ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)

ನಗು ಆರೋಗ್ಯಕರ ಜೀವನಶೈಲಿಗೆ ಅತ್ಯವಶ್ಯಕ. ಹಾಗಂತ ಸುಮ್ಮಸುಮ್ಮನೆ ನಗಲಾರೆವು. ಏನೇಯಾದರು ಹೃದಯದ ಆಳದಿಂದ ಅಲೆಯುಕ್ಕಿ ಬಂದಂತೆ ನಗಲು ಮನಸ್ಸೂ ಮಗುವಿನಂತೆ ಸ್ವಚ್ಛವಾಗಿರಬೇಕು. ನಗುವಿನ ಮಹತ್ವದ ಕುರಿತು ಅಂಕಣಕಾರ್ತಿ ಶಿವದೇವಿ ಅವನೀಶಚಂದ್ರ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಗುವುದು ಸುಲಭವೇ

“ಅತ್ತರೆ ಅಳು ಚಂದ ನಕ್ಕರೆ ನಗುಚಂದ
ನುಡಿದರೆ ನುಡಿ ಬಹು ಚೆಂದ
ಮುನಿದರೆ ಮುನಿಸಂದ ಒಲಿದರೆ ಒಲವಂದ
ಬಿಸವಂದವೀ ಕಂದನಂದ”
*

ಕವಿ ಎಸ್.ವಿ.ಪರಮೇಶ್ವರ ಭಟ್ಟರ ಈ ಕವಿತೆಯಲ್ಲಿ, ಕಂದನ ನಗು ಅಳುಗಳ ಚೆಲುವನ್ನು ಎಷ್ಟು ಹಾರ್ದಿಕವಾಗಿ ವರ್ಣಿಸಿದ್ದಾರೆ ನೋಡಿ. ಇಲ್ಲಿ ನಗು ಅಳು ಮುನಿಸು ಎಲ್ಲವೂ ಸೊಗಸೇ..’ತೊದಲಿನಲಿ ಹರಿವುದು ಜೇನಹೊಳೆ’ಎಂಬಂತೆ…ನುಡಿಯೋ..ಕೇಳಿದಷ್ಟು ಇಂಪು… ನಗುವು ಅಳುವೂ ಎಲ್ಲವೂ ಮಾನ್ಯವೇ… ಆದರೆ ಹೀಗೆ‌ ಸಾರ್ವಕಾಲಿಕ ಖುಷಿಯನ್ನು ಬೆಳೆದವರಿಂದ ನಿರೀಕ್ಷಿಸಲಾದೀತೇ….ನಿಮಿಷಕ್ಕೊಂದು ಮಗ್ಗಲು ಬದಲಾಯಿಸುವ ಈ ಪ್ರೀತಿಯೇ ಖುಷಿಯಾಗಿ ವೃದ್ಧಿಸಿ ಯಾವುದೋ ಕಟ್ಟುಪಾಡುಗಳ ಒಳಗೆ ಸಿಲುಕಿ ಕ್ರಮೇಣ‌ ಅದರ ಸೊಗಸನ್ನು,ಮಾಧುರ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದಲ್ಲ.


*
ನಗು…. ಪ್ರತಿ ಮನುಜನ ಮನಸ್ಸಿಗೆ ಸಂಜೀವಿನಿ. ಅದಕ್ಕೇ ನಗುವುದು ಸಹಜವಾದ ಧರ್ಮ.ಇದರ ಪ್ರಯೋಜನಗಳನ್ನು ಪಟ್ಟಿ ಮಾಡಿದರೆ ಎಂತಹ ಸೋಜಿಗಪೂರ್ಣ ಮಾಹಿತಿ ದೊರೆಯುತ್ತದೆ ನೋಡಿ…..
*
ಪರಿಚಿತರೇ ಆದವರ ಮುಖದಲ್ಲಿ ಫಕ್ಕನೆ ಸುಳಿದು ಬಿಡುವ ನಗು, ಬಂದು… ಹಾಗೆಯೇ ತೆರಳಿಬಿಡುವಂತಹುದಲ್ಲ. ಅದರ ಉದ್ದೇಶ ಮಹತ್ತರವಾದುದು.ಯಾರೋ ನಿಮ್ಮನ್ನು ನೋಡಿ ಮುಕ್ತವಾಗಿ ನಕ್ಕರೆಂದರೆ….ಅದು ಅವರ ಸ್ನೇಹದ ಸಂಸ್ಕಾರಕ್ಕೆ ದ್ಯೋತಕವಾಗಿರಬಹುದು ಅಥವಾ ‘ನೀವು ನನಗೆ ಪರಿಚಿತರು’ ಎಂಬ ಸುಳಿವನ್ನೂ ನೀಡಬಹುದು. ಸ್ನೇಹದ ನೈದಿಲೆಯನ್ನು ಅರಳಿಸಬಲ್ಲ ಈ ಚಂದ್ರನಂತಹ ಮೃದುಹಾಸ ಹೃದಯವನ್ನೂ ವಿಕಸಿತಗೊಳಿಸುವುದಂತೂ ಸುಳ್ಳಲ್ಲ. ತಕ್ಷಣಕ್ಕೆ ಪ್ರತಿಯಾಗಿ ನಮ್ಮಿಂದ ನಗುವಿನ ವಿನಿಮಯವಾಗದಿದ್ದರೂ ಅವರಾರು ಎಂಬ ಪರಿಶೀಲನೆಗಂತೂ ಮನಸ್ಸು ತುಡಿಯುವುದು ನಿಜವೇ….ದೇವರಂತಹ ಮನಸ್ಸಿನ ಮಗು ಫಕ್ಕನೆ ನಕ್ಕುಬಿಡುವುದಕ್ಕೆ ಉದ್ದೇಶವೇ ಬೇಕಿಲ್ಲ. ಆದರೆ ಅದು ಉಂಟುಮಾಡುವ ಸಂವಹನ ಮಾತ್ರ ಮರೆಯಲಾರದಂತಹುದು. ಅದಕ್ಕೇ ಬೇಂದ್ರೆಯವರು ತಮ್ಮ ವಾತ್ಸಲ್ಯಗೀತದಲ್ಲಿ,

‘ಮಕ್ಕಳನ್ನು ಪ್ರೀತಿಸಿದ ಹಾಗೆ ಒಂದು ಗಿಡವನ್ನೋ
ಒಂದು ನವಿಲನ್ನೋ ಪ್ರೀತಿಸುವುದು ಕಷ್ಟ’

ಎನ್ನುತ್ತಾರೆ. ಅಲೌಕಿಕತೆಯ ಪ್ರತಿರೂಪ ದಂತಿರುವ ಮಗು,ಇಡೀ ಜಗತ್ತಿಗೆ ಮಾತ್ರವಲ್ಲ…ಹೆತ್ತ ತಾಯಿಗೂ ಒಂದು ಸಾರ್ವಕಾಲಿಕ ಬೆರಗು ಹಾಗೂ ಬೆಡಗಾಗಿ ಉಳಿಯುವುದು ಈ ಲೋಕ ಕಂಡ ಒಂದು ಅಚ್ಚರಿಯೇ ಸರಿ.

‘ಆಹಾ..! ನಿನ್ನ ಮೀಸಲು ಮುರಿಯದ ನಗೆಯೆ
ಸೂಸಲವಾಗಿಹ ನಗೆಯೇ!
ಅಂತರಗಂಗೆಯರಿಯದ ಗಂಗೆ
ನಿನ್ನ ನಗೆ…’

ಎಂದು ಪ್ರಾರಂಭವಾಗುವ ಬೇಂದ್ರೆಯವರ ವಚನವೊಂದು ಮಗುವಿನ ನಗೆಯ ವಿವಿಧ ರೂಪಗಳನ್ನು ಪ್ರಕೃತಿಯ ಸಾದೃಶ್ಯ ಗಳೊಂದಿಗೆ ಬಣ್ಣಿಸುತ್ತದೆ. ಕವನದ ಈ ಸಾಲುಗಳ ರಮ್ಯತೆ ಎಷ್ಟು ಚೆನ್ನಾಗಿ ಅಂತರಂಗಕ್ಕಿಳಿಯುತ್ತದೆ ನೋಡಿ. ಪೂರಕವಾಗಿ ನಮ್ಮವಿಶ್ವಮಾನವ ಕವಿಯ ಹೃದಯ ಕಂಡು, ಸವಿದ ಬೆರಗುವಟ್ಟ,

‘ಕಂದನ ತೊದಲ್ನುಡಿಯ ಮೀರಿದ ಸಂಗೀತವಿಹುದೇ ಲೋಕದೊಳ್….’

ಈ ಸಾಲಿನ ಸ್ವಾರಸ್ಯವನ್ನು ನಾವೆಲ್ಲ ಸವಿದವರೇ ಅಲ್ಲವೇ…? ಈ ಸಂದರ್ಭದಲ್ಲಿ ಕವಿ ಕುವೆಂಪುರವರು ಪ್ರಕೃತಿಯಲ್ಲಿ ಅನುಭೂತಿಸಿದ ಈ ಕೆಲವು ಸಾಲುಗಳನ್ನು ಮತ್ತೆ ಇಲ್ಲಿ ಪರಿಶೀಲನೆಗಾಗಿ ನೋಡೋಣ…

‘ಎಲೆಯ ಹಸಿರು ತೊಟ್ಟಿಲಲ್ಲಿ
ಹನಿಯ ಹಸುಳೆ ನಗುತಿದೆ’

ಇಲ್ಲಿಯೂ ಪ್ರಕೃತಿಯನ್ನು ಬೆಡಗುಗೊಳಿಸುವ ಹನಿಯ ಸಂಪೂರ್ಣ ಲಾಸ್ಯಕ್ಕೆ…ಮಗುವಿನ ನಗುವಿನದೇ ಸಾದೃಶ್ಯ. ಇಂತಹ,’ ಜೀವವನ್ನು ಹಗುರಾಗಿಸುವ’ ನಗುವನ್ನು ನಗುವುದು, ನಗಿಸುವುದು ಅಷ್ಟು ಸುಲಭವೇ.

*
ಮಗುವಿನ ನಗುವನ್ನು ಒತ್ತಟ್ಟಿಗಿರಿಸಿ…ಈಗ ತಾಯಿ ಅಂಬಿಕೆಯ ಮಹಾಭಕ್ತರಾದ ದ.ರಾ.ಬೇಂದ್ರೆಯವರು ವರ್ಣಿಸಿದ ಮಾತೆಯ ವಾತ್ಸಲ್ಯದ ನಗುವಿನ ಪರಿಣಾಮವನ್ನು ಅವಲೋಕಿಸೋಣ. ಅರವಿಂದಾಶ್ರಮದ ಶ್ರೀಮಾತೆಯವರ ಅತ್ಯುನ್ನತ ವಾತ್ಸಲ್ಯ ಧಾರೆಯಲ್ಲಿ ಮಿಂದು ಬೇಂದ್ರೆ ಜಗತ್ತಿನ ಎಲ್ಲ ಮಾತೆಯರನ್ನೂ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಪ್ರತ್ಯಕ್ಷ ಕಂಡು ಮಾರು ಹೋದ ಬೇಂದ್ರೆಯವರಿಗೆ ಮಾತೃವಾತ್ಸಲ್ಯದ ಬ್ರಹ್ಮಾಂಡ ರೂಪ ಗೋಚರಿಸುತ್ತದೆ. ಇಲ್ಲಿ ಅವರಿಗೆ ತಾಯಿಯ ವಾತ್ಸಲ್ಯ ಭರಿತ ನಗು ಹೇಗೆ ಕಂಡಿದೆ ನೋಡೋಣ…

‘ತಾಯಿ ನಗೆ’

ಕವನದ ಸಾಲುಗಳಿವು:

‘ನಿನ್ನ ನಗೆಯ ಬೆಳಕಿನಲ್ಲಿ ಜಗಕೆ ಬೇರೆ ಬಣ್ಣವು
ಬರಲು, ನನ್ನ ಜೀವನಯನ ಬೇರೆ ಉಣಿಸನುಣ್ಣವು’

ಎಂತಹ ಅತ್ಯುತ್ಕೃಷ್ಟ ಸಾಲುಗಳಲ್ಲಿ ತಾಯಿಯ ನಗೆಯ ಮಹಿಮೆ ವರ್ಣಿತವಾಗಿದೆ ನೋಡಿ….!
*
ಈಗ ಪತಿ ಪತ್ನಿಯರ ನಡುವೆ ಇರಲೇಬೇಕಾದ ನಗುವಿನ ಅನುಬಂಧವನ್ನು ಪರಿಶೀಲಿಸೋಣ. ವರಕವಿ ಬೇಂದ್ರೆಯವರ ಜನಪ್ರಿಯ ಸಾಲುಗಳನ್ನು ಈ ಉದ್ದೇಶಕ್ಕಾಗಿ ಪ್ರಸ್ತಾಪಿಸದೆ ಹೋದರೆ ಅದು ಅರಕೆಯೇ ಆದೀತೇನೋ…

‘ನನ ಕೈಯ ಹಿಡಿದಾಕೆ ಅಳು ನುಂಗಿ ನಗುವೊಮ್ಮೆ ನಾನೂನೂ ನಕ್ಕೇನ
ಇಲ್ಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ ಹುದುಲಾಗ ಸಿಕ್ಕೇನ’

ಪತಿ… ನಗುನಗುತ್ತಾ ಸಂಸಾರದ ರಥವನ್ನು ಎಳೆಯಲು ಆತನಿಗೆ ಆತ್ಮಬಲ ನೀಡುವುದು,’ ಹೆಂಡತಿಯ ಅಳು ನುಂಗಿ ನಗುವ ಸಹಿಷ್ಣುತೆ’…ಅದೇ ಮುಳುಗುವವನ ಬೆನ್ನಿಗೆ ಬೆಂಡಾಗಿ , ಸಾಗರದಲ್ಲಿ ನಡುನೀರಿನಲ್ಲಿ ಮುಳುಗುವುದರಿಂದ ಅವನನ್ನು ಉದ್ಧರಿಸುತ್ತಿದೆ. ಇದೇ ಕಾರಣಕ್ಕಾಗಿ….’ಹೆಣ್ಣಿನ ಒಲವನ್ನು ಅರಿಯದ ಗಂಡಿಗೆ ಜಯವಿಲ್ಲ’.. ಆದರೆ ಈ ಒಲವಿಗೆ ಇನ್ನೊಂದು ಮುಖವೂ ಇದೆಯಲ್ಲ…

“ಒಲುಮೆಯ ನೆಚ್ಚೊಂದು
ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು
ಒಳಜೀವ ಒಲುಮೀಗೆ ಹ್ಯಾಂಗೋ ಬಾಳೀತು”

ಹಾಗಂತ ನಗುವೊಂದೇ ಈ ಬಾಳ ಮುಖವಲ್ಲ. ಒಂದು ನಾಣ್ಯಕ್ಕೆ ಎರಡು ಮುಖಗಳಿದ್ದಂತೆ, ಹಗಲಿಗೆ ಇರುಳಿದ್ದಂತೆ ಇದಕ್ಕೂ ಇನ್ನೊಂದು ಮುಖ ಅನಿವಾರ್ಯವೆನ್ನುತ್ತದೆ ಕವಿತೆಯ ಆಶಯ…!

ಇಲ್ಲಿ ಒಲುಮೆ ಮೆಚ್ಚೂ ಹೌದು…ಅಂದರೆ ಬಾಳಿಗೆ ಭರವಸೆಯೂ ಹೌದು..ದಹಿಸುವ ಕಿಚ್ಚೂ ಹೌದು. ಬೇಂದ್ರೆಯವರ, ‘ಒಲುಮೆಯ ಕಿಚ್ಚು’ ಕವಿತೆಯಲ್ಲಿ ಒಲುಮೆ ಆಪ್ಯಾಯಮಾನವಾದ ಒಂದು ನಂಬಿಕೆಯಾಗಿ ಬಂದಾಗಲೂ ಅದಕ್ಕೆ ಯಾತನೆಯ ಇನ್ನೊಂದು ಸ್ವರೂಪವಿರುವುದನ್ನು ಅನುಭವಿಸಿದವರೇ ಬಲ್ಲರು‌.ಇಂತಹ ಸೂಕ್ಷ್ಮ ಒಳನೋಟಗಳಿಗೆ ಒಲವೇ ಆಹಾರವಾಗಿ ಬಿಡುವುದು ಬದುಕಿನ ಒಂದು ವಿಡಂಬನೆಯೇ ಅಲ್ಲವೇ….?

“ಹಳ್ಳಾದ ದಂಡ್ಯಾಗ ಮೊದಲೀಗೆ ಕಂಡಾಗ ಏಸೊಂದು ನಗೆಯಿತ್ತ
ಏನೊಂದು ನಗೆಯಿತ್ತು ಎಷ್ಟೊಂದು ನಗೆ ಇತ್ತು
ಏರೀಕಿ ನಗೆಯಿತ್ತ
ನಕ್ಕೊಮ್ಮೆ ಹೇಳ ಚೆನ್ನಿ
ಆ ನಗೆ ಇತ್ತಿತ್ತ ಹೋಗೇತಿ ಎತ್ತೆತ್ತ …?
ಎಂತಹ ಮನೋಜ್ಞ ಬೇಡಿಕೆ..!

ಇಂದು ಮತ್ತೆ ಅದೇ ಪ್ರಫುಲ್ಲ ನಗುವ ಕಾಣುವಾಸೆ…ಅಂದಿನಂತಹ‌ ಮುಕ್ತ ನಗು ಅವಳಿಂದ ಮತ್ತೆ ಹೊಮ್ಮಲು ಸಾಧ್ಯವಿಲ್ಲ. ಆದರೆ ಆ ನಗೆಯ ನೆನಪಿನ ಕಾಂತಿಯನ್ನು ಮತ್ತೊಮ್ಮೆ ಎದೆಗೆ ತುಂಬಿಸಿಕೊಳ್ಳಲು ಕವಿ, ‘ನಕ್ಕೊಮ್ಮೆ ಹೇಳ ಚೆನ್ನಿ’ ಎಂದು ವಿನಂತಿಸುತ್ತಾ,ಆನೆಗೆ ಇರುತ್ತಿತ್ತು ಹೋಗೇತಿ ಎತ್ತೆತ್ತ ಎಂದು ಪೇಚಾಡಿಕೊಳ್ಳುತ್ತಾರೆ.ನಗೆಯ ನೆನಪೇ ಮಧುರ..ಅದು ಹೃದಯಕ್ಕೆ ಎರೆಯುವ ಖುಷಿಯ ಭಾವ ವರ್ಣನಾತೀತ.

*
ನಗು ಆರೋಗ್ಯಕರ ಜೀವನಶೈಲಿಗೆ ಅತ್ಯವಶ್ಯಕ. ಹಾಗಂತ ಸುಮ್ಮಸುಮ್ಮನೆ ನಗಲಾರೆವು.ಈ ದಿಸೆಯಲ್ಲಿ ಇಂದು ಹೇರಳ ಸಂಖ್ಯೆಯಲ್ಲಿ ಹುಟ್ಟಿಕೊಂಡಿರುವ ನಗೆಯ ಕ್ಲಬ್ ಗಳು ತಮ್ಮದೇ ದೇಣಿಗೆ ನೀಡುತ್ತಿವೆ. ಹಲವು ಆರೋಗ್ಯಕರ ಕಾಮೆಡಿ ಕಾರ್ಯಕ್ರಮಗಳೂ ನಗಿಸುವುದರಲ್ಲಿ ನೆರವಾಗುತ್ತಿವೆ. ಏನೇ ಆದರೂ ಹೃದಯದ ಆಳದಿಂದ ಅಲೆಯುಕ್ಕಿ ಬಂದಂತೆ ನಗಲು ಮನಸ್ಸೂ ಮಗುವಿನಂತೆ ಸ್ವಚ್ಛವಾಗಿರ ಬೇಕು. ಜೀವನ ಪ್ರೀತಿ ಇದಕ್ಕೆ ಒಂದು ಸಾಧನ….

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕವಿಯತ್ರಿ, ಕೊಡಗು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW