ಹೂವಿನ ಸುತ್ತಲೂ (ಭಾಗ -೧) – ಪಾರ್ವತಿ ಪಿಟಗಿ

ಬಗೆ ಬಗೆಯ ಹೂವುಗಳನ್ನು ಮುಡಿಯುವುದಷ್ಟೇ ಅಲ್ಲ ಅವುಗಳನ್ನು ಗಿಡಗಳಿಂದ ಬಿಡಿಸುವುದೂ ಅಷ್ಟೇ ಮುದ ನೀಡುತ್ತದೆ. ಅದೇ ನಮ್ಮನೆ ಅಂಗಳದ ಹೂವನ್ನು ಬೇರೆಯವರು ಬಂದು ಕಿತ್ತಾಗ ಮನಸ್ಸಿನಲ್ಲಿ ಆಗುವ ತಲ್ಲಣ, ಕೋಲಾಹಲವನ್ನು ಲೇಖಕಿ ಪಾರ್ವತಿ ಪಿಟಗಿ ಅವರು ಚಂದವಾಗಿ ವರ್ಣಿಸಿದ್ದಾರೆ. 

ಶ್ರಾವಣ ಮಾಸದ ಶುಕ್ರಗೌರಿ ಅಥವಾ ವರ ಮಹಾಲಕ್ಷ್ಮಿ ಪೂಜೆ ಬಂದರೆ ಮುಗಿಯಿತು. ಎಲ್ಲರ ಹಿತ್ತಲಿನ, ಮನೆ ಮುಂದಿನ ಅಷ್ಟೇ ಏಕೆ ತಾರಸಿಯ ಮೇಲಿನ ಕುಂಡಲಿಗಳಲ್ಲಿ ಬೆಳೆಸಿದ ಹೂವುಗಳೆಲ್ಲಾ ಅದರಲ್ಲಿಯೂ ಮನೆ ಮುಂದೆ ಕಾಂಪೌಂಡ್ ದಾಟಿ ಬೆಳೆದ ಹೂವುಗಳು ಮಟಾಮಾಯವಾಗಿ ಬಿಡುತ್ತವೆ. ನಮ್ಮ ಓಣಿಯಲ್ಲಿ ಮೊದಲಾದರೆ ಎಷ್ಟು ಸಾಧ್ಯವೋ ಅಷ್ಟು ಶುಕ್ರವಾರ ಬೆಳ್ಳಂ ಬೆಳಿಗ್ಗೆ ಮನೆಗಳ ಹಿತ್ತಿಲಿನ ಹಾಗೂ ಮನೆ ಮುಂದಿನ ಹೂವುಗಳು ಕಾಣೆಯಾಗುತ್ತವೆ. ಹೂವು ಕಾಣೆಯಾದ ಮನೆಯವರು ಹೇಗೂ ನಮ್ಮಲ್ಲಿ ಹೂವುಗಳಿವೆ ಎಂದು ನಿಶ್ಚಿಂತೆಯಿಂದ ಆರಾಮವಾಗಿ ಎದ್ದವರಿಗೆ ಹೂವುಗಳಿಲ್ಲದ ಬರೀ ತಪ್ಪಲುಗಳ ಶರೀರ ನೋಡಿ “ಚೆಂದಾ ಮಾಡಲಿ ಯಾವ ಹರಕೊಂಡ ಹೋಗ್ಯಾವೋ ಹೂವಾ? ಈಗ
ನಮ್ಮ ಪೂಜಾಕ್ಕ ಏನ ಮಾಡಬೇಕೋ?” ಎಂಬ ಬೈಗಳು ಸಾಮಾನ್ಯ. ಹೀಗೆ ಹೂವುಗಳನ್ನು ಕಳೆದುಕೊಂಡವರು ಮುಂದಿನ ವಾರ ಜಾಣರಾಗಿ ಗುರುವಾರ ರಾತ್ರಿಯೇ ಹೂವುಗಳನ್ನು ಕೊಯ್ದು ನಿಶ್ಚಿಂತೆಯಾಗಿ ಮಲಗ ತೊಡಗಿದಾಗ, ಬೆಳಿಗ್ಗೆ ಬೇಗನೇ ಹೂವು ಕದಿಯಲು ಬಂದ ಖದೀಮೆಯರಿಗೆ ನಿರಾಶೆಯಾಗಿ ಇಂಗು ತಿಂದ ಮಂಗನಂತೆ ಮನೆಗೆ ಮರಳಿ ಮುಂದಿನ ವಾರ, ಹೂಗಳ್ಳರು ಗುರುವಾರ ಮಧ್ಯಾಹ್ನವೇ ಮನೆಯವರು ಮಲಗಿದಾಗ, ಹೂ ಹರಿದುಕೊಂಡು ಹೋದಾಗ, “ಈ ಸಲಾ ಹ್ಯಾಂಗ
ಹರಕೊಂತಾರ ಹರಕೋಲಿ ನೋಡುಣ” ಎಂದು ಗುರುವಾರ ಬೆಳಿಗ್ಗೆಯೇ ಮೊಗ್ಗುಗಳನ್ನು ಕೋಯ್ದು ಮತ್ತಷ್ಟು ನಿಶ್ಚಿಂತಿತರಾಗಿ, ತಮ್ಮ ಹಿತ್ತಲಿನ ಹೂವುಗಳನ್ನು ಕಾಪಾಡಿಕೊಳ್ಳುವರು.

jasmine flower

ಬೆಳಗ್ಗೆ ವಾಕಿಂಗ್ ಹೋಗುವ ಹಲವಾರು ಜನರ ಉದ್ದೇಶ ಕಾಂಪೌಂಡ್ ಹೊರಗೆ ಇಣುಕುವ ರೋಡಿನಲ್ಲಿಯೋ, ದೇವಸ್ಥಾನಗಳಲ್ಲಿಯೋ ಅರಳಿದ ಹೂವುಗಳನ್ನು ಕಿತ್ತುಕೊಂಡು ಬರುವುದೇ ಆಗಿರುತ್ತದೆ. ಅದನ್ನು ಸಾಬೀತು ಪಡಿಸಲೆಂಬಂತೆ ಅರ್ಧಕ್ಕೆ ವಾಕಿಂಗ್ ಮುಗಿಸಿ ಮರಳಿದವರನ್ನು “ಯಾಕ್ರಿ ಲಗೂಣ ಬಂದ್ರೆಲ್ಲ?” ಎಂದು ಕೇಳಿದರೆ, “ಹುಂ ಹೌದರಿ ಇಲ್ಲೆ ರೋಡ್ ದಾಟೂತಲೆನ ಸಾಕಷ್ಟ ಹೂವು ಸಿಕ್ಕಾವು. ಹಿಂಗಾಗಿ ಹೊಳ್ಳಿ ಬಂದೀನಿ” ಎಂದು ಸೀರೆ ಉಟ್ಟವರು ಉಡಿಯಲ್ಲಿ, ಚೂಡಿ ಹಾಕಿದವರಾದರೆ ವೇಲಿನಲ್ಲಿ, ಗೌನಿನವರಾದರೆ ಬೊಗಸೆಯಲ್ಲಿಯೇ ಹಿಡಿದುಕೊಂಡು ಎದೆಗೆ ಅಮುಚಿಕೊಂಡು ಬರುವುದನ್ನು ನೀವೂ ಕೂಡ ಕಂಡಿರಬಹುದು. ಇಂತಹ ವಾತಾವರಣದಿಂದ ನಮ್ಮ ಶೈಲಕ್ಕ(ಓರಗಿತ್ತಿ) ಆಕೆಯ ಮಗಳು ಶಿಲ್ಪಾ ಅಮೇರಿಕೆಯಲ್ಲಿರುವುದರಿಂದ ಅಲ್ಲಿಗೆ ಹೋದಾಗ, ರೋಡಿನ ಪಕ್ಕದಲ್ಲಿಯೇ ಸ್ವಚ್ಛಂದವಾಗಿ ಅರಳಿದ ಹೂವುಗಳನ್ನು ಕಂಡು, ಅವುಗಳು ಯಾರಿಗೂ ಸಂಬಂಧಪಡದೇ ಇದ್ದರೂ, ಕಾವಲು ಇರದೇ ಹೋದರೂ ಒಬ್ಬರೂ ಅವುಗಳಿಗೆ ಕೈ ಹಚ್ಚದೇ ಇರುವುದನ್ನು ಕಂಡು ನಮ್ಮ ಅಕ್ಕನಿಗೆ ಸೋಜಿಗವಾಗಿ, “ಅಯ್ಯ ಏನ್ರೆ ಯವ್ವಾ, ಇಲ್ಲಿ ಇಷ್ಟ ಚೆಂದ ಹಂಗ ಅದಾವಲಾ ಯಾರೂ ಹರಕೊಂಡ ಹೋಗುದಿಲ್ಲಾ?” ಎಂದಾಗ, ಶಿಲ್ಪಾ, ಇಲ್ಲಿಯ ಹೂ ಕಳುವಿನ ವಿಷಯವನ್ನು ನೆನಪಿಸಿಕೊಂಡು ನಗುತ್ತ, “ಹುಂ ಇಲ್ಲೆ ಹಂಗ ಯಾರೂ ಯಾವ ಹೂವಾನೂ ಹರಿಯೂದಿಲ್ಲಾ” ಸಮಜಾಯಿಸಿದಾಗ, ಶೈಲಕ್ಕ “ಎಂಥಾ ಚೆಂದ ಆಗ್ಯಾವು. ಅವುನ್ನ ಯಾರೂ ಹರಿಲೀಕ ಏನ ಉಪಯೋಗ? ತಲಿಯಾಗ ಹಾಕ್ಕೊಲಿಕ ಅಷ್ಟಹೋತ, ದೇವರಿಗೆ ಏರಸಬಾರದಾ? ಹುಂ ಇಲ್ಲೆರ ಹ್ಯಾಂತಾ ದೇವರು? ಒಂದ ಗುಡಿ ಇಲ್ಲಾ ಗುಂಡಾರಾ ಇಲ್ಲಾ. ಇಲ್ಲಿ ಮಂದಿ ಎದ್ದ ಕೂಡಲೆ ಜಳಕಾ ಸೈತ ಮಾಡೂದಿಲ್ಲಾ. ರಾತ್ರಿ ಮಾಡಿ ಮಕ್ಕೊಂತಾವು. ಇನ್ನ ಎಲ್ಲಿ ಜಳಕಾ ಪೂಜಿ?” ಎಂದೆಲ್ಲ ಗೊಣಗಿದಳಂತೆ. ಆಕೆ ಏಳುತ್ತಲೇ ಸ್ನಾನ ಮಾಡಿ ಹಿತ್ತಲಿನಲ್ಲಿಯ ಹೂವುಗಳನ್ನು ಕೋಯ್ದು, ನಮ್ಮೂರಿನ ಮಹಾಲಕ್ಷ್ಮಿ, ಶಾಖಾಂಬರಿ, ವೀರಭದ್ರ, ಕಲ್ಮೇಶ್ವರ ಗುಡಿಗಳಿಗೆ ತೆರಳಿ ಭಕ್ತಿಭಾವದಿಂದ ಸಮರ್ಪಿಸಿ ಬರುವ ಆಕೆ ಹಾಗೆ ಹೇಳುವುದರಲ್ಲಿಯೂ ತಪ್ಪೇನಿರಲಿಲ್ಲ.

jasmine flower

ಫೋಟೋ ಕೃಪೆ : World of Flowering Plant

ನಮ್ಮ ಹಿತ್ತಲಿನಲ್ಲಿ ನಮ್ಮ ಅತ್ತೆಯವರು ಬಗೆ ಬಗೆಯ ಬಣ್ಣದ ದಾಸವಾಳ, ಸೇವಂತಿಗೆ, ಗುಲಾಬಿ, ಮಲ್ಲಿಗೆ
ಹೂವುಗಳನ್ನು ಬೆಳೆಸಿದ್ದರು. ನಮ್ಮ ದೂರದ ಸಂಬಂಧಿಕಳೊಬ್ಬಳು, ಪ್ರತಿ ಶುಕ್ರವಾರ ಬೆಳಿಗ್ಗೆಯೇ ಬರುತ್ತಿದ್ದಳು. ಬಂದವಳೇ, ಮೊದಲು ಕಾಬಾಳಿ ಎಲೆ ಕೋಯ್ದು ಅದರಲ್ಲಿ ಹಿಡಿಸುವಷ್ಟು ಹೂವುಗಳನ್ನು ಹಾಕಿಕೊಂಡು ಜೊತೆಗೆ ಗರಿಕೆಯನ್ನೂ ಕಿತ್ತುಕೊಂಡು ಆ ಹೂವುಗಳ ಜೊತೆಗೆ ಎಲೆಯಲ್ಲಿ ಇಟ್ಟುಕೊಂಡು ನೋಡುಗರಿಗೆ ಖುಷಿ ಕೊಡುವಂತೆ, ಕಾಬಾಳಿ ಎಲೆಯ ನಾರನ್ನೇ ಕಿತ್ತು ಸ್ವತ: ಗಿಡಗಿಳಿಗೆ ನೀರು ಹಾಕಿ ಬೆಳೆಸಿದಂತೆ ಆರಾಮಾಗಿ ಆ ಹೂವುಗಳ ಪೊಟ್ಟಣ ಕಟ್ಟಿಕೊಂಡು ಸಾಗುತ್ತಿದ್ದಳು. ಅದನ್ನು ನೋಡಿದ
ನಮ್ಮ ದೊಡ್ಡ ಅಕ್ಕ ಆಕೆಯ ಮುಂದೆ ಏನೂ ಹೇಳಲಾಗದೇ, ಆಕೆ ಹೋದ ನಂತರ, ಮರುಗುತ್ತಾ ನಮ್ಮ ಮುಂದೆ “ಹುಂ, ಇಕಿ ಅಮಾತ ಇಷ್ಟ ಚೆಂದ ಹೂವಾ ಹರಕೊಂಡ ಹೊಕ್ಕಾಳಾ. ಗಿಡಾ ಹಚ್ಚೂ ಚಿಂತಿ ಇಲ್ಲಾ, ನೀರ ಹಾಕಿ ಬೆಳಸೂ ಚಿಂತಿ ಇಲ್ಲಾ. ಎಲ್ಲಾ ಆರಾಮ. ಇಕಿಗೆ ಇಲ್ಲೆ ರೆಡಿಮೇಡ್ ಹೂವಾನ ಸಿಗತಾವು ಮತ್ತೇನ ಮಾಡ್ಯಾಳು? ಹೂವ ಅಷ್ಟ ಅಲ್ಲಾ, ಹೂವಾ ತಗೊಂಡ ಹೋಗಾಕ ಎಲಿ ಮತ್ತ ಅದನ್ನ ಕಟ್ಟಾಕ ನಾರೂ ಸೈತ ನಮ್ಮದ” ಎಂದೆಲ್ಲ ಕಿರುಚುತ್ತಿದ್ದವಳನ್ನು ನಾನು “ಆಕಿ ಇದ್ದಾಗರ ಬೈದಿದ್ರ?” ಎಂದು ಮತ್ತಷ್ಟು ಸಿಟ್ಟಿಗೆಬ್ಬಿಸಿದ್ದೆ.

ಹೀಗೊಂದು ಸಲ ತಲೆಯಲ್ಲಿ ಮುಡಿದುಕೊಳ್ಳುವ ಮಲ್ಲಿಗೆ ಹೂವುಗಳನ್ನೆಲ್ಲಾ ಮನೆಗೆ ಬಂದ ಅತಿಥಿಯೊಬ್ಬರು ಮೊಗ್ಗನ್ನೂ ಬಿಡದೇ ಕೊಯ್ದುಕೊಂಡು ಹೋದಾಗ, ಅಂದು ನಮಗೆಲ್ಲ ಸುವಾಸನೆ ಭರಿತ ಮಲ್ಲಿಗೆ ಹೂ ಮುಡಿಯುವ ಭಾಗ್ಯದಿಂದ ವಂಚಿತರಾಗಿ “ಎಲ್ಲಾ ಹೂವಾನೂ ಹರಕೊಂಡ್ರು ಇನ್ನ ನಾವೇನ ಹಾಕ್ಕೋಳ್ಳುದು?” ಎಂದು ರಾಗ ತೆಗೆದಾಗ, ಸಿಟ್ಟಿಗೆದ್ದ ನಮ್ಮ ಅಕ್ಕಾ “ಆಕಿ ಗಿಡದನ್ನ ತಪ್ಪಲಾ ಅಷ್ಟ ಬಿಟ್ಟ ಹೋಗ್ಯಾಳಾ ಅದ ತಪ್ಪಲಾನ ಹಾಕ್ಕೊ ಹೋಗ್ರಿ ಆಕಿ ಅದನ್ನರ ಯಾಕ ಬಿಟ್ಟ ಹೋಗ್ಯಾಳೋ” ಎಂದು ಬೈದದ್ದನ್ನು ಇಂದಿಗೂ ನೆನಪಿಸಿಕೊಂಡು ನಗುತ್ತೇವೆ. ಬಗೆ ಬಗೆಯ ಹೂವುಗಳನ್ನು ಮುಡಿಯುವುದಷ್ಟೇ ಅಲ್ಲ ಅವುಗಳನ್ನು ಗಿಡಗಳಿಂದ ಬಿಡಿಸುವುದೂ ಅಷ್ಟೇ ಮುದ ನೀಡುತ್ತದೆ. ಮಲ್ಲಿಗೆ ಬಳ್ಳಿಯಿಂದ ಹೂವುಗಳನ್ನು ಒಂದೊಂದಾಗಿ ಅವುಗಳ ಸುವಾಸನೆಯನ್ನು ಆಘ್ರಾಣಿಸುತ್ತ, ಅವುಗಳ ಮೇಲೆ
ಬೆರಳಾಡಿಸುತ್ತ, ಹರಿಯುವ ಪರಿ ಪುಳಕವನ್ನುಂಟು ಮಾಡುತ್ತದೆ.

kanakambara

ಫೋಟೋ ಕೃಪೆ : Mathrubhumi English

ನನ್ನ ಬಾಲ್ಯದ ಮಳೆಗಾಲದ ದಿನಗಳಲ್ಲಿ ಸುರಿಯುವ ಮುಳ್ಳು ಜಾಜಿಗೆ ಹೂವನ್ನು ಹರಿಯುವುದಂತೂ ಇನ್ನೂ ಚೆಂದವೆನ್ನಿಸುತ್ತಿತ್ತು. ತಡವಾದರೆ ಯಾರಾದರೂ ಬಂದು ಹರಿದುಕೊಂಡು ಹೋದಾರು ಎಂಬ ಭಯದಲ್ಲಿ ಹಾಸಿಗೆಯಿಂದ ಮೇಲೇಳಲು ಮನಸ್ಸಿಲ್ಲದಿದ್ದರೂ, ಹೂ ಹರಿಯುವ ಆಸೆಗಾಗಿ ಸೂರ್ಯ ಆಗಷ್ಟೇ ಉದಯವಾಗುವ ಹೊತ್ತಿಗೆ ಹೂ ಹರಿಯಲು ಪ್ರಾರಂಭಿಸಿದಾಗ, ಮಳೆಯಲ್ಲಿ ನೆನೆದ ಮೊಗ್ಗುಗಳು ಬೆರಳು ತಾಗುತ್ತಲೇ ಅರಳಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿಲ್ಲುವ ಪರಿಯಾಗಲಿ, ಹೂ ಬಿಡಿಸುವಾಗ, ಹೂವಿನ ಕೇಸರಿ ಬಣ್ಣ ಕೈ ಬೆರಳುಗಳಿಗೆ ತಾಗುವ ಪರಿ ಬಣ್ಣಿಸಲಸದಳ. ಹಾಗೆ ಬೆರಳುಗಳಿಗೆ ಅಂಟಿಕೊಂಡ ಬಣ್ಣವನ್ನು ಮತ್ತೆ ಮತ್ತೆ ನೋಡಿ ಖುಷಿಪಡುತ್ತಿದ್ದೆ. ಈ ಮುಳ್ಳುಜಾಜಿಯಾದರೋ ಮುಟ್ಟುತ್ತಲೇ ಅರಳುವುದು. ಆದರೆ ಗುಲಾಬಿ ಮೊಗ್ಗು ಅದು ಹೇಗೆ ಅರಳುವುದೆಂದು ಕೌತುಕವಿತ್ತು. ಒಂದು ಬಾರಿಯಾದರೂ ಮೊಗ್ಗಿನ ಅವಸ್ಥೆ ಹೂವಾಗುವುದನ್ನು ನೋಡಬೇಕೆನ್ನಿಸುತ್ತಿತ್ತು. ಆದರೆ ರಾತ್ರಿ ಇದ್ದ ಮೊಗ್ಗು ಬೆಳಗಾಗುತ್ತಲೇ ಬಿರಿದು ನಗುತ್ತಾ ನನ್ನ ಪಾಲಿಗೆ ಗುಟ್ಟಾಗಿಯೇ ಉಳಿದುಕೊಳ್ಳುತ್ತಿದ್ದವು. ಒಂದೊಂದು ಬಾರಿ ಹೂ ಮುಡಿದುಕೊಳ್ಳುವ ಆಶೆಯಾದಾಗ ಇನ್ನೂ ಅರಳದೇ ಇದ್ದ ಮೊಗ್ಗುಗಳನ್ನು ಹರಿದು ಇನ್ನೆಲ್ಲಿ ಅವ್ವ ಬೈಯುವಳೋ ಎಂದು ಬಲವಂತದಿಂದಲೇ ಬಾಯಿಯಿಂದ ‘ಉಫ್ ಉಫ್’ ಎಂದೂದಿ ಅರಳಿಸಿ ಮುಡಿಯುತ್ತಿದ್ದೆ. ಹಾಗೇ ನಮ್ಮ ಪರಿಚಯಸ್ತರ ತೋಟದಲ್ಲಿ ಜವಾರಿ ಗುಲಾಬಿ ಹೂವಿನ ದೊಡ್ಡ ಕಂಟಿಯೇ ಇತ್ತು. ಆ ಹೂವು, ಆ ಹೂವಿನ ಬಣ್ಣ ಆ ಹೂವಿನ ವಾಸನೆ ಅದೆಷ್ಟು ಚೆನ್ನಾಗಿತ್ತೆಂದರೆ ಇಂದಿಗೂ ನನ್ನ ಮನದಲ್ಲಿ ಅದು ಹಚ್ಚ ಹಸುರಾಗಿದೆ. ಅವ್ವನೊಂದಿಗೆ ಅವರ ಮನೆಗೆ ಹೋದಾಗಲೊಮ್ಮೆ ನಾನಷ್ಟೇ ತೋಟಕ್ಕೆ ಹೋಗಿ ಹೂವು ಆಗಿವೆಯೇ ಎಂದು ನೋಡಿ, ಮೊಗ್ಗುಗಳಿದ್ದರೂ ಅವುಗಳನ್ನು ಕೊಯ್ದುಕೊಂಡು ಬಂದರೆ, ಆ ನಮ್ಮ ಪರಿಚಯಸ್ಥ ಅತ್ತೆ “ಏ ಇನ್ನ ಮಗ್ಗಿ ಅದಾವು ಈಗ ಯಾಕ ಹರದಿ? ಅವು ಅಳ್ಳಾಕ ಇನ್ನ ಎರಡ ಮೂರ ದಿನಾ ಬೇಕ” ಎಂದ ನಂತರವೂ ಅಲ್ಲಿ ಹೋದಾಗಲೊಮ್ಮೆ ಮೊಗ್ಗುಗಳನ್ನು ಬಿಡಿಸಿ ಜೇಬಿನಲ್ಲಿಟ್ಟುಕೊಂಡು ಮನೆಗೆ ಬಂದು ಗುಟ್ಟಾಗಿ ಗ್ಲಾಸಿನಲ್ಲಿ ನೀರುಹಾಕಿ ಅವುಗಳನ್ನು ಅರಳಲು ಬಿಡುತ್ತಿದ್ದೆ. ಹಾಗೇ ಮತ್ತಿನ್ಯಾರದೋ ಗಿಡದಿಂದ ತಂದ ಮಲ್ಲಿಗೆ, ಗುಲಾಬಿ ಮೊಗ್ಗುಗಳನ್ನು ನೀರಿನ ಬಟ್ಟಲಿನಲ್ಲಿ ಹಾಕಿ ಬೆಳಿಗ್ಗೆ ಎದ್ದಕೂಡಲೇ ಅರಳಿವೆಯೇ ಇಲ್ಲವೇ ಎನ್ನುತ್ತಾ ಕಾತರದಿಂದ ನೋಡಿ ಅರಳಿದ್ದರೆ ಕೈಯಲ್ಲಿ ಎತ್ತಿಕೊಂಡು ಮತ್ತೆ ಮತ್ತೆ ನೋಡಿ ಸಂಭ್ರಮಿಸುತ್ತಿದ್ದೆ.

ಸಾಮಾನ್ಯವಾಗಿ ಎಲ್ಲ ಹೂವುಗಳು ಮುಂಜಾನೆ ಅರಳಿದರೆ ಮಧ್ಯಾಹ್ನ ಮಲ್ಲಿಗೆ ಮಾತ್ರ ಮಧ್ಯಾಹ್ನದ ನಂತರ ಅಂದರೆ ಸಾಯಂಕಾಲದ ಸಮಯಕ್ಕೆ ಅರಳುವುದು. ಕೆಂಪು, ಗುಲಾಬಿ, ಕೇಸರಿ, ಹಳದಿ, ಬಿಳಿ ಅಷ್ಟೇ ಏಕೆ ಅರ್ಧ ಕೆಂಪು ಅರ್ಧ ಬಿಳುಪು ಬಣ್ಣದಿಂದ ಕಂಗೊಳಿಸುವ ಹೂವುಗಳನ್ನು ಇಳಿ ಹೊತ್ತಿನಲ್ಲಿ ಕಾಣುವುದೇ ಚೆಂದವೆನ್ನಿಸುತ್ತಿತ್ತು. ಸಾಯಂಕಾಲದ ಹೊತ್ತಿಗೆ ಅರಳಿದ ಹೂವು ಇಡೀ ರಾತ್ರಿ ತನ್ನ ಸೌಂದರ್ಯ ಮೆರೆದು ಮುಂಜಾನೆ ಬಿಸಿಲು ಬಿದ್ದ ನಂತರ ತನ್ನಷ್ಟಕ್ಕೆ ತಾನೇ ಮುದುಡಿ ಮತ್ತೆ ಮೊಗ್ಗಿನಂತೆ ಕಾಣಿಸುತ್ತಿತ್ತು. ಗೌರಿ ಹುಣ್ಣಿಮೆ ಹಾಗು ಶೀಗಿ ಹುಣ್ಣಿಮೆಗಳಲ್ಲಿ, ಐದಿ ದಿನಗಳ ಕಾಲ ದೇವಸ್ಥಾನಗಳಲ್ಲಿ ಕುಳ್ಳಿರಿಸಿದ ಗೌರವ್ವ ಹಾಗೂ ಶೀಗವ್ವರಿಗೆ ಸಾಯಂಕಾಲ ಈ ಮದ್ಯಾಹ್ನ ಮಲ್ಲಿಗೆಗಳನ್ನೇ ತೆಗೆದುಕೊಂಡು
ಹೋಗಿ ಗೌರವ್ವ ಹಾಗೂ ಶೀಗವ್ವರಿಗೆ ಏರಿಸಿ ಆರತಿ ಬೆಳಗುತ್ತಿದ್ದೆವು.

bhramakamala

ಫೋಟೋ ಕೃಪೆ : Asianet Breaking news

ಮುಂಜಾನೆ ಮಧ್ಯಾಹ್ನ ಬಿಡಿ ರಾತ್ರಿ ಹೊತ್ತು ಅರಳುವ ವಿಶೇಷ ಹೂವು ಬ್ರಹ್ಮ ಕಮಲ. ರಾತ್ರಿ ಹೊತ್ತು ಅರಳುವ ಈ ಬ್ರಹ್ಮಕಮಲ ನೋಡಿದಾಗ, ನನ್ನಲ್ಲೊಂದು ಚುಟುಕು ಹುಟ್ಟಿಕೊಂಡಿತ್ತು.

ಮಧ್ಯ ರಾತ್ರಿಯಲ್ಲಿ, ಸದ್ದಿಲ್ಲದೇ ಅರಳಿ
ಶ್ವೇತ ವರ್ಣದಿ ಸುಗಂಧ ಬೀರಿಹ
ಬ್ರಹ್ಮ ಮಾಡಿದ ಈ ಅದ್ಭುತ
ಕಲೆಗೆ ಕರೆಯಲೇ ನಾ ಬ್ರಹ್ಮಕಮಲವೆಂದು?

ಈ ಚುಟುಕು ವಿಜಯ ಕರ್ನಾಟಕ ಪತ್ರಿಕೆಯಿಂದ ಬಹುಮಾನವನ್ನೂ ಕೂಡ ಗಳಿಸಿತು. ನಿಜಕ್ಕೂ ಬ್ರಹ್ಮನ ಅಗಾಧವಾದ ಈ ಕಲೆಗೆ ಬ್ರಹ್ಮಕಮಲವೆಂಬ ಹೆಸರು ಅಲ್ಲಲ್ಲ ಬಿರುದು ಬಂದಿರಬಹುದೇನೊ! ಮುಂಜಾನೆ ಹೊತ್ತು ಪೂರ್ವಕ್ಕೆ, ಮಧ್ಯಾಹ್ನ ಮೇಲಕ್ಕೆ ಸಂಜೆ ಪಶ್ಚಿಮಕ್ಕೆ ಹೊರಳುವ ಒಟ್ಟಿನಲ್ಲಿ ಸೂರ್ಯನತ್ತ ಮುಖ ಮಾಡುವ ಸೂರ್ಯಕಾಂತಿ ವಿಶಿಷ್ಟ ಬಗೆಯ ಹೂವಾಗಿದೆ. ಹಳದಿ ಬಣ್ಣದ ಈ ಹೂವುಗಳ ತೋಟವನ್ನು ನೋಡುವುದೇ ಬಹಳ ಚೆಂದ. ದೂರದಿಂದ ಸೂರ್ಯಪಾನ ತೋಟವನ್ನು ನೋಡಿದಾಗ, ಭೂರಮೆ ಹಳದಿಯನ್ನು ಹೊದ್ದಂತೆ ಕಾಣಿಸುತ್ತದೆ. ಫೋಟೊಗ್ರಾಫರ್ ಗಳಿಗೆ ಫೋಟೊ ತೆಗೆಯಲು ಮತ್ತು ಚೆಲುವೆಯರಿಗೆ ಫೋಟೊ ತೆಗೆಸಿಕೊಳ್ಳಲು ಈ ಸೂರ್ಯಕಾಂತಿ ಹೂ ಮತ್ತು ಹೂದೋಟ ಬಹಳ ಪ್ರಾಶಸ್ತ್ಯವಾದದ್ದು. ಏರು ಜೌವ್ವನೆಯರಂತೂ ಈ ಹೂವಿನ ಪಕ್ಕ ತಮ್ಮ ಮುಖವನ್ನಿಟ್ಟು ನೀ ಚೆಂದವೋ ನಾ ಚೆಂದವೋ ಎಂಬ ಪೋಜು ಕೊಟ್ಟು ಫೋಟೊ ತೆಗೆಸಿಕೊಳ್ಳುತ್ತಾರೆ.

ನನಗೆ ಈ ಸೂರ್ಯಕಾಂತಿ ಬೀಜವೆಂದರೆ ಎಲ್ಲಿಲ್ಲದ ಪ್ರೀತಿ. ಸೇಂಗಾ ಅಥವಾ ಬದಾಮ ಬೀಜಗಳ ರುಚಿ ನೀಡುವ ಅವುಗಳು ಕಂಡಲ್ಲಿ ತೆಗೆದುಕೊಂಡು ಬಂದು ತಿನ್ನುವೆ. ಒಂದು ಸಲ ನಾವೆಲ್ಲ ತೋಟಕ್ಕೆ ಊಟ ಕಟ್ಟಿಕೊಂಡು ಹೋದಾಗ, ಸೂರ್ಯಪಾನ ಗಿಡಗಳು ಕಾಣಿಸಿ, ಅದೂ ಕೂಡ ತುಂಬಿದ ಕಾಳಿನ ಹೂವುಗಳನ್ನು ನೋಡಿ ಕುಣಿದಾಡುವಂತಾಯಿತು. ತೋಟದ ಮಾಲೀಕರಿಗೆ ಹೇಳಿ ಒಂದೆರಡು ದೊಡ್ಡ ದೊಡ್ಡ ಹೂವುಗಳನ್ನು ತೆಗೆದುಕೊಂಡು ಬಂದು ಖುಷಿಯಿಂದಲೇ ಹೂವಿನಿಂದ ಕೊಬ್ಬಿ ಉಬ್ಬಿ ಹೋದ ಕರೀ ಬೀಜಗಳನ್ನು ಬಿಡಿಸಿ ಒಣಗಿದರೆ ಸುಲಿಯುವುದು ಸುಲಭ ಮತ್ತು ತಿನ್ನಲು ಮತ್ತಷ್ಟು ರುಚಿ ಎಂದು ಒಂದು ಮೊರದ ತುಂಬಾ ಆದ ಬೀಜಗಳನ್ನು ಆರಲು ಬಿಟ್ಟು ಮರುದಿನ ಬಿಸಿಲು ಬಿದ್ದ ನಂತರ ಒಣಗಿಸಿದರಾಯಿತೆಂದು ಹಾಗೆ ಇಟ್ಟಿದ್ದೆ. ಮರುದಿನ ಎದ್ದು ನೋಡುವುದರಲ್ಲಿ ಒಂದೇ ಒಂದು ಬೀಜದಲ್ಲಿ ಕಾಳಿಲ್ಲ. ಎಲ್ಲವೂ ಬರೀ ಬೀಜಗಳ ಸಿಪ್ಪೆಗಳು! ಅಷ್ಟೊಂದು ಬೀಜಗಳನ್ನು ತಿಂದವರಾರು? ಎಂದು ಲೆಕ್ಕ ಹಾಕುತ್ತಿದ್ದವಳನ್ನು ಅತ್ತೆ “ಹುಂ ಹಂಗ ತೆರದ ಇಟ್ಟಿ ಇಲಿ ತಿಂದ ಹೋಗ್ಯಾವಳ ಇನ್ನೇನ ಮಾಡತಿ?” ಎಂದಾಗ ನಿಜಕ್ಕೂ ಆಶ್ಚರ್ಯವಾಗಿತ್ತು. ಅದೆಷ್ಟು ಜಾಗರೂಕತೆಯಿಂದ ಆ ಬೀಜಗಳನ್ನು ಸುಲಿದು ತಿಂದಿವೆ. ಅದೂ ಕೂಡ ಅದೆಷ್ಟು ನೀಟಾಗಿ ಆ ಬೀಜಗಳನ್ನು ಸುಲಿದು ಸರಿಯಾಗಿ ಎರಡು ಪಕಳೆಗಳನ್ನಾಗಿ ಮಾಡಿಟ್ಟು ತಿಂದಿದ್ದವು.

ಮುಂದೊರೆಯುತ್ತದೆ…


  • ಪಾರ್ವತಿ ಪಿಟಗಿ ( ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು) 

    parvati-pitagi

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW