ಕಾಳೀ ಕಣಿವೆಯ ಕತೆಗಳು ಭಾಗ –೧೩

ಆಣೆಕಟ್ಟು ಕಟ್ಟಿದಾಗ ಶೂರ್ಪನಖಿಯ ಗುಹೆ ಅದರ ಬುಡದಲ್ಲಿಯೇ ಇರುತ್ತದೆ ಮತ್ತು ಮುಂದೆ ಅದು ಶಾಶ್ವತವಾಗಿ ಮಾಯವಾಗುತ್ತದೆ.ಮುಂದಿನ ಜನಾಂಗಕ್ಕೆ ಇಲ್ಲಿ ಶೂರ್ಪನಖಿ ಇದ್ದಳು ಎಂಬ ಕತೆಯೂ ಆಣೆಕಟ್ಟಿನ ನೀರಿನಲ್ಲಿ ಲೀನವಾಗಿ ಹೋಗುತ್ತದೆ ಎಂಬುದು ನನಗೆ ಖಾತ್ರಿಯಾಯಿತು.

ಸುರುವಾಯಿತು ನನ್ನ ಕೆಲಸ
ಬೆಟ್ಟದ ಗರ್ಭ ಕ್ಕೆಕನ್ನ ಹಾಕುವ ಕಾಯಕಕ್ಕೆ ಓನಾಮ
ಕಾಳೀ ನದಿಗೆ ಆಣೆಕಟ್ಟು ನಿರ್ಮಿಸುವ ಸ್ಥಳದ ಬುಡದಲ್ಲಿ ನಿಂತು ಮೇಲಕ್ಕೆ ನೋಡಿದರೆ ಎರಡೂ ಬದಿಯ ಬೆಟ್ಟಗಳು ನಾನೂರು ಅಡಿಗಿಂತಲೂ ಹೆಚ್ಚು ಎತ್ತರ ಮಟ್ಟದಲ್ಲಿರುವುದು ಕಾಣುತ್ತದೆ. ಈ ಎರಡೂ ಬೆಟ್ಟಗಳನ್ನು ಜೋಡಿಸಿಕೊಂಡು ಮಧ್ಯದಲ್ಲಿ ಆಣೆಕಟ್ಟು ಕಟ್ಟುವುದು ಸರಕಾರದ ಯೋಜನೆಯಾಗಿತ್ತು.
ಸೀನಿಯರ್‌ ಜಿಯಾಲಾಜಿಸ್ಟ ಶ್ರೀ ಶೇಷಗಿರಿಯವರು ನಮ್ಮ ಕೆಲಸ ಸುರು ಮಾಡೋಣ ಅಂದರು. ಶ್ರೀ ವಿ.ವೈ.ನಾಯಕ ಮತ್ತು ಶ್ರೀ ವಿ.ಎಸ್‌.ಉಪಾಧ್ಯಾಯ ಅವರು ನನ್ನನ್ನು ಶೇಷಗಿರಿಯವರಿಗೆ ಒಪ್ಪಿಸಿದರು. ‘ಇನ್ನು ನಿಮ್ಮ ಕೆಲಸ ಶೇಷಗಿರಿಯವರ ಜೊತೆಗಿರುತ್ತದೆ’ ಎಂದೂ ಹೇಳಿದರು. ನಾನು ಶೇಷಗಿರಿಯವರತ್ತ ನೋಡಿದೆ. ಅವರು ಪ್ರಯಾಣದ ಆಯಾಸವನ್ನೂ ಮರೆತು – ‘’ಎಸ್‌… ವುಯ್‌ ಆರ್‌ ಡುಯಿಂಗ್‌… ಟುಡೇ ವುಯ್‌ ವಿಲ್‌ ಗೋ ಟು ಲೆಫ್ಟ ಬ್ಯಾಂಕ್‌ ಸೈಡ್‌’’ ಅಂದರು. ಚಾಂದಗುಡೆಯವರು ಮತ್ತು ಶ್ರೀಧರ್‌ ಕಾಣಕೋಣಕರ ಅವರು ನನ್ನನ್ನೇ ನೋಡುತ್ತಿದ್ದರು. ಚಾಂದಗುಡೆಯವರು ಹತ್ತಿರ ಬಂದು ಮೆಲ್ಲಗೆ ಹೇಳಿದರು.
‘’ಕೆಲಸಾ ಮುಗಿಸಿಕೊಂಡು ಬರ್ರಿ. ದಾಮೋದರ ಹೊಟೆಲ್ಲಿನಾಗ ಊಟಾ ಹೇಳೇನಿ. ಕೂಡೇ ಊಟಾ ಮಾಡೂನು’’ ಅಂದರು. ನಾನು ತಲೆಯಾಡಿಸಿದೆ. ಶೇಷಗಿರಿಯವರು ನನ್ನತ್ತ ತಿರುಗಿ-
‘ಈಗ ನಾವು ಎಡದಂಡೆ ಬೆಟ್ಟ ಹತ್ತಿ ಕೆಲಸ ಸುರು ಮಾಡೋಣ’ ಎಂದು ಅರೆಬರೆ ಕನ್ನಡದಲ್ಲಿ ಹೇಳಿ ‘ಕಮಾನ್‌’ ಅನ್ನುತ್ತ ನಡದೇ ಬಿಟ್ಟರು. ನಾನು ಅವರ ಕೈಯಲ್ಲಿದ್ದ ಉಪಕರಣಗಳನ್ನು ತಗೆದುಕೊಂಡು ಹೆಗಲಿಗೇರಿಸಿದೆ. ಶ್ರೀ ಮಂಗಾರಾಮ ಅವರೂ ತಮ್ಮ ಕೈಯಲ್ಲಿ ಕಿರು ಸುತ್ತಿಗೆ ಮತ್ತು ಒಂದು ಡೈರಿ, ಒಂದು ಬ್ಲೂ ಪ್ರಿಂಟ ನಕಾಶೆ ಹಿಡಿದು ನಡೆದರು. ಉಪಾಧ್ಯಾರು ತಮ್ಮ ಸುತ್ತಿಗೆಯೊಂದಿಗೆ ನದಿಯ ಕಡೆಗೆ ಹೋದರು. ಅವರ ಹಿಂದೆಯೇ ನಮ್ಮ ಆಫೀಸರ್‌ ನಾಯಕ ಅವರೂ ನಡೆದರು. ನಾವು ಮೂವರೂ ಎಡದಂಡೆಯ ಬೆಟ್ಟದ ಕಡೆಗಿದ್ದ ಹಳೆಯ ಮೆಟ್ಟಿಲುಗಳನ್ನು ಹತ್ತತೊಡಗಿದೆವು.

stairs

ಬೆಟ್ಟದ ತುದಿಯಲ್ಲಿ ಇದ್ದನೊಬ್ಬ ಕಾಡು ಗಣೇಶ
ತಲೆಯೆತ್ತಿ ನೋಡಿದರೆ ತಲೆಯ ಮೇಲಿನ ಟೊಪ್ಪಿಗೆ ಬೀಳಬೇಕು. ಹಾಗಿತ್ತು ಬೆಟ್ಟದ ತುದಿ. ಅದರೆತ್ತರಕ್ಕೂ ಬೆಟ್ಟದ ತುದಿಯವರೆಗೆ ಕಚ್ಚಾ ಮೆಟ್ಟಿಲುಗಳನ್ನು ಹಿಂದೆಯೇ ಫಾರೆಸ್ಟಿನವರು ಮಾಡಿಸಿಟ್ಟಿದ್ದರು. ಯಾವಾಗಲಾದರೂ ಬೆಟ್ಟದ ಮೇಲಿನಿಂದ ಕೆಳಗೆ ನದಿಯತ್ತ ಇಳಿದು ಬರಲು ಅವರು ಈ ಮೆಟ್ಟಿಲುಗಳನ್ನು ಉಪಯೋಗಿಸುತ್ತದ್ದರಂತೆ. ಒಮ್ಮೆ ನಾನೂ ಒಬ್ಬನೇ ಇಲ್ಲಿಂದ ಬೆಟ್ಟದ ತುದಿಯವರೆಗೆ ಈ ಕಾಡಿನ ಇಳಿಜಾರು ಮೆಟ್ಟಿಲಿನಲ್ಲಿ ಹೋಗಿ ಬರಬೇಕು. ಅಲ್ಲಿ ತುದಿಯಲ್ಲಿ ಏನಿದೆಯೋ ನೋಡಬೇಕು.

ಗೊಂಡಾರಣ್ಯದಲ್ಲಿರುವ ಕಾಡುಗಲ್ಲೇ ಇಲ್ಲಿನ ಗಣೇಶ
ಚಾಂದಗುಡೆಯವರು ಬರುವಾಗ ದಾರಿಯಲ್ಲಿ ಹೇಳುತ್ತ ಬಂದಿದ್ದರು. ಅಲ್ಲಿ ಮೇಲೆ ಬೆಟ್ಟದ ತುದಿಯಲ್ಲಿ ಗಣೇಶನ ಚಿಕ್ಕ ಗುಡಿಯೊಂದಿದೆ. ಅದು ಹೆಸರಿಗಷ್ಟೇ ಗುಡಿ. ಯಾವ ಗುಡಿಯೂ ಅಲ್ಲಿಲ್ಲ. ಅಲ್ಲಿ ಒಂದು ಚಿಕ್ಕ ಕಲ್ಲಿನ ಕಟ್ಟೆಯ ಮೇಲೆ ಎರಡು ಉದ್ದವಾದ ಕರಿಯ ಕಲ್ಲುಗಳನ್ನು ನೆಟ್ಟಿದ್ದಾರೆ. ಅದಕ್ಕೆ ಎಣ್ಣೆ ಸವರಿ ಕುಂಕುಮ-ಅರಿಶಿಣ ಹಚ್ಚಿದ್ದಾರೆ. ಅದರ ಮುಂದೆ ಎಣ್ಣೆ ಹಾಕಿ ದೀಪ ಹಚ್ಚಲು ಒಂದು ಮಣ್ಮಿನ ಪಣತೆಯಿದೆ. ಇದಿಷ್ಟೇ ಅಲ್ಲಿನ ಗಣೇಶನ ರೂಪ. ಕಟ್ಟೆಯ ಮುಂದಿನ ಗಿಡದ ಟೊಂಗೆಗೆ ಎರಡು ಗಂಟೆಗಳನ್ನು ಯಾರೋ ತಂದು ಕಟ್ಟಿದ್ದಾರೆ. ಈ ಕಟ್ಟೆ ಕಟ್ಟಿದ್ದು, ಈ ಕಲ್ಲು ದೇವರನ್ನು ಅಲ್ಲಿ ನೆಟ್ಟವರು
ಯಾರೆಂದು ಯಾರಿಗೂ ಗೊತ್ತಿಲ್ಲ. ಯಾವ ಕಾಲದಲ್ಲಿ ಇದನ್ನು ನೆಟ್ಟಿದ್ದಾರೋ ಅದೂ ಗೊತ್ತಿಲ್ಲ. ಇದೊಂದು ಗೊಂಡಾರಣ್ಯದಲ್ಲಿರುವ ಬಯಲು ದೇವರು ಅಷ್ಟೇ. ಅದನ್ನು ಬಿಟ್ಟರೆ ಅಲ್ಲಿ ಇನ್ಯಾವ ಕ್ರಿಸ್ತರ ದೇವರಾಗಲೀ, ಮುಸುಲ್ಮಾನರ ದೇವರಾಗಲೀ ಆ ಕಾಡಿನಲ್ಲಿ ಎಲ್ಲೂ ಇಲ್ಲ.

ಅತ್ತ ಕಾಡಿನ ಕಡೆಗೆ ಹೋದ ಫಾರೆಸ್ಟಿನವರು, ಅಲ್ಲಿ ಕೆಲಸ ಮಾಡುವ ಕೂಲಿಕಾರರು, ಆಗಾಗ ಇಲ್ಲಿಗೆ ಬಂದು ಗಂಟೆ ಬಾರಿಸಿ ಕೈಮುಗಿದು ಹೋಗುತ್ತಾರೆ. ಇದಕ್ಕೆ ಗಣೇಶ ದೇವರು ಎಂದು ನಾಮಕರಣ ಮಾಡಿದವರು ಯಾವ ರಾಜ ಮಹಾರಾಜರೂ ಅಲ್ಲ. ಅರಣ್ಯದಲ್ಲಿ ಓಡಾಡುವ ಸಾಮಾನ್ಯ ಜನರೇ ಅದಕ್ಕೆ ಈ ಹೆಸರನ್ನು ತಗುಲಿಸಿದ್ದಾರೆ. ಇಲ್ಲಿ ನಿಯಮಿತವಾಗಿ ಯಾರೂ ಪೂಜೆಯನ್ನೂ ಮಾಡುವುದಿಲ್ಲ. ಕಾಡಿನಲ್ಲಿ ಅನಾಥನಂತೆ ಬಿದ್ದಿರುವ ಈ ಗಣೇಶ ಮುಂದೊಂದು ದಿನ ಜಗತ್‌ ಪ್ರಸಿದ್ಧನಾಗಿ ಹೋಗುತ್ತಾನೆ ಎಂದು ನನಗಂತೂ ಆಗ ಅನಿಸಿರಲಿಲ್ಲ.

river
ಫೋಟೋ ಕೃಪೆ : vikipedija

ಪ್ರಪಾತದ ಕೆಳಗೆ ಹರಿಯುತ್ತಿದ್ದಳು ಕಾಳಿ
ಇಲ್ಲಿಂದ ಹತ್ತು ಹೆಜ್ಜೆ ದಕ್ಷಿಣಕ್ಕೆ ನಡೆದು ಗುಡ್ಡ ಹತ್ತಿ ಕೆಳಗೆ ನೋಡಿದರೆ ದೊಡ್ಡ ಪ್ರಪಾತ ಕಾಣುತ್ತದೆ. ಅಲ್ಲಿಂದ ಕೆಳಗೆ ಹರಿಯುವ ಕಾಳೀ ನದಿ ಹಾಗೂ ಅದರಾಚೆಯ ಸಾಲು ಸಾಲಿನ ಬೆಟ್ಟಗಳು ನೋಡಲು ರಮ್ಯವಾಗಿ ಕಾಣುತ್ತವೆ. ಈ ಗಣೇಶ ಕಟ್ಟೆಗೆ ಹೊಂದಿಕೊಂಡೇ ದಾಂಡೇಲಿಯ ಕಡೆಗೆ ಹೋಗುವ ಕಾಡು ರಸ್ತೆಯಿದೆ. ಈ ರಸ್ತೆಯ ಎರಡೂ ಬದಿಯಲ್ಲಿ ದಟ್ಟ ಅರಣ್ಯವನ್ನು ಸೀಳಿಕೊಂಡು ದಾಂಡೇಲಿಯ ಕಡೆಗೆ ಹೋಗುತ್ತದೆ. ಇಲ್ಲಿಂದ ಪಶ್ಚಿಮದತ್ತ ತಿರುಗಿದರೆ ಲೋಂಡಾ, ಸೂಪಾಕ್ಕೂ ಹೋಗಬಹುದು. ಈ ಗಣೇಶ ಕಟ್ಟೆಯಿಂದ ರಸ್ತೆಗುಂಟ ನಡೆಯುತ್ತ ಎರಡು ಮೂರು ಮೈಲಿ ಮುಂದೆ ಹೋದರೆ ಉಸೋಡಾ ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಅಲ್ಲಿ ಇರುವುದು ಹತ್ತೇ ಮನೆಗಳು. ಮಕ್ಕಳು ಮುದುಕರು ಸೇರಿ ಹೆಚ್ಚೆಂದರೆ ಐವತ್ತು ಜನ ಅಲ್ಲಿರಬಹುದು. ಆದರೆ ಅತ್ತ ಒಬ್ಬರೇ ಹೋಗುವುದು ಅಪಾಯಕಾರಿ. ಅಲ್ಲಿ ಕರಡಿ ಮತ್ತು
ಕಾಡುಕೋಣಗಳು ತುಂಬ ಇವೆ.

forest_elephant

ಫೋಟೋ ಕೃಪೆ : university of oregon

ಹುಣ್ಣಿವೆಗೊಮ್ಮೆಶುಕ್ರವಾರಕ್ಕೊಮ್ಮೆ ಕಾಡಿನಿಂದ ಗಣೇಶನ ದರ್ಶನಕ್ಕೆ ಬರುವ ಆನೆಗಳು
ಒಮ್ಮೊಮ್ಮೆ ಆನೆಗಳೂ ರಸ್ತೆಗೆ ಅಡ್ಡಲಾಗಿ ನಿಂತಿರುತ್ತವೆ. ಅಷ್ಟೇ ಅಲ್ಲ. ಪ್ರತಿ ಹುಣ್ಣಿವೆಯ ದಿನದಂದು ಬೆಳದಿಂಗಳ ರಾತ್ರಿ ಹೊತ್ತು ಆನೆಗಳು ಕಾಡಿನಿಂದ ಈಚೆ ಬಂದು ಈ ಗಣೇಶನ ಕಟ್ಟೆ ಹತ್ತಿರ ಬಂದು ನಿಲ್ಲುತ್ತವಂತೆ. ಮರುದಿನ ಅತ್ತ ಹೋದವರು ಆನೆಗಳ ರಾಶಿ ಲದ್ದಿಯನ್ನು ನೋಡಿ ಅಂದಾಜು ಕಟ್ಟಿ ಬರುತ್ತಾರೆ. ಅಕಸ್ಮಾತ್‌ ಆನೆಗಳ ದರ್ಶನವಾದರೆ ಅಂಥವರು ಮರುದಿನ ಇಲ್ಲಿಗೆ ಬಂದು ಗಣೇಶನಿಗೆ ಹಣ್ಣು-ಕಾಯಿ ಪೂಜೆ ಮಾಡಿಕೊಂಡು ಹೋಗುತ್ತಾರೆ. ಹೀಗೆಂದು ಆನಂದರಾವ ಚಾಂದಗುಡೆಯವರು ತಾವೇ ಆನೆಗಳನ್ನು ಕಂಡವರಂತೆ ಗಾಬರಿಯಿಂದ ಹೇಳಿದ್ದರು. ಇದನ್ನೆಲ್ಲ ಹೇಳುವಾಗ ಅವರು ಒಮ್ಮೆಯೂ ನಕ್ಕಿರಲಿಲ್ಲ.
ನನಗೆ ಈ ಕಾಳೀ ಕಣಿವೆಯ ಕಾಡು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿತ್ತು. ಒಗ್ಗಿಯೂ ಹೋಗಿತ್ತು. ಮತ್ತು ಕಾಡಿನೊಳಗೆ ತಿರುಗಾಡುವ ಆಸಕ್ತಿಯೂ ಬೆಳೆದಿತ್ತು. ಒಂದಷ್ಟು ದೈವೀ ಭಕ್ತನಾದ ನನಗೆ ಒಂದು ಸಲ ಅಲ್ಲಿಗೆ ಹೋಗಿ ಆ ಕಾಡು ಗಣೇಶನಿಗೆ ಕೈಮುಗಿದು ಬರಬೇಕು ಎಂದೂ ಅನಿಸಿತ್ತು.

ದೊಡ್ಡ ಕೆಲಸದಲ್ಲಿ ನಾನೊಬ್ಬ ಚಿಕ್ಕ ಮನುಷ್ಯ
ನಾವು ಮೂರೂ ಜನ ಬೆಟ್ಟ ಹತ್ತತೊಡಗಿದೆವು. ಇಳಿಜಾರಿನಲ್ಲಿದ್ದ ಹಳೆಯ ಮೆಟ್ಟಿಲುಗಳು. ಮೇಲೆ ಹೋದಂತೆ ನದಿಯ ಪಾತ್ರ ಇನ್ನಷ್ಟು ಸ್ಪಷ್ಟವಾಗತೊಡಗಿತು.
moutain-peak
(ಸಾಂದರ್ಭಿಕ ಚಿತ್ರ)

ಸೂಪಾ ಆಣೆಕಟ್ಟು ನಿರ್ಮಿಸುವ ಮೊದಲು ಕಟ್ಟೆ ಕಟ್ಟುವ ಜಾಗದಲ್ಲಿ ಮತ್ತು ಎರಡೂ ಬೆಟ್ಟಗಳ ಭೂ ಸಾಮರ್ಥ್ಯದ ಬಗ್ಗೆ ತಜ್ಞರು ಅಧ್ಯಯನ ನಡೆಸಬೇಕಾಗಿತ್ತು. ಅಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಿರ್ಮಿತವಾದ ಭೂ ರಚನೆಯನ್ನು ವಿಶ್ಲೇಷಿಸಿ ಬೆಟ್ಟಗಳ ಒಳ ಭಾಗದಲ್ಲಿರುವ ಕಲ್ಲಿನ ಪದರುಗಳು, ಮಣ್ಣಿನ ಗುಣಗಳನ್ನು ಅನ್ವೇಷಣೆಗೆ ಒಳಪಡಿಸ ಬೇಕಾಗಿತ್ತು. ಅದಕ್ಕಾಗಿ ಎರಡೂ ಬದಿಯ ಬೆಟ್ಟದ ಒಡಲಿನಲ್ಲಿ ಇನ್ನೂರು-ಮುನ್ನೂರು ಅಡಿಗಳಷ್ಟು ಉದ್ದದ ಗುಹೆಗಳನ್ನು [DRIFT] ತೋಡಬೇಕಾಗಿತ್ತು. ಈ ಡ್ರಿಫ್ಟ್‌ ಗಳು ಆಣೆಕಟ್ಟಿನ ಬುಡದಿಂದ ಹಿಡಿದು ಕಟ್ಟೆಯ ಎತ್ತರದವರೆಗೆ ಅಂದರೆ ಸಮುದ್ರ ಮಟ್ಟದಿಂದ ೫೬೪ ಕೀ.ಮೀ. ಎತ್ತರಕ್ಕೆ ಮತ್ತು ಆಣೆಕಟ್ಟಿನ ಮೂವತ್ತು ಅಡಿ ಅಗಲದ ಗೋಡೆ ಕೂಡಬಹುದಾದ ಜಾಗದಲ್ಲಿ ಎಲ್ಲೆಲ್ಲಿ ತೋಡಬಹುದು ಎಂದು ಗುರುತಿಸಬೇಕಾಗಿತ್ತು.

ಆಣೆಕಟ್ಟಿನ ತಳಪಾಯದ ಕೇಂದ್ರ ರೇಖೆ (Dam Central Line) ಗುರುತು ಮಾಡುವ ಕೆಲಸ
ಮೇಲಿನದು ಜಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ತಂಡದ ಒಂದು ಕೆಲಸವಾದರೆ ಇನ್ನೊಂದು ಕೆಲಸ ಆಣೆಕಟ್ಟಿನ ತಳಪಾಯದ ಕೇಂದ್ರ ರೇಖೆಯನ್ನು (DAM CENTREL LINE) ಗುರುತಿಸುವುದಾಗಿತ್ತು. ಮತ್ತು ಈ ರೇಖೆಯ ಎಡಕ್ಕೆ ಹದಿನೈದು ಅಡಿ, ಬಲಕ್ಕೆ ಹದಿನೈದು ಅಡಿ ಅಂತರದ ಮತ್ತೆರಡು ರೇಖೆಗಳನ್ನು ಗುರುತು ಮಾಡುವುದಿತ್ತು. ಹಾಗೂ ಈ ರೇಖೆಗಳನ್ನು ದೂರದಿಂದ ಗುರುತಿಸಲು ಎರಡೂ ಬೆಟ್ಟಗಳ ಮೇಲೆ ಉದ್ದಕ್ಕೂ ಕೆಂಪು ಮತ್ತು ಹಳದಿ ಬಣ್ಣದ ನಿಶಾನೆಗಳನ್ನು ಈ ಮೊದಲು ಸರ್ವೇ ಮಾಡಿದವರು ನೆಟ್ಟಿದ್ದರು. ಈ ಗೆರೆಗಳ ಮೇಲೆ ಸುಣ್ಣದ ನೀರಿನ ಗುರುತನ್ನು ನಾವೇ ಮಾಡಬೇಕಾಗಿತ್ತು. ಈ ಮೂವತ್ತು ಅಡಿ ಅಂತರದ ಅಗಲವೇ ಮುಂದೆ ಕಟ್ಟಲಿರುವ ಆಣೆಕಟ್ಟಿನ ಅಗಲವೆಂದು (Dam Width) ಆಗ ತಂತ್ರಜ್ಞರು ಅಂದಾಜಿಸಿದ್ದರು. ಮತ್ತು ಆಣೆಕಟ್ಟಿನ ಉದ್ದವನ್ನು [Dam Length) ——ಅಡಿ ಎಂದು ನಿಖರವಾಗಿ ತಂತ್ರಜ್ಞರು ಗುರುತಿಸಿದ್ದರು.
ಡ್ಯಾಮಿನ ಸೆಂಟ್ರಲ್‌ ರೇಖೆ ಮತ್ತು ಅದರ ಎಡ-ಬಲದಲ್ಲಿ ಇದ್ದ ಆಣೆಕಟ್ಟಿನ ಅಗಲದ ರೇಖೆಗಳನ್ನು ಪಕ್ಕಾ ಮಾಡಲು ನಾವು ನದಿಯ ಬುಡದಿಂದ (River Bottom Level) ಕೆಲಸ ಸುರುಮಾಡಬೇಕು. ಅದನ್ನು ನಾಳೆ ಬೆಳಿಗ್ಗೆ ಸುರು ಮಾಡೋಣ. ಇವತ್ತು ಪಕ್ಕದ ಬೆಟ್ಟದಲ್ಲಿ ಕೊರೆಯಬೇಕಾದ ಡ್ರಿಫ್ಟ- ಸುರಂಗಗಳ ಸ್ಥಳಗಳನ್ನು ಗುರುತಿಸೋಣ ಎಂದು ಶೇಷಗಿರಿಯವರು ಹೇಳಿದರು.
ಮೊದಲ ಬಾರಿ ಆಣೆಕಟ್ಟು ಕಟ್ಟುವ ಬೆಟ್ಟದ ಮೇಲೆ ಹೆಜ್ಜೆಯೂರಿ ನಿಂತೆ [ಮಾರ್ಚ ೧೯೭೦] ಜಿಯಾಲಾಜಿಸ್ಟ ಶ್ರೀ ಮಂಗಾರಾಮರಿಗೆ ಆಗಲೇ ಸುಸ್ತಾಗಿತ್ತೇನೋ. ಅವರು ಮತ್ತು ಶೇಗಿರಿಯವರು ಹಿಂದಿನ ಇಡೀ ರಾತ್ರಿ ಪ್ರಯಾಣ ಮಾಡಿ ಬಂದಿದ್ದರು. ಹೈದರಾಬಾದಿನಿಂದ ಹುಬ್ಬಳ್ಳಿಯವರೆಗೆ ರಾತ್ರಿ ರೈಲಿನಲ್ಲೂ, ಅಲ್ಲಿಂದ ಇಲ್ಲಿಗೆ ಇಂದು ನಸುಕಿನಲ್ಲಿ ನೂರು ಕೀ.ಮೀ. ದೂರದ ಹುಬ್ಬಳ್ಳಿಯಿಂದ ಕಾರಿನಲ್ಲಿಯೂ ಪ್ರಯಾಣ ಮಾಡಿ ಬಂದಿದ್ದರು. ದೇಹಕ್ಕೆ ಆಯಾಸ ಸಹಜವೇ. ಆದರೆ ಚುರುಕು ವ್ಯಕ್ತಿ ಶೇಷಗಿರಿಯವರಿಗೆ ಅಂಥ ಆಯಾಸವಾದದ್ದು ಕಾಣಲಿಲ್ಲ. ಅವರು ಮಾತಾಡದೆ ಒಮ್ಮೆ ಬೆಟ್ಟದ ಎತ್ತರವನ್ನು ಕಣ್ಣಿನಲ್ಲಿಯೇ ಅಳೆದು ಬೆಟ್ಟದ ಏರಿನತ್ತ ದುಡುದುಡು ನಡದೇಬಿಟ್ಟರು. .
ಬೆಟ್ಟದ ತುದಿಯಿಂದ ಕೆಳಗೆ ನರಿಯ ದಂಡೆಯವರೆಗೂ ಯಾವಾಗಲೋ ನಿರ್ಮಿಸಿದ ಕಚ್ಚಾ ಮೆಟ್ಟಿಲುಗಳಿಂದ . ಉದುರುತ್ತಿದ್ದ ಕೆಂಪು ಮಣ್ಣು ಮತ್ತು ದಪ್ಪ ಬಿಡಿಗಲ್ಲುಗಳನ್ನು ಮೆಲ್ಲಗೆ ಸರಿಸುತ್ತ ಇಳಿಜಾರಿನಲ್ಲಿ ಕಾಲು ಗಟ್ಟಿಯಾಗಿ ಊರುತ್ತ ನಡೆದೆವು. ನನ್ನ ಹೆಗಲಿನಲ್ಲಿ ಮೂರೂ ಜನರಿಗೆ ಬೇಕಾದ ಕುಡಿಯುವ ನೀರಿನ ಮಿಲ್ಟ್ರೀ ಕ್ಯಾನು ಇತ್ತು. ಅದೂ ಶೇಷಗಿರಿಯವರು ತಂದದ್ದು. ಅಲ್ಲಿ ಒಮ್ಮೆ ದೊಡ್ಡ ಬಂಡೆಗಳನ್ನು ಹತ್ತಿ ಮತ್ತೆ ಕೆಳಗಿಳಿಯಬೇಕು. ಆಸರೆಗೆ ಹಿಡಿಯಲು ಕಾಡು ಗಿಡಗಂಟಿಗಳ ಟೊಂಗೆ
ಮತ್ತು ಬೊಡ್ಡೆಗಳಿದ್ದವು. ಅಂಥ ಇಕ್ಕಟ್ಟಿನ ಜಾಗಕ್ಕೆಹೋಗಿ ಡ್ರಿಫ್ಟ/ಗುಹೆಗಳನ್ನು ತೋಡಲು ಸ್ಥಳ ಗುರುತಿಸುವುದು ಸಲೀಸಾದ ಕೆಲಸವಾಗಿರಲಿಲ್ಲ.

OLYMPUS DIGITAL CAMERA

ಅಲ್ಲಿಂದಲೇ ಕಂಡಿತು ಶೂರ್ಪನಖಿಯ ಬೋಳು ಗವಿ
ಕಾಲು ಜಾರಿದರೆ ಕೆಳಗೆ ಹರಿಯುತ್ತಿರುವ ಕಾಳೀ ನದಿಯ ಕಡಿದಾದ ಕೊಳ್ಳ. ಅಲ್ಲಿಂದ ಇನ್ನಷ್ಟು ಕೆಳಗೆ ಬಾಗಿ ನೋಡಿದರೆ ಅಷ್ಟು ಎತ್ತರದಿಂದ ಕಂಡ ಒಂದು ದೊಡ್ಡ ನೀರಿನ ಮಡುವು. ಬಹುಶಃ ಅದೇ ಶೂರ್ಪನಖಿಯ ಬೋಳು ಹೊಂಡ ಇರಬಹುದು. ಶೂರ್ಪನಖಿಯು ನೀರಿನಿಂದ ಪುಟಿ ಪುಟಿದು ಬೀಳುವ ಭಾರೀ ಗಾತ್ರದ ಮೀನುಗಳನ್ನು ನಾಲಿಗೆಯಿಂದ ಸವರಿ ತಿನ್ನುತ್ತಿದ್ದ ನದೀ ನೀರಿನ ಹೊಂಡ. ನೋಡಲು ಅದು ಪುಟ್ಟ ಸರೋವರದಂತೆ ಕಾಣುತ್ತಿತ್ತು. ಅದರ ದಡದ ಸುತ್ತಲೂ ಹಚ್ಚ ಹಸುರಿನ ದಟ್ಟ ಕಾಡು. ಈಗಲೂ ಅಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ನೆಗೆಯುತ್ತಾವೇನೋ. ಹೋಗಿ ನೋಡಬೇಕು.
ಹಾಗೇ ಹೊಂಡದಿಂದ ಮೇಲಕ್ಕೆ ದಷ್ಟಿ ಹೋಯಿತು. ನದಿಯ ಬಲದಂಡೆಯಲ್ಲಿ ಈ ಹೊಂಡದಿಂದ ಎರಡು ಮಾರು ಎತ್ತರದಲ್ಲಿ ಕಪ್ಪು ಬಂಡೆಗಳ ಸಂದಿನಲ್ಲಿ ಒಂದು ಅನಾದಿ ಕಾಲದ ಗುಹೆ ಇರುವುದು ಕಂಡಿತು. ಅದರ ದ್ವಾರದಲ್ಲಿ ಕಪ್ಪು ಕಡುಗತ್ತಲು. ಒಳಗೇನಿದೆಯೋ ಗೊತ್ತಿಲ್ಲ.

thriveni-book

ಪರಿಮಳಾ ಹೇಳಿದ ಕತೆ ಇಲ್ಲಿ ಮತ್ತೊಮ್ಮೆ ನೆನಪಾಯಿತು
ಹೌದು. ಸೂಪಾಲ್ಲಿ ಇಂದು ಬೆಳಿಗ್ಗೆ ಭೇಟಿಯಾಗಿದ್ದ ತ್ರಿವೇಣಿಯವರ ಪರಮ ಓದುಗಳಾದ ಪರಿಮಳಾ ಅವರು ಹೇಳಿದ ಬೋರುಗುಂಡಮ್ಮನ ಗವಿಯೇ ಅದು. ನಂತರ ಆನಂದರಾವ್‌ ಚಾಂದಗುಡೆಯವರು ಸಹ ಅದನ್ನೇ ಮತ್ತೆ ನನಗೆ ಹೇಳಿದ್ದರು. ನದಿಯ ನೀರಿನ ಈ ಬೋಳುಗುಂಡಿಯ ಹತ್ತಿರವೇ ಶೂರ್ಪನಖಿಯ ಗವಿ ಇದೆ ಎಂದು. ಹೌದು ಈಗ ದೂರದಿಂದ ಬೋಳುಗವಿಯನ್ನೂ ನೋಡಿದೆ. ಬೋಳು ಗುಂಡಿಯನ್ನೂ ನೋಡಿದೆ. ಇದರ ಜೊತೆಗೆ ನಾನು ದೇಶದ ಒಂದು ದೊಡ್ಡ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಸಾರ್ಥಕ ಭಾವನೆಯೂ ಮೂಡಿತು. ರಾಮಾಯಣ ಕಾಲದ ಶೂರ್ಪನಖಿಯ ಊರಲ್ಲಿ ಬಯಲು ನಾಡಿನಿಂದ ಬಂದ ನಾನು ಈಗ ಅವಳ ಗುಹೆಯ ಬಳಿಯೇ ಕೆಲಸ ಮಾಡಲು ಬಂದಿದ್ದೇನೆ ಎಂಬುದರ ಅರಿವೂ ಆಗಿ ಒಮ್ಮೆ ನಿಂತ ಕಾಲುಗಳು ಥರಗುಟ್ಟಿದವು. ತಕ್ಷಣ ನನಗೆ ಬೆಳಗಾವಿಯಲ್ಲಿದ್ದ ಆ ದಿನಗಳು ನೆನಪಾದವು.

ಅಮವಾಸ್ಯೆಯ ದಿನ!
ಏಣಗೀ ಬಾಳಪ್ಪನವರ ಮಾವ ಬಂದ್ನಪೋ… ಮಾವ ನಾಟಕ ನೋಡಿದ ದಿನ!
enagibalappa
ಫೋಟೋ ಕೃಪೆ :  Youtube

ಈ ಎರಡೂ ಬೆಟ್ಟಗಳು ಹೀಗೆ ಕಡಿದಾಗಿ ಇರುವುದರಿಂದಲೇ ವಯಸ್ಸಾದ ಚಾಂದಗುಡೆಯವರಿಗೆ ಈ ಕೆಲಸ ಕೊಟ್ಟಿಲ್ಲ. ಅಲ್ಲದೆ ನಾನು ರಾಕ್ಷಸರಿಗಾಗಲೀ, ಕಾಡು ಪ್ರಾಣಿಗಳಿಗಾಗಲೀ ಹೆದರುವುದಿಲ್ಲ ಎಂದು ಶ್ರೀ ನಾಯಕ ಅವರಿಗೆ ಗೊತ್ತಿತ್ತು. ನೋನೇ ಒಮ್ಮೆ ಅವರಿಗೆ ಹೇಳಿದ್ದೆ. ನಾನು ಬೆಳಗಾವಿಯಲ್ಲಿ ಓದುವಾಗ [೧೯೬೫] ಖಡೇಬಝಾರಿನಲ್ಲಿದ್ದ ಶಿವಾನಂದ ಥೇಟರಿನಲ್ಲಿ ಏಣಗೀ ಬಾಳಪ್ಪನವರ ಕಂಪನಿಯ ನಾಟಕ ‘ಮಾವ ಬಂದ್ನಪೋ ಮಾವ’ ನೋಡಿ, ಸರಿ ರಾತ್ರಿಯಲ್ಲಿ ಒಬ್ಬನೇ ನಡೆಯುತ್ತ ಹಾಸ್ಟೆಲಿನ ಕಡೆ ಬರುತ್ತಿದ್ದೆ. ನೋಡಿ ನಡೆಯುತ್ತ ಹಾಸ್ಟೆಲಿಗೆ ವಾಪಸು ಬರುವಾಗ ರಾತ್ರಿ ಮೂರು ಗಂಟೆಯಾಗಿತ್ತು. ಇದ್ದಕ್ಕಿದ್ದಂತೆ ದೊಡ್ಡ ಮಳೆ. ಗುಡುಗು ಮಿಂಚು.. ಮಳೆಯ ಚಾಟಿಗಾಗಿ ಅಲ್ಲೇ ಇದ್ದ ಒಂದು ಹಳೇ ತಗಡಿನ ಶೆಡ್ಡಿಗೆ ಹೋಗಿ ಆಶ್ರಯ ಪಡೆದಿದ್ದೆ. ಒಂದು ತಾಸು ಮಳೆ ನಿಂತಿರಲಿಲ್ಲ. ಆಮೇಲೆ ಗೊತ್ತಾಯಿತು. ನಾನು ಆಶ್ರಯಕ್ಕೆ ಬಂದು ನಿಂತದ್ದು ಸ್ಮಶಾನದಲ್ಲಿ ಎಂದು

ಕಾಲ ಕೆಳಗೆ ಹೆಣಗಳನ್ನು ಸುಟ್ಟ ಬೂದಿ
ಹೆಣಗಳನ್ನು ಸುಟ್ಟ ಬೂದಿ ಮಳೆಯ ನೀರಿಗೆ ಹರಿದು ನನ್ನ ಕಾಲಿನ ಬುಡಕ್ಕೇ ಬಂದಿತ್ತು. ಅವತ್ತು ಅಮವಾಸ್ಯೆ ಬೇರೆ. ನನಗೆ ಗಾಬರಿಯಾಗಿ ಎದ್ದವನೇ ಹಾಸ್ಟೆಲ್‌ ಕಡೆಗೆ ಜಿಂಕೆಯಂತೆ ಜಿಗಿಯುತ್ತ ಓಡಿದೆ. ಅಲ್ಲಿ ಯಾವಾಗ ಹೋಗಿ ತಲುಪಿದೆನೋ ಗೊತ್ತಿಲ್ಲ. ನಸುಕಿನಲ್ಲಿ ವಾರ್ಡನ್‌ ಪೂಜಾರಿಯವರು ಬಂದು ಬಾಗಿಲಲ್ಲಿ ಬಿದ್ದಿದ್ದ ನನ್ನನ್ನು ಎಬ್ಬಸಿ ವಿಚಾರಿಸಿದರು. ನಾನು ನಾಟಕಕ್ಕೆ ಹೋದದ್ದು ಮಳೆಯಲ್ಲಿ ಸಿಕ್ಕಿದ್ದು, ಹೆಣ ನೋಡಿ ಸ್ಮಶಾನದಿಂದ ಓಟ ಕಿತ್ತದ್ದು ಎಲ್ಲವನ್ನೂ ಹೇಳಿದೆ. ಪೂಜಾರಿಯವರು ನನಗೆ ಎಚ್ಚರಿಕೆ ಕೊಟ್ಟು ಯಾರೂ ಒಬ್ಬರೇ ನಾಟಕನೋಡಲು ಹೋಗಬಾರದೆಂದು ಫರ್ಮಾನು ಹೊರಡಿಸಿದರು.
poojari
ಫೋಟೋ ಕೃಪೆ :  Rediff

ಇದನ್ನು ಯಾವಾಗಲೋ ಶ್ರೀ ನಾಯಕ ಸಾಹೇಬರ ಹತ್ತಿರ ಹೆಳಿದಾಗ ಭಾರೀ ಧೈರ್ಯವಂತ ನೀನು ಎಂದು ಹೇಳಿದ್ದರು. ನನಗೆ ಮತ್ತೆ ಶೂರ್ಪನಖಿ ನೆನಪಾದಳು. ಮತ್ತೊಮ್ಮೆ ಎದುರು ಬೆಟ್ಟದತ್ತ ನೋಡಿದೆ. ಈಗ ಚಾಂದಗುಡೆಯವರು ಹೇಳಿದ್ದು ನಿಜವೆನಿಸಿತು. ಶೂರ್ಪನಖಿಯ ಗುಹೆಯು ಆಣೆಕಟ್ಟಿನ ಕೇಂದ್ರ ರೇಖೆಯು ಹಾದು ಹೋಗುವ ಜಾಗದ ಕೆಳಗೇ ಇತ್ತು. ಅಂದರೆ ಆಣೆಕಟ್ಟು ಕಟ್ಟಿದಾಗ ಈ ಗುಹೆ ಅದರ ಬುಡದಲ್ಲಿಯೇ ಇರುತ್ತದೆ ಮತ್ತು ಮುಂದೆ ಅದು ಶಾಶ್ವತವಾಗಿ ಮಾಯವಾಗುತ್ತದೆ. ಮುಂದಿನ ಜನಾಂಗಕ್ಕೆ ಇಲ್ಲಿ ಶೂರ್ಪನಖಿ ಇದ್ದಳು ಎಂಬ ಕತೆಯೂ ಆಣೆಕಟ್ಟಿನ ನೀರಿನಲ್ಲಿ ಲೀನವಾಗಿ ಹೋಗುತ್ತದೆ ಎಂಬುದು ನನಗೆ ಖಾತ್ರಿಯಾಯಿತು.

ಬೆಟ್ಟಗಳ ಗರ್ಭ ಬಗೆಯುವ ಒಟ್ಟು ಎಂಟು ಡ್ರಿಫ್ಟ್‌ ಗಳು [ಗುಹೆಗಳು]
ಎಡದಂಡೆಯ ಬೆಟ್ಟದಲ್ಲಿ ನಾಲ್ಕು, ಡ್ರಿಫ್ಟ್‌ ಗುಹೆಗಳೂ, ಬಲದಂಡೆಯ ಬೆಟ್ಟದಲ್ಲಿ ನಾಲ್ಕು ಡ್ರಿಫ್ಟ್‌ ಗುಹೆಗಳನ್ನು ಗುರುತಿಸುವುದಿತ್ತು. ಈ ಡ್ರಿಫ್ಟಗಳು [ಗುಹೆಗಳು] ಎಂಟು ಅಡಿ ಅಗಲ ಮತ್ತು ಹತ್ತು ಅಡಿ ಎತ್ತರದಲ್ಲಿದ್ದು ಕುದುರೆಯ ಲಾಳದಾಕಾರದಲ್ಲಿ ತೋಡಲ್ಪಡುತ್ತವೆ ಎಂದು ಶೇಷಗಿರಿಯವರೇ ಹೇಳಿದರು. ಅವುಗಳ ಒಳಗೆ ಜನರು ಸಲೀಸಾಗಿ ಓಡಾಡಬಹುದು. ಮತ್ತು ಮುನ್ನೂರು ಅಡಿಯಿಂದ ನಾನೂರು ಅಡಿಯ ಉದ್ದಕ್ಕೂ ಬೆಟ್ಟದ ಗರ್ಭದೊಳಗೆ ಅವು ತೋಡಲ್ಪಡುತ್ತವೆ ಎಂದೂ ಹೇಳಿದರು. ಅವರ ಮಾತು ಕೇಳಿದಾಗ ಉನ್ನತ ಹುದ್ದೆಯಲ್ಲಿದ್ದರೂ ಅವರು ಎಂಥ ಸಾಧಾರಣ [ಡೌನ್‌ ಟು ಅರ್ಥ್‌] ಮನುಷ್ಯ ಅನ್ನಿಸದೇ ಇರಲಿಲ್ಲ. ನಮ್ಮ ಇಲಾಖೆಯಲ್ಲಿದ್ದ ಡಿಯಾಲಾಜಿಸ್ಟಗಳಿಗೂ ಅವರಿಗೂ ಇರುವ ವ್ಯತ್ಯಾಸ ಅಗಾಧವಾಗಿತ್ತು.
ಮುಂದೆ ಭೂಗರ್ಭ ಶಾಸ್ತ್ರಜ್ಞರು ಮತ್ತು ತಾಂತ್ರಿಕ ಪರಿಣಿತರು ಈ ಗುಹೆಯ ಒಳಗೆ ಕಲ್ಲು ಮಣ್ಣಿನ ಪದರುಗಳನ್ನು ಕೂಲಂಕುಶವಾಗಿ ಪರೀಕ್ಷಿಸಿ ಸರಕಾರಕ್ಕೆ ವರದಿ ಕೊಡುವವರಿದ್ದರು. ಆಣೆಕಟ್ಟು ಕಟ್ಟಿದಾಗ ಸಂಗ್ರಹಿತ ಅಗಾಧ ನೀರಿನ ಪ್ರಮಾಣದ ಒತ್ತಡವನ್ನು ಈ ಬೆಟ್ಟಗಳು ಹೇಗೆ ತಡೆದುಕೊಳ್ಳಬಲ್ಲವು, ಬೆಟ್ಟಗಳ ಸಾಮರ್ಥ್ಯವೇನು ಎಂದು ಎಂದು ತಾಂತ್ರಿಕ ತಜ್ಞರು ವಿಶ್ಲೇಷಿಸಬೇಕಾಗಿತ್ತು. ಈ ಕಾರಣದಿಂದಲೇ ಎರಡೂ ಬೆಟ್ಟಗಳಲ್ಲಿ ಇಂಥ ಡ್ರಿಫ್ಟ್‌ [ಗುಹೆಗಳನ್ನು] ತೋಡುವುದು ತಜ್ಞರ ಯೋಜನೆಯಾಗಿತ್ತು.

ಬೆಟ್ಟಗಳನ್ನೇ ತೂತು ಮಾಡಿದ ಬೋರು ಮಶೀನುಗಳು
ಇದರ ಜೊತೆಗೇ ಇನ್ನೊಂದು ಸಂಗತಿಯಿದೆ. ಶ್ರೀ ನರಸಿಂಹಯ್ಯನವರ ಆಫೀಸೀನವರು ಈ ಎರಡೂ ಬೆಟ್ಟಗಳಲ್ಲಿ ಮೂರು ಇಂಚು ಮತ್ತು ಐದು ಇಂಚು ಅಗಲದ ಬೋರು ತಗೆದು ಐದು ನೂರು ಅಡಿಗಳ ಆಳದವರೆಗಿನ ಕಲ್ಲಿನ ಮಾದರಿಗಳನ್ನು ಹೊರಗೆ ತಗೆದು [ಸ್ಟೋನ್‌ ಕೋರ್‌] ಒಂದೆಡೆ ಸಂಗ್ರಹಿಸಿ ಇಡುತ್ತಿದ್ದರು. ಅದಕ್ಕಾಗಿ ಮೆಕ್ಯಾನಿಕಲ್ ಇಂಜನಿಯರುಗಳ ಚಿಕ್ಕ ಗುಂಪೊಂದು ಕೆಲಸ ಮಾಡುತ್ತಿತ್ತು.

rock-cutter

ಇಂಜನಿಯರ ಶ್ರೀ ರಾಮಚಂದ್ರರಾವ್‌, ಇಂಜನಿಯರ ಶ್ರೀ ಚಾಮರಾಜ ಅವರು ಈ ಕೆಲಸವನ್ನು ನಿರ್ವಹಿಸುತ್ತಿದ್ದರು. ಅವರು ಪಿ.ಡಬ್ಲೂ.ಡಿ. ಇಲಾಖೆಯಿಂದ ಎರವಲು ಸೇವೆ ಮೇಲೆ ಇಲ್ಲಿಗೆ ಬಂದ ಇಂಜನಿಯರುಗಳಾಗಿದ್ದರು. ಈ ಬೋರು ಮಶೀನುಗಳ ಆಪರೇಟರುಗಳಾಗಿ ಶರಾವತಿ ಯೋಜನೆಯಲ್ಲಿ
ಇದೇ ಕೆಲಸ ಮಾಡಿ ಬಂದಿದ್ದ ವರ್ಗೀಸ್‌, ಮುಜಾವರ್, ಮೊಮ್ಮದ್ ಕೋಯಾ, [ಇವರು ಮಲಯಾಳಿಗಳು] ಮತ್ತು ಚಿಕ್ಕಸ್ವಾಮಿ, ರಾಜು [ಕನ್ನಡದವರು] ಇವರು ಬೋರಿಂಗ ಆಪರೇಟರುಗಳಾಗಿದ್ದರು. ಭೂಗರ್ಭದ ಆಳದಿಂದ ಈ ಕಲ್ಲಿನ ಕೋರುಗಳನ್ನು ಹೊರತಗೆಯಲು ಎಂಟು ಬೋರಿಂಗ್‌ ಮಶೀನುಗಳು ಆಗಲೇ ಅವುಗಳ ಸಿಬ್ಬಂದಿ ಸಮೇತ ಡ್ಯಾಮ ಸೈಟಿನಲ್ಲಿ ಕ್ಯಾಂಪ್‌ ಹಾಕಿದ್ದವು. ಈ ಸಿಬ್ಬಂದಿಗಾಗಿ ಹಾಕಿದ ತಗಡು ಶೀಟಿನ ಶೆಡ್‌ ಮನೆಗಳು ಅಷ್ಟು ಎತ್ತರದಿಂದ ನಮಗೆ ಕಂಡವು. ಅವುಗಳ ಪಕ್ಕದಲ್ಲಿಯೇ ಕೆಲವು ಹುಲ್ಲಿನ ಗುಡಿಸಲುಗಳು, ಸ್ಟೋರು ಶೆಡ್ಡು, ಇನ್ನಷ್ಟು ವಾಸದ ಶೆಟ್ಟುಗಳು ಕಂಡವು.

ಮೊದಲ ಡ್ರಿಫ್ಟಗೆ ಸ್ಥಳ ಗುರುತಿಸಿದ್ದು
ಡ್ಯಾಮಿನ ಸೆಂಟ್ರಲ್‌ ಲಾಯಿನ್‌ ನಲ್ಲಿದ್ದ ಮತ್ತು ನದೀ ಪಾತಳಿಯಿಂದ ಐವತ್ತು ಅಡಿ ಎತ್ತರದಲ್ಲಿದ್ದ ಒಂದು ಬಂಡೆಯ ಪಕ್ಕ ಮೊದಲ ಡ್ರಿಫ್ಟ್‌ ಕೊರೆಯಲು ಪಾಂಯಿಂಟ ಮಾಡಿದರು ಶೇಷಗಿರಿಯವರು. ನಾನು ಅಲ್ಲಿ ಒಂದು ಕೆಂಪು ನಿಶಾನೆಯನ್ನು ಕಲ್ಲಿನ ಬಿರುಕುಗಳಲ್ಲಿ ನೆಟ್ಟೆ. ನಾಳೆ ಅಲ್ಲಿ ಸುಣ್ಣ ಸುರಿದು ಗುರುತು ಮಾಡಬೇಕು ಎಂದೂ ಅವರು ಹೇಳಿದರು. ಅಷ್ಟರಲ್ಲಿ ಸೂರ್ಯನೆತ್ತಿಯ ಮೇಲೆ ಬರತೊಡಗಿದ್ದ. ಜಿಯಾಲಾಜಿಸ್ಟ ಮಂಗಾರಾಮರು ಪ್ರಯಾಣದ ಆಯಾಸದಿಂದ ಬಳಲಿದ್ದಂತೆ ಕಂಡಿತು. ಅದನ್ನು ಗಮನಿಸಿದ ಶೇಷಗಿರಿಯವರು ಹೇಳಿದರು.
‘’ಯಸ್‌. ವುಯ್‌ ವಿಲ್‌ ಪ್ಯಾಕಪ್‌ ನೌ’’
ಅಂದರು. ಮತ್ತು ಮೂರೂ ಜನ ನಿಂತ ಜಾಗದಿಂದ ಕದಲಿದೆವು. ಮತ್ತು ಫೀಲ್ಡ ಆಫೀಸೀನ ಕಡೆಗೆ ಮುಖ ಮಾಡಿ ಗುಡ್ಡ ಇಳಿಯತೊಡಗಿದೆವು. ಇವತ್ತು ಹೊಸ ಕೆಲಸದಲ್ಲಿ ಭಾಗಿಯಾದ ಸಂತೋಷ ನನಗಾಯಿತು. ಚಾಂದಗುಡೆಯವರು ಬೆಳಿಗ್ಗೆ ನಗುತ್ತ ಹೇಳಿದ್ದರು.
‘’ಹ್ಹಹ್ಹ…. ಶೇಖರವರ… ಇದು ಏಷ್ಯಾದೊಳಗನ ಭಾರೀ ದೊಡ್ಡ ಯೋಜನಾ ಅದರೀಪಾ ಮತ್ತ. ಇಂಥಾ ಯೋಜನಾದಾಗ ಕೆಲಸಾ ಮಾಡೂ ನಶೀಬು ಯಾರಿಗೆ ಸಿಗತೈತಿ ಹೇಳ್ರಿ… ಹ್ಹಹ್ಹಹ್ಹ ಹೇಳ್ರಿ ಮತ್ತ’’
ಎಂದು ಹೇಳಿ ನಕ್ಕಿದ್ದು ನೆನಪಾಗಿ ನನ್ನ ಮುಖವೂ ಆ ಬಿರಿ ಬಿಸಿಲಿನಲ್ಲಿ ಅರಳಿತು.

ದಾಮೋದರನ್‌ ನಂಬೂದಿರಿ ಹಾಟೆಲ್‌
ಫೀಲ್ಡ ಆಫೀಸಿನ ಬಳಿ ಬರುತ್ತಿದ್ದಂತೆ ಅಲ್ಲಿ ನಾಯಕ ಸಾಹೇಬರೂ ಮತ್ತು ಇಲಾಖೆಯ ಜಿಯಾಲಾಜಿಸ್ಟ ಉಪಾಧ್ಯಾಯರೂ ನಮಗಾಗಿ ಕಾದು ನಿಂತಿದ್ದರು. ರ ಮುಖದಲ್ಲಿ ಏನೋ ಕಾತುರ ಇದ್ದದ್ದು ಕಂಡಿತು.
‘’ಶೇಷಗಿರಿಯವರೇ… ಈಗ ಬಂದ ಸುದ್ದಿ. ಡ್ರಿಫ್ಟ ಕನ್‌ಸ್ಟ್ರಕ್ಶನ್‌ ಟೆಂಡರ್‌ ಮೆಸರ್ಸ.ಆರ್‌.ಜೆ.ಶಾಹ ಕಂಪನಿಗೆ
ಹೋಯ್ತಂತೆ. ಅದು ಬಾಂಬೆ ಕಂಪನಿ. ಈಗ ಅದು ಕಾಳೀ ಹೈಡೆಲ್‌ ಪ್ರಾಜೆಕ್ಟಿಗೆ ಬರ್ತಾ ಇರೋ ಮೊದಲ ಕಂಪನಿ ನೋಡ್ರಿ. ನಾಳೇನೇ ಕಂಪನಿ ಸಿ.ಇ.ಓ ಬಾಂಬೆಯಿಂದ ಇಲ್ಲಿಗೆ ಬರ್ತಾರಂತೆ. ಈಗ ಬೆಂಗಳೂರಿಂದ ಮೆಸೇಜು ಬಂತು’’ ಅಂದಾಗ ಶೇಷಗಿರಿಯವರ ಮುಖದಲ್ಲಿ ತುಸು ಗಲಿಬಿಲಿಯಾದದ್ದು ಕಂಡಿತು. ನಾನು ಚಾಂದಗೋಡಿಯವರತ್ತ ನೋಡಿದೆ. ರ ಮುಖದಲ್ಲೂ ವಿಚಿತ್ರ ಕಾತುರ ಇತ್ತು. ಶ್ರೀಧರ್‌ ಆಗಲೇ ಸೂಪಾದತ್ತ ಹೊರಟು ಹೋಗಿದ್ದರು. ಇವರಿಗಾಗಿ ಕಾದಿದ್ದ ಬಿಳೀ ಕಾರು ಬಂದು ನಿಂತಿತು. ನಾಲ್ವರೂ ಮಾತಾಡುತ್ತ ಕಾರು ಹತ್ತಿದರು. ಶೇಖರ್‌ ನಾಳೆಯ ಶೆಡ್ಯೂಲ್‌ ಚೇಂಜ್‌. ಫ್ರಮ್‌ ಟುಮಾರೋ ಓನ್ಲಿ ಡ್ರಿಫ್ಟ ಸರ್ವೇ…. ಓಕೆ.? ಅಂದರು ನಾನು ತಲೆ ಅಲ್ಲಾಡಿಸಿದೆ. ಬಳೀ ಕಾರು ಸೂಪಾದತ್ತ ಧೂಳೆಬ್ಬಿಸುತ್ತ ಕಾಡಿನ ಹಸಿರು ಕುಮರಿ-ಕಂಟಿಯಲ್ಲಿ ಮರೆಯಾಯಿತು.
‘’ಹ್ಹಹ್ಹಹ್ಹ…ಬರ್ರಿ. ದಾಮೋದರನ್‌ ಊಟಾ ತಯಾರ ಮಾಡ್ಕೊಂಡು ಕುಂತಾನ. ಉಂಡು ನಾವೂ ಮೆಲ್ಲಕ ದಾರೀ ಹಿಡಿಯೂನು ಬರ್ರಿ ಹ್ಹಹ್ಹಹ್ಹ…’’ ಅಂದರು.


[ಮುಂದುವರಿಯುತ್ತದೆ. ಓದಿರಿ. ಪ್ರತಿ ಶನಿವಾರ ಕಾಳೀ ಕಣಿವೆಯ ರೋಚಕ ಕತೆಗಳು]


  • ಹೂಲಿಶೇಖರ್
    (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)

bf2fb3_58479f997cba4852bd3d7a65d4c785a4~mv2.png

0 0 votes
Article Rating

Leave a Reply

4 Comments
Inline Feedbacks
View all comments
Aravind Kulkarni

ಲೇಖನ ಚೆನ್ನಾಗಿದೆ

ಲಕ್ಷ್ಮೀ ನಾಡಗೌಡ

ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಬರೆಯೋದು ಅದ್ಭುತ

CHOWDAPPA CHOWDAPPA

ಲೇಖನ ಅರ್ಥಪೂರ್ಣ ಸಂದೇಶ ನೀಡಿತು. ಸರ್ Dam bed level to top of dam height 564 k.m. ಎಂದು ಇದೆ. ಸರ್ ಇದು ಮೀಟರ್ ಲೆಕ್ಕದಲ್ಲಿ ಇರಬಹುದು.

Prabhakar.y.s

Dear,Shekar
Thanks for the info.better you impose relative photos if available.
Awaiting for the next episode.
Prabhakar.y.s.

Home
Search
All Articles
Videos
About
4
0
Would love your thoughts, please comment.x
()
x
%d bloggers like this:
Aakruti Kannada

FREE
VIEW