ಬಾಲ್ಯ, ಮುಗ್ಧತೆ ನಡುವೆ ಒಂದು ರೀತಿಯ ಅಂಜಿಕೆಗಳಿದ್ದವು. ಆ ಅಂಜಿಕೆಗಳು ನಮ್ಮ ಸುತ್ತಲಿನ ಸ್ಥಳಗಳಲ್ಲಿ ಇರಬಹುದು. ಅಥವಾ ನಮ್ಮ ಹಿರಿಯರು ನಮ್ಮನ್ನು ಕಾಯಲು ನಿರ್ಮಿಸಿದಂತಹ ಅಂತೇ ಕಂತೆಗಳ ನಾಲ್ಕು ಚೌಕಟ್ಟಿರಬಹುದು.
ನನ್ನೂರು ಅಪ್ಪಟ ಮಲೆನಾಡಿನ ಒಡಲಿನ ಪುಟ್ಟ ಹಳ್ಳಿ. ಈಗ್ಗೆ ಸುಮಾರು ೩೦ ವರುಷಗಳ ಹಿಂದೆ ಕಳೆದ ಬಾಲ್ಯ ತುಂಬಾ ನೆನಪು ಮಾಡಿಕೊಳ್ಳುವಷ್ಟು ಮಧುರ ಮತ್ತುಈಗ ಅವುಗಳನ್ನು ನೆನಪುಮಾಡಿಕೊಂಡಾಗ ನಗು ಉಕ್ಕುತ್ತದೆ. ನನ್ನ ಜೊತೆ ಶಾಲೆಗೆ ಜೊತೆಯಾಗಿ ಬರುತ್ತಿದ್ದವರು ನಮ್ಮ ಮನೆಯ ತೋಟ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳ ಮಕ್ಕಳು. ನಾವೆಲ್ಲ ಒಟ್ಟಿಗೆ ಸುಮಾರು ೧ ಕಿಮೀ ದೂರವಿದ್ದ ಶಾಲೆಗೆ ಜಲ್ಲಿಕಲ್ಲಿನ ರಸ್ತೆಯಲ್ಲಿ ನೆಡೆದೆ ಹೋಗಿ ಬರುತ್ತಿದ್ದೆವು.
ಆಗೆಲ್ಲ ಟಿವಿಯಾಗಲೀ, ಊರಿನಲ್ಲೆಲ್ಲ ತರಹೇವಾರಿ ವಾಹನ ಗಳಾಗಲಿ ಇರಲಿಲ್ಲ. ನಮ್ಮದೇ ಊಹೆಗಳಿಂದ ತುಂಬಿರುತ್ತಿದ್ದ ಮುಗ್ಧ ಪ್ರಪಂಚ ಅಷ್ಟೆ. ದಿನಾಲೂ ಶಾಲೆ ಮುಗಿಸಿ ಬರುವಾಗ ದಾರಿಯ ಮಧ್ಯೆ ಒಂದು ಗಣಪತಿಯ ವಿಗ್ರಹವಿದ್ದ ಕಟ್ಟೆಯನ್ನು ದಾಟಿಯೇ ಬರಬೇಕಿತ್ತು. ಹಾಗೆ ಬರುವಾಗೆಲ್ಲ ದೊಡ್ಡಮ್ಮ ಹೇಳುತ್ತಿದ್ದ ಕಟ್ಟೆಯ ಇತಿಹಾಸ ನೆನಪಾಗಿ ಮೈ ಝಲ್ ಎನ್ನಿಸುತ್ತಿತ್ತು. ಭಯ ಹುಟ್ಟಿಸುತ್ತಿದ್ದ ಮೂರೂ ದಾರಿಯ ಮಧ್ಯೆವಿದ್ದಆ ಜಾಗದ ಹೆಸರು ಕವಡೆ ಕಟ್ಟೆ. ಅಲ್ಲಿಗೆ ಬಂದಾಕ್ಷಣ ಎದ್ದು- ಬಿದ್ದು ಅನ್ನುವಂತೆ ಹಿಂದೂ- ಮುಂದೂ ನೋಡದೆ ಓಡೋಡಿ ಅಲ್ಲಿಂದ ದಾಟಿ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನವಂತೂ ಕಾಡಿನ ಮತ್ತೊಂದು ರಸ್ತೆಯಿಂದ ಮನೆ ಸೇರುತ್ತಿದ್ದೆವು. ಆ ರಸ್ತೆಯಲ್ಲಿ ಅಷ್ಟೊಂದು ಭಯವೇನಿತ್ತು? ಎನ್ನುವುದಕ್ಕೆ ಕಾರಣವಿಷ್ಟೇ .
ಹಿಂದೆ ಪ್ರೇತಾತ್ಮಗಳು ಅದೇ ಕಟ್ಟೆಯ ಮೇಲೆ ಕುಳಿತು ಕವಡೆ ಆಡುತ್ತಿದ್ದವಂತೆ. ಕವಡೆ ಉರುಳಿಸುವ ಸದ್ದು ಎಲ್ಲೆಡೆ ಕೇಳುತ್ತಿತ್ತಂತೆ.ಹಾಗಾಗಿ ಆ ಜಾಗವನ್ನು ಕವಡೆ ಕಟ್ಟೆ ಎಂದು ಕರೆಯುತ್ತಿದ್ದರಂತೆ. ಅಲ್ಲಿ ಬಂದವರ ಮೇಲೆ ಪ್ರೇತಾತ್ಮಗಳು ದಾಳಿ ಮಾಡುತ್ತಿದ್ದವಂತೆ. ನಂತರ ಒಬ್ಬ ಪುರೋಹಿತರು ಅಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪರಿಹಾರವನ್ನು ಕಂಡು ಹಿಡಿದರಂತೆ. ಪ್ರತಿವರ್ಷ ರಾಮನ ಉತ್ಸವ ಮೂರ್ತಿಯನ್ನ ಕೂರಿಸಲು ಪ್ರಾರಂಭಿಸಿದ ಮೇಲೆ ಪ್ರೇತಾತ್ಮಗಳ ಹಾವಳಿ ತಪ್ಪಿತಂತೆ ಹೀಗೆ ಅಂತೇಗಳು ಆ ಕವಡೆ ಕಟ್ಟೆಯ ಸುತ್ತಲೂ ಕತೆಗಳಿವೆ.
ಆದರೆ ಕತೆಗೆ ಸರಿಯಾಗಿ ಊರಿಗೆ ಅಕಸ್ಮಾತ್ ಗಿ ಬಂದಿದ್ದ ಮಾನಸಿಕ ಅಸ್ವಸ್ಥ (ಹುಚ್ಚು)ನೊಬ್ಬ ಅದೇ ಕಟ್ಟೆಯ ಹಿಂಬದಿ ಬಿದ್ದು ತಲೆ ಒಡೆದು ಕೊಂಡು ಸತ್ತು ಬಿದ್ದಿದ್ದು ನಾವೆಲ್ಲ ನೋಡಿ ಬಿಟ್ಟಿದ್ದೆವು. ಮತ್ತಷ್ಟು ಹೆದರಿ ಹೋಗಿ ಕಟ್ಟೆಯ ರಸ್ತೆಯಲ್ಲಿ ಒಬ್ಬರೇ ಓಡಾಡುವ ಸಾಹಸವೇ ಮಾಡುತ್ತಿರಲಿಲ್ಲ.
ಇನ್ನೊಮ್ಮೆ ನಮಗೆ ಭಯ ಬೀಳಿಸುವ ಇನ್ನಷ್ಟು ಅನುಭವಗಳೆಂದರೆ ನಾವು ನೆಡೆದು ಬರುವಾಗ ದೂರದ ದೇವಸ್ಥಾನದ ಉಬ್ಬಿನಲ್ಲಿ ಕರ್ಕಶವಾಗಿ ಸದ್ದು ಮಾಡುತ್ತಾ ಹಳದಿ ಬಣ್ಣದ ರಕ್ಕಸ ಮುಸುಡಿಯನ್ನ ತೋರಿಸುತ್ತಾ ಬರುತ್ತಿದ್ದ, ಗಜ ಗಾತ್ರದ ಲಾರಿ ನೋಡಿ ಸತ್ತೇನೋ- ಕೆಟ್ಟೇನೋ ಎಂಬಂತೆ ರಸ್ತೆ ಪಕ್ಕದ ಗುಡ್ಡ ಹತ್ತಿ ಕಾಲಿನ ಚಪ್ಪಲಿ ಕೈಯಲ್ಲಿ ಹಿಡಿದು ಓಡಿ ಅವಿತು ಕೊಂಡಿದ್ದೇವು. ಅ ಹೆದರಿಕೆಗೆ ಕಾರಣ ಅಡಿಕೆ ತೆಗೆದು ಕೊಂಡು ಹೋಗಲು ಬರುತ್ತಿದ್ದ ಲಾರಿಯ ಹೊರತಾಗಿ ಬೇರೆ ಯಾವುದೇ ಲಾರಿ ಬಂದರೂ ಅದರಲ್ಲಿ ಕಳ್ಳರು ಇರುತ್ತಾರೆ ಎಂಬ ಊಹೆ ನಮ್ಮದಾಗಿತ್ತು.ಅದೇ ರೀತಿ ಜೀಪು, ಅಂಬಾಸಿಡರ್ ಕಾರುಗಳು ಊರಿನತ್ತ ಬಂದು ಬಿಟ್ಟರಂತೂ ಜೀವ ಬಾಯಿಗೇ ಬಂದಂತಾಗಿ ಎದ್ದು ಬಿದ್ದು ಪಕ್ಕದ ಹಾಡಿ (ಕಾಡು)ಗೆ ಹಾರಿಕೊಂಡು ಸಿಕ್ಕ ಸಿಕ್ಕ ಪೊದೆಯ ಹಿಂದೆ ಅಡಗಿ, ಅವುಗಳ ಸದ್ದು ಅಡಗುವರೆಗೂ ಕುಳಿತು ನಂತರವೂ ಅಡ್ಡ ರಸ್ತೆ ಹಿಡಿದು ಮನೆ ಸೇರುತ್ತಿದ್ದೆವು. ಅವಾಗೆಲ್ಲ ನದಿಗಳಿಗೆ ಅಡ್ಡಲಾಗಿ ರಸ್ತೆಗೆ ಹಾಕುತ್ತಿದ್ದ ಬ್ರಿಡ್ಜ್ ಗಳಿಗೆ ಮಕ್ಕಳನ್ನು ಬಲಿ ಕೊಡುತ್ತಾರೆ. ಅದಕ್ಕಾಗಿ ಮಕ್ಕಳನ್ನು ಹೊತ್ತೊಯ್ಯಲು ಕಾರು- ಜೀಪಿನಲ್ಲಿ ಬರುತ್ತಾರೆ ಎಂಬ ಸುದ್ದಿಗಳಿದ್ದವು. .
ಅವತ್ತಿನ ನಮಗಿದ್ದ ತಿಳುವಳಿಕೆಗೆ ಅದೆಲ್ಲ ತಪ್ಪು ಕಲ್ಪನೆಯೂ ಆಗಿರಲಿಲ್ಲ. ಈ ಊಹಾ ಪುಹಾ ಸುದ್ದಿಗಳ ನಡುವೆ ನಮ್ಮ ಬಾಲ್ಯದ ದಿನಗಳಲ್ಲಿ ಓಡಾಡಿದ ಜಲ್ಲಿ ರಸ್ತೆ, ಕಾಡು ಹಾದಿ, ನಮ್ಮ ಮುಗ್ಧತೆ, ಶಾಲಾ ದಿನಗಳು,ಆ ಭಯ ಎಲ್ಲವು ಅತ್ಯಂತ ಸಂತೋಷ ಕೊಟ್ಟಿದ್ದವು.ಆ ನೆನಪುಗಳು ಈಗಲೂ ಮಧುರವಾಗಿವೆ.
- ಚಿತ್ರಾ ಚಂದ್ರು

(ನಿಮ್ಮ ಸುತ್ತಲೂ ಈ ರೀತಿಯ ಅಂತೇ ಕಂತೆಗಳಿದ್ದರೆ ಬರೆದು ಕಳುಹಿಸಿ)