ಸಾಮಾನ್ಯವಾಗಿ ಮನುಷ್ಯರಿಗೆ ಎರಡು ದಾರಿಗಳಿವೆ. ಮೊದಲನೆಯದು ಪ್ರೇಯದ ದಾರಿ. ಇದರಲ್ಲಿ ಲೌಕಿಕದ ಆಶಯಗಳು ಈಡೇರುತ್ತವೆ. ಎರಡನೆಯದು ಶ್ರೇಯದ ದಾರಿ. ಆದರೆ ಇದು ಸುಲಭದ ದಾರಿಯಲ್ಲ. ಕಯ್ಯಾರ ಕಿಞ್ಞಣ್ಣ ರೈ ಅವರ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
‘ಪಂಚಮೀ’ ಕಯ್ಯಾರರ ಉಪನಿಷತ್ ಕಾವ್ಯದ ಒಂದು ಪರಿಚಯ.
ಪ್ರಾಚೀನ ಭಾರತೀಯ ವಾಙ್ಮಯವನ್ನು ‘ಪ್ರಭು ಸಂಹಿತ’, ‘ಮಿತ್ರ ಸಂಹಿತ’ ಮತ್ತು ‘ಕಾಂತಾ ಸಂಹಿತ’ ಎಂದು ವಿಭಾಗಿಸುವ ಕ್ರಮವಿದೆ. ಮೊದಲನೆಯದಕ್ಕೆ ವೇದ ಮತ್ತು ಶಾಸ್ತ್ರಗಳು ನಿದರ್ಶನಗಳಾದರೆ, ಎರಡನೆಯದಕ್ಕೆ ಉಪನಿಷತ್ತು ಮತ್ತು ಪುರಾಣಗಳು. ಮೂರನೆಯದಕ್ಕೆ ಮಹಾಕಾವ್ಯಗಳು ನಿದರ್ಶನಗಳಾಗಿವೆ.
ಕಯ್ಯಾರರು ಎರಡನೆಯ ಭಾಗಕ್ಕೆ ಸೇರಿದ ಉಪನಿಷತ್ತುಗಳನ್ನು ತಮ್ಮ ಅನುವಾದಕ್ಕೆ ಆಯ್ದುಕೊಂಡಿದ್ದಾರೆ. ಅದರಲ್ಲಿಯೂ ಈಶ, ಕಠ, ಕೇನ, ಮುಂಡಕ ಮತ್ತು ಪ್ರಶ್ನೋಪನಿಷತ್ತುಗಳನ್ನು ಮಾತ್ರ ಇಡಿ ಇಡಿ ಯಾಗಿ ಅನುವಾದಿಸಿದ್ದಾರೆ.
ಅನುವಾದದಲ್ಲಿ ಮೂರು ಬಗೆ. ಒಂದು ಯಥಾವತ್ತಾದ ಅನುವಾದ, ಎರಡು ಸಂಗ್ರಹಾನುವಾದ, ಮೂರು ವಿಸ್ತøತ ಅನುವಾದ. ಪ್ರಸ್ತುತ ಅನುವಾದವು ಹೆಚ್ಚು ಕಡಿಮೆ ಮೊದಲನೆಯ ಅನುವಾದ ಪ್ರಕಾರವನ್ನು ಅನುಸರಿಸಿದೆ. ಕ್ವಚಿತ್ತಾಗಿ ಕೊನೆಯದ್ದನ್ನು ಸೇರಿಸಿಕೊಂಡಿದ್ದಾರೆ. ಇದರಿಂದಾಗಿ ಮೂಲವನ್ನು ಓದಲಾರದವರು ಈ ಅನುವಾದಗಳ ಮೂಲಕವೇ ಉಪನಿಷತ್ತುಗಳಲ್ಲಿರುವುದನ್ನು ಗ್ರಹಿಸುವುದು ಸಾಧ್ಯವಾಗುತ್ತದೆ. ಇದು ಈ ಅನುವಾದಗಳ ಹೆಚ್ಚುಗಾರಿಕೆಯಾಗಿದೆ.
ಪೂರ್ವ ಪೀಠಿಕೆಯಲ್ಲಿ ಕಯ್ಯಾರರು ಉಪನಿಷತ್ತುಗಳ ಮಹತ್ವವನ್ನು ಒಟ್ಟಾರೆಯಾಗಿ ಪ್ರಸ್ತಾಪಿಸಿರುವುದಲ್ಲದೆ ಪ್ರತಿ ಉಪನಿಷತ್ತುಗಳ ಸಾರ ಲೇಖವನ್ನು ಕೊಟ್ಟು ಓದುಗರಿಗೆ ಕಾವ್ಯದೊಳಗಡೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ. ಉಪನಿಷತ್ತುಗಳು ಬುದ್ಧನಿಗಿಂಥ ಪೂರ್ವದಲ್ಲೇ ರಚಿಸಲ್ಪಟ್ಟು ವೇದಾಂತ ಸಾರವನ್ನು ಒಳಗೊಂಡು ಪ್ರಸ್ಥಾನ ತ್ರಯಿಗಳಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಪಾಶ್ಚಾತ್ಯ ವಿದ್ವಾಂಸರೇ ಒಪ್ಪಿಕೊಂಡಿರುವುದನ್ನು ಕಯ್ಯಾರರು ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ.
ಕಯ್ಯಾರರು ಅನುವಾದಿಸಿರುವ ಮೊದಲ ಉಪನಿಷತ್ತೆಂದರೆ ಈಶ. ಇದು ಅತ್ಯಂತ ಚಿಕ್ಕ ಉಪನಿಷತ್ತಾಗಿದ್ದು ಮಹತ್ವದ ಚಿಂತನೆಯನ್ನು ಒಳಗೊಂಡಿದೆ. ಇದರ ಪ್ರಕಾರ ಇಡೀ ಜಗತ್ತು ಈಶನಿಂದ ಆವೃತವಾಗಿದೆ. ಭೋಗಕ್ಕಿಂತಲೂ ತ್ಯಾಗ ಮುಖ್ಯ. ಅನ್ಯರ ವಿತ್ತದ ಕಡೆಗೆ ಆಶೆಯನ್ನು ಪಡಬಾರದು. ಜಗತ್ತನ್ನು ವ್ಯಾಪಿಸಿರುವ ಈಶವು ಎಲ್ಲರಿಗೂ ಕಾಣದೇ ಇರಲು ಕಾರಣವಿದೆ. ಅದೆಂದರೆ ಚಿನ್ನದ ಪಾತ್ರೆಯಿಂದ ಅದನ್ನು ಮುಚ್ಚಲಾಗಿದೆ. ಚಿನ್ನದ ಮೆರುಗಿಗೆ ಮರುಳಾಗುವ ಜನ ಅದರ ಮುಚ್ಚಳವನ್ನು ತೆಗೆದು ನೋಡುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಈಶ ಜಗತ್ತಿನಲ್ಲಿ ವ್ಯಾಪಿಸಿದ್ದರೂ ಯಾರ ಕಣ್ಣಿಗೂ ಕಾಣುವುದಿಲ್ಲ. ಹಾಗೆ ಕಾಣ ಬಲ್ಲವರು ಚಿನ್ನದ ಪಾತ್ರೆಯ ಮೆರುಗಿಗೆ ಒಳಗಾಗದವರಾಗಿರಬೇಕು. ಅಂತಹವರ ಸಂಖ್ಯೆ ಎಂದಿಗೂ ಕಡಿಮೆಯೇ. ಅವರು ಮಾತ್ರ ಈಶನ ದರ್ಶನದಿಂದಾಗಿ ಸಕಲವನ್ನೂ ಏಕ ಭಾವದಿಂದ ಅರ್ಥಾತ ಸಮಾನತೆಯಿಂದ ನೋಡಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಈ ಮಂತ್ರ ಮತ್ತು ಅದರ ದರ್ಶನದಿಂದ ಗಾಂಧೀಜಿ ಮತ್ತು ವಿನೋಬಾ ಭಾವೆ ಪ್ರಭಾವಿತರಾಗಿದ್ದರು.

ಫೋಟೋ ಕೃಪೆ : google
ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆಯಿದೆ. ಬಲೂಚಿಸ್ಥಾನದಲ್ಲಿ ಕಠಕ್ ಎನ್ನುವ ಜನರ ನಡುವೆ ಇದು ಬಳಕೆಯಲ್ಲಿದ್ದುದರಿಂದ ಇದಕ್ಕೆ ಕಠೋಪನಿಷತ್ ಎಂಬ ಹೆಸರು ಬಂದಿತೆಂದು ಕಯ್ಯಾರರು ಪೀಠಿಕೆಯಲ್ಲಿ ಹೇಳಿದ್ದಾರೆ. ವಾಜಶ್ರವನೆಂಬ ಋಷಿ ವಿಶ್ವಜಿತು ಯಾಗವನ್ನು ಕೈಗೊಳ್ಳುತ್ತಾನೆ. ಕೊನೆಯಲ್ಲಿ ಹಾಲು ನೀಡದ ದನಗಳನ್ನು ದಾನವನ್ನಾಗಿ ನೀಡುತ್ತಿರುತ್ತಾನೆ. ಅದನ್ನು ನೋಡಿದ ಅವನ ಮಗ ನಚಿಕೇತ ದಾನಕ್ಕೆ ಯೋಗ್ಯನಾಗಿರುವ ತನ್ನನ್ನು ಯಾರಿಗೆ ದಾನಮಾಡುತ್ತೀ ಎಂದು ಪದೇ ಪದೇ ಕೇಳುತ್ತಾನೆ. ಇದರಿಂದ ಕೋಪಗೊಂಡ ವಾಜಶ್ರವನು ಅವನನ್ನು ಮೃತ್ಯುವಿಗೆ ದಾನವನ್ನಾಗಿ ನೀಡುತ್ತೇನೆಂದು ಹೇಳುತ್ತಾನೆ. ಅದರಂತೆ ನಚಿಕೇತನು ಯಮನ ಬಳಿಗೆ ಹೋಗುತ್ತಾನೆ. ಅಲ್ಲಿ ಅವನಿಲ್ಲದ್ದರಿಂದ ಮೂರು ದಿನ ನಿರಶನ ನಿಲ್ಲುತ್ತಾನೆ. ಅಲ್ಲಿಗೆ ಬಂದ ಯಮನು ಮೂರು ವರಗಳನ್ನು ಕೊಡುವುದಾಗಿ ಹೇಳುತ್ತಾನೆ. ಮೊದಲನೆಯ ವರದಲ್ಲಿ ತಾನು ಮರಳಿ ಹೋದಾಗ ತಂದೆ ತನ್ನ ಮೇಲೆ ಕೋಪಿಸಿಕೊಳ್ಳದೇ ಶಾಂತರಾಗಿ ಸ್ವೀಕರಿಸುವಂತಾಗಲೀ ಎಂದು ಕೇಳುತ್ತಾನೆ. ಅದನ್ನು ಕೊಟ್ಟ ಯಮನು ಎರಡನೆಯ ವರವನ್ನು ಕೇಳುವಂತೆ ಹೇಳುತ್ತಾನೆ. ಸ್ವರ್ಗಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದಾಗ ಅಗ್ನಿ ಅಲ್ಲಿಗೆ ಕರೆದೊಯ್ಯುವುದರಿಂದ ಅಗ್ನಿಯನ್ನು ಒಲಿಸಿಕೊಳ್ಳುವ ವಿದ್ಯೆಯನ್ನು ಹೇಳಿಕೊಟ್ಟು ಅದನ್ನು ಪುನರಪಿ ಮಂಡಿಸಿದ ನಚೀಕೇತನಿಂದ ಸಂಪ್ರೀತನಾಗಿ ಅದು ‘ನಾಚಿಕೇತಾಗ್ನಿ’ಎಂದು ಪ್ರಸಿದ್ಧಿಯಾಗಲಿ ಎಂಬ ವರವನ್ನು ನೀಡುತ್ತಾನೆ. ಮೂರನೆಯ ವರವನ್ನು ಕೇಳಿಕೋ ಎಂದಾಗ ಮನುಷ್ಯರು ಸತ್ತ ಮೇಲೆ ಎಲ್ಲಿಗೆ ಹೋಗುತ್ತಾರೆ? ಆತ್ಮ ಎನ್ನುವುದು ಉಂಟೆ ಇಲ್ಲವೇ? ಎಂದು ತಿಳಿದುಕೊಳ್ಳುವ ವರವನ್ನು ಕೇಳುತ್ತಾನೆ. ಆಗ ಯಮ ಇದು ದೇವತೆಗಳಿಗೂ ಸಂಶಯಾಸ್ಪದವಾಗಿದೆಯೆಂದೂ ಆದ್ದರಿಂದ ಅದನ್ನು ಬಿಟ್ಟು ಬೇರೆ ಯಾವುದಾದರೂ ಲೌಕಿಕ ಆಶೆಯನ್ನು ಕೇಳಿಕೊಳ್ಳಬೇಕೆಂದು ಹೇಳಿ ಬಗೆ ಬಗೆಯ ಆಮಿಶಗಳನ್ನು ಒಡ್ಡುತ್ತಾನೆ. ಯಾವುದಕ್ಕೂ ಜಗ್ಗದ ನಚಿಕೇತ ತನಗೆ ತಾನು ಕೇಳಿದ ವರವೇ ಬೇಕೆಂದು ಹಠ ಹಿಡಿಯುತ್ತಾನೆ. ನಚಿಕೇತನ ಧೃಡ ಮನಸ್ಕತೆಯನ್ನು ಮೆಚ್ಚಿದ ಯಮನು ಕಡೆಗೆ ಅವನಿಗೆ ಬೇಕಾದ ಮೂರನೆಯ ವರವನ್ನು ಕೊಡುತ್ತಾನೆ.
ಸಾಮಾನ್ಯವಾಗಿ ಮನುಷ್ಯರಿಗೆ ಎರಡು ದಾರಿಗಳಿವೆ. ಮೊದಲನೆಯದು ಪ್ರೇಯದ ದಾರಿ. ಇದರಲ್ಲಿ ಲೌಕಿಕದ ಆಶಯಗಳು ಈಡೇರುತ್ತವೆ. ಆದರೆ ಇದರ ಸುಳಿಯಲ್ಲಿ ಸಿಕ್ಕವರು ಬೀಳಲಾರರು. ಹುಟ್ಟು ಸಾವಿನಚಕ್ರದಲ್ಲಿ ಸುತ್ತುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಇವರಿಗೆ ಬಿಡುಗಡೆಯಿಲ್ಲ. ಎರಡನೆಯದು ಶ್ರೇಯದ ದಾರಿ. ಆದರೆ ಇದು ಸುಲಭದ ದಾರಿಯಲ್ಲ. ಖಡ್ಗದ ಅಲಗಿನ ಮೇಲೆ ನಡೆಯುವ ದಾರಿ. ಯಾರು ಈ ದಾರಿಯನ್ನು ಆರಿಸಿಕೊಳ್ಳುತ್ತಾರೋ ಅವರು ಆತ್ಮ ಸಾಕ್ಷಾತ್ಕಾರಕ್ಕೆ ಪಾತ್ರರಾಗುತ್ತಾರೆ. ಅವರು ಹೃದಯವನ್ನು ಪ್ರವೇಶಿಸಿ ಅಲ್ಲಿರುವ ನೂರೊಂದು ನಾಡಿಗಳಲ್ಲಿ ನೂರೊಂದನೆಯ ನಾಡಿಯನ್ನು ಹಿಡಿದು ಕ್ರಮಿಸಿ ಅಂಗುಷ್ಟ ರೂಪದಲ್ಲಿರುವ ಆತ್ಮ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ. ನಚಿಕೇತ ಆರಿಸಿಕೊಂಡದ್ದು ಈ ದಾರಿಯನ್ನು. ಅರ್ಥಾತ್ ಶ್ರೇಯದ ದಾರಿಯನ್ನು. ಅದರಿಂದಲೇ ಅವನಿಗೆ ಆತ್ಮ ಉಂಟೇ ಇಲ್ಲವೇ ಎನ್ನುವ ಪ್ರಶ್ನೆಗೆ ಉಂಟು ಎನ್ನುವ ಖಚಿತ ಉತ್ತರ ದೊರೆಯುತ್ತದೆ. ಅವನು ಹುಟ್ಟು ಸಾವಿನ ಚಕ್ರದಿಂದ ಪಾರಾಗಿ ಅಮೃತತ್ವವನ್ನು ಪಡೆಯುತ್ತಾನೆ.
ಇದೇ ಸಂದರ್ಭದಲ್ಲಿ ಆತ್ಮ ಸಾಕ್ಷಾತ್ಕಾರಕ್ಕೆ ಎರಡು ಮಾರ್ಗಗಳಿವೆಯೆಂದು ಅವುಗಳನ್ನು ಜ್ಞಾನ ಮತ್ತು ಕರ್ಮ ಮಾರ್ಗಗಗಳೆಂದು ಗುರುತಿಸಲಾಗಿದೆ. ಹಕ್ಕಿ ಒಂದು ರೆಕ್ಕೆಯಿಂದ ಹಾರಲು ಸಾಧ್ಯವಿಲ್ಲ ಅದಕ್ಕೆ ಎರಡು ರೆಕ್ಕೆಗಳು ಬೇಕು. ಇದರಲ್ಲಿ ಯಾವುದು ಉಚ್ಚ ಯಾವುದು ನೀಚ ಎಂಬ ಭೇದ ಭಾವಕ್ಕೆ ಅವಕಾಶವಿಲ್ಲ. (ಕುಮಾರಿಲ ಭಟ್ಟ)

ಫೋಟೋ ಕೃಪೆ : google
ನಚಿಕೇತನ ಕತೆಯಿಂದ ಪ್ರಭಾವಿತರಾದ ತ.ರಾ.ಸು ಅವರು ಬೆಳಕು ತಂದ ಬಾಲಕ ಎನ್ನುವ ಅದ್ಭುತವಾದ ಕಾದಂಬರಿಯನ್ನು ಬರೆದಿದ್ದಾರೆ. ಮುಂಡಕ ಉಪನಿಷತ್ತಿನಲ್ಲಿ ಇನ್ನೊಂದು ಚಿಕ್ಕ ಕತೆಯಿದೆ. ಅದರ ಪ್ರಕಾರ ಒಂದು ಮರದ ಮೇಲೆ ಎರಡು ಹಕ್ಕಿಗಳು ಕುಳಿತಿವೆ. ಒಂದು ಹಕ್ಕಿ ಸುಮ್ಮನೆ ನೋಡುತ್ತಿದೆ ಇನ್ನೊಂದು ಹಕ್ಕಿ ಮರದಲ್ಲಿ ಬಿಟ್ಟಿರುವ ಹಣ್ಣನ್ನು ತಿನ್ನುತ್ತಿದೆ. ಹಣ್ಣನ್ನು ತಿಂದಿರುವ ಹಕ್ಕಿ ಶೋಕಕ್ಕೆ ಒಳಗಾಗುತ್ತದೆ. ಆದರೆ ಮೇಲೆ ಕುಳಿತ ಹಕ್ಕಿ ಯಾವುದೇ ಪ್ರತಿಕ್ರಿಯೆ ಇಲ್ಲದೇ ಸುಮ್ಮನೆ ನೋಡತ್ತಲೇ ಇರುತ್ತದೆ. ಮೊದಲನೆಯ ಹಕ್ಕಿ ಪರಮಾತ್ಮವಾದರೆ, ಎರಡನೆಯ ಹಕ್ಕಿ ಜೀವಾತ್ಮ. ಬೈಬಲ್ ನಲ್ಲಿ ಬರುವ ಆಡಂ ಮತ್ತು ಈವ್ರ ಕತೆಯನ್ನು ಇದು ನೆನಪಿಗೆ ತಂದರೆ ಆಶ್ಚರ್ಯವಿಲ್ಲ. ಆದರೆ ಬೈಬಲ್ಲಿಗಿಂತ ಮೊದಲೇ ಉಪನಿಷತ್ತಿನಲ್ಲಿ ಈ ಕತೆ ಇದೆ ಎಂಬುದು ಮುಖ್ಯ.
ದೇವತೆಗಳಿಗೂ ಕೂಡ ಬ್ರಹ್ಮ ಸ್ವರೂಪದ ಬಗ್ಗೆ ಸಂಶಯವುಂಟು ಎನ್ನುವುದಕ್ಕೆ ನಿದರ್ಶನವಾಗಿ ಕೇನೋಪನಿಷತ್ತಿನಲ್ಲಿ ಮುಂದಿನ ಭಾಗ ಬರುತ್ತದೆ. ಬ್ರಹ್ಮನಿಂದ ಜಯಿಸಲ್ಪಟ್ಟ ದೇವತೆಗಳು ಅದನ್ನು ಮರೆತು ತಾವೇ ಜಯಿಸಿದ್ದು ಎಂಬ ಭ್ರಮೆಗೆ ಒಳಗಾಗುತ್ತಾರೆ. ಅವರಿಗೆ ಪಾಠ ಕಲಿಸಲು ಬ್ರಹ್ಮ ಯಕ್ಷ ರೂಪದಲ್ಲಿ ಬರುತ್ತಾನೆ. ಅದನ್ನು ತಿಳಿದು ಬರಲೆಂದು ಅಗ್ನಿಯನ್ನು ಕಳಿಸಲಾಗುತ್ತದೆ. ಆಗ ಯಕ್ಷನು ನೀನು ಯಾರು ನಿನ್ನ ವೀರ್ಯವೇನು ಎಂದು ಕೇಳುತ್ತಾನೆ. ಅದಕ್ಕೆ ಅಗ್ನಿಯು ತಾನು ಜಾತವೇದನೆಂದು ಯಾರನ್ನು ಬೇಕಾದರೂ ತಾನು ದಹಿಸಬಲ್ಲೆ ಎಂದು ಉತ್ತರಿಸುತ್ತಾನೆ. ಆಗ ಯಕ್ಷನು ಒಂದು ಹುಲ್ಲು ಕಡ್ಡಿಯನ್ನು ಹಿಡಿದು ‘ಇದನ್ನು ದಹಿಸು’ ಎಂದು ಸವಾಲೊಡ್ಡುತ್ತಾನೆ. ಅಗ್ನಿಯು ಅದರಲ್ಲಿ ವಿಫಲನಾಗುತ್ತಾನೆ. ಮರಳಿ ಹೋಗಿ ಅದನ್ನು ತನಗೆ ತಿಳಿಯಲಾಗಲಿಲ್ಲವೆಂದು ಹೇಳಿದಾಗ ವಾಯುವನ್ನು ಕಳಿಸಲಾಗುತ್ತದೆ. ವಾಯುವಿಗೂ ಯಕ್ಷನು ಹುಲ್ಲುಕಡ್ಡಿಯನ್ನು ಹಾರಿಸುವಂತೆ ಹೇಳುತ್ತಾನೆ. ವಾಯುವೂ ವಿಫಲವಾಗಿ ಮರಳುತ್ತಾನೆ. ಅಗ ಇಂದ್ರ ತಿಳಿಯಲು ಬರುತ್ತಾನೆ. ಯಕ್ಷ ಅಲ್ಲಿಂದ ಮರೆಯಾಗುತ್ತಾನೆ. ಇಂದ್ರ ತನಗೆ ಕಂಡ ಹೈಮವತಿಯನ್ನು ಯಕ್ಷನನ್ನು ಕುರಿತು ಕೇಳುತ್ತಾನೆ. ಆಗ ಅವಳು ಆ ಯಕ್ಷನು ಬ್ರಹ್ಮನಲ್ಲದೆ ಬೇರೆಯಲ್ಲವೆಂದು, ಬ್ರಹ್ಮನಿಂದಲೇ ದೇವತೆಗಳಿಗೆ ಜಯಲಭಿಸಿದ್ದೆಂದು ತಿಳಿ ಹೇಳುತ್ತಾಳೆ. ಆಗ ಇಂದ್ರಾದಿಗಳಿಗೆ ತಮ್ಮ ಶಕ್ತಿಯ ಮಿತಿ ಅರಿವಾಗುವುದಲ್ಲದೇ ಬ್ರಹ್ಮನ ಮಹಿಮೆಯೂ ವ್ಯಕ್ತವಾಗುತ್ತದೆ. ಬ್ರಹ್ಮನ ಸಾಕ್ಷಾತ್ಕಾರಕ್ಕೆ ಮಹಿಳೆ ಅಡ್ಡಿ ಎನ್ನುವ ತಪ್ಪು ಕಲ್ಪನೆಯಿರುವ ಈ ಸಂದರ್ಭದಲ್ಲಿ ಮಹಿಳೆಯೇ ದೇವತೆಗಳಿಗೆ ಬ್ರಹ್ಮ ಸಾಕ್ಷಾತ್ಕಾರಕ್ಕೆ ಮಾಧ್ಯಮವಾಗುತ್ತಾಳೆ ಎಂಬುದು ಇಲ್ಲಿ ಮಹತ್ವದ ಸಂಗತಿಯಾಗುತ್ತದೆ.
ಕೊನೆಯ ಪ್ರಶ್ನೋಪನಿಷತ್ತಿನಲ್ಲಿ ಆರು ಜನ ಋಷಿ ಕುಮಾರರು ಪಿಪ್ಪಲಾದರ ಬಳಿಗೆ ಬಂದು ತಮಗೆ ಬ್ರಹ್ಮೋದೇಶ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಆಗ ಅವರು ಒಂದು ವರುಷ ಕಾಲ ಶ್ರದ್ಧೆಯಿಂದ ತಪಸ್ಸು ಮಾಡಿ ಆನಂತರ ಬಂದು ಕೇಳಿಯೆಂದು ಹೇಳಿ ಕಳಿಸುತ್ತಾರೆ ಅದರಂತೆ ಅವರು ಬಂದಾಗ ಅವರ ವಿವಿಧ ಪ್ರಶ್ನೆಗಳಿಗೆ ಉತ್ತರಕೊಟ್ಟು ಮೇಲೆ ಸೂಚಿಸಿದ ಬ್ರಹ್ಮ ಜ್ಞಾನವನ್ನು ಉಪದೇಶಿಸುತ್ತಾರೆ.

ಫೋಟೋ ಕೃಪೆ : google
ಪ್ರತಿ ಉಪನಿಷತ್ತಿನ ಪ್ರಾರಂಭದಲ್ಲಿಯೂ ಒಂದು ಮಂತ್ರವಿದೆ ಅದರಿಂದ ತಿಳಿಯುವುದೆಂದರೆ ಗುರು ಶಿಷ್ಯರಿಬ್ಬರು ಜೊತೆಯಲ್ಲಿ ಅಧ್ಯಯನವನ್ನು ಶ್ರದ್ಧೆಯಿಂದ ಕೈಗೊಳ್ಳಬೇಕು ಅದೊಂದು ಸಾಹಸ ಕಾರ್ಯ, ಏಕೆಂದರೆ ಬಲಹೀನರಾದವರಿಗೆ ಆತ್ಮ ವಿದ್ಯೆ ದೊರೆಯುವುದಿಲ್ಲ. ಪರಸ್ಪರ ಎಂದೆಂದಿಗೂ ದ್ವೇಷಿಸದೇ ಇರೋಣ ಎಂದು ಪ್ರಾರ್ಥಿಸುತ್ತಾರೆ. ಕಯ್ಯಾರರು ಪೀಠಿಕೆಯಲ್ಲಿ ಅಂದಿನ ಶಿಕ್ಷಣ ಪದ್ಧತಿಯನ್ನು ಕುರಿತು ಬರೆಯತ್ತಾ ಹೇಗೆ ತಂದೆ ಯಾರೆಂದು ಗೊತ್ತಿಲ್ಲದ ಜಾಬಾಲಿಗೂ ಅವನು ಸತ್ಯ ಹೇಳಿದ ಎನ್ನುವ ಕಾರಣಕ್ಕಾಗಿ ಸತ್ಯಕಾಮನೆಂದು ಹೆಸರು ಕೊಟ್ಟು ಬ್ರಹ್ಮಜ್ಞಾನವನ್ನು ಪಡೆಯುವ ಅವಕಾಶವಿತ್ತು ಎಂಬುದನ್ನು ಸೂಚಿಸಿದ್ದಾರೆ. ಇದು ಅಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೂ ಇರುವ ಅಂತರವನ್ನು ಸೂಚಿಸುತ್ತದೆ. ಅರ್ಹತೆಯೊಂದೇ ಮಾನದಂಡವಾಗಬೇಕು ಎಂಬ ಅಂದಿನ ನಿಲುವು ಇಂದೂ ಕೂಡ ಸ್ವಾಗತಾರ್ಹವಾಗಿದೆ.
ಅಡಿಗರ ‘ಪ್ರಾರ್ಥನೆ’ ಪದ್ಯದಲ್ಲಿ ನಮಗೀಗ ‘ಪರಂಗಿ ರೋಗ’ ತಗಲಿದೆಯೆಂದು ಅದರಿಂದ ಮುಕ್ತಿಯನ್ನು ಪಡೆಯಬೇಕಾದರೆ ಇನ್ನಾದರೂ ಪೂರ್ವಮೀಮಾಂಸೆಯ ಕಡೆಗೆ ತಿರುಗಬೇಕು ಎಂದಿದ್ದಾರೆ. ಆ ಪೂರ್ವ ಮೀಮಾಂಸೆಯೆಂದರೆ ಈ ವೇದೋಪನಿಷತ್ತುಗಳೇ ಆಗಿವೆ. ಅವುಗಳ ಚಿಕಿತ್ಸಕ ಅಭ್ಯಾಸದ ಮೂಲಕ ‘ಹಿಡಿದು ಬಡಿದು ಇಷ್ಟದೇವತಾ ವಿಗ್ರಹವನ್ನು’ ರೂಪಿಸಿಕೊಳ್ಳಬಹುದು.
**********
ಓಂ ಪೂರ್ಣಮದು ಪೂರ್ಣಮಿದು, ಪೂರ್ಣದಿಂದಲೆಯಲ್ತೆ ಪೂರ್ಣ ಹೊರಹೊಮ್ಮಿ ಬಂದಿಹುದು. ಪೂರ್ಣದೊಳಗಿನ ಪೂರ್ಣವಂ ತೆಗೆದೆರೆಯು ಮತ್ತೆ
ಪೂರ್ಣವೇ ಉಳಿದು ನಿಂದಿಹುದು.
ಓಂ ಶಾಂತಿಯೈ ಶಾಂತಿಯೈ ಶಾಂತಿಯೈ.
ಇದು ಈಶ ಉಪನಿಷತ್ತಿನ ಪ್ರಾರಂಭದಲ್ಲಿ ಬರುವ ಶಾಂತಿ ಮಂತ್ರ.2
ಈ ಪೂರ್ಣವೇ ಗಣಿತ ಶಾಸ್ತ್ರದಲ್ಲಿ ಸೊನ್ನೆಯಾಗಿ ವಿಶ್ವಕ್ಕೆ ಭಾರತವು ಕೊಟ್ಟ ಕೊಡುಗೆಯಾಗಿದೆ. ಈ ಪೂರ್ಣವೇ ಬೌದ್ಧ ಧರ್ಮದಲ್ಲಿ ಸೂನ್ಯ ನಿಕಾಯವಾಗಿದೆ. ಈ ಪೂರ್ಣವೇ ವಚನಕಾರರಲ್ಲಿ ಶೂನ್ಯ ಸಂಪಾದನೆಯಾಗಿದೆ. ದಾಸರಲ್ಲಿ ಬಯಲಾಗಿದೆ. ಕಡೆಗೆ ಆಲಯ ಮತ್ತು ಬಯಲುಗಳೆರೆಡು ನಿನ್ನ ನಯನದೊಳಗೋ…. ? ಆಗಿದೆ.
ಒಳಗೆ ಮತ್ತು ಹೊರಗೆ ವ್ಯಾಪ್ತವಾಗಿರುವ ಬ್ರಹ್ಮ ಸಾಕ್ಷಾತ್ಕಾರದ ಮೂಲಕ ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ನೋಡಲು ಸಾಧ್ಯ. ಅದರಿಂದ ವಿಮುಖರಾಗಿರುವ ನಾವು ಇಂದಿನ ಅಸಮಾನ ವ್ಯವಸ್ಥೆಗೆ ನಾಂದಿ ಹಾಡಿದ್ದೇವೆ. ಅದಕ್ಕೆ ಮರಳಿ ಹೋಗುವುದರ ಮೂಲಕ ಈ ಅಸಮಾನ ವ್ಯವಸ್ಥೆಗೆ ಚರಮಗೀತೆ ಹಾಡಲು ಸಾಧ್ಯವಾಗುತ್ತದೆ. ಆಗ ಮಾತ್ರ ಯುದ್ಧಕ್ಕೆ ವಿದಾಯ ಹೇಳಿ ಶಾಂತಿಗೆ ಸ್ವಾಗತ ಹಾಡಲು ಸಾಧ್ಯವಾಗುತ್ತದೆ.
ಓಂ ಶಾಂತಿಃ ಶಾಂತಿಃ ಶಾಂತಿಃ
ಆಕರ : ಪಂಚಮೀ. ಕಯ್ಯಾರ ಕಿಞ್ಞಣ್ಣ ರೈ, ಕವಿತಾ ಕುಟೀರ, ಪೆರ್ಡಾಲ, 1985. The Principal Upanishads, S. Radhakrishnan, George Allen & Unwin Ltd. London, 1953
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
