ವಿಜ್ಞಾನ ಲೋಕ (ಭಾಗ-೨) – ಆರ್.ಬಿ.ಗುರುಬಸವರಾಜ

ಚಮೋಲಿ ಎಂಬ ಯುವಕ ತನ್ನ ತಾಯಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕೆಂಬ ಆಸೆಯಿಂದ ಒಂದು ಹೊಂಡವನ್ನು ಅಗೆಯಲು ನಿರ್ಧರಿಸಿದ. ಆ ಹೊಂಡದಲ್ಲಿ ನೀರು ತುಂಬಿತು. ಮುಂದೆ ಅದೇ ನೀರು ಗ್ರಾಮದ ಬಳಕೆಗೆ ಆಸರೆಯಾಯಿತು. ಈ ಕುರಿತು ಶಿಕ್ಷಕರಾದ ಆರ್.ಬಿ.ಗುರುಬಸವರಾಜ ಅವರು ವಿಜ್ಞಾನ ಲೋಕದ ಅಂಕಣದಲ್ಲಿ ‘ಜಲ ಪಾತ್ರೆಗಾಗಿ ಜನ ಜಾತ್ರೆ’ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ… 

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಚಮ್ಕೋಟ್ ಹಳ್ಳಿಯಲ್ಲಿರುವ ಚಮೋಲಿ ಎಂಬ ಯುವಕ ತನ್ನ ತಾಯಿಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕೆಂಬ ಆಸೆಯಿಂದ ಒಂದು ಹೊಂಡವನ್ನು ಅಗೆಯಲು ನಿರ್ಧರಿಸಿದ. ಆಕೆಯ ಜನ್ಮದಿನಕ್ಕೂ ಮುಂಚಿತವಾಗಿ ಹೊಂಡ ಅಗೆಯುವ ಕಾರ್ಯದಲ್ಲಿ ತೊಡಗಿಕೊಂಡ. ಜನ್ಮದಿನಕ್ಕೂ ಮುನ್ನಾ ದಿನ ಅಗೆಯುವ ಕಾರ್ಯ ಪೂರ್ಣಗೊಂಡಿತ್ತು. ಅಂದು ರಾತ್ರಿ ಸುರಿದ ಮಳೆಗೆ ಹೊಂಡ ಭರ್ತಿಯಾಗಿತ್ತು. ಬೆಳಿಗ್ಗೆ ಎದ್ದು ತಾಯಿಯಿಂದ ಆ ಹೊಂಡಕ್ಕೆ ಪೂಜೆ ಮಾಡಿಸಿದ. ಅಂದಿನಿಂದ ಆ ಹೊಂಡದ ನೀರು ನಿತ್ಯವೂ ಗ್ರಾಮದ ಜನರ ಮನೆ ಬಳಕೆಗೆ ಆಸರೆಯಾಯಿತು. ಚಮೋಲಿ ಮಾಡಿದ ಒಂದು ಸಣ್ಣ ವಿಭಿನ್ನ ಕಾರ್ಯ ಇಡೀ ಊರಿನಲ್ಲಿ ಸುದ್ದಿ ಮಾಡಿತು. ಅಷ್ಟೇ ಅಲ್ಲ ಇಡೀ ಪ್ರಾಂತ್ಯ ರಾಜ್ಯದಲ್ಲಿಯೂ ಸುದ್ದಿ ಮಾಡಿತು. ನಂತರ ಆದ ಬದಲಾವಣೆಗೆ ಚಮೋಲಿ ಸಾಕ್ಷಿಯಾಗಿದ್ದ. ಇಡೀ ಉತ್ತರಾಖಂಡದಲ್ಲಿ ಈ ವಿನೂತನ ಕಾಯತಂತ್ರ ಹೆಚ್ಚು ಜನಪ್ರಿಯವಾಗುತ್ತಿದೆ. ‘ಪ್ರೀತಿಪಾತ್ರರ ನೆನಪಿಗಾಗಿ ಹೊಂಡವನ್ನು ಅಗೆಯಿರಿ’ ಎಂಬ ಹೆಸರಿನಲ್ಲಿ ಹೆಚ್ಚು ಜನಮನ್ನಣೆ ಗಳಿಸಿತು.

ನಾವು ತರುವ ಬದಲಾವಣೆಗೆ ಭಾವನಾತ್ಮಕ ಬೆಸುಗೆಯಾದರೆ ಎಂತಹ ಬದಲಾವಣೆಯನ್ನೂ ಸಹ ಜಾರಿಗೆ ತರಲು ಸಾಧ್ಯ ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಚಮೋಲಿಯ ತಂತ್ರದಿಂದ ಸ್ಪೂರ್ತಿ ಪಡೆದ ಉತ್ತರಖಂಡದ ಜನರು ‘ಕಲ್ ಕೆ ಲಿಯೇ ಜಲ್’ (ನಾಳೆಗಾಗಿ ನೀರು) ಎಂಬ ಕೊಳ ಅಗೆಯುವ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. ನೀರು, ಭೂಮಿ ಮತ್ತು ಅರಣ್ಯಗಳು ಬದುಕುಳಿಯಬೇಕಾದರೆ ಇಂತಹ ಭಾವನಾತ್ಮಕ ಬೆಸುಗೆಯ ಕಾರ್ಯಗಳು ಜಾರಿಗೊಳ್ಳಬೇಕಾಗಿದೆ. ಇದಾದ ನಂತರ ಚಮ್ಕೋಟ್, ಕುಲ್ಹಾದ್ ಮತ್ತು ಸಿರೋರ್ ಎಂಬ ಮೂರು ಹಳ್ಳಿಗಳ ಜನರು ‘ಗಂಗಾ’.

‘ಸಖಿ ಸಂಘಟನೆ’ಯನ್ನು ಸ್ಥಾಫಿಸಿಕೊಂಡು ಅದರ ಮೂಲಕ ಅಲ್ಲಿನ ಹಳ್ಳಿಗಳಿಗೆ ನೀರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡರು. ರಾಜಸ್ಥಾನದ ರಾಜೇಂದ್ರ ಸಿಂಗ್ ಅವರದ್ದು ಸಹ ವಿಭಿನ್ನ ಜಲಪ್ರಯೋಗದ ಕತೆ. ರಾಜೇಂದ್ರ ಸಿಂಗ್ ಅವರು ಬಂಜರು ಭೂಪ್ರದೇಶವನ್ನು ಹಸಿರು ತಾಣಗಳಾಗಿ ಪರಿವರ್ತಿಸಿದ ಪ್ರವರ್ತಕರಾಗಿದ್ದಾರೆ. ತಮ್ಮ ವೈಜ್ಞಾನಿಕ ಜ್ಞಾನ, ಸಾಂಪ್ರದಾಯಿಕ ಬುದ್ಧಿವಂತಿಕೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೂಲಕ, ಗ್ರಾಮಸ್ಥರಲ್ಲಿ ಜಲ ಹೊಣೆಗಾರಿಕೆ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಬೆಳೆಸಲು ಸಹಾಯ ಮಾಡಿತು. ಅವರು ಪ್ರಮುಖವಾಗಿ ಸಾಂಪ್ರದಾಯಿಕ ಜಲ ಕೊಯ್ಲು ವಿಧಾನಗಳ ಬೆಂಬಲಿಸಿದರು. ವಿಶೇಷವಾಗಿ ರಾಜಸ್ಥಾನದ ಹಳೆಯ ‘ಜೋಹಾದ್’ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಿದರು. ಜೋಹಾದ್‍ಗಳು ಸಣ್ಣ ಜೇಡಿಮಣ್ಣಿನ ಅಣೆಕಟ್ಟುಗಳಾಗಿದ್ದು, ಮಳೆನೀರನ್ನು ಸಂಗ್ರಹಿಸಿ ಹಿಡಿದಿಟ್ಟುಕೊಳ್ಳಲು ಬಳಸಲಾಗುತ್ತದೆ. ಇದರಿಂದಾಗಿ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುತ್ತದೆ ಮತ್ತು ಜಲಚರಗಳನ್ನು ಮರುಪೂರಣಗೊಳಿಸುತ್ತದೆ. ರಾಜೇಂದ್ರ ಸಿಂಗ್ ಅವರು ಜೋಹಾದ್‍ಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಗ್ರಾಮಸ್ಥರನ್ನು ಸಂಘಟಿಸುವ ಮೂಲಕ ಪರಿಸರ ಸಂರಕ್ಷಣೆಯನ್ನು ಬೆಳೆಸಿ, ಜಲ ನಿರ್ವಹಣೆಯಲ್ಲಿ ಸಮುದಾಯಗಳು ಸ್ವಾವಲಂಬಿಯಾಗಲು ಅನುವು ಮಾಡಿಕೊಟ್ಟರು. ರಾಜೇಂದ್ರ ಸಿಂಗ್ ರೂಪಿಸಿದ ಜೋಹಾದ್ ವ್ಯವಸ್ಥೆಯು ಜನಸಾಮಾನ್ಯರ ಸಬಲೀಕರಣ ಮತ್ತು ವಿಕೇಂದ್ರೀಕೃತ ನೀರಿನ ನಿರ್ವಹಣೆಗೆ ಮಾದರಿಯಾಯಿತು. ಇದರ ಫಲವಾಗಿ ಕೇವಲ ರಾಜಸ್ಥಾನದಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಕೇರಳದಾದ್ಯಂತದ ಸಮುದಾಯಗಳು ನೀರನ್ನು ಸಂಗ್ರಹಿಸುವ, ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಜಲಚರಗಳನ್ನು ಮರುಪೂರಣ ಮಾಡಲು ಸ್ಪೂರ್ತಿಯಾಯಿತು.

ಫೋಟೋ ಕೃಪೆ : google

ಬುಂದೇಲ್‍ಖಂಡದ ‘ದೋಹಾ’ ಮಾದರಿಯು ಮತ್ತೊಂದು ವಿಭಿನ್ನ ಜಲಕ್ರಾಂತಿಯಾಗಿದೆ. ನೀರು ಹರಿಯುವ ಪ್ರದೇಶಗಳಲ್ಲಿ ಅನಿಯಮಿತವಾದ ಚಿಕ್ಕ ಅಥವಾ ದೊಡ್ಡ ಗುಂಡಿಗಳನ್ನು ನಿರ್ಮಿಸಿ ಹರಿದುಹೋಗುತ್ತಿದ್ದ ನೀರನ್ನು ಹಿಡಿದಿಡುವ ಪ್ರಯತ್ನವಾಗಿದೆ. ಬುಂದೇಲಖಂಡವು ಅನಿಯಮಿತ ಮಳೆ ಮತ್ತು ಭರವಸೆಯಿಲ್ಲದ ಕೃಷಿಯನ್ನು ಹೊಂದಿತ್ತು. ಆದರೆ ಅಲ್ಲಲ್ಲಿ ನಿರ್ಮಿಸಿದ ದೋಹಾಗಳಿಂದ ಹಳ್ಳ ಅಥವಾ ಸಣ್ಣ ಹೊಳೆಗಳ ಸುತ್ತಮುತ್ತಲಿನ ಕೃಷಿ ಭೂಮಿಗಳು ಈಗ ನೀರಾವರಿಗಾಗಿ ನೀರಿನ ಮೂಲವನ್ನು ಹೊಂದಿವೆ. ದೋಹಾಗಳೆಂಬ ಸಣ್ಣ ಸಣ್ಣ ಕೊಳಗಳು ಅಂತರ್ಜಲ ಮರುಪೂರಣವನ್ನು ಹೆಚ್ಚಿಸಿದ್ದರ ಪರಿಣಾಮವಾಗಿ ಹಿಂಗಾರು ಬೆಳೆಗೆ ನೀರಾವರಿ ವ್ಯವಸ್ಥೆ ಲಭ್ಯವಾಗಿದೆ.

ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ನೂರಾರು ಜಲಕ್ರಾಂತಿಯ ಕಥಾನಕಗಳು ನಮ್ಮಲ್ಲಿವೆ. ಆದರೆ ಅವುಗಳನ್ನು ಅನುಸರಿಸುವ ಮನಸ್ಸುಗಳು ಬೇಕಾಗಿವೆ. ಪ್ರತಿವರ್ಷ ಮಾರ್ಚ್ ಬಂತೆಂದರೆ ಸಾಕು ಎಲ್ಲಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಅಲ್ಲಲ್ಲಿ ಜಲ ಸಂರಕ್ಷಣೆಯ ಮಂತ್ರಗಳು, ತಂತ್ರಗಳು, ಬೋಧನೆಗಳು, ಉಪನ್ಯಾಸಗಳು ತೆರೆದುಕೊಳ್ಳುತ್ತವೆ. ಆದರೆ ಅನುಸರಿಸುವ ಮನಸುಗಳು ಮಾತ್ರ ಅರಳುವುದೇ ಇಲ್ಲ. ಏಕೆಂದರೆ ನಮಗಿನ್ನೂ ಜಲ ಸಮಸ್ಯೆ ತಟ್ಟಿಲ್ಲ. ಯಾರು ಹೇಗಿದ್ದರೇನು? ಏನು ಮಾಡಿದರೇನು? ಪ್ರತಿನಿತ್ಯವೂ ನಮ್ಮ ಮನೆಯ ನಳ ಮಾತ್ರ ಹರಿಯುತ್ತಿರಲಿ ಎಂಬ ಧೋರಣೆಯುಳ್ಳವರು ನಾವು.

ಡಿಸೆಂಬರ್ ತಿಂಗಳ ನಂತರ ಅಲ್ಲಲ್ಲಿ ಜಾತ್ರೆಗಳು ಪ್ರಾರಂಭವಾಗುತ್ತವೆ. ನಮ್ಮ ಸಾಂಸ್ಕøತಿಕತೆ ಮತ್ತು ಆಧ್ಯಾತ್ಮಿಕತೆಯ ಪ್ರತಿಬಿಂಬವಾದ ಜಾತ್ರೆಗಳು ಬದುಕಿಗೆ ಒಂದಿಷ್ಟು ಹೊಸ ಹುರುಪು, ಹುಮ್ಮಸ್ಸು ನೀಡುತ್ತವೆ. ಜಾತ್ರೆ ಎಂದರೆ ಸಾಮಾನ್ಯವಾಗಿ ಹೆಚ್ಚು ಜನ ಒಂದೆಡೆ ಸೇರಿ ನಿರ್ಧಿಷ್ಟ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾರೆ. ಅನೇಕ ರೀತಿಯ ಜಾತ್ರೆಗಳು ನಮ್ಮಲ್ಲಿ

ಚಾಲ್ತಿಯಲ್ಲಿವೆ. ಧಾರ್ಮಿಕ ಜಾತ್ರೆಗಳು, ನುಡಿ ಜಾತ್ರೆಗಳು, ಸಾಂಸ್ಕøತಿಕ ಜಾತ್ರೆಗಳು, ಸಿನಿಮಾ ಜಾತ್ರೆಗಳು, ಹೀಗೆ ಈ ಪಟ್ಟಿ ಬೆಳೆಯುತ್ತದೆ. ಇವುಗಳ ಜೊತೆಗೆ ಜ್ಞಾನ ಜಾತ್ರೆ ಮತ್ತು ಅರಿವಿನ ಜಾತ್ರೆಗಳು ಬಹುಮುಖ್ಯ ಸ್ಥಾನ ಪಡೆಯುತ್ತವೆ.

ನಮ್ಮ ಜ್ಞಾನ ದಾಹವನ್ನು ತಣಿಸುವ ಜಾತ್ರೆಗಳು ಜ್ಞಾನ ಜಾತ್ರೆಗಳಾದರೆ, ಭವಿಷ್ಯದ ಕುರಿತ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ಜಾತ್ರೆಗಳು ಹೆಚ್ಚಾಗಬೇಕಿದೆ. ಪ್ರಸ್ತುತ ನಮ್ಮೆಲ್ಲರಿಗೂ ಜಲ ಜಾತ್ರೆಯ ಬಗ್ಗೆ ಅರಿವು ಮೂಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ನಡೆಯುವ ಜಲ ಸಂರಕ್ಷಣೆಯ ತಂತ್ರಗಳನ್ನು ನಾವು ಅರಿಯುವ ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಲ ಪಾತ್ರೆಯನ್ನು ತುಂಬಿಸುವ ಕಾರ್ಯಕ್ಕೆ ಸನ್ನದ್ಧರಾಗಬೇಕಿದೆ. ಅಂತರ್ಜಲವನ್ನು ಭರ್ತಿ ಮಾಡುವ ಜಾತ್ರೆ ನಡೆಯಬೇಕಿದೆ. ಪ್ರತಿವರ್ಷ ಮಳೆಗಾಲದಲ್ಲಿ ವ್ಯರ್ತವಾಗಿ ಹರಿದು ಸಮುದ್ರ ಸೇರುವ ನೀರನ್ನು ಅಲ್ಲಲ್ಲಿ ಅಡ್ಡಗಟ್ಟಿ ನಿಲ್ಲಿಸಿ, ಅದನ್ನು ಅಲ್ಲಿಯೇ ಇಂಗಿಸುವ ಕೆಲಸಗಳಾಗಬೇಕಿದೆ. ಅದಕ್ಕೆ ಜನ ಜಾಗೃತಿಗೊಳ್ಳಬೇಕಿದೆ. ಇಂತಹ ಜನಜಾಗೃತಿಗಾಗಿ ಜಾತ್ರೆಯನ್ನು ನಡೆಸುವ ಅಗತ್ಯವಿದೆ. ಇಂತಹ ಜಾತ್ರೆಯ ಮೂಲಕ ಜಲದರಿವು ಮೂಡಬೇಕಿದೆ. ಬನ್ನಿ ಎಲ್ಲರೂ ಸೇರಿ ಜಲ ಜಾತ್ರೆಗೆ ಯೋಜನೆ ಮಾಡೋಣ.

ಆರ್.ಬಿ.ಗುರುಬಸವರಾಜ ಅವರ ‘ವಿಜ್ಞಾನ ಲೋಕ’ ಹಿಂದಿನ ಸಂಚಿಕೆಗಳು :


  • ಆರ್.ಬಿ.ಗುರುಬಸವರಾಜ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW