ಕರ್ನಾಟಕ ಮರೆತ ಕನ್ನಡಿಗರು

ಎಲ್ಲೇ ಇದ್ದರೂ ಇವರ ಮನೆ ಮಾತು ಕನ್ನಡ. ಹೊಸ್ತಿಲು ದಾಟಿದರೆ ಇವರು ಆಡುವುದು ತಮಿಳು ಭಾಷೆ. ಯಾಕೆಂದರೆ ತಮಿಳು ಇವರ ಅನ್ನದ ಭಾಷೆ. ತಮಿಳುನಾಡಿನಲ್ಲಿ ಕನ್ನಡ ಕಲಿಯಲು ಶಾಲೆಗಳಿಲ್ಲ. ಹಾಗಾಗಿ ಇವರು ತಮಿಳು ಕಲಿಯುವುದು ಅನಿವಾರ್ಯ.

ಮೊನ್ನೆ ದೆಹಲಿಯಲ್ಲಿ ಹಿರಿಯ ಪತ್ರಕರ್ತ ಉಮಾಪತಿಯವರು ಪರಿಚಯವಾದರು. ಅದಕ್ಕೂ ಮೊದಲು ನಾವಿಬ್ಬರೂ ಬರಹದ ಮೂಲಕ ಪರಸ್ಪರ ಗೊತ್ತಿರುವವರೇ, ಉಮಾಪತಿಯವರು ಬಹಳ ಕಾಲದಿಂದ ದೆಹಲಿಯಲ್ಲಿದ್ದು ಕನ್ನಡ ಪತ್ರಿಕೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಕುಬರವಣಿಗೆ ಅವರ ವಿಶಿಷ್ಠ ಶೈಲಿ, ಈಗಲೂ ಅವರು ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಿಗೆ ದೆಹಲಿಯಿಂದ ಬರೆಯುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರು ದೆಹಲಿಗೆ ವಲಸೆ ಬಂದ ನೂರಾರು ಕನ್ನಡ ಕುಟುಂಬಗಳ ಬಗ್ಗೆ ಒಂದು ಅಧ್ಯಯನ ಲೇಖನ ಬರೆದರು.ಅದರ ಒಂದು ಪ್ರತಿಯನ್ನು ನನಗೂ ಕಳುಹಿಸಿದರು ಅದನ್ನು ಓದಿ ನಾನು ಇನ್ನೂ ಕುತೂಹಲಗೊಂಡೆ.

ಸುಮಾರು ೪೦೦ – ೫೦೦ ವರ್ಷಗಳ ಹಿಂದೆಯೇ ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋದ ಹಲವಾರು ನೇಕಾರ ಕುಟುಂಬಗಳು, ತಮಿಳು ನಾಡಿನಲ್ಲಿ ತೊಂಭತ್ತು ಊರುಗಳಲ್ಲಿ ಇವರು ವಾಸವಿದ್ದಾರೆ. ಸರಿ ಸುಮಾರು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಇವರ ಜನ ಸಂಖ್ಯೆಯಂತೆ. ಎಲ್ಲೇ ಇದ್ದರೂ ಇವರ ಮನೆ ಮಾತು ಕನ್ನಡ. ಹೊಸ್ತಿಲು ದಾಟಿದರೆ ಇವರು ಆಡುವುದು ತಮಿಳು ಭಾಷೆ. ಯಾಕೆಂದರೆ ತಮಿಳು ಇವರ ಅನ್ನದ ಭಾಷೆ. ತಮಿಳುನಾಡಿನಲ್ಲಿ ಕನ್ನಡ ಕಲಿಯಲು ಶಾಲೆಗಳಿಲ್ಲ. ಹಾಗಾಗಿ ಇವರು ತಮಿಳು ಕಲಿಯುವುದು ಅನಿವಾರ್ಯ. ಕೈ ಮಗ್ಗಗಳಲ್ಲಿ ನೇಕಾರಿಕೆ ಮಾಡುವುದು ಇವರ ಕುಲ ಕಸುಬು. ಯಾಂತ್ರೀಕರಣದಿಂದಾಗಿ ಕೈ ಮಗ್ಗಗಳು ಈಗ ನೆಲ ಕಚ್ಚಿದ್ದಾವೆ. ಅದರಿಂದ ಇವರ ಬದುಕು ದಿಕ್ಕಾಪಾಲಾಯಿತು. ಇಂಥ ಕುಟುಂಬಗಳು ಅನ್ನ ಹುಡುಕುತ್ತ ಹೊರಟರು,ನೇಕಾರಿಕೆ ಬಿಟ್ಟು ಬೇರೇನೂ ಗೊತ್ತಿರದ ಇವರು ವಲಸೆ ಬಂದದ್ದು ದೆಹಲಿಗೆ.

ಇಲ್ಲಿ ಇವರಿಗೆ ಆಶ್ರಯ ಕೊಟ್ಟವರು ಪಂಜಾಬಿಗಳು. ನೇಕಾರಿಕೆ ಕುಲ ಕಸುಬಾದರೂ ದಿಲ್ಲಿಯಲ್ಲಿ ಬದುಕಲು ಅಂಥ ಉದ್ಯೋಗಗಳಿರಲಿಲ್ಲ. ಮೊದಮೊದಲು ಒಂದಷ್ಟು ಕಂಬಳಿ ನೇಯುವ ಉದ್ಯೋಗ ಮಾಡಿದರು. ಅದೂ ಬಹಳ ದಿನ ಮುಂದುವರೆಯಲಿಲ್ಲ. ಪಂಜಾಬಿ ಚಹಾದ ಅಂಗಡಿಗಳಲ್ಲಿ, ಮನೆಗೆಲಸಗಳಲ್ಲಿ, ರಸ್ತೆ ಗುಡಿಸುವ ಕೆಲಸಗಳಲ್ಲಿ ಬದುಕು ಕಟ್ಟಿಕೊಂಡರು. ಹೇಗೆ ಇದ್ದರೂ ಕನ್ನಡವನ್ನು ಬಿಡಲಿಲ್ಲ. ಹೊಸ್ತಿಲಾಚೆ ತಮಿಳು, ಹಿಂದಿ ಭಾಷೆ ಆಡುತಿದ್ದರೂ, ಹೊಸ್ತಿಲೊಳಗೆ ಬಂದರೆ ಕನ್ನಡವೇ ಇವರ ಆರಾಧ್ಯ ದೇವರು. ಇಂದಿಗೂ ಹಾಗೆಯೇ. ಅಸಲು ಕರ್ನಾಟಕದಲ್ಲಿ ಇವರದು ದೇವಾಂಗ ಕುಲ. ಹಂಪಿಯ ಹೇಮಕೂಟದ ದಯಾನಂದ ಸ್ವಾಮೀಜಿಗಳು ಇವರ ಕುಲಗುರುಗಳು ಎಂದು ಹೇಳುತ್ತಾರೆ. ಇಂದಿಗೂ ದಿಲ್ಲಿಯಲ್ಲಿ ಇವರು ಚೌಡೇಶ್ವರಿ ದೇವಿ ಉತ್ಸವ ನಡೆಸುತ್ತಾರೆ. ತಮಗೆ ಸೂರು ಇಲ್ಲದಿದ್ದರೂ ತಾಯಿ ಚೌಡೇಶ್ವರಿಗೆ ಗುಡಿ ಕಟ್ಟಿದ್ದಾರೆ ಎಂದು ಉಮಾಪತಿಯವರು ಹೇಳುತ್ತಾರೆ.

ದಿಲ್ಲಿಯ ಪೂರ್ವಕ್ಕೆ ಯಮುನಾ ನದಿಯ ಆಚೆಗಿರುವ ಮಯೂರ ವಿಹಾರದ ಸುತ್ತ ಹರಡಿರುವ ಕಲ್ಯಾಣಪುರಿ, ತ್ರಿಲೋಕಪುರಿ ಎಂಬ ಜನನಿಬಿಡ ವಸತಿಗಳಲ್ಲಿ ಈ ಕನ್ನಡಿಗರಿದ್ದಾರೆ. ಇವರಿಗೆ ಕನ್ನಡದ ಬಗ್ಗೆ ಪ್ರೀತಿ ಇದೆ. ಆದರೆ ಕರ್ನಾಟಕ ಇವರ ಪಾಲಿಗೆ ಕನ್ನಡಿಯ ಗಂಟಾಗಿದೆ. ಇವರ ಬಗ್ಗೆ ಉಮಾಪತಿಯವರು ಇನ್ನಷ್ಟು ಅಧ್ಯಯನಗಳು ನಡೆಯಬೇಕೆಂದು ಹೇಳುತ್ತಾರೆ. ಈ ಕುರಿತು ಹಲವರ ಗಮನ ಸೆಳೆಯಲು ಯತ್ನಿಸಿದ್ದಾರೆ. ಆದರೆ ಫಲ ಸಿಕ್ಕಿಲ್ಲ ಎಂದು ವಿಷಾದದಿಂದ ಹೇಳುತ್ತಾರೆ. ಕರ್ನಾಟಕ ಅವರನ್ನು ಮರೆತು ಕುಳಿತಿದ್ದರೂ ಶತಮಾನಗಳಿಂದ ನಾಡಿನ ಹೊರಗಿದ್ದರೂ ಇವರು ಕನ್ನಡವನ್ನು ಮರೆತಿಲ್ಲ. ನಾಡು ಇವರನ್ನು ಮರೆತಿದ್ದರೂ ಇವರು ಕನ್ನಡ ನುಡಿಯನ್ನು ಮರೆತಿಲ್ಲ.

cropped-30411-bf2fb3_598d7b8de0f44f1280cea3ca2b5e61demv2.jpg

ಲೇಖನ – ಹೂಲಿ ಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW