ಕಣ್ಮುಂದೆ ನಡೆಯುವ ಅನ್ಯಾಯಗಳನ್ನು ನೋಡಿಯೂ, ಸುಮ್ಮನೆ ಮೌನವಾಗಿ ಕುಳಿತುಬಿಟ್ಟರೆ ಇತಿಹಾಸ ನಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಒಳಿತಿಗಾಗಿಯೇ ಮಿಡಿಯುವ ಸಂತೋಷ ನಾಯಿಕ ಅವರ ಕವಿತೆ ಮನಸಿನ ಕತ್ತಲಿಗೆ ಕನ್ನಡಿ ಹಿಡಿದು ಬೆಳಕಿನ ಪ್ರಭೆ ಹರಡಲು ಅನುವು ಮಾಡಿಕೊಡುತ್ತದೆ.ಕವಿತೆಯ ಕುರಿತು ನಾಗೇಶ್ ಜೆ.ನಾಯಕ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..
ಹಗೆ ಮರೆತರೆ ನಗೆತೋಟ ನಲಿಯುವುದು
ಪ್ರಾರ್ಥನಾ ಮಂದಿರದ ಆವರಣದಲಿ
ಬಂದೂಕು ತಲ್ವಾರಗಳನು ಹಿಡಿದು
ಜನಸಂದಣಿಯಲ್ಲಿಯೇ
ಗಾಂಧಿಯನು ಗುಂಡಿಕ್ಕಿ ಕೊಂದಾಗಲೂ
ನೀವು ಸುಮ್ಮನಿದ್ದೀರಿ
ಕಣ್ಮುಂದೆ ನಡೆಯುವ ಅನ್ಯಾಯಗಳನ್ನು ನೋಡಿಯೂ, ಸುಮ್ಮನೆ ಮೌನವಾಗಿ ಕುಳಿತುಬಿಟ್ಟರೆ ಇತಿಹಾಸ ನಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಪ್ರತಿರೋಧ, ತಣ್ಣಗಿನ ಆಕ್ರೋಶ, ದನಿ ಎತ್ತುವಿಕೆ ಎಲ್ಲಿಯವರೆಗೂ ಅರೆಪ್ರಜ್ಞಾವಸ್ಥೆಯಲ್ಲಿರುತ್ತವೋ ಅಲ್ಲಿಯವರೆಗೂ ಅಮಾಯಕ, ನಿಸ್ಸಹಾಯಕರ ಮೇಲೆ ದಬ್ಬಾಳಿಕೆಗಳು ಅವ್ಯಾಹತವಾಗಿ ನಡೆಯುತ್ತಿರುತ್ತವೆ. ಪ್ರತಿಭಟಿಸುವ ಮನೋಧೋರಣೆಯನ್ನು ನಮ್ಮದಾಗಿಸಿಕೊಳ್ಳೋಣ ಎನ್ನುವ ಈ ಸಾಲುಗಳು ಯುವಕವಿ ಸಂತೋಷ ನಾಯಿಕ ಅವರದ್ದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದವರಾದ ಇವರು, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ಅಲ್ಲಿಯೇ ಸಂಶೋಧನಾ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದಾರೆ. ಕೇಂದ್ರಸಾಹಿತ್ಯ ಅಕಾಡೆಮಿ 2021 ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಲಿಟರೇಚರ್ ಫೆಸ್ಟಿವಲ್‍ನ ಯುವಕಥಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಬೆಳಗಾವಿಯ ಕವಿತೆ ಹಬ್ಬದಲ್ಲಿ ಇವರ ಕವಿತೆಗೆ ಜನ ಮೆಚ್ಚುಗೆ ದೊರೆತಿದೆ. ಹಾವೇರಿಯ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ತುಮಕೂರಿನಲ್ಲಿ ನಡೆದ ಬಂಡಾಯ ಸಂಘಟನೆ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚನ ಮಾಡಿದ್ದಾರೆ. 2020 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಇವರ ಪ್ರಥಮ ಕವನ ಸಂಕಲನ ‘ಆರ್ತ’ ಪ್ರಕಟ. ಈ ಸಂಕಲನವು ಕಸಾಪದ ಆರ್. ಜೆ. ಗಲಗಲಿ ದತ್ತಿ ಪ್ರಶಸ್ತಿ ಹಾಗೂ ಆಜೂರ ಪುಸ್ತಕ ಪ್ರಶಸ್ತಿ ಪಡೆದುಕೊಂಡಿದೆ. ಎರಡನೆ ಕವನ ಸಂಕಲನ ‘ಹೊಸ ವಿಳಾಸದ ಹೆಜ್ಜೆಗಳು’ ಹಸ್ತಪ್ರತಿಗೆ 2023 ರ ಕವಿ ಗವಿಸಿದ್ದ ಬಳ್ಳಾರಿ ಕಾವ್ಯ ಪ್ರಶಸ್ತಿ ಲಭಿಸಿದೆ. ಇದೇ ಸಂಕಲನ ಸ್ವಾಭಿಮಾನ ಪುಸ್ತಕ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿಯ ಗೌರವಕ್ಕೂ ಕೂಡ ಪಾತ್ರವಾಗಿದೆ.
ಯುದ್ಧ ವಿರೋಧಿ ಗೋಡೆ
ಈ ಫಲವತ್ತಾದ ಭೂಮಿಯಲಿ
ಏನಾದರೂ ಬಿತ್ತುವುದಾದರೆ
ಶಾಂತಿ ಬೀಜವನು ಬಿತ್ತು
ಈ ಜಗತ್ತು ನಿಂತಿರುವುದೇ ಶಾಂತಿ ನೆರಳಿನಲಿ
ಈ ತಾಲೀಮಿನ ಗರಡಿಯಲಿ
ಏನಾದರೂ ಕಲಿಸುವುದಾದರೆ
ಪ್ರೀತಿ ಪ್ರೇಮವನು ಕಲಿಸು
ಇಂದು ನಾವು ಉಳಿದಿರುವುದೇ ಪ್ರೀತಿಯಿಂದ
ಈ ಗಡಿಗಳ ಅಂಚಿನಲಿ
ಏನಾದರೂ ಕಟ್ಟುವುದಾದರೆ
ಯುದ್ಧ ವಿರೋಧಿ ಗೋಡೆ ಕಟ್ಟು
ಗೋಡೆಗಳಿಲ್ಲದ ಬದುಕೇ ಬೇಕು ಇಂದು ನಮಗೆ
ಈ ತನು ಮನಗಳ ನಡುವೆ
ಏನಾದರೂ ಬೆಳೆಸುವುದಾದರೆ
ಮಾನವೀಯತೆಯನು ಬೆಳೆಸು
ನಾವೆಲ್ಲರೂ ಮಾನವರೆಂದು ಬದುಕಲು
ನನ್ನ ನಿನ್ನ ನಡುವೆ
ಏನಾದರೂ ಹಗೆ ಇದ್ದರೆ ಮರೆತುಬಿಡು
ನಮಗೆ ನಗೆ ತೋಟವೇ ಬೇಕಾಗಿದೆ
ನಾವು ಹುಟ್ಟಿರುವುದು ಶಾಂತಿಯಿಂದ ಬದುಕಲು
ಹೊಡೆದಾಡುವುದಕ್ಕಲ್ಲ; ಮಾರಾಮಾರಿ ಮಾಡುವುದಕ್ಕಲ್ಲ
ಒಬ್ಬರಿಗೊಬ್ಬರು ಕೈಕೈ ಹಿಡಿದು
ಮಾನವತೆಯ ಧ್ವಜವನು ಎಲ್ಲೆಡೆಗೆ ಫಡಫಡಿಸಲು
-ಸಂತೋಷ ನಾಯಿಕ

‘ನೀವು ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ನಿಮಗೆ ಒಳ್ಳೆಯದಾಗುತ್ತದೆ. ಇದು ನಿಸರ್ಗದ ನಿಯಮ’ ಎಂದು ಗೌತಮ ಬುದ್ಧರು ನುಡಿಯುತ್ತಾರೆ. ನಿನ್ನ ಕೈಯಲ್ಲಿ ಸಾಧ್ಯವಾದರೆ ಒಳಿತನ್ನೇ ಮಾಡು; ಆಗದಿದ್ದರೆ ತೆಪ್ಪಗಿದ್ದು ಬಿಡು. ಇದುವೇ ಜಗತ್ತಿಗೆ ನೀನು ಮಾಡಬಹುದಾದ ಬಹುದೊಡ್ಡ ಸಹಾಯ. ಆದರೆ ಈ ನೆಲದ ಬುದ್ಧಿವಂತ ಮನುಷ್ಯನಿಗೆ ಇದು ಅರ್ಥವೇ ಆಗುತ್ತಿಲ್ಲವಲ್ಲ. ಹಿಂಸೆ, ಕ್ರೂರತೆ, ಅಮಾನವೀಯತೆ, ವಿಕೃತ ಖುಷಿ, ದಬ್ಬಾಳಿಕೆ, ಸ್ವಾರ್ಥ, ಅಹಮಿಕೆ ಇವುಗಳಿಂದ ಮನುಷ್ಯ ಏನೆಲ್ಲಾ ಅವಘಡಗಳನ್ನು ಈ ನೆಲದ ಮೇಲೆ ಸೃಷ್ಟಿ ಮಾಡುತ್ತಿದ್ದಾನಲ್ಲ? ಅವುಗಳೇ ಮುಂದೊಂದು ದಿನ ತನ್ನ ಸರ್ವನಾಶಕ್ಕೆ ಕಾರಣವಾಗಬಹುದೆಂಬ ಅರಿವು ಅವನಲ್ಲಿ ಎಳ್ಳಷ್ಟು ಮೂಡುತ್ತಿಲ್ಲ. ಅಂತಹ ಕೆಡುಕಿನ ಪ್ರತಿನಿಧಿಗಳಿಗೆ ಕವಿ ಸಂತೋಷ ನಾಯಿಕ ಅವರು, ಮನುಷ್ಯ ಜನ್ಮದ ಸಾರ್ಥಕತೆಯನ್ನು ಯಾವ ಕಾರ್ಯಗಳಿಂದ ಕಂಡುಕೊಳ್ಳಬಹುದು ಎಂಬುದನ್ನು ಈ ಕವಿತೆಯಲ್ಲಿ ತೆರೆದಿಡುತ್ತಾರೆ. ಈ ನೆಲದಲ್ಲಿ ನಾವೆಲ್ಲ ಖಂಡಿತ ಬಿತ್ತಿ ಬೆಳೆಯಲೇಬೇಕಾದ ಶಾಂತಿ, ಪ್ರೀತಿ, ಸಮಾನತೆ, ಮನುಷ್ಯಪ್ರೀತಿ, ಮಾನವೀಯತೆ, ನಗು ಕುರಿತಾಗಿ ಮಾತನಾಡುತ್ತಾರೆ. ಬೇರೆಯದೆ ಪಥ ಹಿಡಿದಿರುವ ಆಧುನಿಕ ಜಗತ್ತಿನ ಆಕರ್ಷಣೆ, ಕ್ಷಣಿಕ ಸುಖಗಳಿಗೆ ಈ ಕವಿತೆ ಹಾಕುವ ಕಡಿವಾಣ ಅಗತ್ಯವೆನಿಸಿದೆ.
ದೇವನೂರ ಮಹಾದೇವ ಅವರು ಹೇಳುವ ಹಾಗೆ ‘ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ’. ಹಿಂಸೆಗಳೇ ವಿಜೃಂಭಿಸಿ, ಎಷ್ಟೋ ಬದುಕುಗಳನ್ನು ಅನಾಥಗೊಳಿಸುತ್ತಿರುವ ಈ ಸಂದರ್ಭದಲ್ಲಿ ಶಾಂತಿಯ ಬೀಜ ಬಿತ್ತುವ ಅನಿವಾರ್ಯತೆಯಿದೆ. ಹಿಂಸೆಯಿಂದ ಸಾಧನೆ ಶೂನ್ಯ. ಜಗದ ಜೀವನ ಚಕ್ರ ಸರಾಗ ಉರುಳಬೇಕೆಂದರೆ ಶಾಂತಿಯ ಬೆಳಕು ರಾರಾಜಿಸಬೇಕು. ಈ ಬದುಕು ಗರಡಿಮನೆಯಿದ್ದ ಹಾಗೆ, ಪ್ರತಿನಿತ್ಯ ಏನಾದರೂ ಹೊಸ ಪಟ್ಟನ್ನು ಕಲಿಸುತ್ತ, ಕಲಿಯುತ್ತಿರಲೇಬೇಕು. ಪ್ರೀತಿ ಎಂಬ ಎರಡಕ್ಷರದ ಮೇಲೆಯೇ ಪ್ರಪಂಚ ನಿಂತುಕೊಂಡಿದೆ. ಮನುಷ್ಯಪ್ರೀತಿಯ ಪಾಠ ಹೇಳಿಕೊಟ್ಟರೆ ಸಾಕು, ಅದೊಂದೇ ನಮ್ಮ ಕಾಯುತ್ತದೆ. ನಾವೇ ಎಳೆದುಕೊಂಡ ಗಡಿರೇಖೆಗಳ ಅಂಚಿನಲ್ಲಿ ಯುದ್ಧ ವಿರೋಧಿ ಗೋಡೆಗಳ ಕಟ್ಟಬೇಕಿದೆ. ಮನಸುಗಳ ನಡುವೆ ಹಬ್ಬಿರುವ ಗೋಡೆಗಳ ಕೆಡವಿ ಮುಕ್ತ ಬೆಸೆಯುವಿಕೆ ಸಾಧ್ಯವಾಗಬೇಕು. ಅರಿಷಡ್ವರ್ಗಗಳನ್ನು ಮನಸಿನಲ್ಲಿ ಸಾಕಿಕೊಳ್ಳುವುದಕ್ಕಿಂತ ಮಾನವೀಯತೆಯನ್ನು ಪೋಷಿಸೋಣ, ಮನುಜಮತ ವಿಶ್ವಪಥಕ್ಕೆ ದಾರಿ ಅಲ್ಲವೇ? ದ್ವೇಷಕ್ಕೆ ಆಸ್ಪದ ಕೊಡದೆ, ವೈರತ್ವವನ್ನು ಕಿತ್ತೆಸೆದು ಮಿತ್ರತ್ವದಿಂದ ಬದುಕಲು ಕಲಿತರೆ ನಗೆತೋಟ ನಮ್ಮ ನಡುವೆ ಹಬ್ಬಿ ನಲಿಯುತ್ತದೆ. ಒಂದಂತೂ ಸತ್ಯ, ನಾವು ಹುಟ್ಟಿರುವುದು ಹೊಡೆದಾಟ, ಕಾದಾಟ ಮಾಡುವುದಕ್ಕಲ್ಲ. ಒಬ್ಬರಿಗೊಬ್ಬರು ಅರಿತು ಬೆರೆತು ಮಾನವೀಯತೆಯ ಬೆಳಕ ಹಂಚಲು. ಈ ಬದುಕಿನ ಸತ್ಯವೇ ಚಂದದ ಬಾಳಿಗೆ ಮುನ್ನುಡಿ.

ಒಳಿತಿಗಾಗಿಯೇ ಮಿಡಿಯುವ ಸಂತೋಷ ನಾಯಕ ಅವರ ಕವಿತೆ ಮನಸಿನ ಕತ್ತಲಿಗೆ ಕನ್ನಡಿ ಹಿಡಿದು ಬೆಳಕಿನ ಪ್ರಭೆ ಹರಡಲು ಅನುವು ಮಾಡಿಕೊಡುತ್ತದೆ. ಜಗದ ಜನ ಒಳಿತಿಗೆ ತೆರೆದುಕೊಳ್ಳಬೇಕಷ್ಟೇ… ಕವಿಗೆ ನಮನಗಳು.
- ನಾಗೇಶ್ ಜೆ. ನಾಯಕ
