ಮಠಾಧೀಶರ ನೂರು ತಲೆಮಾರುಗಳು ಇದ್ದರೂ ಮಸಣದ ಹಾದಿಯ ಪಯಣ ತಪ್ಪಿಸಲಾಗಲಿಲ್ಲ. ಪೂಜೆಗೆ ಸಲ್ಲಬೇಕಾದ ಮಂದಾರ ಪುಷ್ಪಗಳೇ ಬಿದ್ದು ಬಾಡಿವೆ. ಅಂದರೆ ಕ್ಷಯಿಸುವಿಕೆಗೆ ಪಕ್ಕಾಗದವರಿಲ್ಲ. ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರು ‘ಕಾಲ ಮರುಕಳಿಸದು’ ವಿಷಯದ ಕುರಿತು ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ಅರ್ಥಪೂರ್ಣವಾಗಿ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹಾಗೆಯೇ ಮಳೆಯ ಶತಾವತಾರಗಳನ್ನು ಕಣ್ತುಂಬಿಕೊಳ್ಳುತ್ತಾ ಹೊರಗಿನ ಪ್ರಾಂಗಣದಲ್ಲಿ ಕುಳಿತಿದ್ದಳು ಅವನಿ. ಮನಸ್ಸೆಂಬ ಹಕ್ಕಿ ಗಗನಕ್ಕೇರುತ್ತಿತ್ತು. ವಿಷಾದವೆಂಬ ಭಾವ ಆಳಿಕಲ್ಲಿನಂತೆ ಎದೆಗೆ ಅಪ್ಪಳಿಸುತ್ತಿತ್ತು. ಮೆದುಳು ಒತ್ತಡ ತಾಳಲಾರದ ಸ್ಥಿತಿಗೆ ತಲುಪೀತೆಂದು ಹೆದರಿ ಬೇಂದ್ರೆಯವರ ಕೃತಿಯೊಂದನ್ನು ಕೈಗೆತ್ತಿಕೊಂಡು. ಮತ್ತೆ ಅದೇ ಸ್ಥಳದಲ್ಲಿ ಆಸೀನಳಾದಳು.

ಮನಸ್ಸು ಚಿಂತನೆಯ ಮಡುವಲ್ಲಿ ಮತ್ತೆ ಮುಳುಗಿತು. ಇದೇ ಪರಿಸರ ಹಲವು ದಶಕಗಳ ಹಿಂದೆ ತಾನು ಗೆಳತಿಯರೊಂದಿಗೆ ಬಂದಾಗ ಕಂಡು ತಣಿದ, ಮೈಚಾಚಿದ ನಿಸರ್ಗ ಸೌಂದರ್ಯ.
ಆಹಾ… ಆ ಪರ್ವತ ಶ್ರೇಣಿ…! ತೆಕ್ಕೆಬಿದ್ದ ವೃಕ್ಷಸಾಲು, ಅರಳಿ ನಗುವ ಸುಮರಾಜಿ ಹಗುರವಾಗಿ ಗಿರಿನೆತ್ತಿಯ ಸವರುವ ಬಿಳಿಮೋಡಗಳ ಸಾಲುಗಳು.
ಜುಳುಜುಳು ಹರಿವ ನದಿ, ಹಸಿರ ಮಕಮಲ್ಲನ್ನು ಹಾಸಿದಂತಹ ಮೋಹಕ ದಟ್ಟ ಹಸಿರು, ಇಂದ್ರನೀಲಮಣಿಯಂತಿರುವ ಕೆರೆ ತಟಾಕಗಳು ಸ್ವರ್ಗದ ಬಾಗಿಲು ಇಲ್ಲಿಯೇ ತೆರೆದಿತ್ತು. ಇದು ಹೀಗೆಯೇ ಇರಬಹುದೆನ್ನುವ ಕನಸು ‘ಅವನಿ’ಯ ಹೃದಯದಲ್ಲಿತ್ತು. ಆಗ ತುಂಬು ಹರಯದ ಜೀವನೋತ್ಸಾಹ ಅವಳಲ್ಲಿತ್ತು. ಆದರೆ…. ಕಾಲ? ಕಾಲ… ಹೌದು. ಲಯಕರ್ತ ಯಮ ಅವನದೇ ಪಾರುಪತ್ಯ ಅಲ್ಲವೇ ಈ ಸೃಷ್ಟಿಯಲ್ಲಿ..!
ಜೀವತಳೆದ ಕ್ಷಣದಿಂದಲೇ ಎಷ್ಟು ಬೇಗ ವಿಲಯದೆಡೆಗೆ ಸೆಳೆದೊಯ್ದುಬಿಡುತ್ತಾನೆ ‘ಇದು ತನ್ನದೇ ಜನ್ಮಸಿದ್ಧ ಹಕ್ಕು’ ಎಂಬಂತೆ. ಹಗಲನ್ನು ಬೆಂಬಿಡದೆ ಹಿಂಬಾಲಿಸುವ ಇರುಳಿನಂತೆ ಬೆಂಬಿಡದ ಬೇತಾಳವಾಗಿ ಕಾಡಿಬರುವ ನಮ್ಮದೇ ನೆರಳಿನಂತೆ ನೋಡನೋಡುತ್ತಲೇ ಮೊಗ್ಗು ಬಿರಿಯುತ್ತದೆ. ನಗುಬೀರುವ ಹೂವು ಪಕಳೆಗಳನ್ನು ಉದುರಿಸಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತದೆ.
ಮಗು ಬೆಳೆದು ಬಾಲ್ಯಕ್ಕೆ, ಬಾಲ್ಯ ಯೌವನಕ್ಕೆ, ಮತ್ತೆ ನಡುವಯಸ್ಸಿಗೆ, ಅರಿಯದೆಯೇ ಧುತ್ತೆಂದು ಎಗರಿಬಿಡುವ ವೃದ್ಧಾಪ್ಯಕ್ಕೆ, ಸನ್ನದ್ಧರಾಗಿಯೇ ಇರಬೇಕು ಯೋಧರಂತೆ, ಜೀವನದ ಕರ್ತವ್ಯಗಳನ್ನು ನಿರ್ವಹಿಸುವ ಧಾವಂತದಲ್ಲಿ ತಾವೇ ಅಸಹಾಯಕವಾಗಿ ಬಿಡುವ ನಿಲುಗಡೆಯ ತೀರಕ್ಕೆ ಅಂದು ಸುಂದರವಾಗಿ ಕಂಡದ್ದನ್ನೆಲ್ಲ ಸವಿಯಲಾಗಲೇ ಇಲ್ಲ. ಏಕೆಂದರೆ ಕಾಲ ಚಕ್ರದ ಮೇಲೆ ನಾವು ತಿರುಗುತ್ತಿದ್ದೆವಲ್ಲ. ಆ ಆಸೆಯ ನೆನಪೇ ಆಗದಂತೆ. ಕರ್ತವ್ಯದ ಸುಳಿಯಿಂದ ಹೊರಬರಲಾಗದೆ ಯಾವ ಹವ್ಯಾಸಗಳಿಗೂ ಒಂದು ರೂಪವನ್ನೇ ಕೊಡಲಾಗಲಿಲ್ಲ.
*
ಈಗ ಯಾವುದೂ ಸ್ಪಷ್ಟವಿಲ್ಲ. ಕಣ್ಣು ಮಂಜಾಗಿದೆ. ಹಕ್ಕಿಯ ಗಾನ ಕಿವಿದೆರೆಗೆ ತಲುಪದಂತೆ ಕಿವಿ ಮಂದವಾಗಿದೆ. ದೂರದ ಪರ್ವತ ಮಾಲೆಯೇಕೋ ಮತ್ತು ದೂರ ಸರಿದಿದೆ. ದೂರದರ್ಶಕ ಯಂತ್ರವೇ ಬೇಕೇನೋ ಆಸ್ವಾದಿಸಲು.
*
ಎತ್ತಲೋ ಜಾರಿದ ಮನಸ್ಸು ಮತ್ತೆ ತನ್ನ ಅಸ್ತಿತ್ವವನ್ನು ನೆನಪಿಸಿದಾಗ ಬೇಂದ್ರೆಯವರ ಸಾಹಿತ್ಯ ಗ್ರಂಥ ತನ್ನನ್ನು ನೋಡೆಂದು ಭಾವದ ಸೆರಗನ್ನು ಜಗ್ಗಿತು, ತೆರೆದಳು. ಒಡನೆಯೇ ಕಣ್ಣಿಗೆ ಬಿದ್ದುದು ಈ ಸಾಲುಗಳು
“ತುಟಿ ತುಟಿಗೆ ಮುತ್ತನೊತ್ತಿSS
ಜೇನ್ನುಡಿಯ ಬೀಜಬಿತ್ತಿ SS
ಮಧುಚಂದ್ರನ ಸ್ವಪ್ನವನೆತ್ತಿ SS
ಸುಳಿದಾಡುತಿತ್ತು ಸುತ್ತೂ S
ತುತ್ತೂ ತುತ್ತೂ ತುತ್ತೂ
ಬರಿ ಮುತ್ತೇ ಮುತ್ತೇ ಮತ್ತೂ”
‘ಹೂ… ಉಹ್ಞೂಂ’ ಎಂಬ ಈ ಕವಿತೆಯ ಪ್ರಾರಂಭದ ಸಾಂಕೇತಿಕತೆಯಲ್ಲಿ ಈ ಕವಿತೆಗೆ ದನಿಯಿತ್ತ ನಲ್ಲ ತಾನು ನಲ್ಲೆಗೆ ಮೈ ತುಂಬ ಮಾವು ಹೂs ಹೂs ಆಗಿ ಹೂತ ಸುಗ್ಗಿಯನ್ನು ನೆನಪಿಸಿಕೊಡುತ್ತಾನೆ. ಆಗ ಅವರು ಅನುಭವಿಸಿದ್ದ ಸುಖದ ಪ್ರತಿಮೆಗಳು ಕವಿತೆಯ ಎರಡನೆಯ ನುಡಿಯಲ್ಲಿ ಈ ಮೇಲಿನಂತೆ ಪ್ರಕಟವಾಗಿವೆ.
ಇದನ್ನು ಉದ್ಧರಿಸಲು ಕಾರಣವಿಷ್ಟೆ, ಅಷ್ಟೊಂದು ತನ್ಮಯತೆಯಿಂದ ಹರಯದ ಸವಿಯುಂಡಿದ್ದ ಆ ಜೋಡಿ ಈ ಕ್ರಿಯೆ ‘ಭೂತದಿಂದ ವರ್ತಮಾನಕ್ಕೆ’ ತಿರುಗಿದಾಗ ಆದೇ ಹೂತ ‘ಮಾವು ಹೇಗೆ ಬೇವಾಯಿತು’ ಎಂಬುದನ್ನು ಸೂಚಿಸುತ್ತದೆ.
“ಅದೆ ಇದ್ದರು ನಾವೂ ನೀವೂ
ಬಾಳಾಗಿದೆ ಬದುಕಿನ ಸಾವು”
‘ವಸಂತದ ಕೋಗಿಲೆಯ ಮಧುರ
ಕುಹೂ ಈಗ ಸುಗ್ಗಿಯ ಕರೆಯಾಗಿರದೆ ನೋವಿನ ಕೂಗಾಗಿದೆ...’
“ಅಣಗಿಸುತಿವೆ ಒಣಗಿದ ಹೂವೂ
ಎಲ್ಲಿರುವುದು ಆಗಿನ ಹೂ ಹೂ
ಉಹೂಂ ಉಹೂಂ ಉಹೂಂ”
ಈ ಮೇಲಿನ ಸಾಲುಗಳ ಸಂವೇದನೆಯನ್ನು ನೇರವಾಗಿ ಎದೆಗಿಳಿಸಿಕೊಂಡಾಗ ‘ಕಳೆದುಕೊಳ್ಳುವಿಕೆಯ ಕ್ರಿಯೆಗೆ ಹೇಗೆ ಅತ್ಯಂತ ಪ್ರಭಾವಶಾಲಿಯಾಗಿ ಅಂತಿಮತೆಯ ಸ್ವರೂಪ ದೊರೆಯುತ್ತದೆ ಎಂಬುದು ಸ್ವಯಂವೇದ್ಯವಾಗುವುದಿಲ್ಲವೇ…?
*
ಈ ಚಿಂತನೆಗೆ ಕಾರಣವಿಷ್ಟೆ, ಮೊನ್ನೆ ತನ್ನ ಓದಿನಲ್ಲಿ ಒಬ್ಬ ಮಹಾನುಭಾವನ ಈ ಹೇಳಿಕೆಯನ್ನು ಓದಿದಾಗಿನಿಂದ ಮನಸ್ಸು ತನ್ನ ಸುತ್ತಲೂ ವಿಚಾರದ ರೇಷಿಮೆ ದಾರದಿಂದ ಗೂಡು ನೇಯ್ದುಕೊಂಡು ಅಂತರ್ಮುಖಿಯಾದುದು.
“ನಾವು ಹರಿಯುವ ನೀರಿನಲ್ಲಿ ಎಂದಿಗೂ ಎರಡು ಬಾರಿ ಸ್ನಾನಮಾಡಲು ಸಾಧ್ಯವಿಲ್ಲ..!”
ಏಕೆ ಎಂದು ಮಕ್ಕಳು ಪ್ರಶ್ನೆ ಕೇಳಿದರೆ ಅವರಿಗೆ ಸುಲಭವಾಗಿ ವಿವರಿಸಬಹುದು. ಆದರೆ ಬದುಕಿನಲ್ಲಿ ಇಷ್ಟು ದೀರ್ಘ ಹಾದಿ ಕ್ರಮಿಸಿದ ತನ್ನನ್ನು ಈ ಉತ್ತರ ಸಾಂತ್ವನಗೊಳಿಸೀತೇ,
ಹರಿಯುವ ನೀರಿನಲ್ಲಿ ಮುಳುಗಿ ಪಾಪ ಮುಕ್ತರಾದೆವೆಂದು ಸಂತೃಪ್ತರಾಗುವ ನಾವು, ಅದರ ಲಾವಣ್ಯವನ್ನು ಕಣ್ತುಂಬಿಕೊಳ್ಳುವ ನಾವು ಅದರ ಬದುಕಿಗಿರುವ ತಾತ್ವಿಕ ಮಹತ್ವವನ್ನು ಅರಿಯಬಲ್ಲೆವೆ.
ನಮ್ಮನ್ನು ಸೇವಿಸಿದ ನೀರು ಮುಂದೆ ಧಾವಿಸುತ್ತಲೇ ಹೋಯಿತು. ನದಿ ಎಂದಾದರೂ ಹಿಮ್ಮುಖವಾಗಿ ಹರಿಯಲು ಸಾಧ್ಯವೇ?. ಪತನಗೊಂಡ ಜಲಪಾತ ಮತ್ತೆ ಸ್ವಪ್ರಯತ್ನದಿಂದ ಮೇಲೇರೀತೇ.
ಬೇರೆ ಪ್ರವಾಹ ಮುಂದು ಮುಂದಕ್ಕೆ ನಡೆಯುವ ಯಾನ. ಅಂತಿಮ ಗಮ್ಯ ಸೇರುವವರೆಗೆ ಅದೇ ಯಾನ. ಸಾಕೆನಿಸುವ ನಿಲುಗಡೆಗೆ ಆಸ್ಪದವೇ ಇಲ್ಲ. ಕೊನೆಗೆ ತನ್ನ ಅಸ್ತಿತ್ವವೂ ಉಳಿಯುವುದಿಲ್ಲ. ಸಾಗರದ ಒಡಲಿಗೆ ಶರಣು. ಸಂಪೂರ್ಣವಾಗಿ ತನ್ನ ಅಸ್ಮಿತೆಗೆ ಹೊರತಾಗುವ ಪಯಣದ ನಿಲುಗಡೆ ಮತ್ತೆ ಮೇಲೇರಬೇಕು. ಹಬೆಯಾಗಿ, ಹಿಮವಾಗಿ, ನೀರಾಗಿ ಅಧಃಪಾತ.
“ಅವತಾರವೆಂದು ಕರೆದಾರೆ ತಾಯೆ
ಈ ಅಧಪಾತವನ್ನೇ…” ಬೇಂದ್ರೆ
“ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ”
ಶ್ರೀ ಶಂಕರಾಚಾರ್ಯರು…

*
“ಮೇಲೆತ್ತಿ ಝಳಪಿಸಿದ ಕತ್ತಿಯ ಕೆಳಗೆ
ತಲ್ಲಣಗೊಳಿಸುವ ನರಕ
ನಡೆ ಮುಂದೆ ನಡೆ ಮುಂದೆ
ಮುಂದಿರುವುದು ವೀರಸ್ವರ್ಗ”
(ಒಂದು ಸಮುರಾಯ್ ಗೀತೆ)
ಇರುವ ಬದುಕನ್ನು ಯುದ್ಧವೆಂಬ ಕಾಲನಿಗೆ ಆಹುತಿ ನೀಡಲು, ಕಾಣದ ವೀರ ಸ್ವರ್ಗದ ಬಯಕೆಯ ಕಿಚ್ಚೆಬ್ಬಿಸಲು ಉನ್ಮಾದ ತುಂಬುವುದು ಎಂಥಾ ವಿಪರ್ಯಾಸ ಅಲ್ಲವೇ..?
*
‘ಮಿಟ್ಸು ಸುಜುಕಿ’ಎಂಬ ಕವಿಯ
ಈ ಸಾಲುಗಳನ್ನು ನೋಡಿ..
“ಮಸಣದ ಹಾದಿಯೊಂದು ಗಲ್ಲಿ
ಮಠಾಧೀಶರ ನೂರಾರು ತಲೆಮಾರು ಅಲ್ಲಿ:
ಬಿದ್ದು ಬಾಡಿದ ಮಂದಾರ ಪುಷ್ಪಗಳು”
ಈ ಸಾಲುಗಳಲ್ಲಿರುವ ಬದುಕಿನ ವ್ಯಂಗ್ಯ ನೋಡಿ. ಮಠಾಧೀಶರ ನೂರು ತಲೆಮಾರುಗಳು ಇದ್ದರೂ ಮಸಣದ ಹಾದಿಯ ಪಯಣ ತಪ್ಪಿಸಲಾಗಲಿಲ್ಲ. ಪೂಜೆಗೆ ಸಲ್ಲಬೇಕಾದ ಮಂದಾರ ಪುಷ್ಪಗಳೇ ಬಿದ್ದು ಬಾಡಿವೆ. ಅಂದರೆ ಕ್ಷಯಿಸುವಿಕೆಗೆ ಪಕ್ಕಾಗದವರಿಲ್ಲ.
*
ಈ ಬದುಕು ನಾಳೆ ಎಂಬುವವರಿಗಿಲ್ಲ. ಈಗ ಈ ಕ್ಷಣದ ವರ್ತಮಾನದ ಅಸ್ತಿತ್ವವೇ ಬದುಕು. ಎಲ್ಲರೊಳಗೊಂದಾಗುತ್ತಲೇ ಈ ಲೋಕದ ಹಂಗಿಲ್ಲದಂತೆ ಬಾಳುವವನೇ ನಿಜವಾದ ಸಾಧಕ. ಏಕೆಂದರೆ ಈ ಮೋಹ ಮತ್ತು ಆಮಿಷಗಳ ಸಂತೆಯಲ್ಲಿ ನಿರ್ಲಿಪ್ತಿಯನ್ನು ಮೈಗೂಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದು ಸಾಧ್ಯವಾಯಿತೆಂದರೆ ಎಲ್ಲದರಲ್ಲೂ ತೊಡಗಿಕೊಂಡು ನನ್ನದೇ ಆದ ಅಸ್ಮಿತೆಯನ್ನು ರೂಪಿಸಿಕೊಳ್ಳಲು ಸಾಧ್ಯ.
ಅದಕ್ಕೂ ಈ ಬಹುರತ್ನಾ ವಸುಂಧರಾ ಎನಿಸಿಕೊಳ್ಳುವ ಮೇದಿನಿ ಸರ್ವಸುಂದರಿ, ಮನೋಹಾರಿಣಿಯೂ ಹೌದು. ಇವಳೇ ಸಾಂತ್ವನ. ಇವಳಿಂದಲೇ ಸಮಸ್ಯೆ ಇವಳೇ ಸವಾಲು ಹಾಗೂ ಇವಳೇ ಸುಖದಾಯಿನಿ.
*
ಒಂದು ಬಾಷೋ ಕವಿತೆ ಹೀಗೆನ್ನುತ್ತದೆ
“ಹಳೆಯ ಕೊಳ
ಹಾರಿತೊಂದು ಕಪ್ಪೆ
ಕೊಳದೆದೆ ಜಲತರಂಗ”
ಜಲ ತರಂಗದ ಸೌಂದರ್ಯಕ್ಕೆ ಹಳೆಯ ಕೊಳವೂ ಆಗಬಹುದು. ಅದು ಕಪ್ಪೆ ಹಾರುವುದರಿಂದಲೂ ಘಟಿಸಬಹುದು. ಆದರೆ ಅದನ್ನು ಸವಿಯುವ ರಸಿಕತೆ ಮನಸ್ಸಿಗಿರಬೇಕು. ಕಾಲದ ಕಾಲು ಎಲ್ಲೂ ನಿಲ್ಲುವುದಿಲ್ಲ. ಅದು ನಿರಂತರ ಚಲನಶೀಲ. ಆ ಎಚ್ಚರ ಮೂಡಿದ ಕ್ಷಣದಿಂದಲೇ ನಾವು ಬದುಕನ್ನು ವಿಶೇಷವಾಗಿ ಪರಿಗಣಿಸಲು ಸಾಧ್ಯವಾಗುತ್ತದೆ.
ಈಗ ನಮ್ಮ ಅಂತಃಕರಣ ಸಂವೇದನಾಶೀಲವಾಗಿ ಈ ಜಗತ್ತಿನ ವಿದ್ಯಮಾನಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ಆಂತರಿಕವಾಗಿ ಕಾಡುವ ನೋವು ನಿಟ್ಟುಸಿರುಗಳನ್ನು ನಿಗ್ರಹಿಸಲು ಇದು ಸಹಕಾರಿಯಾಗುತ್ತದೆ. ಈ ಸೃಷ್ಟಿ ದೇವಮಂದಿರ ಎಂದು ನಾವು ಪರಿಭಾವಿಸುವಾಗ ಎಲ್ಲದರಲ್ಲೂ ಪೂಜ್ಯತೆ ಮೂಡಿ ದಿವ್ಯಭಾವ ಸಂಚಯವಾಗುತ್ತದೆ. ನಿರುಮ್ಮಳವಾಗುವ ನಮ್ಮ ಮನಸ್ಸು ಕ್ಷಣಕ್ಷಣವನ್ನೂ ಪರಿಗಣಿಸುತ್ತಾ ಚೇತೋಹಾರಿಯಾಗುತ್ತದೆ.
ಸದಭಿರುಚಿಯ ಸಜ್ಜನರ ಸಹವಾಸ ನಮ್ಮನ್ನು ಚೈತನ್ಯಶೀಲರಾಗಿ ಉಳಿಸುತ್ತದೆ. ಪರರ ನೋವಿಗೆ ಸ್ಪಂದಿಸುವ ಮನುಷ್ಯತ್ವವನ್ನು ದಯಪಾಲಿಸುತ್ತದೆ. ಉತ್ತಮ ಹವ್ಯಾಸಗಳು ಕಾಲಕ್ಕೆ ಮೌಲಿಕತೆಯ ಹೊಳಪನ್ನು ನೀಡುತ್ತವೆ. ಒಂದೇ ಸಾಲಿನಲ್ಲಿ ಬದುಕಿನ ಬಗೆಗೆ ಹೀಗೆ ನಾವು ಹೇಳುವುದಾದರೆ
“ಆಗಿಹೋದ ಕಾಲ ನಮಗೆ ಪಾಠವಾಗಿರಬೇಕೇ ಹೊರತು ಭಾರವಾಗಿ ಬಿಡಲು ನಾವು ಅದಕ್ಕೆ ಆಸ್ಪದ ಕೊಡಬಾರದು”
ಸ್ವಾಮಿ ಸುಖಬೋಧಾನಂದ…

ತನ್ನ ವಿಚಾರಗಳ ಉದ್ವಿಗ್ನತೆಯನ್ನು ಶಾಂತಗೊಳಿಸಿದ ತನ್ನ ಮುಂದಿನ ಪುಸ್ತಕಳಿಗೆ ಮನಸಾರೆ ನಮಿಸಿದ ಅವನಿ, ಇದೇ ಸಂಗಾತಿಯನ್ನು ನಾನು ಇದುವರೆಗೆ ಪರಿಗಣಿಸಲಾಗದೆ ಬಳಲಿದೆನಲ್ಲ. ಏನಿಲ್ಲ ಇವುಗಳಲ್ಲಿ ನನ್ನ ಅಧ್ಯಯನಾಸಕ್ತಿಯ ದೀಪಿಕೆಯಾಗಿದ್ದವಳೇ ಇವಳು, ನನ್ನ ಬಾಳಿಗೆ ಬೆಳದಿಂಗಳಾಗಿ ಸಾಗಿ ಬಂದವಳು. ಇನ್ನು ಮರೆಯಲಾರೆ ನಿನ್ನ ಎಂದೆಂದಿಗೂ ಎಂದುಕೊಂಡಾಗ ತಾನು ಒಂಟಿಯಲ್ಲ ಎಂಬ ದೃಢತೆ ಮೂಡಿತು ಅವಳಲ್ಲಿ.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೮)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
