ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದ ಕತೆ



ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರನ್ನು ಸುಂದರ ನಾಡನ್ನಾಗಿ ಮಾರ್ಪಡಿಸಬೇಕೆಂಬ ಕನಸ್ಸುನ್ನು ಬೆನ್ನಟ್ಟಿ ಹೊರಟ ಕತೆಯಿದು. ಕರ್ನಾಟಕ ರಾಜಧಾನಿ ಬೆಂಗಳೂರಿನ ಬಗ್ಗೆ ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದ ಒಂದು ಲೇಖನ. ಎಲ್ಲರೂ ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಹನ್ನೆರಡನೇ ಶತಮಾನದಲ್ಲಿ ಬಲ್ಲಾಳ ವಂಶದ ದೊರೆಗಳ ಆಳ್ವಿಕೆಯ ಕಾಲದಲ್ಲಿ “ಚಿಕ್ಕ ಬಲ್ಲಾಳಪುರ”, “ದೊಡ್ಡ ಬಲ್ಲಾಳಪುರ” ಮತ್ತು “ಈಚೆ ಪಕ್ಕನಾಡು” ಪ್ರಮುಖವಾದ ಸಂಸ್ಥಾನಗಳು. ಅವುಗಳು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಯಲಹಂಕವಾಗಿ ಪರಿವರ್ತನೆಗೊಳ್ಳುವಷ್ಟರಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯರ ಅಧಿಕಾರ ಪ್ರಾರಂಭವಾಗಿತ್ತು. ಕೆಂಪೇಗೌಡರ ವಂಶಸ್ಥರು ವಿಜಯನಗರದ ಸಾಮ್ರಾಜ್ಯದ ಸಾಮಂತರಾಗಿ ಈ ನಾಡಿನ ‘ನಾಡಪ್ರಭುಗಳಾಗಿ’ ಆಡಳಿತ ನಡೆಸುತ್ತಿದ್ದರು. ಕೆಂಪನಂಜೇಗೌಡರು ಆ ಸಮಯದ ಯಲಹಂಕದ ನಾಡಪ್ರಭುಗಳಾಗಿದ್ದರು. ಇವರ ಮಗನೇ ಕೆಂಪೇಗೌಡ. ಕೆಂಪೇಗೌಡರು ಚಿಕ್ಕಂದಿನಿಂದಲೇ ತಮ್ಮ ತಂದೆಯ ಜೊತೆ ಪ್ರತಿ ವರ್ಷ ಹಂಪೆಯಲ್ಲಿ ನಡೆಯುತ್ತಿದ್ದ ದಸರಾ ಸಮಾರಂಭವನ್ನು ನೋಡಲು ಹೋಗುತ್ತಿದ್ದರು. ಅಲ್ಲಿನ ವೈಭವ, ಶ್ರೀಮಂತತೆ, ಸಮೃದ್ಧತೆಗೆ ಆಕರ್ಷಿತರಾದವರಿಗೆ ಮುಂದೊಮ್ಮೆ ಇದೇ ತರಹದ ಭವ್ಯ ನಗರವೊಂದನ್ನು ಕಟ್ಟುವ ಕನಸಿನ ಮೊಳಕೆಯೊಡೆದದ್ದೇ ಹಂಪೆಯಲ್ಲಿ.

ಫೋಟೋ ಕೃಪೆ : Mapio.net

ಕೆಂಪೇಗೌಡ ಹೆಸರಘಟ್ಟದ ಗುರುಕುಲದಲ್ಲಿ ಎಂಟು ವರ್ಷಗಳ ವಿದ್ಯಾಭ್ಯಾಸ ಮುಗಿಸಿ ಯಲಹಂಕನಾಡಿನ ಕಾರ್ಯಭಾರವನ್ನು ವಹಿಸಿಕೊಂಡಿದ್ದರು. ಕೃಷ್ಣದೇವರಾಯರ ಆಡಳಿತ ವೈಖರಿಯನ್ನು ಆದರ್ಶವಾಗಿಟ್ಟುಕೊಂಡು ಇವರು ಯಲಹಂಕದ ಕಾರ್ಯಾಭಾರವನ್ನು ವಹಿಕೊಂಡಾಗ ಇವರಿಗಿನ್ನೂ ಚಿಕ್ಕ ವಯಸ್ಸು. ಇವರ ಕಾರ್ಯದಕ್ಷತೆ ವಿಜಯನಗರದಲ್ಲಿ ಕೃಷ್ಣದೇವರಾಯರ ನಂತರ ಅಚ್ಯುತರಾಯರಿಂದ ಪ್ರಶಂಸೆಗೊಳಗಾಗಿತ್ತು.

ಕೆಂಪೇಗೌಡರು ತಮ್ಮ ಆಪ್ತಸ್ನೇಹಿತ ಗಿಡ್ಡೇಗೌಡರೊಂದಿಗೆ ಒಮ್ಮೆ ಕೋಡಿಗೇಹಳ್ಳಿ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದಾಗ ನಡೆದ ಒಂದು ಘಟನೆ ಮುಂದೆ ಬೆಂಗಳೂರೆಂಬ ಆಕಸ್ಮಿಕ ನಗರದ ಕರ್ತೃಕಾರಣವಾಯಿತು.
ಇವರು ಜೊತೆ ಬಂದಿದ್ದ ಬೇಟೆನಾಯಿಯನ್ನು ಒಂದು ಮೊಲ ಅಟ್ಟಿಸಿಕೊಂಡು ಕಾಡಿನಿಂದ ಹೊರಗೋಡಿಸಿಬಿಟ್ಟಿತು. ಅಲ್ಲಿದ್ದವರೆಲ್ಲಾ ಈ ಸೋಜಿಗದ ಘಟನೆಯಿಂದ ಅಚ್ಚರಿಗೊಂಡರು. ಕಾಲಾನಂತರ ಈ ಘಟನೆ ಮರೆತೂ ಹೋಯಿತು.

ಆದರೆ ಕೆಂಪೇಗೌಡರು ಮತ್ತು ಗಿಡ್ಡೇಗೌಡರಿಗೆ ಮಾತ್ರ ಈ ಘಟನೆ ಹಿಂದೆ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಘಟನೆಯಂತೆಯೇ ಗೋಚರಿಸಿತು. ಅಂದು ಹಕ್ಕ ಬುಕ್ಕರು ಮಾಡಿದ ಸಾಹಸಕಾರ್ಯಗಳಿಂದ ಪ್ರೇರಿತರಾಗಿ ತಾವೂ ಒಂದು ಗಂಡು ನಾಡನ್ನು ಕಟ್ಟುವ ಕನಸೊಂದು ಟಿಸಿಲೊಡೆಯಿತು. ಇಂತಹದೊಂದು ಹೊಸನಾಡೊಂದನ್ನು ಕಟ್ಟುವ ಕನಸು ಎಷ್ಟು ಪ್ರಭಲವಾಗಿ, ಹೆಮ್ಮರವಾಗಿ ಬೆಳೆಯಿತೆಂದರೆ, ತಮ್ಮದೊಂದು ನೀಲಿನಕಾಶೆಯೊಂದಿಗೆ ವಿಜಯನಗರವನ್ನು ತಲುಪಿಬಿಟ್ಟರು, ಅನುದಾನ ಮತ್ತು ಆಶೀರ್ವಾದ ಪಡೆಯಲು. ಇವರ ನೂತನ ನಗರ ನಿರ್ಮಾಣದ ವಿವರಣೆ ಕೇಳಿದ ವಿಜಯನಗರದರಸರು ಎಷ್ಟು ಪ್ರಭಾವಿತರಾದರೆಂದರೆ ಅವರ ಊಳಿಗದಲ್ಲಿದ್ದ ಇನ್ನೂ ಆರು ಸಂಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಟ್ಟು ಜೊತೆಗೆ ಐವತ್ತು ಸಾವಿರ ಚಿನ್ನದ ವರಾಹಗಳ ಅನುದಾನವನ್ನೂ ದಯಪಾಲಿಸಿದರು. ಸಂಪಧ್ಭರಿತ ಮಹಾ ಸಾಮ್ರಾಜ್ಯವನ್ನು ಕಟ್ಟಿದ ಸವಿಸ್ತಾರ ಅನುಭವವಿದ್ದ ಅರಸರು ಹೇಳಿದ್ದಿಷ್ಟೇ…ನೀವು ಕಟ್ಟುವ ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಬೇಕು, ಜಲ ಸಂಪನ್ಮೂಲಕ್ಕೆ ಪ್ರಾಮುಖ್ಯತೆ ಕೊಡಬೇಕು ಮತ್ತು ಎಲ್ಲಕ್ಕೂ ಮಿಗಿಲಾಗಿ ಧಾರ್ಮಿಕ ಸಂಸ್ಥಾನಗಳು ಎಲ್ಲೆಡೆಯಲ್ಲೂ ಸ್ಥಾಪಿತಗೊಳ್ಳ ಬೇಕು. “ಹಾಗೇ ಮಾಡುತ್ತೇವೆ ಪ್ರಭು” ಎಂದು ಕನಸುಗಳ ಮೂಟೆಯೊಂದಿಗೆ ಸೇರಿಕೊಂಡ ಚಿನ್ನದ ವರಾಹಗಳ ಮೂಟೆಯನ್ನೂ ಹೊತ್ತು ಯಲಹಂಕಕ್ಕೆ ಮರಳಿದರು, ಅದ್ಭುತ ನಗರವೊಂದನ್ನು ನಿರ್ಮಿಸಲು.

ಫೋಟೋ ಕೃಪೆ : wikipedia

ಬೆಂಗಳೂರಿನ ಬಾಲ್ಯ

ಪುರೋಹಿತ ಗಣ ನಿರ್ಧರಿಸಿದಂತೆ ಪ್ರಶಸ್ತ ಸಮಯದಲ್ಲಿ , ದೊಮ್ಮಲೂರು ಮತ್ತು ಯಲಹಂಕದ ನಡುವಿನ ಕಾಡಿನ ನಡುವೆ ಆಯ್ದ ಒಂದು ಸ್ಥಳದಲ್ಲಿ ಭೂಮಿ ಪೂಜೆ ಪ್ರಾರಂಭವಾಯಿತು. ಹೆಸರಘಟ್ಟದ ಗುರುಕುಲವೇ ಅಲ್ಲಿಗೆ ಬಂದಿಳಿಯಿತು, ತಮ್ಮ ಶಿಷ್ಯ ಕೆಂಪೇಗೌಡರು ನೂತನ ನಗರವೊಂದನ್ನು ನಿರ್ಮಿಸುತ್ತಿದ್ದಾರೆಂದರೆ ಸಾಮಾನ್ಯದ ಮಾತೇ?

ಯಜ್ಞ ಹವನಾದಿಗಳಿಂದ ಕಾಡಿನ ನಡುವೆ ಹೊಗೆ ದಟ್ಟೈಸಿತು. ವೇದ ಘೋಷಗಳು ಮೊಳಗುತ್ತಿದ್ದಂತೆ ನೇಗಿಲು ಹೊತ್ತ ನಾಲ್ಕು ಜೋಡಿ ಬಿಳಿ ಎತ್ತುಗಳು ನಾಲ್ಕು ದಿಕ್ಕುಗಳಲ್ಲಿ ಗೆರೆ ಎಳೆಯುತ್ತಾ ಸಾಗಿದವು.
ಪೂರ್ವ, ಪಶ್ಚಿಮದ ಸಾಲನ್ನು “ಚಿಕ್ಕಪೇಟೆ”ಯಾಗಿ, ಉತ್ತರ, ದಕ್ಷಿಣದ ಸಾಲನ್ನು “ದೊಡ್ಡ ಪೇಟೆ”ಯಾಗಿ ( ಈಗಿನ ಅವೆನ್ಯೂ ರಸ್ತೆ) ನಿರ್ಮಿಸಲು ನಿರ್ಧರಿಸಿಯಾಗಿತ್ತು.

ವಿಜಯನಗರದ ವ್ಯವಸ್ಥಿತ ವಾಣಿಜ್ಯ ಕೇಂದ್ರಗಳಿಂದ, ಮಾರಾಟ ಮಳಿಗೆಗಳಿಂದ ಕಲಿತ ಅನುಭವವನ್ನು ಇಲ್ಲಿ ಅಳವಡಿಸಿ ಕೊಳ್ಳಲಾಗಿತ್ತು.

ಫೋಟೋ ಕೃಪೆ : pinterest

ದೊಡ್ಡ ಪೇಟೆ ಸಗಟು ಮಾರಾಟಕ್ಕಾದರೆ, ಚಿಕ್ಕಪೇಟೆ ಚಿಲ್ಲರೆ ವ್ಯವಹಾರಕ್ಕಾಯಿತು. ಅಕ್ಕಿಪೇಟೆ, ರಾಗಿಪೇಟೆ, ಅರಳೆ ಪೇಟೆ, ತರಗು ಪೇಟೆ ದವಸ ಧಾನ್ಯಗಳ ಮಾರಾಟಕ್ಕೆ, ಗಾಣಿಗರಪೇಟೆ ಎಣ್ಣೆ ಮಾರಾಟಕ್ಕೆ, ಉಪ್ಪಾರರ ಪೇಟೆ ಉಪ್ಪಿನ ವರ್ತಕರಿಗಾದರೆ, ಕುಂಬಾರ ಪೇಟೆ ಮಡಿಕೆಗಳನ್ನು ಮಾಡಿ ಮಾರಾಟ ಮಾಡುವವರಿಗಾಯಿತು. ತಿಗಳರ ಪೇಟೆ ಹೂವಿನ ಮಂಡಿಯಾದರೆ, ನಗರ್ತಪೇಟೆ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗಾಯಿತು. ಬಳೇಪೇಟೆ ಬಳೆ, ಸರ ಮಾರಾಟಕ್ಕೆ ಮೀಸಲಾಯಿತು.ಇನ್ನು ಜಲ ಸಂಪನ್ಮೂಲಗಳ ನೆಲೆಯಾಗಿ ಧರ್ಮಾಂಭುಧಿ (ಈಗಿನ ಬಸ್ ಸ್ಟ್ಯಾಂಡ್) ಮತ್ತು ಕೆಂಪಾಂಭುಧಿ, ಹಲಸೂರು ಕೆರೆ, ಯಡೆಯೂರು ಕೆರೆ, ನಾಗರೀಕರ ಬಳಕೆಗಾದರೆ ನೀರಾವರಿಗೆಂದೇ ಸಂಪಂಗಿ ಕೆರೆಯನ್ನು ( ಈಗಿನ ಕಂಠೀರವ ಸ್ಟೇಡಿಯಂ) ಕಟ್ಟಲಾಯಿತು.



ಗುರುಕುಲದ ವಿಧ್ಯಾರ್ಥಿಯಾಗಿ ಬೆಳೆದ ಕೆಂಪೇಗೌಡರು ದೇವಸ್ಥಾನಗಳು ಬರೀ ಭಕ್ತಿಕೇಂದ್ರಗಳಲ್ಲ, ಜ್ಞಾನ ಕೇಂದ್ರಗಳಾಗಿ ಪುರಾತನ ಕಾಲದಿಂದಲೂ ಇದ್ದ ಸಂಸ್ಕಾರವನ್ನು ಮುಂದುವರೆಸಿ ಗವಿ ಸಿಧ್ಧೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಈ ದೇವಸ್ಥಾನವೊಂದು ಖಗೋಳಶಾಸ್ತ್ರದ ಅಚ್ಚರಿ ಎಂದು ಈಗ ಅದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಬಸವನಗುಡಿಯ ನಂದಿದೇವಾಲಯ, ದೊಡ್ಡ ಪೇಟೆಯ ಆಂಜನೇಯ ದೇವಾಲಯವೇ ಅಂದು ಬೆಂಗಳೂರಿನ ಭೂಮಿಪೂಜೆ ಮಾಡಿದ ಸ್ಥಳ ಎಂದು ಹೇಳುತ್ತಾರೆ.

ಬೆಂಗಳೂರಿನ ವಾಣಿಜ್ಯ ಪ್ರಾಮುಖ್ಯತೆ ಹೆಚ್ಚಿದಂತೆ ಹೊರಗಿನವರ ಕಣ್ಣುಬೀಳುವುದು ಸಹಜ ಎಂಬ ವಿಷಯವನ್ನು ಚೆನ್ನಾಗಿ ಅರಿತಿದ್ದ ಸೇನಾನಿ ಕೆಂಪೇಗೌಡರು ನಗರ ರಕ್ಷಣೆಗೆಂದು ಸುತ್ತಲೂ ಕೋಟೆಯನ್ನು ನಿರ್ಮಿಸಿದ್ದರು. ಯಲಹಂಕ, ಕೆಂಗೇರಿ, ಹಲಸೂರು ಮತ್ತು ಆನೇಕಲ್ಲಿನಲ್ಲಿ ಈ ಕೋಟೆಯ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಬೆಂಗಳೂರು ಬೆಳೆಯುತ್ತಿರುವ ವೇಗದಿಂದಲೋ, ನಾಗರೀಕರಲ್ಲಿ ಹೆಚ್ಚುತ್ತಿದ್ದ ಸಂಪತ್ತೋ, ಅಥವಾ ವಿಜಯನಗರದಲ್ಲಿ ಬದಲಾಗುತ್ತಿದ್ದ ವಿದ್ಯಾಮಾನಗಳೋ ಅಥವಾ ಕೆಂಪೇಗೌಡರ ದುರಾದೃಷ್ಟವೋ ಇಂತಹ ಅದ್ಭುತವಾದ ನಗರವನ್ನು ನಿರ್ಮಾಣಮಾಡಿದ ಕತೃವಿಗೆ ಸೆರೆಮನೆ ಬಾಗಿಲು ತೆರೆದುಕೊಂಡು ಕಾಯುತ್ತಿತ್ತು….

ಪ್ರೌಢ ಬೆಂಗಳೂರು

ಕೆಂಪೇಗೌಡರ ನಗರ ನಿರ್ಮಾಣದ ಪ್ರಮುಖವಾದ ಅಂಶವೆಂದರೆ ರಾಜಕಾಲುವೆಗಳ ಜೋಡಣೆ. ಮಳೆ ನೀರಿನಿಂದ ಒಂದು ಕೆರೆ ತುಂಬಿದ ಕೂಡಲೇ ಈ ರಾಜಕಾಲುವೆಗಳ ಮುಖಾಂತರ ಇನ್ನೊಂದು ಕೆರೆಗೆ ನೀರು ಹರಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ನುರಿತ ನೀರುಗಂಟಿಗಳನ್ನು ವಿಜಯನಗರದಿಂದ ಕರೆತರಲಾಗಿತ್ತು. ಹೀಗೆ ಎಲ್ಲಾ ಕೊರೆಗಳು ತುಂಬಿದ ಮೇಲೆ ಕೋಟೆಯ ಹೊರವಲಯದ ಕಾಲುವೆಗಳಿಗೆ ಹರಿಸಲಾಗುತ್ತಿತ್ತು. ಇದೊಂದು ಕೋಟೆಯ, ನಗರದ ಮತ್ತು ನಾಗರೀಕರ ಸುರಕ್ಷೆಯ ವ್ಯವಸ್ಥೆ.

ಫೋಟೋ ಕೃಪೆ : past India

ಒಂದು ಕಡೆ ವಿಜಯನಗರದರಸರ ಕೃಪಾಪೋಷಣೆಯಿಂದ ಹುಟ್ಟಿ ಬೆಳೆದು ಸಂಪಧ್ಭರಿತವಾಗುತ್ತಾ ಹೋಗುತ್ತಿದ್ದರೆ, ವಿಜಯನಗರದ ಸಾಮ್ರಾಜ್ಯದ ಅಡಿಪಾಯವೇ ಅಲುಗಾಡುವಂತಹ ಘಟನೆಗಳು ಅಲ್ಲಿ ನಡೆಯುತ್ತಿದ್ದವು. ೧೫೬೦ರ ಸಮಯ ” ಅಳಿಯ ರಾಮರಾಯ” ಮತ್ತು ಸದಾಶಿವರಾಯರು ಆಡಳಿತದಲ್ಲಿ ಕೆಲವು ಸಾಮಂತರು ದಂಗೆ ಎದ್ದು ಸ್ವತಂತ್ರರಾಗುವ ಪ್ರಯತ್ನ ಮಾಡುತ್ತಿದ್ದರೆ, ಸಾಮ್ರಾಜ್ಯದ ಸೈನ್ಯದಲ್ಲೇ ಮುಸಲ್ಮಾನರ ಮಸಲತ್ತು ನಡೆಯುತ್ತಿತ್ತು. ಹಂಪೆಯ ಹಾಲುಂಡ ಗಿಲಾನಿ ಸಹೋದರ ದಂಡನಾಯಕರು ರಾಜರ ವಿರುದ್ದವೇ ಹಾಲಾಹಲ ಕಕ್ಕುವ ಹುನ್ನಾರ ನಡೆಸುತ್ತಿದ್ದರು.

ಈ ಸನ್ನಿವೇಶದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನವ ಅತಂತ್ರ ಸ್ಥಿತಿಯಲ್ಲಿದ್ದಾಗಲೇ ಕೆಂಪೇಗೌಡರ ವಿರುಧ್ಧ ಚನ್ನಪಟ್ಟಣದ ಪಾಳೇಗಾರ ಜಗದೇವರಾಯ ದೂರುಕೊಟ್ಟರು. ಅದೇನೆಂದರೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರು ಪ್ರತ್ಯೇಕವಾಗಿ ನಾಣ್ಯಗಳ ಚಲಾವಣೆ ಮಾಡುತ್ತಿದ್ದಾರೆ, ವಿಜಯನಗರದ ಸಾಮಂತಿಕೆಯಿಂದ ದೂರಸರಿಯುತ್ತಿದ್ದಾರೆ ಎಂದು. ಸಾಮ್ರಾಜ್ಯದ ಅಧೀರತೆಯಿಂದ ಕನಲಿಹೋಗಿದ್ದ ರಾಜರು ಕೆಂಪೇಗೌಡರನ್ನು ರಾಜದ್ರೋಹದ ಆರೋಪದಡಿ ಬಂಧಿಸಿ ಅನೇಗುಂದಿಯ ಸೆರೆಮನೆಗೆ ಕಳುಹಿಸಿ ಬಿಡುತ್ತಾರೆ.

ಈ ಅತಂತ್ರ ಸ್ಥಿತಿಯಲ್ಲಿ ಬೆಂಗಳೂರನ್ನು ಹೊರಗಿನವರ ವಕ್ರದೃಷ್ಟಿಯಿಂದ ಉಳಿಸಲು ಅವರ ಮಕ್ಕಳು ಟೊಂಕಕಟ್ಟಿ ನಿಲ್ಲುತ್ತಾರೆ. ಇಮ್ಮಡಿ ಕೆಂಪೇಗೌಡರ ಮೊದಲ ಆದ್ಯತೆ ನಗರದ ಸುರಕ್ಷೆ. ಹಲಸೂರು, ಈಗಿನ ಲಾಲ್ಬಾಗ್, ಸದಾಶಿವನಗರ ಮತ್ತು ಕೆಂಪಾಂಬುಧಿ ಕೆರೆಯ ಬಳಿ ಎತ್ತರದ ಆಯಕಟ್ಟಿನ ಸ್ಥಳಗಳಲ್ಲಿ ವೀಕ್ಷಣಾಗೋಪುರಗಳನ್ನು ಕಟ್ಟಲಾಗುತ್ತದೆ.

ಫೋಟೋ ಕೃಪೆ : metrosaga

ತಿಗಳರ ಪೇಟೆಯ ಧರ್ಮರಾಮ ಸ್ವಾಮಿಯ ದೇವಸ್ಥಾನವನ್ನು ಕೇಂದ್ರ ಬಿಂದುವನ್ನಾಗಿಟ್ಟು ಕೊಂಡು ಸಮಾನಾಂತರದಲ್ಲಿ ಈ ವೀಕ್ಷಣಾಕೇಂದ್ರಗಳನ್ನು ಕಟ್ಟಲಾಗಿದೆ. ಬಸವನಗುಡಿಯ ಎತ್ತರದ ಬಂಡೆಯಿಂದ ಪ್ರತಿ ಸಂಜೆ ಕಹಳೆ ಊದಿ ‘ಎಲ್ಲಾ ಸರಿಯಾಗಿದೆ’ ಎನ್ನುವ ಸಂಕೇತದ ವ್ಯವಸ್ಥೆ ಮಾಡಲಾಗುತ್ತದೆ. ನಿಯಮಿತ ಸಮಯದ ಹೊರತಾಗಿ ಕಹಳೆ ಊದಿದರೆ ಶತ್ರುಗಳ ಸುಳಿವಿನ ಎಚ್ಚರಿಕೆ ! ಇದೇ ಈಗಿನ ‘ಬ್ಯೂಗಲ್ ರಾಕ್’.

ಹಿರಿಯ ಕೆಂಪೇಗೌಡರನ್ನು ಬಂಧಿಸಿ ತಾವು ಮಾಡಿದ ತಪ್ಪಿನ ಅರಿವಾಗಲು ವಿಜಯನಗರದ ಅರಸರಿಗೆ ಬರೋಬ್ಬರಿ ಐದು ವರ್ಷಗಳೇ ಹಿಡಿಯುತ್ತದೆ. ಬಿಡುಗಡೆಯಾದ ಕೆಂಪೇಗೌಡರು ಬೆಂಗಳೂರಿಗೆ ಮರಳುತ್ತಾರೆ. ಇನ್ನು ಮಕ್ಕಳದೇ, ಮೊಮ್ಮಕ್ಕಳದೇ ರಾಜ್ಯಭಾರ. ಅವರದ್ದೇನಿದ್ದರು ದೇವಸ್ಥಾನಗಳನ್ನು ಕಟ್ಟಿಸುವುದರಲ್ಲೇ ವಿಷೇಶ ಗಮನ.

ಆನೆಗುಂದಿ ಕಾರಾಗೃಹದಿಂದ ಸಮ್ಮಾನಪೂರ್ವಕ ಬಿಡುಗಡೆ ಆದ ನಂತರ ಕೆಂಪೇಗೌಡರು ಯಲಹಂಕ ತಲುಪಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರು. ಕಾರಾವಾಸದಲ್ಲಿ ಇದ್ದಾಗ ಹಲವು ದೇವರುಗಳಿಗೆ ಹರಕೆ ಹೊತ್ತಿದ್ದ ದೈವಭಕ್ತ ಗೌಡರಿಗೆ ಮರುದಿನ ಕಾಡುಮಲ್ಲೇಶ್ವರ (ಬೆಂಗಳೂರಿನ ಇಂದಿನ ಮಲ್ಲೇಶ್ವರ ಬಡಾವಣೆ) ದೇವಾಲಯವನ್ನು ಸಂದರ್ಶಿಸುವ ಮನಸ್ಸಾಯಿತು. ಅದು ಯಲಹಂಕದಿಂದ ಪೇಟೆಗೆ ಹೋಗುವ ದಾರಿಯ ಬಳಸು. ಕೂಡಲೇ ಒಬ್ಬ ದೂತ ಕಾಡುಮಲ್ಲೇಶ್ವರ ದೇವಾಲಯದ ಅರ್ಚಕರಿಗೆ ಈ ವಿಷಯ ತಲುಪಿಸಲು ಆ ರಾತ್ರಿಯೇ ಪ್ರಯಾಣ ಬೆಳೆಸಿದ. ಮುಂಜಾನೆಯ ವೇಳೆಗೆ ಆ ಆಸುಪಾಸಿನ ಗ್ರಾಮದ ಜನರಿಗೆ ಈ ಸುದ್ದಿ ತಲುಪಿತು.

ಫೋಟೋ ಕೃಪೆ : WhatsHOT

ಮುಂಜಾನೆ ಬೇಗನೆ ಪ್ರಯಾಣ ಆರಂಭಿಸಿದ ಕೆಂಪೇಗೌಡರು ಮಧ್ಯಾಹ್ನದ ಸುಮಾರಿಗೆ ಕಾಡುಮಲ್ಲೇಶ್ವರ ದೇವಾಲಯದ ಬಳಸು ಹಾದಿಗೆ ಬಂದರು (ಇಂದಿನ ಕಾವೇರಿ ಚಿತ್ರಮಂದಿರ). ಅಲ್ಲಿಂದ ಬಲಕ್ಕೆ ಒಂದು ಮೈಲಿ ಪ್ರಯಾಣ ಮಾಡುವಷ್ಟರಲ್ಲಿ ಅಲ್ಲಿ ಜನಸಾಗರವೇ ನೆರೆದಿತ್ತು! ಕೆಂಪೇಗೌಡರಿಗೆ ಜೈಕಾರ ಹಾಕುತ್ತಾ ಅವರನ್ನು ಸಮಸ್ತ ಮರ್ಯಾದೆಗಳಿಂದ ಕರೆದೊಯ್ದು ಒಂದು ಬೆಳ್ಳಿ ಫಲಕದ ಉಯ್ಯಾಲೆಯ ಮೇಲೆ ಕೂರಿಸಿ ಜೀಕಿ ಅವರಿಗೆ ಹಾಲಿನ ಅಭಿಷೇಕ ಮಾಡಿದರು. ಆನಂತರ ಆ ಇಡೀ ಜನಸ್ತೋಮದ ಜೊತೆಗೆ ಹೊರಟು ಕೆಂಪೇಗೌಡರು ಕಾಡುಮಲ್ಲೇಶ್ವರನ ದರ್ಶನ ಪಡೆದರು. ಕೆಂಪೇಗೌಡರನ್ನು ಉಯ್ಯಾಲೆ ಮೇಲೆ ಸಮ್ಮಾನಿಸಿದ ಸ್ಥಳ ನಂತರ “ಉಯ್ಯಾಲೆ ಕಾವಲು” ಎಂದು ಹೆಸರಾಗಿ, ನಂತರ ತಮಿಳರ ಬಾಯಲ್ಲಿ ವೈಯಾಲಿಕಾವಲ್ ಎಂದು ಅಪಭ್ರಂಶಗೊಂಡಿತು.

ಈ ಘಟನೆ ಇಂದಿಗೂ ರೋಮಾಂಚನ ಹುಟ್ಟಿಸುತ್ತದೆ. ಐದು ವರ್ಷ ಅಭೇದ್ಯ ಆನೆಗುಂದಿ ಜೈಲಿನಲ್ಲಿ ಕಳೆದು, ಜೀವಂತವಾಗಿ ಹೊರಬರುವ ಸಾಧ್ಯತೆಯನ್ನೂ ಕಾಣದಿದ್ದ ಕೆಂಪೇಗೌಡರನ್ನು ಅವರ ಪ್ರಜೆಗಳು ತಮಗೆ ದೊರೆತ ಕೆಲವೇ ಗಂಟೆಗಳ ಕಾಲಾವಧಿಯಲ್ಲಿ ಅಷ್ಟೊಂದು ತಯಾರಿ ನಡೆಸಿ ಸಮ್ಮಾನ ಮಾಡಿದರು ಎಂದರೆ ಕೆಂಪೇಗೌಡರು ಎಷ್ಟೊಂದು ಜನಾನುರಾಗಿ ಆಗಿಯಬೇಕು? ಆ ಐದು ವರ್ಷಗಳಲ್ಲಿ ಅವರ ಬಿಡುಗಡೆಗೆ ಅದೆಷ್ಟು ಜನ ಹರಕೆ ಹೊತ್ತರೋ ತಿಳಿಯದು. ಅಷ್ಟು ದೀರ್ಘಕಾಲ ಜನರಿಂದ ದೂರ ಇದ್ದರೂ, ಹಿಂದಿರುಗುವ ಸಾಧ್ಯತೆ ಕೂಡ ಮಸುಕಾಗಿ ಇದ್ದರೂ ಜನರಿಗೆ ಕೆಂಪೇಗೌಡರ ಮೇಲಿನ ವಿಶ್ವಾಸ, ಪ್ರೀತಿ ಚಿಕ್ಕಾಸು ಕೂಡ ಕಡಿಮೆ ಆಗಿರಲಿಲ್ಲ. ಪ್ರಜೆಗಳ ಶ್ರೇಯಸ್ಸಿಗೆ ಶ್ರಮಿಸುವ ನಾಯಕ ಹೇಗಿರಬೇಕು ಎಂಬುದಕ್ಕೆ ಕೆಂಪೇಗೌಡರು ಸಾಕ್ಷಿಯಾದರೆ, ಅಂತಹ ನಾಯಕರನ್ನು ಹೇಗೆ ಜನ ನಡೆಸಿಕೊಳ್ಳುತ್ತಾರೆ ಎಂಬುದನ್ನು ಪ್ರಜೆಗಳು ತೋರಿದರು.

೧೫೬೯ ಇಸವಿಯಲ್ಲಿ ಹಿರಿಯ ಕೆಂಪೇಗೌಡರು ಕುಣಿಗಲ್ಲಿನಿಂದ ಹಿಂತಿರುಗುವಾಗ ಮಾಗಡಿಯ ಸಮೀಪದ ಕೆಂಪಾಪುರದಲ್ಲಿಆಕಸ್ಮಿಕವಾಗಿ ಮರಣ ಹೊಂದುತ್ತಾರೆ. ಇತಿಹಾಸದ ಅಸ್ಪಷ್ಟ ಪುಟಗಳಲ್ಲಿ ಆಕಸ್ಮಿಕ ನಗರದ ಸೃಷ್ಟಿಕರ್ತರು ಕರಗಿಹೋಗುತ್ತಾರೆ.

ಫೋಟೋ ಕೃಪೆ : Twitter

ಅನಾಥವಾಯಿತೇ ಬೆಂಗಳೂರು

ಕೆಂಪೇಗೌಡರ ಮೂರು ತಲೆಮಾರುಗಳು ಒಂದು ನೂರು ಒಂದು ವರ್ಷಗಳ ಸುದೀರ್ಘ ಅವಧಿಯಲ್ಲಿ ಕಟ್ಟಿ ಬೆಳಸಿದ ನಗರಕ್ಕೆ ಆ ವಂಶದ ಋಣ ತೀರಿತ್ತು ಅಂತಾ ಕಾಣುತ್ತೆ.

ಈ ನಗರದ ಸಿರಿ ಸಂಪತ್ತು, ತುಂಬಿ ಬೀಗುತ್ತಿದ್ದ ಜಲನೆಲೆಗಳು, ಧಾರ್ಮಿಕ ಉತ್ಸವಗಳು, ತಂಪಾದ ಹವಾಮಾನ, ಸುಭೀಕ್ಷ ವಾತಾವರಣದ ಸುದ್ದಿಗಳು ವಿಜಯನಗರ ಸಾಮ್ರಾಜ್ಯದೆಲ್ಲೆಡೆ ಹರಡತೊಡಗಿದವು. ವ್ಯಾಪಾರವನ್ನು, ಉದ್ಯೋಗವನ್ನು, ನೆಲೆಯನ್ನು ಮತ್ತು ನೆಲವನ್ನು ಹುಡುಕಿಕೊಂಡು ಬಂದವರಿಗೆಲ್ಲಾ ಆಸರೆ ನೀಡಿತು ಈ ಬೆಂಗಳೂರು. ಹಿರಿಯ ಕೆಂಪೇಗೌಡರಿಂದ ಹಿಡಿದು ಮುಮ್ಮಡಿ ಕೆಂಪೇಗೌಡರವರೆಗೂ ಈ ನಾಡಪ್ರಭುಗಳಾಗಿ ಯಾವ ವೈಷಮ್ಯಗಳಿಲಿಲ್ಲದೆ, ರಕ್ತಪಾತವಿಲ್ಲದೆ ಬರೋಬ್ಬರಿ ಒಂದು ಶತಮಾನಗಳ ಕಾಲ (೧೫೩೭ -೧೬೩೮ ) ಈ ನಗರವನ್ನು ಅಭಿವೃದ್ಧಿಯ ರೂವಾರಿಗಳಾಗಿ ಆಳಿ ಬಾಳಿದರು. ಹದಿನಾರನೇ ಮತ್ತು ಹದಿನೇಳನೇ ಶತಮಾನದ ಸಮಯದಲ್ಲಿ ಇಂತಹ ಒಂದು ಶಾಂತಿಯುತ ನಾಡಾಗಿ ಮೆರೆಯತ್ತಿದ್ದ ಬಹುಶಃ ಏಕೈಕ ನಾಡಾಗಿರ ಬಹುದು. ಈ ಯಶೋಗಾಥೆಯ ಹಿನ್ನಲೆಯಲ್ಲಿ ವಿಜಯನಗರ ಸಾಮ್ರಾಜ್ಯದ ಅಚಲ ವಿಶ್ವಾಸ ಮತ್ತು ಸುರಕ್ಷಾಕವಚದ ಪ್ರಮುಖ ಪಾತ್ರವನ್ನು ಮರೆಯಲಾಗದು.

ಒಂದು ಕಡೆ ಬೆಂಗಳೂರಿನ ಅಭಿವೃದ್ಧಿ ಉತ್ತುಂಗಕ್ಕೇರುತ್ತಿದ್ದರೆ, ವಿಜಯನಗರ ಸಾಮ್ರಾಜ್ಯ ಅಭದ್ರತೆಯ ಗೂಡಾಯಿತು. ಒಂದು ಮಹಾ ಹಿಂದೂ ಸಾಮ್ರಾಜ್ಯವನ್ನು ಸರ್ವನಾಶ ಮಾಡುವ ಏಕಮೇವ ಉದ್ದೇಶದಿಂದ ಒಂದುಗೂಡಿ ಯುಧ್ಧಮಾಡಿದ ಮುಸ್ಲಿಮ ಸುಲ್ತಾನರು ವಿಜಯನಗರವನ್ನು ಧ್ವಂಸ ಮಾಡಿದ ಮೇಲೆ ತಮ್ಮ ತಮ್ಮ ಹಳೇ ಚಾಳಿಗಳಿಗೆ ಮರಳಿದರು. ಹಿಂಸೆ, ಧ್ವಂಸ, ಅನಾಚಾರ, ಪಿತೃದ್ರೋಹ, ಭ್ರಾತೃದ್ರೋಹ, ಲೂಟಿ ಪರರ ಸಂಪತ್ತಿನ ಮೇಲೆ ವಕ್ರದೃಷ್ಟಿ, ಇವೇ ಅವರ ನೈಸರ್ಗಿಕ ಸ್ವಭಾವ.

ಈ ಹಿನ್ನಲೆಯಲ್ಲಿ , ೧೬೩೮ ಬಿಜಾಪುರದ ಸುಲ್ತಾನನ ವಕೃದೃಷ್ಟಿ ಬೆಂಗಳೂರಿನ ಕಡೆ ಹರಿಯಿತು. ಅಲ್ಲಿಂದ ಶುರುವಾಯಿತು, ರಕ್ತಪಾತದ ಅಧ್ಯಾಯ. ಬಿಜಾಪುರದ ಸುಲ್ತಾನನ ಪರವಾಗಿ ಮುಮ್ಮಡಿ ಕೆಂಪೇಗೌಡರಿಂದ ಬೆಂಗಳೂರನ್ನು ವಶಪಡಿಸಿಕೊಂಡು ಬೆಂಗಳೂರನ್ನು ಜಾಗೀರಾಗಿ ಪಡೆದ ಮರಾಠಾ ಯೋಧ ಶಹಾಜಿ ಭೋಸ್ಲೆಯವರ ಅಧ್ಯಾಯ ಶುರುವಾಗುತ್ತದೆ. ಇದರ ಜೊತೆಗೇ ಪ್ರಾರಂಭವಾಗುತ್ತದೆ ಹೊರಗಿನವರ ಪ್ರವೇಶ, ಬೆಂಗಳೂರನ್ನು ಒಂದು ವ್ಯಾಪಾರದ ವಸ್ತುವಿನಂತೆ ಮಾರುವುದು, ಉಡುಗೊರೆಯಾಗಿ ಕೊಡುವುದು, ಸಂಧಾನದ ಸೂತ್ರದಂತೆ ಬಳಸಿಕೊಳ್ಳುವುದು.

ಮೂರು ತಲೆಮಾರಿನ ಕೆಂಪೇಗೌಡರು ಅಷ್ಟು ಅದಮ್ಯ ಪ್ರೀತಿಯಿಂದ ಹುಟ್ಟಿ ಬೆಳಸಿದ ಈ ನಗರ ನಮ್ಮ ಬೆಂಗಳೂರಿನ ಇತಿಹಾಸವಿದು.


  • ವಿಂಗ್ ಕಮಾಂಡರ್ ಸುದರ್ಶನ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW