ಮೌನದಲ್ಲಿ ಎಂತಹ ಸುಖವಿದೆ.”ಮೌನವೂ ಏಕಾಂತವೂ ಆತ್ಮದ ಸರ್ವೋಚ್ಛ ಸ್ನೇಹಿತರು” ಎಂದು ಉದ್ಗರಿಸಿದ ಜ್ಞಾನಿಯೊಬ್ಬನ ಮಾತು ನೆನಪಿಗೆ ಬರುತ್ತದೆ. ಹೊಸ ಧ್ಯಾನದೊಂದಿಗೆ ಹುಮ್ಮಸ್ಸಿನೊಂದಿಗೆ ಮೌನವಾಗಿರುವುದು ಬಹಳ ಕಷ್ಟ. ಆದರೆ ಅದನ್ನು ಸಾಧ್ಯವಾಗಿಸಿಕೊಂಡರೆ ಒಂದು ಯುದ್ಧವನ್ನೇ ಗೆದ್ದಂತೆ.ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಮೌನವೇಕೆ ಬೇಕು?’ ದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹೌದು, ಇಂದಿನ ಬೆಡಗಿಗೆ ಹೊಸತೊಂದು ಚೈತನ್ಯ. ನಿದ್ರೆಯ ಸೆರೆ ಬಿಡಿಸಿ ಹಾಸಿಗೆ ಬಿಟ್ಟೆದ್ದು ನಡುಗುವ ಚಳಿಯಲ್ಲೇ ಹೊರಗೆ ಓಡಿದೆ. ರಪ್ಪೆಂದು ನುಗ್ಗಿದ ತಣ್ಣಗಿನ ಗಾಳಿ ಮೈಗೆ ರಾಚಿ ಚಳಿಗೆ ತಾಳಲಾರದ ಕಂಪನವನ್ನು ತಂದಿತು.ಮೂಡಣವಿನ್ನೂ ತನ್ನ ಜಡತ್ವ ತೊರೆದಿರಲಿಲ್ಲ.ಅವನಿಯನ್ನು ಬಿಗಿದಪ್ಪಿ ಆ ಕುಳಿರೊಡೆಯ ಮತ್ತೆ ಮತ್ತೆ ಕಾವಳದ ಹೊದಿಕೆಯೊಳಗೆ ಎಳೆದುಕೊಳ್ಳುತ್ತಿದ್ದ.
ಹೌದು ರಾತ್ರಿ ಮಲಗುವಾಗ ಇಲ್ಲದಿದ್ದ ಚಳಿಯ ತೀವ್ರತೆ ಈಗ ಮುಂಜಾನೆ ಇಷ್ಟು ಉಲ್ಬಣಿಸಿದ್ದು ಕಂಡಾಗ ಒಂದು ಲೋಟ ಬಿಸಿನೀರನ್ನು ಕುಡಿಯಬೇಕೆನಿಸಿತು.ಒಳಸೇರಿದ ನೀರು ಒಡಲೊಳಗಿನ ಕುಳಿರಿನ ಜೊತೆಗೆ ರಾಜಿ ಮಾಡಿಕೊಂಡಂತಿತ್ತು. ಇನ್ನೂ ಯಾರೂ ಎದ್ದಿರದ ಕಾರಣ ಹಾಗೆಯೇ ಜಗಲಿಗೆ ಬಂದು ಆಸೀನಳಾದೆ. ಕಣ್ಣು ಮಿಟುಕಿಸುತ್ತಿದ್ದ ನವಮಿಯ ಚಂದಿರ.
ತನ್ನ ಉಡುಗಣದೊಂದಿಗೆ ವಿಹರಿಸುತ್ತಿದ್ದ. ಮಂದಾನಿಲದ ಸೋಂಕಿಗೆ ಮೈ ಕಂಪಿಸತೊಡಗಿದರೂ ಹಾಗೆಯೇ ಆಗಸದ ಅಸಂಖ್ಯಾತ ನಕ್ಷತ್ರಗಳನ್ನು ಕಣ್ತುಂಬಿಕೊಂಡು ಮೌನದೊಳಗೆ ಜಾರಿದೆ. ಏಕೋ ಈ ಘಳಿಗೆ ಎಷ್ಟು ಆಪ್ಯಾಯ ಮಾನವಾಗಿದೆಯಲ್ಲ ಎನಿಸಿತು. ಹಕ್ಕಿಗಳ ಗೂಡಿನಲ್ಲಿ ಇನ್ನೂ ಎಚ್ಚರದ ಕಹಳೆ ಮೊಳಗಿರಲಿಲ್ಲ. ಮುಂಜಾವವಾದ್ದರಿಂದ ನಾಯಿಗಳೂ ನಿದ್ರೆಯ ಮಂಪರಿನಲ್ಲಿದ್ದುವು. ಎಲೆಗಳು ಏಕೋ ಮರ್ಮರಿಸದೆ ಸಮಾಧಿ ಸ್ಥಿತಿಯಲ್ಲಿದ್ದವು. ನಾನು ಹಾಗೆಯೇ ವಿಸ್ಮೃತಿಗೆ ಜಾರಿದೆ. ಎಷ್ಟು ಚೆಂದದ ಅನುಭವ. ಮಾತು ಮಾತ್ರವಲ್ಲ ತನ್ನ ಅಸ್ತಿತ್ವವನ್ನೇ ಮರೆತು ಕೇವಲ ಅಂತರ್ಯಾನ ಮಾಡುವುದು.
ಈ ಮೌನದಲ್ಲಿ ಎಂತಹ ಸುಖವಿದೆ.”ಮೌನವೂ ಏಕಾಂತವೂ ಆತ್ಮದ ಸರ್ವೋಚ್ಛ ಸ್ನೇಹಿತರು” ಎಂದು ಉದ್ಗರಿಸಿದ ಜ್ಞಾನಿಯೊಬ್ಬನ ಮಾತು ನೆನಪಿಗೆ ಬಂತು. ಹಾಗೆಯೇ ಕುಳಿತಿದ್ದೆ. ಹಟ್ಟಿಯಿಂದ ‘ಅಂಬಾ’ ಎನ್ನುವ ಮಧುರ ಕರೆ ಕೇಳುವವರೆಗೆ ದಿನಚರಿ ಆರಂಭವಾಯಿತು. ಹೊಸ ಧ್ಯಾನದೊಂದಿಗೆ ಹುಮ್ಮಸ್ಸಿನೊಂದಿಗೆ ಮೌನವಾಗಿರುವುದು ಬಹಳ ಕಷ್ಟ. ಆದರೆ ಅದನ್ನು ಸಾಧ್ಯವಾಗಿಸಿಕೊಂಡರೆ ಒಂದು ಯುದ್ಧವನ್ನೇ ಗೆದ್ದಂತೆ. ‘ಮೌನವಾಗಿರು ಅಥವಾ ಅದಕ್ಕಿಂತ ಶ್ರೇಷ್ಠವಾದ ಮಾತನ್ನು ಆಡು’ ಇಲ್ಲಿಯೂ ‘ಶ್ರೇಷ್ಠವಾದ ಮಾತು’ ಕಲಿಯುವವರೆಗೆ ಮೌನದ್ದೇ ಸಾರ್ವಭೌಮತ್ವ.

ಫೋಟೋ ಕೃಪೆ : ಗೂಗಲ್
‘ನಮ್ಮ ಬದುಕಿನ ಎಲ್ಲ ಸಂಕಷ್ಟಗಳಿಗೂ ನಾವು ಆಡುವ ವಿವೇಕರಹಿತ ಮಾತೇ ಕಾರಣ’ ಎಂಬುದನ್ನು ಅರಿತರೆ ‘ಮಾತನ್ನು ಮಾಣಿಕ್ಯ’ವೆಂಬಂತೆ ಪರಿವರ್ತಿಸಿಕೊಳ್ಳುವುದು ನಮ್ಮ ಜಾಣ್ಮೆಯನ್ನು ಅವಲಂಬಿಸಿದೆ ಎಂಬುದು ವಿದಿತವಾಗುತ್ತದೆ.
ಒಬ್ಬ ಮನುಷ್ಯನಾಡುವ ಮಾತಿನಿಂದ ಅವನ ವ್ಯಕ್ತಿತ್ವವನ್ನು ನಿರ್ಧರಿಸಬಹುದು. ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಮಾತನ್ನು ರಚಿಸಿದ ಜಾನಪದರೂ ಮಾತಿನ ಕೇಡನ್ನು ಸರಿಯಾಗಿ ಬಲ್ಲವರಾಗಿದ್ದರು.
“ಮಾತಿನಿಂ ನಗೆನುಡಿಯು
ಮಾತಿನಿಂ ಹಗೆ ಹೊಗೆಯು
ಮಾತಿನಿಂ ಸರ್ವಸಂಪದವು ಲೋಕಕ್ಕೆ
ಮಾತೆ ಮಾಣಿಕವು /ಸರ್ವಜ್ಞ”
ಎಂಬ ಮಾತಿನಂತೆ, ಅಹಂಕಾರದ, ಅವಿವೇಕದ ಮಾತುಗಳು ಸಮಾಜದಲ್ಲಿ ಅಶಾಂತಿಯನ್ನು ಹುಟ್ಟು ಹಾಕುತ್ತವೆ. ಸಂಸಾರದಲ್ಲಿ ಬಿರುಕುಗಳನ್ನು ನಿರ್ಮಿಸಿ ಬಿಡುತ್ತವೆ. ಆಗ ಮಾತು ನಮ್ಮ ವ್ಯಕ್ತಿತ್ವವನ್ನು ಕಳಂಕಿತಗೊಳಿಸಿ ಬಿಡುತ್ತದೆ. ಅಷ್ಟೇ ಅಲ್ಲ ಮನಸ್ಸಿನಲ್ಲಿ ಕ್ಲೇಶದ ಬೀಜವನ್ನು ಅಂಕುರಾರ್ಪಣಗೊಳಿಸುತ್ತವೆ. ಒಮ್ಮೆ ಜಾರಿದ ಮಾತು ಕನ್ನಡಿಗೆ ಬಿದ್ದ ಕಲ್ಲಿನಂತೆ ಮನಸ್ಸನ್ನು ಚೂರು ಮಾಡಿ ಬಿಡುತ್ತದೆ.ಆ ನಂತರ ಎಷ್ಟೇ ಜೋಡಿಸಿದರೂ ಅದರಲ್ಲಿ ಹಲವು ಪ್ರತಿಬಿಂಬಗಳು ಕಾಣುತ್ತವೆಯೇ ಹೊರತು ಸಮಗ್ರವಾದ ಒಂದೇ ಪ್ರತಿಬಿಂಬ ಮೂಡಲಾರದು.
ಮೂರು ಅಂಗುಲದ ನಾಲಿಗೆ ಆರಡಿ ಎತ್ತರದ ಮನುಷ್ಯನನ್ನು ನಿಯಂತ್ರಿಸ ಬಲ್ಲುದು.ಅದು ನಾಲಿಗೆಯ ಸಾಮರ್ಥ್ಯ.ಈ ಸಾಮರ್ಥ್ಯ ನಾಲಿಗೆಗೆ ಮೂಡಿದಾಗ ಅದು ಅಸ್ತ್ರವಾಗುತ್ತದೆ.ನಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸುವ ವಾಹಕವಾಗುತ್ತದೆ. ಇಂತಹ ಮಾತುಗಳನ್ನು ಆಡಬಲ್ಲವನಿಗೆ ಸಮಾಜದಲ್ಲಿ ಮಾನ್ಯತೆ ದೊರೆಯುತ್ತದೆ.
ಆ ಮಾತು ಸಂಸ್ಕಾರಯುತವಾದ ನಡವಳಿಕೆ ಹಾಗೂ ಆಲೋಚನೆಗಳಿಂದ ಪಕ್ವವಾಗಿರುತ್ತದೆ.ಪಕ್ವಫಲ ಯಾವಾಗಲೂ ಸ್ವಾದಿಷ್ಟವೇ ಆಗಿರುತ್ತದೆ ಹಾಗೂ ಅದರೊಳಗಿನ ಬೀಜವೂ ತನ್ನ ವಂಶವನ್ನು ಪಸರಿಸಬಲ್ಲ ಜೀವ ಚೈತನ್ಯವನ್ನು ಹುದುಗಿಸಿಕೊಂಡಿ ರುತ್ತದೆ.ಇದು ಕೇಳುಗನಿಗೂ ಹಿತಕಾರಿ ಹಾಗೂ ಪ್ರಯೋಜನಕಾರಿ….ಅಷ್ಟೇ ಅಲ್ಲ ಇಂತಹ ತೂಕದ ಮಾತುಗಳು ದಾರಿದೀಪಗಳಂತೆ ಕೇಳುಗರನ್ನು ಸರಿಯಾದ ಪಥಕ್ಕೆ ದಿಗ್ದರ್ಶಿಸುತ್ತವೆ.ಒಳಿತನ್ನು ಆಲಿಸುವ ಕಿವಿಗಳು ಎಂದಿಗೂ ಧನ್ಯ.ಇದಕ್ಕೆ ಸ್ವಾಮಿ ವಿವೇಕಾನಂದರು ಹಿಂದೂಧರ್ಮದ ಪ್ರತಿನಿಧಿಯಾಗಿ ಅಮೆರಿಕಾದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಏಳು ನಿಮಿಷಗಳ ಅವಧಿಯ ಪುಟ್ಟ ಉಪನ್ಯಾಸವೇ ಉದಾಹರಣೆ.

ಫೋಟೋ ಕೃಪೆ : ಗೂಗಲ್
‘ಅಮೆರಿಕಾದ ನನ್ನ ಸೋದರ ಸೋದರಿಯರೆ’ ಎಂದು ಸಂಬೋಧಿಸಿದ ಆ ಕಂಚಿನ ಕಂಠದಲ್ಲಿದ್ದ ಆಪ್ತತೆ ಅಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತೆಂಬುದು ಐತಿಹಾಸಿಕ ಸತ್ಯ…ಇದು ಹೇಗೆ ಧರ್ಮದ ಗಡಿಗಳನ್ನೂ ಮೀರಿ ಸಭಿಕರ ಪ್ರಶಂಸೆಗೆ ಪಾತ್ರವಾಯಿತು ಎನ್ನುವುದು ಮಾತಿಗಿರುವ ಮಾಂತ್ರಿಕ ಶಕ್ತಿ. ಇಂತಹ ಅರ್ಹತೆಯನ್ನು ಗಳಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ.
ಇತರರ ಮಾತುಗಳನ್ನು ತದೇಕಚಿತ್ತದಿಂದ ಆಲಿಸುವ ಸಹೃದಯತೆ,ಅರಿವಿನ ದಾಹ,ನಿರಂತರ ಅಧ್ಯಯನ ,ತನ್ನಂತೆ ಪರರ ಪರಿಭಾವಿಸುವ ಔದಾರ್ಯ ಹಾಗೂ ಹೊರ ಪ್ರಪಂಚದ ಆಗುಹೋಗುಗಳಿಗೆ ಸದಾ ಮಿಡಿಯುವ ಹೃದಯ , ಸಮಾಜದ ಜನರ ಹಾನಿಕರವಲ್ಲದ ಲೋಪಗಳನ್ನೂ ಕ್ಷಮಿಸಿಬಿಡುವ ಉದಾರತೆ ಸ್ವಯಂ ಆರ್ಜನೆಯಿಂದ ಬಂದ ಪ್ರಾಮಾಣಿಕ ದುಡಿಮೆಯ ಫಲ, ತನ್ನ ಹಿರಿಯರಿಂದ ಬಂದ ಸಂಸ್ಕಾರಗಳ ಅನುಪಾಲನೆ, ಲಲಿತ ಕಲೆಗಳಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ. ಇಂತಹ ಹತ್ತಾರು ಹವ್ಯಾಸಗಳು ಮನುಷ್ಯನ ಬದುಕನ್ನು ಮೌಲ್ಯಗಳಿಂದ ತುಂಬುತ್ತವೆ. ತನ್ನ ಕಾಯಕದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡ ವ್ಯಕ್ತಿ ಇತರರ ದೋಷಗಳನ್ನು ಹುಡುಕುವ ಕೆಲಸಕ್ಕೆ ಕೈಹಾಕಲಾರ.ಅದು ಅವನಿಗೆ ಸಮಯವನ್ನು ಹಾಳುಮಾಡುವ ಕೆಲಸ.
ತನ್ನನ್ನು ಉನ್ನತೀಕರಿಸಿಕೊಳ್ಳುವ ಮನೋಭಾವ ಸದಾ ಅವನನ್ನು ತನ್ನ ವಿಚಾರಗಳಲ್ಲೇ ಮಗ್ನವಾಗಿರುವಂತೆ ಮಾಡುತ್ತದೆ.ಮಗು ತನ್ನ ಆಟಿಕೆಯೊಂದಿಗೆ ಜಗತ್ತನ್ನೇ ಮರೆಯುವಂತಹ ಸುಖಕರ ಅನುಭವ ಅದು.ಮಹಾತ್ಮರಾದವರಿಗೆ ಮಾತ್ರ ಇಂತಹ ಸುಖವನ್ನು ಅನುಭವಿಸಲು ಸಾಧ್ಯವಾಗುತ್ತದೆ.
ಮೌನ ಎಂದಿಗೂ ಅಸಹಾಯಕತೆಯ ದ್ಯೋತಕವಲ್ಲ.ಅದು ಸಮಯವನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸುವವನಲ್ಲಿ ಇರುವ ಒಂದು ದಿವ್ಯಾಯುಧ.ಮೌನದಲ್ಲೇ…. ಸಂಪನ್ನವಾಗುವ ಯೋಜನೆಗಳು ಸಿದ್ಧಗೊಳ್ಳುತ್ತವೆ. ತೊಡಗಿಸಿಕೊಂಡ ಕಾರ್ಯದ ಸಿದ್ಧತೆ ಪರಿಪೂರ್ಣವಾಗಿ ರುತ್ತದೆ.ಏಕಾಗ್ರತೆ ದೊರೆಯುತ್ತದೆ. ಅಷ್ಟೆ ಅಲ್ಲ ಅನಪೇಕ್ಷಿತ ಹಗರಣಗಳಿಂದ ನಮ್ಮನ್ನು ದೂರವಿರಿಸುತ್ತದೆ.
*
“ಜಾಗೃತ ಬುದ್ಧಿಯಿಂದ ಮಾಡಿದ ಕೆಲಸ ವಿಷಾದರಹಿತವಾಗಿರುತ್ತದೆ.”
– ರವಿಶಂಕರ ಗುರೂಜಿ
ಬುದ್ಧಿ ಜಾಗೃತವಾಗಿರಬೇಕಾದರೆ ಮನಸ್ಸು ಅಂತರ್ಮುಖಿಯಾಗಿರಬೇಕು. ಅಂದರೆ ಬಾಹ್ಯ ಆಕರ್ಷಣೆಯಿಂದ ಹಿಮ್ಮುಖವಾಗಿರಬೇಕು.ಮನಸ್ಸಿಗೆ ಮೊನಚು ಬರುವುದೇ ಒಂದೇ ಮನಸ್ಸಿನಿಂದ ವಿಚಾರಗಳನ್ನು ಧ್ಯಾನಿಸಿದಾಗ.ಇದೇ ಏಕಾಗ್ರತೆ.ಏಕಾಗ್ರಚಿತ್ತಕ್ಕೆ ದರ್ಬೆಯ ತುದಿಯಂತಹ ಮೊನಚು ಇರುತ್ತದೆ.ಅದಕ್ಕೇ ‘ಕುಶಾಗ್ರಮತಿ ‘ಎಂಬ ನುಡಿಗಟ್ಟು ಚಾಲ್ತಿಯಲ್ಲಿರುವುದು.
‘ವಿಷಾದ ರಹಿತ ಫಲ’ ಸದಾ ಕಾಲವು ನಮ್ಮನ್ನು ಸಂತೋಷವಾಗಿಡುತ್ತದೆ. ಇದಕ್ಕೆ ಮೌನ ಚಿಂತನೆಯ ಪರಿಣಾಮವೇ ಕಾರಣ. ‘ನಿನ್ನನುಭವನೆ ನಿನಗೆ ದರುಮದ ದೀಪ’
ಎಂದು ಡಿ.ವಿ.ಜಿಯವರು ಹೇಳಿದ್ದಾರಲ್ಲ. ಇದಕ್ಕೇ ಇರಬೇಕು.ಸ್ವಯಂ ಚಿಂತನೆ ಮಾಡುವ ಸಾಮರ್ಥ್ಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ.ಸಾಮಾನ್ಯಜನರು ಇತರರ ಹೇಳಿಕೆಯನ್ನೇ ಪುರಸ್ಕರಿಸುತ್ತಾರೆ,’ಅವರು ನಮಗಿಂತ ಪ್ರಾಜ್ಞರು’ ಎಂಬ ಭ್ರಮೆಯಿಂದ ಆದರೆ ನಮಗೆ ನಮ್ಮದೇ ಆದ ಒಂದು ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವಿದೆ ಎಂದರೆ ಅದಕ್ಕಿಂತ ಹಿತಕಾರಿ ಅಂಶ ಬೇರಿಲ್ಲ.ನಮ್ಮನ್ನು ನಾವು ಮೊದಲು ಅರಿತುಕೊಳ್ಳಬೇಕು.ಆಗ ಮಾತ್ರ ಈ ಚಿಂತನೆಗೆ ಅದ್ಭುತವಾದ ಸಾಮರ್ಥ್ಯ ಒದಗುತ್ತದೆ.
ಬದುಕು ಒಂದು ತೆರೆದ ಪುಸ್ತಕವಲ್ಲ.ತೆರೆದ ಪುಸ್ತಕವನ್ನಾದರೆ ನಾವು ಒಂದೇ ಓದಿಗೆ ಮುಗಿಸಿ ಬಿಡಬಹುದು.ಆದರೆ ಎಷ್ಟು ಆಪ್ತವಾದ ರೂ ಎಷ್ಟು ದೀರ್ಘಕಾಲ ಒಟ್ಟಿಗೆ ಇದ್ದು ನಾವು ಬದುಕಿದ್ದೇವೆಂದರೂ ಮತ್ತೊಬ್ಬರ ಮನಸ್ಸನ್ನು ತೆರೆದ ಪುಸ್ತಕದಂತೆ ಓದಿ ದಕ್ಕಿಸಿಕೊಳ್ಳಲು ಆಗದು.ಒಂದೊಂದು ಸಂದರ್ಭದಲ್ಲಿ ಒಂದು ಬೆಟ್ಟವಾಗಲಿ ಸಾಗರವಾಗಲಿ,ಗಗನವಾಗಲಿ ಬೇರೆ ಬೇರೆ ಅನುಭವಕ್ಕೆ ನಮ್ಮನ್ನು ಪಕ್ಕಾಗಿಸುವಂತೆ ವಿಭಿನ್ನ ಸಂದರ್ಭಗಳು ವ್ಯಕ್ತಿಯ ಮನೋತರಂಗದಲ್ಲಿ ಭಿನ್ನವಾದ ಅಲೆಗಳನ್ನು ಎಬ್ಬಿಸಿ ಪ್ರತಿಕ್ಷಣವೂ ನಮ್ಮ ಮೌಲ್ಯಗಳನ್ನು ನಿರ್ಧರಿಸುತ್ತವೆ.ದಿನವೂ ನಾವು ಒಡನಾಡುವ ವ್ಯಕ್ತಿಗಳೇ ಯಾವುದೋ ಸಂದರ್ಭಗಳಲ್ಲಿ ವಿಭಿನ್ನವಾಗಿ ನಡೆದುಕೊಂಡಿದ್ದಾರೆಂದ ಮಾತ್ರಕ್ಕೆ ಅವರ ಕೃತ್ಯಕ್ಕೆ ಕಾರಣವಾದ ಪ್ರಸಕ್ತ ಸಂದರ್ಭದ ಹಿನ್ನೆಲೆಯನ್ನು ನಾವು ಅವಲೋಕಿಸುವ ಗೋಜಿಗೆ ಹೋಗದೆ ಜನಮತದಂತೆ ನಾವೂ ಆ ವ್ಯಕ್ತಿಯ ಬಗೆಗೆ ತೀರ್ಮಾನಕ್ಕೆ ಬಂದು ಬಿಡಬಹುದು.ಇದು ಸ್ವಂತ ವ್ಯಕ್ತಿತ್ವ ಇಲ್ಲದವರ ನಡೆ.
ವ್ಯಕ್ತಿ ಮೊದಲು ತನ್ನನ್ನು ಅರಿಯಬೇಕು. ಬಸವಣ್ಣನವರೆಂದಂತೆ
‘ತನ್ನರಿವೆ ತನಗೆ ಗುರು’ ಹೌದು ‘ಗುರು’ ಎಂದರೆ ಶಿಕ್ಷಣ ನೀಡುವ ಘನ ವ್ಯಕ್ತಿಯೇ ಆಗಬೇಕೆಂದಿಲ್ಲ. ಅರಿವಿನ ಪರಿಧಿಯನ್ನು ವಿಸ್ತರಿಸುತ್ತಾ ಹೋಗುವ ಬೆಳಕು.’ಗು’ ಅಂದರೆ ಕತ್ತಲೆ…’ರು’ ಎಂದರೆ ‘ದೀಪ್ತಿ’.
ಅಜ್ಞಾನದ ತಿಮಿರದಿಂದ ಜ್ಞಾನದ ಪ್ರಕಾಶದೆಡೆಗೆ ಕೊಂಡೊಯ್ಯುವ ಚೇತನವೇ ‘ಗುರು’. ಇದು ವ್ಯಕ್ತಿಯೇ ಆಗಬೇಕೆಂದೇನೂ ಇಲ್ಲ ಅಥವಾ ವ್ಯಕ್ತಿ ನಿರ್ಮಿತವೂ ಆಗಲೇಬೇಕೆಂದಿಲ್ಲ. ಪ್ರಕೃತಿಯ ಜಡ ಚೇತನ ವಸ್ತುಗಳೆಲ್ಲ ಇದರ ಸಹಜ ವ್ಯಾಪಾರದೊಂದಿಗೆ ನಮ್ಮ ಹೃದಯದ ಭಾವಗಳನ್ನು ಸಂವೇದಿಸಿ ಚಿತ್ತವನ್ನು ದೀಪ್ತಗೊಳಿಸಬಹುದು. ವಾಲ್ಮೀಕಿಗೆ ‘ಕ್ರೌಂಚ ಮಿಥುನಗಳ ಪ್ರಸಂಗ’ ರಾಮಾಯಣದ ರಚನೆಗೆ ಪ್ರೇರಕ ಶಕ್ತಿಯಾದಂತೆ. ಸಿದ್ಧಾರ್ಥನಿಗೆ ತನ್ನ ನಗರ ಪರ್ಯಟನೆಯಲ್ಲಿ ಕುಷ್ಠರೋಗಿ, ಹಣ್ಣು ಹಣ್ಣು ಮುದುಕ, ಸಾವು ಈ ಘಟನೆಗಳು ಅವನ ಅಂತರಂಗವನ್ನು ಪ್ರಭಾವಿಸಿ ಮಾನವನ ನೋವು ದು:ಖಗಳಿಗೆ ಶಾಶ್ವತ ಉಪಶಮನ ಕಂಡುಕೊಳ್ಳಲು ‘ಅರಣ್ಯ ತಪೋ ಗಮನ’ ವಾಗುವಂತೆ ಮಾಡಿದ ಪ್ರಸಂಗಗಳು ಇವು. ‘ಲೋಕ ಗುರು ಪ್ರಕೃತಿ’ಯಿಂದ ತನ್ನಿಂತಾನೇ ಘಟಿಸಿದ ಪ್ರಸಂಗಗಳು.
ನಾವು ಇಂತಹ ಸಾವಿಗೆ, ನೋವಿಗೆ ಪ್ರತಿನಿತ್ಯವೂ ಮುಖಾಮುಖಿಯಾಗುತ್ತಲೇ ಇರುತ್ತೇವೆ. ಆದರೆ ಅದಾವುದೂ ನಮ್ಮನೇಕೆ ಪ್ರಭಾವಿಸಿ ಅಂತರ್ಮುಖಿ ಚಿಂತನೆಗೆ ಕರೆದೊಯ್ಯುತ್ತಿಲ್ಲ?. ಏಕೆಂದರೆ ನಮಗೆ ಬಾಹ್ಯ ವಿದ್ಯಮಾನಗಳಲ್ಲಿ ಇರುವ ಆಸಕ್ತಿ ‘ಅಂತರಂಗದ ದರ್ಶನ’ದಲ್ಲಿ ಇಲ್ಲದಿರುವುದು. ತನ್ನ ಆತ್ಮ ಒಂದೇ ತಾನು ಉಸಿರಾಡುವವರೆಗೂ ನಮ್ಮೊಡನೆ ಸಾಗಿಬರುವುದು. ಅದರ ಸಾಕ್ಷಿಯಾಗಿ ನಾವು ನಡೆದುಕೊಂಡಾಗ ಸುಸಂಸ್ಕೃತ ವ್ಯಕ್ತಿಯಾಗಿ ನಾವು ರೂಪುಗೊಳ್ಳುವುದು. ಇದಕ್ಕೆ ಸಹಕಾರಿಯಾಗುವುದು ಮೌನ ಹಾಗೂ ಧ್ಯಾನ. ಚಿತ್ತವನ್ನು ಏಕಾಗ್ರಗೊಳಿಸಲು ಬೇಕಾದ ಲೆಕ್ಕವಿಲ್ಲದಷ್ಟು ಕಲೆಗಳು ಈ ಭೂಮಿಯ ಮೇಲಿವೆ. ಧ್ಯಾನ, ಭಜನೆ, ಕೀರ್ತನೆ, ಚಿತ್ರಶಿಲ್ಪ, ಸಂಗೀತ, ನಾಟ್ಯಕಲೆಗಳಂತಹ ಕುಶಲ ಕಲೆಗಳು, ಯೋಗ ಇತ್ಯಾದಿ. ಎಲ್ಲಕ್ಕೂ ಮಿಗಿಲಾದುದೇ ಕೃಷಿ ವಿದ್ಯೆ. ಕೃಷಿಕನ ಕರ್ಮ, ಯೋಗ, ಧ್ಯಾನ, ಶ್ರದ್ಧೆ, ಸ್ವಾಸ್ಥ್ಯದ ಬದುಕು ಎಲ್ಲವೂ ಅವನ ಕಾಯಕ ಹಾಗೂ ‘ಕಾಯಕದಲ್ಲಿ ಒಡನಾಡುವ’ ಸಹ ಜೀವಿಗಳ ಮೇಲೆ ಅವಲಂಬಿಸಿದೆ. ಜೊತೆಗೆ ಪ್ರಾಕೃತಿಕ ಋತುಮಾನಗಳೂ ಇದರಲ್ಲಿ ಪಲ್ಲಟವಾದಾಗಲೂ ಅವನು ತನ್ನ ಸಮಚಿತ್ತತೆಗೆ ಎರವಾಗುವುದಿಲ್ಲ. ಏಕೆಂದರೆ ಕೃಷಿಕಾಯಕ ರೈತನಲ್ಲಿ ಕರ್ಮದ ಜೊತೆಗೆ,ಧ್ಯಾನ ಹಾಗೂ ನಿರ್ಲಿಪ್ತತೆಯನ್ನೂ ಒಡಮೂಡಿಸುತ್ತದೆ.ಬಯಕೆಗಳನ್ನು ನಿಯಂತ್ರಣದಲ್ಲಿರಿಸಿ ಸರಳ ಜೀವನಕ್ಕೆ ಬದುಕನ್ನು ಹೊಂದಿಸಿರುತ್ತದೆ.’ಪ್ರಾಕೃತಿಕ ವಿಕೋಪಗಳು’ ಉಂಟುಮಾಡುವ ಹಾನಿ ಲಾಭಾಲಾಭಗಳನ್ನು ಸಮಸ್ಥಿತಿಯಲ್ಲಿ ಸ್ವಾಗತಿಸುವ ಮನೋದಾರ್ಢ್ಯವನ್ನು ತುಂಬಿರುತ್ತದೆ.
ಫೋಟೋ ಕೃಪೆ : ಗೂಗಲ್
‘ಹಾಸಿಗೆ ಇದ್ದಷ್ಟು ಕಾಲು ಚಾಚು’ವ ನಿರ್ಲಿಪ್ತಿಯನ್ನು, ಸಹಕುಟುಂಬದಲ್ಲಿ ವಾಸಿಸುವ ಅವನ ಅನಿವಾರ್ಯತೆಯೇ ಅವನಿಗೆ ಕಲಿಸಿರುತ್ತದೆ.ಏಕೆಂದರೆ ‘ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು’ ಎಂಬ ಹಂಚಿ ತಿನ್ನುವ ಸಂಸ್ಕಾರ ಅವನದು.ಇದು ಸುಖಕ್ಕೂ ಸೈ…ಕಷ್ಟಕ್ಕೂ ಸೈ… ಇದೇ ಬದುಕು ಉತ್ಕೃಷ್ಟವಾದ ಮಾನಸಿಕ ಶಾಂತಿಯನ್ನು ದಯಪಾಲಿಸುತ್ತದೆ.
*
ಬ್ರಹ್ಮಾಂಡದಲ್ಲಿ ಏನಿದೆಯೋ ಅದರ ಸಕಲ ಅಂಶಗಳನ್ನು ಒಳಗೊಂಡು ರೂಪುಗೊಂಡಿದೆ ಈ ಕಾಯ. ‘ಅಹಂ ಬ್ರಹ್ಮಾಸ್ಮಿ’ಎಂಬುದು ಕೇವಲ ಆತ್ಮಪ್ರಶಂಸೆಯಲ್ಲ.ಅದು ಪರಮ ಸತ್ಯ.
‘ಬ್ರಹ್ಮಸತ್ಯ ಜಗನ್ಮಿಥ್ಯಾ’ ಎಂಬ ಹೇಳಿಕೆಯಲ್ಲಿ ಬ್ರಹ್ಮತ್ವ ಹಾಗೂ ಪ್ರಾಕೃತಿಕ ಸಂಬಂಧದ ಕೊಂಡಿಯಿದೆ.ಮಿಥ್ಯ ಜಗತ್ತಿನಲ್ಲಿ ಜೀವಿಸಲೇಬೇಕಾದ ಅನಿವಾರ್ಯತೆ ಹೊಂದಿರುವ ನಶ್ವರ ಕಾಯ ನಮ್ಮದು.ಆದರೆ ನಮ್ಮೊಳಗಿನ ಚೈತನ್ಯ ಎಂದಿಗೂ ಅವಿನಾಶಿ.’ಆತ್ಮಕ್ಕೆ ಎಂದೂ ಸಾವಿಲ್ಲ’ ಎಂಬುದು ಈ ಹೇಳಿಕೆಗೆ ಪುಷ್ಟಿ ನೀಡುತ್ತದೆ.
‘ಧ್ಯಾನಸ್ಥ ಸ್ಥಿತಿ’ ಇಂತಹ ಗಹನ ವಿಚಾರಗಳನ್ನು ತರ್ಕಿಸಲು ನಮಗೆ ಅನುವು ಮಾಡಿಕೊಡುತ್ತದೆ. ಆದುದರಿಂದಲೇ ಮನಸ್ಸು ಹಾಗೂ ಬ್ರಹ್ಮಾಂಡದ ನಡುವಿನ ಅರಿವನ್ನು ಸಂಪರ್ಕಿಸುವ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತದೆ ಧ್ಯಾನ. ಧ್ಯಾನದಲ್ಲಿದ್ದಾಗ ನಾವು ನಮ್ಮನ್ನೇ ಒರೆಹಚ್ಚಿಕೊಳ್ಳುತ್ತೇವೆ. ನಮ್ಮಬದುಕಿನ ಧ್ಯೇಯವನ್ನು,ಅದರ ಉದ್ದೇಶಗಳನ್ನು ಕಂಡುಕೊಳ್ಳುವ ಪ್ರಯತ್ನವೂ ಸಾಗುತ್ತದೆ.ಆತ್ಮವಿಮರ್ಶೆಯ ಮಂಥನ ನಮಗೆ ‘ಅರಿವಿನ ನವನೀತ’ವನ್ನು ದಕ್ಕಿಸಿಕೊಡಲೂಬಹುದು. ಮಹಾದಾರ್ಶನಿಕ ಕವಿ ‘ತಿಮ್ಮಗುರು’ತಮ್ಮ ಮಂಕುತಿಮ್ಮನ ಕಗ್ಗದಲ್ಲಿ,’ಬ್ರಹ್ಮಾನುಭವಿ’ಯಾಗುವ ಸೂತ್ರವನ್ನು ಈ ಕೆಳಗಿನಂತೆ ಕಟ್ಟಿಕೊಟ್ಟಿದ್ದಾರೆ.
‘ಒಮ್ಮೆ ಹೂದೋಟದಲ್ಲಿ ಒಮ್ಮೆ ಕೆಳೆಕೂಟದಲಿ….
ಒಮ್ಮೆ ಸಂಗೀತದಲಿ ಒಮ್ಮೆಶಾಸ್ತ್ರದಲಿ
ಒಮ್ಮೆ ಸಂಸಾರದಲಿ ಮತ್ತೊಮ್ಮೆಮೌನದಲಿ ಬ್ರಹ್ಮಾನುಭವಿಯಾಗೊ/ಮಂಕುತಿಮ್ಮ// ಎಂದು.
ಬದುಕಿನ ಪರಮಗಂತವ್ಯವೇ ಭಗವಂತನ ಇರುವಿಕೆಯ ಅನ್ವೇಷಣೆ.ಅದು ನಮ್ಮ ಮಣ್ಣಿನ ಕಣ್ಣಿಗೆ ದಕ್ಕುವುದೊ..? ಆದರೆ ಹೃದಯಕ್ಕೆ ಸಾಂತ್ವನವಂತೂ ದೊರೆಯುತ್ತದೆ…ಧ್ಯಾನದಲ್ಲಿ ಲೀನವಾದಾಗ….! ಅಪಾರಶಾಂತಿ ಸಮಾಧಾನಗಳನ್ನು ಪ್ರಸಾದಿಸುವ ಇಂತಹ ಧ್ಯಾನ ನಮ್ಮನ್ನು ಅರಿವಿನ ಸೋಪಾನದೆಡೆಗೆ ತಂದು ನಿಲ್ಲಿಸುವುದಂತೂ ಸುಳ್ಳಲ್ಲ.
*
ಅಮ್ಮ ಎಲ್ಲಿ ಹೋಗಿರಬಹುದು ಇಷ್ಟು ಹೊತ್ತು ? ಮನೆಯಲ್ಲಿ ಮಾತುಕತೆ. ಊರ ತುಂಬ ಬಂಧುಗಳು.’ಯಾರಾದರೊಂದಿಗೆ ಮಾತಿಗೆ ಸಿಲುಕಿರಬಹುದು’. ಮನೆಯವರ
ಅನಿಸಿಕೆ. ಆದರೆ ಅಮ್ಮ ನಡಿಗೆಗೆ ಹೋದವಳು ಕಳೆದು ಹೋದದ್ದು ಎಲ್ಲಿ ಎಂಬ ವಿಚಾರ ಅವರ ಅರಿವಿಗೆಲ್ಲಿ ಬರಬೇಕು. ಕತ್ತಲ ಚಾದರವನ್ನು ಹೊದಿಸುತ್ತಾ, ಆ ದಿನಮಣಿ ‘ವಿಶ್ರಾಂತಿಸಿ’ ಎಂದು ಕಿವಿಮಾತು ಹೇಳುತ್ತಾನೆ. ಪಡುವಣ ರಂಗಸಾಲೆಯಾಗುತ್ತದೆ. ಮುಗಿಲುಗಳು ಪಾತ್ರಗಳನ್ನು ಕುಣಿಸುತ್ತವೆ. ಆಹಾರವನ್ನರಸಿ ಹೋದ ಹಕ್ಕಿಗಳು ಮತ್ತೆ ಗೂಡಿಗೆ ಧಾವಿಸುತ್ತವೆ.
ಸಾಕು ಪ್ರಾಣಿಗಳು ಮನೆಯತ್ತ ಮರಳುತ್ತವೆ. ಕಾಡಿನ ಪ್ರಾಣಿಗಳು ತಮ್ಮ ಬೇಟೆಯ ಸನ್ನಾಹಕ್ಕೆ ತೊಡಗುತ್ತವೆ. ಆಗಸದಲ್ಲಿ ಚಂದ್ರ ಇಣುಕುತ್ತಾನೆ. ಚುಕ್ಕೆಗಳು ಕಣ್ಣು ಮಿಟುಕಿಸುತ್ತವೆ. ಗಾಳಿ ತನ್ನ ಶೀತಲತೆಯಿಂದ ದಣಿದ ಮೈಯನ್ನು ಸ್ಪರ್ಶಿಸಿ ಸಂತೈಸುತ್ತದೆ. ಕತ್ತಲಿನ ಆಗಸಕ್ಕೆ ಅದೇನೋ ವಿಶಿಷ್ಟ ಸೌಂದರ್ಯ ಅಡರಿಕೊಳ್ಳುತ್ತದೆ. ನೋಡುತ್ತಲೇ ನಡೆ ಮರೆತು ಮನೆ ಮರೆತು ಕಾಲವನ್ನು ಕೀಲಿಸಿ ಕತ್ತಲ ಮಡುವಿನಲ್ಲಿ ಮುಳುಗುತ್ತಾ ನಾನೂ ಕಪ್ಪಾಗಿ ಬಿಡುತ್ತೇನೆ. ಅಂಧಕಾರದಲ್ಲಿ ವಿಚಾರಗಳ ದೀಪಾ ಹಚ್ಚುತ್ತಾ ಈ ಪ್ರಕೃತಿಯ ನವನವೋನ್.
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಬದುಕನ್ನು ಹೂತು ಬಿಡಬೇಡಿ – (ಭಾಗ ೭)
- ಮರುಕಳಿಸದ ಸುಗಂಧ – (ಭಾಗ ೮)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೯)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೦)
- ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ ೧೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೫)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೬)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೭)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು- (ಭಾಗ – ೧೮)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೨೦)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೧)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೨)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೩)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೪)
- ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೫)
- ಶಿವದೇವಿ ಅವನೀಶಚಂದ್ರ– ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.
