ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)

ಶಾಲೆಗೆ ಎರಡೂವರೆ ಮೈಲಿ‌ ನಡೆದು ಮಧ್ಯಾಹ್ನವೂ ಊಟದ ವಿರಾಮದಲ್ಲಿ ಮನೆಗೆ ಬಂದು ಹೋಗುತ್ತಿದ್ದ ತಮಗೆ ದೊರೆಯುತ್ತಿದ್ದ ದೈಹಿಕ ವ್ಯಾಯಾಮ ಈಗ ಎಲ್ಲಿ…?ಗೆಳೆಯರೊಡನೆ ನಡಿಗೆಯ ಖುಷಿ ಹಾಸ್ಯ,ವಿನೋದಗಳ, ಹರಟೆಗಳ ಆ ಮುಕ್ತ ಬದುಕೆಲ್ಲಿ…? ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ದಿಕ್ಕು ತಪ್ಪುತ್ತಿದೆಯೇ ಶಿಕ್ಷಣದ ಆಶಯ?” ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…

ಹಾಗೇ ಯೋಚಿಸುತ್ತಾ ಕುಳಿತಿದ್ದಳು ಶಾಂತಲಾ. ತಮ್ಮ ಕಾಲದ ಪ್ರಾಯೋಗಿಕ ಶಿಕ್ಷಣ ಹಾಗೂ ಇಂದಿನ ಶಿಕ್ಷಣದ ಬಗೆಗೆ ತುಲನಾತ್ಮಕವಾಗಿ.. ಯಾಕೋ ತಬ್ಬಲಿಗಳಾಗುತ್ತಿದ್ದಾರೆ ಮಕ್ಕಳು ಅನಿಸಿತು ಅವಳಿಗೆ. ಭತ್ತ ಬೆಳೆಯುವ ಗದ್ದೆಗಳ ಕಡೆ ಕಣ್ಣು ಹಾಯಿಸಿದಳು. ತಮ್ಮ ಮನೆಯ ಸುತ್ತಲೂ ಯಾವಾಗಲೂ ಹಸಿರಿನದೇ ವೈಭವ. ಆಚೆ ಈಚೆ ಜುಳುಜುಳು ನಿನಾದ ಮಾಡುತ್ತಾ
ಜೀವನೋತ್ಸಾಹದಿಂದ ಹರಿಯುವ ತೊರೆಗಳು. ನಡುವೆ ಹಸಿರು ಗದ್ದೆ ಬಯಲು…ಕಣ್ಣು ಚಾಚಿದುದ್ದಕ್ಕೂ ಕಾಡು, ತೋಟ, ಬೆಟ್ಟ ಕಣಿವೆ.

ಹಸಿರಿನ ಅಷ್ಟೂ ಪ್ರಕಾರಗಳು. ಧವಳಕಿರೀಟವಿಟ್ಟಂತೆ ಮಾಘ ಮಾಸದಲ್ಲಿ ಪ್ರಜ್ವಲಿಸುತ್ತಾ ಶಿವಾರ್ಚನೆಗೈಯುತ್ತಾ ಸಂಭ್ರಮಿಸುತ್ತಿದೆಯೇನೋ ಎಂಬಂತೆ ಪ್ರಕೃತಿ ಉಪಾಸನೆಯ ಧನ್ಯನೋಟವನ್ನು ಕಾಣಿಸಿಕೊಡುವ ಪರ್ವತಮಾಲೆ… ಸೃಷ್ಟಿಯ ಸೌಂದರ್ಯವೇ ಸೂರೆ ಇಲ್ಲಿ. ಆದರೆ ನಮ್ಮೂರಿನಿಂದ ಹತ್ತಿರದ ಶಾಲೆಗಳಿಗೆ ದೂರದ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು ಇಂದು ಪ್ರಕೃತಿಯಲ್ಲಿ ಏನನ್ನು ಗ್ರಹಿಸುತ್ತಿದ್ದಾರೆ.

ಒಂದು ಕೈಯಲ್ಲಿ ಚರವಾಣಿ ಮತ್ತೊಂದು ಕೈಯಲ್ಲಿ ಲೇಸ್, ಕುರುಕುರೆ ಪ್ಯಾಕೆಟ್ ಗಳು. ಯಾರು ಎದುರಿನಿಂದ ಢಿಕ್ಕಿ ಹೊಡೆದರೂ ಬಾಹ್ಯ ಪರಿವೆಯೇ ಇಲ್ಲದ ಯಾಂತ್ರಿಕ ನಡಿಗೆ.  ಮನೆಗೆ ಮರಳುತ್ತಿರುವ ಬಾನಾಡಿಗಳ ಹಾರಾಟ ಸೆಳೆಯುವುದಿಲ್ಲ. ಇವರನ್ನು ತಂಪಾಗಿ ಮೈಸೋಕುವ ಗಾಳಿ, ಪಕ್ಕದ ತೋಡುಗಳಲ್ಲಿ ಹರಿಯುವ ನೀರಿನ ಜುಳುಜುಳು ನಿನಾದ…ಆಗಸದಲ್ಲಿ ತೇಲಾಡುವ ಚಿತ್ರವತ್ತಾದ ಮೇಘಗಳ ಸಾಲುಗಳು. ಯಾವುದೂ ಬೇಡದಂತೆ, ತನಗೆ ಸಂಬಂಧಿಸಿದ್ದೇ ಅಲ್ಲವೇನೋ ಎಂಬಂತೆ ತಗ್ಗಿಸಿದ ತಲೆಯನ್ನು ಮೇಲೆತ್ತದೆ ಸಾಗುತ್ತಿರುವ ಇವರ ಜೀವನ ಪಯಣ. ಹಾಗಿದ್ದರೆ ಅಂಗೈಯಲ್ಲಿರುವ‌ ಪುಟ್ಟ ಸಾಧನವೇ ನಮ್ಮೆಲ್ಲ ಸುಖದ ಮೂಲವೇ…

ಕನಸು ಒಡೆಯಿತೇನೋ ಎಂಬಂತೆ ಹಾರ್ನ್ ಶಬ್ದ ಕಿವಿಗೆ ಬಡಿಯಿತು. ಮಕ್ಕಳನ್ನು ಹೊತ್ತೊಯ್ಯಲು ಸಾಲಾಗಿ ಬರುವ ಶಾಲಾ ವಾಹನಗಳು. ಅವುಗಳ ಒಳಗೆ ತೂರಿಕೊಂಡು ವ್ಯವಧಾನವಿಲ್ಲದೆ‌ ಶಾಲೆ ತಲುಪಿ ಹದಿನೈದಿಪ್ಪತ್ತು ನಿಮಿಷಗಳಲ್ಲೇ ಕೊಠಡಿಯೊಳಗೆ ಸೇರಿಕೊಳ್ಳುವ ವಿದ್ಯಾರ್ಥಿಗಳು. ಶುಲ್ಕ ಕೊಡಲು ಸಾಧ್ಯವಿಲ್ಲದೆಯೋ ಕನ್ನಡದ ಮೇಲಿನ ಪ್ರೇಮದಿಂದಲೋ ಸರ್ಕಾರಿ ಶಾಲೆಗೆ ನಡೆದು ಸಾಗುತ್ತಿರುವ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು. ಇದು ನಿತ್ಯದ ನೋಟ.

*
ಮನಸ್ಸು ದ್ರವಿಸಿತು. ಶಾಲೆಗೆ ಎರಡೂವರೆ ಮೈಲಿ‌ ನಡೆದು ಮಧ್ಯಾಹ್ನವೂ ಊಟದ ವಿರಾಮದಲ್ಲಿ ಮನೆಗೆ ಬಂದು ಹೋಗುತ್ತಿದ್ದ ತಮಗೆ ದೊರೆಯುತ್ತಿದ್ದ ದೈಹಿಕ ವ್ಯಾಯಾಮ ಈಗ ಎಲ್ಲಿ…? ಗೆಳೆಯರೊಡನೆ ನಡಿಗೆಯ ಖುಷಿ ಹಾಸ್ಯ,ವಿನೋದಗಳ, ಹರಟೆಗಳ ಆ ಮುಕ್ತ ಬದುಕೆಲ್ಲಿ…? ಸದಾ ತಿಳಿನೀರನ್ನು ಜುಳುಜುಳಿಸುತ್ತಿದ್ದ ಆ ಗದ್ದೆಬದಿಯ ಹಳ್ಳಗಳಲ್ಲಿ ಹರಿಯುತ್ತಿದ್ದ ಸಲಿಲದ ಜೀವನೋತ್ಸಾಹವೆಲ್ಲಿ…?

*
ಇನ್ನು ಗುರುಗಳ ಬೋಧನೆಗೆ ಕಿವಿಯಾಗುತ್ತಿದ್ದ ಆ ರಸಭರಿತ ಕ್ಷಣಗಳು. ಕನ್ನಡ ಹಿಂದಿ ತರಗತಿಗಳಂತೂ ರಸದೌತಣ. ಪಠ್ಯವಸ್ತುವಿನ ಹಳಿಬಿಡದ ಬಹು ಆಯ್ಕೆಯನ್ನೂ ಒಳಗೊಂಡ ಈಗಿನ‌ ಪರೀಕ್ಷಾ ಪದ್ಧತಿಯೆಲ್ಲಿ…? ಆಗ ನಮ್ಮ ಗ್ರಹಿಕೆಗಳನ್ನು ಅಕ್ಷರಗಳಿಗೆ ಇಳಿಸುತ್ತಿದ್ದ ಸ್ವಂತ ಶೈಲಿಯ ದೀರ್ಘ ಉತ್ತರಗಳೆಲ್ಲಿ..? ಆಗ ಅರ್ಥವಾಗದ ವಿಷಯಗಳನ್ನು ಅರ್ಥೈಸುವುದಕ್ಕೆ ತರಗತಿಗಳು ರಂಗಭೂಮಿಯೋ.

ಫೋಟೋ ಕೃಪೆ : google

ಕಥಾವೇದಿಕೆಯೋ ಆಗಿ ಬಿಡುತ್ತಿದ್ದ ಸಂಭ್ರಮವೆಲ್ಲಿ…? ಯಾವುದೋ ಪಾತ್ರವನ್ನು ನಿರ್ವಹಿಸಲು ಗುರುಗಳ ಆದೇಶಕ್ಕೆ ಕಾಯುತ್ತಿದ್ದ ಆ ಕಾತರದ ಕನಸಿನ, ಕಲ್ಪನೆಯ ಕ್ಷಣಗಳೆಲ್ಲಿ…?ಪುಣ್ಯಕೋಟಿಯ ಕತೆಗೂ ಹರಿದುಬಿಡುತ್ತಿದ್ದ ಅಳುವಿನ ಪ್ರವಾಹ. ಮನದಲ್ಲಿ ಮೂಡುತ್ತಿದ್ದ ಆ ಅರ್ಬುದನ ನಿಲುವು ಸರಿಯೆ… ತಪ್ಪಾಗಿದ್ದರೆ ಯಾವ ನಿರ್ಣಯದಿಂದ ಪುಣ್ಯಕೋಟಿಗೂ ಅರ್ಬುದನಿಗೂ ಜೊತೆಯಾಗಿಯೇ ನ್ಯಾಯ ಸಲ್ಲುತ್ತಿತ್ತು ಎಂಬ ತಾಕಲಾಟ. ಹರಿಶ್ಚಂದ್ರನ ರಾಜ್ಯತ್ಯಾಗಕ್ಕೂ ಸ್ಮಶಾನ ಗಮನಕ್ಕೂ, ಚಂದ್ರಮತಿಯ ಸತ್ವ ಪರೀಕ್ಷೆಗೂ ಅಶ್ರುಧಾರೆ…
ಕಥೆಗಳ ಮಹಾಪೂರ. ಭಾವಗಳನ್ನು ಬಡಿದೆಬ್ಬಿಸುತ್ತಿದ್ದುವು. ಸಂವೇದನೆಗಳನ್ನು ಹುಟ್ಟುಹಾಕುತ್ತಿದ್ದುವು..ರಮ್ಯ ಕಲ್ಪನೆಯ ಲೋಕವೊಂದನ್ನು ತೆರೆದು ಬಿಡುತ್ತಿದ್ದುವು. ತರಗತಿಗೆ ಚಾತಕದಂತೆ ಕಾಯುತ್ತಿದ್ದೆವು.

*
ಏಕೋ ಪ್ರಸ್ತುತ ಸಾಮಾಜಿಕ ಸ್ಥಿತಿಯನ್ನು ಅವಲೋಕಿಸುತ್ತ ಇರುವಾಗ….ಅವುಗಳಿಗೆ ಅನ್ವಯಿಸುವಂತೆ ಸಾಂದರ್ಭಿಕವಾಗಿ….ಗುರುಗಳು ಹೇಳುತ್ತಿದ್ದ ಮೆದುಳಿನ ಸಂಗ್ರಹದಲ್ಲಿರುವ ಕಥಾ ಕಣಜ ತೆರೆದುಕೊಳ್ಳುತ್ತದೆ….ಒಂದೊಂದು ಕತೆಯೂ ಬದುಕಿನ ಮೌಲ್ಯಕ್ಕೆ ಸಾಕ್ಷಿಯಾಗಿ ಚಿಂತನೆಗೆ ಹಚ್ಚುತ್ತದೆ.

‘ಧರ್ಮೋ ರಕ್ಷತಿ ರಕ್ಷಿತ:

‘ ಎಷ್ಟು ಸರಳವಾದ ವ್ಯಾಖ್ಯಾನ ಧರ್ಮಪಾಲನೆಗೆ. ‘ನಾವು ಧರ್ಮಮಾರ್ಗದಲ್ಲಿ ನಡೆದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.’ ಹಾಗಾದ್ರೆ ‘ಧರ್ಮ’ ಎಂದರೆ ಇತರರು ನಮಗೆ ಅಹಿತವನ್ನು ಉಂಟುಮಾಡಿದಾಗ ನಮಗೆ ಎಷ್ಟು ನೋವಾಗುತ್ತದೋ ಅದನ್ನು ನಾವು ಇತರರಿಗೆ ಮಾಡದೆ ಇರುವುದು ಧರ್ಮ. ಇದರ ವ್ಯಾಪ್ತಿ ದೊಡ್ಡದು. ಗೃಹಸ್ಥಧರ್ಮ, ಸತೀಧರ್ಮ,ಮಿತ್ರ
ಧರ್ಮ,ವ್ಯಾಪಾರೀ ಧರ್ಮ,ಸತೀಧರ್ಮ ಇತ್ಯಾದಿ ಇತ್ಯಾದಿ.ಧರ್ಮದ ನೆಲೆಗಟ್ಟಿನ ಮೇಲೆ ಕಟ್ಟಿದ ಬದುಕು ಸದಾ ಕಾಲ ಆಪ್ಯಾಯಮಾನ..ಜೊತೆಗೆ ಅಂತಹ ಸಮಾಜವೂ ಕೂಡ ಆರೋಗ್ಯಕರ.

ಮಂತ್ರಗಳ ಸಹಾಯವಿಲ್ಲದೆ ಶ್ಲೋಕಗಳನ್ನು ಕಲಿಯದೆಯೂ ಧರ್ಮವನ್ನು ಎಷ್ಟು ಸರಳವಾಗಿ ಅನುಸರಿಸಬಹುದು ? ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ‘
ಸರ್ವಜ್ಞ ಹೇಳಿದ್ದು ಇದನ್ನೇ ಅಲ್ಲವೇ. ಅಂದರೆ ಅನನ್ಯ ಭಾವ….ನೀನೂ ನಾನೂ ಒಬ್ಬನೇ ಪರಮಾತ್ಮನ ಅಂಶಗಳು. ಧರ್ಮ ವ್ಯಕ್ತಿಗತ.ಅದನ್ನು ಗ್ರಹಿಸುವ ಹಾಗೂ ಪಾಲಿಸುವ ವಿಧಾನಗಳು ಮಾತ್ರ ಅವರವರ ಮನೋಭಾವದಂತೆ ಭಿನ್ನ ಭಿನ್ನ ಅಷ್ಟೇ.

*
ಅರಿವೇ ಗುರು. ಮನುಷ್ಯನಿಗೆ ಅರಿವೇ ಒಂದು ವರದಾನ.ಶಿಕ್ಷಣವು ಅರಿವಿನ ಜೊತೆಗೆ ಜೀವನದ ಗುರಿಯನ್ನು ಮೂಡಿಸುವಂತಿರಬೇಕು.ಗುರಿಯೆಂದರೆ ಬರಿಯ ಹಣ ಸಂಪಾದನೆಯಲ್ಲ. ಬದುಕನ್ನು ಆಸ್ವಾದಿಸುತ್ತಾ… ಅದನ್ನು ಪವಿತ್ರ ಪ್ರಸಾದವೆಂಬಂತೆ….ಶ್ರದ್ಧಾಭಕ್ತಿಯಿಂದ ಸ್ವೀಕರಿಸುವುದು. ‘ಯಾರು ಅರಿವಿಗಾಗಿ ತುಡಿಯುತ್ತಾರೋ ಅವರು ಮೌಲ್ಯಗಳನ್ನು ಬಾಳುತ್ತಾರೆ’.
ಶಿಕ್ಷಣ ಅರಿವಿನ ಕಣ್ತೆರೆಸುವಂತಿರಬೇಕು. ಸಮಕಾಲೀನ ಬದುಕಿನ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ತುಂಬುವಂತೆ ಇರಬೇಕು. ಪುಸ್ತಕದ ಜ್ಞಾನಕ್ಕೆ ತನ್ನ ಸಮಯೋಚಿತ ವಿವೇಚನೆಯನ್ನು ಬೆರೆಸಿ ಸಂದರ್ಭಗಳನ್ನು ಕುಶಲತೆಯಿಂದ ನಿರ್ವಹಿಸುವ ಜಾಣತನವನ್ನು ಮೂಡಿಸುವಂತೆ ಇರಬೇಕು.ಕಲಿಕೆಯನ್ನು ಆಸ್ವಾದಿಸುತ್ತಲೇ ಜೀವನ ಪ್ರೇಮವನ್ನು ಎದೆಗೆ ಬಸಿದುಕೊಳ್ಳಬೇಕು. ಶಿಕ್ಷಣ ‘ಸಮನ್ವಯತೆ’ಯನ್ನು ಕಲಿಸಿಕೊಡಬೇಕು.ಮಾನವನ ಹೃದಯದಲ್ಲಿ ಗೋಡೆಗಳನ್ನು ನಿರ್ಮಿಸುವ ಶಿಕ್ಷಣ ಬಲು ಅಪಾಯಕಾರಿ.
ಇಂದಿನ ವಿಲಾಸೀ ಜೀವನ ಶೈಲಿಗೆ ಮಾರುಹೋದವರಿಗೆ ಎಷ್ಟು ದುಡಿದರೂ ತಮ್ಮ ಪುಟ್ಟ ಕುಟುಂಬ ನಿರ್ವಹಣೆಗೆ ಆ ಹಣ ಸಾಲದಂತಾಗಿದೆ.ಇನ್ನು ತಂದೆ ತಾಯಿ ಒಡಹುಟ್ಟಿದವರನ್ನೂ ಸಲಹುವ ಮಾತಂತೂ ದೂರವೇ ಉಳಿಯಿತು.

ಮಕ್ಕಳಿಗೆ ಮಾನಸಿಕ ಬೆಂಬಲ ನೀಡಲಾರದ ಅಸಹಾಯಕತೆಯಲ್ಲಿ ಈಗಿನ ವಿಭಕ್ತ ಕುಟುಂಬ ಪರಿತಪಿಸುತ್ತಿದೆ.ಮಕ್ಕಳಲ್ಲೂ ನಾಳೆಯ ಭರವಸೆಗಳನ್ನು ಮೂಡಿಸುತ್ತಾ ಪ್ರೋತ್ಸಾಹಿಸುತ್ತಿದ್ದ ಹಿರಿಯರ ವಾತ್ಸಲ್ಯದ ರಕ್ಷೆ ಇಂದು ಬಹುತೇಕ ಕುಟುಂಬಗಳಲ್ಲಿ ಕಾಣೆಯಾಗಿರುವುದು ಒಂದು ಸಾಮಾಜಿಕ ದುರಂತವೇ ಸರಿ. ‘ಹಂಚಿ ತಿನ್ನು’ ಎನ್ನುವ ತತ್ವ, ವಂಚಿಸಿಯಾದರೂ ತಿನ್ನು,’ ಎನ್ನುವ ವಿಕೃತ ರೂಪ ಪಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ.

*
ಮಕ್ಕಳನ್ನು ಹೃದಯವಂತರಾಗಿ ಬೆಳೆಸುವುದು ಇಂದಿನ ಶಿಕ್ಷಣದ ತೀವ್ರ ಅಗತ್ಯವಾಗಿದೆ.ಇಲ್ಲವಾದರೆ ದೇಶದ ಸಾಂಸ್ಕೃತಿಕ ಹಾಗೂ ಪರಂಪರೆಯ ಘನತೆಗೇ ಇದು ಧಕ್ಕೆಯುಂಟು ಮಾಡುವ ಸಂಭವವಿದೆ.

*

ತನ್ನದೇ ವಿಚಾರಲಹರಿಯಲ್ಲಿ ಮುಳುಗಿದ್ದ ಶಾಂತಲಾಳನ್ನು ಮಗನ ಕರೆ ಎಚ್ಚರಿಸಿತು. ‘ತನ್ನ ಮಗುವನ್ನು ಹಾಗಾಗದಂತೆ ತಡೆಯುವ ಗುರುತರ ಹೊಣೆ ತನ್ನ ಮೇಲಿದೆ’ ಎಂದು ಮತ್ತೊಮ್ಮೆ ಹೇಳಿಕೊಂಡಳು ಅವಳು. ಮರುಕ್ಷಣವೇ ‘ ಅಷ್ಟೊಂದು ಬೃಹತ್ ಉದ್ದಿಮೆದಾರನೇ ಆಗಿದ್ದರೂ ತನ್ನಣ್ಣ ಯಾವುದೋ ಕುಂಟು ನೆಪ ಹೇಳಿ’ ಅನಾಥಾಶ್ರಮದಲ್ಲಿ ಬಿಟ್ಟಿರುವುದನ್ನು ನೆನೆದು ಮನ ಭಾರವಾಯಿತು.

*

‘ತನ್ನ ಪತಿಯನ್ನು ಹೇಗಾದರೂ ಒಪ್ಪಿಸಿ ಅಮ್ಮನನ್ನು ಮನೆಗೆ ಕರೆತರಬೇಕು’ ಎಂದುಕೊಂಡಾಗ’ ತನ್ನ ಮಗನಿಗೆ ಅವರ ಒಡನಾಟದ ಸುಖವಾದರೂ ದೊರೆಯುತ್ತದಲ್ಲ’ ಎಂಬ ನೆಮ್ಮದಿ ಅವಳನ್ನು ಆವರಿಸಿಕೊಂಡಿತು.

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  •  ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕವಿಯತ್ರಿ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW