂಜಲಿ ತೊರವಿ

“ಕನ್ನಡಮ್ಮನ ತೇರು” ತುಂಬ ಸುಂದರವಾದ ಹೆಸರು.ನಮ್ಮ ಮಾತೃಭಾಷೆ ಕನ್ನಡದ ಬಗ್ಗೆ,ನಮ್ಮ ನಾಡಿನ ಬಗ್ಗೆ ನಾವು ಒಬ್ಬರು ಇನ್ನೊಬ್ಬರಿಂದ ತಿಳಿದುಕೊಳ್ಳಲು, ನಮ್ಮ ವಿಚಾರ ಧಾರೆಯನ್ನು ಹಂಚಿಕೊಳ್ಳಲು ಅವಕಾಶ.ನಾನು ಬೇರೆ ಬೇರೆ ಮುಖ ಪುಟ ಬಳಗದಲ್ಲಿ ಬರೆಹದಲ್ಲಿ ತೊಡಗಿಸಿಕೊಂಡಿದ್ದೇನೆ.ಇತ್ತೀಚೆಗೆ ಕನ್ನಡಮ್ಮನ ತೇರು ಬಳಗದಲ್ಲಿ ಕ್ರಿಯಾಶೀಲಳಾಗಿರುವುದಕ್ಕೆ ಸಂತಸವಾಗುತ್ತಿದೆ. ಛಂದಸ್ಸಿನ ಅಲಂಕಾರದಲ್ಲಿ ಎಳೆಯುತ್ತಿರುವ ಕನ್ನಡಮ್ಮನ ತೇರಿನ ಜೊತೆ ಜೊತೆಗೆ ನಡೆದು,ನಮಗೂ ಛಂದಸ್ಸಿನ ಅಲಂಕಾರ ಮೈಗೂಡಿಸಿ ಕೊಳ್ಳುವ ಒಲವು ಮೂಡುತ್ತಿದೆ.ತುಂಬಾ ಖುಷಿಯಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ಚನ್ನಕೇಶವ ಲಾಳನಕಟ್ಟೆ ಅವರಿಗೆ ಕೃತಜ್ಞತೆ ಸಲ್ಲಿಸುವೆನು. ಇಂತಹ ಬಳಗಗಳಲ್ಲಿ ಬೇರೆಯವರ ಬರಹಗಳನ್ನು ಓದುತ್ತಾ, ಎಲ್ಲರೂ ಅವರವರ ಬರೆಹವನ್ನು ಉತ್ತಮಪಡಿಸಿಕೊಳ್ಳಬಹುದು.ಛಂದಸ್ಸಿನ ಪಾಠ ಹೇಳಿಕೊಡುತ್ತ, ಎಲ್ಲರ ಬರಹಗಳನ್ನು ಓದಿಕೊಂಡು ,ತಪ್ಪಿದ್ದರೆ ತಿಳಿಸಿಕೊಡುವ ನಿರ್ವಾಹಕರಿಗೂ ಕೃತಜ್ಞತೆ.
ಸಂಸ್ಥಾಪಕಿ ಶಕುಂತಲಾ ಮೇಡಮ್, ಹಿರಿಯರು ಬಿಟ್ಟೀರ ಚೋಂದಮ್ಮ, ಚನ್ನಕೇಶವ ಲಾಳನಕಟ್ಟೆ, ವಿಜಯಲಕ್ಷ್ಮಿ ಎಸ್, ಸುಜಾತಾ ರವೀಶ, ಮಂಜುಳಾ ಅಮರನಾಥ, ಅಮೃತಗೌಡ ಪಾಟೀಲ, ಜಗದೀಶ ನಾಗರಾಜು ಮಂಗಳಗೌರಿ ಭಟ್, ಭುವನೇಶ್ವರಿ ಪ್ರೇಮ, ಸಹನಾ ಎಲ್.ಪಿ., ಲತಾ ಮೇಟಿಕುರ್ಕೆ, ಇವರುಗಳು ಏಕೆ ಮನಸ್ಸಿನಿಂದ ಕನ್ನಡದ ತೇರನ್ನು ಎಳೆಯುತ್ತಿದ್ದಾರೆ. ನಾವೂ ಅವರೊಂದಿಗೆ ಕಲಿಯುತ್ತ ನಡೆಯುತ್ತಿದ್ದೇವೆ.
ಪ್ರತಿ ದಿನ ಚಟುವಟಿಕೆ ಹಮ್ಮಿಕೊಂಡು, ಬರಹಗಾರರನ್ನು ಪ್ರೋತ್ಸಾಹಿಸುತ್ತ, ಪ್ರಶಸ್ತಿ ಪತ್ರಗಳನ್ನೂ ನೀಡುತ್ತ,ಇದೀಗ ವರ್ಷ ಪೂರೈಸುತ್ತಿದೆ. ನಾನು ದಿನವೂ ಬರೆಯುತ್ತ ಬರೆಯುತ್ತ, ಜೊತೆಗೆ ಓದುತ್ತಾ, ಈ ಬಳಗದಲ್ಲಿ ಒಬ್ಬಳಾಗಿ ಬೆಳೆಯುತ್ತಿದ್ದೇನೆ. ಕಲಿಕೆ ನಿರಂತರ. ಕನ್ನಡಮ್ಮನ ತೇರು ಬಳಗವು ನಿರಂತರ ಕನ್ನಡಮ್ಮನ ತೇರನ್ನು ಎಳೆಯುತ್ತಾ ಮುಂದೆ ಸಾಗುತ್ತಿರಲಿ ಎಂಬ ಹಾರೈಕೆಯೊಂದಿಗೆ –
- ಡಾ.ಸುಮತಿ ಪಿ

ಕನ್ನಡಮ್ಮನ ತೇರು ಬಳಗ ಒಂದು ಮರವಿದ್ದಂತೆ. ಖಗಗಳಂತೆ ಕವಿಮನಗಳು ಆ ಮರದ ತುಂಬಾ ಭೇದಭಾವದ ಸ್ಪರ್ಶವಿಲ್ಲದೇ, ಗುರುಗಳು ಹೇಳಿಕೊಡುವ ಷಟ್ಪದಿ,ರಗಳೆ, ಆದಿಪ್ರಾಸ, ಮುಕ್ತಕ, ಚುಟುಕು,ಇತ್ಯಾದಿಗಳನ್ನು ಬಹಳ ಶ್ರದ್ದೆಯಿಂದ ಕಲಿಯುತ್ತಿವೆ. ನನಗೆ ಈ ಬಳಗ ಪರಿಚಯವಾಗಿದ್ದು ನನ್ನ ಗುರುಗಳಾದ ಶ್ರೀ ಚನ್ನಕೇಶವ ಜಿ ಲಾಳನಕಟ್ಟೆಯವರಿಂದ.
ಅವರು ಮುಖಪುಟದಲ್ಲಿ ಆಗಾಗ ಕವಿತೆಗಳನ್ನು ಬರೆದು ಹಾಕುವಾಗ ತುಂಬಾ ಚೆನ್ನಾಗಿ ಬರೀತಾರೆ ಅಂತ ಎಂದುಕೊಂಡಿದ್ದು ಇದೆ. ಆವತ್ತೊಂದಿನ ಶರ ಷಟ್ಪದಿಯಲ್ಲಿ ಪದಪುಂಜಗಳನ್ನು ಬಂಧಿಸಿ ಕವನವನ್ನು ಹೆಣಿದು ಪೋಸ್ಟ್ ಮಾಡಿದ್ದರು. ನಾನು ಅದನ್ನು ಓದಿ, ಶರ ಷಟ್ಪದಿಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಆಗ ಅವರು ವಿವರಿಸಿದ್ದಲ್ಲದೆ, ಬಳಗದ ಕೊಂಡಿಯನ್ನು ಕಳುಹಿಸಿದರು. ಮೊದಲು ಕೆಲಸದ ಕಾರಣ ಬಳಗವನ್ನು ಸೇರಿರಲಿಲ್ಲ. ಆದರೆ ಯಾಕೋ ಸೇರದೇ ಇರಲು ಮನಸಾಗದೇ ಎರಡು ದಿನಗಳ ನಂತರ ಬಳಗವನ್ನು ಸೇರಿಕೊಂಡು, ಷಟ್ಪದಿಯನ್ನು ಕಲಿಯಲು ಶುರುಮಾಡಿದೆ. ಶಾಲೆಯಲ್ಲಿ ಭಾಮಿನಿ, ಕಂದ ಪದ್ಯ, ವಾರ್ಧಕ, ಇವುಗಳ ಬಗ್ಗೆ ಅರಿವಿತ್ತು. ಹಾಗಾಗಿ ಕಲಿಯಲು ನನಗೆ ಅಷ್ಟೇನು ಕಷ್ಟವಾಗಲಿಲ್ಲ. ನನಗೆ ಮೊದಲಿನಿಂದಲೂ ಇದರಲ್ಲಿ ತುಂಬಾ ಆಸಕ್ತಿ ಇತ್ತು. ಶಾಲೆಯಲ್ಲಿ ಕನ್ನಡ ಪರೀಕ್ಷೆಯಲ್ಲಿ ಪಾಠದ ಬಗ್ಗೆ ಕೇಳಲಾದ ಪ್ರಶ್ನೆಗಳಿಗಿಂತ, ವ್ಯಾಕರಣಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳಿಗೆ ನಾನು ಉತ್ತರ ಬರೆಯಲು ಹೆಚ್ಚು ಇಷ್ಟ ಪಡುತ್ತಿದ್ದೆ.
ಶಾಲೆಗೆ ಹೋಗುವಾಗ ಪುಸ್ತಕದಲ್ಲಿದ್ದ ಕವಿತೆಗಳಿಗೆ ಗುರು ಲಘು ಹಾಕಿ ಗೊತ್ತಿತ್ತೆ ವಿನಃ, ಮುಂದೊಂದು ದಿನ ಇದೇ ತಲ, ಜಲ, ಭಾಮಿನಿ, ಭೋಗ ಷಟ್ಪದಿಗಳಲ್ಲಿ ಕವನಗಳನ್ನು ರಚಿಸುತ್ತೇನೆ ಎಂಬ ಸಣ್ಣ ಸುಳಿವು ಕೂಡ ನನಗಿರಲಿಲ್ಲ .ಮೊದಲು ಒಂದೆರಡು ಬಾರಿ ಗೊಂದಲ ಮಾಡಿಕೊಂಡು ತಪ್ಪು ಮಾಡಿದಾಗ, ಗುರುಗಳು, ಕವಿಮನಗಳು ಓದಿ ಮೆಚ್ಚಿ, ಪ್ರೋತ್ಸಾಹಿಸುತ್ತಾ ತಪ್ಪುಗಳನ್ನು ತಿದ್ದಿ,ಕಲಿಯಲು ಸಹಕರಿಸಿದರು.ಮೊದಲೆಲ್ಲ ಕಾದಂಬರಿಯನ್ನು ಬರೆಯುವಾಗ ಅಗತ್ಯವಿದ್ದರೆ ಆ ಸಂದರ್ಭಕ್ಕೆ ತಕ್ಕಂತೆ ಪ್ರಾಸ ಪದಗಳನ್ನು ಪ್ರಾಯೋಗಿಸಿ ನಾಲ್ಕೈದು ಸಾಲು ಕವನ ಗೀಚುತ್ತಿದ್ದೆ.ಈಗ ಷಟ್ಪದಿಯಲ್ಲಿ ಕವನ ರಚಿಸಿ ರೂಢಿಯಾಗಿದ್ದರಿಂದ ಸುಮ್ಮನೆ ಹಾಗೆ ಕವನ ಗೀಚಲು ಮನಸಾಗುವುದಿಲ್ಲ. ಛಂದಸ್ಸಿನ ಸ್ಪರ್ಶವಿಲ್ಲದೇ ಕವನ ಗೀಚಿದರೆ ದಾರವಿಲ್ಲದೇ ಗಾಳಿಪಟವನ್ನು ಹಾರಿಸಲು ಹೊರಟಂತೆ ಭಾಸವಾಗುತ್ತದೆ.
ಭಾನುವಾರದ ‘ಚಿತ್ರಕ್ಕೊಂದು ಕವಿತೆ ‘ಸ್ಪರ್ಧೆಯ ಮೂಲಕ ಒಂದಷ್ಟು ಕವನಗಳನ್ನು ಷಟ್ಪದಿಯಲ್ಲಿ ರಚಿಸಿದೆ.ಸುಂದರ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡೆ.ಅದರಲ್ಲಿ ಕುಸುಮ ಷಟ್ಪದಿಯಲ್ಲಿ ರಚಿಸಿದ ಹಸಿರೂರ ಬೀದಿಯಲ್ಲಿ ನನ್ನವಳು ಎಂಬ ಕವಿತೆಗೆ, ತೇಜಸ್ ಶಾಸ್ತ್ರೀ ಅವರು ಸಂಗೀತ ನೀಡಿ, ರಾಗ ಸಂಯೋಜಿಸಿ ಹಾಡಿದ್ದಾರೆ. ಚಿಕ್ಕವಳಿದ್ದಾಗ ನಂಗೆ ಸಂಗೀತ ಕಲಿಯಬೇಕು ಎಂಬ ಮಹಾದಾಸೆ ಇತ್ತು. ಸಂಗೀತವನ್ನು ಕಲಿತು ಬೇರೆಯವರ ಹಾಡುಗಳಿಗೆ ದನಿಯಾಗಬೇಕು ಅಂತ ಕನಸು ಕಾಣುತ್ತಿದ್ದ ನನಗೆ, ಮುಂದೊಂದು ದಿನ ನನ್ನ ಹಾಡಿಗೆ ಇನ್ನೊಬ್ಬರು ಸಂಗೀತದ ಸ್ಪರ್ಶ ನೀಡಿ, ರಾಗದೊಳು ಬಂಧಿಸಿ, ಹಾಡುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ.ಇದೆಲ್ಲವೂ ಸಾಧ್ಯವಾಗಿದ್ದು ನನ್ನ ಪ್ರೀತಿಯ ಬಳಗ ಕನ್ನಡಮ್ಮನ ತೇರು ಬಳಗದಿಂದ ಮತ್ತು ನನ್ನ ಗುರುಗಳಾದ ಚನ್ನಕೇಶವ ಜಿ ಲಾಳನಕಟ್ಟೆ ಸರ್ ಅವರಿಂದ.
ನಂತರ ಮುಕ್ತಕ ಮತ್ತು ಏಳೆ ಪದ್ಯ ಬರೆಯುವುದನ್ನು ಕಲಿತೆ. ನನ್ನ ಮೊದಲ ಪ್ರಯತ್ನವನ್ನು ಎಲ್ಲರೂ ಮೆಚ್ಚಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ.ಅಂಶಗಣ (ಸಾಂಗತ್ಯ)ಮೊದಲು ನೋಡಿದಾಗ ಕಷ್ಟ ಅಂತ ಅನಿಸಿತ್ತು. ಒಂದು ಕೈ ನೋಡೇ ಬಿಡುವ ಅಂತ ನೇರವಾಗಿ ಸ್ಪರ್ಧೆಗೆ ತಪ್ಪಿಲ್ಲದೇ ಬರೆದು,ಎಲ್ಲರ ಮೆಚ್ಚುಗೆ ಗಳಿಸಿದ್ದು ಭಾರಿ ಖುಷಿಯಾಗಿತ್ತು.
ಕಲಿಕೆಗೆ ತುಂಬಾ ಅದ್ಭುತವಾದ ವೇದಿಕೆ ಎಂದರೆ ತಪ್ಪಾಗಲಾರದು. ಪುಟ್ಟ ಮಕ್ಕಳಿಗೆ ಹೇಳಿಕೊಡುವಂತೆ ಸಣ್ಣ ಸಣ್ಣ ತಪ್ಪುಗಳನ್ನೂ ತಿದ್ದಿ, ಬೇಸರಿಸದೆ ತಮ್ಮ ಕೆಲಸಗಳ ನಡುವೆಯೂ ನಮ್ಮ ಗೊಂದಲಗಳನ್ನು ಬಗೆ ಹರಿಸಿ, ಉತ್ತಮವಾಗಿ ಬರೆಯಲು ಸಹಾಯ ಮಾಡುವ ಪರಿಗೆ ನನ್ನ ಮನದಾಳದ ನಮನಗಳು.
ಇನ್ನೊಂದು ಹೇಳಲೇ ಬೇಕು ನಾನು, ನನಗೆ ವೈಯಕ್ತಿಕವಾಗಿ ಬಳಗದಲ್ಲಿ ತುಂಬಾ ಇಷ್ಟವಾಗಿದ್ದು ಭೇದ ಭಾವದ ಗಾಳಿ ಬೀಸದೆ ಇರುವುದು. ಕವಿಮನಗಳು ಯಾವುದೇ ಭೇದ ಭಾವ ಮಾಡದೆ ಎಲ್ಲರೂ ಎಲ್ಲರ ಕವನಗಳನ್ನು ಓದಿ ಮೆಚ್ಚಿ ಪ್ರೋತ್ಸಾಹಿಸುತ್ತಾರೆ.ಇದೇ ಅಂಶ ಬಳಗದಲ್ಲಿ ನನಗೆ ಮುಂದುವರೆಯುವಂತೆ ಮಾಡಿತು.
(ಹಳೇ ಕವನ )
ಅರಿವನು ಸುರಿದಿಹ
ಗುರುಗಳ ನೆನೆಯುತ
ಹರಿಸುವೆ ಭಾವದ ಹೊಳೆಯನ್ನು /
ಕರವನು ಜೋಡಿಸಿ
ಬರೆಯುವೆ ಕವಿತೆಯ
ಕರುವಿನ ಹಾಗೆಯೆ ಮುದದಲ್ಲಿ
ಮರೆವಿನ ಹೊದಿಕೆಯ
ಸರಿಸುತ ಮೆಲ್ಲಗೆ
ಬರೆಸುತ ಕವನವ ಹರಸಿದಿರಿ /
ಅರಿವೆನೆರೆಯುತಲಿ
ನೆರಳನು ನೀಡುವ
ಮರಗಳ ಹಾಗೆಯೆ ಸಲುಹಿದಿರಿ //
ಬಳಸಲು ಗುರುಲಘು
ತಿಳಿಸುತ ಷಟ್ಪದಿ
ಬಳಗವ ತೋರಿಸಿ ಕಲಿಸಿದಿರಿ /
ಬಲವನು ತುಂಬುವ
ಬೆಳಕಿನ ಮುಕ್ತಕ
ಕಲಿಸುತ ಬರೆಸುತ ಬೆಳೆಸಿದಿರಿ //
ಏಳೆಯ ಪದ್ಯವ
ಹೋಳಿಗೆಯಂತೆಯೆ
ಬಾಳಿನ ಬಾಯಿಗೆ ನೀಡಿದಿರಿ /
ತಾಳುತ ಸಹನೆಯ
ಕೇಳುವ ಪ್ರಶ್ನೆಗೆ
ಹೇಳುತಲುತ್ತರ ಬೆಳೆಸಿದಿರಿ //
- ವೀಣಾ ಎಂ.

ವರ್ಷದ ಸಂಭ್ರಮ ಹರ್ಷವೇ ಆದರೂ ವರ್ಷ ಕಳೆದದ್ದು ಒಂದು ಉಪಯುಕ್ತ, ಮತ್ತು ಕನ್ನಡ ವ್ಯಾಕರಣ ಶಾಸ್ತ್ರದ ಪಾಠ ನಿಷ್ಠಾವಂತರಿಂದ ಶಿಷ್ಟಾಚಾರವಾಗಿ ಕಲಿತದ್ದು ಅಪಾರ, ಒಂದು ಅಭೂತಪೂರ್ವ ಸಾಧನೆಗೆ ಮೆಟ್ಟಿಲು ನಮ್ಮ ಕನ್ನಡಮ್ಮನ ಬಳಗ, ಅಂಬೆಗಾಲು ಹಾಕುವ ಕೂಸಿಗೆ ಎದ್ದು ಓಡಾಡುವ ವರೆಗೂ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ ಹಾಗೆ ಪ್ರೀತಿಯಿಂದ ವ್ಯಾಕರಣ ಛಂದಸ್ಸು, ಪಾಟವೆಂಬ ಪೌಷ್ಟಿಕ ಆಹಾರ ಉಣಬಡಿಸಿದವರು ‘ಚೆನ್ನಕೇಶವ ಲಾಳನಕಟ್ಟೆ’ ಹಾಗೂ ಬಳಗದ ಅಡ್ಮಿನ್ ತಂಡದವರು. ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಇಷ್ಟಪಡುತ್ತೇನೆ. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುವುದು ಸಹಜ ಇದು ಒಂದು ಅವರು ದೇವರ ಕೆಲಸದಂತೆ ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ನಮ್ಮ ಭಾಗ್ಯವೇ ಸರಿ. ಮನೆಯಲ್ಲಿ ಎಲ್ಲಾ ಕೆಲಸ ಮುಗಿಸಿ ಏನಾದರೂ ಬರೆದು ನಮ್ಮತನವನ್ನ ನಾವು ಬೆಳೆಸಿಕೊಳ್ಳಬೇಕು, ಇನ್ನೂ ನಮ್ಮನ್ನು ನಾವು ಓದುವುದರಲ್ಲಿ ತೊಡಗಿಸಿಕೊಳ್ಳುಬೇಕು ಎನ್ನುವ ಹೆಣ್ಣು ಮಕ್ಕಳಿಗೆ ಇದೊಂದು ಸುಸಜ್ಜಿತವಾದ ವಿದ್ಯಾವಂತರಿರುವ ಜ್ಞಾನಿಗಳಿರುವ ಸಾಹಿತ್ಯ ತುಂಬಿರುವ ವೇದಿಕೆ ಅಥವಾ ಬಳಗ. ಇಲ್ಲಿ ಸೃಜನಶೀಲ, ಪರಿಚಯಾತ್ಮಕ, ಆತ್ಮೀಯತೆ ಪ್ರತಿಭಾ ಬಳಗ.
ಕನ್ನಡಮ್ಮನ ತೇರು ಬಳಗಕ್ಕೆ ನನ್ನನು ಮೊದಲು ಕರೆತಂದವರು ಅಮೃತಗೌಡ ಪಾಟೀಲರು ಅವರಿಗೆ ಕೃತಜ್ಞತೆ ಸಲ್ಲಿಸುವೆ, ನಾನು ಮೊದಲು ಬಳಗಕ್ಕೆ ಬಂದಾಗ ಬರವಣಿಗೆಯ ಬಗ್ಗೆ ಆಸಕ್ತಿ ಇತ್ತು ಆದರೆ ಶುದ್ಧ ವ್ಯಾಕರಣಭರಿತವಾಗಿ ಬರೆಯಲು ಬರುತ್ತಿರಲಿಲ್ಲ ಆಗ ಈ ಬಳಗದ ಅಡ್ಮಿನ್ ತಂಡದವರು ಮತ್ತು ಚೆನ್ನಕೇಶವ ಲಾಳನಕಟ್ಟೆ ಅವರು ಅಕ್ಕಾ ಎಂದು ಕರೆದು ಪಾಟದ ಬಗ್ಗೆ ವಿವರಿಸಿದಾಗ ನಮ್ಮ ಸ್ವಂತ ಸಹೋದರರೊಟ್ಟಿಗೆ ಪಾಟ ಕಲಿತ ಅನುಭವವಾಗುತ್ತದೆ.
ಭಾವನೆಗಳು ನೂರು
ಬರಹಕ್ಕೆ ಬರುತ್ತಿರುವುದು ಕಡಿಮೆ, ಆದರೂ ಬಳಗದಲ್ಲಿ ಕೊಡುವ ಪ್ರಶಸ್ತಿ ಪತ್ರಕ್ಕಿಂತಲು ಅವರು ನಾವು ಬರೆದ ಕವನ, ಮುಕ್ತಕ ಸರಿಯಾಗಿ ಮೂಡಿದೆ ಎಂದರೆ ಏನೋ ಸಾಧಿಸಿದ ಅನುಭವ ಮನದಲ್ಲಿ, ಮುಕ್ತಕ ಎಂದ ಕೂಡಲೇ ನೆನಪಾಗುವುದು ಬರೆಯಲು ಬಾರದೆ ಇದ್ದಾಗ ಚೆನ್ನಕೇಶವ ಅವರು ಪಾಠ ಮಾಡಿದ್ದರ ಬಗ್ಗೆ ಓದಿ, ಮೂರು ಸಲ ಬರೆದು ನಂತರ ಅದನ್ನು ಬಳಗದ ಪರೀಕ್ಷಾ ಗ್ರೂಪ್ಗೆ ಅಪ್ಪ್ಲೋಡ್ ಮಾಡುತ್ತಿದ್ದದ್ದು.
ಉದಾ: ಮುಕ್ತಕದ ಬಗ್ಗೆ ಮಾಹಿತಿ ನೀಡುತ್ತಿದ್ದರು, ನಿಯಮಗಳ ಬಗ್ಗೆ ವಿವರಿಸುವರು
*ಆದಿಪ್ರಾಸ ಕಡ್ಡಾಯ
*ಯತಿಭಂಗವಾಗಬಾರದು
*ಲಗಾದಿ ಜಗಣ ದೋಷವಿರಬಾರದು
*ಪದ್ಯದ ಕೊನೆಯ ಸಾಲು ಕಾವ್ಯನಾಮವಿರಬೇಕು.
೫ ೫ ೫ ೫
೫ ೫ ೫ ೩
೫ ೫ ೫ ೫
೫ ೫ ೯ ಸಾಲುಗಳು ಬರೆಯಲು ತಿಳಿಸಿತ್ತಾರೆ.
ಮುಕ್ತಕ ಸರಿಯಾಗಿ ಮೂಡದೆ ಇದ್ದರೆ ಅಕ್ಕಾ ಸರಿಯಾಗಿ ಮೂಡಿಬಂದಿಲ್ಲ ಎಂದು ವಿನಯವಾಗಿ ಹೇಳುವರು ಇದರಿಂದ ಕಲೆಯುವ ಹಂಬಲ ಹೆಚ್ಚಾಗಿದ್ದುಂಟು, ಯತಿ, ಲಯ, ಅರಿಸಮಾಸ, ತ್ರಿಪದಿ, ಪಂಚದಳ, ಷಡ್ಧಳ, ದ್ವಿದಳ, ಹೀಗೆ ಅನೇಕ ವಿಷಯಗಳ ಕುರಿತು ಪಾಟ ಮಾಡಿದ್ದಾರೆ, ಕವನ ಹೇಗೆ ರಚಿಸಬೇಕು, ಭಾವನೆ ತುಂಬಿದ ವಿಷಯದ ಬಗ್ಗೆ ಹೇಗೆ ರಚಿಸಬೇಕು ಎಂದು ಪರಿ-ಪರಿಯಾಗಿ ತಿಳಿಸಿ ನನ್ನನ್ನು ನುರಿತಳಾಗುವಂತೆ ಮಾಡಿದ್ದಾರೆ, ನಾನು ನಿರ್ವಾಹಕ ತಂಡದವರಿಗೆ ಸದಾ ಋಣಿಯಾಗಿರುತ್ತೇನೆ. ಭಾಷಾಜ್ಞಾನ, ಛಂದಸ್ಸಿನ ಜ್ಞಾನಾಮೃತ ಉಣಿಸಿ ಕೈ ಹಿಡಿದು ಸುಭದ್ರವಾಗಿ ಎದ್ದು ನಿಲ್ಲಿಸಿದ್ದಾರೆ. ನಮ್ಮ ಎಲ್ಲಾ ಕವಿ ಮನಸ್ಸುಗಳ ತುಂಬಾ ಆತ್ಮೀಯತೆ ಇದೆ, ಕೆಲವೊಂದು ವಿಷಯಗಳು ಬರೆಯಲು ನೀಡಿದಾಗ ನನ್ನದೇ ಆದ ವೈಯಕ್ತಿಕ ಕೆಲಸವಿದ್ದ ಕಾರಣ ಬರೆಯಲು ಸಾಧ್ಯವಾಗಿಲ್ಲ ಅದಕ್ಕೆ ಬೇಜಾರು ಇದೆ. ಇಂತಹ ಅದ್ಭುತವಾದ ಬಳಗ ಎಲ್ಲಿಯೂ ದೊರೆಯುವುದಿಲ್ಲ, ಸೃಜನಾತ್ಮಕ, ಅಕ್ಕರೆ ತುಂಬಿದ, ಪ್ರಬುದ್ಧವಾದ ಭಾಷಾ ತಂಡವಿರುವ ಕನ್ನಡಮ್ಮನ ತೇರು ಬಳಗ ಸತ್ಯವಾಗಲು ಈ ಭಾಷಾ ತೇರಿನಲ್ಲಿ ಕೂಡಿಸಿ, ಹಾರೈಸಿ , ಪೋಷಿಸುತ್ತಿರುವ ಬಳಗವಿದು, ಅನಾವಶ್ಯಕ ಪದ ಬಳಕೆ, ಕೆಟ್ಟ ಕಾಮೆಂಟ್ ಮಾಡದೆ ಆನಂದದಿಂದ ಸಹೋದರತ್ವ ಭಾವನೆ ಮೂಡಿಸಿ ಜವಾಬ್ದಾರಿಯುತವಾಗಿರಿಸಿದೆ.
ಮನೆಯಲ್ಲಿ ಬರೀ ಮನೆಕೆಲಸ ಮಾಡಿಕೊಂಡು ಬರೆಯುವ ಆಸೆ ಇದ್ದರೂ ಸರಿಯಾದ ವೇದಿಕೆಗಾಗಿ ಕಾಯುತ್ತಿದ್ದ ಹೆಣ್ಣು ಮಕ್ಕಳಿಗೆ ಸಿಕ್ಕಂತಹ ಆಶಾದಾಯಕ ಬೆಳವಣಿಗೆಯ ವೇದಿಕೆ, “ಒಂದು ದುಂಬಿಗೆ, ಹೂವಿನ ಮಧುಹೀರಿ ತನ್ನದೇ ಆದ ಜೇನಿನ ಗೂಡನ್ನು ಕಟ್ಟಿಕೊಂಡು, ಅದರಲ್ಲಿ ತುಂಬಲು ಬರುವ ದುಂಬಿಗಳೊಂದಿಗೆ ಪೌರ್ಣಮಿಯಂದು ಎಲ್ಲವೂ ಕೂಡಿ ಮಧುಹೀರಿದಂತೆ”, ನಮ್ಮ ಬಳಗ , ‘ಸಜ್ಜನರ ಸಹವಾಸ ಹೆಜ್ಜೇನು ಸವೆದಂತೆ’ ಜೇನಿನ ಗೂಡು ನಾವೆಲ್ಲ.
- ವೀಣಾ ರವಿಕುಮಾರ್

- ಆಕೃತಿಕನ್ನಡ
