ವಿದ್ವಾನ್ ನವೀನ ಗಂಗೋತ್ರಿಯವರು ಉತ್ತರ ಕನ್ನಡದ ಯಲ್ಲಾಪುರದವರು. ಪಾಣಿನೀಯ ವ್ಯಾಕರಣದಲ್ಲಿ ಉನ್ನತ ಶಿಕ್ಷಣ ಹಾಗೂ ಡಾಕ್ಟರೇಟ್ ಪಡೆದವರು. ಅವರ ಕಥಾಗತ ಐತಿಹಾಸಿಕ ಕಥಾನಕದ ಕುರಿತು ವಾಣಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕಗಳು : ಕಥಾಗತ
ಲೇಖಕರು: ಡಾ. ನವೀನ ಗಂಗೋತ್ರಿ
ಮುದ್ರಣ: ೨೦೨೩
ಪುಟಗಳು: ೧೪೨
ಬೆಲೆ: ೧೬೦/-
ಪ್ರಕಾಶಕರು: ಸ್ವಸ್ತಿ ಪ್ರಕಾಶನ
ಡಾ. ನವೀನ ಗಂಗೋತ್ರಿ ಅವರ ಲೇಖನಗಳು ಹಾಗೂ ಅಂಕಣಗಳು ಕನ್ನಡದ ಪ್ರಚಲಿತ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಆಗಾಗ ಬರುತ್ತಿರುತ್ತದೆ. ಕನ್ನಡ, ಸಂಸ್ಕತ ಹಾಗೂ ಇಂಗ್ಲಿಷ್ ಭಾಷೆಯ ಸಾಹಿತ್ಯ ಕೃತಿಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. “ಅಂಟಿಕೊಳ್ಳದ ಚಿತ್ರಗಳು” (ಕವಿತಾ ಸಂಕಲನ), “ಸಂಕ” (ಕಥಾ ಸಂಕಲನ), ಮೂರು ಅನುವಾದ ಗ್ರಂಥಗಳು ಪ್ರಕಟವಾಗಿದ್ದು “ಭೂಷಣಸಾರ ಗ್ರಂಥ” (ಸಂಸ್ಕೃತ ವ್ಯಾಕರಣ) ದ ಕನ್ನಡಾನುವಾದ ಇತ್ತೀಚಿನ ಪ್ರಕಟಿತ ಕೃತಿಗಳು.
“ಕಥಾಗತ” ಐತಿಹಾಸಿಕ ಕಥಾನಕವನ್ನು ಪುನಃ ನಿರೂಪಿಸಿರುವ ವಿನೂತನ ಪ್ರಯತ್ನ. ಇವುಗಳು ಕಥೆಗಳೇ ಹೌದಾದರೂ ಇವು ಕಾಲ್ಪನಿಕವಲ್ಲ. ಐತಿಹಾಸಿಕ ಗ್ರಂಥಗಳು, ವಿದೇಶೀ ಪ್ರವಾಸಿಗರ ಪ್ರವಾಸ ಕಥನ, ಜಾನಪದ ಕಥೆಗಳು ಹಾಗೂ ದಂತಕಥೆಗಳನ್ನು ಆಧಾರವಾಗಿಟ್ಟುಕೊಂಡು ಅದೇ ಕಥೆಗಳನ್ನು ವಿಭಿನ್ನವಾಗಿ ನಿರೂಪಿಸಿರುವ ಪ್ರಸ್ತುತಿಗಳಿವೆ. ಇಲ್ಲಿ ಲೇಖಕರ ಕಲ್ಪನೆಗಳು, ಅವರು ಸೃಷ್ಟಿಸಿದ ಪಾತ್ರಗಳು ಇವೆಯಾದರೂ ಅವು ಐತಿಹಾಸಿಕ ಕಥೆಯೊಂದನ್ನು ಹೇಳಲು ಮಾಧ್ಯಮವಾಗಿ ಸೃಷ್ಟಿಸಿದ ಪೂರಕ ಅಂಶಗಳು ಮಾತ್ರ. ಓದುಗನನ್ನು ಇತಿಹಾಸದ ಪುಟಗಳಿಗೆ ಸೆಳೆದುಕೊಳ್ಳಲು ಲೇಖಕರು ಬಳಸಿರುವುದು ಕಥನ ತಂತ್ರ.

ಇತಿಹಾಸವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಲು ಅತ್ಯಂತ ಪುರಾತನ ಹಾಗೂ ಪರಿಣಾಮಕಾರಿ ತಂತ್ರವೇ ಕಥನ ಎಂದಿದ್ದಾರೆ ಲೇಖಕರು. ಅದೆಷ್ಟೇ ಕಾಲ ಸರಿಯಲಿ, ಜನಸಾಮಾನ್ಯರ ಮನಸಲ್ಲಿ ಸದಾ ನೆನಪಿನಲ್ಲುಳಿಯುವ ಇತಿಹಾಸವೆಂದರೆ ಕಥಾಗತವಾದ ಇತಿಹಾಸ ಎನ್ನುತ್ತಾರವರು. ಅದರರ್ಥ ಕಥೆಯಲ್ಲಿ ಹಾಸುಹೊಕ್ಕಾದ ಇತಿಹಾಸದ ವಿಷಯ ಎಂದರ್ಥ. ಇಲ್ಲಿ ಕಥೆಯ ಪಾತ್ರಗಳು ಮಾತ್ರವಲ್ಲ ಆಯಾ ಪ್ರದೇಶದ ನದಿ, ಪರ್ವತ, ಬೆಟ್ಟ, ಕೋಟೆ, ಕೊತ್ತಲಗಳೂ ಕಥಾಗತವಾಗಿವೆ ಎನ್ನುತ್ತಾರವರು. ವಿಶೇಷವೆಂದರೆ, ಪ್ರತೀ ಕಥೆಯ ನಂತರವೂ ಅಯಾ ಕಥೆಗೆ ಪೂರಕವಾಗಿ ಬಳಸಿದ ಆಕರಗ್ರಂಥಗಳ ಮಾಹಿತಿಯನ್ನೂ ಒದಗಿಸಲಾಗಿದೆ.
ಈ ಪುಸ್ತಕದ ಇನ್ನೊಂದು ವಿಶೇಷವೆಂದರೆ, ಲೇಖಕರು ಬಳಸಿದ ಭಾಷೆ. ಸುಸಂಸ್ಕೃತ ಪದ, ಅಪೂರ್ವವಾದ ವಿಶೇಷಣಗಳು, ಐತಿಹಾಸಿಕ ಕಥೆಗಳಿಗೆ ಸರಿಹೊಂದುವಂತಹ ಉನ್ನತ ಮಟ್ಟದ ಸಂಭಾಷಣೆಗಳು, ಆಗಿನ ಜೀವನಶೈಲಿಯ ವಿವರ ಮುಂತಾದವು ಓದಿನ ಸೊಗಸು ಹೆಚ್ಚಿಸುತ್ತದೆ. ಕಥೆಗಳಲ್ಲಿ ಬರುವ ವಿವರಗಳು ಒಂದೇ ಓದಿಗೆ ದಕ್ಕದಿದ್ದರೂ, ಆಯಾ ಐತಿಹಾಸಿಕ ಸ್ಥಳಕ್ಕೆ ಭೇಟಿಯಿತ್ತು ಅಲ್ಲಿನ ವಿಶೇಷತೆ ತಿಳಿದುಕೊಂಡರೆ ಹೊಸದೊಂದು ಅನುಭೂತಿ ತರಬಲ್ಲವು. ಈ ಪುಸ್ತಕದಲ್ಲಿ ಒಟ್ಟೂ ಎಂಟು ಕಥೆಗಳಿವೆ. ಅದರಲ್ಲಿ ಒಂದೆರಡು ಕಥೆಗಳನ್ನು ಇಲ್ಲಿ ಪರಿಚಯಿಸುತ್ತೇನೆ.
ಕಣ್ಣು ಕೋರೈಸಿ ಪೊಣ್ಮಿದುದು ಅಗ್ಗಿಬಿತ್ತ
“ಏನೇ ಶುಖ ಭಾಷಿಣಿ” ನರ್ತನಶಾಲೆಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದವರು ನೃತ್ಯ ವಿದುಷಿ ಭ್ರಮರಿ. ಬೇಲೂರು, ಹಳೆಬೀಡಿನ ಶಿಲಾಬಾಲಿಕೆಯರಲ್ಲಿ ಕೆತ್ತಿದ ಆ ಅಪರೂಪದ ನಾಟ್ಯಭಂಗಿಯನ್ನು ಸಾಧಿಸಲು ಯತ್ನಿಸಿ ವಿಫಲರಾಗುತ್ತಿದ್ದರು ಅವರ ಶಿಷ್ಯೆಯರು. ಈ ಸನ್ನಿವೇಷದಲ್ಲಿ ನಿರೂಪಕರು ಕಲೆಯ ಬಗ್ಗೆ ಹೇಳುವ ಮಾತು “ತಾಳ್ಮೆ ಸಿದ್ಧಿಸುವವರೆಗೂ ಅದೇನು ಅಭಿನಯಿಸಿದರೂ ಅದೊಂದು ಅನುಕರಣೆಯಷ್ಟೇ, ಕಲಾವೇಶವಲ್ಲ!” ಎನ್ನುವ ಮಾತು. ಪ್ರತಿಯೊಂದು ಕಲೆಯೂ ಆಂತರ್ಯದಲ್ಲಿ ಇನ್ನೊಂದು ಕಲೆಯೊಂದಿಗೆ ಸಂಪರ್ಕ ಹೊಂದಿರುತ್ತದೆ! ಎನ್ನುವ ಮಾತು. ಇದಂತೂ ಸತ್ಯಸ್ಯ ಸತ್ಯ! ಸಂಗೀತ ಕೇಳುತ್ತಾ ಸಾಲೊಂದು ಹುಟ್ಟುವುದು, ನೃತ್ಯದ ಭಂಗಿಯೊಂದನ್ನು ನೋಡಿ ಶಿಲ್ಪವೋ, ಚಿತ್ರವೋ ಸೃಷ್ಟಿಯಾವುವುದು ಹಾಗೇ ಅಲ್ಲವೇ? ಹಾಗೆಯೇ ನೃತ್ಯ ಕಲೆಯೂ ಅನುಕರಣೆಯಲ್ಲ, ಅಭಿನಯ ಮಾತ್ರವಲ್ಲ… ಅದೊಂದು ಪ್ರತಿಸೃಷ್ಟಿ ಆಗಬೇಕು ಎನ್ನುತ್ತಾರೆ ವಿದುಷಿ ಭ್ರಮರಿ.
ಎಷ್ಟೇ ಯತ್ನಿಸಿದರೂ ಅವರ ಶಿಷ್ಯೆಯರು ತ್ರಿಭಂಗಿ ಸಾಧಿಸಲು ಸಾಧ್ಯವಾಗದಿದ್ದಾಗ,ಅವರಿಗೆ ವಿರಮಿಸಲು ಹೇಳಿ, ರಾಜ ಬಿಟ್ಟಿದೇವ ಕನಸುತ್ತಿದ್ದ ಚೆನ್ನಕೇಶವನ ಆಲಯವು ನನಸಾದ ಬಗೆಯನ್ನು ಕಥೆಯಾಗಿ ಹೇಳತೊಡಗುತ್ತಾರೆ. ಈ ಭಾಗವನ್ನು ಕಥೆಯಂತಲ್ಲದೇ ರಾಜ ಬಿಟ್ಟಿದೇವ ಅಥವಾ ವಿಷ್ಣುವರ್ಧನ, ಅವನ ಆಸ್ಥಾನ, ಅವನು ಕರೆದ ಶಿಲ್ಪಿಗಳ ಸಭೆ, ಶಿಲ್ಪಿಗಳ ಮುಖ್ಯಸ್ಥ ಆಲಯ ನಿರ್ಮಾಣದ ಪ್ರತಿ ಹಂತವನ್ನು ರಾಜನಿಗೆ ವಿವರಿಸುವ ಬಗೆಯನ್ನು ಹಂತ ಹಂತವಾಗಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ ಲೇಖಕರು. ಈ ಕಥೆಯನ್ನು ಕೇಳಿ ಮುಗಿಸುವ ಹೊತ್ತಿಗೆ ವಿದುಷಿ ಭ್ರಮರಿಯವರ ಶಿಷ್ಯೆಯರು ಹೇಳುವ ಮಾತು “ಶಿಲ್ಪಿಗಳು ಅಂದು ಆ ಶಿಲ್ಪದಲ್ಲಿ ಮೂಡಿಸಿದ ಭಾವ ಬಂಗಿಯನ್ನು ನಮ್ಮಿಂದ ಅಭಿನಯಿಸಲೂ ಸಾಧ್ಯವಾಗುತ್ತಿಲ್ಲವಲ್ಲ!” ಎಂದು.
ಭಾಗಮತಿಯೆಂಬ ಶಾಯರಿ
ಗೋಲ್ಕೊಂಡದ ಕುಲಿ ಕುತುಬ್ ಶಾಹ್ ಒಬ್ಬ ಶಾಯರಿಯಾಗಿದ್ದ. ದೇವಳದ ಸೇವೆಯಲ್ಲಿ ನೃತ್ಯ ಮಾಡುತ್ತಿದ್ದ ಗಣಿಕಾ ಕುಲದ ಸ್ತ್ರೀ ಭಾಗಮತಿಯೆಡೆಗೆ ಅವನು ಆಕರ್ಷಿತನಾಗುತ್ತಾನೆ. ಕಥೆಯ ಆರಂಭದಲ್ಲಿ ಭಾಗಮತಿಗೆ ಷೆಹ್ಜಾದನ ಭೇಟಿಗೆ ಬರುವಂತೆ ಹೇಳಿ ಕಳಿಸಲಾಗುತ್ತದೆ. ಇಲ್ಲಿ ಭಾಗಮತಿ ನಡೆದು ಬರುವ ಠೀವಿ, ಅವಳ ಭಾವ ಭಂಗಿ, ರಾಜದೂತನೊಡನೆ ಆಕೆಯ ನಡವಳಿಕೆಗಳು ರಾಣಿಯ ಲಕ್ಷಣಗಳಿಂದ ಕೂಡಿದ ಕ್ಷಾತ್ರಿಣಿಯೊಬ್ಬಳ ಚಿತ್ರಣವನ್ನು ತಂದು ಕೊಡುವಲ್ಲಿ ಯಶಸ್ವಿಯಾಗುತ್ತದೆ. ಶುಕ್ರವಾರ ಷೆಹ್ಜಾದನ ಭೇಟಿಗೂ ಮುನ್ನ ಭಾಗಮತಿ ದೇವರೆದಿರು ಅರ್ಪಿಸುವ ನೃತ್ಯ ಸೇವೆಯ ವಿವರವೂ ಕಣ್ಣಿಗೆ ಕಟ್ಟುವಂತಿದೆ. ಅದೇ ದಿನ ಷೆಹ್ಜಾದನನ್ನು ಭೇಟಿಯಾಗುವ ಭಾಗಮತಿ, ಆತನ ಶಾಯರಿಗಳಿಗೆ ಮನಸೋಲುತ್ತಾಳೆ. ಇಲ್ಲಿ ಲೇಖಕರು ಉಲ್ಲೇಖಿಸಿರುವ ಶಾಯರಿಗಳು ನಿಜಕ್ಕೂ ಚಿತ್ತಾಕರ್ಷಕ.
ಹೀಗೆ, ಈರ್ವರ ಭೇಟಿ ಪ್ರತೀ ಶುಕ್ರವಾರವೂ ಮುಂದುವರೆಯುತ್ತದೆ. ಇಬ್ಬರಲ್ಲೂ ಪ್ರೇಮಾಂಕುರವಾದದ್ದು ಭಾಗಮತಿಯ ಅಕ್ಕ ಆನಂದಿನಿಗೆ ಸ್ಪಷ್ಟವಾಗುತ್ತದೆ. ಆಗವಳು ಕುಲಿ ಕುತುಬ್ ಶಾಹ್ ನ ಹುಟ್ಟಿನ ಗುಟ್ಟು ಹೇಳುತ್ತಾಳೆ. ಕುತುಬ್ ಶಾಹ್ ನ ತಂದೆ ಹಿಂದೊಮ್ಮೆ ತನ್ನ ಸಹೋದರನ ಭಯದಿಂದ ವಿಜಯನಗರದಲ್ಲಿ ಆಶ್ರಯ ಪಡೆದದ್ದು,ಆಲ್ಲಿನ ಆಸ್ಥಾನದಲ್ಲಿ ಅತಿಥಿಯಾಗಿ ಗೌರವಾನ್ವಿತನಾಗಿ ಬಾಳಿದ್ದು, ಭಾಗೀರತಿಯೆಂಬ ನೃತ್ಯಗಾತಿಯನ್ನು ಮದುವೆಯಾದದ್ದು, ನಂತರ ಇದ್ದಕ್ಕಿದ್ದಂತೆ ಅಲ್ಲಿಂದ ಮಾಯವಾಗಿ ಗೋಲ್ಕೊಂಡದ ಷೆಹನ್ ಶಾಹ್ ಆಗಿ ಪಟ್ಟಕ್ಕೇರಿದ ನಂತರ ವಿಜಯನಗರದ ಮೇಲೆ ದಾಳಿ ಮಾಡಿ, ಅದನ್ನು ಸರ್ವನಾಶ ಮಾಡಿದ ಕಥೆ ಹೇಳುತ್ತಾಳೆ. ಹಾಗೆ ಸರ್ವನಾಶ ಮಾಡಿದ ಇಬ್ರಾಹಿಂ ಮತ್ತು ವಿಜಯನಗರದ ಭಾಗೀರತಿಯ ಮಗನೇ ಕುಲಿ ಕುತುಬ್ ಶಾಹ್!
“ಹಾಗಿದ್ದರೆ ನಾನು ಅವನ ಬೇಗಂ ಆಗುವುದು ಬೇಡವೇ?” ಎಂದು ಕೇಳುತ್ತಾಳೆ. “ಆಗಬೇಕು ಖಂಡಿತಾ ಆಗಬೇಕು. ಗೋಲ್ಕೊಂಡದ ಕೋಟೆಯನ್ನಾಳುವ ರಾಜ್ಞಿಯಾಗಬೇಕು ನೀನು, ಅದಕ್ಕಾಗಿಯೇ ಈ ಕಥೆ ಹೇಳಿದೆ” ಎನ್ನುತ್ತಾಳೆ ಆನಂದಿನಿ. ಮುಂದೆ ಭಾಗಮತಿ ಕುತುಬ್ ಶಾಹ್ ನ ರಾಣಿಯಾದದ್ದು, ಅವಳ ಗೌರವಾರ್ಥ ಅರ್ಪಿಸಿದ ಊರೇ ಭಾಗನಗರ ಅಥವಾ ಭಾಗ್ಯನಗರ! ಆ ಭಾಗ್ಯನಗರ ಹೈದರಾಬಾದ್ ಆದದ್ದು ಇವಳ ಬಗ್ಗೆ ಅಸಹನೆಯಿದ್ದ ಕುತುಬ್ ಶಾಹ್ ನ ವಜೀರನಿಂದ. ಒಟ್ಟಾರೆ ಈ ಕಥೆಯನ್ನು ಓದಿ ಆನಂದಿಸಿದ ಮೇಲೋಮ್ಮೆ ಹೈದರಾಬಾದಿಗೆ ಹೋಗಿ, ಕುತುಬ್ ಮಿನಾರ್ ನ ಆವರಣದಲ್ಲಿ ಇಂದಿಗೂ ಪೂಜಿತಳಾಗುವ ಭಾಗ್ಯಲಕ್ಮ್ಮಿಯ ಗುಡಿ ನೋಡಬೇಕು ಎಂಬಾಸೆಯಾಗುವುದು.

ಇದೇ ರೀತಿ ಈ ಪುಸ್ತಕದಲ್ಲಿ
‘ಆನೆಬಂತೊಂದಾನೆ’ ಎಂಬ ಕಥೆ ವಿಜಯನಗರದ ವಿನಾಶದ ಕಥೆ ಹೇಳುತ್ತದೆ.
‘ನೆನೆವುದೆನ್ನಮನಂ’ ಕದಂಬರ ವೈಜಯಂತೀಪುರದ ಕಥೆ ಹೇಳುತ್ತದೆ.
‘ಕಾಂಚೀ ಕಾಂತಿಮತಿ’ – ಕಂಚಿಯ ದೇವಸೋಮೆಯ ಕಥೆ ಹೇಳುತ್ತದೆ.
ಆಗಲೇ ಹೇಳಿದಂತೆ ಈ ಕಥೆಗಳು ಒಂದೇ ಓದಿಗೆ ದಕ್ಕುವುದಿಲ್ಲ. ವ್ಯವಧಾನದಿಂದ ನಿಧಾನಕ್ಕೆ ಓದಿ ಮನಸಲ್ಲಿಳಿಸಬೇಕು. ಆಯಾ ಸ್ಥಳಕ್ಕೆ ಭೇಟಿಯಿತ್ತಾಗ ಈ ಕಥೆಗಳನ್ನು ನೆನೆದರೆ ಮತ್ತಷ್ಟು ಮನದಟ್ಟಾಗಿ ಕಥೆಯೂ, ಐತಿಹಾಸಿಕ ಕ್ಷೇತ್ರದ ಮಹತ್ವವೂ ಹೃದ್ಗತವಾಗುವುದು. ಓದಿದರೆ ಹೊಸದೊಂದು ಲೋಕಕ್ಕೆ ಹೋಗಿ ಬಂದ ಅನುಭೂತಿಯಾಗುವುದು ನಿಜ. ಈ ಪುಸ್ತಕವನ್ನು ನನ್ನ ತಿಳಿವಿಗೆ ದಕ್ಕಿದಷ್ಟು ವಿವರಿಸುವ ಯತ್ನ ಮಾಡಿರುವೆ.
ಧನ್ಯವಾದಗಳು
- ವಾಣಿ ಭಟ್
