ಬೇಗ ಗುಣಮುಖರಾಗಿ ಬನ್ನಿ ಎಸ್‌.ಪಿ.ಬಿ ಗುರುಗಳೇ…

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ಭಾರತೀಯ ೧೬ ಭಾಷೆಗಳಲ್ಲಿ ೪೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಒಂದೇ ದಿನ ಕನ್ನಡದಲ್ಲಿ ೨೧ ಹಾಡುಗಳನ್ನು ಹಾಡಿದ ಗಾನ ಗಾರುಡಿಗ.

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗುರುಗಳೇ,
ನೀವು ದೇಶದ ಆಸ್ತಿಯಷ್ಟೇ ಅಲ್ಲ. ಮನೆ ಮನೆಯ ಆಸ್ತಿಯೂ ಹೌದು. ನಿಮ್ಮ ಹಾಡಿನ ಮೋಡಿಯೇ ಅಂತದ್ದು, ಹಾಡಿನ ಭಾವ ನಮ್ಮವರು ಅನ್ನಿಸುವಷ್ಟು ಆತ್ಮೀರಾಗಿ ಬಿಟ್ಟಿದ್ದೀರಿ. ನಿಮ್ಮ ಹಾಡು ಕೇಳಿದವರಿಲ್ಲ. ಹಾಡಿಗೆ ಯಾವುದೇ ಭಾಷೆಯಿಲ್ಲ ಎಂದು ತೋರಿಸಿ ಕೊಟ್ಟವರು ನೀವು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗಿನಿಂದ ನಾಡಜನತೆ ನೀವು ಆರೋಗ್ಯದಿಂದ ಹಿಂತಿರುಗಿ ಬರಲಿ ಎಂದು  ನಿತ್ಯವೂ ಪ್ರಾರ್ಥಿಸುತ್ತಿದ್ದಾರೆ.

ನೀವು ಸಾಗಿ ಬಂದ ಹಾದಿಯ ಬಗ್ಗೆ ಮೆಲಕು ಹಾಕುತ್ತಿದ್ದೇನೆ. ಎಸ್.‌ಪಿ. ಬಾಲಸುಬ್ರಹ್ಮಣ್ಯಂ ಅವರ ನಿಜವಾದ ಹೆಸರು ಶ್ರೀಪತಿ ಪಂಡಿತಾರಾಧುಲ ಬಾಲಸುಬ್ರಹ್ಮಣ್ಯಂ. ಸಂಗೀತ ಸಾಮ್ರಾಟನಿಗೆ ಆತ್ಮೀಯವಾಗಿ ಎಲ್ಲರು ಕರೆಯುತ್ತಿದ್ದದ್ದು ಎಸ್ಪಿ, ಬಾಲಾ, ಎಸ್‌ಪಿಬಿ ಅಥವಾ ಬಾಲು. ಇಲ್ಲಿ ನಾನು ಬಾಲು ಸರ್ ಎಂದು ಮತ್ತೊಂದು ಹೆಸರನ್ನು ಸೇರಿಸುತ್ತಿದ್ದೇನೆ. ಅವರು ಹುಟ್ಟಿ ಬೆಳೆದದ್ದು ಜೂನ್ ೪, ೧೯೪೬ ರಂದು ನೆಲ್ಲೂರಿನಲ್ಲಿ. ಎಸ್.ಪಿ. ಸಾಂಬಮೂರ್ತಿ ಹಾಗೂ ಸಕುಂತಲಮ್ಮ ದಂಪತಿಯ ಮಗನೇ ಎಸ್‌ಪಿಬಿ ಗುರುಗಳು. ಅವರ ತಂದೆ ಹರಿಕಥಾ ಕಲಾವಿದರಾಗಿದ್ದರು ಹಾಗು ನಾಟಕಗಳಲ್ಲಿ ಅಭಿನಯಿಸುತ್ತಿದ್ದರಿಂದ ಎಸ್‌ಪಿಬಿ ಅವರಿಗೂ ಹಾಡು, ಅಭಿನಯ ಬಾಲ್ಯದಿಂದಲೇ ವಿಶೇಷ ಆಸಕ್ತಿ ಬೆಳೆದಿತ್ತು. ಸಂಗೀತದ ಸ್ವರ ಸಂಕೇತಗಳನ್ನು ಕಲಿಯುತ್ತ ಸಂಗೀತ ಲೋಕದಲ್ಲಿ ಪಾದಾರ್ಪಣೆ ಮಾಡಿದರು. ಸಂಗೀತ ಅವರ ಉಸಿರಾದರೂ ಓದು ಮುಖ್ಯವೆನ್ನಿಸಿದಾಗ ಅನಂತಪುರದ ಜೆಎನ್‌ಟಿಯು ಕಾಲೇಜ್ ಆಫ್ ಎಂಜಿನಿಯರಿಂಗ್‌ ನಲ್ಲಿ ಎಂಜಿನಿಯರ್ ಆಗಲು ಹೊರಟರು. ಆದರೆ ಸರಸ್ವತಿ ದೇವಿ ಅಷ್ಟೋತ್ತಿಗಾಗಲೇ ಅವರ ಕೈ ಹಿಡಿದಿದ್ದರಿಂದ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಅಲ್ಲಿಗೆ ನಿಂತಿತು.

spb
ಫೋಟೋ ಕೃಪೆ : New Indian Express

ಅವರು ಎಂಜಿನಿಯರಿಂಗ್ ಅಧ್ಯಯನದ ಸಮಯದಲ್ಲಿ ಸಂಗೀತವು ನಿರಂತರವಾಗಿತ್ತು. ಮತ್ತು ಹಲವಾರು  ಗಾಯನ ಸ್ಪರ್ಧೆಗಳಲ್ಲಿ ಬಹುಮಾನ, ಪ್ರಶಸ್ತಿಗಳನ್ನು ಗೆದ್ದಿದ್ದರು. ಅದರಲ್ಲಿ ೧೯೬೪ ರಲ್ಲಿ, ಮದ್ರಾಸ್ ಮೂಲದ ತೆಲುಗು ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಹವ್ಯಾಸಿ ಗಾಯಕರ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಖ್ಯಾತ ಹಾಡು ಸಂಯೋಜನಕಾರರಾದ ಅನಿರುಟ್ಟಾ ಅವರು ಹಾರ್ಮೋನಿಯಂ, ಇಳೆಯರಾಜಾ ಅವರ ಗಿಟಾರ್ ಮತ್ತು ಹಾರ್ಮೋನಿಯಂ, ಭಾಸ್ಕರ್ ಅವರ ತಾಳವಾದ್ಯ, ಮತ್ತು ಗಂಗೈ ಅಮರನ್ ಗಿಟಾರ್‌ನಲ್ಲಿ ಲಘು ಸಂಗೀತ ತಂಡಗಳಲ್ಲಿ ಎಸ್ಪಿಬಿ ಪ್ರಮುಖ ಗಾಯಕರಾಗಿದ್ದರು. ಹಾಡಿನ ಸ್ಪರ್ಧೆಯಲ್ಲಿ ಅವರನ್ನು ಅತ್ಯುತ್ತಮ ಗಾಯಕನಾಗಿ ಎಸ್. ಪಿ. ಕೋದಂಡಪಾಣಿ ಮತ್ತು ಘಂಟಸಲಾ ಅವರು ಆಯ್ಕೆ ಮಾಡಿದ್ದರು. ಅವರು ನೀಡಿದ ಮೊದಲ ಆಡಿಷನ್ ಹಾಡು “ನೀಲವೆ ಎನ್ನಿಡಮ್ ನೆರುಂಗಾಧೆ”. ಹಿರಿಯ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ಅವರು ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ, ಸಂಸ್ಕೃತ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳನ್ನು ಭಾಷಾಂತರಿಸಿ ಅವರಿಗೆ ನೀಡುತ್ತಿದ್ದರು. ಅದನ್ನು  ಎಲ್ಲ ಕಡೆ ಹಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡರು. ಹೀಗಾಗಿ ಪಿ.ಬಿ.ಶ್ರೀನಿವಾಸ್  ಮತ್ತು ಎಸ್‌ಪಿಬಿ ನಡುವೆ ಒಂದು ನಿಕಟ ಸಂಬಂಧ ಬೆಳೆದಿತ್ತು.

ಬಾಲಸುಬ್ರಹ್ಮಣ್ಯಂ ಅವರು ಡಿಸೆಂಬರ್ ೧೫,೧೯೬೬ ರಂದು ಎಸ್. ಪಿ. ಕೋದಂಡಪಾಣಿ ಅವರ ಮಾರ್ಗದರ್ಶನದಲ್ಲಿ ತೆಲುಗು ಚಿತ್ರರಂಗಕ್ಕೆ ಹಿನ್ನೆಲೆ ಗಾಯಕರಾಗಿ ಪಾದಾರ್ಪಣೆ ಮಾಡಿದರು. ಎಸ್. ಪಿ. ಬಿ ಒಂದು ಕಡೆ ‘ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ’ ಎಂದು ಹೇಳುತ್ತಾರೆ . ತೆಲುಗಿನಲ್ಲಿ ತಮ್ಮ ಚೊಚ್ಚಲು ಗೀತೆಯನ್ನು ಹಾಡಿದ ಎಂಟು ದಿನಗಳ ನಂತರ ೧೯೬೬ ರಲ್ಲಿ ತೆಲುಗು ಗೀತೆಯಲ್ಲಿ ತಮ್ಮ ಮೊದಲ ಧ್ವನಿಮುದ್ರಣವನ್ನು ಹೊರತಂದರು. ‘ನಕ್ಕರೆ ಅದೆ ಸ್ವರ್ಗ’ ಚಿತ್ರಕ್ಕೆ ಎಂಟ್ರಿ ಕೊಡುವುದರ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಈ ಚಿತ್ರದಲ್ಲಿ ಹಾಸ್ಯ ನಟ ಟಿ. ಆರ್. ನರಸಿಂಹರಾಜು ನಟಿಸಿದ್ದರು. ಹೀಗೆ ಒಂದಾದ ಮೇಲೊಂದರಂತೆ ಭಾರತೀಯ ೧೬ ಭಾಷೆಗಳಲ್ಲಿ ೪೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮತ್ತು ಅತಿ ಹೆಚ್ಚು ಹಾಡುಗಳನ್ನು ಧ್ವನಿಮುದ್ರಣ ಮಾಡಿ ವಿಶ್ವ ಗಿನ್ನೆಸ್ ದಾಖಲೆ ಪುಟದಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಬರೆಯಲಾಗಿದೆ. ಅವರ ಇನ್ನೊಂದು ದಾಖಲೆಯೆಂದರೆ ಒಂದೇ ದಿನದಲ್ಲಿ ಅತಿ ಹೆಚ್ಚಿನ ಹಾಡುಗಳನ್ನು ಹಾಡಿದ ಗಮನಾರ್ಹ ಸಾಧನೆ ಮತ್ತು ದಾಖಲೆಯಾಗಿದೆ. ಫೆಬ್ರವರಿ ೮, ೧೯೮೧ ರಂದು ಬೆಳಿಗ್ಗೆ ೯:೦೦ ರಿಂದ ರಾತ್ರಿ ೯:೦೦ ರವರೆಗೆ ಸಂಗೀತ ಸಂಯೋಜಕ ಉಪೇಂದ್ರ ಕುಮಾರ್‌ಗಾಗಿ ಅವರು ಕನ್ನಡದಲ್ಲಿ ೨೧ ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಮತ್ತು ತಮಿಳು ಭಾಷೆಯಲ್ಲಿ ಒಂದೇ ದಿನ ೧೯ ಹಾಡುಗಳು, ಒಂದು ದಿನದಲ್ಲಿ ಹಿಂದಿಯಲ್ಲಿ ೧೬ ಹಾಡುಗಳು ಹಾಡಿದ ಗಾನ ಗಾರುಡಿಗರು ಅವರು.

spb

ಸಂದ ಪ್ರಶಸ್ತಿಗಳು : ನಾಲ್ಕು ವಿಭಿನ್ನ ಭಾಷೆಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕರಿಗಾಗಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ. ತೆಲುಗು ಚಿತ್ರರಂಗದಲ್ಲಿ ಅವರ ಸಾಧನೆಯನ್ನು ಗುರುತಿಸಿ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಂದಿ ಪ್ರಶಸ್ತಿಗಳು, ಕರ್ನಾಟಕ ಮತ್ತು ತಮಿಳುನಾಡಿನ ಹಲವಾರು ರಾಜ್ಯ ಪ್ರಶಸ್ತಿಗಳು, ಬಾಲಿವುಡ್ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಆರು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ೨೦೧೨ ರಲ್ಲಿ, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಎಲ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.  ೨೦೧೬ ರಲ್ಲಿ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ ಎಂದು ಗೌರವಿಸಿತು. ಅವರು ಭಾರತ ಸರ್ಕಾರದಿಂದ ಪದ್ಮಶ್ರೀ (೨೦೦೧ ) ಮತ್ತು ಪದ್ಮಭೂಷಣ್ (೨೦೧೧) ಪ್ರಶಸ್ತಿಗಳ ಭಾಜನರಾಗಿದ್ದಾರೆ.

ಗಾಯನದಲ್ಲಷ್ಟೇ ಅಲ್ಲದೆ, ನಟನೆ,ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡುತ್ತಾ ಬಂದವರು.

ನಿಮ್ಮ ಸಾಧನೆಯ ಬಗ್ಗೆ ಬರೆದಷ್ಟು ಲೇಖನವಾಗುವುದಿಲ್ಲ. ಕಾದಂಬರಿಯೇ ಆಗುತ್ತದೆ. ಎಲ್ಲರು ಕಂಡಂತೆ ನಿಮ್ಮನು ಬಿಟ್ಟರೆ ಮತ್ತೊಬ್ಬರಿಲ್ಲ. ದೇಶಕ್ಕೆ ಒಬ್ಬರೇ ಎಸ್ ಪಿಬಿ. ಎಷ್ಟೇ ಎತ್ತರಕ್ಕೆ ಬೆಳೆದರು ಕಾಲುಗಳು ನೆಲವನ್ನೇ ಊರಬೇಕು ಎನ್ನುವ ಸರಳತೆ  ತೋರಿಸಿದ ಮಹಾನ ಗಾಯಕ.  ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತೀರ್ಪುಗಾರರಾದಾಗ ಯಾವ ಆಡಂಬರವಿಲ್ಲದೆ, ಅಹಂಕಾರವಿಲ್ಲದೆ ಯುವ ಗಾಯಕರನ್ನು ಸೂಕ್ಷ್ಮವಾಗಿ ತಿದ್ದುತ್ತಿದ್ದ ರೀತಿ ಇನ್ನೊಬ್ಬ ತೀರ್ಪುಗಾರರಿಗೆ ಮಾದರಿಯಾಗಿತ್ತು.  ನೀವು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು.

ಸರ್, ನಿಮಗೆ ಸಂಗೀತ ಉಸಿರಾದರೆ, ನಮಗೆಲ್ಲ ನೀವು ಉಸಿರು. ರಾಪ್ – ಪಾಪ್ ಗಳ ಹಾವಳಿಗಳ ಮಧ್ಯೆ ನಿಮ್ಮ ಮಧುರ ಧ್ವನಿ ಕಾಡುತ್ತಿದೆ. ಗುರುಗಳೇ, ಯುವ ಜನರಿಗೆ ನಿಮ್ಮ ಅವಶ್ಯಕತೆ ಇದೆ. ಆದಷ್ಟು ಬೇಗ ನೀವು ಗುಣಮುಖರಾಗಿ ಬರಬೇಕು. ತೀರ್ಪುಗಾರರ ಸ್ಥಾನದಲ್ಲಿ ಮತ್ತೆ ಕೂರಬೇಕು. ನಿಮ್ಮ ಗಾರುಡಿಯಲ್ಲಿ ಸುಶ್ರಾವ್ಯ ಗಾಯಕರು ಹೊರಹೊಮ್ಮಬೇಕು. ಒಳ್ಳೆಯ ಸಂಗೀತ ಮತ್ತೆ ಮೊಳಗಬೇಕು ಎನ್ನುವುದೇ ನಮ್ಮೆಲ್ಲರ ಹೆಬ್ಬಯಕೆ.


  • ಶಾಲಿನಿ ಹೂಲಿ ಪ್ರದೀಪ್

    bf2fb3_c5eaf523bb1e481493169ef2aac381a9~mv2.jpg

 

 

 

0 0 votes
Article Rating

Leave a Reply

1 Comment
Inline Feedbacks
View all comments
ಪ್ರಭಾಕರ ತಾಮ್ರಗೌರಿ

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಮೂಲತಃ ಆಂಧ್ರಪ್ರದೇಶ ದವರು ಅವರ ಮಾತ್ರ ಭಾಷೆ ತೆಲಗು . ಅವರು ಇಷ್ಟ ಆಗೋದು ಬರೇ ಗಾನ ದಿಂದಷ್ಟೇ ಅಲ್ಲ ಅವರ ವ್ಯಕ್ತಿತ್ವ ಕೋಡ ಹೌದು .ಅವರ ಕನ್ನಡ ಪ್ರೀತಿ ನೋಡಿ . ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕನ್ನಡಿಗರೇ ಸರಿಯಾಗಿ ಕನ್ನಡ ಮಾತಾಡ್ತಾ ಇಲ್ಲ. ಅಂತದ್ದ ರಲ್ಲಿ ಬೇರೆ ಕಡೆಯಿಂದ ಬಂದು ಕರ್ನಾಟಕದಲ್ಲಿ ನೆಲೆಸಿ ಕನ್ನಡಿಗರಿಗಿಂತ ಹೆಚ್ಚು ಸ್ಪಷ್ಟವಾಗಿ ಕನ್ನಡ ಮಾತಾಡೋ ಎಸ್ ಪಿ ಬಿ ಗೆ ಕೋಟಿ ನಮಸ್ಕಾರ !

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW