ಕತ್ತಲಲ್ಲೂ ಕಾಡನ್ನು ಸುತ್ತುವ ಅವಕಾಶ, ಅದೂ ಅಪ್ಪ ಹೇಳುವ ದೆವ್ವದ ಕಥೆಗಳಿಗೆ ರೋಮಾಂಚನವಾಗುತ್ತಿತ್ತು, ಅಪ್ಪನ ನೆನಪಿನ ಕೋಶದಲ್ಲಿ ! ಬ್ರಿಟಿಷ್ ಆಡಳಿತದ ಕಾಲದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅಪ್ಪ ತುಂಬಿಕೊಂಡ ಅನುಭವಗಳಿಗೆ ಸಾಟಿಯೇ ಇರಲಿಲ್ಲ. ಜೀವನದ ತಮ್ಮ ಅನುಭವದ ಪುಟಗಳನ್ನು ಓದುಗರ ಮುಂದೆ ಸುಂದರವಾಗಿ ತೆರೆದಿಡುತ್ತಿರುವ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ …
ರಾತ್ರಿ ನೀರವ… ಬಹುಶಃ ಆ ವೇಳೆಯಲ್ಲಿ ನಾವಿಬ್ಬರೇ ನಿಶಾಚರಿಗಳೇನೋ..ಎಂಬಂತೆ ಹಂಗು ತೊರೆದ ಪ್ರಕೃತಿ! ಅಲ್ಲಲ್ಲಿ ಜೀರುಂಡೆಗಳ ಸದ್ದು ಬಿಟ್ಟರೆ…ಒಮ್ಮೊಮ್ಮೆ ಆ ಕತ್ತಲೆಯ ಮಹಾಮಡುವಿಗೆ ಮಾತಿನ ಕಲ್ಲು ಬೀರುವುದು ನಾವಿಬ್ಬರೇ..ಅದೂ..ತೀರಾ ಅಗತ್ಯವಾಗಿದ್ದರೆ ಮಾತ್ರ… ಬರೀ ಚೂರುಪಾರು ಸಪ್ಪಳ ಒಣಎಲೆಗಳ ಮೆಟ್ಟಿದಾಗ…

ಫೋಟೋ ಕೃಪೆ : google
‘ಮಗಾ…ಇಲ್ಲೇ ಇರು, ಹೆದರಬೇಡ. ಈಗ ಬಂದೆ’….ಎನ್ನುತ್ತಾ ಮಾತು ಮುಗಿಸುವ ಮೊದಲೇ ದಟ್ಟ ಪೊದೆಯೊಳಗೆ ನುಗ್ಗಿ ಬಿಟ್ಟಿದ್ದರು ಅಪ್ಪ. ಒಂಭತ್ತು ವರುಷದ ಮಗಳನ್ನು ಪೊದೆಯ ಹೊರಗೇ ನಿಲ್ಲಿಸಿ, ಅವರು ತನ್ನಿಂದ ದೂರ…ದೂರ…ದೂರ ಸರಿಯುತ್ತಿರುವುದನ್ನು ಸೂಚಿಸುತ್ತಿದ್ದ…ಮಂದವಾಗುತ್ತಿರುವ ಅವರ ಬೂಟುಗಾಲಿನಡಿಯ ಸಪ್ಪಳ…ಜೊತೆಗೇ….ತಲೆಗೆ ಕಟ್ಟಿದ್ದ ಲೈಟಿನಿಂದ ಹೊರ ಸೂಸುತ್ತಿದ್ದ….ಮಂದ ಪ್ರಕಾಶವೂ!
*
ನೋಡುತ್ತಲೇ ಇದ್ದೆ. ಈ ನಿರ್ಗಮನ ಇಂದ್ರಿಯ ವೇದ್ಯವಾಗುವವರೆಗೂ…ನಿಧಾನವಾಗಿ…ಬೀಸಿ ಬಂದ ಕುಳಿರ್ಗಾಳಿ ಮೈಯನ್ನು ತಟ್ಟಿ ಎಚ್ಚರಿಸಿತು. ಒಂದೊಂದೇ ಇಂದ್ರಿಯ ತಾನಿರುವ ಸ್ಥಳವನ್ನು ನಿರ್ದೇಶಿಸುತ್ತಾ…ಅಲ್ಲಲ್ಲಿ ಆ ಅರಣ್ಯದ ಮೌನವನ್ನು ಸೀಳುವ ಜೀರುಂಡೆಗಳ ಕಿವಿಗಡಚಿಕ್ಕುವ ಶಬ್ದವನ್ನು ಆಲಿಸತೊಡಗಿತ್ತು ಕರ್ಣದ್ವಯ! ಗಿಲಿಕೆಯಾಡಿಸಿದಂತೆ ಮೆಲ್ಲ ಮೆಲ್ಲ ಗಲಗಲಿಸುತ್ತಿದ್ದ ತರುಕೊಂಬೆಗಳು! ದೂರದಲ್ಲೆಲ್ಲೋ ಹೆದರಿಸುವಂತೆ ಧ್ವನಿ ಹೊರಡಿಸುತ್ತಿದ್ದ ಗೂಬೆಯ ಓಡಾಟ.
ಎಲ್ಲೋ ಒಂದು ಪ್ರಾಣಿ ಠಣ್ಣನೆ ತನ್ನ ಹಿಂದಿನಿಂದ ಜಿಗಿದೋಡಿದಂತಾಯಿತು. ಬಹುಶ: ಅದರ ವೇಗವನ್ನು ಆಲಿಸಿದರೆ ಮೊಲವೇ ಇರಬೇಕು… ಏಕೋ ಒಳನುಗ್ಗಿದ ಅಪ್ಪ ಹೊರಬರುವ ಸೂಚನೆ ಕಾಣದಾಗ…ಅಮಂಗಳದ ಕಲ್ಪನೆಯೊಂದು ಸಣ್ಣಗೆ ಮೂಡಿತು. ಅಯ್ಯೋ ಈ ನಿಶೆಯಲ್ಲಿ ಎಂತಹ ಕ್ರೂರಮೃಗಳೆಲ್ಲ ಸಂಚರಿಸುತ್ತಿರಬಹುದು. ಒಂದು ವೇಳೆ ಅಪ್ಪನಿಗೇನಾದರೂ ಆದರೆ….ದೇವರೇ ಏನೂ ಆಗದಿರಲಿ ಎಂದು ಮೊರೆಯಿಡಲು ಆಗಸಕ್ಕೆ ಮುಖಮಾಡಿದೆ. ಆಹಾ.. ನಕ್ಷತ್ರ ಖಚಿತ ಆಗಸ ಎಷ್ಟು ಸುಂದರವಾಗಿದೆ.

ಫೋಟೋ ಕೃಪೆ : google
ಫಳಫಳಿಸುವ ಆ ನಕ್ಷತ್ರಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳುವಂತಿದ್ದರೆ… ಎಷ್ಟೊಂದು ದೀಪಗಳು ಈ ಆಗಸದ ಎದೆಯಲ್ಲಿ..? ಎಣಿಸಲೆ?..ಒಂದು ,ಎರಡು..ನೂರು….ಅಯ್ಯೋ ಎಣಿಸಿದರೆ ತಪ್ಪುತ್ತಿದೆ ಮತ್ತೆ ಮತ್ತೆ..ಅಮ್ಮ ಹಾಡುತ್ತಿದ್ದ ,’ಅಗಣಿತ ತಾರಾಗಣ’ ಇದೇನಾ…ಅದೋ ಅಲ್ಲಿ…ಬಾನಂಚಲ್ಲಿ ಫಳಫಳಿಸ್ತಾ ಇರೋ ತಾರೆ…ಧ್ರುವ ನಕ್ಷತ್ರವೇ ಇರಬೇಕು..ಪಾಪ ಧ್ರುವ..ತನ್ನ ತಂದೆಯಿಂದಲೇ ತನ್ನಾಸೆಯನ್ನು ಈಡೇರಿಸಿಕೊಳ್ಳಲು ನಿರಾಕರಣೆಗೆ ಒಳಗಾದವನು.
ಅರಸನ ಮಗನಾದರೇನು.. ಪ್ರೀತಿಗೆ ಭಾಜನನಾಗಲು ಅದೃಷ್ಟವೂ ಇರಬೇಕಲ್ಲ.ಅಮ್ಮ ಹೇಳಿದಂತೆ ,’ದೇವರನ್ನು ಕೇಳಲು’ ಬಂದು ತಪಸ್ಸಿಗೆ ಕುಳಿತಾಗ ನನಗಿಂತಲೂ ಚಿಕ್ಕ ಹುಡುಗನೇ….. ಪುಟ್ಟ, ಶ್ಯಾಮಲೆಯ ಮನದ ತುಂಬಾ ಏನೇನೋ ಆಲೋಚನೆಗಳ ದಾಳಿ ನಡೆದಿರುವಾಗಲೇ….ಸರಸರನೆ ಹರಿಯುತ್ತಾ ಯಾವುದೋ ಒಂದು ಉರಗ ತನ್ನ ಕಾಲ ಬಳಿಗೇ ಬಂದಂತಾಯಿತು. ಟಾರ್ಚಿನ ಗುಂಡಿ ಒತ್ತುವುದು ಬೇಡವೆನಿಸಿ ಹಿಂದೆಯೇ ದೃಢವಾಗಿ ನಿಂತೆ ! ಕಣ್ಣರಳಿಸಿದರೂ ಕಣ್ಣು ಮುಚ್ಚಿದರೂ ಒಂದೇ ಅನಿಸುವಂತಿದ್ದ ಕತ್ತಲೆಯ ಮಡುವಿನಲ್ಲಿ ಬಹುಶ: ನನ್ನ ಚರ್ಮವೂ ಹೀಗೇ ಕಪ್ಪಾಗಿರಬಹುದೇನೋ ಎನಿಸಿ ಆ ಸನ್ನಿವೇಶದಲ್ಲೂ ತುಟಿಯಂಚಿನಲ್ಲಿ ಕಿರುನಗೆಯೊಂದು ತೇಲಿ ಹೋಯಿತು.
ಕೃಷ್ಣನೂ ಹೀಗೆಯೇ ಈ ಕಾಳರಾತ್ರಿಯ ಕಪ್ಪಿನಲ್ಲಿ ಮುಳುಗಿಯೇ ಕಪ್ಪಾಗಿರಬೇಕು. ಹೀಗೇ ಕತ್ತಲಲ್ಲಿ ಕಾಡಿನಲ್ಲಿ ಸುತ್ತುತ್ತಿದ್ದರೆ ಸಿಕ್ಕಿಯಾನು ಅವನು ಎಂದಾದರೂ..ತನಗೂ ಒಮ್ಮೆ..ಕೇಳಬೇಕು..ತನಗಾಗಿ ಒಂದು ಬಾರಿ ಕೊಳಲು ನುಡಿಸು ಕೃಷ್ಣಾ…ಎಂದು!
*
ಯಾವುದೋ ವಾಹನವೊಂದು ವೇಗವಾಗಿ ಇತ್ತ ಕಡೆಯೇ ಬಂದು ಅಷ್ಟು ದೂರದಲ್ಲಿದ್ದ ರಸ್ತೆಯ ಬದಿಯಲ್ಲಿ ನಿಂತಂತಾಯಿತು. ಯಾರೋ ನಾಲ್ಕೈದು ಮಂದಿ ಅಪರಿಚಿತರ ಮಾತು ಕೇಳಿಸಿತು. ಇಷ್ಟು ಹೊತ್ತೂ ಕತ್ತಲ ಜಗತ್ತನ್ನು ಒಗ್ಗಿಸಿಕೊಳ್ಳುತ್ತಿದ್ದ ತಾನು..ಈಗ ನಾಗರಿಕರಿಗೇ ಭಯಪಡುವಂತಾಗಿದೆಯಲ್ಲ. ಮೆಲ್ಲಮೆಲ್ಲನೆ ಪೊದೆಯ ಮರೆಗೆ ಸರಿದೆ. ಎಲ್ಲಿದ್ದರೋ…. ವಾಹನದ ದನಿ ಕೇಳಿ ಧಾವಿಸಿ ಬಂದ ಅಪ್ಪ, ‘ ತಡವಾಯಿತು ಮಗಾ..ಸಿಗಲಿಲ್ಲ..ತಪ್ಪಿಸಿಕೊಂಡು ಬಿಟ್ಟಿದೆ. ನೀನೇನೂ ಹೆದರಲಿಲ್ಲವಲ್ಲ’, ಎಂದು ಸಂತೈಸಿದಾಗ ನಿಟ್ಟುಸಿರು ಬಿಟ್ಟೆ.
ಎರಡು ಕಾರಣಕ್ಕಾಗಿ.. ಒಂದು, ಸತ್ತ ಸ್ಥಿತಿಯಲ್ಲಿ ಸಿಕ್ಕಿದ ಪ್ರಾಣಿ ತನಗೇನೂ ಸಂತಸದಾಯಕವಾಗಿರಲಿಲ್ಲ.
ಎರಡು, ಅಪ್ಪ ಅಂದು ಬೇಟೆಗಾಗಿ ಯಾವುದೇ ಕಾಡತೂಸನ್ನು ವ್ಯಯಿಸಿರಲಿಲ್ಲ. ಆದರೆ ನನ್ನ ಆಸೆ ಮಾತ್ರ ಈಡೇರಿತ್ತು. ಕತ್ತಲಲ್ಲೂ ಕಾಡನ್ನು ಸುತ್ತುವ ಅವಕಾಶ, ಅದೂ ಅಪ್ಪ ಹೇಳುವ ದೆವ್ವದ ಕಥೆಗಳಿಗೆ ರೋಮಾಂಚನಗೊಳ್ಳುತ್ತಾ, ಎಷ್ಟೊಂದು ಅನುಭವದ ಭಂಡಾರವಿತ್ತು. ಅಪ್ಪನ ನೆನಪಿನ ಕೋಶದಲ್ಲಿ ! ಬ್ರಿಟಿಷ್ ಆಡಳಿತದ ಕಾಲದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅಪ್ಪ ತುಂಬಿಕೊಂಡ ಅನುಭವಗಳಿಗೆ ಸಾಟಿಯೇ ಇರಲಿಲ್ಲ. ಹಾಗಾಗಿ ಮನೆಯ ಆವರಣದ ಬದುಕಿನ ಏಕತಾನತೆಗಿಂತಲೂ ಅವರ ಬದುಕಿನ ರೋಚಕ ಅನುಭವಗಳಿಗಾಗಿ ಕಾತರಿಸುತ್ತಾ
ಕಾಡಿನ ನಿಗೂಢ ಗರ್ಭದೊಳಗೆ ಪಡೆಯುವ ಅನುಭವ ತನಗೆ ಬಹಳ ಆಪ್ಯಾಯಮಾನವೆನಿಸುತ್ತಿತ್ತು.
*
ಅಪ್ಪನನ್ನು ಕಂಡು, ಕುತೂಹಲದಿಂದ ನಾವಿದ್ದಲ್ಲಿಗೇ ಬಂದು ತಲುಪಿದ ಕೋವಿಧಾರಿಗಳು, ಅಪ್ಪನೊಂದಿಗೆ ಮಾತಿನಲ್ಲಿ ತೊಡಗಿದರು. ಅವರೂ ಬೇಟೆಗಾಗಿಯೇ ಬಂದವರು. ನನ್ನನ್ನು ನೋಡಿ, ‘ಇಷ್ಟು ಚಿಕ್ಕ ಮಗುವನ್ನು ಕರೆತಂದಿದ್ದೀರಿ..ಹೆದರಿಕೊಳ್ಳುವುದಿಲ್ಲವೇ ಈ ಕಾಡಿನಲ್ಲಿ’ ಎಂದಾಗ,’ಅವಳ ಕೈಗೆ ಕೋವಿ ಕೊಟ್ಟು ನೋಡಿ, ಗುಂಡು ಹಾರಿಸಲಿಕ್ಕೂ ಬರುತ್ತದೆ ಅವಳಿಗೆ, ಹೆದರಿಕೆಯನ್ನೇ ಹೆದರಿಸುವಂತೆ ಬೆಳೆಸಿದ್ದೇನೆ’ ಅವಳನ್ನು ಎನ್ನುತ್ತಾ…ಗಂಡುಡುಗೆಯಲ್ಲಿದ್ದ ನನ್ನ ಕಡೆ ಅಭಿಮಾನದಿಂದ ನೋಡಿದಾಗ, ಅಲ್ಲಿದ್ದವರೆಲ್ಲ ಟಾರ್ಚ್ ಬೆಳಕು ಬಿಟ್ಟು ನನ್ನ ಮುಖದತ್ತ ದೃಷ್ಟಿ ಹಾಯಿಸಿದರು.ತಾನು ಸಂಕೋಚದಿಂದ ನಕ್ಕೆ!….’ ನೆನಪಿನ ಪುಳಕ ‘ ಶ್ಯಾಮಲೆಯಹೃದಯವನ್ನು ಮಾರ್ದವಗೊಳಿಸಿತು.ಅಪ್ಪನನ್ನು ನೆನೆದು ಕಣ್ಣು ತೇವವಾಯಿತು.
*
ಎಲ್ಲ ಹೆಣ್ಣು ಮಕ್ಕಳಿಗೂ ಇಂತಹ ಸೌಭಾಗ್ಯ ದೊರೆಯುವುದಿಲ್ಲ. ಸಣ್ಣ ದಿಬ್ಬವನ್ನೇರಲು ಹೆದರುವ, ಕತ್ತಲೆಗೆ ಹೆದರಿ ಮನೆಯಿಂದಲೇ ಹೊರಬರದ ಹೆಣ್ಣು ಮಕ್ಕಳ ನಡುವೆ ಅಪ್ಪ ನನಗೆ ನೀಡುತ್ತಿದ್ದ ಜೀವನ ಪಾಠದೊಂದಿಗೆ ಹಗಲಿರುಳಿನ ಪ್ರಕೃತಿ ವ್ಯಾಪಾರವನ್ನು ಮನವರಿಕೆ ಮಾಡಿಸಲು ತೋರಿಸುತ್ತಿದ್ದ ಆಸಕ್ತಿ ಹಾಗೂ ಶ್ರದ್ಧೆ ಬಹಳ ಅಪರೂಪವಾದುದು.

ಫೋಟೋ ಕೃಪೆ : google
*
ಊರಿನೊಳಗೆ ಮುನಿಸಿಪಾಲಿಟಿಯನಲ್ಲಿ ನೀರು ಬಾರದ ದಿನಗಳಲ್ಲಿ ಎಲ್ಲಾ ಕೆಲಸಕ್ಕೂ ನೀರು ಬೇಕಾದಾಗ ಎರಡು ಕಿ.ಮೀ.ದೂರದ ಕಾವೇರಿ ಹೊಳೆಗೆ ಹೋಗಿ ಹೊತ್ತು ತರುವುದು ಸುಲಭದ ಮಾತಾಗಿರಲಿಲ್ಲ.ಹಳ್ಳಿಯ ಹೆಂಗಸರು ತಲೆಯ ಮೇಲೆ ತಪ್ಪಲೆ ಬಿಂದಿಗೆಯನ್ನು ಪೇರಿಸಿಕೊಂಡು ಸೊಂಟದ ಮೇಲೆ ಕೊಡವೇರಿಸಿ ಮತ್ತೊಂದು ಕೈಲೂ ಬಿಂದಿಗೆಯನ್ನು ಇಳಿಸಿ ನೀರು ಹೊರುತ್ತಿದ್ದ ಕುಶಲಿಗಳಾಗಿದ್ದರು.ನನಗಂತೂ ಅವರು ಪವಾಡ ಪುರುಷರಂತೆಯೇ ಕಾಣಿಸುತ್ತಿದ್ದರು.ಪ್ಲಾಸ್ಟಿಕ್ನ ಬಳಕೆ ಇಲ್ಲದಿದ್ದ ಆ ಕಾಲದಲ್ಲಿ ತಾಮ್ರ, ಹಿತ್ತಾಳೆ ಕಬ್ಬಿಣದ ಬಿಂದಿಗೆಗಳ ಬಳಕೆ ಇತ್ತು. ಒಂದು ಸಣ್ಣ ಬಿಂದಿಗೆಯಲ್ಲಿ ನೀರು ತರುವಷ್ಟರಲ್ಲಿ ನೀರು ಹೊರ ತುಳುಕಿ ಮೈ ಒದ್ದೆಯಾಗಿ ಅರ್ಧ ನೀರು ಮಾತ್ರ ಉಳಿಯುತ್ತಿತ್ತು. ಪಾಪ ಅಮ್ಮ ಸೊಂಟದಲ್ಲಿ ಒಂದು ಕೊಡ ಕೈಯಲ್ಲಿ ಒಂದು ಕೊಡ ಹಿಡಿದು ಎಷ್ಟು ನೀರನ್ನು ತರಬಹುದು. ಮನೆಯಲ್ಲಿ ಸಾಕು ಪ್ರಾಣಿಗಳ ಆರೈಕೆ ಬೇರೆ!
*
ಅಪ್ಪ ಬಯಲು ಸೀಮೆಯಿಂದ ಕತ್ತೆಯೊಂದನ್ನು ಖರೀದಿಸಿ ತಂದರು.ಬಹಳಮುದ್ದಾಗಿತ್ತು. ಅದರ ಬೆನ್ನಿಗೆ ನಾಲ್ಕು ಬಿಂದಿಗೆ ಹಿಡಿಯುವ ಕಾಗಡಿ (ಬಿದಿರಿನ/ಬೆತ್ತದ ಬುಟ್ಟಿ)ಯನ್ನೂ ಮಾಡಿಸಿ ತಂದಿದ್ದರು.ಅದರಲ್ಲಿ ಶಾಲೆಗೆ ಹೋಗುವ ಮೊದಲು ನೀರು ತುಂಬಿಸಿ ತರುವ ಕೆಲಸ ತನ್ನ ಪಾಲಿಗೇ ಮೀಸಲು.ನದೀ ತೀರದಲ್ಲಿ ಅದನ್ನು ನಿಲ್ಲಿಸಿ, ಬಿಂದಿಗೆಗಳಿಗೆ ಒಂದೊಂದೇ ಚೆಂಬು ನೀರನ್ನು ತುಂಬಿಸಿ ಭರ್ತಿಮಾಡಿ ತರುವ ಕೆಲಸ ! ಎರಡು ಬಾರಿ ತಂದಿದ್ದು ನಮಗೆ.ಮತ್ತೆ ತಂದದ್ದು ನಮ್ಮ ಮನೆಯ ಎದುರು ಮನೆಯಲ್ಲೆ ಇದ್ದ ಶಾಲಾ ಮುಖ್ಯೋಪಾಧ್ಯಾಯರ ಮನೆಯವರಿಗೆ.
ಬಹಳ ಇಷ್ಟವೂ ಸುಲಭವೂ ಆಗಿದ್ದ ಈ ಕೆಲಸವನ್ನು ತಾನು ಬಹಳ ಪ್ರೀತಿಯಿಂದ ಮಾಡುತ್ತಿದ್ದೆ. ಏಕೆಂದರೆ ನದೀ ತೀರದ ಸೂರ್ಯೋದಯವನ್ನು ಕಾಣುವ ಭಾಗ್ಯ ನನಗೆ ಸಿಗುತ್ತಿತ್ತು.ಹುಲ್ಲಿನ ಮೇಲೆ ಫಳಫಳನೆ ಹೊಳೆಯುತ್ತಿದ್ದ ಹಿಮಮಣಿಗಳ ಅದ್ಭುತ ಸೌಂದರ್ಯ ರತ್ನದಾರತಿಯ ಧರೆಗೆತ್ತಿ ಪೂಜಿಸಿದಂತಹ ಧನ್ಯತೆಯನ್ನು ನೀಡುತ್ತಿತ್ತು. ಅಲೆಗಳ ಮೇಲೆ ಸರಿಗೆಯೊಡಲಿನ, ಜರತಾರಿ ಅಂಚಿನ ಸೀರೆಯುಟ್ಟು ಮಂದವಾಗಿ ಗಮನಿಸುತ್ತಿದ್ದ ಕಾವೇರಿಯ ಸೌಂದರ್ಯ ನೂರ್ಮಡಿಯಾಗಿರುತ್ತಿತ್ತು.ಬೆಳ್ಳಕ್ಕಿಗಳ ತೋರಣದಲ್ಲಿ ದಿನಪನ ಕಿರಣಮುಖ ಪ್ರಜ್ವಲಿಸುವುದನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ತೀರದಲ್ಲಿದ್ದ ಕೃಷಿ ಭೂಮಿಯ ಹಸಿರಿನಲ್ಲಿ ತನ್ನ ಕಣ್ಣುಗಳಿಗೆ ನಂದನದ ನೋಟವನ್ನು ಉಣಿಸುತ್ತಿದ್ದುವು.
*
ಅಂದು ಸಂಜೆ ! ಶಾಲೆಯಿಂದ ಮದ್ರಾಸ್ ಹಿಂದಿ ಪ್ರಚಾರ ಸಭೆಯ ತರಗತಿಗಳನ್ನು ಮುಗಿಸಿ ಬಂದವಳಿಗೆ ಮೇಯಲು ಬಿಟ್ಟಿದ್ದ ಕತ್ತೆಯನ್ನು ತರುವ ಕೆಲಸವಿತ್ತು.ಅದಕ್ಕೆ ಕುಡಿಯಲಿಕ್ಕೆ ಏನನ್ನಾದರೂ ಕೊಟ್ಟು ನದಿಗೆ ಕರೆದೊಯ್ಯುವುದಿತ್ತು.ಹುಡುಕುವ ಕೆಲಸ ದೀರ್ಘವಾದುದರಿಂದ ತಡವಾಗಿಬಿಟ್ಟಿತ್ತು. ಊರಿನ ಹೆಂಗಸರು ನಾನಾ ಕೆಲಸಗಳಿಗಾಗಿ ನದಿಗೆ ತೆರಳಿದ್ದವರು ಅವಸರವಸರದಲ್ಲಿ ಹಿಂತಿರುಗಿ ಧಾವಿಸುತ್ತಿದ್ದರು.ನನ್ನನ್ನು ಕಂಡು,’ಇಷ್ಟೊತ್ನಲ್ಲಿ ಒಬ್ಬಳೇ ಬರೋದಾ..ನೋಡು ಗೊಗ್ಗಯ್ಯ ಬಂದವ್ನಂತೆ ಒಬ್ಳ್ ನ್ನೇ ಕಂಡ್ರೆ ಬುಟ್ಟಾನಾ…ಬಿರ್ಬಿರ್ನೇ ಬಂದ್ಬುಡು’ ಎಂದು ಎಚ್ಙರಿಸಿ ಹೋದರು.ಪಡುವಣದಲ್ಲಿ ಸೂರ್ಯದೇವ ಅಸ್ತಂಗತನಾಗುವ ಅವಸರದಲ್ಲಿದ್ದ. ನದಿ ಕೆಂಪು ಜರಿಯಸೀರೆಯಲ್ಲಿ ಮೋಹಕ ನಾದ ಮಾಡುತ್ತಾ ಬಳುಕುತ್ತಾ ಅವಸರವಿಲ್ಲದೆ ಜುಳುಜುಳಿಸುತ್ತಾ ಸಾಗುತ್ತಿತ್ತು.ಮೀಂಚುಳ್ಳಿಗಳು ಗಬಕ್ಕನೆ ನೀರಿನ ಮೇಲಂಚಿಗೆ ಧಾವಿಸಿ ಸಿಕ್ಕ ಮೀನುಗಳನ್ನು ಕೊಕ್ಕಿನಲ್ಲಿ ಹಿಡಿದು ಗೂಡಿಗೆ ಮರಳುವ ತವಕದಲ್ಲಿದ್ದುವು..
ದೇವರು ಬಾನ ಕೃಷ್ಣನೆದೆಯಲ್ಲಿ ಬೆಳ್ಳನೆಯ ರಂಗೋಲಿ ಬಿಡಿಸಿದಂತಿತ್ತು.
ಪಡುವಣದ ಕಣ್ಣು ಹೆಂಡಕುಡಿದವನಂತೆ ಕೆಂಪಾಗಿತ್ತು! ಮೋಡಗಳ ಸಾಲು ತೇಲುತ್ತಲೇ ಏನೇನೋ ಚಿತ್ರಬರೆಯಲು ತೊಡಗಿದ್ದುವು.ನನಗೆ ಗೊಗ್ಗಯ್ಯನ ವಿಚಾರ ಮರೆತೇ ಹೋಯಿತು.
ಬೇಗ ಬೇಗನೆ ಬಿಂದಿಗೆಗಳಿಗೆ ನೀರು ತುಂಬಿ ನಮ್ಮ ಗಾರ್ದಭಕ್ಕೆ ಹೊರಡುವ ಸೂಚನೆ ನೀಡಿದೆ. ಶಿರಸಾವಹಿಸಿ ಮನೆಯತ್ತ ಸಾಗತೊಡಗಿತು.
ಕತ್ತಲೆಯಾಗುತ್ತಿದ್ದಂತೆ ನದೀ ತೀರದಿಂದ ಜನರನ್ನು ಖಾಲಿಮಾಡಿಸುತ್ತಿದ್ದ ಗೊಗ್ಗಯ್ಯನ ಕತೆಗೆ ಬೇರೆಯೇ ಹಿನ್ನೆಲೆ ಹಾಗೂ ಇದೆ ಅನ್ನುವುದು ನಾನು ದೊಡ್ಡವಳಾದ ಮೇಲೆ ತಿಳಿಯಿತು.ಜನ ಹೆದರಿಸುತ್ತಿದ್ದ ಈಶ್ವರನ ಪಾಳು ದೇಗುಲದಲ್ಲಿ ವಾಸಿಸಿ ಜನರಿಗೆ ಭೀತಿ ಹುಟ್ಟಿಸುತ್ತಿದ್ದ ದೆವ್ವವನ್ನಾಗಲಿ, ಜಡೆಮುನಿಯನ್ನಾಗಲಿ ನೋಡುವ ಕುತೂಹಲವಿದ್ದರೂ ನನ್ನ ಕಣ್ಣಿಗೆ ಎಂದೂ ಬೀಳಲೇ ಇಲ್ಲ.ಪಾಳು ಗುಡಿಯ ಎದುರಿಗೆ ಇದ್ದ ಬೇಲ ಹಾಗೂ ಬಿಲ್ವದ ಮರಗಳು ನನಗೆ ಬಹಳ ಪ್ರಿಯವಾದ ತಾಣಗಳಾಗಿದ್ದುವು.ಅವುಗಳಲ್ಲಿ ಬಿಡುತ್ತಿದ್ದ ಕ್ರಿಕೆಟ್ ಬಾಲ್ ನಂತಹ ಗಟ್ಟಿ ಕವಚದ ಹಣ್ಣುಗಳನ್ನು ಆಯ್ದು ತರಲು ಅಲ್ಲಿನ ಮುಳ್ಳು ಬೇಲಿಯನ್ನು ದಾಟಿ ಒಬ್ಬಳೇ ಹೋಗುವುದು ತನಗೆ ಬಹಳ ರೋಚಕ ಅನುಭವವನ್ನು ನೀಡುತ್ತಿತ್ತು.
*
ಅಪ್ಪನಾಗಲಿ ಅಮ್ಮನಾಗಿ ಇಲ್ಲ ಸಲ್ಲದ ಭಯವನ್ನು ಹುಟ್ಟು ಹಾಕುತ್ತಲೇಇರಲಿಲ್ಲ. ದೆವ್ವಭೂತಗಳ ಕತೆ ಹೇಳಿದರಂತೂ ಅಪ್ಪ,’ನಡೀ ಮಗಾ..ಅದೆಲ್ಲಿದೇಂತ ತೋರಿಸಲು ಹೇಳು .ನಾನೂ ನೋಡಬೇಕು ಎನ್ನುತ್ತಾ ಕೋವಿಹಿಡಿದು ಹೊರಟೇ ಬಿಡುತ್ತಿದ್ದರು.ಇಂತಹ ನಿರ್ಭೀತಿಯ ರಕ್ಷೆಯಲ್ಲಿ ಬೆಳೆದ ಬಾಲ್ಯ ಎಂದಾದರೂ ಪರಿಸ್ಥಿತಿಯ ಭೀಕರತೆಗೆ ನಲುಗಲು ಸಾಧ್ಯವೇ..
*
ಆ ದಟ್ಟ ಕಾನನದ ವಿಸ್ಮಯದ ಗರ್ಭ ! ಮೊಗೆಮೊಗೆದು ಕುಡಿಯಬಹುದಾಗಿದ್ದ ತೀರ್ಥಸ್ವರೂಪಿ ತಿಳಿಜಲ, ನೀರಿಗೆ ಕಚಗುಳಿಯಿಡುತ್ತಾ ವಿಹರಿಸುತ್ತಿದ್ದ ಮೀನುಗಳು ,ನದಿಗೇ ಬಾಯಿ ಬಂದಂತೆ ಗಾಳಿಗಾಗಿ ನೀರಪದರದಿಂದ ಮೇಲೆದ್ದು ಚಿನ್ನಾಟವಾಡುತ್ತ ನೀರಿನೊಡಲಿಗೆಸುಂದರ ವರ್ತುಲಗಳನ್ನು ರಚಿಸುತ್ತಿದ್ದ ಮೀನುಗಳು,ರುಚಿರುಚಿಯಾದ ಹಣ್ಣುಗಳನ್ನು ನೀಡುತ್ತಿದ್ದ ತೋಪುಗಳು ಹಾಗು ಕಾಡಿನ ಮರಗಳು,ರಾತ್ರಿಯಲ್ಲಿ ವಸುಂಧರೆಯ ದೈವಿಕ ಚೆಲುವಿಗೆ ಸಾಕ್ಷಿಯಾಗುತ್ತಿದ್ದ, ನದೀ ಕೆರೆ ತಟಾಕಗಳು, ಆಗಸದ ಚಂದ್ರ ತಾರೆಗಳು,ಫಟ್ಟಂತ ಜಾರಿಬಿಡುತ್ತಿದ್ದ ಉಲ್ಕೆಗಳನ್ನು ತೋರಿಸುತ್ತಿದ್ದ ತೆರೆದ ನೀಲಾಗಸ…ಮಳೆ ಮಂಜುಹನಿಗಳ ಚೆಲುವಿನ ಮೋಡಿ..ಎಂತಹ ಸುಂದರ ಜಗತ್ತಿನಲ್ಲಿ ತನ್ನ ಬಾಲ್ಯ ಕಳೆಯಿತು!
“ಪ್ರಕೃತಿಯೆ ಗುರು ಗಗನ ಲಿಂಗವು ಜಗವೆ ಕೂಡಲ ಸಂಗಮ
ಹುಡಿಯೆ ಭಸ್ಮವು ಹುಲ್ಲೆ ಪತ್ರೆಯು ಜಡವಿದೆಲ್ಲವು ಜಂಗಮ”
ಎಂತಹ ದಿವ್ಯಸಾಕ್ಷಾತ್ಕಾರ ಅಲ್ವಾ..? ಬಾಲ್ಯವೂ ಅದರ ಬೆರಗೂ ಬದುಕಿಗೆ ಅನಂತತೆಯ ಸ್ಪರ್ಶವನ್ನು ನೀಡುತ್ತದೆ.ಇಂತಹ ಅವಿಸ್ಮರಣೀಯ ಅನುಭವ ಎಲ್ಲರಿಗೂ ದಕ್ಕುವಂತಾದರೆ ಬದುಕಿಗೆ ದಿವ್ಯತೆಯ ಸ್ಪರ್ಶ ದಕ್ಕಿದಂತಾಗುತ್ತದೆ. ನಿಸರ್ಗದೊಡನಾಟವು ಎಲ್ಲ ಅರಕೆಗಳನ್ನೂ ನೀಡಿ ಮೂಕ ಬಾಂಧವ್ಯವನ್ನು ಬೆಸೆದು..ಮನಸ್ಸನ್ನು ಸಂತೃಪ್ತಗೊಳಿಸುತ್ತದೆ. ಹೀಗಿರಲಿ ಎಲ್ಲರ ಬಾಲ್ಯ ಅಲ್ಲವೇ ಎನ್ನುತ್ತಾ ದೀರ್ಘವಾದ ನಿಟ್ಟುಸಿರೊಂದು ಹೊರಬಂತು ಶ್ಯಾಮಲೆಯ ಎದೆಯಿಂದ….ನಗರಗಳಲ್ಲಿ ತಮ್ಮ ಬಾಲ್ಯದ ಅನುಭೂತಿಗೆ ಎರವಾಗುತ್ತಿರುವ ತನ್ನದೇ ಮಕ್ಕಳನ್ನು ನೆನೆದು ,ವಿಷಾದದ ಕರಿನೆರಳೊಂದು ಶಿಕ್ಷಣದ ಬೃಹದಾಕಾಶದ ಮೇಲಿಂದ ಮಕ್ಕಳನ್ನು ಕಲಿಕೆಯ ಭೂತಗಳಾಗಿ ರೂಪಿಸುತ್ತಿರುವ ಇಂದಿನ ಶೈಕ್ಷಣಿಕ ಪ್ರಹಸನ ನೆನಪಾಗಿ
ಎದೆ ಭಾರವಾಯಿತು.
ಒಳಗೊಳ್ಳದಿರಲೆಂತು ಬಾಲ್ಯದಲ್ಲಿ ಆಸ್ವಾದಿಸಿದ ರಸಾನುಭವಗಳ ಈ ಸ್ವರ್ಣಮಯ ಬದುಕ..!

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಶಿವದೇವಿ ಅವನೀಶಚಂದ್ರ- ಕೊಡಗು.
