ಗಾಡಿಯ ಕೆಳಗೆ ಸತ್ತ ನಾಯಿಗೂ ಜೀವ ಇದೆ ಅಲ್ಲವೇ?…ಅದಕ್ಕೂ ಹೊಟ್ಟೆ ಇದೆ ಅಲ್ಲವೇ?…ಅದಕ್ಕೂ ಮರಿಗಳಿವೆ ಅಲ್ಲವೇ?…ಅದು ಕೂಡಾ ದೇವರು ಸೃಷ್ಟಿಸಿದ ಒಂದು ಜೀವಿ. ಮೂಕಪ್ರಾಣಿಯ ವೇದನೆಯನ್ನು ಕವಿ ಮೇಗರವಳ್ಳಿ ರಮೇಶ್ ಅವರು ತಮ್ಮ ಕವನದಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ. ತಪ್ಪದೆ ಮುಂದೆ ಓದಿ…
ಮುಖ್ಯ ರಸ್ತೆಯಲ್ಲಿ ಬುರ್ರೆಂದು ಶಬ್ದ ಮಾಡುತ್ತಾ ಹೋದ ದೈತ್ಯಲಾರಿಯ
ಟೈರಿಗೆ ಸಿಕ್ಕಿ ನಾಯಿಯೊಂದು ಸತ್ತು ಹೋಗಿದೆ.
ಅದರ ಬಾಯಿ, ತಲೆ, ಕಣ್ಣುಗಳಿಂದ ರಕ್ತ ಹರಿದು
ಹರಡಿಕೊಂಡಿದೆ ರಸ್ತೆಯ ಮೇಲೆ
ಬೆಳಗಿನ ಬಿಸಿಲು ಆ ರಕ್ತದ ಮೇಲೆ ಬಿದ್ದು ಪ್ರತಿಫಲಿಸುತ್ತಿದೆ.
ಹತ್ತಿರದಲ್ಲೇಒಂದೆರಡು ನಾಯಿಗಳು ಬೊಗಳುತ್ತಾ
ಸತ್ತ ನಾಯಿಯ ಕಡೆಗೆ ನೋಡುತ್ತಿವೆ.
ಫುಟ್ ಪಾತಿನಲ್ಲಿ ನಡೆಯುವ ಜನ ಸತ್ತ ನಾಯಿಯನ್ನು ನೋಡಿ
ಲೊಚಗುಟ್ಟುತ್ತಾ ಸಾಗುತ್ತಿದ್ದಾರೆ. ಬೈಕು ಕಾರು ಬಸ್ಸುಗಳು
ಇದೊಂದು ಮಾಮೂಲಿ ಘಟನೆಯೆಂಬಂತೆ
ತಮ್ಮಷ್ಟಕ್ಕೆ ತಾವು ದೌಡಾಯಿಸುತ್ತಿವೆ ವೇಗದಲ್ಲಿ.
ಪಾಪದ ಹೆಣ್ಣು ನಾಯಿ ಅದು , ಗಬ್ಬವಿರ ಬೇಕು.
ಅದರ ಹೊಟ್ಟೆ ಊದಿಕೊಂಡಿದೆ, ಮೊಲೆಗಳು ಜೋತು ಬಿದ್ದಿವೆ.
ಅದು ಸಾಕಿದ ನಾಯಿಯಂತೂ ಅಲ್ಲ
ಯಾಕೆಂದರೆ ಅದರ ಕೊರಳ ಸುತ್ತ ಪಟ್ಟಿಯಿಲ್ಲ.
ಸತ್ತು ಹೋಗಿದೆ ನಾಯಿ,
ಆದರೆ ಅದರ ಸಾವಿಗಾಗಿ ದುಃಖಿಸುವವರಾರೂ ಇಲ್ಲ.
ಹೌದು, ನಾಯಿಗಳಿಗೆ ಕುಟುಂಬ ಇರುವುದಿಲ್ಲ
ಅವು ಇನ್ಷೂರೆನ್ಸ್ ಮಾಡಿರುವುದಿಲ್ಲ
ಬ್ಯಾಂಕಿನಲ್ಲಿ ಡೆಪಾಸಿಟ್ ಇಟ್ಟಿರುವುದಿಲ್ಲ
ಜಮೀನು ಮನೆ ಆಸ್ತಿ ಮಾಡಿರುವುದಿಲ್ಲ
ಅವುಗಳಿಗೆ ವಾರಸುದಾರರಿರುವುದಿಲ್ಲ.
ಅದೇನಿದ್ದರೂ ಮನುಷ್ಯರಿಗೆ ಮಾತ್ರ!
ಹಾಗಾಗಿ ಈ ಅಪಘಾತ ಒಂದು ಸಾಮಾನ್ಯ ಘಟನೆ
ಮನುಷ್ಯರಿಗೆ.
ಆದರೂ ಆ ನಾಯಿ ದೇವರು ಸೃಷ್ಟಿಸಿದ ಒಂದು ಜೀವಿ
ಮನುಷ್ಯರ ಹಾಗೇ!
- ಮೇಗರವಳ್ಳಿ ರಮೇಶ್
