ನಾನೇಕೆ ಕೊಡಬೇಕು..ಅವರೇನು ನನಗೆ ಕೊಟ್ಟಿದ್ದಾರಾ…ಅನ್ನುವ ಸಣ್ಣತನ ನಮಗೆ ಬೇಡ..ಹಾಗಾದ್ರೆ ನಮ್ಮ ಬದುಕು ಸೇಡಿಗಾಗಿ ಎಂದರ್ಥವೇ. ಅವರಂತೆ ನಾವಾಗುವುದರಲ್ಲಿ ಏನು ಅರ್ಥವಿದೆ. ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಬದುಕೊಂದು ಅಗ್ನಿದಿವ್ಯ” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
‘ತಾನು ಸಾಯಬೇಕು ಸ್ವರ್ಗ ಕಾಣಬೇಕು’ ನಾವೇನಾದರೂ ಇತರರ ಬಗ್ಗೆ ವಿವೇಚನೆಯಿಲ್ಲದೆ ಹಗುರಾಗಿ ಮಾತನಾಡಿದಾಗ ಅಮ್ಮನ ಬಾಯಿಂದ ಸದಾ ಹೊರಹೊಮ್ಮುತ್ತಿದ್ದ ನುಡಿಮುತ್ತುಗಳು ಇವು. ಅಮ್ಮ ಇಲ್ಲದ ಈ ದಿನಗಳಲ್ಲೂ ಮತ್ತೆಮತ್ತೆ ಮಾರ್ದನಿಸುವ ಗಾದೆ ಇದು. ‘ ಸ್ವಂತವಾಗಿ ಅನುಭವಿಸದೆ ಯಾವುದೂ ಅರ್ಥವಾಗುವುದಿಲ್ಲ’ಎಂಬುದೇ ಇದರ ಮಥಿತಾರ್ಥ. ಅನುಭವವಿಲ್ಲದೆ ಬದುಕು ಎಂದಿಗೂ ಪೂರ್ಣವಾಗುವುದಿಲ್ಲ.
ತಾನು ಸತ್ತರೆ ಮಾತ್ರ, ಸ್ವರ್ಗ ಎಂದರೆ ಏನು ಅದು ಎಲ್ಲಿದೆ ಹೇಗಿದೆ ಎಂದು ತಿಳಿಯಬಹುದೇನೋ.’ತನ್ನನುಭವವೆ ತನಗೆ ದರುಮದ ದೀಪ’ ಎಂದರು ಡಿ.ವಿ.ಜಿ. ಬದುಕನ್ನು ಯಾರೂ ಮೊದಲೇ ಊಹಿಸಲು ಸಾಧ್ಯವಿಲ್ಲ. ಇತರರ ದೌರ್ಬಲ್ಯಗಳನ್ನು ಹಾಗೂ ವಿಫಲತೆಗಳನ್ನು ಕಂಡಾಗ, ಸುಸ್ಥಿತಿಯಲ್ಲಿರುವ ನಾವು ಅವರನ್ನು ಹಂಗಿಸುವುದು, ಹಗುರಾಗಿ ಮಾತನಾಡುವುದು ಅವರ ಸೋಲಿಗೆ ಅಥವಾ ಹಿನ್ನೆಡೆಗೆ ನಮ್ಮದೇ ಕಾರಣವನ್ನು ಆರೋಪಿಸಿ ನಮ್ಮದೇ ದೃಷ್ಟಿಯಿಂದ ಷರಾ ಬರೆಯುವುದು ಇದೆಲ್ಲ ಸಾಮಾನ್ಯ.
ಆದರೆ ಅವರ ಪರಿಸ್ಥಿತಿಯನ್ನು ಒಳಹೊಕ್ಕು ನೋಡಿ ವಿಶ್ಲೇಷಿಸುವ ತಾಳ್ಮೆಯಾದರೂ ಎಲ್ಲಿದೆ ನಮಗೆ?ಮುಂದೆ ಒಂದು ವೇಳೆ ಅವರದೇ ಸ್ಥಿತಿ ನಮಗೆ ಬಂದಾಗ, ‘ಅಷ್ಟೊಂದು ಕಷ್ಟಕರ ಸನ್ನಿವೇಶವನ್ನು ಅವರು ಹೇಗೆ ಎದುರಿಸಿದರು’ ಎಂದು ಬೆರಗಾಗುತ್ತೇವೆ.ಹೀಗೆಯೇ ಕಷ್ಟಗಳನ್ನು ನಿಭಾಯಿಸುವಾಗ ನಮಗೆ ಇತರರ ಸಾಮರ್ಥ್ಯದ ಅರಿವಾಗುತ್ತದೆ.ಉದಾಹರಣೆಗೆ ಕೊರೋನಾದ ಬೀಗಮುದ್ರೆಯಿಂದ ಎಷ್ಟೊಂದು ಕುಟುಂಬಗಳ ಸ್ಥಿತಿ ನೆಲಕಚ್ಚಿತು. ಹಳ್ಳಿಗಳ ಕಡೆ ಮುಖ ಹಾಕಲಾರದಂತೆ ನಗರಗಳ ಪಾಲಾದವರೂ ಸಹ ಇಲ್ಲಿನ ವಾತಾವರಣಕ್ಕೆ ಮರಳಿ ಬಂದರು.

ಫೋಟೋ ಕೃಪೆ : google
ಗಾದೆಯೆಂದರೆ ಹಾಗೆಯೇ…. ಬೊಗಸೆಯಲ್ಲಿ ಬ್ರಹ್ಮಾಂಡವನ್ನು ತುಂಬಿಕೊಡಬಹುದಾದಷ್ಟು ವ್ಯಾಪಕ…ಬಿಡಿಸಿದಷ್ಟೂ ಬಿಚ್ಚಿಕೊಳ್ಳುವ ಈರುಳ್ಳಿಯ ಪದರದಂತೆ….ಜೀವನದ ಎಲ್ಲ ಹಂತಗಳಲ್ಲೂ ಬೇರೆಬೇರೆಯಾಗಿ ಪಡೆಯುವ ಅನುಭವಗಳಿಗೆ ತಕ್ಕಂತೆ ಇದರ ಅರ್ಥ ಮತ್ತಷ್ಟು ಅರಿವಿಗೆ ತೆರೆದುಕೊಳ್ಳುತ್ತದೆ.ನಮ್ಮ ಪೂರ್ವಿಕರೇ ಹಾಗೆ..ಬದುಕನ್ನು ಪ್ರಸಾದದಂತೆ ಸ್ವೀಕರಿಸಿದರು.
‘ನೀ ಇಟ್ಹಾಂಗ ಇರುತೀನಿ ಹರಿಯೇ’ ಎಂದರು. ಪುರಾಣದ ಪಾತ್ರಗಳೊಂದಿಗೆ ತಮ್ಮ ಬದುಕಿನ ಸಂದರ್ಭವನ್ನು ವಿಫಲತೆಗಳನ್ನು ಸಮೀಕರಿಸಿಕೊಂಡು ಸರಳ ಬಾಳಿನಲ್ಲೇ ಮಹೋನ್ನತ ದರ್ಶನ ಪಡೆದರು.ಯಾವ ಸಂತರಿಗೂ ಕಡಿಮೆಯಿಲ್ಲದಂತೆ,ಗಾದೆ, ನುಡಿಗಟ್ಟು ,ಒಡಪು,ತತ್ವಪದಗಳ ಮೂಲಕ ನೀತಿಯನ್ನು ಸಾರಿದರು.ಬಾಳಿನ ಒಳತಿರುಳನ್ನು ಬಿಡಿಸಿ ತೋರಿದರು.
ಕಾಯದ ದುಡಿಮೆಯ ಮೂಲಕ ‘ಕಾಯಕವೇ ಕೈಲಾಸ’ ಎಂದು ದುಡಿಮೆಯಲ್ಲಿ ದೇವರ ಸಾಕ್ಷಾತ್ಕಾರ ಮಾಡಿದರು.ಧನ್ಯಜೀವನವನ್ನು ಬಾಳಿದರು.
‘ಮೃತ್ಯುವೆನ್ನುವುದೊಂದು ತೆರೆಯಿಳಿತ ತೆರೆಯೇರು ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ’ಎಂಬ ಹಾಗೆ ಸಾವಿಗೆ ಹೆದರಬೇಕಿಲ್ಲ.ಅದು ಅನಿವಾರ್ಯ.ಆದರೆ ಹೆದರಬೇಕಿರುವುದು ಸಾರ್ಥಕವಾಗಿ ಬಾಳಲು…ಆ ಕಾಣದ ಶಕ್ತಿ ಈ ಭೂಮಿಗೆ ನಮ್ಮ ಅವತಾರವಾಗಲು ಯಾವ ಉದ್ದೇಶವನ್ನು ಜಾರಿಗೊಳಿಸಿದ್ದಾನೋ ತಿಳಿಯದು.ಆದರೆ ಈ ಕರ್ಮ ಭೂಮಿಯಲ್ಲಿ ಸತ್ಕರ್ಮನಿರತನಾಗಿ ಬಾಳಿದರೆ ಮನಶ್ಶಾಂತಿಯಂತೂ ಸಿಗುವುದು ಖಂಡಿತ. ‘ಅನಾಯಾಸೇನ ಮರಣೇ..’ ಈ ಭಾಗ್ಯ ಒದಗಿ ಬರಬೇಕಾದ್ರೆ ಬಹುಶಃ ಸತ್ಕರ್ಮಿಗೆ ಮಾತ್ರ ಸಾಧ್ಯವೇನೋ..

ಫೋಟೋ ಕೃಪೆ : google
ಒಳ್ಳೆಯ ಕೆಲಸ ಮಾಡುತ್ತಾ ಬದುಕುವಾಗ ದೊರೆಯುವ ಮನಶ್ಶಾಂತಿಯಿದೆಯಲ್ಲ ಅದಕ್ಕೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ.ಪರಹಿತಕ್ಕೆ ಸಲ್ಲುವ ಕಾರ್ಯಗಳು ನಮ್ಮ ಬದುಕಿಗೆ ಆಭೂಷಣಗಳಿದ್ದಂತೆ. ಹಣ ಎಷ್ಟು ಬೇಕಾದರೂ ಗಳಿಸಬಹುದು.ಯಾರು ಬೇಕಾದರೂ ಗಳಿಸಬಹುದು.ಹೇಗೆ ಬೇಕಾದರೂ ಗಳಿಸಬಹುದು.ಆದರೆ ಉಪವಾಸವಿದ್ದರೂ ಹೇಯ ಕೃತ್ಯಕ್ಕಿಳಿಯದೆ ಪರಿಶ್ರಮದಿಂದ ಗಳಿಸಿ ಅದನ್ನು ಸಲ್ಲಬೇಕಾದವರಿಗೆ ಒದಗಿಸುತ್ತಾ ಆನಂದವಾಗಿ ವ್ಯಯಿಸುವುದು ಇದೆಯಲ್ಲ..ಅದೇ ನಿಜವಾದ ಧನ್ಯತೆ.
ನಾನೇಕೆ ಕೊಡಬೇಕು..ಅವರೇನು ನನಗೆ ಕೊಟ್ಟಿದ್ದಾರಾ…ಅನ್ನುವ ಸಣ್ಣತನ ನಮಗೆ ಬೇಡ..ಹಾಗಾದ್ರೆ ನಮ್ಮ ಬದುಕು ಸೇಡಿಗಾಗಿ ಎಂದರ್ಥವೇ. ಅವರಂತೆ ನಾವಾಗುವುದರಲ್ಲಿ ಏನು ಅರ್ಥವಿದೆ.ನಾವು ಯಾವಾಗಲೂ ನಾವೇ.ನಮ್ಮ ಅಸ್ಮಿತೆಯನ್ನು ಎಂದಿಗೂ ಸಾಯಗೊಡಬಾರದು.
ಕಾಲದ ಚಕ್ರದಲ್ಲಿ ಸಿಲುಕಿರುವ ನಮಗೆ ಅರಿಷಡ್ವರ್ಗಗಳ ಜಾಲ ಪತನಮುಖವನ್ನು ತೋರಿಸಲಾರಂಭಿಸುತ್ತದೆ.ಇಂದ್ರಿಯಗಳನ್ನು ಗೆದ್ದವರೆನಿಸಿಕೊಂಡ ಸಾಧು ಸನ್ಯಾಸಿಗಳೇ ಇದರಿಂದ ಹೊರಬರಲಾರರೆಂದಮೇಲೆ ಇನ್ನು ಜನಸಾಮಾನ್ಯರ ಪಾಡೇನು…?
ಆಸೆ ಬಲೆಯನು ಬೀಸಿ ನಿನ್ನ ತನ್ನೆಡೆಗಳೆದು
ಘಾಸಿ ನೀಂಬಡುತಲಿರಲೋರೆ ನೋಡಿ
ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ
ಮೋಸದಾಟವೊ ದೈವ/ಮಂಕುತಿಮ್ಮ/
ದೈವದ ಕೆಲಸವೇ ನಮ್ಮನ್ನು ಪಾಪ/ಪುಣ್ಯದ ಕೃತ್ಯಗಳಿಗೆ ಪ್ರೇರೇಪಿಸುವುದು. ನಮ್ಮ ಕರ್ಮಫಲವನ್ನು ವೃದ್ಧಿಸುವುದು. ಎಚ್ಚೆತ್ತುಕೊಳ್ಳುವ ಜಾಣ್ಮೆಯುಳ್ಳವರೇ ಇಲ್ಲಿ ವಿವೇಕಿಗಳು. ಸಮಯವನ್ನು ಹೊನ್ನಿಗಿಂತಲೂ ಜಾಗ್ರತೆಯಾಗಿ ಬಳಸುವವರಿಗೆ ಬಾಳು ಸಾರ್ಥಕವಾಗಿ ಕಾಣುತ್ತದೆ.ಸಣ್ಣ ಸಣ್ಣದಕ್ಕೂ ಪಶ್ಚಾತ್ತಾಪದಿಂದ ಕೊರಗುವ ದುರ್ಬಲ ಮನಸ್ಕನಿಗೆ ಬದುಕು ದೀರ್ಘವೆನಿಸುವುದಿಲ್ಲ. ಸಮಯದ ಮೌಲ್ಯವೂ ಅರಿವಿಗೆ ಬರುವುದಿಲ್ಲ.ತನಗೊಬ್ಬನಿಗೇ ಈ ಜಗತ್ತಿನಲ್ಲಿ ಯಾರಿಗೂ ಇರದ ಚಿಂತೆ ಎಂದು ಹಲುಬುತ್ತಾ,ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತಾ, ದುರಭ್ಯಾಸಗಳಿಗೆ ದಾಸನಾಗಿ ತನ್ನನ್ನೇ ತಾನು ನಾಶ ಪಡಿಸಿಕೊಳ್ಳುವ ಚಿತ್ತಚಾಂಚಲ್ಯವನ್ನು ಹೊಂದಿರುವ ವ್ಯಕ್ತಿಗೆ,ಅದನ್ನು ‘ಸುಖೇದು:ಖೇ ಸಮೇಕೃತ್ವಾ’ ಎಂದು ಸ್ವೀಕರಿಸುವ ಸಾವಧಾನ ಚಿತ್ತ ಮೂಡುವವರೆಗೂ ತನ್ನ ಅಮೂಲ್ಯ ಸಮಯವನ್ನು ಚಿಂತಾಗ್ನಿಗೆ ಆಹುತಿ ಮಾಡಿದ ಪರಿವೆಯೇ ಇರುವುದಿಲ್ಲ.
ಬಾಳಿನ ಮದ್ದು ಕುತ್ತವ ತುಂಬಿದೀ ನೆಲಂ
ಬೆರಗಿನ ಬುರುಡೆ ಪೆಂಪಂ ಕಾಣೆವಂತೆ
ಹಸಿವು ಬಯಕೆ ಸೇಡೆ ನೋವು ಬೇವಸ ಸೂಡೆ
ಮದ್ದುಂಟು ಸಾವೊಂದಕಿಲ್ಲ ಮದ್ದಂತೆ’
ಸುಳ್ಯದ ಅಚ್ಚಗನ್ನಡ ಕವಿ ವಿದ್ವಾಂಸ,’ಆಧುನಿಕ ಆಂಡಯ್ಯ’ ನೆಂದು ಹೆಸರಾದ ಕೊಳಂಬೆ ಪುಟ್ಟಣ್ಣಗೌಡರು ಈ ಲೋಕದ ಬದುಕನ್ನು ಹೀಗೆ ವ್ಯಾಖ್ಯಾನಿಸುತ್ತಾರೆ, ಜೀವನಕ್ಕೆ ಬೇಕಾದ ಔಷಧಿಗಳು,ಅವುಗಳ ಉಪಯೋಗಕ್ಕೆ ಬೇಕಾದ ರುಜೆಗಳು, ಇವುಗಳನ್ನೆಲ್ಲ ತುಂಬಿಟ್ಟ ಒಂದು ಬುರುಡೆ ಈ ಜಗತ್ತು; ಹಸಿವು ಆಸೆಗಳ ತೊಡಕು,ನೋವು ಬೇಸರಗಳ ಸುಡುವಿಕೆ, ಇವಕ್ಕೆಲ್ಲ ಮದ್ದುಂಟು; ಮರಣವೊಂದಕ್ಕೆ ಮದ್ದಿಲ್ಲವಂತೆ.
*
ಚಿಂತಿಸುತ ಕುಳಿತುಕೊಳ್ಳುವುದರಿಂದ ಜೀವನದ ಪಯಣದ ವಿಹಾರ ಸುಖಕ್ಕೆ ನಾವು ಎರವಾಗುತ್ತೇವೆ,ಅಷ್ಟೇ ಅಲ್ಲದೆ ಸಾವಿಗೆ ಹೆದರುತ್ತಾ ಕುಳಿತರೆ..ಇರುವ ಆನಂದದ ಬೆಳಕಿಗೂ ಕಣ್ಮುಚ್ಚಿ ಅಂಧರಾಗುತ್ತೇವೆ. ಹೇಡಿಯೊಬ್ಬ ಪ್ರತಿನಿತ್ಯವೂ ಸಾಯುತ್ತಾನೆ.ಆದರೆ ನೀರಿನೊಂದಿಗೆ ಮರಣವೊಂದೇ ಬಾರಿ.ಆದು ಅವನು ಸತ್ತಾಗ ಮಾತ್ರ. ಧೀರ ತನದಿಂದ ಬದುಕಿನ ಪಂಥಾಹ್ವಾನ ಗೋಳನ್ನು ಸ್ವೀಕರಿಸುತ್ತಾ ಮುಂದೆ ಸಾಗೋಣ ಅಲ್ಲವೇ..
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕವಿಯತ್ರಿ, ಕೊಡಗು
