ಕದಳಿ ಪ್ರಿಯ ಪೆರ್ಡೂರು ಶ್ರೀ ಅನಂತಪದ್ಮನಾಭ ಸ್ವಾಮಿ ರಥೋತ್ಸವ ಇತ್ತೀಚಿಗೆ ಜರಗಿತು. ಪೆರ್ಡೂರು ಹಾಗೂ ಬಾರ್ಕೂರಿಗೆ ಇದೆ ಒಂದು ಪುರಾತನ ನಂಟಿದೆ, ಹಿಂದೆ ಪೆರ್ಡೂರು ಸೀಮೆ ಬಾರಕೂರು ರಾಜರ ಅಧೀನದಲ್ಲಿ ಇತ್ತು. ಬಾರಕೂರಿನ ಅರಸರು ಈ ದೇವಸ್ಥಾನದ ಪೂಜಾ ಕೈಂಕರ್ಯಗಳು ನಿರಂತರವಾಗಿ ನಡೆಯಲು ಉಂಬಳಿ ಬಿಟ್ಟಿದ್ದರು ಎಂಬ ಉಲ್ಲೇಖವಿದೆ. ಕ್ಷೇತ್ರದ ಮಹಿಮೆಯ ಕುರಿತು ಶಕುಂತಲಾ ಸವಿ ಅವರು ಓದುಗರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶ್ರೀ ಅನಂತಪದ್ಮನಾಭ ದೇವಸ್ಥಾನ : ಸ್ಥಳ ಐತಿಹ್ಯ ತುಳುನಾಡೆಂದುಕರೆಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಯ್ಸಳ, ವಿಜಯನಗರ ಸಾಮ್ರಾಟರ ಅಂಕಿತಕ್ಕೊಳಪಟ್ಟು ಕೆಲವಾರು ರಾಜರು ಬಾರಕೂರು, ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಆಳುತ್ತಿದ್ದರು. ಈ ಪೆರ್ಡೂರು ಸೀಮೆ ಬಾರಕೂರಿನ ರಾಜರ ಅಧೀನದಲ್ಲಿತ್ತು. ಪಶ್ಚಿಮ ಘಟ್ಟದ ಕೆಳಗಿನ ನಾಡಾದ ಇದು ಕಾಡಿನಿಂದಾವೃತವಾಗಿತ್ತು. ಕಾಡಿನ ನಡುವೆ ವಿಶೇಷ ಸಾನ್ನಿಧ್ಯವಿರುವ ನಿರ್ವೈರ ಸ್ಥಳದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಯಿತೆಂದು ಸ್ಥಳಪುರಾಣ ಹೇಳುತ್ತದೆ. ಪದ್ಮಪುರಾಣದಲ್ಲಿ ಉಲ್ಲೇಖವಿರುವ ಶ್ರೀಕ್ಷೇತ್ರದಲ್ಲಿ 6-7ನೇ ಶತಮಾನದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಗಿರಬೇಕೆಂದು ಊಹಿಸಲಾಗಿದೆ. ಅಲ್ಲದೆ ಅಷ್ಟಮಂಗಲ ಪ್ರಶ್ನೆಯಲ್ಲೂ ಒಂದು ಸಹಸ್ರ ವರ್ಷಗಳ ಹಿಂದೆಯೇ ಈ ದೇವಸ್ಥಾನದ ರಚನೆಯಾಗಿರಬೇಕೆಂದೂ ತೋರಿಬಂದಿದೆ.
ಉಡುಪಿಯಿಂದ ಈಶಾನ್ಯದಲ್ಲಿ ಒಂದು ಯೋಜನದೂರದಲ್ಲಿ ‘ಕೋಟಿಕುಂಜ’ವನ್ನು ಆಳುತ್ತಿದ್ದ ರಾಜ ಶಂಕರನು ತನ್ನ ಆಶ್ರಿತನಾದ ಮುನ್ನೂರು ಗ್ರಾಮದ ಕೃಷ್ಣಶರ್ಮನೆಂಬ ಬ್ರಾಹ್ಮಣೋತ್ತಮನು ಕಾಡಿನ ಮಧ್ಯದಲ್ಲಿ ಫಾಲ್ಗುಣ ಮಾಸ ಶುಕ್ಲಪಕ್ಷ ಪ್ರತಿಷ್ಠಾಪಿಸಿದ ಅನಂತಪದ್ಮನಾಭ ಸ್ವಾಮಿಗೆ ಸುಂದರವಾದ ಆಲಯ, ಪ್ರಾಕಾರ, ಕೆರೆ, ಕಟ್ಟಡಗಳನ್ನು ಕಟ್ಟಿಸಿದ್ದಲ್ಲದೆ ನಿತ್ಯಪೂಜೆಗಾಗಿ ಬಣ್ಣಂಪಳ್ಳಿ ಗ್ರಾಮದಲ್ಲಿ ಉಂಬಳಿಬಿಟ್ಟನೆಂದೂ ಈಗ ಪ್ರಚಲಿತವಿರುವ ಸ್ಥಳಪುರಾಣ ಹೇಳುತ್ತದೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸ್ವಾಧೀನಕ್ಕೆ ಭಾರತದ ದೇಶೀಯ ಸಂಸ್ಥಾನಗಳು ಬಂದ ಹೊಸದರಲ್ಲಿ ಅಂದರೆ ಇಂದಿಗೆ ಸುಮಾರು 200 ವರ್ಷಗಳ ಹಿಂದೆ ಕರ್ನಲ್ ಕಾಲಿಸ್ ಮೆಕೆನ್ಜಿ (1754-1821) ಎಂಬಾತ ಸಂಗ್ರಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತಿನಲ್ಲಿ ಪೆರಡೂರು ಮಾಗಣೆಯ ಸಂಕ ಹೆಗ್ಗಡೆಯ ಆಶ್ರಿತನಾದ ಕೃಷ್ಣ ಹೆಬ್ಬಾರ ಎಂಬವರು ಕ್ರಿ.ಶ. 1419ರಲ್ಲಿ ದೇವರ ಮೂರ್ತಿಯ ಪ್ರತಿಷ್ಠಾಪನೆ ಮಾಡಿದರೆಂದೂ, ಬಳಿಕ ಬಾರಕೂರು ರಾಜ ವಿಜಯಪ್ಪ ಒಡೆಯರು ಈ ದೇವರ ನಂದಾದೀಪ, ಅಮೃತಪಡಿಗೆಂದು ಹೆರಡೆ, ಬಣ್ಣಂಪಳ್ಳಿ ನಾಡಿನ 120 ವರಹ ಬೆಲೆ ಬಾಳುವ ಭೂಮಿಯನ್ನು ಉಂಬಳಿಬಿಟ್ಟರೆಂದೂ ಅಂದು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ಮಾಳಿಗೆ ಹೆಬ್ಬಾರ ಅನಂತಯ್ಯ ಮತ್ತು ನೆಲ್ಲಿ ಸುಬ್ಬಯ್ಯ ಎಂಬವರು ಬರೆಸಿದ್ದ ಕೈಫಿಯತ್ತುನಾಮೆ ಹೇಳುತ್ತದೆ.

ತುಳುನಾಡಿನ ಖ್ಯಾತ ಸಂಶೋಧಕ ದಿ.ಗುರುರಾಜ ಭಟ್ಟರು ತಮ್ಮ ‘ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್’ನಲ್ಲಿ ಪೆರ್ಡೂರಿನ ಶ್ರೀಸ್ವಾಮಿಯ ವಿಗ್ರಹವು 11-12ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಪೇರ್ ಉಂಡು ಊರು’ – ಪೇರುಂಡೂರು – ಪೆರುಡೂರು – ಪೆರ್ಡೂರು ಆಯಿತೆಂದು ಹಿರಿಯರು ಹೇಳುತ್ತಾರಾದರೂ ಈ ಹೆಸರಿನ ಬಗ್ಗೆ ಮತ್ತೊಂದು ವ್ಯಾಖ್ಯೆಯೂ ಇದೆ. ತುಳುವಿನಲ್ಲಿ ‘ಪೇರ್’ ಎಂದರೆ ಎತ್ತರ, ‘ಪೆರಿದ್’ ಎಂದರೆ ದೊಡ್ಡದಾದ – ವಿಸ್ತಾರವಾದ – ಅಂದರೆ ವಿಸ್ತಾರವಾದ ಎತ್ತರದಲ್ಲಿರುವ ಊರು – ‘ಪೆರಿದ್ – ಊರು,’ ಪೆರಿದೂರು – ಪೆರ್ದೂರು – ಪೆರ್ಡೂರು ಎಂದಾಗಿರಬಹುದೆಂದೂ ಸ್ಥಳನಾಮ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.ಪ್ರಧಾನ ಮೂರ್ತಿ.
ದೇವಸ್ಥಾನದಲ್ಲಿರುವ ಪ್ರಧಾನ ಮೂರ್ತಿ ಅನಂತಪದ್ಮನಾಭ ಸ್ವಾಮಿಯದು. ಕರಿಕಲ್ಲಿನಲ್ಲಿ ಕಟೆದ ಸುಮಾರು ಎರಡೂವರೆ ಅಡಿ ಎತ್ತರದ ಶಿಲಾ ವಿಗ್ರಹ ಅಭಯಹಸ್ತದಿಂದ ಚಕ್ರಶಂಖಗದಾಪದ್ಮಧಾರಿಯಾಗಿ ನಿಂತ ಭವ್ಯ ಮೂರ್ತಿ. ಮೂರ್ತಿ ಲಕ್ಷಣವನ್ನು ಗಮನಿಸಿದಾಗ ಇದು ಜನಾರ್ದನ ರೂಪವೆಂದು ತೋರುತ್ತದೆ. ಇದಕ್ಕೆ ತಕ್ಕಂತೆ 1458ರ ಶಿಲಾಶಾಸನದಲ್ಲಿ ‘ಜನಾರ್ದನ’ ದೇವರಿಗೆ ಎಂದೂ ಅದೇ ಶಿಲಾಶಾಸನದ ಕೊನೆಗೆ ‘ಅನಂತದೇವ’ ಎಂದೂ ಉಲ್ಲೇಖವಿದೆ. ಅಂದರೆ ಆ ಕಾಲದಲ್ಲೇ ಈ ದೇವರಿಗೆ ಎರಡೂ ಹೆಸರಿನಿಂದ ಕರೆಯುತ್ತಿದ್ದರು ಎಂದೂ ಊಹಿಸಬಹುದು, ಅದೇ 1520ರ ಶಿಲಾಶಾಸನದಲ್ಲಿ ಅನಂತಪದ್ಮನಾಭ ಎಂದೇ ಉಲ್ಲೇಖವಿದೆ. ಅಲ್ಲದೆ ಆ ಮೂರ್ತಿಯ ಹಿಂದಿನಿಂದ ಬಳಸಿದಂತೆ ಶೇಷ – ಪ್ರತಿಮೆಯ ಶಿರೋಭಾಗದಲ್ಲಿ ಹೆಡೆ. ಇದನ್ನು ಗಮನಿಸುವಾಗ ಕಲ್ಲಂಗಳ – ಕರ್ಜೆ – ಪುತ್ತಿಗೆ – ಶಿವಪುರ – ಹೊಳೆಗಳಿಂದ ಆವೃತವಾದ ಈ ಪುಣ್ಯಜಾಗದಲ್ಲಿ ಬ್ರಹ್ಮದೇವರ ಅಪೇಕ್ಷೆ ಮೇರೆಗೆ ಕ್ಷೀರಸಾಗರಶಾಯಿ ವಿಷ್ಣು ಎದ್ದುನಿಂತು ಅಭಯವನ್ನಿತ್ತ ನಾರಾಯಣನ ಪದ್ಮನಾಭ ರೂಪ ನೆನಪಾಗುತ್ತದೆ. ಪದ್ಮದ ಮೇಲೆ ನಿಂತು ಪದ್ಮವನ್ನು ಧರಿಸಿ ಪದ್ಮಪ್ರಿಯನಾಗಿ, ಪದ್ಮದಳಾಯಿತ ಕಣ್ಣುಳ್ಳವನೆಂದು ಸ್ತುತಿಸಿದ ರೂಪವನ್ನು ಪದ್ಮನಾಭನೆಂದು ಪ್ರತಿಷ್ಠಾಪಿಸಿದ್ದು ತೀರಾ ಅಪರೂಪ. ಪ್ರಾಯಶಃ ಕರ್ನಾಟಕದಲ್ಲೇ ಬೇರೆಲ್ಲೂ ಕಾಣಸಿಗದು. ಪ್ರತಿಮಾ ಲಕ್ಷಣ ಗಮನಿಸಿದರೆ ಜನಿವಾರದಂತೆಯೇ ಮೂಗುತಿಯೂ ಮೂರ್ತಿಯಲ್ಲಿದೆ. ಆದ್ದರಿಂದ ಅವಿಭಾಜ್ಯವಾದ ಲಕ್ಷ್ಮಿಯನ್ನು ಮೂಲದಲ್ಲಿಯೇ ಬಿಂಬಿಸಲಾಗಿದೆ. ನಿಂತ ಭಂಗಿಯಲ್ಲಿರುವ ಶ್ರೀ ಸ್ವಾಮಿಯ ಮೂರ್ತಿಯ ತಲೆಯ ಮೇಲ್ಗಡೆ ಸುತ್ತ ನಾಗಹೆಡೆ, ನಾಭಿಯಲ್ಲಿ ಪದ್ಮದ ಚಿಹ್ನೆಗಳಿವೆ. ಅನಂತನೆಂದರೆ ಹುತ್ತ – ಹಾವು. ಈತನನ್ನು ಒಡಗೂಡಿಕೊಂಡೇ ಪದ್ಮನಾಭ ಭಕ್ತರನ್ನು ಉದ್ಧರಿಸಲು ಇಲ್ಲಿ ನೆಲೆನಿಂತಿದ್ದಾನೆ. ಹಿಂದಿನ ಕಾಲದಲ್ಲಿ ತಿರುಪತಿ ತಿಮ್ಮಪ್ಪನ ಹರಕೆಗಳು, ಮಂಜುನಾಥನ ತಪ್ಪು ಕಾಣಿಕೆಗಳು ಇಲ್ಲೂ ಸಲ್ಲುತ್ತಿದ್ದುವಂತೆ. ಅಂತಹ ಶಕ್ತಿವಂತ ಕಾರಣಿಕ ಸ್ವಾಮಿ ಈ ಪದ್ಮನಾಭ ಎನ್ನುತ್ತಾರೆ ಭಕ್ತ ಮಂದಿ.

ಫೋಟೋ ಕೃಪೆ : google
ಬಲಿಮೂರ್ತಿ :
ಅನಂತಪದ್ಮನಾಭ ಸ್ವಾಮಿಯ ಮೂಲ ಬಿಂಬದ ಎಡಬಲದಲ್ಲಿ ಎರಡು ಬಲಿಮೂರ್ತಿಗಳಿವೆ. ಮೂಲಬಿಂಬದ ಲಕ್ಷಣಗಳನ್ನು ಗಮನಿಸಿ ಬಲಿಮೂರ್ತಿಯನ್ನು ಕಲ್ಪಿಸಲಾಗಿದೆ. ಎಡಗಡೆಯದು ಹಳೆಯದು, ಬಲಬದಿಯದು ಹೊಸತು. ಪದ್ಮದ ಮೇಲೆ ನಿಂತ ಭಂಗಿ, ನಾಭಿಯಲ್ಲಿ ಪದ್ಮ, ಕರದಲ್ಲಿ ಪದ್ಮ, ಶೇಷಛತ್ರವಿದೆ. ಹೊಸ ಬಲಿಮೂರ್ತಿ ತುಂಬಾ ಕಲಾತ್ಮಕವಾಗಿ ತಯಾರಿಸಲಾಗಿದೆ. ವೃತ್ತಾಕಾರ ತಿರುಗಬಲ್ಲ ಈ ಮೂರ್ತಿ ಮೇಲೆ ಎತ್ತಲು ಬರುವುದಿಲ್ಲ, ಅಲ್ಲದೆ ಒಂದು ತೊಟ್ಟು ನೀರು ಪೀಠದ ಒಳಗೆ ಇಳಿಯುವುದಿಲ್ಲ.
ರುದ್ರಶಕ್ತಿ ಮತ್ತು ಕಾನದಪಾಡಿ:
ರುದ್ರ ದೇವಸ್ಥಾನವೂ ಈ ದೇವಸ್ಥಾನದ ಒಳಗೆ ಸೇರಿದುದರಿಂದ ರುದ್ರಲಿಂಗವನ್ನು ಇಲ್ಲಿ ಇಡಲಾಗಿದೆ ಎಂದು ಹೇಳುತ್ತಾರೆ. ಇಲ್ಲಿ ಮತ್ತೊಂದು ಕಥೆಯೂ ಪ್ರಚಲಿತದಲ್ಲಿದೆ. ಹತ್ತಿರದ ‘ಕಾನದಪಾಡಿ’ ಎಂಬಲ್ಲಿ ಎತ್ತರದಲ್ಲಿ ರುದ್ರ ದೇವಸ್ಥಾನವೊಂದಿದ್ದು ಕಾಲಕ್ರಮೇಣ ಆಡಳಿತ ವರ್ಗ ಮತ್ತು ಅರ್ಚಕರ ನಡುವೆ ವೈಮನಸ್ಸು ಬಂದು ಅರ್ಚಕರು ದೇವಸ್ಥಾನ ಬಿಟ್ಟು ತೆರಳಿದರೆಂದು ದೇವಸ್ಥಾನ ಪಾಳುಬಿದ್ದು ಕಾಲಗರ್ಭಕ್ಕೆ ಸಂಧಿತೆಂದೂ ಆದರೆ ಅಲ್ಲಿನ ಶಕ್ತಿಸಾನ್ನಿಧ್ಯಗಳು ಊರಿಗೆ ಗೋಚರಿಸಿದಾಗ ಊರ ಮಂದಿಯ ಪ್ರಾರ್ಥನೆಯ ಮೇರೆಗೆ ಈ ದೇವಸ್ಥಾನದಲ್ಲಿ ಆ ಸಾನ್ನಿಧ್ಯವನ್ನು ಲಿಂಗರೂಪದಲ್ಲಿ ತಂದು ಪೂಜಿಸಲಾಗುತ್ತಿದೆಯಂದೂ ಹೇಳುತ್ತಾರೆ. ಅಂತೂ ಗರ್ಭಗುಡಿಯ ಆಗ್ನೇಯ ದಿಕ್ಕಿನಲ್ಲಿರುವ ರುದ್ರಲಿಂಗಕ್ಕೆ ಮಧ್ಯಾಹ್ನ ಕಾಲದಲ್ಲಿ ಪರಮಾನ್ನ, ನೈವೇದ್ಯ, ಭಕ್ಷ್ಯಗಳನ್ನು ಪ್ರತಿದಿನವೂ ಅರ್ಪಿಸಿ ಪೂಜಿಸಲಾಗುತ್ತದೆ. ತೀರ್ಥ ಮಂಟಪದ ಕಂಬವೊಂದರಲ್ಲಿ ಗಣಪತಿ ದೇವರ ಸಾನ್ನಿಧ್ಯವಿದೆ ಎಂಬ ನಂಬಿಕೆಯಿದೆ. ಪ್ರತಿದಿನ ಪ್ರಾತಃಕಾಲ ಗಣಪತಿಗೆ ಪೂಜೆ ಸಲ್ಲಿಸಿ ಆಮೇಲೆಯೇ ಗರ್ಭಗುಡಿಯಲ್ಲಿರುವ ಮೂಲಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದೇವಸ್ಥಾನದ ಧ್ವಜಮರದಂಗಣಕ್ಕೆ ತಾಗಿ ಈಶಾನ್ಯ ದಿಕ್ಕಿನಲ್ಲಿ ಖಡ್ಗರಾವಣನ ಮತ್ತು ಬೊಬ್ಬರ್ಯನ ಸ್ಥಾನವಿದೆ. ಹಾಗೆಯೇ ದೇವಸ್ಥಾನದ ಹಿಂಬದಿಯಲ್ಲಿ ಪಂಜುರ್ಲಿ ಮತ್ತು ನಂದಿಗೋಣನ ಸ್ಥಾನಗಳಿವೆ. ಹೊರಾಂಗಣದಲ್ಲಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ನಾಗಬ್ರಹ್ಮಸ್ಥಾನವಿದೆ. ನೈರುತ್ಯ ದಿಕ್ಕಿನಲ್ಲಿ ರಕ್ತೇಶ್ವರಿ, ನಂದಿಗೋಣ ಗುಡಿಯಿದೆ. ಅಲ್ಲೇ ಹತ್ತಿರದಲ್ಲಿ ತಾಮಸ ಗುಣದ ಪಂಜುರ್ಲಿ ಗುಡಿಯೂ ಇದೆ. ವಾಯುವ್ಯ ದಿಕ್ಕಿನಲ್ಲಿ ಬೊಬ್ಬರ್ಯ ಸ್ಥಾನವಿದೆ – ಸೂರಾಲಿನ ಅರಸ ದೇವರಿಗೆ ಆಭರಣ ಅರ್ಪಿಸಿದ ಸಂದರ್ಭದಲ್ಲಿ ಆಭರಣಗಳೊಂದಿಗೆ ಬಂದ ಈ ಬೊಬ್ಬರ್ಯನನ್ನು ಇಲ್ಲಿಯೇ ಪ್ರತಿಷ್ಠಾಪಿಸಲಾಯಿತೆಂದು ಹೇಳುತ್ತಾರೆ. ಉತ್ತರ ದಿಕ್ಕಿನಲ್ಲಿ ನಾಗಬನವಿದೆ. ಅಲ್ಲದೇ ದೇವಳದ ಅತೀ ಸಮೀಪವಾಗಿ ನಾಲ್ಕು ಕಡೆಗಳಲ್ಲಿ ಉತ್ತರ – ಪೂರ್ವ – ದಕ್ಷಿಣ – ನೈರುತ್ಯ ದಿಕ್ಕಿನಲ್ಲಿ ನಾಗನನ್ನೇ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನ ಕಟ್ಟಿಸಿ ಉಳಿದ ಹಣವನ್ನು ನಾಲ್ಕು ಕಡೆ ಇಟ್ಟು ನಾಗನನ್ನು ಪ್ರತಿಷ್ಠಾಪಿಸಿದ್ದಾರೆ ಎಂದೂ ಹೇಳುತ್ತಾರೆ.

ಪರಿಸರ:
ಒಂದು ಕಾಲದಲ್ಲಿ ದಟ್ಟ ಅರಣ್ಯವಾಗಿದ್ದ ಈ ಜಾಗ ದೇವಸ್ಥಾನ ನಿರ್ಮಾಣವಾದ ಬಳಿಕ ಜನವಸತಿ ಯೋಗ್ಯವಾಯಿತು. ಕಾಡು ಕಡಿದು ನಾಡನ್ನಾಗಿಸಿದರು. ಕಳೆದ ಒಂದು ಶತಮಾನದವರೆಗೂ ದೇವಸ್ಥಾನದ ಎದುರಿಗೆ ವಿಶಾಲ ಗದ್ದೆಯಿತ್ತು. ಬಳಿಕ ಅದುವೇ ರಥಬೀದಿಯಾಗಿ ಅಂಗಡಿಗಳೆದ್ದುವು. ರಥಬೀದಿಯ ಮೂಲೆಯಲ್ಲಿ ಬ್ರಹ್ಮರಥದ ಕೊಟ್ಟಿಗೆಯಿದೆ. ಇದನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಆ ಬ್ರಹ್ಮರಥವನ್ನು ಪಳಜೆ ಮಂಜು ಕುಂದ ಹೆಗ್ಡೆಯವರು ದೇವರಿಗೆ ಸಮರ್ಪಿಸಿದ ದಾಖಲೆಯಿದೆ. ಬಳಿಯಲ್ಲಿಯೇ ದೇವಸ್ಥಾನದ ನೇರ ಅಧೀನದಲ್ಲಿ ಕೊಪ್ಪಲದಲ್ಲಿ – 2.25 ಎಕ್ರೆ ತೆಂಗು – ಕಂಗಿನ ತೋಟವಿದೆ. ದೇವಸ್ಥಾನದ ಎದುರುಗಡೆ ಆರಾಟೋತ್ಸವ ನಡೆಯುವ ಕಟ್ಟೆ – ಮರ ಬಹು ಪುರಾತನವಾಗಿದೆ. ಅದಕ್ಕಿಂತ ಮುಂಚೆ ಇತ್ತೀಚೆಗೆ ಜೀರ್ಣೋದ್ಧಾರಗೊಂಡ ನಾಗಬ್ರಹ್ಮ ಸ್ಥಾನವಿದೆ. ಅಲ್ಲಿಂದ ನೇರಕ್ಕೆ ಎತ್ತರ ಜಾಗದಲ್ಲಿ ಕುಂಜದಕಟ್ಟೆ. ದೇವರು ವರ್ಷಕ್ಕೊಮ್ಮೆ ಉತ್ಸವ ಸಮಯದಲ್ಲಿ ಅಲ್ಲಿಗೆ ಹೋಗಿ ಸೇವೆ ತೆಗೆದುಕೊಳ್ಳುವ ಪರಿಪಾಠವಿದೆ. ಅಲ್ಲಿ ಹತ್ತಿರದಲ್ಲಿಯೇ ಗ್ರಾಮ ದೇವತೆ ಮಾರಿಯಮ್ಮನ ಗುಡಿಯಿದೆ. ಬೆಳಿರಾಯಬೆಟ್ಟು ಗೋಪಾಲಕೃಷ್ಣ ಮಠ, ಹೆಬ್ಬಾರಬೆಟ್ಟು ಹೆಬ್ಬಾರ ಮಠ, ಗೋರೇಲು ನೆಲ್ಲಿಮಠ, ಮಂಚಾರು ಮಠ, ಬಾಳೆಬೈಲು ಮಠ, ಪಡಪಳ್ಳಿ ಮಠ, ಕುಕ್ಕುಂಡಿ ಮಠ, ಹತ್ರಬೈಲು ಮಠ, ಪಾಡಿಗಾರು ಗೋಪಾಲಕೃಷ್ಣ ಮಠ, ಮುಳ್ಳುಗುಡ್ಡೆ ಬನಶಂಕರಿದೇವಿ ಮಠ, ನಾಯರ್‍ಕೋಡು ಮಠ, ಒಡ್ಡಮೇಶ್ವರ ಮಠ, ಕಲ್ಲಮಠ, ಸೊನ್ನಂಗಿ ಮಠ, ಕೊೈತ್ಯಾರು ಮಠ, ಸೋಮಯಾಜಿಬೆಟ್ಟು ಮಠ, ಪಳಮಠ, ಅಣ್ಣಾಲು ಮಠ – ಹೀಗೆ ದೇವಸ್ಥಾನದ ಆಸುಪಾಸಿನಲ್ಲಿ ಮಠಗಳಿದ್ದವು. ದೇವಸ್ಥಾನದ ಪಂಚಪರ್ವಾದಿಗಳಿಗೆ ಅಲ್ಲಿಂದ ಜನ ಬಂದು ಸೇವೆ ಮಾಡುವ ಪರಿಪಾಠವಿತ್ತು. ಆದರೆ ಭೂ ಸುಧಾರಣಾ ಕಾನೂನು ಇವೆಲ್ಲವಕ್ಕೂ ಮಂಗಳ ಹಾಡಿದೆ. ಇಲ್ಲಿ ಮುತ್ತುರ್ಮೆಯಲ್ಲಿರುವ ‘ಕಮಂಡಲ ತೀರ್ಥ’, ಬೆಳಿರಾಯ ಮಠದ ‘ಯಕ್ಷಿಗುಡಿ’ ಕಾರ್ಣಿಕ ಸ್ಥಳಗಳು.
- ಶಕುಂತಲಾ ಸವಿ
