ಏನೋ ಒಂದು ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿ ಲೇಖನಿಗಿಳಿಸಬೇಕೆಂದುಕೊಂಡಾಗ ಧುತ್ತೆಂದು ಮನೆಗೆ ಯಾರಾದರೂ ಬಂದರೆ ಬರವಣಿಗೆ ಅಲ್ಲಿಗೆ ನನ್ನ ಅಮೂಲ್ಯ ಅರ್ಧ ದಿನವನ್ನು ನುಂಗಿ ನೊಣೆಯಿತು. ಅಂಕಣಕಾರ್ತಿ ಶಿವದೇವಿ ಅವನೀಶಚಂದ್ರ ಅವರ ಅಂಕಣದಲ್ಲಿ ‘ಹೀಗಿರಲು ಸಾಧ್ಯವೇ… ಮತ್ತೊಬ್ಬರಿಗೂ ನಾವು ವಿಘ್ನಕಾರಿಗಳಲ್ಲದೆ..?’ ತಪ್ಪದೆ ಮುಂದೆ ಓದಿ…
ನಮ್ಮ ಮನೆಯ ಹೊರ ಆವರಣಲ್ಲಿರುವ ಕಾರ್ಮಿಕರ ಮನೆಗೆ ಯಾರೋ ನೆಂಟರು ಬಂದಿದ್ದಾರೆಂದು ತಿಳಿಯಿತು. ಅಷ್ಟೊಂದು ಗುಲ್ಲು, ನಮ್ಮ ಮನೆಯೊಳಗೂ ಸ್ಪಷ್ಟವಾಗಿ ಕೇಳಿಸುವಷ್ಟು ಗಟ್ಟಿಯಾದ ಮಾತು. ಬಿಸಿಯೇರಿದ ಉಲ್ಲಾಸ. ಕಾವೇರಿದ ಚರ್ಚೆ. ನಮಗೆ ಮನೆಯೊಳಗಿನ ಶಾಂತಿ ಕದಡಿರುವ ಬಗ್ಗೆ ಚಡಪಡಿಕೆ.
*
ಮನೆಯೊಳಗೆ ನಡೆಯುತ್ತಿದ್ದ ಎಲ್ಲಾ ವಿದ್ಯಮಾನಗಳೂ ಅಂಗಳದಲ್ಲೇ ನಡೆಯುತ್ತಿವೆ. ಅವರ ಮನೆಗಳ ಎಲ್ಲಾ ಪ್ರಪಂಚವನ್ನೂ ಇಲ್ಲಿಗೇ ತಂದಿಳಿಸಿದ್ದಾರೆ. ಈಗ ನಮ್ಮ ಮನೆಯಂಗಳ ನಿಸ್ಸಂಕೋಚವಾಗಿ ಅವರದೇ. ಅವರಿಗಿಂತ ಹೆಚ್ಚು ಪ್ರಮಾಣದಲ್ಲಿ ಬಾಡಿಗೆಯನ್ನು ಪಾವತಿಸುತ್ತಿದ್ದರು. ಇದು ನನ್ನ ನಗರ ಜೀವನದ ಕತೆ.
*
ಒಂದು ಸಮಾರಂಭ…! ಮೌಲ್ಯಯುತ ಸಾಹಿತಿಗಳು ನೆರೆದಿದ್ದರು. ಒಳ್ಳೆಯ ವಿಚಾರ ಸಂಕಿರಣವಿತ್ತು. ಧ್ಯಾನಸ್ಥಳಾಗಿ ಸವಿಯಬೇಕೆಂದಿದ್ದೆ. ಆದರೆ ಯಾರೋ ಅಪರೂಪಕ್ಕೆ ಬಂದು ಸೇರಿದ ಯಾವುದೋ ಮಂದಿಗೆ ತಮಗೆ ಆಪ್ತರೆನಿಸಿದವರ ಜೊತೆ ಮುಕ್ತವಾಗಿ ಹರಟಲು ಅದು ಒಂದು ಅವಕಾಶವನ್ನು ಕಲ್ಪಿಸಿತ್ತು. ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಿಂತ ಹರಟುವುದರಲ್ಲೇ ಆಸಕ್ತಿ ಹೆಚ್ಚಾಗಿತ್ತು. ಅಷ್ಟು ದೂರದಿಂದ ಬರುವ ಬಹಳ ನಿರೀಕ್ಷೆಯಿಂದ ಬಂದ ವಿಚಾರಗೋಷ್ಠಿಯ ಲಾಭವನ್ನು ಆಸಕ್ತರು ಪಡೆದುಕೊಳ್ಳಲು ಆಗಲೇ ಇಲ್ಲ.
*
ಏನೋ ಒಂದು ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿ ಲೇಖನಿಗಿಳಿಸಬೇಕೆಂದಿದ್ದೆ. ಆದರೆ ಧುತ್ತೆಂದು ಮನೆಗೆ ಬಂದ ಅವರು, ‘ಅಕ್ಕಾ…ಏಕೋ ಮನೆಯಲ್ಲಿ ಬೋರಾಯಿತು. ಅದಕ್ಕೇ
ನಿಮ್ಮನ್ನು ಸುಮ್ಮನೆ ಮಾತನಾಡಿಸಿಕೊಂಡು ಹೋಗಲೆಂದು ಬಂದೆ’. ಮೊದಲೇ ಬಂಧುಗಳು, ಅವರಿಗೆ ಕಾಫಿ ತಿಂಡಿ ಉಪಚಾರ ಬೇಕಿಲ್ಲದ ಮಾತಿನ ಶಿಷ್ಟಾಚಾರ. ಕೊನೆಗೆ ‘ಊಟ ಮಾಡಿ ಹೋಗಿ’ ಎಂಬ ಒತ್ತಾಯ. ಅವರು ಬಂದ ‘ಏನೂ ಉದ್ದೇಶವಿಲ್ಲದ’ ‘ಸುಮ್ಮನೆ ,’ ನನ್ನ ಅಮೂಲ್ಯ ಅರ್ಧದಿನವನ್ನು ನುಂಗಿ ನೊಣೆಯಿತು.ಹಾಗೆಯೇ ಆಗ ತಾನೆ ಮಸ್ತಿಷ್ಕದಲ್ಲಿ ಮೂಡಿದ್ದ ವಿಚಾರಗಳ ಲಹರಿಯನ್ನೂ ಕಬಳಿಸಿ.
*
ಬಸ್ಸಿನಲ್ಲಿ ಚರವಾಣಿ ಬಳಕೆಗೆ ನಿಷಿದ್ಧವಿದ್ದರೂ…ಮಾತಿನ ಗೀಳು ಹಿಡಿದವರು ನಮ್ಮ ಪ್ರಯಾಣದ ಆನಂದಕ್ಕೆ ಹೇಗೆ ಎರವಾಗಿ ಬಿಡುತ್ತಾರೆ. ಈ ಮಂದಿಗೆ ‘ಶಿಷ್ಟಾಚಾರ ಎಂಬ ಅವಶ್ಯಕ ತಿಳಿವಳಿಕೆ ಮೂಡುವುದಾದರೂ ಎಂದಿಗೆ ? ‘ ಎಂಬುದೇ ಪರಿಹರಿಸಲಾಗದ ತೊಡಕು. ನಮ್ಮ ಆಸಕ್ತಿಯ ಅಧ್ಯಯನವಾಗಲಿ, ಬರವಣಿಗೆ ಯಾಗಲಿ… ಧ್ಯಾನ,ಮೌನ ಏಕಾಂತಗಳಾಗಲಿ. ನಮ್ಮ ಹವ್ಯಾಸಗಳೆಲ್ಲವೂ ಇಂತಹ ಮನೋಭಾವದವರ ನಿಯಂತ್ರಣಕ್ಕೆ ಸಿಲುಕಿ ಬಿಡುವುದು ಬದುಕಿನ ಒಂದು ವಿಪರ್ಯಾಸವೇ ಸರಿ !
*
ಹೀಗೆಯೇ ಕಾಲ ನಮ್ಮ ಅಮೂಲ್ಯವಾದುದನ್ನೆಲ್ಲಾ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಹೋಗುತ್ತದೆ. ನಮಗರಿವಿಲ್ಲದೆ ನಾವು ನಮ್ಮ ನವಿರುತನವನ್ನು ನಮ್ಮ ಬಾಲ್ಯ ಯೌವನಗಳನ್ನು ಇನ್ನೂ…ಇನ್ನೂ..ಸಿಗದೇ ಹೋಗಬಹುದಾದ ಕನಸುಗಳನ್ನು, ಧ್ಯೇಯಗಳನ್ನೆಲ್ಲ….ಯಾರದೋ ಮಡಿಲಿಗೆ ಸುರಿದು ಬಿಡುವ ದುರಂತವೂ ನಡೆಯುತ್ತಲೇ ಇರುತ್ತದೆ. ನಡುವೆ ನಿರ್ವಹಿಸಲೇಬೇಕಾದ ಕರ್ತವ್ಯಗಳ ಕರೆ ನಮ್ಮನ್ನು ಬದುಕಿನ ಸುಳಿಯಲ್ಲಿ ಗಿರಗಿರನೆ ಸುತ್ತಿಸುತ್ತಲೇ ಇರುತ್ತದೆ. ವಿಧಿ ನಮ್ಮ ಬೆನ್ನ ಹಿಂದೆ ನಮ್ಮ ಮರಣ ಶಾಸನವನ್ನು ಬರೆಯುತ್ತಾ ಹೋಗುತ್ತದೆ.
*
ಹೌದು….ನಾವು ಏನನ್ನೋ ಕೈಗೆಟುಕಿಸಿಕೊಳ್ಳುವ ಆತುರದಲ್ಲಿ ಯಾವುದೋ ಒಂದು ವಿಷಯಕ್ಕೆ ಪ್ರಾಮುಖ್ಯತೆ ನೀಡಿ ಉಳಿದದ್ದೆಲ್ಲವನ್ನು ಗೌಣವಾಗಿಸಿ ಬಿಡುತ್ತೇವೆ. ಕೇವಲ ಹಣ ಸಂಪಾದನೆಯೋ, ಅಧಿಕಾರ ಅಂತಸ್ತುಗಳ ಪ್ರತಿಷ್ಠೆಯೋ ಅಥವಾ ಇನ್ನಾವುದೋ ತನ್ನದೇ ಸ್ವಾರ್ಥದ ಪರಿಧಿಯಲ್ಲಿ ಸುತ್ತುತ್ತಾ ,’ಎತ್ತು ಗಾಣವನು ಸುತ್ತಿ ಬಂದಂತೆ’ ಏಕತಾನತೆಯನ್ನು ಈ ಅಮೂಲ್ಯ ಅವಕಾಶಗಳ ಖಜಾನೆಗಳನ್ನೇ ಹೊಂದಿರುವ ಬದುಕಿನಲ್ಲಿ ವಿಮುಖತೆಯನ್ನು ಆರೋಪಿಸಿಕೊಂಡು ಬಿಡುತ್ತೇವೆ.
ಈ ಸುಂದರವಾದ ಪಾಠಶಾಲೆಯಾದ ನಿತ್ಯ ನೂತನೆ ಹಾಗೂ ಚೈತನ್ಯದಾಯಿನಿ ಪ್ರಕೃತಿಯ ಸಖ್ಯವನ್ನು ಕಡೆಗಣಿಸಿ ನಾವು ಜೀವನಾನುಭವವನ್ನು ಮೊಗೆದುಕೊಳ್ಳಲು ಸಾಧ್ಯವೇ….?
ಮೊಳೆವ ಗಿಡದ ಅಚ್ಚರಿಗೆ ಕಣ್ತೆರೆಯಬೇಕು. ಮೊಗ್ಗಿನ ಮಾರ್ದವತೆಗೆ ಎದೆ ತೆರೆಯಬೇಕು. ಹೂವಿನ ಚೆಲುವಿಕೆಗೆ ಮುದಗೊಳ್ಳಬೇಕು.. ಅದರ ಕಂಪಿಗೆ ಮನ ತೆರೆಯಬೇಕು.. ಬಳ್ಳಿಯೊಲೆತದ ವಯ್ಯಾರಕೆ ತಲೆದೂಗಬೇಕು. ಹನಿ ಮಳೆಯ ಕುಳಿರು,ಜಡಿಮಳೆಯ ರಭಸ,ಹಕ್ಕಿಪಕ್ಷಿಗಳ ಅಸಹಾಯಕತೆಗೆ ಮಿಡಿಯಬೇಕು. ದುಂಬಿಯ ಝೇಂಕಾರ,ಜೇನ್ನೊಣಗಳ ದಣಿವರಿಯದ ಮಧು ಸಂಗ್ರಹದ ಕಾಯಕ ನಿಷ್ಠೆ ,ಪತಂಗದ ಬೆಡಗಿನ ಬಣ್ಣ ಹಾಗೂ ನರ್ತನವಿಲಾಸವನ್ನು ನಿತ್ಯವೂ ಕಣ್ತುಂಬಿಕೊಂಡು ಹೊಸತಾಗಬೇಕು ಬದುಕು. ಸ್ಪಷ್ಟತೆಯ ಎಲ್ಲವನ್ನೂ ಅಸ್ಪಷ್ಟತೆಯ ತೆರೆಯೊಳಗೆ ಮಸುಕಾಗಿಸಿಬಿಡುವ ನೈಸರ್ಗಿಕತೆ….ಈ..ಮಳೆಯೆಂಬ ಮುಗಿಯದ ಅಚ್ಚರಿ. ಹೀಗೆ ಆಪ್ತತೆಯೂ ನಮಗೆ ವಿಮುಖವಾಗಿ..ಏಕಾಂತದಲ್ಲಿ ಅಯಾಚಿತವಾಗಿ ಕೂಡಿಹಾಕುವ ಆತಂಕಕಾರಿಯಾಗಿಬಿಡುವ ವರ್ಷಾಧಾರೆಯ ಪ್ರಭಾವ.
ಅದೇ ವರ್ಷ ಬಿರುಸಾಗಿ, ರಕ್ತಾಕ್ಷಿಯಾಗಿ, ಪ್ರಳಯ ಭಯಂಕರಿಯಾಗಿ ಬಿಡುವ ರೌದ್ರತೆ. ಕ್ಷಣ ಮಾತ್ರದಲ್ಲಿ ಬದುಕನ್ನು ಮಾತ್ರವಲ್ಲ. ಬದುಕಿನ ಎಲ್ಲ ಆಸರೆಯನ್ನೂ ಹೊತ್ತೊಯ್ದು
ಕುಟುಂಬಗಳನ್ನೇ ಅನಾಥವಾಗಿಸಿ ಬಿಡುವ ಅದರ ನಿಷ್ಠುರ ಪಾಶವೀಯತೆ.ಇನ್ನೂ ಏನೇನೋ ಮಗ್ಗುಲುಗಳನ್ನು ತೆರೆದು ಬಿಡುವ ಈ ಮಳೆ. ಕೊಡುಗೆಯಷ್ಟೇ ನಷ್ಟವನ್ನೂ ಉಂಟುಮಾಡುವ ಪರಿಯನ್ನು ಅರಿಯಲು ತಳಮಟ್ಟದಲ್ಲಿ ನಿಸರ್ಗದೊಂದಿಗೆ ಬೆರೆತು, ಬದುಕನ್ನು ಅನುಭವಿಸಲು ಸಾಧ್ಯವಾದವರಿಗೆ ಮತ್ತು ಆ ತುಡಿತವಿರುವವರಿಗೆ ಮಾತ್ರ ಲಭ್ಯವಾಗುವ ಅನುಭವ ವಿಶೇಷಗಳು. ಕೋಣೆಯೊಳಗೆ ಕುಳಿತು ಚಿತ್ರ ಪಟಗಳಿಂದ ಟಿ.ವಿ ಮಾಧ್ಯಮಗಳಿಂದ ಪತ್ರಿಕಾ ವರದಿಗಳಿಂದ ಸಂಗ್ರಹಿಸುವ ಮಾಹಿತಿಗಳಿಗೆ ಈ ಸಂವೇದನಾಶೀಲತೆಯನ್ನು ನೀಡಲು ಸಾಧ್ಯವೇ?.
*
ನಾವು ಧರೆಯ ಸ್ವರ್ಗದಲ್ಲಿದ್ದೇವೆ. ದೃಷ್ಟಿ, ಶ್ರವಣ, ಘ್ರಾಣ, ಸ್ಪರ್ಶ, ನಾಲಿಗೆ ಎಲ್ಲವೂ ಚುರುಕಾಗಿರುವಾಗಲೇ ಅದನ್ನೆಲ್ಲ ಆಸ್ವಾದಿಸಲು ಸಾಧ್ಯವಾಗುವುದು.ಪ್ರತ್ಯೇಕ ಜೀವಿಗಳಿಗೂ ಅವರದೇ ಆದ ವಿಶಿಷ್ಟಬದುಕಿದೆ.. ಕರ್ತವ್ಯಗಳಿವೆ ಹಾಗೂ ಗುರಿಯೂ ಇದೆ. ದಯವಿಟ್ಟು ನಾವು ಅವರ ಸಮಯವನ್ನೂ ಗೌರವಿಸೋಣ….ಅವರೊಡನೆ ಬೆಳೆಯಬಹುದಾದ ಕಾಲಕ್ಕೆ ಯಾವುದಾದರೊಂದು ಮೌಲ್ಯವನ್ನು ಆರೋಪಿಸೋಣ.
ಇರುವ ಒಂದೇ ಬದುಕನ್ನು ಸುಂದರವಾಗಿಸಿಕೊಳ್ಳಲು ಎಲ್ಲರನ್ನೂ ಪ್ರೀತಿಸುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ… ಬಹುಶಃ ನಮ್ಮೊಂದಿಗೆ ಅವರೂ ‘ಕಂಫರ್ಟ್’
ಆಗಿರಲಿ. ಏಕೆಂದರೆ ಈ ಭೂಮಿಯಾಗಲಿ ಬದುಕಾಗಲಿ ಯಾರ ಪಾಲಿಗೂ ಸ್ಥಿರವಾದ ಹಕ್ಕಾಗಿರುವುದಿಲ್ಲ…ಇದು ಅನೂಚಾನ ಸತ್ಯ ತಾನೆ.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
