ಹೆದರಿಕೆಯಾದಾಗ ಗೋಪಾಲನನ್ನು ಕರೆ ಎಂದು ಹೇಳಿ ತಾಯಿ ಮಗುವಿಗೆ ಕಳುಹಿಸಿದಳು. ಮಗು ತಾಯಿಯ ಮಾತಿನಲ್ಲಿ ನಂಬಿಕೆಯಿಟ್ಟ ಅರಣ್ಯದೊಳಗೆ ಭಯಪಟ್ಟು, ‘ಅಣ್ಣಾ ಗೋಪಾಲಾ, ಕಾಡಿನೊಳಗೆ ಒಬ್ಬನಿಗೇ ಭಯವಾಗುತ್ತಿದೆ. ಎಲ್ಲಿದ್ದೀಯಾ ಬಾ ಅಣ್ಣಾ’ ಎಂದು ಕರೆದಾಗ, ಮುಗ್ಧ ಬಾಲಕನ ಕರೆಗೆ ಓಗೊಟ್ಟು ಗೋಪಾಲ ಬಂದ. ಮುಂದೇನಾಯಿತು ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ನಂಬಿಕೆಗಳು ಇಲ್ಲದೆ ಬದುಕಬಹುದೇ?” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
‘ಯಾಕೋ ಇವಳ ‘ಹೋಂ ಸಿಕ್’ ಜೋರಾಗಿದೆ.ಅಷ್ಟು ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದೇ ಭಾಗ್ಯ.ಅದನ್ನು ಕಾಲಿನಿಂದ ಒದ್ದು ಬಂದರೆ ಅವಳನ್ನು ,ಹೇಳಿದಷ್ಟು ಶುಲ್ಕ ತುಂಬಿ ಬೇರೆ ಕಾಲೇಜಿಗೆ ಕಳುಹಿಸಲಾಗುತ್ತದೆಯೇ? ವಸತಿಯ ಸಮಸ್ಯೆಯೂ ಇಲ್ಲ.ಎಲ್ಲ ಅನುಕೂಲವೂ ಅಲ್ಲೇ ಇದೆ.’
‘ನನಗಿಲ್ಲಿ ಇರಲಾಗುವುದಿಲ್ಲ ನಿಮ್ಮನ್ನೆಲ್ಲ ಬಿಟ್ಟು! ಇಲ್ಲಿ ಎಲ್ಲ ಭಾಷೆಯವರೂ ಇದ್ದಾರೆ. ಕನ್ನಡಿಗರೇ ಕಡಿಮೆ.ಸೆಂಟ್ರಲ್ ಸ್ಕೂಲಿನಲ್ಲಿ ಓದಿ ಬಂದವರೇ ಹೆಚ್ಚಾಗಿರುವುದು.ಒಳ್ಳೆಯ ಇಂಗ್ಲಿಷ್ ಮಾತನಾಡುತ್ತಾರೆ. ನನಗೆ ಕೀಳರಿಮೆ ಬೇರೆ ಕಾಡುತ್ತಿದೆ.ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿ ಅಲ್ವಾ? ಹೊಂದಿಕೊಳ್ಳಲು ಬೇರೆ ಕಷ್ಟವಾಗುತ್ತಿದೆ.ನಾನಿಲ್ಲಿ ಇರೋಲ್ಲ ಅಂದ್ರೆ ಇರೋಲ್ಲ’.
ಮಗಳ ಪತ್ರವನ್ನೋದಿ ಅಪ್ಪನಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಯಿತು.
ಪ್ರತಿಯೊಂದಕ್ಕೂ ಹಿರಿಮಗಳ ಜೊತೆ ಬಹಳ ಆತ್ಮೀಯವಾಗಿ ಚರ್ಚಿಸುತ್ತಿದ್ದ,ಅಪ್ಪ ಅವಳನ್ನು ಕರೆದು,ತಂಗಿಯ ಪತ್ರ ತೋರಿಸಿ, ‘ನೋಡು ಮಗಳೆ, ಹೀಗೆ ಮಾಡ್ತಿದಾಳೆ, ಅಷ್ಟು ಬುದ್ಧಿವಂತೆ ಅವಳು,ಬೇಗ ಕಲಿಯುತ್ತಾಳೆ. ಅಷ್ಟಲ್ಲದೆ ಅವಳಿಗೆ ಮೆರಿಟ್ ಸೀಟೇ ತಾನೆ ಸಿಕ್ಕಿರುವುದು ಎಂದಾಗ,ಅಪ್ಪನ ಆಸಹಾಯಕತೆಯನ್ನು ಬಿಂಬಿಸುತ್ತಿದ್ದ ಕಣ್ಣುಗಳಲ್ಲಿ ತುಂಬಿದ್ದ ಹತಾಶೆಯು ಏಕೋ ಮಂಜಿನ ಕಣೆಯಂತೆ ಇರಿಯತೊಡಗಿತು ಅವಳ ಹೃದಯವನ್ನು….!’
ಅಪ್ಪನನ್ನು ಸಾಂತ್ವನಗೊಳಿಸುತ್ತಾ, ನುಡಿದಳು,’ಒಂದು ಉಪಾಯ ಮಾಡೋಣ, ಹೇಗೂ ಅವಳಿಗೆ ಆಂಜನೇಯನ ಮೇಲೆ ತುಂಬಾ ಶ್ರದ್ಧೆ,ಭಕ್ತಿ ! ನೀವು ಆಂಜನೇಯಸ್ವಾಮಿ ದೇವಸ್ಥಾನದಿಂದ ಕುಂಕುಮ ಪ್ರಸಾದ ತಂದು ಒಂದು ಕವರಿನಲ್ಲಿ ಇಟ್ಟು ಅವಳಿಗೆ ಪೋಸ್ಟ್ ಮಾಡಿಬಿಡಿ,ಹೀಗೆ ತಿಳಿಸಿ,’ಮಗಳೆ,ನಿನಗೆ ಮನೆಯ ನೆನಪಾಗದಂತೆ ಇಲ್ಲಿ ಜ್ಯೋತಿಷಿಯೊಬ್ಬರಿಂದ ಕುಂಕುಮ ಮಂತ್ರಿಸಿ ಕಳುಹಿಸಿದ್ದೇನೆ.ಅದನ್ನು ನಿನ್ನ ತಲೆದಿಂಬಿನಡಿ ಇಟ್ಟರೆ ನಿನಗೆ ಮನೆಯ ನೆನಪಾಗುವುದಿಲ್ಲವಂತೆ, ಆರಾಮವಾಗಿ ತರಗತಿಗೆ ಹಾಜರಾಗು. ಒಳ್ಳೆಯದಾಗಲಿ ಅಂತಾ ಬರೆದುಬಿಡಿ’ಎಂದು ಸೂಚಿಸಿದ್ದೆ.ಅದುವರೆಗೆ ಪತ್ರ,ಟೆಲಿಗ್ರಾಂ ಮುಖಾಂತರ ಹೀಗೆ ಹೆದರಿಸುತ್ತಿದ್ದ ಮಗಳು ಮನೆ ಚಿಂತೆ ಮರೆತು ಓದಿನಲ್ಲಿ ತೊಡಗಿಕೊಂಡಳು.
ನಂಬಿಕೆ ಎನ್ನುವುದು ಬದುಕಿನ ದೊಡ್ಡ ಆಧಾರಸ್ತಂಭ!

ದಾಸರೇ ಹೇಳಿದ್ದಾರಲ್ಲ,’ನಂಬಿಕೆಟ್ಟವರಿಲ್ಲವೋ’ ‘ಅಂತಾ…
ಇದೀಗ ನಾನು ಬದುಕಿನಲ್ಲಿ ನಂಬಿಕೆಯು ಊರುಗೋಲಾಗಿ,ಚುಕ್ಕಾಣಿಯಾಗಿ ವಿಷಮ ಸನ್ನಿವೇಶಗಳಲ್ಲಿ ನಮ್ಮನ್ನು ಹೇಗೆ ಮುನ್ನಡೆಸುತ್ತದೆ ಹಾಗೆಯೇ ವ್ಯತಿರಿಕ್ತವಾದರೆ ಹೇಗೆ ಪ್ರಾಣಾಂತಿಕವೂ ಆಗಬಲ್ಲದು,ಎಂಬ ವಿಷಯದ ಕುರಿತು ಜಿಜ್ಞಾಸೆಗಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ.
*
ನಂಬುಗೆ ಬದುಕಿಗೆ ಸದಾ ಇಂಬು…ನಂಬುಗೆಯ ಪ್ರಶ್ನೆ ಬಂದಾಗ ತಾಯಿಗೆ ಪ್ರಥಮಸ್ಥಾನ!
ಕವಿ ಕುವೆಂಪು, ಎಷ್ಟೊಂದು ಸುಂದರವಾದ ಸಾಲುಗಳಲ್ಲಿ ಇದನ್ನು ಪ್ರತಿಪಾದಿಸಿದ್ದಾರೆ ನೋಡಿ,
‘ಅಮ್ಮನ ಮಡಿಲೊಳು ಮಲಗಿರುವೆನಗೆ
ಗುಮ್ಮನ ಭಯವಿಹುದೇನಣ್ಣಾ!
ಅಮೃತದ ಹೊಳೆಯೊಳು ತೇಲುವ ನನಗೆ
ಮೃತ್ಯುವಭಯವಿಹುದೇನಣ್ಣಾ?’
*
ನಂಬುಗೆಗೆ ಇದಕ್ಕಿಂತ ಹಿರಿದಾದ ವ್ಯಾಖ್ಯಾನ ಬೇಕೆ?
*
ರೈತನ ಜೀವಾಳ ಕೃಷಿ ! ಬಹುತೇಕ ಕೃಷಿಯನ್ನೇ ಅವಲಂಬಿಸಿರುವ ಆತನಿಗೆ ತನ್ನ ಬೆಳುವೊಲವೇ ದೇವರು.ಮಳೆಯನ್ನೇ ಆಧರಿಸಿರುವ ಕೃಷಿ ಬದುಕು ಎಷ್ಟು ಅನಿಶ್ಚಿತ ಎಂದರೆ ಹೊಟ್ಟೆ ಬಟ್ಟೆಗೂ ಸಾಲದೆಂಬಂತೆ ಕೆಲವೊಮ್ಮೆ ಆದಾಯವಿಲ್ಲದೆ ಬದುಕನ್ನೇ ಪಲ್ಲಟಗೊಳಿಸಿಬಿಡುತ್ತದೆ.

ಫೋಟೋ ಕೃಪೆ : google
ಆದರೂ ಆತನ ಆರಾಧ್ಯದೈವದ ಮೇಲಿನ ನಂಬಿಕೆಯನ್ನು ಅವನು ಕೈಬಿಡುವುದಿಲ್ಲ. ಈ ವರುಷ ಕೈಕೊಟ್ಟ ಬೆಳೆ ಮುಂದಿನ ಸಲ ಕೈಬಿಡಲಾರದೆಂಬ ಅದಮ್ಯ ನಂಬಿಕೆಯ ಮೇಲೆ ತನ್ನ ವರುಷದುದ್ದದ ಕಾಯಕದ ಶ್ರಮವನ್ನು ಮರೆತು ಮತ್ತೆ ಆಶಾಮುಖಿಯಾಗುತ್ತಾನೆ.ಈ ಸಮಸ್ಥಿತಿಯೇ ಅವನ ಬದುಕನ್ನು ಸ್ಥಿರವಾಗಿಸುತ್ತದೆ.
‘ನಂಬಿ ಕೆಟ್ಟವರಿಲ್ಲವೋ..ಈ ಜಗದಿ’
ಎಂಬ ದಾಸವಾಣಿಯಂತೆ,
‘ಹಾಸಿಗೆಯಿದ್ದಷ್ಟು ಕಾಲು ಚಾಚು’ವ
ಮನೋಭಾವವನ್ನು ರೂಢಿಸಿಕೊಳ್ಳುತ್ತಾನೆ.
ಅದಕ್ಕೇ ಗರತಿಗೆ ‘,ಭೂಮ್ತಾಯಿಯೇ ದೇವರು!’
‘ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳೆಯೋಳ/ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನ’
*
ಆಡಂಬರವಿಲ್ಲದ ಈ ಶುದ್ಧ ನಿಷ್ಠೆ,ಅವಳಿಗೆ !’ತಾನು ನಂಬಿದ ದೇವರೆಂದು’ ನೆಲದವ್ವನನ್ನು ಪರಿಗಣಿಸುವ ಎಂತಹ ಧಾರಣಶಕ್ತಿಯನ್ನು ದಯಪಾಲಿಸಿದೆ ನೋಡಿ ಈ ಬದುಕು!
*
ಬಾಲ್ಯದಲ್ಲಿ ಗೋಡೆಯ ಮೇಲೆ ತೂಗು ಹಾಕಿದ್ದ ರಾಮನ ಚಿತ್ರಪಟವನ್ನು ತೋರಿಸಿ ಅಪ್ಪ ಹೇಳುತ್ತಿದ್ದುದನ್ನು ಯಾವಾಗಲೂ ನೆನೆಸಿಕೊಳ್ಳುತ್ತಾಳೆ ಶುಭಾ…!
ನಿಮಗೆ ಭಯ ಆದಾಗ ಈ ರಾಮನನ್ನು ಕರೆಯಿರಿ, ಖಂಡಿತಾ ನಿಮ್ಮ ಕರೆಗೆ ಓಗೊಡುತ್ತಾನೆ!’
*
ಕೋಳೂರು ಕೊಡಗೂಸು ಶಿವನಿಗೆ ಹಾಲು ಕುಡಿಸಿದ ಕತೆಯಲ್ಲಿ ಇಂತಹ ಮುಗ್ಧ ನಂಬಿಕೆ ಅಡಗಿದೆ ತಾನೆ.. ‘ನನ್ನ ಗೋಪಾಲ’ ಮಕ್ಕಳ ನಾಟಕದಲ್ಲಿ, ಕುವೆಂಪು ಇದನ್ನೇ ಪ್ರತಿಪಾದಿಸಲು ಹೊರಟಿದ್ದು! ಅರಣ್ಯದೊಳಗೆ ಹಾಯ್ದು ಶಾಲೆಗೆ ಹೋಗಿಬರಬೇಕಾದಾಗ, ‘ಹೆದರಿಕೆ ಆಗುತ್ತದಮ್ಮಾ’ ಎಂದು ಮಗು ತಾಯಿಯಲ್ಲಿ ಹೇಳಿಕೊಂಡಾಗ, ಆಕೆ ಅಲ್ಲಿ ನಿನ್ನ ಅಣ್ಣನಿದ್ದಾನೆ. ಹೆದರಿಕೆ
ಯಾದಾಗ ನೀನು ಅವನನ್ನು ಕರೆ’ ಎಂದು ಹೇಳಿ ಕಳುಹಿಸಿದಳು. ಆಗ ತಾಯಿಯ ಮಾತಿನಲ್ಲಿ ನಂಬಿಕೆಯಿಟ್ಟ ಆ ಬಾಲಕ, ಅರಣ್ಯದೊಳಗೆ ಭಯಪಟ್ಟು, ‘ಅಣ್ಣಾ ಗೋಪಾಲಾ, ಕಾಡಿನೊಳಗೆ ಒಬ್ಬನಿಗೇ ಭಯವಾಗುತ್ತಿದೆ.ಎಲ್ಲಿದ್ದೀಯಾ ಬಾ ಅಣ್ಣಾ’ ಎಂದು ಕರೆದಾಗ,ಮುಗ್ಧ ಬಾಲನ ಕರೆಗೆ ಓಗೊಟ್ಟು ಬಂದ ಗೋಪಾಲ ಪ್ರತಿನಿತ್ಯವೂ ಅವನನ್ನು ಅರಣ್ಯ ದಾಟಿಸುವ ಕೆಲಸ ಮಾಡುತ್ತಿದ್ದ. ‘ಕೊನೆಗೆ ಪರೀಕ್ಷಿಸಲೆಂದೇ ಬಂದ ಗುರುವಿಗೂ ಆಚ್ಚರಿಯಾಗುವಂತೆ ಆತನ ದರ್ಶನ ಮಾಡಿಸಿದ ‘ ಈ ಕತೆ ಎಂತಹ ಸೊಗಸಾದ ನೀತಿಯನ್ನು ಸಾರುತ್ತದೆ ನೋಡಿ!
*
ನಂಬಿಕೆಗೆ ಪಾತ್ರನಾಗುವುದು, ಎಲ್ಲ ಅರ್ಹತೆಗಿಂತ ಮಿಗಿಲಾದ ಅರ್ಹತೆ. ಅಂದರೆ ಒಬ್ಬ ವೈದ್ಯನೋ, ಒಬ್ಬ ನಾಯಕನೋ ಜನರ ನಂಬಿಕೆಗೆ ಪಾತ್ರನಾದನೆಂದರೆ ಆ ವ್ಯಕ್ತಿ ಅವರ ದೃಷ್ಟಿಯಲ್ಲಿ ಸ್ವತಃ ದೇವರಿಗೆ ಸಮಾನವಾಗಿ ಆರಾಧಿಸಲ್ಪಡುತ್ತಾನೆ. ವೈದ್ಯರ ಮೇಲಿನ ನಂಬುಗೆಯಿಂದ, ಅವರ ಸವಿಮಾತಿನ ಪ್ರಭಾವದಿಂದಲೇ ರೋಗಿಗೆ ನೋವು ಶಮನವಾಗಿ ಬಿಡುತ್ತದೆ. ಖಾಯಿಲೆ ಬಹುತೇಕ ವಾಸಿಯಾದ ಅನುಭವ ಉಂಟಾಗುತ್ತದೆ. ಇದನ್ನು ದೃಢಪಡಿಸಲೆಂದೇ ನಾನಿಲ್ಲಿ ಸ್ವಾಮಿ ಜಗದಾತ್ಮಾನಂದಜೀಯವರ ‘ಬದುಕಲು ಕಲಿಯಿರಿ’ ಪುಸ್ತಕದ ಒಂದು ಪ್ರಸಂಗವನ್ನು ಉದ್ಧರಿಸಲು ಬಯಸುತ್ತೇನೆ.

ಫೋಟೋ ಕೃಪೆ : google
ದೆಹಲಿಯ ಸಮೀಪದ ಹಳ್ಳಿಯ ಒಬ್ಬ ರೈತ. ಅಸ್ತಮಾ ಪೀಡಿತನಾಗಿ ಬಹಳ ಬಸವಳಿದಿದ್ದ. ರೋಗ ಉಲ್ಬಣಿಸಿದಾಗ ನಗರಕ್ಕೆ ಹೋಗಿ ಒಬ್ಬ ಪ್ರಸಿದ್ಧ ವೈದ್ಯರನ್ನು ಕಂಡು ತನ್ನನ್ನು ಪರೀಕ್ಷಿಸಿ ಔಷಧಿ ನೀಡಬೇಕೆಂದು ಕೇಳಿಕೊಂಡ.ವೈದ್ಯರು ತಮ್ಮ ಪದವಿಗಳನ್ನು ಅಚ್ಚಿಸಿದ ದೊಡ್ದದಾದ ಕಾಗದದ ಮೇಲೆ ಔಷಧಿಯ ಹೆಸರನ್ನು ಬರೆದು,ಇದನ್ನು ಹದಿನಾಲ್ಕು ಸಮಭಾಗ ಮಾಡಿ ಒಂದುವಾರ ಕಾಲ ಬೆಳಿಗ್ಗೆ, ಸಂಜೆ ಸೇವಿಸಿ ಒಂದು ವಾರ ಕಳೆದು ತಪಾಸಣೆಗೆ ಮತ್ತೆ ಬರುವಂತೆ ಸೂಚಿಸಿದರು.
ಡಾಕ್ಟರ್ ಹೇಳಿದುದನ್ನು ಕಟ್ಟುನಿಟ್ಟಾಗಿ ಪಾಲಿಸಿದ ರೈತ , ಒಂದು ವಾರ ಆಗುತ್ತಲೇ ಬಂದು ಡಾಕ್ಟರಿಗೆ ನಮಸ್ಕರಿಸಿ,’ತಾವು ಕೊಟ್ಟ ಔಷಧಿ ರಾಮಬಾಣದಂತೆ ಕೆಲಸ ಮಾಡಿತು. ಅಸ್ತಮಾದ ನರಳಾಟದಿಂದ ನನ್ನನ್ನು ರಕ್ಷಿಸಿದಿರಿ.ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ…’ .ಪರೀಕ್ಷಿಸಿದಾಗ ಆತ ಸ್ವಸ್ಥನಾಗಿದ್ದನ್ನು ಕಂಡು ವೈದ್ಯರಿಗೆ ಬಹಳ ಸಂತೋಷವಾಯಿತು ಕೇಳಿದರು , ನಾನು ಹೇಳಿದ ಪ್ರಮಾಣದಲ್ಲೇ ಔಷಧಿ ತೆಗೆದುಕೊಂಡಿರಲ್ಲವೇ?’
‘ಹೌದು ಹಾಗೆಯೇ ಮಾಡಿದೆ ‘ಎಂದ!
ಡಾಕ್ಟರ್ ತಾವು ಕೊಟ್ಟ ಔಷಧಿ ಸೂಚಿಯನ್ನು ತೋರಿಸಲು ಎಂದು ಹೇಳಿದಾಗ, ಅವರಿಗೆ ಆಶ್ಚರ್ಯವೊಂದು ಕಾದಿತ್ತು! ಆ ರೋಗಿ ವೈದ್ಯರು ಕೊಟ್ಟು ಆ ಔಷಧಿ ಚೀಟಿಯನ್ನು ಹದಿನಾಲ್ಕು ಭಾಗ ಮಾಡಿ ಏಳು ದಿನಗಳು ಬೆಳಿಗ್ಗೆ ಸಂಜೆ ಎರಡು ಹೊತ್ತು ಔಷಧಿಯಂತೆ ಸೇವಿಸಿದ್ದ ! ಆದರೆ ಡಾಕ್ಟರ್, ಆಶ್ಚರ್ಯಚಕಿತರಾಗಿ ಮುಗುಳ್ನಗುತ್ತಾ, ರೋಗಮುಕ್ತನಾಗಿ ಹರ್ಷಿತನಾಗಿದ್ದ ಆತನಿಗೆ ಏನೂ ಹೇಳದೆ ‘ನೀವೀಗ ಸಂಪೂರ್ಣ ಗುಣಮುಖರಾಗಿದ್ದೀರಿ ‘
ಎಂದು ಅಭಿನಂದಿಸಿ ಕಳುಹಿಸಿಕೊಟ್ಟರು. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಪ್ರಸಂಗವನ್ನು ಸ್ವಾಮೀಜಿ ತಮ್ಮ ,’ಬದುಕಲು ಕಲಿಯಿರಿ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ನಂಬಿಕೆ ಎಂಬುದು ಅನರ್ಘ್ಯ ರತ್ನ ಇದ್ದಂತೆ.ನಂಬಿಕೆಯ ಊರುಗೋಲು ಎಷ್ಟೋ ಮಂದಿಯನ್ನು ಸಮಸ್ಯೆಯ ಭೀತಿಯಿಂದ ಮುಕ್ತರಾಗಿಸಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ.
ಮಹಾಭಾರತದ ಕರ್ಣನ ಮೇಲೆ ದುರ್ಯೋಧನನಿಗೆ ಇದ್ದ ಅಚಲ ನಂಬಿಕೆ, ತನ್ನ ಶಿಷ್ಯ ಅರ್ಜುನನ ಪರಾಕ್ರಮದ ಮೇಲೆ, ದ್ರೋಣಾಚಾರ್ಯರಿಗಿದ್ದ ಅಸೀಮ ನಂಬಿಕೆ, ಭೀಷ್ಮಾಚಾರ್ಯರಿಗೆ ಶರಶಯ್ಯೆಯಲ್ಲಿ ನೀರಡಿಕೆಯಾದಾಗ,ದುರ್ಯೋಧನ ಧಾವಿಸಿ ತಂದ ನೀರನ್ನು ನಿರಾಕರಿಸಿ,ಅರ್ಜುನನತ್ತ ನೋಡಿದ ನೋಟದಲ್ಲಿ, ಅವನ ಬಿಲ್ವಿದ್ಯಾ ಸಾಮರ್ಥ್ಯದಲ್ಲಿ ಆ ಕುರುಕುಲ ಪಿತಾಮಹನಿಗಿದ್ದ ನಂಬಿಕೆಯ ಪ್ರಭಾವದಿಂದ ಅವರ ಬಾಯಿಗೆ ನೇರವಾಗಿ ನೀರಿನ ಚಿಲುಮೆಯನ್ನು ಹೊಮ್ಮಿಸಿದ ಅರ್ಜುನನ ಇಂಗಿತಜ್ಞತೆಯ ಬಗೆಗಿನ ನಂಬಿಕೆ, ಬಕಾಸುರನ ವಧೆಗೆ ಹೊರಟ ಭೀಮನ ಭುಜಬಲದ ಮೇಲೆ ತಾಯಿ ಕುಂತಿಗಿದ್ದ ಆಗಾಧ ನಂಬಿಕೆ, ಹೀಗೆ ನಂಬಿಕೆಗೆ ಪಾತ್ರರಾಗುವವರ ಆತ್ಮಬಲವೂ ವಿಶಿಷ್ಟವಾಗಿರಬೇಕು.
*
ಬಹಳ ಹಿಂದೆ ಬಾಲ್ಯದಲ್ಲಿ ತನ್ನ ಮೇಲೆ ಪ್ರಭಾವ ಬೀರಿದ ಕತೆ. ವಿಲಿಯಂ ಟೆಲ್ ಎಂಬ ಬಿಲ್ಗಾರನಿದ್ದ. ತಾನೆಂದೂ ಗುರಿತಪ್ಪದ ಚಾಣಾಕ್ಷ. ಒಮ್ಮೆ ತೆರೆದ ಬಯಲಿನಲ್ಲಿ ಆತನ ಬಿಲ್ವಿದ್ಯಾ ಪ್ರಾವೀಣ್ಯತೆಯ ಪ್ರದರ್ಶನವನ್ನು ಅಲ್ಲಿಯ ರಾಜ ಏರ್ಪಡಿಸಿದ್ದ. ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಗೆದ್ದ ಟೆಲ್ ನಿಗೆ ರಾಜ ಪಂಥಾಹ್ವಾನವನ್ನು ನೀಡಿದ.ಅದೆಂದರೆ ಅವನು ತನ್ನ ಮಗನ ತಲೆಯ ಮೇಲೆ ಸೇಬು ಹಣ್ಣನ್ನು ಇರಿಸಿ ಹಣ್ಣಿಗೆ ಗುರಿ ಇಟ್ಟು ಹೊಡೆಯಬೇಕು’ ಎಂಬುದಾಗಿತ್ತು.ಸ್ವಲ್ಪ ಅನುಮಾನಿಸಿದ ಅಪ್ಪನ ಮನಸ್ಥಿತಿ ಮಗನಿಗೆ ಅರ್ಥವಾಯಿತು. ಅವನು ಮುಂದೆ ಬಂದು ಅಪ್ಪನಿಗೆ ,’ಹೆದರಬೇಡಿ ಅಪ್ಪಾ! ಧೈರ್ಯದಿಂದ ಗುರಿ ಹೊಡೆಯಿರಿ ,ಒಂದಿನಿತೂ ಅಲುಗಾಡದಂತೆ ನಾನು ನಿಂತು ಕೊಳ್ಳುತ್ತೇನೆ.ನೀವು ಖಂಡಿತಾ ಈ ಪರೀಕ್ಷೆಯಲ್ಲಿ ಗೆಲ್ಲುವಂತೆ ಸಹಕರಿಸುತ್ತೇನೆ. ನೀವು ಸೋಲೊಪ್ಪಿಕೊಳ್ಳಲು ನಾನೆಂದೂ ಅವಕಾಶ ಕೊಡಲಾರೆ ‘ ಎಂದು ಭರವಸೆ ನೀಡಿದ.ಮಗನ ದಿಟ್ಟ ನಿರ್ಧಾರ ಫಲಿಸಿತು.ಗುರಿ ಹೊಡೆದು ವಿಜಯಿಯಾದ ವಿಲಿಯಂ ಟೆಲ್!

ಫೋಟೋ ಕೃಪೆ : google
ಪರಸ್ಪರರ ನಂಬಿಕೆಗೆ ಎಂತಹ ಅಪಾರ ಶಕ್ತಿ ಇರುತ್ತದೆ. ಅಲ್ಲವೇ…?
*
ಎಲ್ಲಾ ನಂಬಿಕೆಗಳನ್ನು ಮೀರಿದ್ದು,ತನ್ನ ಮೇಲೆ ತನಗಿರುವ ನಂಬಿಕೆ..! ಅಂದರೆ ಆತ್ಮವಿಶ್ವಾಸ ! ವಿವೇಕಾನಂದರು ಇದನ್ನೇ ಯುವಕರಿಗೆ ಸಾರಿ ಸಾರಿ ಹೇಳಿದರು…’ಉತ್ತಮ ದೇಹದಾರ್ಢ್ಯವನ್ನು ಹೊಂದಿರಿ. ಅಂಗಸಾಧನೆ ಮಾಡಿ,ಕ್ರಿಕೆಟ್,ಫುಟ್ಬಾಲ್ ಆಡಿ…ಸದೃಢ ದೇಹದಲ್ಲಿ ಸಶಕ್ತ ಆತ್ಮಬಲವಿರುತ್ತದೆ .ಎಲ್ಲರೂ ಆ ಭಗವಂತನ ಅಂಶಗಳೇ! ಅಂದರೆ ಅಮೃತ ಪುತ್ರರು! ವ್ಯಕ್ತಿಯ ಆಂತರ್ಯದಲ್ಲಿ ಎಂತಹ ಅಪಾರ ಶಕ್ತಿ ಅಡಗಿದೆ ಅಂದರೆ,ಅಸಾಧ್ಯ ಎನಿಸಿದ್ದನ್ನು ಕೂಡ ಆತ ಸಾಧಿಸಿ ತೋರಿಸಬಲ್ಲ!ಆದರೆ ತನ್ನ ಶಕ್ತಿಯ ಮೇಲೆ ಆತನಿಗೆ ಅಪರಿಮಿತ ನಂಬುಗೆ ಇರಬೇಕು,ಅದನ್ನು ಜಾಗೃತಗೊಳಿಸಿಕೊಳ್ಳಬೇಕು ‘ಎಂದು ಯುವಶಕ್ತಿಯನ್ನು ಜಾಗೃತಗೊಳಿಸಿ ದರು.
*
ಈ ಜಗತ್ತು ನಿಂತಿರುವುದೇ ನಂಬುಗೆಯ ಅಡಿಪಾಯದ ಮೇಲೆ. ಎಲ್ಲಾ ಸಂಬಂಧಗಳ ಪಾವಿತ್ರ್ಯವೂ ನಂಬುಗೆಯ ನೆಲೆಗಟ್ಟಿನ ಮೇಲೇ ನಿಂತಿರುವುದು.ಆಕಾಶ ತಲೆಯ ಮೇಲೆ ಬೀಳಲಾರದು ಎಂಬ ನಂಬಿಕೆಯಿಂದಲೇ ನಾವು ನಿಶ್ಚಿಂತವಾಗಿ ಭೂಮಿಯ ಮೇಲೆ ವಾಸಿಸುತ್ತಿರುವುದು… ಕತ್ತಲಾದ ಮೇಲೆ ಬೆಳಕಾಗುವುದೆಂಬ ನಂಬಿಕೆಯಿಂದಲೇ ನಾವು ಕತ್ತಲೆಯ ಭೀಕರತೆಯನ್ನು ಸಹಿಸಿಕೊಳ್ಳುವುದು!
ಕಾಲಕಾಲಕ್ಕೆ ಮಳೆ ಬೆಳೆ ಆಗುತ್ತದೆ ಎಂಬ ನಂಬಿಕೆಯಿಂದಲೇ ರೈತ ಬೆವರು ಸುರಿಸಿ ವರ್ಷವಿಡೀ ದುಡಿಯುವುದು. ತನ್ನ ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದಲೇ ರೋಗಿಗಳು ವೈದ್ಯರನ್ನು ಸಾಕ್ಷಾತ್ ಭಗವಂತನಂತೆ ಕಾಣುವುದು.
ಪಕ್ಷಿ ಪ್ರಾಣಿಗಳು ಸಹ, ‘ತಮಗೆ ಇದು ಸುರಕ್ಷಿತ ಸ್ಥಳ ‘ಎಂದು ನಂಬಿಯೇ ಮರದಲ್ಲಿ ಗೂಡು ಕಟ್ಟುವುದು,ಪೊಟರೆಗಳಲ್ಲಿ ವಾಸಿಸುವುದು…ನಂಬಿಕೆಯನ್ನು ಆಧರಿಸದೆ ಇದ್ದರೆ ಬಾಳಿಗೆ ಸ್ಥಿರತೆಯಾದರೂ ಹೇಗೆ ಲಭಿಸೀತು ?
ಅದಕ್ಕಾಗೇ ಸನಾತನ ಕಾಲದಿಂದಲೂ ಭಗವದ್ ಭಕ್ತಿಯೂ ಬದುಕಿಗೆ ನಂಬುಗೆಯ ಆಗಾಧ ಶಕ್ತಿಯಾಗಿ ಜನಜೀವನ ಪ್ರವಾಹವನ್ನು ಮುಂದಕ್ಕೊಯ್ಯುತ್ತಿರುವುದು!
*
ಹಾಗೆಂದ ಮಾತ್ರಕ್ಕೆ, ‘ ನಂಬುಗೆ ಸದಾ ಕಾಲ ತಮ್ಮ ತಲೆಕಾಯುತ್ತದೆ ‘ಎಂಬ ವಿಚಾರದಲ್ಲಿ ಅರ್ಥಹೀನ ಅಂಧಶ್ರದ್ಧೆ ಇರಬಾರದು.ವಿವೇಕ ಸದಾ ನಮ್ಮಲ್ಲಿ ಜಾಗೃತವಾಗಿರಬೇಕಾಗುತ್ತದೆ.
ನಾಣ್ಯಕ್ಕೆ ಎರಡು ಮುಖಗಳಿರುವಂತೆ ಮುಗ್ಧತೆಯನ್ನು ನಂಬುಗೆಯ ಆಧಾರದಲ್ಲಿ ದುರುಪಯೋಗಪಡಿಸಿಕೊಳ್ಳುವವರೂ ಇದ್ದಾರೆ. ಹಿಂದೆ ಮುಂದೆ ಯೋಚಿಸದೆ ಇರಿಸುವ ಕುರುಡು ನಂಬಿಕೆ ಬಹಳ ಅಪಾಯಕಾರಿ.ಅದೂ ಅಪರಿಚಿತರಲ್ಲಂತೂ ಕೂಡದೇ ಕೂಡದು. ಇದಕ್ಕೆ ಪೂರಕವಾಗಿ ನಡೆದ ಪ್ರಸಂಗ ಒಂದನ್ನು ಪ್ರಸ್ತಾಪಿಸುವುದು ಲೇಖನದ ದೃಷ್ಟಿಯಿಂದ ಮಹತ್ವದ್ದಾಗಿದೆ.
*
‘ಶುಭಾ…ನನ್ನನ್ನು ಕ್ಷಮಿಸು!’ ಹಿಂದಿನಿಂದ ಕೇಳಿ ಬಂದ ಕರೆಯನ್ನು ಆಲಿಸಿ ತಿರುಗಿ ನೋಡಿದಳು ತಾನು.ಅಸಹ್ಯದಿಂದ ಮುಖ ತಿರುವಿದಳು…ಏನಾದ್ರೂ ಹೆಚ್ಚು ಕಡಿಮೆ ಆಗಿದ್ದರೆ ಆಗುತ್ತಿದ್ದ ದುಷ್ಪರಿಣಾಮವನ್ನು ನೆನೆದೇ ಕಂಪಿಸಿದಳು.ಹಿಂದಿನ ದಿನ ಸಂಜೆ ಕತ್ತಲು ಮುಸುಕುತ್ತಿರುವಾಗ ನಡೆದ ಸನ್ನಿವೇಶ ಇದು.ಭಾನುವಾರವಾದ್ದರಿಂದ ತಲೆ ಸ್ನಾನ ಮಾಡಿ ಕೂದಲು ಹರಡಿಕೊಂಡು ಏನನ್ನೋ ಓದುವುದರಲ್ಲಿ ಮಗ್ನಳಾಗಿದ್ದಳು ತಾನು! ಅಪ್ಪ ಹೊರಗೆ ಹೋಗಿದ್ದರು. ಅಮ್ಮ ಅಡುಗೆ ಕೋಣೆಯಲ್ಲಿ ಇದ್ದರು.ತಮ್ಮ ತಂಗಿಯರು ಇನ್ನೂ ಆಟದಂಗಳದಲ್ಲೇ ಕೇಕೆ ಹಾಕುತ್ತಿದ್ದರು. ಯಾರೋ ಬಂದು ‘ಶುಭಾ’ ಎಂದಂತಾಯಿತು.
ಹೊರಗೆ ಇಣುಕಿದಾಗ ತನ್ನ ಸಹಪಾಠಿ ವಿನೋದ್..! ಹೊರಬಂದು ಏನೆಂದು ಕೇಳಿದೆ.
‘ನಮ್ಮ ಇಂಗ್ಲಿಷ್ ಮೇಷ್ಟ್ರಿಗೆ ನಿನ್ನ ಇಂಗ್ಲಿಷ್ ನೋಟ್ ಬುಕ್ ಬೇಕಂತೆ’.
‘ಎಲ್ಲಿದ್ದಾರೆ’?
‘ಅಲ್ಲೇ ಮುಖ್ಯರಸ್ತೆಯಲ್ಲಿದ್ದಾರೆ.’
‘ಇರು ಕೊಡುತ್ತೇನೆ’ ಎಂದವಳ ಬಳಿ ಆತ ಪುಸ್ತಕ ಪಡೆದುಕೊಳ್ಳಲು ಕೈ ನೀಡದೆ, ಹಿಂದಕ್ಕೆ ಸರಿದು ,’ಇಲ್ಲ, ನೀನೇ ಬಂದು ಕೊಡಬೇಕಂತೆ, ಶಾಲಾ ಶೈಕ್ಷಣಿಕ ಮ್ಯಾಗಝಿನ್ ಬಗ್ಗೆ ಏನೋ ವಿಚಾರ ಹೇಳುವುದಿದೆಯಂತೆ.’ ಎಂದ.
‘ನಡೆ’ ಎಂದು ಅರ್ಧ ಫರ್ಲಾಂಗ್ ದೂರದಲ್ಲಿದ್ದ.. ಮುಖ್ಯ ರಸ್ತೆಗೆ ಬಂದರೆ ತಮ್ಮ ಮೇಷ್ಟ್ರುಅಲ್ಲಿರಲಿಲ್ಲ. ತಾನು ಹಿಂತಿರುಗಬೇಕೆನ್ನುವಷ್ಟರಲ್ಲಿ,
ತಡೆದ ಅವನು,’ಅವರ ಬಳಿ ನಮ್ಮ ಪಕ್ಕದ ಮನೆಯ ‘ಮಾಮ’ ಮಾತನಾಡುತ್ತಾ ಇದ್ದರು.ಅವರ ಮನೆಗೆ ಹೋಗಿರಬಹುದು’. ಹೋಗಿ ನೋಡೋಣ ಎಂದ. ಇವನ ಮನೆ ಹತ್ತಿರ ಬಂದರೂ ಯಾರೂ ಇರುವಂತೆ ಕಾಣಲಿಲ್ಲ. ಸುತ್ತಲೂ ಕವಿದ ಕತ್ತಲು. ಗೌರವಾನ್ವಿತರಾದ ಅವರು ಈ ಹೊತ್ತಿನಲ್ಲಿ ತಾನು ಅಲ್ಲಿಗೆ ಬರುವಂತೆ ಮಾಡಲಾರರು ಎಂದುಕೊಂಡು ಮುಂದೆ ನೋಡಿದೆ.ಕತ್ತಲು ಪರಸ್ಪರ ಮುಖ ಕಾಣದಷ್ಟು ದಟ್ಟೈಸತೊಡಗಿತ್ತು. ಏಕೊ ಅವರಿಬ್ಬರೇ ಹುಡುಗರು ರೂಂನಲ್ಲಿ ವಾಸಿಸುತ್ತಿರುವುದು ನೆನಪಾಗಿ ಏನೋ ಹೊಳೆದಂತಾಯಿತು.
ಸತ್ತೆನೋ ಕೆಟ್ಟೆನೋ ಎಂದು ಓಡಿ ಮನೆಗೆ ಬಂದು ಸೇರಿದ್ದಾಯಿತು.ಈ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದರೆ,ಆಗುತ್ತಿದ್ದ ಅನಾಹುತ ನೆನೆದು ತನ್ನ ಮೈಯಲ್ಲಿ ಭೂತವೇ ಆವಾಹನೆಯಾದಂತಾಗಿತ್ತು.
ಖಾಸಗಿ ಪ್ರೌಢಶಾಲೆಯಾದ್ದರಿಂದ ತಾನು ದೂರು ಒಯ್ದಿದ್ದರೆ ಶಾಲೆಯಿಂದಲೇ ಅವನು ಡಿಸ್ಮಿಸ್ ಆಗಬಹುದಿತ್ತು.ಆ ಸಣ್ಣ ಹಳ್ಳಿಯಲ್ಲಿ ಇದು ಪ್ರಚಾರ ಪಡೆಯಲು ಹೆಚ್ಚು ಹೊತ್ತೇನೂ ಬೇಕಾಗಿರಲಿಲ್ಲ. ಮೈಮನಸ್ಸಿನ ಕಂಪನ ನಿಂತ ಕೂಡಲೇ ನಿರ್ಧರಿಸಿದಳು. ತಾನು ಏನೂ ಆಗದಂತೆ ಸುಮ್ಮನಿದ್ದರೆ ಅಪ್ಪ ಅಮ್ಮನಿಗೂ ನೆಮ್ಮದಿ.ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ತನಗೆ ಈ ವಿವೇಕವನ್ನು ಯಾರು ದಯಪಾಲಿಸಿದ್ದರೋ…
ಮರುದಿನ ಪಶ್ಚಾತ್ತಾಪದಿಂದ ಹೈರಾಣಾಗಿದ್ದ ವಿನೋದ್ ಗೆ ಅವನ ಯೋಜನೆ ಬಯಲಾಗದ್ದಕ್ಕೆ ಮರುಜೀವ ಬಂತು.ಮುಂದೆಂದೂ ಆತ ತನಗೆ ಸುಳ್ಳು ಹೇಳುವ ಸಾಹಸಕ್ಕೆ ಕೈ ಹಾಕಲಿಲ್ಲ. ಶುಭಾ ನನ್ನಲ್ಲಿ ಹೇಳಿಕೊಂಡ ಈ ಪ್ರಸಂಗ ಅರಿತವರೇ ಮಾಡುತ್ತಿದ್ದ ನಂಬಿಕೆದ್ರೋಹಕ್ಕೆ ಕೈಗನ್ನಡಿಯಾಗಿತ್ತು. ಕುರುಡು ನಂಬಿಕೆಗೆ ನಮ್ಮ ಬದುಕಿನಲ್ಲಿ ಎಂದಿಗೂ ಸ್ಥಾನ ಕೊಡಬಾರದು. ಆದರೆ ನಂಬದೇ ಬದುಕುವುದು ಹೇಗೆ? ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎರಡು ಜೀವಗಳು ಒಟ್ಟಿಗೇ ಬದುಕುವುದು ನಂಬಿಕೆಯ ಅಗಾಧ ಶಕ್ತಿಯಲ್ಲವೇ..?
ಮತ್ತೆ ರಾಷ್ಟ್ರಕವಿ ಕುವೆಂಪುರವರ ಕವಿತೆಯ ಈ ಸಾಲುಗಳನ್ನು ಉದಾಹರಿಸುತ್ತಾ ಈ ಲೇಖನವನ್ನು ಮುಕ್ತಾಯಗೊಳಿಸುತ್ತೇನೆ:
‘ನೀನು ನನ್ನೊಡನಿರುವೆ ಎಂದು ನೆನೆದಾಗ
ಮನದ ದುಗುಡವದು ಕರಗುವುದು ಬೇಗ
ಹಿಂಗುವುದೊಡನೆ ಬಾಳಿನೆಲ್ಲ ಉದ್ವೇಗ
ಶಾಂತಿ ತುಂಬುವುದಾತ್ಮಕ್ಕೆ ಆದಂತೆ ಯೋಗ
ನಿನ್ನ ಬೆಂಬಲವಿರುವ ನಂಬುಗೆಯೇ ಧೈರ್ಯ
ಮೂಡಿ ನನಗೊದಗುವುದು ಮೇರು ಸುಸ್ಥೈರ್ಯ ‘
*
‘ನಾ ನಡೆವ ಹಾದಿಯನು ಹಿಂತಿರುಗಿ ನೋಡಿದರೆ
ಬಗೆಯ ಬಾಯಲಿ ನೆನಪುಗಳ ಮೆಲುಕು ಹಾಕಿದರೆ
ಹೆಜ್ಜೆಹೆಜ್ಜೆಗೂ ನೀನೆ ಕೈಹಿಡಿದು ನಡೆಸಿರುವೆ
ಎಂಬುದನು ನಾನರಿವೆ ನನ್ನ ಗುರುವೆ’
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಶಿವದೇವಿ ಅವನೀಶಚಂದ್ರ
