ಮಕ್ಕಳ ಕೈಗೆ ಯಾವಾಗ ಮೊಬೈಲ್ ಸಿಕ್ಕಿತೋ ಯಾವ ಭಯವೇ ಇಲ್ಲದೆ ಮಕ್ಕಳು ಯಾರೋ ಆಡುವ ಆಟಕ್ಕೆ ಮರುಳಾಗಿ ತಮ್ಮ ಸಹಜ ಕ್ರೀಡಾ ಚಟುವಟಿಕೆಗಳಿಗೆ ತಿಲಾಂಜಲಿಯಿಡುತ್ತಿದ್ದಾರೆ. ಇದು ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಉಳಿದ ನೆನಪುಗಳು’ ಅಂಕಣದಲ್ಲಿ ಮೂಡಿ ಬಂದ ಮಕ್ಕಳ ಕುರಿತಾದ ಕಳಕಳಿ ಬರಹವನ್ನು ತಪ್ಪದೆ ಓದಿ…
ಅಯ್ಯೋ ದೇವ್ರೇ ಇದೊಂದು ಮಾತ್ರ ನಂಗೆ ಇಷ್ಟ ಇಲ್ಲದೆ ಇರೋ ಕೆಲಸ. ಕೆರೆಯಿಂದ ನೀರು ತಂದು ಗಿಡಗಳಿಗೆ ಹಣಿಸಬಹುದು ಎಷ್ಟಾದರೂ… ಮಣ್ಣು ಅಗೆದು ಪಾತಿ ಮಾಡಬಹುದು, ಗೊಬ್ಬರ ಹಾಕಬಹುದು, ಆದ್ರೆ ಈ ಕೆಲ್ಸಾ ಮಾತ್ರ ಕಷ್ಟ ಅಂದ್ರೆ ಕಷ್ಟ!.
*
ಶೋಭಾ…ಇನ್ನೂ ಆಲೋಚಿಸುತ್ತಲೇ ಇದ್ದಳು. ಇವತ್ತು ಹೊಲದ ತುಂಬಾ ಬೆಳೆದಿರೋ ನೆಗ್ಗಿಲು ಮುಳ್ಳು ಕೀಳೋ ಕೆಲಸ. ಹೊಲದ ಅವರೆ ಬಿತ್ತುವುದಂತೆ ಈ ಬಾರಿ. ಕ್ರಾಫ್ಟ್ ಪೀರಿಯಡ್ನಲ್ಲಿ ನಮಗೆ ನಿಗದಿ ಪಡಿಸಿರುವ ಕೆಲಸ. ಬಿಡು ಇವತ್ತಂತೂ ನಮ್ಮೆಲ್ಲರ ಕೈ ತೂತು ಬೀಳೋದೇ.. ಶಾಲೆಗೆ ಸಂಬಂಧಿಸಿದ ಸುತ್ತಲಿನ ಜಾಗದಲ್ಲಿ ಯರ್ರಾಬಿರ್ರಿ ಬೆಳೆದು ಪಂಥಾಹ್ವಾನ ನೀಡುತ್ತಿದ್ದ, ಮೂರು ಮುಖದ ನೆಗ್ಗಿಲು ಮುಳ್ಳಿನ ಗಿಡ ನೆನೆದು ಅಳುವಿನ ಜೊತೆಗೆ ಆಹ್ವಾನವನ್ನೂ ಒಟ್ಟಿಗೇ ನೀಡಿತ್ತು. ಅಳು, ಅದರ ಸೂಜಿಯಂತೆ ಮೊನಚಾದ ಮುಳ್ಳುಗಳಿಗೆ ಹೆದರಿ..ಏಕೆಂದರೆ ಕೈಗೆ ತಗುಲದಂತೆ ಗಿಡ ಕೀಳಲು ಸಾಧ್ಯವೇ ಇಲ್ಲ. ಮಣ್ಣೋ…
ಮಳೆನೀರು ಕಾಣದ ನೆಲ ಕಲ್ಲಿನಂತೆ ಗಟ್ಟಿಯಾಗಿದೆ.
ಫೋಟೋ ಕೃಪೆ : google
ಹೇಗಾದರೂ ಕಿತ್ತುಬಿಡೋಣವೆಂದರೆ ಮುಂದಿನ ಎರಡು ದಿನ ಮುಳ್ಳಿನ ಗಾಯದಿಂದ ಹಸ್ತ ಏನೂ ಮಾಡದೇ ಹತಾಶೆಯ ಸ್ಥಿತಿಯಲ್ಲಿರುತ್ತದೆ. ಬರವಣಿಗೆಯೇ ಕಷ್ಟ… ಮತ್ತೊಮ್ಮೆ ತನ್ನ ಮುದ್ದಾದ ಹಸ್ತಗಳನ್ನು ಅರಳಿಸಿ ನೋಡಿಕೊಂಡಳು ಶೋಭಾ. ಆಗಿನ ಮೂಲಶಿಕ್ಷಣ ಶಾಲೆಯಲ್ಲಿ ಎಲ್ಲವನ್ನೂ ಪ್ರಾಯೋಗಿಕವಾಗಿಯೇ ಕಲಿಯಬೇಕಿತ್ತು. ಹಾಗಾಗಿ ಮರಿ ರೈತರಾಗುವ ಭಾಗ್ಯ ಎಲ್ಲ ವಿದ್ಯಾರ್ಥಿಗಳಿಗೂ ದಕ್ಕುತ್ತಿತ್ತು!
*
‘ನಾಳೆ ಪರೀಕ್ಷೆಯಿದೆ ಓದಿಕೊಳ್ಳಬೇಕು, ಯಾರೂ ತೊಂದರೆ ಕೊಡಬೇಡಿ’ ತಾಯಿಯ ಎಚ್ಚರ. ನಗು ಬಂತು ಶೋಭಾಳಿಗೆ. ಬಾಲಕ ಉರು ಹೊಡೆಯುತ್ತಿದ್ದಾನೆ,
ಮೊಳಕೆ ಬರಿಸಿ ಬೀಜ ಬಿತ್ತುವ ವಿಧಾನವನ್ನು ಪುಸ್ತಕದಲ್ಲಿ!
‘ಅಮ್ಮಾ..ನಾಳೆಗೆ ಪ್ರಾಜೆಕ್ಟ್ ವರ್ಕ್ ರೆಡಿಯಾಗಬೇಕು. ಇಲ್ಲದಿದ್ದರೆ ಇಂಟರ್ನಲ್ ಪರೀಕ್ಷೆಯಲ್ಲಿ ಮಾರ್ಕ್ಸ್ ಕೊಡೋಲ್ಲ. ಹುಡುಕಿ, ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದಿಡು.’ ಪ್ರಾಜೆಕ್ಟ್ ವರ್ಕ್ ನೀಡುವ ಉದ್ದೇಶ ಇದೇನಾ?.
*
ಶೋಭಾಳ ಚಿತ್ತ ಹಲವಾರು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆದು ನಕ್ಕಿತು.
ಮದುವೆಯಾದ ಹೊಸದು. ರೈತ ಕುಟುಂಬ ಮುದ್ದಿನ ಮಗಳಿಗೆ ಪ್ರಾಶಸ್ತ್ಯವಿರುವ ಮನೆ. ಅವಳ ಕೈಕೆಸರಾಗದಂತೆ ಜತನ ಮನೆಮಂದಿಗೆಲ್ಲ. ಹೊಲ ಗದ್ದೆಗಳ ಕಡೆಗೆ ಗಮನ ಕೊಟ್ಟು ತಮ್ಮ ಜೀವನ ಉದ್ಧಾರವಾಗಿದ್ದೇನೂ ಇಲ್ಲ. ಚೆನ್ನಾಗಿ ಓದಲಿ. ಉನ್ನತ ಶಿಕ್ಷಣ ದೊರೆತರೆ ಈ ಬೇಸಾಯದ ಬದುಕಿನ ಬವಣೆಯಿಲ್ಲದೆ ಆರಾಮವಾಗಿ ಸರಕಾರೀ ಉದ್ಯೋಗ ಪಡೆದರೆ ಜೀವನ ಸರಾಗವಾಗುತ್ತದೆ.
ಎಲ್ಲರ ಒಟ್ಟಭಿಪ್ರಾಯ. ಆದರೆ ಸರ್ಕಾರಿ ನೌಕರಿಯಲ್ಲಿದ್ದು ಕೃಷಿಯನ್ನು ಪ್ರೀತಿಸುತ್ತಿದ್ದ ಶೋಭಾ ಇದನ್ನು ಒಪ್ಪುತ್ತಿರಲಿಲ್ಲ. ಬದುಕಿನಲ್ಲಿ ಕೃಷಿ ಒಂದು ಸುಂದರ ಅನುಭವ. ಅದು ಮನುಷ್ಯನಿಗೆ ನೆಲದ ಅಂತರಂಗದವನ್ನು ದರ್ಶನ ಮಾಡಿಸುವ ಆಪ್ತ ಸಾಧನ ಎಂಬ ಅಭಿಪ್ರಾಯ ಅವಳದು.
ಒಮ್ಮೆ ಊಟದ ಹಾಲಿನಲ್ಲಿ ಕುಳಿತು ಎಲ್ಲರೂ. ಕುಸುಲಕ್ಕಿ ಗಂಜಿ ಅನ್ನವನ್ನು ಊಟಮಾಡುವಾಗ ಕೇಳಿದಳು,’ ಅಮ್ಮಾ ಕುಸುಲಕ್ಕಿಯನ್ನು ನಮ್ಮ ಯಾವ
ಗದ್ದೆಯಲ್ಲಿ ಬೆಳೆಸುತ್ತೇವೆ?’
ಫೋಟೋ ಕೃಪೆ : google
ಮಣ್ಣಿನ ವಾಸನೆಯಿಲ್ಲದ ಎಲ್ಲರ ಬದುಕೂ ನಿಸ್ಸಾರವೇ..
*
ಅದೊಂದು ಸರಕಾರೀ ಶಾಲೆ! ಒಂದೊಂದು ಪಾತಿಯಲ್ಲೂ ತರಕಾರೀ ಗಿಡಗಳು. ಸುತ್ತ ಕಟ್ಟೆಯಲ್ಲಿ ಗಿಡ್ಡ ಜಾತಿಯ ಹೂವಿನ ಗಿಡಗಳು..ಇಡೀ ತೋಟದ ಆಕಾರವೇ ಭಾರತದ ನಕ್ಷೆ ! ಒಳಗೆ ರಾಜ್ಯಗಳ ಆಕೃತಿಗಳು..
ಹೊರಗೆ ಹಿಮಾಚ್ಛಾದಿತ ಬೆಟ್ಟಸಾಲುಗಳ ಹೋಲುವ ಹಸಿರಿನ ಮೇಲೆ ಹಿಮದ ಛಾವಣಿಯಂತೆ ಕಾಣಿಸುವ ಬಿಳಿ ಬಣ್ಣದ ಹೂಬಿಡುವ ಗಿಡಗಳ ಸಾಲು. ಮೂರು ಕಡೆ ಸುತ್ತುವರಿದ ಸಾಗರದ ನೀಲಿ ಬಣ್ಣದ ಗಿಡಗಳ ಪರಿವೇಷ್ಟಿತ ಆವರಣ ಎಷ್ಟೊಂದು ಸುಂದರ!
ಶಾಲೆಯ ಅಂಗಳದಲ್ಲಿ ಪ್ರಾಯೋಗಿಕ ಭಾರತ ಮಂದಿರ.ಪುಳಕದೊಂದಿಗೆ ವಿದ್ಯಾರ್ಥಿಗಳಿಂದ ರಚನೆಯಾದ ಭಾರತ ರಾಷ್ಟ್ರ!
*
ಅಂದು ತರಗತಿಗೆ ಸುಣ್ಣ ಬಳಿಯಲಿಕ್ಕೆಂದು ಹೊರಾಂಗಣದಲ್ಲಿ ತರಗತಿಗಳನ್ನು ತೆಗೆದುಕೊಳ್ಳಲು ಸೂಚಿಸಲಾಯಿತು.
ಮರದ ನೆರಳಿನ ತಂಪಿನಲ್ಲಿ ಗುರುಕುಲ ಮಾದರಿಯ ಶಿಕ್ಷಣದ ಅನುಭವ!ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕುದುರೆ ಕಣ್ಣಿಗೆ ಪಟ್ಟಿ ಹಾಕಿದಂತೆ
ಒಂದೇ ಹಾದಿಯಲ್ಲಿ ಸಾಗುತ್ತಿದ್ದ ದಿನಚರಿಗೆ ಅಂದು ಗರಿಮೂಡಿತ್ತು.ವೃಕ್ಷದ ವಿಚಾರಗಳನ್ನು ಬೋಧಿಸುವ ಅವಕಾಶ ! ಅಲ್ಲಿ ಸುತ್ತುಮುತ್ತಲಿನ ಮರಗಿಡ ನೆಲದ ಹುಲ್ಲು ಕುರುಚಲುಗಳೇ ಅಂದಿನ ಪಠ್ಯವಸ್ತು! ಮರವೇರುತ್ತಿದ್ದ ಅಳಿಲು ರಾಮಾಯಣದ ಸೇತುಬಂಧವನ್ನು ನೆನಪಿಸಿದರೆ,ಹಾರಾಡುವ ಚಿಟ್ಟೆಗಳು ‘ಪಾತರಗಿತ್ತಿ ಪಕ್ಕಾ ನೋಡಿದೇನ ಅಕ್ಕಾ!’ಎಂಬಂತಹ ಪರಿಸರಗೀತೆಗಳ ತಂತಿ ಮೀಟಿದುವು.
ಕುವೆಂಪುರವರ,’ ನನ್ನ ಗೋಪಾಲ’ ಮಕ್ಕಳ ನಾಟಕದ ಪ್ರಹಸನವೂ ನಡೆಯಿತು.
‘ಹಕ್ಕಿ ಹಾರುತಿದೆ ನೋಡಿದಿರಾ’, ಎನ್ನುತ್ತಾ ಆಗಸದೆದೆಯಲಿ ದೇವರು ರುಜುಮಾಡುತ್ತಿರುವ ಬಲಾಕ ಪಕ್ಷಿಗಳ ಪಂಕ್ತಿಯ ಸೊಬಗನ್ನು ತೋರಿಸಿ, ಕಾಲದ ಹಕ್ಕಿಗೆ ಅದನ್ನು ಹೋಲಿಸುವ ಪ್ರಕ್ರಿಯೆಯೂ ನಡೆಯಿತು. ಕವಿತ್ವ, ವೈಚಾರಿಕತೆ, ಪ್ರಕೃತಿ ವೀಕ್ಷಣೆ, ಹಕ್ಕಿ ಉಡ್ಡಯನದ ಸೊಗಸನ್ನು ಸವಿಯುವ ರಸಘಳಿಗೆ ಹೀಗೇ ಮಕ್ಕಳೊಂದಿಗೆ ಆಪ್ತತೆ ಬೆಸೆಯುವ ಸಂದರ್ಭ ಎಂತಹ ಪುಳಕವನ್ನು ತಂದುಕೊಡುತ್ತದಲ್ಲವೇ ಶಿಕ್ಷಕರಿಗೆ!
ಅಷ್ಟೇ ಅಲ್ಲ, ಅದನ್ನೂ ಮೀರಿ ಪಠ್ಯಕ್ಕೆ ಸಂಬಂಧಿಸಿದಂತೆಯೇ ಆಗಸದಲ್ಲಿ ಹಾರುವ ಹಕ್ಕಿಗಳು ಅವು ವಿಮಾನಗಳ ಸಂಶೋಧನೆಗೆ ಪ್ರೇರಣೆಯಾಗಿದ್ದು,ರೈಟ್ ಸಹೋದರರು,ಅದರ ಇತಿಹಾಸವನ್ನು ಪ್ರಸ್ತಾಪಿಸಲು ಅನುಕೂಲವಾಯಿತು ಈ ಬಯಸದೇ ಬಂದ ಸದವಕಾಶದಿಂದ…..!
‘ಒಂದು ಮರದ ಕೊಂಬೆಯ ಮೇಲೆ ಹತ್ತು ಹಕ್ಕಿಗಳು ಕುಳಿತಿವೆ.
ಬೇಡನೊಬ್ಬ ಬಾಣ ಬಿಟ್ಟರೆ ಒಂದು ಹಕ್ಕಿ ಕೆಳಗೆ ಬೀಳುತ್ತದೆಕೊಂಬೆಯಲ್ಲಿ ಉಳಿದವುಗಳೆಷ್ಟು?’ಎಂಬ ಪ್ರಶ್ನೆಗೆ,’ಒಂಭತ್ತು’ ಎಂಬ ದಡ್ಡ ಉತ್ತರ ಬರಲಿಲ್ಲ ಅಂದು! ಸಣ್ಣ ಕಲ್ಲೊಂದನ್ನು ಬೀಸಿ ಕೊಂಬೆಗೆ ಎಸೆದಾಗ ಅಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋಗಿದ್ದನ್ನು ಕಂಡು ಅಲ್ಲಿ ಉಳಿಯಲು ಹಕ್ಕಿಗಳೇ ಇರಲಿಲ್ಲ.
ಜೀವಭಯದಿಂದ ಎಲ್ಲವೂ ಹಾರಿಹೋಗಿದ್ದುವಲ್ಲ! ಎಂಬಂತಹ ಅನುಭವ ಜನ್ಯ ಉತ್ತರ! ಚಿಂತನೆಗೆ ಆಸ್ಪದವೇ ಇಲ್ಲದಂತೆ ಲೆಕ್ಕದಲ್ಲಿ ಮಹಾಪ್ರಚಂಡರೆಂಬ ಆತ್ಮವಿಶ್ವಾಸದಲ್ಲಿ ‘ಥಟ್’ ಅಂತ ಗುರುಗಳಿಗೆ, ‘ಒಂಭತ್ತು’ ಎಂದು ಉತ್ತರಿಸಿ ಮೂರ್ಖಳಾಗಿದ್ದ ಸನ್ನಿವೇಶ ನೆನೆದು ನಗುಬಂತು ಶೋಭಾಳಿಗೆ…
ಚಿಂತನೆಯ ಮಂಥನವಿಲ್ಲದ ಪ್ರತಿ ವಿಷಯವೂ ದಡ್ಡತನವನ್ನೇ ಪ್ರದರ್ಶಿಸಿಬಿಡುತ್ತದೆ. ಮುಂದೆ ಉತ್ತರ ತಿಳಿದಿದ್ದರೂ ಅದನ್ನು ಪ್ರಕಟಿಸುವ ಸಂದರ್ಭ ಬರುವವರೆಗೂ ತಾಳ್ಮೆಯನ್ನು ಪ್ರದರ್ಶಿಸುತ್ತಿದ್ದ ಗುಣ, ಇಂತಹ ಘಟನೆಗಳಿಂದಲೇ ತನ್ನ ಸ್ವಭಾವದ ಮುಖ್ಯಭಾಗವಾದದ್ದು ಸುಳ್ಳಲ್ಲ.
ಏನೇ ಆಟ ಆಡುತ್ತಿದ್ದರೂ ಶಿಕ್ಷಕರ ಬೋಧನೆಗೆ ಕಿವಿಗೊಡುತ್ತಿದ್ದ ತನ್ನ ಮಗನ ವಿಷಯ ಗ್ರಣಹ ಸಾಮರ್ಥ್ಯ ಅವನು ಪಠ್ಯ ವಿಮುಖನಾಗಿದ್ದಾನೆಂಬ ಸಂದೇಹದಿಂದ, ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ, ‘ಥಟ್’ ಅಂತಾ ನಿಖರವಾದ ಉತ್ತರ ಕೊಡುವ ಅವನನ್ನು ಶಿಕ್ಷಕರು ಅಭಿಮಾನದಿಂದ ಕೊಂಡಾಡುತ್ತಿದ್ದುದು ಸುಳ್ಳಲ್ಲ.
ಏಕೆಂದರೆ ಸದಾ ಕಾಲದ ಅವನ ಪ್ರಫುಲ್ಲತೆಗೆ ಅವನ ಕ್ರೀಡಾಸಕ್ತಿ, ಕೌತುಕ ಪ್ರವೃತ್ತಿ ಹಾಗೂ ಅದ್ಭುತ ಗ್ರಹಣ ಸಾಮರ್ಥ್ಯವೂ ಕಾರಣವಾಗಿತ್ತು. ಹೀಗೆ ಉರು ಹೊಡೆದು ಉತ್ತೀರ್ಣರಾಗುವ ಮನೋಭಾವದ ವಿದ್ಯಾರ್ಥಿಗಳ ನಡುವೆ, ಸಂದೇಹಗಳನ್ನು ನಿವಾರಿಸಿಕೊಳ್ಳಲು ಸದಾ ತುಡಿಯುವ ವಿದ್ಯಾರ್ಥಿಗಳು
ಶಿಕ್ಷಣದ ನೈಜ ಉದ್ದೇಶಗಳನ್ನು ಸಾರ್ಥಕಗೊಳಿಸಿಬಿಡುತ್ತಾರೆ.
ಗುರುಗಳ ನಿರಂತರ ಅಧ್ಯಯನ ಶೀಲತೆಯನ್ನು ಜಾಗೃತಗೊಳಿಸುತ್ತಾರೆ.
*
ತೇಲುವ ಮೋಡಗಳು ಏಕೆ ಹಗುರವಾಗಿರುತ್ತವೆ,
ಏಕೆ ಅವುಗಳ ಆಕಾರ ಆಗಾಗ ಬದಲಾಗುತ್ತಿರುತ್ತದೆ?
ಕಪ್ಪು ಮೋಡ ಬಂದಾಗಲೇ ಮಳೆ ಸುರಿಯುವುದೇಕೆ?
ಎಷ್ಟೊಂದು ವಿಷಯಗಳನ್ನು ಮಕ್ಕಳ ಚಿತ್ತಕ್ಕೆ ಎರೆಯಬಹುದು
ಪ್ರಕೃತಿಯ ಪ್ರಾತ್ಯಕ್ಷಿಕೆಗಳಿಂದ!
ಚೈತನ್ಯದಾಯಿಯೂ ಪ್ರಾಯೋಗಿಕವೂ, ಸ್ಪಷ್ಟ ಹಾಗೂ ಜ್ವಲಂತವೆನಿಸುವ, ಆಪ್ತವಾದ ಇಂತಹ ಶಿಕ್ಷಣ ಬೋಧನೆಯ ಯಶಸ್ಸಿಗೆ ಮೆಟ್ಟಿಲುಗಳಾಗುತ್ತವೆ.
ಜೀವನದ ಕಡೆಯ ಹಂತದವರೆಗೂ ಕಲ್ಲುಸಕ್ಕರೆಯ ಚಪ್ಪರಿಕೆಗಳಾಗುತ್ತವೆ!
ಪ್ರಕೃತಿ ಸಾನ್ನಿಧ್ಯಕ್ಕೆ ತುಡಿಯುವ ಕನವರಿಕೆಗಳಾಗುತ್ತವೆ.
ಅಷ್ಟೇ ಅಲ್ಲ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆಗೆ ಬಹುಮೂಲ್ಯ ಕಾಣಿಕೆಗಳಾಗಿ ಸಲ್ಲುತ್ತವೆ.ಆಟದ ಬಯಲೋ ಸದಾ ಉಲ್ಲಾಸದಿಂದ ಮಿಡಿಯುವ ಜೀವನೋತ್ಸಾಹದ ಆಡುಂಬೊಲ! ತನ್ನೆಲ್ಲ ಒತ್ತಡಗಳಿಂದ ಪಾರುಗೊಳಿಸಿ ಹಗುರಾಗಿಸುವ ಬಯಲು ದೇವಾಲಯ!
ಮಕ್ಕಳು ಅಲ್ಲಿ ವಿಹರಿಸಬೇಕು ಅರಿವನ್ನು ವಿಸ್ತರಿಸಿಕೊಳ್ಳಬೇಕು.
*
ಆದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರಿಗೆಲ್ಲಿದೆ ವೇಳೆ? ಬೆಳಗಾಯಿತೆಂದರೆ ದೂರದ ಶಾಲೆಗಳಿಗೆ ತೆರಳುವ ಅವಸರ. ಈಗಂತೂ ನಡಿಗೆಯ ಶ್ರಮ ಖುಷಿ ಎರಡೂ ಇಲ್ಲ. ಯಾವುದೋ ವಾಹನದ ಗರ್ಭದಲ್ಲಿ ತನ್ನನ್ನು ತುರುಕಿಕೊಂಡು ಶಾಲೆ ತಲುಪುವಾಗಲೇ ಆಯಾಸ. ಸರಿಯಾಗಿ ತಿಂದು ಬರದೆ ಚುರುಗುಟ್ಟುವ ಹೊಟ್ಟೆ. ನಾಲ್ಕು ಗೋಡೆಗಳ ಸೆರೆಯೊಳಗೆ ಶಿಕ್ಷಣದ ಹೂವು ಅರಳುವುದೆಲ್ಲಿ? ಮಾಗುವ ಮೊದಲೇ ಹಣ್ಣಾಗಿಸುವ ಅವಸರದಲ್ಲಿ ,ಅದರಲ್ಲಿ ರಸವಂತಿಕೆ ಒಸರುವ ಮೊದಲೇ ಕಿತ್ತು ಹಣ್ಣಾಗಿಸುವ ತಾಕಲಾಟದಲ್ಲಿ ಲೋಪವಾಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲಿಯೋ, ಪ್ರಸ್ತುತ ನಾವೇ ಸೃಷ್ಟಿಸಿಕೊಂಡಿರುವ ಪ್ರತಿಷ್ಠೆಯ ಜಾಲದಲ್ಲಿಯೋ..ಅಥವಾ ಸಹಜ ಶಿಕ್ಷಣದ ಅವಕಾಶಗಳಿದ್ದರೂ ಮಗುವಿನ ಆಕಾಂಕ್ಷೆಯನ್ನು ಪರಿಗಣಿಸದೆ ನಮ್ಮದೇ ಕನಸುಗಳನ್ನು ಈಡೇರಿಸಿಕೊಳ್ಳುವ ಅವಸರದಲ್ಲಿ ಒತ್ತಡದ ಶಿಕ್ಷಣಕ್ಕೆ ಮಕ್ಳಳನ್ನು ನೂಕುವ ನಮ್ಮ ಅವಿವೇಕದಲ್ಲಿಯೋ….
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)
ತರಗತಿಯೊಳಗಿನ ಶಿಕ್ಷಣವೇ ನಿಜವಾದ ಶಿಕ್ಷಣವಲ್ಲ. ನೈಜ ಕಲಿಕೆ ಏಕತಾನತೆಯಿಂದ ಮುಕ್ತವಾಗಿರಬೇಕು. ನಿಜವಾದ ಶಿಕ್ಷಣದ ರಂಜನೆ, ಜೀವಂತಿಕೆ ಮಿಡಿಯುವ ಹೊರವಲಯದಲ್ಲಿ ದೊರೆಯುತ್ತದೆ.
*
ಆದರೆ ಸರ್ಕಾರವೇ ಕೊರೋನಾ ವೇಳೆಯಲ್ಲಿ ನೀಡಿರುವ ಮುಕ್ತ ಅನುಮತಿಯಿಂದಾಗಿ ಮೊಬೈಲ್ ನ ಬಳಕೆ ಸರ್ವಾಂತರ್ಯಾಮಿಯಾಗಿದೆ. ನಿಷಿದ್ಧದ ಭಯವೇ ಇಲ್ಲದೆ ಮಕ್ಕಳು ತಮ್ಮ ಆಟದ ಬಯಲನ್ನೂ ಅದರೊಳಗೆ ತುರುಕಿ, ಯಾರೋ ಆಡುವ ಆಟಕ್ಕೆ ಮರುಳಾಗಿ ತಮ್ಮ ಸಹಜ ಕ್ರೀಡಾ ಚಟುವಟಿಕೆಗಳಿಗೆ
ತಿಲಾಂಜಲಿಯಿಡುತ್ತಿದ್ದಾರೆ. ಶರೀರಕ್ಕೆ ಸರಿಯಾದ ಕಸರತ್ತಿಲ್ಲದೆ ಚಿಕ್ಕವಯಸ್ಸಿನಲ್ಲೇ ಅವರನ್ನುಹಲವು ದೈಹಿಕ ತೊಂದರೆಗಳು ಹಿಂಸಿಸಲಾರಂಭಿಸಿವೆ. ಧಾರಣ
ಶಕ್ತಿಯ ಕೊರತೆಯಿಂದಾಗಿ ಆಗಾಗ ವೈದ್ಯರಲ್ಲಿಗೆ ತೆರಳುವ ಅನಿವಾರ್ಯತೆ ಉಂಟಾಗುತ್ತಿದೆ.
*
ಇಂದಿನ ಶಾಲಾ ದಿನಚರಿಯಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳುವುದು ನಿಗದಿತ ಪಠ್ಯವನ್ನು ಪೂರೈಸುವ ಒತ್ತಡದಲ್ಲಿ ಕಷ್ಟಸಾಧ್ಯವೆ ಸರಿ. ಸರ್ಕಾರಿ ಶಾಲೆಗಳಲ್ಲಿಯೂ ವಿಶಾಲವಾಗಿದೆ, ಮೈದಾನವಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿದೆ ಮಕ್ಕಳ ಕ್ರೀಡಾ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಹೇಗೋ ಆಗುವುದಕ್ಕೂ ಸ್ಪರ್ಧೆಗಳಿಗಾಗಿ ತರಬೇತಿ ಪಡೆಯುವುದಕ್ಕೂ ಬಹಳ ಅಂತರವಿದೆ.
ಆದರೆ ಪೋಷಕರು ತಮ್ಮ ಮಕ್ಕಳ ಮನಸ್ಸನ್ನು ಪ್ರಫುಲ್ಲವಾಗಿಸುವ ಇಂತಹ ಸಂದರ್ಭಗಳನ್ನು ಖಂಡಿತಾ ಸೃಷ್ಟಿಸಿಕೊಳ್ಳಬಹುದು. ಹೊರ ಸಂಚಾರ, ಪ್ರವಾಸ ಇತ್ಯಾದಿಗಳ ಉದ್ದೇಶದಲ್ಲಿ ಮಗುವಿನ ಅರಿವನ್ನು ವಿಸ್ತರಿಸುವ ಪರಿ ತಂದೆತಾಯಿಯರ ಆಸಕ್ತಿಯಾಗಬೇಕು. ಆಗ ಮಾತ್ರ ಮಕ್ಕಳೊಡನೆ ಮಧುರ ಬಾಂಧವ್ಯವೂ ವೃದ್ಧಿಸುತ್ತದೆ. ನಮ್ಮ ದಿನಗಳಲ್ಲೂ ಬಣ್ಣ ತುಂಬಿಕೊಳ್ಳುತ್ತದೆ. ದೇಶಕ್ಕೂ ಒಬ್ಬ ಪ್ರಜ್ಞಾವಂತ ಪ್ರಜೆಯನ್ನು ಕಾಣಿಕೆಯಾಗಿ ಕೊಟ್ಟ ಕೃತಾರ್ಥತೆ ನಮ್ಮದಾಗುತ್ತದೆ.
*
ಸಾಮಾನ್ಯ ಶಿಕ್ಷಣವೇ ಸರ್. ಎಂ. ವಿಶ್ವೇಶ್ವರಯ್ಯ, ಡಾ. ಎ. ಪಿ. ಜೆ ಅಬ್ದುಲ್ ಕಲಾಂ ರಂತಹ ಮಹಾನ್ ಮುತ್ಸದ್ದಿಗಳನ್ನೂ ದೇಶಪ್ರೇಮಿಗಳನ್ನೂ ಸಮಾಜಕ್ಕೆ ಕಾಣಿಕೆಯಾಗಿ ನೀಡಿದೆಯಲ್ಲವೇ..
‘ಶ್ರೀ ಸಾಮಾನ್ಯವೇ ಭಗವದ್ಮಾನ್ಯಂ……. ಜಗನ್ಮಾನ್ಯಂ’ ಎಂದು ಉದ್ಗರಿಸಿದ ಕವಿ ಕುವೆಂಪುರವರಂತಹ ಹಲವು ವಿದ್ವತ್ಪೂರ್ಣ ಕವಿಗಳೂ ಶಿಕ್ಷಣವೇತ್ತರೂ ಕಂಡ ಕನಸನ್ನು ನನಸಾಗಿಸುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಾಗ ಮಾತ್ರ ಇಂತಹ ಶಿಕ್ಷಣದ ಅರ್ಥವಂತಿಕೆ ಫಲಿಸಬಹುದೇನೋ.. ಅಂತಹ ದಿನಗಳು ಬಹುಬೇಗ ಬರಲಿ..
‘ಶಿಕ್ಷಣವನ್ನು ಶಕ್ತಿ’ಯಾಗಿ ಪರಿಗಣಿಸುವ ವಿಚಾರವಂತರೇ ಆಡಳಿತಗಾರರಾಗಲಿ ಎಂಬ ಹಂಬಲ ನನ್ನದು.
ಬಾಲ್ಯದ ಈ ಅನುಭವಗಳ ಬುತ್ತಿ ನಮ್ಮನ್ನು ಎಂತಹ ಸಂದರ್ಭಗಳಲ್ಲೂ ಧೃತಿಗೆಡದಂತೆ ಮುನ್ನಡೆಸುತ್ತವೆ ಎಂಬುದಕ್ಕೆ, ಕೊರೋನಾ ಮಾರಿ ನಗರವಾಸಿಗಳು, ಕೈತೋಟಗಳಲ್ಲಿ ಸೊಪ್ಪು ತರಕಾರಿ, ಹಣ್ಣಿನ ಗಿಡಗಳು ಔಷಧೀಯ ಸಸ್ಯಗಳು, ಗಿಡ ಮೂಲಿಕೆಗಳು ಇತ್ಯಾದಿಗಳನ್ನು ಬೆಳೆಸಿ, ತಾವೂ ರಾಸಾಯನಿಕ ಮುಕ್ತ, ಪೌಷ್ಟಿಕ ಆಹಾರವನ್ನು ಮನೆಯಲ್ಲಿಯೇ ತಯಾರಿಸಲು ಸಾಧ್ಯವಾಗಿದ್ದು. ಆ ಹವ್ಯಾಸ ಉಪಯುಕ್ತತೆಯ ಜೊತೆಗೇ ಖುಷಿಯ ನಿರಾಳತೆಯನ್ನೂ ಪ್ರಸಾದಿಸಿದ್ದು ಸುಳ್ಳೇ?.
*
ಮಕ್ಕಳ ಮೃದು ಹಸ್ತ ಇರಿಯುವ ನೆಗ್ಗಿಲು ಮುಳ್ಳುಗಳನ್ನೂ ನಿವಾರಿಸಲು ಸಿದ್ಧವಾಗಿರಬೇಕು. ಬೆರಳ ತುದಿಯ ಕುಶಲ ತಂತ್ರಜ್ಞಾನದ ಲಾಭವನ್ನೂ ಪಡೆದುಕೊಳ್ಳಲು ಸಿದ್ಧವಾಗಿರಬೇಕು. ಕನಸುಗಳನ್ನೂ ಕಾಣಬೇಕು. ಅವುಗಳನ್ನು ಈಡೇರಿಸಲು ಸಾಧನೆಯನ್ನೂ ಕೈಗೊಳ್ಳಬೇಕು.
ಹಕ್ಕಿ ಉಡ್ಡಯನವನ್ನು ಆನಂದಿಸುತ್ತಾ ಕಲ್ಪನೆಯ ಬೆನ್ನೇರಿ ಬೇಕು. ನೆಲದ ನೆಲೆಯಿಂದ ಜಿಗಿದು ಆಕಾಶಯಾತ್ರಿಯಾಗುವ ಅರ್ಹತೆಯನ್ನೂ ಗಳಿಸಿಕೊಳ್ಳಬೇಕು. ‘ವಜ್ರಾದಪಿ ಕಠೋರಾನಿ ಕೋಮಲಾನಿ ಸುಮಾದಪೀ’ ಎಂಬಂತೆ ‘ಕಲ್ಲಾಗಿರಬೇಕು ಕಠಿಣ ಭವ ತೆರೆಯೊಳಗೆ…. ಬೆಲ್ಲವಾಗಿರಬೇಕು ಬಲ್ಲವರೊಳಗೆ…’ ಎಂಬ ದಾಸವಾಣಿಯ ಆಶಯದಂತೆ ಶಿಕ್ಷಣವು ಮಾನವೀಯ ಗುಣಸಂಪನ್ನತೆಯನ್ನು ಎರೆದಾಗ ನೆಲದ ಅಂತರಂಗವನ್ನು ಅರಿಯಲು ಸಹಕರಿಸಿದಾಗ ಮಾತ್ರ ಬದುಕಿಗೆ ನಿಜ ಅರ್ಥ ಮೂಡುತ್ತದೆ.
***********
ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು ಹಿಂದಿನ ಸಂಚಿಕೆಗಳು :
- ಶಿವದೇವಿ ಅವನೀಶಚಂದ್ರ