ಮೌನದೊಳಗಿನ ಮುಳ್ಳುಗಳು- ಕತೆ (ಭಾಗ ೨)

ವಯಸ್ಸಾಗುತ್ತಾ, ಆಗುತ್ತಾ ತಾವೇ ಕಟ್ಟಿದ ಸ್ವಂತ ಮನೆಯಲ್ಲಿ ರಾಮಣ್ಣ ಹಾಗೂ ಜಾನಕಿ ತಾವೇ ಪರಕೀಯರಾಗ ತೊಡಗಿದ ಪರಿ ಅವರಿಬ್ಬರನ್ನೂ ಘಾಸಿಗೊಳಿಸಿದ್ದಿತು. ಒಂದು ದಿನ ಛೂ ಮಂತ್ರ ಹಾಕಿದ ಹಾಗೆ ಜಾನಕಿ ಕಣ್ಣು ಮುಚ್ಚಿ ಕೊಂಡಳು. ಯಾವತ್ತೂ ತುಂಬಿ ಬಾರದ ಈ ಕೊರತೆಯ ಅರಿವು ತೀವ್ರವಾಗ ತೊಡಗಿದ್ದೇ ರಾಮಣ್ಣ ಮಂಕಾಗಿ ಹೋದ.

ಎಲ್ಲರಿಗೂ ಅವರವರ ಸಂಸಾರ ತಾಪತ್ರಯ ಇದ್ದೇ ಇರುತ್ತದೆ. ಮೊದ ಮೊದಲು ಗಟ್ಟಿಯಾಗಿದ್ದಾಗ ರಾಮಣ್ಣ ಹಾಗೂ ಜಾನಕಿ ಮಗಳ ಮನೆಗೆ ಹೋಗಿ ನಾಕು ದಿನ ಇದ್ದು ಬರುತ್ತಿದ್ದುದಿತ್ತು. ಇತ್ತೀಚಿನ ಕೆಲ ವರ್ಷಗಳಿಂದ ಆ ಪದ್ಧತಿಯೂ ತಪ್ಪಿತ್ತು. ತಾವಾಯ್ತು , ತಮ್ಮ ಮನೆಯಾಯ್ತು. ಅಲ್ಲೇ  ಹಗೂರಕ್ಕೆ ಓಡಾಡಿಕೊಂಡಿರುವುದಕ್ಕಷ್ಟೇ ಇಬ್ಬರೂ ಲಾಯಕ್ಕಾಗಿ ಬಿಟ್ಟಿದ್ದರು . ಎಷ್ಟೇ ಕೈಲಾಗದಿದ್ದರೂ ಜಾನಕಿ ಗಂಡನ  ಕೆಲ ಸೇವೆಗಳನ್ನು ಸ್ವ ಇಚ್ಛೆಯಿಂದ ತಾನೇ ಮಾಡುತ್ತಿದ್ದಳು . ರಾಮಣ್ಣನಿಗೆ ದಿನಕ್ಕೆ ಹತ್ತು ಸಲ ಕಾಫಿ  ಕುಡಿಯುವ ಚಟ . ಜಾನಕಿ ಸೌದೆ ಓಲೆ ಹೊತ್ತಿಸಿ ಕಾಫಿ ಕಾಸಿ ಕೊಡುತ್ತಿದ್ದಳು .

ರಾತ್ರಿ ಉಂಡರೆ ಜೀರ್ಣವಾಗುವುದಿಲ್ಲವೆಂದು ಊಟ ಬಿಟ್ಟವನಿಗೆ ಅವನ ಅಲುಗಾಡುವ ಹಲ್ಲುಗಳಿಗೆ ತ್ರಾಸವಾಗದಂತಹ  ಮೆತ್ತಗಿನ ಉಪ್ಪಿಟ್ಟೋ , ದೋಸೆಯೋ ಮಾಡಿಕೊಡುತ್ತಿದ್ದಳು .ತಪ್ಪದೆ ಎರಡು ಹೊತ್ತು ಹಾಲು ಕೊಡುತ್ತಿದ್ದಳು . ಅವನು ಸಪ್ಪಗಿದ್ದರೆ  ” ಹುಷಾರಿಲ್ವಾ …? ”  ಎಂದು ವಿಚಾರಿಸಿಕೊಳ್ಳುತ್ತಿದ್ದಳು . ತಾನು ಎಷ್ಟರ ಮಟ್ಟಿಗೆ ಅವಳಿಗೆ ಜೋತುಕೊಂಡು ಪರಾವಲಂಬಿಯಾಗಿಬಿಟ್ಟಿದ್ದೆ ಎಂಬುದು ರಾಮಣ್ಣನಿಗೆ ಅರಿವಿಗೆ ಬಂದುದು ಇದ್ದಕ್ಕಿದ್ದಂತೆ ಒಂದು ದಿನ ಹೇಳದೆ ಕೇಳದೆ ಅವಳು ಸತ್ತಾಗಲೇ . ಪುಣ್ಯಾತಗಿತ್ತಿ ಹಾಸಿಗೆ ಹಿಡಿದು ಮಲಗಲಿಲ್ಲ  , ಯಾರ ಕೈಲಿ ಸೇವೆ ಮಾಡಿಸಿಕೊಳ್ಳಲಿಲ್ಲ . ಅನಾಯಾಸದ ಮರಣ . ಬೆಳಗಿನ ತಿಂಡಿ ತಿಂದವಳು  ” ಯಾಕೋ ಸಂಕಟವಾಗುತ್ತೆ  ಸ್ವಲ್ಪ ಮಲಗ್ತೀನಿ ” ಎಂದಿದ್ದಳು . ಸ್ವಲ್ಪ ಎಂದು ಮಲಗಿದವಳು ಬಹಳ ಹೊತ್ತು ಏಳದಿದ್ದಾಗ , ರಾಮಣ್ಣ ಕಾಫಿಯ ಸಲುವಾಗಿ ಮಲಗಿದವಳು  ರಾಮಣ್ಣ ಕಾಫಿಯ ಸಲುವಾಗಿ   “ಏನೇ , ಏಳಲ್ವೇನೇ ….?” ಎಂದು ಕರೆದಿದ್ದ .

ಜಾನಕಿ ಅಲುಗಾಡಿದ  ಸೂಚನೆ ಕಾಣದಿದ್ದಾಗ ” ಎಂತಾ ನಿದ್ದೇನೇ ಎಂದು …..? ಸ್ವಲ್ಪ ಜಬರ್ದಸ್ತೂ ತೋರಿಸಿದ್ದ. ಆದರೂ ಜಾನಕಿಗೆ ಎಚ್ಚರವಾಗಿರಲಿಲ್ಲ .ಒಂದಷ್ಟು ಕಾಡು ಹತ್ತಿರ ಹೋಗಿ ಮೈ ಮುಟ್ಟಿ ಅಲುಗಿಸಿದರೆ ಯಾವ ಮಾಯದಲ್ಲಿ ಜೀವ ಹಾರಿಹೋಗಿತ್ತೋ ? ಬಿಪಿ ಇದ್ದದ್ದು ಹೌದು  .ಆದರೂ , ಜಾನಕೀ ಡಾಕ್ಟರು ಹೇಳಿದ ಹಾಗೆ ಕ್ರಮ ಪ್ರಕಾರ ಮಾತ್ರೆ ತಿನ್ನುತ್ತಿರಲಿಲ್ಲ . ಸೊಂಟ ನೋವು , ಮಂಡಿ ನೋವು ಪಿತ್ಥ ,ವಾತ ಎಂದು ದಿನಕ್ಕೊಂದು ಕಾಯಿಲೆ ಹೇಳಿಕೊಳ್ಳುತ್ತಿದ್ದ ಜಾನಕಿಯ ನೋವಿನ ಬಗ್ಗೆ ಬಹಳ ವರ್ಷಗಳಿಂದ ಕೇಳಿ ಕೇಳಿ ಅಭ್ಯಸ್ತನಾಗಿದ್ದ ರಾಮಣ್ಣನಿಗೆ ಅದೊಂದು ದೈನಂದಿನ ವರದಿಯಾಗಿತ್ತೇ ಹೊರತು ಸ್ಪಂದಿಸಬೇಕಾದ ವಿಚಾರವೆಂಬುದೇ ಮರೆತುಹೋದ  ಹಾಗಿತ್ತು .

ಅವಳು ಏನೊಂದು  ಕಾಯಿಲೆಯನ್ನು ಹೇಳಿಕೊಂಡು ಗೊಣಗಾಡದ ದಿನ ಅವನಿಗೆ ಭಣ ಭಣ ಎನಿಸುತ್ತಿದ್ದುದೂ  ನಿಜ !

indian-couple

ಫೋಟೋ ಕೃಪೆ : THE GFAR BLOG

ತಾನಾಗಿ  ” ಇವತ್ತು ನಿನ್ನ ಸೊಂಟ ನೆಟ್ಟಗಾದ ಹಾಗಿದೆ ….” ಎಂದು ಕೆಣಕುತ್ತಿದ್ದ . ಜಾನಕಿಗೆ ಚುಚ್ಚಿದಂತಾಗುತ್ತಿತ್ತು . ” ನಿಮಗೆ ತಮಾಷೆ . ನನಗಂತೂ ಸಾಕಾಗಿ ಹೋಗಿದೆ . ಇನ್ನು ಏನಾದ್ರೂ ಯಾರ ಹತ್ರಾನೂ ಹೇಳ್ಳೆ ಬಾರ್ದೂಅಂತ ಅಂದ್ಕೊಂಡಿದ್ದೀನಿ . ನನ್ನ ಕರ್ಮ ನಂದು  ” ಎಂದು ಹೇಳಿದರೂ  ಮತ್ತೆ ಹತ್ತು ನಿಮಿಷಕ್ಕೆ  ” ಯಾಕೋ ಎದೇಲಿ ಕಳಕ್ ಅಂದ ಹಾಗಾಯ್ತು . ಉಸಿರು ಹಿಡಕಂಡ್ ಬಿಟ್ಟಿದೆ ….” ಎಂದು ರಾಮಣ್ಣನೊಡನೆ ಅವಳು ತನಗಾಗಿದ್ದ ನೋವು ಹೇಳಿಕೊಳ್ಳಲೇಬೇಕು . ರಾಮಣ್ಣ  ” ನಿಧಾನಕ್ಕೆ ಉಸಿರಾಡು . ಬೇಕಾದ್ರೆ ಸ್ವಲ್ಪ ಹೊತ್ತು ಮಲಕ್ಕೋ ” ಎಂದು ಸಾಂತ್ವನ ಹೇಳಲೇಬೇಕು .

ಹಗಲಿರುಳೂ ತನ್ನ ಒಡನಾಡಿಯಾಗಿದ್ದ ಜಾನಕಿ ಕಣ್ಣು ಮುಚ್ಚಿ ತೆರೆಯುವುದರೊಳಗೆ  ಎನ್ನುವಂತೆ ಛೂ ಮಂತ್ರ ಹಾಕಿದ ಹಾಗೆ ಎಲ್ಲಾ ಕೊಡವಿ ಹೊರಟು ಹೋದದ್ದೇ ರಾಮಣ್ಣನಿಗೆ ದಿಗ್ಭ್ರಮೆ ಹಿಡಿದ ಹಾಗಾಯ್ತು. ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಸ್ಥಿತಿ. ಮೊದಲ ಹದಿನೈದು ದಿನ ಬರುವವರು , ಹೋಗುವವರು ಗದ್ದಲ ಗಲಾಟೆಗಳಲ್ಲಿ, ಪರ ಊರಿಂದ ಬಂದ ಮಕ್ಕಳು, ಮೊಮ್ಮಕ್ಕಳ ಒಡನಾಟದಲ್ಲಿ ಕರ್ಮಕಾಂಡಗಳ ಗಡಿ ಬಿಡಿಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಗಾಢವಾಗಿ ಚಿಂತಿಸಲೂ ಆಗದ ಪರಿಸ್ಥಿತಿಯಲ್ಲಿ ದಿನ ಕಳೆದು ಹೋಗಿತ್ತು. ಆದರೆ ಯಾವತ್ತೂ ಎಲ್ಲರೂ ಹೊರಟು ಹೋಗಿ ಮನೆ ಭಣ ಗುಟ್ಟತೊಡಗಿತೋ ರಾಮಣ್ಣ ಕಂಗೆಟ್ಟು ಹೋದ . ತಾನೊಬ್ಬ ಹೇಳಕೇಳುವವರಿಲ್ಲದ ಅನಾಥ ಎಂಬ ಸ್ವಾನುಕಂಪ ಎದೆ ಹಿಂಡತೊಡಗಿತು .

indian-couple
ಫೋಟೋ ಕೃಪೆ : downtoearth

ಸೊಸೆ ಹೊತ್ತು ಹೊತ್ತಿಗೆ ಊಟಕ್ಕೆ , ಕಾಫಿಗೆ ಕರೆಯುತ್ತಿದ್ದಳೇನೋ ನಿಜ . ಆದರೆ ಬೇಕೆನಿಸಿದಾಗಲೊಮ್ಮೆ ಹಕ್ಕಿನಿಂದ ಕಾಫಿ ಮಾಡಿಸಿಕೊಂಡು ಕುಡಿಯುವಂತಿಲ್ಲ . ಊಟಕ್ಕೆ ಕೂತಾಗ ” ಅದು ತಿನ್ನಿ … ಇದು ತಿನ್ನಿ …” ಎಂದು ಒತ್ತಾಯಿಸುವವರಿಲ್ಲ. ಇನ್ನು ರಾತ್ರಿಯ ತಿಂಡಿಯಂತೂ ಅವಳು ಹೋದ ಮೇಲೆ ಒಗ್ಗರಣೆ ಅವಲಕ್ಕಿಗೆ ಇಳಿದಿದೆ . ಸೊಸೆಗೆ ಅವಳ  ಕೆಲಸ  ಮಾಡಿಕೊಳ್ಳುವುದೇ ಏಳೋ ಹನ್ನೊಂದು , ಇನ್ನು ಇವನ ಬೇಕು ಬೇಡಗಳಿಗೆ ಗಮನ ಕೊಡುವಷ್ಟು ಪುರಸೊತ್ತು ಇಲ್ಲವೇ ..? ಇವೆಲ್ಲ  ಹಾಳಾಗಲಿ , ಹಾಳು ಶರೀರಕ್ಕೆ ಎಷ್ಟು ಸೇವೆ ಮಾಡಿದರೂ ಅಷ್ಟೇ ! ಒಂದು ದಿನ ಮಣ್ಣಿನೊಡನೆ ಮಣ್ಣಾಗಲೇಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ತನಗಾಗಿ ಮಿಡಿಯುತ್ತಿದ್ದ ಒಂದು ಜೀವ ಇನ್ನಿಲ್ಲವಾಗಿರುವುದರಿಂದುಂಟಾದ  ಶೂನ್ಯವನ್ನು ಯಾವುದರಿಂದ ತುಂಬಿಸಲಾದೀತು ….?

ಯಾವತ್ತೂ ತುಂಬಿ ಬಾರದ ಈ ಕೊರತೆಯ ಅರಿವು ತೀವ್ರವಾಗತೊಡಗಿದ್ದೇ ರಾಮಣ್ಣ ಮಂಕಾಗಿ ಹೋದ. ದಿನ ನಿತ್ಯದ ಪೇಪರ್  ಪಠಣದಲ್ಲಿಯ ಸ್ವಾದ ಎಲ್ಲೋ ತಲೆ ತಪ್ಪಿಸಿಕೊಂಡಿತು . ತನ್ನದೇ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದ ಸಹ ವೀಕ್ಷಕಳಿಲ್ಲದೆ ದೂರದರ್ಶನ ರುಚಿ ಕಳೆದುಕೊಂಡಿತು . ಸದಾ ಮುಲುಗುವ , ನರಳುವ ಜಾನಕಿ ಸನಿಹದ ಮಂಚದಲ್ಲಿಲ್ಲದೆ , ಕತ್ತು ಹಿಸುಕುವ  ಏಕಾಂತತೆ ಭೀತಿ ಹುಟ್ಟಿಸತೊಡಗಿತು. ರಾತ್ರಿಯ ನಿದ್ದೆ ಹೇಳದೆ, ಕೇಳದೆ  ಪರಾರಿಯಾಯಿತು. ರಾಮಣ್ಣನಿಗೆ ಯಾವುದೂ ಬೇಡವೆನ್ನಿಸುವ ಒಂದು ಮನೋಸ್ಥಿತಿ ಏನೋ ಪಾಪ ಪ್ರಜ್ಞೆ ತಾನು ಜಾನಕಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೇನೋ ಎನ್ನುವ ಶಂಕೆ. ರಾಮಣ್ಣನಾದರೂ ಏನು ಮಾಡುವಂತಿದ್ದ?

senior
ಫೋಟೋ ಕೃಪೆ : PBS

ವಯಸ್ಸಾಗುತ್ತಾ, ಆಗುತ್ತಾ ತಾವೇ ಕಟ್ಟಿದ ಸ್ವಂತ ಮನೆಯಲ್ಲಿ ತಾವೇ ಪರಕೀಯರಾಗತೊಡಗಿದ ಪರಿ ಅವರಿಬ್ಬರನ್ನೂ ಘಾಸಿಗೊಳಿಸಿದ್ದಿತು. ಜಾನಕಿಗೆ ಈ ಬಗ್ಗೆ ಆಕ್ರೋಶವಿತ್ತು. ” ಯಜಮಾನಿಕೆ ಅವನ ಕೈಗೆ ಕೊಟ್ಟಿದ್ದೇ ತಪ್ಪು” ಎಂದು ಅವಳು ರಾಮಣ್ಣನನ್ನು ಹಳಿಯುತ್ತಿದ್ದಳು. ರಾಮಣ್ಣನಿಗೆ ಮನೆಯ ಮೆಟ್ಟಿಲು ನಾಲ್ಕು ಮಾರು ನಡೆಯಲಾಗದ ಅತಂತ್ರ ಸ್ಥಿತಿ. ಇಂತವನು ಮಂದಿ ವ್ಯವಹಾರ, ಪೇಟೆಯ ವೈವಾಟು ಆಳು ಕಾಳುಗಳ ಲೆಕ್ಕಾಚಾರ ಎಲ್ಲಾ ಹೇಗೆ ನೋಡಿಕೊಂಡಾನು? ಒಂದೊಂದಾಗಿ, ಒಂದೊಂದಾಗಿ ಬಣ್ಣದ ವೇಷ ಕಳಚಿಕೊಳ್ಳುವಂತೆ ಕಳಚಿಕೊಳ್ಳಬೇಕಾದ್ದು ಅನಿವಾರ್ಯವಾಗಿತ್ತು. ಮಗನ ದರ್ಬಾರು ಬಂದ ಮೇಲೆ ಮನೆಯ ಕಳೆಯೇ ಬದಲಾಯಿಸಿ ಬಿಟ್ಟಿತು .

ಸೊಸೆ ಕೇಳಿದ್ದು, ಅವಳು ಕೇಳಿ ಬಾಯಿ ಮುಚ್ಚುವುದರೊಳಗೆ ಮನೆಗೆ ಬಂದಿತೆಂದೇ ಲೆಕ್ಕ. ಯಾವತ್ತೂ ಕೈ ಬಿಗಿ ಹಿಡಿದು ಅವಶ್ಯಕವಾದದ್ದಷ್ಟಕ್ಕೇ ಖರ್ಚು ಮಾಡಿಕೊಂಡು ಬಂದವರಿಗೆ ಈ ಬಾಜೀರಾಯನ ದರ್ಬಾರು ನೋಡಿ ದಿಗ್ ಬ್ರಾಂತಿ . ಇವನು ಮನೆ ಉಳಿಸುತ್ತಾನೆಯೇ ಎನ್ನುವ ಅನುಮಾನ. ಅಪ್ಪ ಮಗನಲ್ಲಿ ಪರಸ್ಪರ ಹೊಂದಾಣಿಕೆಯೇ ಆಗದೆ ಆಗಾಗ ಚಕಮಕಿಯ ಕಿಡಿ ಹಾರತೊಡಗಿ “ಎಲ್ಲಾದ್ರೂ ಹಾಳಾಗೋಗ್ಲಿ. ಅವರವರ ಹಣೇಬರ. ನಮಗೆ ಇನ್ನೆಷ್ಟು ದಿನ ಕೇಳೀಬೇಕು…? ಎಂದು ಜಾನಕಿ ಬುದ್ದಿವಾದ ಹೇಳ ತೊಡಗಿದ ಮೇಲೆ ರಾಮಣ್ಣನೂ ಬಾಯಿಗೆ ಬೀಗ ಹಾಕಿಕೊಂಡ. ಹೇಗೂ ಹೊಂದಿಕೊಂಡು ಕಳೆಯಲು ಬೇಕಷ್ಟೇ ?

ಎರಡನೆಯವನು ಇನ್ನೊಂದು ಫಜೀತಿ ಮಾಡಿಕೊಂಡಿದ್ದ. ತನ್ನ ಸಹೋದ್ಯೋಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಮೇಲೆ ಮನೆಗೆ ಸುದ್ದಿ ತಲುಪಿಸಿದ್ದ. ಸುದ್ದಿ ತಲುಪಿಸಿದ ಮೇಲೆ ಒಂದು ದಿನ ಸುಮ್ಮನೆ ಸತಿಪತ್ನೀಕನಾಗಿ ಬಂದು ಹೋಗಿದ್ದ. ಅನ್ಯ ಜಾತೀಯ ಹುಡುಗಿ. ಸಂಪ್ರದಾಯ ನಿಷ್ಠಳಾದ ಜಾನಕಿಗೆ ತಲೆಯ ಮೇಲೆ ಕಲ್ಲು ಹೊತ್ತು ಹಾಕಿದಂತಾಗಿತ್ತು. ಹೇಗೋ ಇನ್ನಷ್ಟು ದಿನ ಕೊನೆಗಾಲ ಕಳೆದು ಬಿಡೋಣವೆಂಬ ಆಶಯಕ್ಕೆ ಕೊಡಲಿ ಏಟು ಬಿದ್ದಿತ್ತು. ಇದ್ದುದರಲ್ಲಿ ರಾಮಣ್ಣ ವಾಸಿ. ಪೇಪರು ಗೀಪರು  ಓದಿ ಹೊರಗಿನ ವಿದ್ಯಮಾನ ಅರಿತವನು. “ಇಂತವು ಪ್ರಪಂಚದಲ್ಲಿ ಸಾವಿರ ನಡೆಯುತ್ತೆ. ನಿಂಗೆಲ್ಲೋ ಮರುಳು ಅದೇ ಕನವರಿಸ್ತಿದ್ದಿ. ಇನ್ನು ನಮ್ಮ ಕಾಲ ಮುಗೀತು. ಅವರಿಗೆ ಇಷ್ಟ ಬಂದ ಹಾಗೆ ಕುಣೀಲಿ…” ಎಂದು ಬುದ್ಧಿ ಮಾತು ಹೇಳುವ ಹೊಣೆಯನ್ನು ತಾನು ವಹಿಸಿಕೊಂಡ.

ಜಾನಕಿ ಏನೂ ಹೇಳದೆ ಸುಮ್ಮನಾದಳು. ಹೀಗೇ ಕಾಲ ಕಳೀತಾ ಕಳೀತಾ ಅವರಿಗೆ ಗೊತ್ತಿಲ್ಲದ ಹಾಗೆ ಮನೆಯಲ್ಲಿ ಎರಡು ಪಾರ್ಟಿ ಆದವು. ರಾಮಣ್ಣ, ಜಾನಕಿ ಒಂದು ಪಾರ್ಟಿ. ಹಿರೀ ಮಗ ಅವನ ಹೆಂಡತಿ ಮಕ್ಕಳು ಇನ್ನೊಂದು ಪಾರ್ಟಿ. ಒಂದು ಪಾರ್ಟಿಯವರು ಇನ್ನೊಂದು ಪಾರ್ಟಿಯವರ ಹತ್ತಿರ ಅನಾವಶ್ಯಕ ಮಾತಾಡುತ್ತಿರಲಿಲ್ಲ. ಅವಶ್ಯ ಬಿದ್ದರೆ ಮಾತು ಆಡ್ತಿರಲಿಲ್ಲಾಂತಲೂ ಅಲ್ಲ. ಆದರೆ ಅವಶ್ಯಕತೆ ಬೀಳುತ್ತಿದ್ದುದು ಕಮ್ಮಿ. ರಾಮಣ್ಣನಿಗೆ ತನ್ನ ಮಗ ತನ್ನ ಕಾರುಬಾರು, ಹಣಕಾಸಿನ  ವ್ಯವಹಾರದ ಬಗ್ಗೆ ಹೇಳಲಿ ಎಂದು ಒಳ ಆಸೆ. ಕೇಳಲು ಬಿಗುಮಾನ. ಮಗ ಏನೂ ಹೇಳುತ್ತಿರಲಿಲ್ಲ. ಎಲ್ಲಿಗೆ ಹೋಗ್ತೀನಿ, ಯಾವಾಗ ಬರ್ತೀನಿ ಅನ್ನೋದೂ ಇವರಿಗೆ ಹೇಳಬೇಕೆಂದು ಅವನಿಗೆ ಅನ್ನಿಸುತ್ತಿರಲಿಲ್ಲ. ಕೇಳದೆ ಯಾಕೆ ಹೇಳಲಿ ಎನ್ನುವುದು ಅವನ ಇರಾದೆ ಇದ್ದೀತು.

ಇತ್ತ ಜಾನಕಿಗೆ ದಿನಕ್ಕೊಂದು ಕಾಯಿಲೆ ಶುರುವಾಗ ತೊಡಗಿದ ಮೇಲೆ ರಾಮಣ್ಣ ಮೆತ್ತಗಾಗಬೇಕಾಯ್ತು. ಮಗನ ಹತ್ತಿರ  “ಔಷಧಿ  ತಂದ್ಕೊಡು ” ಎಂದು ಅವನು ಬಾಯಿ ಬಿಟ್ಟು ಹೇಳಬೇಕು. ದಿನಾ ಯಾರಾದರೂ  ” ಇವತ್ತು ನಿಂಗೇನು ಕಾಯಿಲೆ ?” ಎಂದು ಕೇಳಲು ಬರುತ್ತಾರಾ ? ಮಗ ಮಾತ್ರೆ , ಗೀತ್ರೆ  ತಂದು ಕೊಡುತ್ತಿದ್ದ. ತೆಗೆದುಕೊಳ್ಳುವ ಕ್ರಮ ವಿವರಿಸುತ್ತಿದ್ದ. ಬೆಲೆಯ ವಿವರ ಕೊಡುತ್ತಿದ್ದ. ಯಾಕೋ ಈ ಕೊನೆಯದು ಬೇಡ ಅನ್ನಿಸುತ್ತಿತ್ತು. ರಾಮಣ್ಣನಿಗೆ ಈ ಮನೆಗೆ ಇಷ್ಟರ ಮಟ್ಟಿಗೆ ಜೀವ ತೇಯ್ದವಳಿಗೆ ಸೇವೆ ಮಾಡುವುದು ಅವನ ಕರ್ತವ್ಯ ! ಮಾಡಿಸಿಕೊಳ್ಳುವುದು ತಮ್ಮ ಹಕ್ಕು.

ಕಥೆ ಮುಂದುವರಿಯುತ್ತದೆ…


  • ಪ್ರಭಾಕರ ತಾಮ್ರಗೌರಿ ( ಕತೆಗಾರ -ಕವಿ )

97071578_1061252307608487_3798392995531718656_o

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW