ಬೆಳಗಾವಿಯ ಫ್ಲೈಟ್ ಲೆಫ್ಟಿನೆಂಟ್ ಸುಬ್ರಹ್ಮಣ್ಯ ಮುಹಿಲನ್ ‘ಶಾರ್ಪ್ ಶೂಟರ್’ ಎಂದೇ ಹೆಸರುವಾಸಿಯಾಗಿದ್ದರು. ಮುಹಿಲನ್ನರ ಸಾಹಸ ವಾಯುಸೇನೆಯಲ್ಲಿ ಅಭಿಮಾನದ ಅಲೆಯನ್ನೇ ಎಬ್ಬಿಸಿತು. ಸಾವಿಗೇ ಸವಾಲೊಡ್ಡಿ ಸೆಣಸಿದ ಈ ವೀರನಿಗೆ ಭಾರತ ಸರ್ಕಾರ ‘ವಾಯುಸೇನಾ ಪದಕ’ ದಿಂದ ಗೌರವಿಸಿದೆ. ವಿಂಗ್ ಕಮಾಂಡರ್ ಸುದರ್ಶನ್ ಅವರ ಲೇಖನಿಯಲ್ಲಿ ವೀರ ಯೋಧನ ಸಾಹಸಗಾಥೆ. ಮುಂದೆ ಓದಿ…
೧೯೭೧ ರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಯುದ್ಧದಲ್ಲಿ, ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿ, ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡು, 93000 ಪಾಕಿ ಸೈನಿಕರು ಭಾರತೀಯ ಸೈನ್ಯಕ್ಕೆ ಶರಣಾಗತರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನಿತಗೊಂಡ ಘಟನೆ ಪಾಕಿಸ್ತಾನದ ಪ್ರತಿಯೊಬ್ಬ ಪ್ರಜೆಗೂ, ಸೈನಿಕನಿಗೂ ಇಂದಿಗೂ ಸಹ ಸಹಿಸಲಾರದ ತೇಜೋವಧೆಯ ವಿಷಯ. ಸೇಡಿನ ಮನೋಭಾವ ಎಷ್ಟು ಆಳವಾಗಿ ಅಲ್ಲಿನ ಜನಮನಗಳಲ್ಲಿ ಬೇರೂರಿದೆ ಎಂದರೆ, ಭಾರತಕ್ಕೆ ಕಿರಿಕಿರಿ ಉಂಟುಮಾಡಲು ಒಂದು ಸಣ್ಣ ಅವಕಾಶ ಸಿಕ್ಕರೂ ಸಾಕು ಅದರ ಬೆನ್ನೆತ್ತಿ ಹೋಗಿಬಿಡುತ್ತಾರೆ. ಅಂತಹದೊಂದು ಅವಕಾಶ ಪಾಕಿಸ್ತಾನಕ್ಕೆ ಸಿಕ್ಕಿದ್ದು ಸಿಯಾಚಿನ್ ನೀರ್ಗಲ್ಲ ಪ್ರದೇಶದಲ್ಲಿ. ಅಸ್ಪಷ್ಟ ಗಡಿನಿಯಂತ್ರಣ ರೇಖೆಯ ಗೊಂದಲವನ್ನೇ ದಾಳವಾಗಿಟ್ಟುಕೊಂಡು ಪಾಕಿಸ್ತಾನ ಸಿಯಾಚಿನ್ ನೀರ್ಗಲ್ಲಿಗೆ ಹಿಂಬಾಗಿಲಿನಿಂದ ಪದೇಪದೇ ಲಗ್ಗೆ ಹಾಕುವ ಕುತಂತ್ರ ಸಫಲವಾಗಲಿಲ್ಲ, ಎಂದಿಗೂ ಆಗುವುದೂ ಇಲ್ಲ.
೧೯೮೪ ರಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಶನ್ ಮೇಘದೂತ’ ಕಾರ್ಯಾಚರಣೆಯಲ್ಲಿ ಸಿಯಾಚಿನ್ ಶಿಖರದಿಂದ ಪಾಕಿಸ್ತಾನದ ಸೈನ್ಯವನ್ನು ಕೆಳಗೆ ತಳ್ಳಲಾಯಿತು. ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ೨೫೦೦ ಚದರ ಕಿಮೀಗಳಷ್ಟು ಭೂಮಿಯನ್ನು ಮರು ವಶಪಡಿಸಿಕೊಳ್ಳಲಾಯಿತು. ಈ ಅವಮಾನ ಪಾಕಿಸ್ತಾನದ ಸೈನ್ಯಾಧಿಕಾರಿಗಳ ಮನಸ್ಸಿನಲ್ಲಿ ಹೊಗೆಯಾಡುತ್ತಲೇ ಇತ್ತು. ಭಾರತೀಯ ಸೈನ್ಯದ ಮೇಲೆ ಸೇಡುತೀರಿಸಿಕೊಳ್ಳುವ ಅವಕಾಶಕ್ಕೆ ಹೊಂಚುಹಾಕಿಕೊಂಡು ಕೂತಿತ್ತು. ೧೯೮೭ ರಲ್ಲಿ ಮತ್ತೊಮ್ಮೆ ಸಿಯಾಚಿನ್ ಮೇಲೆ ಪಾಕಿಸ್ತಾನದ ದಾಳಿಯ ಯತ್ನವನ್ನು ಭಾರತೀಯ ಸೇನೆ ನಿಶ್ಕ್ರಿಯಗೊಳಿಸಿತು. ರೊಚ್ಚಿಗೆದ್ದ ಪಾಕಿಸ್ತಾನ, ಬ್ರಿಗೇಡ್ ಜನರಲ್ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ಮಗದೊಮ್ಮೆ ೧೯೮೯ ರಲ್ಲಿ ವೃಥಾ ದಾಳಿ ನಡೆಸುವ ಪ್ರಯತ್ನ ನಡೆಸಿ ಹೀನಾಯ ಸೋಲುಂಡು ಓಡಿಹೋಯಿತು.

ಫೋಟೋ ಕೃಪೆ :www.scoopwhoop
೧೯೯೯ ರಲ್ಲಿ ಯಾವಾಗ ಜನರಲ್ ಮುಷರಫ್ ಪಾಕಿಸ್ತಾನದ ಸೇನೆಯ ಮುಖ್ಯಸ್ಥನಾಗಿ ಕಾರ್ಯರ್ಭಾರವಹಿಸಿಕೊಂಡರೋ ಅಂದಿನಿಂದಲೇ ಸಿಯಾಚಿನ್ ಸೋಲಿನ ಸೇಡುತೀರಿಸಿಕೊಳ್ಳುವ ಷಡ್ಯಂತ್ರ ರಚನೆ ಪ್ರಾರಂಭವಾಗಿಬಿಡುತ್ತದೆ.
ರಾಷ್ಟ್ರೀಯ ಹೆದ್ದಾರಿ ನಂಬರ್ 1A, ಶ್ರೀನಗರದಿಂದ ಲೇಹ್ ಲಡಾಖಿನ ನಡುವೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ. ಇದರ ಮುಖಾಂತರವೇ ಸಿಯಾಚಿನ್ ನೀರ್ಗಲ್ಲಿಗೆ ಸೈನಿಕರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ಈ ಹೆದ್ದಾರಿ ಕಾರ್ಗಿಲ್ ಎನ್ನುವ ಪಟ್ಟಣದ ಮುಖಾಂತರ ಹಾದುಹೋಗುತ್ತದೆ. ಕಾರ್ಗಿಲ್ ಗಡಿನಿಯಂತ್ರಣರೇಖೆಯಿಂದ ಕೆಲವೇ ಕಿಮೀಗಳಷ್ಟು ದೂರವಿದೆ. ಸಿಂಧೂನದಿಯ ಉಪನದಿ ಸುರು ನದಿಯ ತಟದಲ್ಲಿರುವ ಈ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು ೯೦೦೦ ಅಡಿಗಳಷ್ಟು ಎತ್ತರದಲ್ಲಿದೆ. ಕಾರ್ಗಿಲ್ ಪಟ್ಟಣದಿಂದ ದ್ರಾಸ್ ಪಟ್ಟಣಕ್ಕೆ ಇರುವ ದೂರ ಸುಮಾರು 65 ಕಿಮೀಗಳಷ್ಟು. ಕಿರಿದಾದ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಕಡಿದಾದ ಪರ್ವತ ಶಿಖರಶ್ರೇಣಿಗಳಿವೆ. ಕೆಲವು ಕಡೆ ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿಯಷ್ಟು ಎತ್ತರದವರೆಗೂ ಇದೆ. ಈ ಶಿಖರಗಳ ಮೇಲೆ ಭಾರತೀಯ ಸೈನ್ಯದ ಕೆಲವು ಕಾವಲು ಪೋಸ್ಟುಗಳಿವೆ. ಛಳಿಗಾಲದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಲ್ಲಿ ಕಾವಲು ಕಾಯುವ ಸೈನಿಕರು ಸ್ವಲ್ಪ ಕೆಳಗಿರುವ ಪೋಸ್ಟುಗಳಿಗೆ ಇಳಿದು ಬರುತ್ತಾರೆ. ಅತ್ತಕಡೆ ಪಾಕೀಸ್ತಾನವೂ ಸಹಾ ಹಾಗೇ ಮಾಡುತ್ತದೆ. ಇದೊಂದು ಅಲಿಖಿತ ಒಪ್ಪಂದ ಎರಡೂ ದೇಶಗಳ ನಡುವೆ. ಪುನಃ ಮೇ ತಿಂಗಳಿನಷ್ಟೊತ್ತಿಗೆ ಮೇಲೇರಿ ಬಂದು ತಮ್ಮ ತಮ್ಮ ಪೋಸ್ಟುಗಳನ್ನು ನಿಭಾಯಿಸುತ್ತಾರೆ.

ಆ ಸಮಯಕ್ಕೆಂದೇ ಹೊಂಚುಹಾಕಿಕೊಂಡು ಕುಳಿತಿದ್ದರು ಜನರಲ್ ಮುಷರಫ್!
ಆ ಸಮಯದಲ್ಲಿ ಪಾಕೀಸ್ತಾನದ ಸೈನ್ಯವನ್ನು ಕಾಶ್ಮೀರದ ಭಯೋತ್ಪಾದಕರ ವೇಷದಲ್ಲಿ ಈ ಶಿಖರಗಳಿಗೆ ಕಳುಹಿಸಿ ಅಲ್ಲಿಂದ ಹೆದ್ದಾರಿಯ ಮೇಲೆ ದಾಳಿ ನಡೆಸಿ ಲಡಾಖಿನ ಪ್ರದೇಶ, ಅದರಲ್ಲೂ ಸಿಯಾಚಿನ್ ನೀರ್ಗಲ್ಲು ಶಿಖರಕ್ಕೆ ಕಾಶ್ಮೀರದೊಂದಿಗೆ ಸಂಪರ್ಕ ಕಡಿದು ಹಾಕಿ, ಪುನಃ ಸಿಯಾಚಿನ್ ಮೇಲೆ ಅಧಿಪತ್ಯ ಸಾಧಿಸುವ ಒಂದು ವ್ಯೂಹದ ರಚನೆಯನ್ನು ಮಾಡುತ್ತಾನೆ. ಸೈನಿಕರನ್ನು ಹುರಿದುಂಬಿಸಿ, ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು, ಗ್ರೆನೇಡುಗಳು, ಮಿಸೈಲುಗಳು, ತಿಂಗಳಾನುಗಟ್ಟಲೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗುತ್ತದೆ. ಇದೆಲ್ಲಾ ಪಾಕಿಸ್ತಾನದ ಸೈನ್ಯ , ಪಾಕ್ ಆಕ್ರಮಿತ ಕಾಶ್ಮೀರದ ಕಡೆಯಿಂದ ಮಾಡಲಾಗುತ್ತದೆ. ಛಳಿಗಾಲದ ಕೊರೆಯುವ ಛಳಿ ಮತ್ತು ಹಿಮಪಾತದ ನಡುವೆ ಈ ಪ್ರಕ್ರಿಯೆ ನಡೆದು ಹೋಗುತ್ತದೆ. ಈ ವಿಷಯ ಪಾಕೀಸ್ತಾನದ ಅಂದಿನ ಪ್ರಧಾನಿ ನವಾಜ್ ಶರೀಫರಿಗೂ ತಿಳಿಸಲಾಗಿರುವುದಿಲ್ಲ, ಅಷ್ಟು ಗೌಪ್ಯವಾಗಿ ಈ ಷಡ್ಯಂತ್ರದ ರಚನೆಯಾಗಿರುತ್ತದೆ.
ಇದರ ಸುಳಿವು ಭಾರತೀಯ ಸೈನ್ಯಕ್ಕೆ ಸಿಕ್ಕಿದ್ದೂ ಸಹಾ ತಡವಾಗಿ ಎನ್ನಬಹುದು. ಅಷ್ಟೊತ್ತಿಗಾಗಲೇ ಟೈಗರ್ ಹಿಲ್, ಬಟಾಲಿಕ್, ದ್ರಾಸ್ ಮತ್ತು ಟೋಲೋಲಿಂಗ್ ಸೇರಿದಂತೆ ಹಲವಾರು ಶಿಖರಗಳ ಮೇಲೆ ಪಾಕಿಸ್ತಾನದ ಸೈನಿಕರು ಭಧ್ರವಾಗಿ ತಳವೂರಿ ಬಿಟ್ಟಿರುತ್ತಾರೆ. ಭಾರತದ ಸೈನ್ಯಕ್ಕೆ ಇಂತಹದೊಂದು ಗುಪ್ತಮಾಹಿತಿಯ ವೈಫಲ್ಯದ ಬಗ್ಗೆ ಕಾರ್ಗಿಲ್ ಕದನಾನಂತರ ಹಲವಾರು ಹಂತದ ವಿಚಾರಣೆಗಳಾಗಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯೂ ನಡೆದು ಹೋಗುತ್ತದೆ. ಇರಲಿ ಅದರ ಬಗ್ಗೆ ಆಮೇಲೆ ವಿಚಾರಿಸಿದರಾಯಿತು.
‘#ಆಪರೇಶನ್_ವಿಜಯ್‘ ಕಾರ್ಯಾಚರಣೆಯ ಮುಖಾಂತರ ಈ ಪಾಕಿಸ್ತಾನದ ಅತಿಕ್ರಮಣ ಕಾರರನ್ನು ಹೊಡೆದೋಡಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಭಾರತೀಯ ಭೂಸೇನೆಯ ಸಂಕಷ್ಟವೇನೆಂದರೆ, ಎತ್ತರದ ಶಿಖರಗಳಲ್ಲಿ ಭದ್ರವಾಗಿ ಬೀಡು ಬಿಟ್ಟಿರುವ ಪಾಕಿಸ್ತಾನದ ಸೈನಿಕರ ಕಣ್ಣಿಗೆ ಬೀಳದಂತೆ ಕಡಿದಾದ ಶಿಖರಗಳನ್ನು ಹತ್ತುವುದು. ಅತಿಕ್ರಮಣ ಮಾಡಿದ ಪಾಕೀಸ್ತಾನದ ಸೈನಿಕರು ತಮ್ಮ ಸುತ್ತಲೂ ನೆಲಬಾಂಬುಗಳನ್ನು ಹೂತು ಹಾಕಿದ್ದರು, ಹಾಗಾಗಿ ಅವರ ಕಣ್ಣುತಪ್ಪಿಸಿ ಹತ್ತುವ ಪ್ರಯತ್ನ ಮಾಡಿದರೂ ಮೊದಲು ನೆಲಬಾಂಬುಗಳನ್ನು ನಿಶ್ಕ್ರಿಯಗೊಳಿಸುವ ಕೆಲಸವನ್ನು ಮಾಡಬೇಕು, ಅದು ಹಗಲು ಸಮಯದಲ್ಲೇ ನಡೆಯಬೇಕು. ಪಾಕಿಸ್ತಾನದ ಸೈನ್ಯ ಭಾರತೀಯ ವಾಯುಸೇನೆಯ ಪ್ರತಿಕ್ರಿಯೆ ದಾಳಿಯನ್ನು ನಿರೀಕ್ಷಿಸಿದ್ದರಿಂದ ಅವರು ವಿಮಾನ ನಿಗ್ರಹ ಮಿಸೈಲುಗಳಿಂದಲೂ ಸಜ್ಜಾಗಿ ಬಂದಿದ್ದರು. ಭೂಸೇನೆಯ ಕಾರ್ಯಾಚರಣೆ ಪ್ರಾರಂಭಕ್ಕೂ ಮುಂಚೆ ವಾಯುಪ್ರಹಾರದ ಕಾರ್ಯಾಚರಣೆ ನಡೆಯಲೇಬೇಕು ಎನ್ನುವ ಅನಿವಾರ್ಯತೆ. ಆಗ ಪ್ರಾರಂಭವಾಯಿತು ವಾಯುಸೇನೆಯ ಕಾರ್ಯಾಚರಣೆ
‘ಆಪರೇಶನ್ ಸಫೇದ್ ಸಾಗರ್’

ಮರೆಯಲಾಗದ ಯೋಧ ಮುಹಿಲನ್
#ಬೆಳಗಾವಿಯ_ಫ್ಲೈಟ್_ಲೆಫ್ಟಿನೆಂಟ್_ಸುಬ್ರಹ್ಮಣ್ಯ_ಮುಹಿಲನ್ ಅವರು ಬಾಲ್ಯದಿಂದಲೇ ಏರ್ ಫೋರ್ಸಿನಲ್ಲಿ ಪೈಲಟ್ ಆಗಬೇಕೆಂಬ ಕನಸು ಕಾಣುತ್ತಲೇ ಬೆಳೆದವರು. ಪದವಿ ಮುಗಿಸಿದವರೇ ವಾಯುಸೇನೆಯ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ನಂತರ ವಾಯುಸೇನೆಯ ತರಬೇತಿಯನ್ನೂ ಪೂರ್ಣಗೊಳಿಸಿ ವಾಯುಸೇನೆಯ ಹೆಲಿಕಾಪ್ಟರ್ ತಂಡಕ್ಕೆ ಸೇರ್ಪಡೆಯಾದರು. ಸೌಮ್ಯ ಸ್ವಭಾವದ ಈ ಉತ್ಸಾಹೀ ತರುಣ ಹೆಲಿಕಾಪ್ಟರ್ ಗನ್ನುಗಳಿಂದ ಫೈರ್ ಮಾಡುವುದರಲ್ಲಿ ಎತ್ತಿದ ಕೈ, ಸತತವಾಗಿ ಎರಡು ಬಾರಿ ಈ ಸ್ಪರ್ಧೆಗಳಲ್ಲಿ ಪದಕಗಳಿಸಿದ್ದರು. ಶಾರ್ಪ್ ಶೂಟರ್ ಎನ್ನುವ ಬಿರುದು ಸಹಾ ಗಳಿಸಿದ್ದರು. ವಾಯುನೆಲೆಯಲ್ಲಿ ಎಲ್ಲರ ಪ್ರೀತಿಪಾತ್ರರಾದ ಅವರನ್ನು ‘ಮುಹಿಲ್’ ಎಂದೇ ಕರೆಯುತ್ತಿದ್ದರು.
ಈ ನಡುವೆ ಬೆಳೆಗಾವಿಯ ಯುವತಿ ಬೀನಾ ಅವರ ಪರಿಚಯವೂ ಆಯಿತು. ಸ್ವಲ್ಪದಿನಗಳಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಸರಳ ಸಮಾರಂಭದಲ್ಲಿ ವಿವಾಹವೂ ನೆರೆವೇರಿತು. ಅಸ್ಸಾಮಿನ ಮೋಹನ್ ಬಾರಿ ವಾಯುನೆಲೆಯಲ್ಲಿ ವೈವಾಹಿಕ ಜೀವನವೂ ಪ್ರಾರಂಭವಾಯಿತು. ಬೆಳಗಾವಿಯಲ್ಲಿ ಹುಟ್ಟಿ ಬೆಳೆದು ಮೊಟ್ಟಮೊದಲ ಸಲ ಹೊರಗೆ ಬಂದ ಬೀನಾರವರಿಗೆ ಈ ವಾಯುಸೇನೆಯ ಜೀವನ.. ಗಗನವು ಎಲ್ಲೋ..ಭೂಮಿಯು ಎಲ್ಲೋ ಎನ್ನುವಂತಾಗಿತ್ತು. ಉತ್ತರ ಧೃವದಿಂ.. ದಕ್ಷಿಣ ಧೃವಕೋ..ಎಂದು ಹಾಡುತ್ತಲೇ ಅವರ ಜೀವನದಲ್ಲಿ ಪುಟ್ಟ ಧ್ರುವನ ಆಗಮನವೂ ಆಯಿತು.
ಮಾರ್ಚ್೧೯೯೯ , ಮುಹಿಲ್ ರವರಿಗೆ ಹರಿಯಾಣದ ಸರ್ಸಾವ ವಾಯುನೆಲೆಯ 152 ಹೆಲಿಕಾಪ್ಟರ್ ಯುನಿಟ್ಟಿಗೆ ವರ್ಗವಾಯಿತು. ಕೆಲವೇ ತಿಂಗಳಲ್ಲಿ ಕಾರ್ಗಿಲ್ ಮೇಲೆ ಯುದ್ಧದ ಕಾರ್ಮೋಡಗಳು ದಟ್ಟೈಸುತ್ತಿದ್ದಂತೆ ಇವರ ಯುನಿಟ್ಟಿಗೆ ಶ್ರೀನಗರಕ್ಕೆ ಹೊರಡಲು ಆದೇಶ ಬಂತು. ಎಲ್ಲಾ ಪೈಲಟ್ಟುಗಳು, ಸಹಾಯಕ ಸಿಬ್ಬಂದಿಗಳು ತಮ್ಮ ಕುಟುಂಬದ ಸದಸ್ಯರನ್ನು ಸರ್ಸಾವಾದಲ್ಲೇ ಬಿಟ್ಟು ಶ್ರೀನಗರಕ್ಕೆ ಹೊರಟರು.
೨೬ ಮೇ ೧೯೯೯ ಕಾರ್ಗಿಲ್ಲಿನಲ್ಲಿ ಭಾರತೀಯ ವಾಯುಸೇನೆಯ ಕಾರ್ಯಾಚರಣೆ ಪ್ರಾರಂಭವಾಯಿತು. ಅಲ್ಲಿನ ಸುತ್ತಮುತ್ತಲಿನ ಪರ್ವತ ಶಿಖರಗಳನ್ನೇರಿ ಕುಳಿತಿದ್ದ ಪಾಕಿಸ್ತಾನಿ ಸೈನಿಕರ ಬಳಿ ಸ್ಟಿಂಗರ್ ಎನ್ನುವ ವಿಮಾನ ನಿಗ್ರಹ ಮಿಸೈಲುಗಳು ಇವೆ ಎನ್ನುವ ವಿಷಯ ತಿಳಿದು ಬಂತು.
೨೭ ಮೇ ೧೯೯೯ , ಫ್ಲೈಯಿಂಗ್ ಆಫಿಸರ್ ನಚಿಕೇತರ Might 27 ವಿಮಾನ ಇಂಜಿನ್ ತೊಂದರೆಯಿಂದಾಗಿ ಪ್ಯಾರಾಚೂಟಿನ ಸಹಾಯದಿಂದ ವಿಮಾನದಿಂದ ಹೊರಬಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದು ಯುದ್ಧ ಕೈದಿಯಾದರು. ಅವರನ್ನೇ ಹುಡುಕಲು ಹೊರಟ ಅಜಯ್ ಅಹುಜಾರವರ Might 21 ವಿಮಾನವನ್ನು ಪಾಕಿಸ್ತಾನಿ ಸೈನಿಕರು ಮಿಸೈಲ್ ಪ್ರಹಾರ ಮಾಡಿ ಹೊರಡುದುರಿಳಿಸಿದರು.
೨೮ ಮೇ ೧೯೯೯ , ೧೫೨ಹೆಲಿಕಾಪ್ಟರ್ ತಂಡಕ್ಕೆ ನಾಲ್ಕು Mi 17 ಹೆಲಿಕಾಪ್ಟರುಗಳೊಂದಿಗೆ, ದ್ರಾಸ್ ಶಿಖರದ ಮೇಲಿದ್ದ ಪಾಕೀಸ್ತಾನದ ಸೈನಿಕರ ಶಿಬಿರಗಳ ಮೇಲೆ ದಾಳಿಮಾಡುವ ಆದೇಶ ಕೊಡಲಾಯಿತು. ಹಿಂದಿನ ದಿನದ ಆಘಾತಕಾರಿ ಸುದ್ದಿಗಳನ್ನು ತಿಳಿದ ಈ ತಂಡ ಮಿಸೈಲುಗಳನ್ನು ದಾರಿತಪ್ಪಿಸುವ ‘ಫ್ಲೇರ್’ ಗಳನ್ನು ಉಪಯೋಗಿಸಿ ದಾಳಿ ನಡೆಸಿಸುವುದಾಗಿ ತೀರ್ಮಾನಿಸಲಾಗುತ್ತದೆ. ನಾಲ್ಕು ಹೆಲಿಕಾಪ್ಟರುಗಳ ತಾಂತ್ರಿಕ ಪರಿಶೀಲನೆ ನಡೆಸುವಾಗ ಒಂದು ಹೆಲಿಕಾಪ್ಟರಿನಲ್ಲಿ ಈ ಫ್ಲೇರ್ ವಿತರಿಸುವ ಯಂತ್ರ ಸಮಂಜಸವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಯುತ್ತದೆ. ತಂಡದ ಮುಖಂಡ ವಿಂಗ್ ಕಮಾಂಡರ್ ಸಿನ್ಹಾರವರು ಇಂದಿಗೆ ಮೂರು ಹೆಲಿಕಾಪ್ಟರುಗಳ ದಾಳಿ ಮಾತ್ರ ಮಾಡುವುದು ಎಂದು ನಿರ್ಧರಿಸಿ, ಫ್ಲೈಟ್ ಲೆಫ್ಟಿನೆಂಟ್ ಮುಹಿಲನ್ ರವರಿಗೆ ನೀವು ಬರುವುದು ಬೇಡ ಎಂದು ಸಲಹೆ ಕೊಡುತ್ತಾರೆ. ಇದಕ್ಕೆ ಮಹಿಲನ್ ಒಪ್ಪುವುದೇ ಇಲ್ಲ, ನೀವು ನನಗೆ ಕವರ್ ಕೊಡಿ ನಾನು ಮಧ್ಯದಲ್ಲಿರುತ್ತೇನೆ ಎಂದು ಕೋರುತ್ತಾನೆ. ‘ಶಾರ್ಪ್ ಶೂಟರ್’ ಎಂದು ಹೆಸರುವಾಸಿಯಾಗಿರುವ ಮುಹಿಲನ್ ಈ ದಾಳಿಯಲ್ಲಿ ಮುಖ್ಯ ಪಾತ್ರವಹಿಸುತ್ತಾನೆ ಎನ್ನುವುದನ್ನು ಅರಿತಿದ್ದ ತಂಡದ ನಾಯಕ ಅರೆ ಮನಸ್ಸಿನಿಂದಲೇ ಒಪ್ಪಿಗೆ ಕೊಡುತ್ತಾರೆ.
ನಾಲ್ಕೂ ಹೆಲಿಕಾಪ್ಟರುಗಳು ಒಂದರ ಹಿಂದೆ ಒಂದರಂತೆ ಗಗನಕ್ಕೇರುತ್ತವೆ. ಕೆಲವೇ ನಿಮಿಷಗಳಲ್ಲಿ ಅವರು ದಾಳಿನಡೆಸಬೇಕಾದ ದ್ರಾಸ್ ಶಿಖರದ ಸಮೀಪ ಬಂದು ತಲುಪುತ್ತಾರೆ. ಶಿಖರದ ಮೇಲೆ ಇನ್ನೂ ಮಂಜು ಕವಿದ ವಾತಾವರಣ, ಹಾಗಾಗಿ ಹೆಲಿಕಾಪ್ಟರುಗಳು ಇನ್ನೊಂದು ಸ್ವಲ್ಪ ಕೆಳಗೆ ಇಳಿಯಬೇಕಾದ ಅನಿವಾರ್ಯತೆ.

ಫೋಟೋ ಕೃಪೆ : carnegieendowmen
#ವಿಂಗ್_ಕಮಾಂಡರ್ ಸಿನ್ಹಾರವರು ದಾಳಿಯನ್ನು ಪ್ರಾರಂಭಿಸುತ್ತಾರೆ. ಅದೇ ಸಮಯಕ್ಕೆ ಪಾಕಿಸ್ತಾನದ ಸೈನಿಕರು ಮಿಸೈಲುಗಳನ್ನು ಫೈರ್ ಮಾಡಲು ಪ್ರಾರಂಭಿಸುತ್ತಾರೆ, ಆದರೆ ಫ್ಲೇರುಗಳಿಂದಾಗಿ ಮಿಸೈಲುಗಳು ಹೆಲಿಕಾಪ್ಟರುಗಳ ಹತ್ತಿರ ಬರದೆ ಫ್ಲೇರುಗಳ ಬೆನ್ನೆತ್ತಿ ಹೋಗುತ್ತವೆ. ಈಗ ಮೂರನೇ ಹೆಲಿಕಾಪ್ಟರಿನ, ಅಂದರೆ ಮುಹಿಲ್ ರವರ ದಾಳಿಯ ಸರತಿ, ಅವರು ಗುಂಡಿನ ಮಳೆಗರೆದು ನೋಡು ನೋಡುತ್ತಲೇ ಪಾಕಿ ಶಿಬಿರಗಳನ್ನು ಛಿದ್ರಗೊಳಿಸಿದ ದೃಶ್ಯ ಕಾಣಿಸುತ್ತಲೇ, ತಿರುಗಿ ಇನ್ನೊಮ್ಮೆ ದಾಳಿಗೆ ಬರುತ್ತಾರೆ. ಮೊದಲ ಸುತ್ತಿನ ದಾಳಿಯಲ್ಲಿ ಒಂದು ಮಿಸೈಲಂತೂ ಕಿವಿಯ ಹತ್ತಿರವೇ ಹೋದಂತೆ ಭಾಸವಾಗುತ್ತದೆ ಆದರೆ ಹೆಲಿಕಾಪ್ಟರಿಗೆ ಏನೂ ಹಾನಿಯಾಗಿರುವುದಿಲ್ಲ. ಅಷ್ಟೊತ್ತಿಗೆ ಪಾಕಿ ಸೈನಿಕರು ಈ ದಾಳಿಯಿಂದ ಹುಚ್ಚೆದ್ದು ಹೋಗುತ್ತಾರೆ, ಜೀವ ಉಳಿಸಿಕೊಳ್ಳಲು ಇದ್ದ ಬದ್ದ ಮಿಸೈಲುಗಳನ್ನೆಲ್ಲಾ ಫೈರ್ ಮಾಡಿಬಿಡುತ್ತಾರೆ. ಅದರಲ್ಲೊಂದು ಮಿಸೈಲು ಸೀದಾ ಮುಹಿಲನ್ ರವರ ಹೆಲಿಕಾಪ್ಟರಿಗೆ ಬಂದು ಸ್ಪೋಟಗೊಳ್ಳುತ್ತದೆ. ಮುಹಿಲ್ ರವರ ಹೆಲಿಕಾಪ್ಟರಿನ ಹಿಂಬಾಗ ಛಿದ್ರವಾಗಿ ಬಿಡುತ್ತದೆ. ಅದೇ ಅವಸ್ಥೆಯಲ್ಲಿ ಹೆಲಿಕಾಪ್ಟರನ್ನು ಕಣಿವೆಯ ಕಡೆ ತಿರಿಗಿಸುತ್ತಾರೆ. ಆದರೆ ಸಮಯ ಮಿಂಚಿ ಹೋಗಿಬಿಟ್ಟಿರುತ್ತದೆ. ಹೆಲಿಕಾಪ್ಟರಿನಲ್ಲಿದ್ದ ನಾಲ್ಕೂ ಜನ ಹತರಾಗುತ್ತಾರೆ. ಶ್ರೀನಗರದಿಂದ ಹೊರಟ ನಾಲ್ಕು ಹೆಲಿಕಾಪ್ಟರುಗಳಲ್ಲಿ ಮೂರು ಮಾತ್ರ ಭಾರವಾದ ಹೃದಯದಿಂದ ಮರಳಿ ಬರುತ್ತವೆ. ತಮ್ಮ ಹೆಲಿಕಾಪ್ಟರಿನಲ್ಲಿ ತಾಂತ್ರಿಕ ನ್ಯೂನತೆ ಇದೆ ಎಂದು ತಿಳಿದಿದ್ದರೂ ಅದನ್ನು ಲೆಕ್ಕಿಸದೆ ಪಾಕಿಸ್ತಾನದ ಸೈನಿಕರ ಮೇಲೆ ಪ್ರಹಾರ ಮಾಡಿದ ಮುಹಿಲನ್ನರ ಸಾಹಸ ವಾಯುಸೇನೆಯಲ್ಲಿ ಅಭಿಮಾನದ ಅಲೆಯನ್ನೇ ಎಬ್ಬಿಸುತ್ತದೆ. ಸಾವಿಗೇ ಸವಾಲೊಡ್ಡಿ ಸೆಣಸಿದ ಈ ವೀರನಿಗೆ ಭಾರತ ಸರ್ಕಾರ ‘ವಾಯುಸೇನಾ ಪದಕ’ ದಿಂದ ಗೌರವಿಸುತ್ತದೆ.
- ವಿಂಗ್ ಕಮಾಂಡರ್ ಸುದರ್ಶನ್ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
