ಸಿನಿಮಾ ಗೆಲ್ಲಬೇಕಾದರೆ ಹೇಗೆ ಮಾರ್ಕೆಟಿಂಗ್ ಮಾಡಬೇಕು ಎಂಬುದನ್ನು ಕಾಂತಾರ ಚಾಪ್ಟರ್ ೧ ನೋಡಿ ಸಿನಿಮಾ ಇಂಡಸ್ಟ್ರಿಯವರು ಕಲಿಯಬೇಕು. ಕಾಂತಾರ ಚಾಪ್ಟರ್ ೧ ಮುಂದಿನ ಭಾಗ ಬರುವಾಗ ಚಿತ್ರ ತಂಡದವರು ಹೆಚ್ಚು ಸೂಕ್ಷ್ಮವಾಗಿರಬೇಕು. ಆಕಾಶವಾಣಿ ಸಹಾಯಕ ನಿರ್ದೇಶಕರಾದ ನೂತನ ದೋಶೆಟ್ಟಿ ಅವರು ಕಾಂತಾರ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬುಕ್ ಮೈ ಶೋ ನಲ್ಲಿ ಬುಕ್ ಮಾಡುವಾಗ ಸರ್ಕಾರ 200 ರೂಪಾಯಿ ನಿಗದಿ ಮಾಡಿದ್ದರೂ ಕೋರ್ಟಿನಿಂದ ಹೆಚ್ಚು ಬೆಲೆ ಇಡಲು ಅನುಮತಿ ಸಿಕ್ಕಿದೆ ಮುಂತಾಗಿ ಉದ್ದದ ಒಕ್ಕಣೆ ಇರುವ ಪೇಜ್ ಪೂರ್ತಿ ಓದಿಯೇ ಹೆಚ್ಚು ಬೆಲೆ ತೆತ್ತು ಟಿಕೆಟ್ ಬುಕ್ ಮಾಡಿ ಆಯಿತು.
ಮಧ್ಯಾನ್ಹದ ಶೋಗೆ ಹೋದಾಗ ಅಂಥ ರಶ್ ಇರಲಿಲ್ಲ. ಕಿವಿಗಡಚಿಕ್ಕುವ ಅಬ್ಬರ ಬೊಬ್ಬಿರಿತಗಳಿಂದ ಬಹುತೇಕ ಸಿನಿಮಾವನ್ನು ಕಿವಿ ಮುಚ್ಚಿಯೇ ನೋಡಿದೆ. ಕಾಂತಾರ ನೋಡಿದ್ದಾಗ ಅದರ ಬಗ್ಗೆ ನನ್ನ ಅನಿಸಿಕೆಯನ್ನು ಇಲ್ಲಿ ನೋಡಿದ್ದ ನನ್ನ ಆತ್ಮೀಯ ಸ್ನೇಹಿತೆಯು ನನಗೆ ಮುಂಬೈನಿಂದ ಫೋನ್ ಮಾಡಿದ್ದಳು. ಚರ್ಚೆಯ ನಂತರ ಇನ್ನೊಂದು ಬಾರಿ ಸಿನಿಮಾಕ್ಕೆ ಹೋಗಿ ನೋಡಿದಾಗ ಅವಳಿಗೂ ನನ್ನ ಅನಿಸಿಕೆ ಸರಿ ಅನ್ನಿಸಿತ್ತು. ಮುಖ್ಯವಾಗಿ ಆಗ ಶೂಟಿಂಗ್ ನಡೆದ ಸ್ಥಳ ಅವರ ಕುಲದೇವರಿಗೆ ಸೇರಿದ್ದು ಹಾಗೂ ಅಲ್ಲಿ ದೇವರ ಮುಖವೊಂದನ್ನು ಆಗಾಗ ತೋರಿಸುತ್ತಾರಲ್ಲ ಅದು ಅವರ ಮನೆದೇವರು. ಆ ಕಾರಣದಿಂದ ಮೊದಲ ಬಾರಿ ಭಯ ಭಕ್ತಿಯಿಂದ ನೋಡಿದ್ದ ಅವಳು, ಎರಡನೆ ಬಾರಿ ತನ್ನ ಅಭಿಪ್ರಾಯ ಬದಲಿಸಿಕೊಂಡಿದ್ದಳು. ಇಂದು ಚಾಪ್ಟರ್ 1 ನೋಡಿದಾಗ ಅದೆಲ್ಲಾ ನೆನಪಾಯಿತು.

ಇಂಟರ್ವಲ್ ಬರುವ ತನಕ ಕೇವಲ ಮೂರು ಸಾಲುಗಳಲ್ಲಿ ಹೇಳಬಹುದಾದ ಕಥೆಯನ್ನುಅಷ್ಟೂದ್ದ ಎಳೆಯಲಾಗಿದೆ ಎಂದು ನಮಗೆಲ್ಲ ಅನ್ನಿಸಿತು. ಇಂಟರ್ವಲ್ ನಂತರವೂ ಅಬ್ಬರ ಬಿಟ್ಟರೆ, ಕೊನೆಯ ಅರ್ಧ ಗಂಟೆಯ ಓಟ, ಓಘ, ಚಿತ್ರಣ ಎಲ್ಲವೂ ಸೇರಿ ಸಿನಿಮಾ ಗೆದ್ದು ಬಿಡುತ್ತದೆ. ಪಿ ವಿ ಆರ್ ನಲ್ಲಿ ರಿಷಭ್ ಶೆಟ್ಟಿಯ ಕೂಗಿನೊಂದಿಗೆ ಕುರ್ಚಿಗಳೂ ಅದುರುತ್ತವೆ. ಅಸಂಬದ್ಧ, ಬೇಕಂತಲೇ ತುರುಕುವ ಜೋಕ್ ಗಳು, ಕಾಂತಾರದಂತೆ ಇಲ್ಲೂ ಬೇಕಾದಷ್ಟಿವೆ. ಚಿತ್ರದ ಮೂಲಕ ಏನು ಹೇಳಿದ್ದಾರೆ ಎಂದಂತೂ ಅರ್ಥ ಆಗಲಿಲ್ಲ. ಕುಡಿತ, ಬೀಡಿ, ಹೆಣ್ಣು, ಹಿಂಸೆ, ಕ್ರೌರ್ಯ, ಹಸಿ ಕಾಮ ಇವೆಲ್ಲ ಈ ಸಿನಿಮಾಗಳ ಬಂಡವಾಳವಾಗಿ ಇದ್ದರೂ ದೈವದ ಎಳೆ, ಅದರ ತೋರಿಸುವಿಕೆ, ಅದರಲ್ಲೂ ಕೊಟ್ಟ ಕೊನೆಯ ಭಾಗದಲ್ಲಿ ಚಿತ್ರವನ್ನು ಇನ್ನಿಲ್ಲದಂತೆ ಗೆಲ್ಲಿಸುತ್ತದಲ್ಲ ಎನ್ನುವುದು ಸೋಜಿಗ.
ಕೆಜಿಎಫ್ ನಿಂದ ಕನ್ನಡದಲ್ಲಿ ಬದಲಾದ ಸಿನಿಮಾ ಟ್ರೆಂಡ್ ಹೀಗೇ ಮುಂದುವರೆದರೆ ಎಂದು ಕಳವಳವಾಗುತ್ತಿದೆ. ವಯಸ್ಸಾದವರ, ಮಕ್ಕಳ ಮೇಲೆ ಇಂಥ ಅಬ್ಬರದ ಸಿನಿಮಾಗಳು ಹೇಗೆ ತೊಂದರೆ ಮಾಡಬಹುದು ಎಂದು ಯೋಚಿಸಿದೆ.
ನಿನಾಸಂನ film appreciation course ಮಾಡುವಾಗ ಕೆ ವಿ ಸುಬ್ಬಣ್ಣ ಅವರೂ ಸೇರಿದಂತೆ ಖ್ಯಾತನಾಮರು ಕಲಿಸಿದ್ದನ್ನು ಇಂದು ನೆನಪಿಸಿಕೊಂಡೇ. ಇಷ್ಟು ಅಬ್ಬರ, ಕ್ರೌರ್ಯ, ಹಿಂಸೆ ಸಿನಿಮಾದಂಥ ಪ್ರಬಲ ಮಾಧ್ಯಮಕ್ಕೆ ಬೇಕೇ ಅನ್ನಿಸಿತು.

ನಿರ್ದಿಷ್ಟ ಭಾಗದ ಆಚರಣೆ, ನಂಬಿಕೆಯೊಂದು ಜಗತ್ತಿಗೇ ಪರಿಚಯವಾದದ್ದು ಖುಷಿ ಕೊಟ್ಟ ವಿಚಾರ. ಸಿನಿಮಾ ಗೆಲ್ಲಬೇಕಾದರೆ ಹೇಗೆ ಮಾರ್ಕೆಟಿಂಗ್ ಮಾಡಬೇಕು ಎಂಬುದನ್ನು ಇದನ್ನು ನೋಡಿ ಸಿನಿಮಾ ಇಂಡಸ್ಟ್ರಿ ಕಲಿಯಬೇಕು. ಥಿಯೇಟರ್ ನಿಂದ ಹೊರಬರುವಾಗ ದಟ್ಟ ವಿಷದ ಆವರಿಸಿಕೊಂಡಿದ್ದಲ್ಲದೇ ಮನಸ್ಸು ಯೋಚಿಸುವುದನ್ನು ಕಳೆದುಕೊಂಡು ಮರಗಟ್ಟಿತು. ಇದಕ್ಕೆ ಕಾರಣ ಈ ಮೇಲೆ ಹೇಳಿದ ಅನೇಕ ಕಾರಣಗಳು ಇಂದು ಬೇರೆ ಹೇಳಬೇಕಿಲ್ಲ. ಮುಂದಿನ ಭಾಗದ ಸೂಚನೆ ಕೊನೆಯಲ್ಲಿದೆ. ಅದನ್ನು ಮಾಡುವಾಗ ತಂಡ ಹೆಚ್ಚು ಸೂಕ್ಷ್ಮವಾಗಿರಲಿ ಎಂದು ಹೇಳಬೇಕೆನಿಸುತ್ತಿದೆ.
ಆ ಮರುಗಟ್ಟುವಿಕೆಯನ್ನು ಕಳೆದುಕೊಳ್ಳಲು ಪಾಪ್ ಕಾರ್ನ್, ಸೊಗಸಾದ ಊಟ, ಕುಟುಂಬದ ಜೊತೆಗೆ ಮಾಡಬೇಕಾಗಿ ಬಂತು.
(ಸೂಚಿನೆ : ಈ ಲೇಖನದ ಕುರಿತು ಚರ್ಚೆಗೆ ಆಸ್ಪದವಿದೆ, ಆದರೆ ಕೆಟ್ಟ ಪದಗಳು, ಕಾಮೆಂಟ್ ಗಳಿಗೆ ಆಸ್ಪದವಿಲ್ಲ )
- ನೂತನ ದೋಶೆಟ್ಟಿ – ಕವಿ, ಕತೆಗಾರ್ತಿ, ಸಹಾಯಕ ನಿರ್ದೇಶಕರು, ಆಕಾಶವಾಣಿ, ಬೆಂಗಳೂರು.
