ಕೆಂಪಿಯ ಮನೆಯ ಗೋಡೆಯಲ್ಲಿ ದುಡ್ಡು, ಚಿನ್ನದ ಚೂರುಗಳನ್ನು ಮಣ್ಣಿನೊಂದಿಗೆ ಕಲಸಿ ಗೋಡೆ ಕಟ್ಟಿದ್ದರಂತೆ. ದುಡ್ಡು ಬೇಕಾದಾಗ ಗುದ್ದಲಿಯಿಂದ ಗೋಡೆಯ ಬದಿಯನ್ನು ಕೆತ್ತಿ ಕೆತ್ತಿ ತೆಗೆಯುತ್ತಿದ್ದರಂತೆ. ನಾಣ್ಯಗಳು, ಚಿನ್ನದ ಚೂರುಗಳು ಪಟ ಪಟನೆ ಉದುರಿದಾಗ ನೀರಿನಿಂದ ತೊಳೆಯುತ್ತಿದ್ದರಂತೆ. ಈಗ ಅಂತಹ ಗೋಡೆಗಳಿದ್ದುದಕ್ಕೆ ಯಾವುದೇ ಕುರುಹುಗಳೂ ಉಳಿದಿಲ್ಲ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಭಾರತಿ ಮರವಂತೆ ಅವರ ರಚನೆಯ ಕೆಂಪಿಯ ಕತೆಯನ್ನು ತಪ್ಪದೆ ಮುಂದೆ ಓದಿ…
ಆಕೆ ಹೆಸರು ಕೆಂಪಿ ಇದೀಗ ಎಲ್ಲರ ಬಾಯಲ್ಲೂ ಕೆಂಪಮ್ಮ ಎಂದೇ ಬದಲಾಗಿದ್ದಾಳೆ. ಆಕೆಗೀಗ ಎಷ್ಟು ವರ್ಷ ಗೊತ್ತೇ? ಸುಮಾರು 55 ರಿಂದ 60 ವರ್ಷವಿರಬಹುದು, ಮುಖದಲ್ಲಿ ಅಲ್ಲಲ್ಲಿ ನೆರಿಗೆಗಳು ಕಾಣುತ್ತಿವೆ, ಕಣ್ಣುಗಳು ಕಳೆಗುಂದಿವೆ, ಮೈ ಬಣ್ಣವೂ ಕಂದು ಬಣ್ಣಕ್ಕೆ ತಿರುಗಿದೆ. ಚಿಕ್ಕವಳಿರುವಾಗ ಕೆಂಪು ಕೆನ್ನೆಗಳು, ಹೊಳೆವ ಕಣ್ಣುಗಳು, ಗೋಧಿ ಬಣ್ಣದ ದುಂಡಗಿನ ಮುದ್ದಾದ ಮುಖಕ್ಕೆ ಕೆಂಪಿ ಎಂದು ಹೆಸರಿಟ್ಟಿದ್ದರಂತೆ. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಆಟವಾಡಿಕೊಂಡಿದ್ದ ಏಳು ವರ್ಷದ ಕೆಂಪಿಗೆ ಮದುವೆ ಮಾಡಿದ್ದರಂತೆ. ಹಣೆ ಬರೆಹಕ್ಕೆ ಹೊಣೆ ಯಾರು ಎನ್ನುವಂತೆ ಕೆಂಪಿಗೆ ಹನ್ನೊಂದು ವರ್ಷವಿರುವಾಗಲೇ ಗಂಡ ಇಹಲೋಕ ತ್ಯಜಿಸಿದ್ದ. ಹೀಗಾಗಬಾರದಿತ್ತು ಹಣೆಯಲ್ಲಿ ಬರೆದದ್ದನ್ನು ಹರಿಹರನಿಗೂ ತಪ್ಪಿಸಲು ಸಾಧ್ಯವಿಲ್ಲ ಎಂದು ನನ್ನಮ್ಮ ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡಿದ್ದೆ. ನಾನು ಹೈಸ್ಕೂಲು ಓದುವಾಗ ಕೆಂಪಮ್ಮನ ಮನೆಯಿಂದಲೇ ಪ್ರತೀ ನಿತ್ಯ ಹಾಲು ತರುತ್ತಿದ್ದೆ. ಕೆಲವೊಮ್ಮೆ ಕೆಂಪಿ ಕಣ್ಣೀರುಡುತ್ತಿರುವುದನ್ನೂ ನಾನು ಕಂಡಿದ್ದೇನೆ, ಆಕೆಯ ಕಣ್ಣುಗಳು ಏನೋ ಹೇಳಲು ಪ್ರಯತ್ನಿಸುತ್ತಿದ್ದವು. ನುಣ್ಣಗಿನ ಬೋಳಾಗಿರುವ ತಲೆ, ಖಾಲಿ ಹಣೆ, ಕೆಂಪು ಸೀರೆ ಹೆಣ್ಣಿನ ಒಡಲ ಧ್ವನಿಯನ್ನು ಹೇಳುವಂತಿತ್ತು. ಅತೀ ಹತ್ತಿರದಲ್ಲಿಯೇ ಆಕೆಯನ್ನು ನೋಡಿದ ನನಗೆ ಸಾವಿರ ಯಕ್ಷಪ್ರಶ್ನೆಗಳಿದ್ದವು.
ಕೆಂಪಿ ನಿತ್ಯ ಉಡುತ್ತಿದ್ದ ಕೆಂಪು ಸೀರೆ ಬಗ್ಗೆ ನನಗೆ ಕುತೂಹಲ. ಮದುವೆ-ಮುಂಜಿ-ದೇವಸ್ಥಾನಕ್ಕೆಲ್ಲಾ ಹೋಗುವಾಗ ಈಕೆ ಬಣ್ಣದ ಸೀರೆ ಉಡಬಾರದೇ ಎಂದುಕೊಳ್ಳುತ್ತಿದ್ದೆ. ಒಂದೇ ಸೀರೆಯನ್ನು ನೆರಿಗೆ ಮಾಡಿ ಉಟ್ಟು, ಸೆರಗನ್ನೇ ತಲೆಗೆ ಸುತ್ತಿಕೊಂಡು ಎದೆಗೆ ಮುಚ್ಚಿಕೊಳ್ಳುತ್ತಿದ್ದಳು. ಲಂಗ-ರವಕೆ ಧರಿಸದಿರುವುದು ನನಗೆ ವಿಚಿತ್ರವೆನಿಸುತ್ತಿತ್ತು. ಹೆಣ್ಣಿನ ಮುಟ್ಟಿನ ನೋವಿನಲ್ಲಿ ಒಸರುವ ಕೆಂಪು ಕಣ್ಣೀರಿನಂತೆ ಗಾಢ ಕೆಂಪಿನ ಸೀರೆ-ಸೆರಗು-ನೆರಿಗೆಗಳಲ್ಲಿ ನೋವುಗಳು ಒಳಗೊಳಗೇ ಚುಚ್ಚುತ್ತಾ ಬೆಚ್ಚಗಿವೆ. ಹತ್ತಿಯ ನೂಲಿನಲ್ಲಿ ಎಳೆಯಾಗಿ ನೇಯ್ದ ಸೀರೆಯಲ್ಲಿ ಕಹಿ ಘಟನೆಗಳ ಸುರುಳಿಗಳು ನಿತ್ಯ ಎಚ್ಚರಗೊಳಿಸುತ್ತಿವೆ. ಈಗಿನ ರೂಪವೇ ಆಕೆಗೆ ಅತೀ ಕೆಟ್ಟ ಘಳಿಗೆಗಳನ್ನು ಮತ್ತೆ ಮತ್ತೆ ನೆನಪಿಸುತ್ತಿವೆ.
ಅದೊಂದು ದಿನ ಕೆಂಪಿ ಮೆಟ್ ಕತ್ತಿ ಮೇಲೆ ಕುಳಿತು ಕಾಲು ಕೆಳಗಿಟ್ಟು ಅಡಿಕೆ ಸಿಪ್ಪೆ ಸುಲಿಯುತ್ತಿದ್ದಳು. ಕೆಲಸದ ವೇಗದ ಚಾಣಾಕ್ಷತನಕ್ಕೆ ಸಿಪ್ಪೆ ತೆಗೆದ ಅಡಿಕೆಗಳು ಪಟಪಟನೆ ಕುಕ್ಕೆಗೆ ಬೀಳುತ್ತಿವೆ, ಬೀಸಿದ ರಭಸಕ್ಕೆ ಅಡಿಕೆಯೊಂದು ನೆಲಕ್ಕೆ ಬಿತ್ತು. ಥಟ್ಟನೆ ಎಚ್ಚರಗೊಳ್ಳುವಾಗ ಬೆರಳು ಕತ್ತಿಗೆ ತಾಗಿ ರಕ್ತ ಸೋರಿತು. ಗಾಯಕ್ಕೆ ಅರಶಿನ ಪುಡಿ ಉದುರಿಸಿ ತುಂಡು ಬಟ್ಟೆ ಸುತ್ತಿಕೊಂಡಳು. ಕೆಲಸ ಮಾಡುವಾಗ ಹಾಳಾದ್ದೆಲ್ಲಾ ನೆನಪಿಗೆ ಬಂದರೆ ಹೀಗೇ ಆಗೋದು ಎಂದು ಗೊಣಗುತ್ತಾ ತನ್ನನ್ನೇ ಬೈದುಕೊಂಡಳು. ಸುಳಿಯುವ ಯೋಚನೆಗಳಿಗೆ ಕಡಿವಾಣ ಹಾಕುವವರ್ಯಾರು ಹೇಳಿ? ಆ ದಿನ ಕುತ್ತಿಗೆಯಲ್ಲಿದ್ದ ಕರಿಮಣಿ ಮತ್ತು ತಾಳಿ ತೆಗೆಯಲು ಹೇಳಿದರೆ ಕೆಂಪಿ ತೆಗೆದಿರಲಿಲ್ಲವಂತೆ, ಆಕೆಯ ಎಳೆಯ ಕೈಗಳನ್ನು ಬಿಗಿಯಾಗಿ ಹಿಡಿದು ಸರ ಕಿತ್ತಾಗ ಕಪ್ಪು ಮಣಿಗಳು ನೆಲಕ್ಕೆ ಚದುರಿದ್ದು ನೆನಪಾಯ್ತು. ಕಾಲ್ಗಳಲ್ಲಿ ಘಲ್ ಎನ್ನುತ್ತಿದ್ದ ಗೆಜ್ಜೆಗಳನ್ನೂ ಎಳೆದಾಗ ಚಟೀಲ್ ಸದ್ದು ಕಿವಿಯಲ್ಲಿ ಮೊಳಗುತ್ತಿವೆ. ಮಣ್ಣಿನ ಬಳೆಗಳನ್ನು ಠಣ್ ಎಂದು ಒಡೆದದ್ದು ನೆನೆದು ನಡುಗಿದಳು. ಬೆಂಡೋಲೆ, ಮೂಗುತಿ, ತನ್ನ ಕೈಗಳಿಂದಲೇ ತೆಗೆಸಿದಾಗ ಕೆಂಪಿ ಸತ್ತು ಬದುಕಿದ್ದಳು. ಹಣೆಯ ಕುಂಕುಮವನ್ನು ಚಕ್ಕನೆ ಅಳಿಸಿ ಮುಡಿದ ಕೆಂಪು ಅಬ್ಬಲಿಗೆ ಹೂವನ್ನು ತನ್ನ ಕೈಯಿಂದಲೇ ಹೊಸಕಿ ಹಾಕಿದಾಗ ಗಡ ಗಡನೆ ನಡುಗಿದ್ದಳು ಕೆಂಪಿ. ಉದ್ದನೆಯ ತಲೆಕೂದಲು ನುಣ್ಣಗೆ ಬೋಳಿಸಿದಾಗ ನೆಲದಲ್ಲಿ ಕೂದಲುಗಳ ರಾಶಿಯೇ ಛಿದ್ರವಾಗಿ ಹರಡಿದ್ದು ನೋಡಿ ಕಣ್ಣುಮುಚ್ಚಿಕೊಂಡಿದ್ದಳು. ಹನ್ನೊಂದು ವರ್ಷದ ಕೆಂಪಿ ತನ್ನ ನುಣ್ಣಗಿನ ಬೋಳು ತಲೆಯನ್ನು ಅಂಗೈಯಿಂದ ಸವರಿಕೊಂಡಳು, ಭಯವಾಯ್ತು, ಅಂದಿನಿಂದ ಕನ್ನಡಿ ನೋಡುವುದೇ ಬಿಟ್ಟಿದ್ದಾಳೆ. ಕಣ್ಣೀರು ಒರೆಸಿಕೊಳ್ಳುತ್ತಾ ತನ್ನನ್ನೇ ಶಪಿಸಿಕೊಂಡಳು.ಸೀರೆ ಮೇಲೆ ಬಿದ್ದ ಕಣ್ಣೀರಿನಿಂದಲೇ ಬಟ್ಟೆ ಒದ್ದೆಯಾಗುತ್ತಿದೆ. ಮೂಗಿನಿಂದ ಇಳಿಯುತ್ತಿರುವ ಸಿಂಬಳ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದಾಳೆ. ಕಹಿ ನೆನಪುಗಳಿಂದ ಹರಿದ ಕಣ್ಣೀರನ್ನು ಕೆಂಪು ಸೀರೆ ಹೀರಿಕೊಳ್ಳುತ್ತಿದೆ. ಅತ್ತೂ ಅತ್ತೂ ಕಣ್ಣುಗಳು ಊದಿಕೊಂಡು ದಣಿದಂತೆ ಕೆಂಪಮ್ಮ ಕಾಣುತ್ತಿದ್ದಾಳೆ.
ಅನಂತರದಲ್ಲಿ ಕೆಂಪಮ್ಮನ ಮನೆಯ ಜವಾಬ್ದಾರಿಗಳೆಲ್ಲವೂ ಅದಲು ಬದಲಾಗಿವೆ. ಮನೆಯ ಹೊರ ಕೆಲಸಗಳನ್ನು ಗಂಡನ ತಮ್ಮಂದಿರು ನೋಡಿಕೊಂಡರೆ ಮನೆಯೊಳಗೆ ಅವರವರ ಹೆಂಡತಿಯರಿದ್ದಾರೆ. ಯಜಮಾನ್ತಿಯ ಕೆಲಸಗಳು, ಓಡಾಟ, ಮನೆಗೆ ಬರುವವರ ಆತಿಥ್ಯ ಯಾವುದಕ್ಕೂ ಕೆಂಪಿ ಮೂಗು ತೂರಿಸುವಂತಿಲ್ಲ. ದನಗಳನ್ನು ಮೇವಿಗೆ ಬಿಡುವುದು, ಹಾಲು ಕರೆಯುವುದು, ಸೊಪ್ಪು, ಹುಲ್ಲು, ಸೌದೆ, ದರ್ಲೆ, ಕರ್ಡ ತರುವುದು, ಹಸುಗಳಿಗೆ ಕಲಗಚ್ಚ್ ಮಾಡುವುದು, ಸೆಗಣಿ ಬಾಚುವುದು, ಬಚ್ಚಲ ಒಲೆಗೆ ಬೆಂಕಿ ಹೊತ್ತಿಸುವುದು, ಅಂಗಳ ಗುಡಿಸಿ ಪಾತ್ರೆ ತೊಳೆಯುವುದು ಇತ್ಯಾದಿ ಕೆಂಪಿಯ ಈಗಿನ ಕೆಲಸಗಳು. ಇವರ ಎಕ್ರೆಗಟ್ಟಲೆ ತೋಟ, ಗದ್ದೆಗಳಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಕೊಕ್ಕೋ, ಕಬ್ಬು, ಬತ್ತ, ನೆಲಗಡಲೆ, ಉದ್ದು, ಹೆಸರು ಬೆಳೆಯುತ್ತಿದ್ದರು. ಬಂದ ಸಂಪಾದನೆಯನ್ನು ಗಂಡಸರು ಹಂಚಿಕೊಳ್ಳುತ್ತಿದ್ದರಂತೆ. ಈ ಕುಟುಂಬದಲ್ಲಿ ಕಮಲ ಎಂಬ ಹೆಸರಿನ ಪುಟ್ಟ ಹೆಣ್ಣು ಮಗುವಿದೆ. ಪ್ರೀತಿಯಿಂದ ಕಮಲೂ, ಕಮ್ಲೀ, ಕಮಲೀ ಎಂದೇ ಎಲ್ಲರೂ ಕರೆಯುತ್ತಿದ್ದರು. ಕೆಂಪಿಗೆ ಮಕ್ಕಳಿರಲಿಲ್ಲವಾದ್ದರಿಂದ ಕಮ್ಲಿಯನ್ನು ತನ್ನ ಹಡೆದ ಮಗುವಂತೆ ಮುದ್ದಿಸುತ್ತಿದ್ದಳು. ಕಮಲಿಗೂ ಕೆಂಪಮ್ಮ ಎಂದರೆ ತುಂಬಾ ಪ್ರೀತಿ. ಅಜ್ಜಿ ಬಳಿ ಹೋದರೆ ತಿಂಡಿ ಸಿಗುತ್ತದೆ, ಹೆಗಲ ಮೇಲೆ ಹೊತ್ತು ಸುತ್ತುತ್ತಾರೆ ಎಂಬ ಖುಷಿ. ಕೆಂಪಿಯಂತೂ ಬೆನ್ನ ಮೇಲೆ ಅಕ್ಕಿಮೂಟೆಯಂತೆ ಹೊತ್ತು ಸುತ್ತುವಾಗ, ಹೆಗಲ ಮೇಲೆ ಕೂರಿಸಿತೋಟದಲ್ಲಿ ತಿರುಗುವಾಗ ಎಲ್ಲವನ್ನೂ ಮರೆಯುತ್ತಿದ್ದಳು. ಕಣ್ಣಾಮುಚ್ಚಾಲೆ, ಟೋಪಿಯಾಟ, ಗುಡ್ನ ಆಡುತ್ತಾ ಕುಣಿಯುತ್ತಾ ಕೆಂಪಮ್ಮನೊಂದಿಗೇ ಇರುತ್ತಿದ್ದಳು. ಕಮ್ಲಿಗೆ ಚಾಕ್‍ಲೇಟ್ ತಿನ್ನಿಸುತ್ತಾ ಕೆರೆಯ ಬಳಿ ಹಕ್ಕಿಗಳನ್ನು ತೋರಿಸಲು ಹೋಗುತ್ತಿದ್ದಳು. ಕಮಲಿ ಹಠ ಮಾಡಿದಾಗ ಅಪ್ಪ ಅಮ್ಮನಿಂದ ಹುಣಸೇ ಕೋಲಿನ ಏಟೂ ಬೀಳುತ್ತಿತ್ತು. ಅಳುತ್ತಾ ಓಡಿ ಬಂದ ಕಮಲಿ ಅಜ್ಜಿಯ ಸೆರಗಲ್ಲಿ ಅಡಗಿಕೊಳ್ಳುತ್ತಿದ್ದಳು. ತನ್ನ ಕೆಲಸ ಮತ್ತು ಮಗುವಿನೊಂದಿಗಿನ ಸುತ್ತಾಟದಲ್ಲಿ ಸಮಯ ಕಳೆದು ತನ್ನ ಗೂಡು ಸೇರುತ್ತಿದ್ದಳು ಕೆಂಪಿ.
ಕೆಂಪಿ ಮದುವೆಯಾಗಿರುವ ಹಳೇ ಮನೆಯ ಬಗ್ಗೆ ನಿಮಗೆ ಹೇಳಲೇಬೇಕು. ದಪ್ಪನಾದ ಗೋಡೆಗಳ ಕೋಣೆಯೊಂದಿತ್ತಂತೆ. ದುಡ್ಡು ಚಿನ್ನದ ಚೂರುಗಳನ್ನು ಮಣ್ಣಿನೊಂದಿಗೆ ಕಲಸಿ ಮೆತ್ತಿ ಮೆತ್ತಿ ಗೋಡೆ ಕಟ್ಟಿದ್ದರಂತೆ. ಈ ಗೋಡೆಗಳನ್ನೇ ಅಣ್ಣತಮ್ಮಂದಿರು ಪಾಲು ಮಾಡಿಕೊಂಡಿದ್ದರಂತೆ. ದುಡ್ಡು ಬೇಕಾದಾಗ ಗುದ್ದಲಿಯಿಂದ ಗೋಡೆಯ ಬದಿಯನ್ನು ಕೆತ್ತಿ ಕೆತ್ತಿ ತೆಗೆಯುತ್ತಿದ್ದರಂತೆ. ನಾಣ್ಯಗಳು, ಚಿನ್ನದ ಚೂರುಗಳು ಪಟ ಪಟನೆ ಉದುರಿದಾಗ ನೀರಿನಿಂದ ತೊಳೆಯುತ್ತಿದ್ದರಂತೆ. ಈಗ ಅಂತಹ ಗೋಡೆಗಳಿದ್ದುದಕ್ಕೆ ಯಾವುದೇ ಕುರುಹುಗಳೂ ಉಳಿದಿಲ್ಲ. ಮನೆ ರಿಪೇರಿ ಮಾಡುವಾಗ ಗೋಡೆಗಳನ್ನು ರಾತ್ರೋ ರಾತ್ರಿ ಒಡೆದು ಅಣ್ಣತಮ್ಮಂದಿರು ಜಗಳವಾಡಿ ಹಂಚಿಕೊಂಡಿದ್ದರಂತೆ. ಸಿಗದಿದ್ದವರು ಗಲಾಟೆ ಮಾಡಿದ್ದರೆಂಬ ಸುದ್ಧಿಯೂ ಕೆಂಪಿಗೆ ಯಾರೋ ಹೇಳಿದ್ದರು. ಕೆಂಪಿಯ ಗಂಡನ ಪಾಲಿನ ನಾಣ್ಯಗಳು ತನಗೆ ದಕ್ಕದಿರುವುದು ತಿಳಿದು ಒಳಗೊಳಗೇ ಅತ್ತಿದ್ದಳು ಕೆಂಪಿ. ಈಗ ಹೊಸ ಮನೆ, ಗೋಡೆಗಳು, ಕಂಬಗಳು ಸಿದ್ಧಗೊಂಡಿದೆ. ತನ್ನ ಗಂಡ ಕೂಡಿಟ್ಟ ಒಂದಿಷ್ಟು ಚಿನ್ನ, ಪಾವಾಣೆ, ನಾಲ್ಕಾಣೆ, ಹತ್ತು ಪೈಸೆ, ಒಂದು ಪೈಸೆ ಆಪತ್ಕಾಲಕ್ಕೆಂದು ಇಟ್ಟುಕೊಂಡಿದ್ದಳು ಕೆಂಪಿ. ಪಕ್ಕದ ಮನೆಯ ಗಂಗಮ್ಮನೊಡನೆ ವ್ಯವಹಾರ ಕುದುರಿಸಿದ ಕೆಂಪಮ್ಮ ಚಿಲ್ಲರೆಗಳನ್ನೆಲ್ಲಾ ನೋಟಾಗಿ ಬದಲಾಯಿಸಿದ ಚತುರೆ. ಕೆಂಪಿ ದುಡ್ಡು ಚಿನ್ನವನ್ನು ಕೂಡಿಡುವ ರೀತಿಯೇ ವಿಭಿನ್ನ. ಹಿತ್ತಲಲ್ಲಿ ದಪ್ಪನಾಗಿ ಬೆಳೆದ ಬಿದಿರನ್ನು ತಂದು ನಯವಾಗಿ ಸಿಪ್ಪೆ ತೆಗೆದು ವಾಂಟೆಯೊಳಗೆ ತೂರಿಸಿ ತುಂಬಿಸುತ್ತಿದ್ದಳು. ಕೆಂಪಿಯ ಕೈಗೆ ಯಾರಾದರೂ ಪುಡಿಗಾಸು ಇಟ್ಟರೆ ಅದೂ ವಾಂಟೆಯೊಳಗೇ ಸೇರುತ್ತಿತ್ತು.
ಅದೊಂದು ದಿನ ನಿತ್ಯದ ದಿನಚರಿಯಂತೆ ಕೆಂಪಿ ತೆಂಗಿನ ಕಟ್ಟೆಯಲ್ಲಿ ರಾಶಿ ಬಿದ್ದಿದ್ದ ಪಾತ್ರೆ ತಿಕ್ಕುತ್ತಿದ್ದಳು. ಕೈಗಳು ಕೆಲಸ ಮಾಡುತ್ತಿದ್ದರೂ ಮರೆಯಲಾರದೇ ಪದೇ ಪದೇ ಕಾಡುವ ಕರಾಳ ಘಟನೆ ನೆನಪಾಗುತ್ತಿದೆ. ಅಮಾವಾಸ್ಯೆಯ ದಿನದಂದು ಕತ್ತಲಾಗುತ್ತಿದ್ದಂತೆ ಕೆಂಪಿ ಅಂಗಳಕ್ಕಿಳಿದೊಡನೆ ಆಕಾಶದಿಂದ ನಕ್ಷತ್ರ ಬೀಳುವುದನ್ನು ಕಂಡಿದ್ದಳಂತೆ, ತುಳಸೀಕಟ್ಟೆಗೆ ದೀಪ ಇಡುವಾಗ ಉದ್ದನೆಯ ಜಡೆಗಳು ದೀಪಕ್ಕೆ ತಾಗಿ ಆರಿ ಹೋಗಿತ್ತು. ಬಲ ಕಣ್ಣಿನ ರೆಪ್ಪೆ ಜೋರಾಗಿ ಬಡಿಯತೊಡಗಿತ್ತು. ಚೋಟು ನಾಯಿಯಂತೂ ಸಾವಿನ ಮನೆಯಲ್ಲಿ ಕೂಗುವಂತೆ ಊಳಿಡುತ್ತಿತ್ತು. ಅಂದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಯದಿಂದಲೇ ಮನೆ ಒಳ ಹೊಕ್ಕು ಬಾಗಿಲು ಮುಚ್ಚಿಕೊಂಡಿದ್ದಳು ಕೆಂಪಿ. ರಾತ್ರಿ ಒಂಭತ್ತು ಗಂಟೆಯಾದರೂ ಕೆಲಸಕ್ಕೆ ಹೋದ ಗಂಡ
ಬಂದಿರಲಿಲ್ಲ. ಪಕ್ಕದ ಮನೆಯ ಗಂಗಮ್ಮನಲ್ಲಿ ಹೇಳಿಕೊಂಡಾಗ ಬಸ್ ಬರುವುದು ತಡವಾಗಿರಬಹುದು ಎಂಬ ಉತ್ತರಕ್ಕೆ ಕೆಂಪಿಯೂ ತಲೆ ಅಲ್ಲಾಡಿಸಿದ್ದಳು. ರಾತ್ರಿ ಹತ್ತು, ಹನ್ನೊಂದು ಹನ್ನೆರಡೆಂದು ಗಡಿಯಾರ ಬಡಿದುಕೊಂಡರೂ ಗಂಡ ಬರಲಿಲ್ಲ. ಕಾಯುತ್ತಾ ಕುಳಿತ ಕೆಂಪಿ ಊಟವೂ ಮಾಡದೇ ಭಯದಿಂದಲೇ ತೂಕಡಿಸುತ್ತಾ ನಿದ್ರೆಗೆ ಜಾರಿದ್ದಳು. ಮಾರನೇ ದಿನ ಕೋಳಿ ಕೂಗುವ ಮೊದಲೇ ಬೆಳಿಗ್ಗೆ 4.00ಗಂಟೆಗೆ ಬಾಗಿಲು ತಟ್ಟಿದ ಶಬ್ದ ಕೇಳಿಸಿತ್ತು. ಗಂಡನೇ ಬಂದರೆಂದು ಖುಷಿಯಲ್ಲಿ ಓಡಿ ಬಂದ ಕೆಂಪಿ ಬಾಗಿಲು ತೆರೆದಾಗ ಪಕ್ಕದ ಮನೆಯ ಥಾಮ್ಡಿ ನಡುಗುತ್ತಾ ಅಂಗಳದ ಸೋರಲಲ್ಲಿ ನಿಂತಿದ್ದ. ಕೆಂಪಕ್ಕ ತೋಟದ ಮರಗಳಿಗೆ ನೀರು ಬಿಡಲು ಬೇಗನೆ ಬಂದಿದ್ದೆ. ದಾರಿಯಲ್ಲಿ ಅದೇನೋ ಆದಂತಿದೆ ದೊಡ್ಡ ಬ್ಯಾಟರಿ ಕೊಡಿಯಕ್ಕ ಎನ್ನುವಾಗಲೇ ಥಾಮ್ಡಿಯ ಧ್ವನಿಯಲ್ಲಿ ಏರಿಳಿತವನ್ನು ಕೆಂಪಿ ಗುರುತಿಸಿದ್ದಳು. ಬಡಬಡನೆ ಲಾಟಾನು ಹೊತ್ತಿಸಿದ ಕೆಂಪಿನಾನೂ ಬರ್ತೇನೆ ಥಾಮ್ಡಿ ಎಂದು ಬ್ಯಾಟ್ರಿ ಹಿಡಿದು ಇಬ್ಬರೂ ತೋಟಕ್ಕೆ ಹೋದರು. ಚೋಟು ನಾಯಿಯೂ ಬಾಲ ಅಲ್ಲಾಡಿಸುತ್ತಾ ಹಿಂಬಾಲಿಸಿತು. ನೂರಾರು ತೆಂಗಿನ ಮರಗಳಿರುವ ತೋಟದ ಮಧ್ಯೆ ಕಾಯಿ ಕೂಡಿಡಲು ಪುಟ್ಟ ಕೋಣೆಯ ಶೆಡ್ ಇದೆ, ಬಲ್ಪ್ ಹಾಳಾಗಿದ್ದರಿಂದ ಕಗ್ಗತ್ತಲಿನಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಪಕ್ಕದಲ್ಲಿ ವರ್ಷವಿಡೀ ನೀರಿರುವ ಆಳವಾದ ಬಾವಿಯಿದೆ, ಅಲ್ಲೇ ಕೈ ಚೀಲದಲ್ಲಿ ದಿನಸಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಲಕೋಟೆಯ ಸಕ್ಕರೆ ನೆಲಕ್ಕೆ ಚೆಲ್ಲಿ ಇರುವೆಗಳು ಮುತ್ತಿದ್ದವು. ಬಿಸ್ಕಿಟ್ ಪ್ಯಾಕ್, ಅಕ್ಕಿ ಕಾಳುಗಳು ನೆಲದಲ್ಲಿ ಹರಡಿತ್ತು. ಸೇಡಿಮಣ್ಣಿನ ರಾಶಿಯೇ ದಂಡೆಯಾಗಿರುವ ಬಾವಿಯದು. ದಂಡೆ ಮೇಲೆ ಯಾರದ್ದೋ ಹೆಜ್ಜೆ ಗುರುತುಗಳಿದ್ದವು. ಒಂದೆರಡು ತೆಂಗಿನಕಾಯಿಗಳೂ ಬಿದ್ದಿದ್ದವು. ಬಹುಶ; ರಾತ್ರಿ ಯಾರೋ ನಡೆದು ಬರುವಾಗ ದಾರಿಯಲ್ಲಿರುವ ಕಾಯಿಗಳನ್ನು ಹೆಕ್ಕಲು ಬಂದಿದ್ದಾರೆ. ಕಗ್ಗತ್ತಲಲ್ಲಿ ಸೇಡಿ ಮಣ್ಣಿನ ದಂಡೆ ಮೇಲೆ ಕಾಲಿಟ್ಟಾಗ ಮಣ್ಣು ಕುಸಿದಿದೆ ಎನ್ನುತ್ತಿರುವಾಗಲೇ ಚೋಟು ನಾಯಿ ಬಾವಿಯತ್ತ ಮುಖ ಮಾಡಿ ಬೌ ಬೌ ಎಂದಿತು. ಕೆಂಪಿಗೆ ಎದೆ ಬಡಿತ ಹೆಚ್ಚಾಗಿ ನಡುಗತೊಡಗಿದಳು. ಅಕ್ಕ ಮನೆಗ್ಹೋಗಿ ನಿಮ್ ಯಜಮಾನರನ್ನು ಕರೀರಿ ಏನಾಗಿದೆ ಅಂತ ನೋಡೋಣ ನನಗೂ ಭಯವಾಗುತ್ತಿದೆ ಎಂದ ಥಾಮ್ಡಿ. ನಿನ್ನೆ ರಾತ್ರಿ ಕೆಲಸಕ್ಕೆ ಹೋದವರು ಬಂದಿಲ್ಲ ಮನೆಯಲ್ಲಿ ಯಾರೂ ಇಲ್ಲ ಥಾಮ್ಡೀ ಎಂದಾಗ ಥಾಮ್ಡಿಯ ಎದೆ ಧಸಕ್ಕೆಂದಿತು. ಅಕ್ಕಾ ಯಾವುದಕ್ಕೂ ಅವಸರಿಸಬೇಡಿ, ಧೈರ್ಯವಾಗಿರಿ ಎನ್ನುತ್ತಾ ಲಾಟಾನಿನ ಬೆಳಕಿನಲ್ಲಿ ಸೇಡಿ ಕುಸಿದಿರುವಲ್ಲಿಯೇ ಬಾಟ್ರಿ ಹಿಡಿದು ಬಾವಿಯೆಡೆಗೆ ನೋಡಿದ. ಮಣ್ಣು ಕುಸಿಯುತ್ತಿದೆ ಥಾಮ್ಡೀ ಬೀಳಬೇಡ ಎಂದಳು ಕೆಂಪಿ. ಅಕ್ಕಾ ಹೆದರಬೇಡಿ, ಎನ್ನುತ್ತಾ ಬಾವಿಯೆಡೆಗೆ ತಲೆ ಬಗ್ಗಿಸಿದ. ಕೆಂಪಿ ಕಣ್ಣು ಮುಚ್ಚಿ ಬೆವರುತ್ತಿದ್ದಳು. ಯಾರೋ ಬಾವಿಯೊಳಗೆ ಬಿದ್ದಿರುವುದು ಥಾಮ್ಡಿಗೆ ಕಂಡಿತು. ಧಡಕ್ಕನೆ ಹಿಂದಕ್ಕೆ ಹಾರಿದ ಥಾಮ್ಡಿ ಅಕ್ಕಾ . . . ಎಂದು ಕಿರುಚಿದ. ಕೆಂಪಿ ಬೊಬ್ಬೆ ಹಾಕಿದಳು. ಚೋಟು ನಾಯಿ ಜೋರಾಗಿ ಊಳಿಡತೊಡಗಿತು, ಓಣಿಯಲ್ಲಿದ್ದ ನಾಯಿಗಳೆಲ್ಲವೂ ಓಡಿ ಬಂದು ಬಾವಿ ಕಡೆಗೆ ಮುಖ ಮಾಡಿ ಕೂಗುತ್ತಾ ಎಲ್ಲರನ್ನೂ ಕರೆದವು. ಅಕ್ಕಪಕ್ಕದವರೆಲ್ಲರೂ ಓಡಿ ಬಂದರು. ಬಾವಿ ನೀರಲ್ಲಿ ಕೆಂಪಿಯ ಗಂಡನ ದೇಹ ನಿಶ್ಯಬ್ಧವಾಗಿ ತೇಲುತ್ತಿತ್ತು. ಕ್ಷಣಗಳಿಗೆಯಲ್ಲಿ
ಕೆಂಪಿಯ ಇಡೀ ಬದುಕು ಮುಗಿದೇ ಹೋದ ದಿನವದು. ಎನ್ ಕೆಂಪೀ ಇನ್ನೂ ಪಾತ್ರೆ ತಿಕ್ಕಿ ಆಗಿಲ್ವಾ? ಎಂಬ ಒರಟು ಧ್ವನಿಗೆ ಕೆಂಪಿ ಎಚ್ಚರಗೊಂಡಳು. ಇನ್ನೇನು ಎಲ್ಲಾ ಮುಗಿದೇ ಹೋಯ್ತಕ್ಕ ಎಂದ ಕೆಂಪಿ ತೊಳೆದ ಪಾತ್ರೆಗಳನ್ನು ದಬದಬನೆ ಬುಟ್ಟಿಗೆ ಹಾಕಿ ತನ್ನ ಗೂಡು ಸೇರಿದಳು.
ಕೆಂಪಮ್ಮನಿಗೀಗ ಬದುಕೇ ಬೇಡವಾಗಿದೆ, ಪ್ರತಿಯೊಬ್ಬರ ವ್ಯಂಗ್ಯದ ಮಾತುಗಳು ನಿತ್ಯವೂ ಚುಚ್ಚುತ್ತಿವೆ. ಅಂದು ಕೆಂಪಿ ಗುಡ್ಡೆಯಲ್ಲಿ ಹಸು ಮೇಯಿಸುವಾಗ ಬೆಳ್ಳಿ ಕರು ತಪ್ಪಿಸಿಕೊಂಡು ಕಾಡಿಗೆ ಹೋಗಿತ್ತು. ಮನೆಯಲ್ಲಿ ಬೈದಾರೆಂದೇ ಹೆದರಿದ ಕೆಂಪಿ ಬೆಳ್ಳಿಯನ್ನು ಹುಡುಕುತ್ತಾ ತನಗರಿವಿಲ್ಲದೇ ಕಾಡು ಸೇರಿದ್ದಳು. ಅಲ್ಲಿ ಯುವಕರ ಗುಂಪೊಂದು ಇಸ್ಪೀಟ್ ಆಡುತ್ತಾ ಕುಡಿದ ಮತ್ತಿನಲ್ಲಿದ್ದರು. ಕೆಂಪಿಯನ್ನು ಕಂಡೊಡನೆ ಯುವಕನೊಬ್ಬ ಓಡಿ ಬಂದು ಲಂಗ ರವಕೆ ಧರಿಸದ ಕೆಂಪಿಯ ಎದೆ & ಇಡೀ ದೇಹವನ್ನು ಕಣ್ಣು ಕೆಕ್ಕರಿಸಿ ನೋಡತೊಡಗಿದ. ಮೈಮೇಲೆ ಎರಗುವಷ್ಟರಲ್ಲಿ ಕೆಂಪಿ ನಡುಗುತ್ತಾ ಜೋರಾಗಿ ಬೊಬ್ಬಿಟ್ಟಳು. ಅಯ್ಯೋ ಅಮ್ಮಾ ದಮ್ಮಯ್ಯ ನನ್ನನ್ನು ಬಿಟ್ಟು ಬಿಡಿ ಎಂದು ಕಿರುಚುತ್ತಾ ಓಡತೊಡಗಿದಳು. ಉಟ್ಟ ಸೀರೆಯನ್ನು ಮುದ್ದೆ ಮಾಡಿಕೊಂಡು ಬೀಳುತ್ತಾ ಏಳುತ್ತಾ ಓಡಿದಳು. ಕೆಂಪಿಯ ಕಿರುಚಾಟ ಕೇಳಿ ಅಲ್ಲೇ ಮೇಯುತ್ತಿದ್ದ ಎತ್ತು(ಗೂಳಿ) ಕೆಂಪಿಯತ್ತ ದುರುಗುಟ್ಟುತ್ತಾ ಓಡಿ ಬಂತು. ಎತ್ತನ್ನು ನೋಡಿ ಹೆದರಿದ ಯುವಕ ಪೊದೆಯಲ್ಲಿ ಮರೆಯಾದ. ಕೆಂಪಿಯಂತೂ ಓಡಿ ಓಡಿ ಸುಸ್ತಾಗಿ ಗದ್ದೆ ಅಂಚಿಗೆ(ದಂಡೆ) ಕಾಲಿಟ್ಟು ಮಣ್ಣು ಕುಸಿದು ಕಾಲು ಕೆಳಕ್ಕೆ ಹೋಯಿತು. ಕೆಸರ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ಎತ್ತು ದರೆಯ ಮೇಲೆ ನಿಂತು ದುರುದುರನೆ ನೋಡಿ ವಾಪಾಸ್ಸಾಯಿತು. ಅಂತೂ ಇಂತೂ ಕೆಂಪಿ ಮನೆ ಸೇರಿದಳು. ಅಕ್ಕಪಕ್ಕದವರಲ್ಲಿ ಅಳುತ್ತಾ ಹೇಳಿಕೊಂಡಾಗ ಕಾಡಿಗೆ ಯಾಕ್ ಹೋದೆ? ಕೆಂಪು ಸೀರೆ ಉಟ್ಟುಕೊಂಡಿದ್ದೀ ಅಲ್ವಾ? ಎತ್ತು, ಕೋಣಗಳಿಗೆ ಕೆಂಪು ಸೀರೆ ನೋಡಿದರೆ ಅಟ್ಟಿಸಿಕೊಂಡೇ ಬರುತ್ತ ಎಂದರು.
ಕೆಂಪಿಗೆ ಕಮಲಿಯೊಂದಿಗಿರುವಾಗ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ. ಆಕೆಯೊಂದಿಗೆ ಸಮಯ ಕಳೆಯುತ್ತಾ ನೋವು ನುಂಗಿಕೊಳ್ಳುತ್ತಿದ್ದಳು. ಹೈಸ್ಕೂಲು ಸೇರಿದಂತೆÀ ಕಮಲಿಗೆ ಅಜ್ಜಿ ಮೇಲಿನ ಪ್ರೀತಿ ಕಡಿಮೆಯಾಗತೊಡಗಿತು. ಕೆಂಪಿಗಿದು ಸಹಿಸಲಾರದ ಊಹಿಸಲೂ ಆಗದ ನೋವು. ಕಮ್ಲಿ ಈಗ ಹದಿಹರೆಯದ ಯುವತಿಯಾಗಿ ಮೆಡಿಕಲ್ ಓದುತ್ತಿದ್ದಳು. ಕಾಲೇಜು ಸೇರಿದ ಬಳಿಕವಂತೂ ಅಜ್ಜಿ ಬಗ್ಗೆ ಕಮಲಿಗೆ ಅಸಡ್ಡೆ ತಿರಸ್ಕಾರ ಬರುಬರುತ್ತಾ ಜಾಸ್ತಿಯಾಗತೊಡಗಿತ್ತು. ಕೆಂಪಮ್ಮನಿಗೆ ಒಂಟಿತನ ದಿನವೂ ಹೆಚ್ಚಾಗತೊಡಗಿತು. ತನ್ನಿಂದ ಕಮ್ಲಿ ದೂರವಾಗುತ್ತಿದ್ದಾಳೆ ಎನ್ನುವುದೇ ಕೆಂಪಿಗೆ ಸಂಕಟ. ಅಜ್ಜಿಯ ರೂಪವೇ ಕಮಲಿಗೀಗ ಅಸಹ್ಯವೆನಿಸುತ್ತಿದೆ. ಅಜ್ಜೀ ನಿನ್ನ ಡ್ರೆಸ್ ಕೋಡ್ ಸರಿಯಿಲ್ವಲ್ಲ ಎಂದಾಗ ಕೆಂಪಿ ಒಳಗೊಳಗೇ ಅತ್ತಿದ್ದಳು. ಈಗಿನ ಕಾಲದಲ್ಲಿ ಜೀನ್ಸ್ ಪ್ಯಾಂಟ್ ಶರ್ಟ್ ಬಿಟ್ಟರೆ ಸೀರೆ ಉಡೋದೇ ಇಲ್ಲ ಅಜ್ಜಿ, ಈ ಕೆಂಪು ಸೀರೆ ಅಸಹ್ಯ, ನೀನು ಲಂಗ ರವಕೆ ಹಾಕ್ಕೋಳ್ಳೋಲ್ವಲ್ಲ ಯಾಕಜ್ಜೀ?ಎಂದು ಕಮಲಿ ಪ್ರಶ್ನಿಸುತ್ತಿದ್ದಳು.ಹಾಗೆಲ್ಲಾ ಅನ್ನಬಾರದು ಮಗಾ ಎನ್ನುವುದು ಕೆಂಪಮ್ಮನ ಉತ್ತರ. ಅಜ್ಜಿಗೆ ತಲೆ ಕೆಟ್ಟಿದೆ ಎಂದೇ ಕಮಲಿ ಗೊಣಗುತ್ತಿದ್ದಳು.
ಹೂವು ಮುಡಿದರೆ, ಕನ್ನಡ ಮಾತಾಡಿದರೆ, ಜಡೆ ಹಾಕಿದರೆ ಫೈನ್ ಕಟ್ಟಬೇಕು ಎನ್ನುವುದನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಳು. ಠಸ್ ಪುಸ್ ಇಂಗ್ಲೀಷ್‍ನಲ್ಲಿ ಕೆಂಪಿಗೆ ಬೈಯುತ್ತಿದ್ದಳು ಕಮಲಿ. ಕೆಂಪಿಗೆ ಇದೆಲ್ಲಾ ಅರ್ಥವಾಗದು. ಕೊಟ್ಟಿಗೆಯಲ್ಲಿರುವ ದನಗಳನ್ನು ನಾಯಿ ಬೆಕ್ಕುಗಳನ್ನು ನೋಡಿದರಂತೂ ಕಮಲಿ ಅಸಹ್ಯಡುತ್ತಿದ್ದಳು. ಬರು ಬರುತ್ತಾ ಅಜ್ಜಿಯ ಬಗ್ಗೆ ತಿರಸ್ಕಾರ ಇನ್ನೂ ಹೆಚ್ಚಾಗತೊಡಗಿತು. ದಿನಗಳೆದಂತೆ ಕೆಂಪಿ ಮತ್ತು ಕಮಲಿಯ ನಡುವೆ ಅಂತರ ಹೆಚ್ಚಾಯಿತು. ಕೆಂಪಜ್ಜಿಯ ನೆನಪೇ ಹೋಯ್ತೇನೋ ಎನ್ನುವಂತೆ ಕಮಲಿ ವರ್ತಿಸುತ್ತಿದ್ದಳು. ಕಮಲಿ ಕೆಂಪಜ್ಜಿಯ ನಡುವೆ ಮಾತುಕತೆಯೇ ಇಲ್ಲದಾಯಿತು. ತನ್ನ ಕಮ್ಲೀ ಡಾಕಟರ್ ಓದ್ತಾ ಇದ್ದಾಳೆ ಓದಲು ತುಂಬಾ ಇದೆಯಂತೆ ಆಕೆಗೆ ಮಾತಾಡಲು ಸಮಯವಿಲ್ಲ ಎನ್ನುವುದು ಕೆಂಪಿಯ ವಾದ. ಕಮಲಿಗೆ ಗುಣವಂತ ಹುಡುಗ ಸಿಗಬೇಕು, ತಾನು ಕಮಲಿಯ ಮದುವೆ ನೋಡಿ ಪ್ರಾಣ ಬಿಡಬೇಕು ಇದು ಕೆಂಪಿಯ ನಿತ್ಯ ಪ್ರಾರ್ಥನೆ.
ಕೆಂಪಮ್ಮನನ್ನು ಬಾಣಂತನದ ಚಾಕರಿಗೆ, ಅಕ್ಕಿ ರುಬ್ಬಲು, ತರಕಾರಿ ಹಚ್ಚಲು, ಮುಸುರೆ ತಿಕ್ಕಲು, ಉದ್ದು ನೆಲಗಡಲೆ ಕೀಳಲು, ಬತ್ತ ಕುಟ್ಟಲು ಅಕ್ಕಪಕ್ಕದವರು ಕರೆಯುತ್ತಿದ್ದರು. ಮದುವೆ ಮುಂಜಿಗೆ ಮಾತ್ರ ಈಕೆಯನ್ನು ಯಾರೂ ಕರೆಯುತ್ತಿರಲಿಲ್ಲ. ಮಗನಿಗೆ ಹುಡುಗಿ ನೋಡಲು ಹೊರಟ ಆಚೆ ಮನೆ ಹೆಂಗಸು ಅಂಗಳದಲ್ಲಿ ಕೆಂಪಮ್ಮನನ್ನು ನೋಡಿ ಸರ್ರನೆ ಒಳನಡೆದಳು. ಆ ಕೆಂಪಮ್ಮ ಬಂದ್ಲು, ಕೆಟ್ಟ ಶಕುನ, ಇಂದಿನ ಕೆಲಸ ಹಾಳಾಯ್ತು, ನಾಳೆ ಆಕೆ ಇದಿರು ಬಾರದಿರಲಿ ಎಂಬ ಮಾತು ಕೇಳಿದ ಕೆಂಪಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಸಿಟ್ಟಿನಿಂದ ಒಂದು ಕೆಂಪು ಸೀರೆಯನ್ನೇ ಧಗಧಗನೆ ಉರಿಯುತ್ತಿರುವ ಬಚ್ಚಲಿನ ಬೆಂಕಿಯ ಒಲೆಗೆ ಹಾಕಿ ಸುಟ್ಟುಬಿಟ್ಟಳು ಕೆಂಪಿ. ಈಕೆಯ ನೋವನ್ನು ಕೇಳುವವರ್ಯಾರು ಹೇಳಿ? ಮತ್ತೆ ಮಾರನೆಯ ದಿನ ಕೆಂಪು ಸೀರೆ ಈಕೆಯನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಎಷ್ಟು ಸೀರೆ ಸುಡ್ತೀಯಾ? ನಾನೇ ಬೇಕು ನಿಂಗೆ ಉಟ್ಟುಕೋ ಎಂದು ಕೆಣಕುತ್ತಿತ್ತು.
ಇತ್ತೀಚೆಗಂತೂ ದಿನಗಳನ್ನು ಕಳೆಯುವುದೇ ಕೆಂಪಮ್ಮನಿಗೆ ತುಂಬಾ ಕಷ್ಟವಾಗುತ್ತಿದೆ. ತನ್ನ ಏಕಾಂಗಿ ಬದುಕಲ್ಲಿ ಸೇರಿಕೊಂಡಿದ್ದ ಕಮಲಿ ಈಗ ಬದಲಾಗಿದ್ದಾಳೆ. ಗಂಡ ಬೇಗನೆ ತನ್ನನ್ನು ಬಿಟ್ಟು ಹೊರಟೇ ಹೋದರು, ಮನೆಯ ಸಂಪತ್ತು ಯಾರದ್ದೋ ಪಾಲಾಯಿತು, ಕಮಲಿಯ ಮದುವೆ ನೋಡಿ ಪ್ರಾಣ ಬಿಡಬೇಕು ಎಂದು ಯೋಚಿಸುತ್ತಿದ್ದಳು ಕೆಂಪಿ.
ಅದೊಂದು ದಿನ ಮನೆಯಲ್ಲಿ ಸಡಗರವೋ ಸಡಗರ. ಕಮಲಿ ಬಿಚ್ಚಿದ ತಲೆಕೂದಲಿನೊಂದಿಗೆ ಅಂಗಳಕ್ಕೆ ಬಂದಳು. ಆಕೆಯ ತಾಯಿ ತಂದೆ ಎಲ್ಲರಲ್ಲೂ ಸಂಭ್ರಮ. ಎಲ್ಲರೂ ಕಾರಿನಲ್ಲಿ ಕುಳಿತು ಸುಂಯ್ಯನೆ ಹೋದರು. ಕಮಲಿಗೆ ಅಮೇರಿಕಾದಲ್ಲೇ ಓದಿದ ಅಲ್ಲೇ ಕೆಲಸವೂ ಇರುವ ಹುಡುಗನೊಂದಿಗೆ ಪರಿಚಯ ಸ್ನೇಹವಾಗಿ ಪ್ರೀತಿ ಹುಟ್ಟಿ ಆತನೊಂದಿಗೇ ಮದುವೆಯಂತೆ. ಈಗ ಶಾಪಿಂಗ್ ಮಾಡಲು ಹೊರಗಡೆ ಹೋಗ್ತಾ ಇದ್ದಾರಂತೆ ಎಂದು ಮಾತಾಡಿಕೊಳ್ಳುತ್ತಿರುವುದನ್ನು ಕೆಂಪಿ ಕೇಳಿಸಿಕೊಂಡಳು. ತನ್ನ ಮದುವೆಯ ವಿಚಾರ ಕಮಲಿ ತನಗೆ ಹೇಳಲೇ ಇಲ್ಲವಲ್ಲ ಎನ್ನುವುದೇ ಕೆಂಪಿಗೆ ಸಹಿಸಲಾರದ ನೋವು. ಏನೇ ಇರಲಿ ಕಮಲಿಯ ಮದುವೆಯನ್ನು ಅತೀ ಹತ್ತಿರದಿಂದ ನೋಡಲೇಬೇಕು ಎಂದು ಕನಸು ಕಾಣುತ್ತಿದ್ದ ಕೆಂಪಿಗೆ ಆ ದಿನವೂ ಬಂತು. ಕೆಂಪು ಸೀರೆ ಉಟ್ಟುಕೊಂಡ ಕೆಂಪಮ್ಮ ಮಂಟಪದ ಇದಿರು ಕುಳಿತೇಬಿಟ್ಟಳು. ಯಾರ ಕಣ್ಣೂ ನನ್ನ ಕಮ್ಲೀಯ ಮೇಲೆ ಬೀಳದಿರಲೆಂದು ಕುಳಿತಲ್ಲೇ ದೃಷ್ಟಿ ತೆಗೆಯುತ್ತಿದ್ದಳು ಕೆಂಪಮ್ಮ. ಕಣ್ಣರಳಿಸಿ ನೋಡುತ್ತಾ ಕುಳಿತ ಕೆಂಪಮ್ಮ ಮೈಮರೆತಿದ್ದಳು. ಆಕೆಗೆ ತನ್ನ ಬಾಲ್ಯದ ಮದುವೆಯ ನೆನಪೂ ಬರತೊಡಗಿದವು. ಅಂದು ಮಂಠಪದಲ್ಲಿ ತಾನು ಸಿಂಗಾರಗೊಂಡು ನಿಂತ ಆ ಘಳಿಗೆ, ಗಂಡ ಪ್ರೀತಿಯಿಂದ ಕಟ್ಟಿದ ಕರಿಮಣಿ, ಹೂವಿನ ಹಾರ ಇವೆಲ್ಲವೂ ಕೆಂಪಿಗೆ ನೆನಪಾಗತೊಡಗಿದವು. ನೂರು ವರುಷ ಚೆನ್ನಾಗಿ ಬಾಳಿರಿ ಎಂದು ಎಲ್ಲರೂ ಅಕ್ಕಿಕಾಳು ಹಾಕಿ ಹರಸಿದ್ದು ನೆನೆದು ಕೆಂಪಮ್ಮನ ಕಣ್ಣಲ್ಲಿ ನೀರು ಹರಿಯತೊಡಗಿತು. ಅದ್ಯಾರೋ ಕೆಂಪಮ್ಮಾ ಎಂದು ಜೋರಾಗಿ ಕರೆದಾಗ ಎಚ್ಚರಗೊಂಡಳು. ಹತ್ತಿರದಲ್ಲಿ ಕುಳಿತವರೆಲ್ಲರೂ ಈಕೆಯನ್ನೇ ಕಣ್ಣು ಕೆಕ್ಕರಿಸಿ ನೊಡುತ್ತಿದ್ದಾರೆ, ಅದೇನೋ ಗುಸು ಗುಸು ಮಾತಾಡಿಕೊಳ್ಳುತ್ತಿದ್ದಾರೆ. ಕೆಂಪಿಯನ್ನು ಯಾರೋ ಹಿಂದೆ ಕಾಲಿನಿಂದ ನೂಕುತ್ತಿದ್ದಾರೆ. ಹಿಂತಿರುಗಿ ನೋಡುತ್ತಾಳೆ ಯಾರೂ ಇರಲಿಲ್ಲ. ತನಗೆ ಭ್ರಮೆ ಎಂದುಕೊಳ್ಳುತ್ತಾ ಕೆಂಪಿ ಅಲ್ಲಿಂದೆದ್ದು ಪಕ್ಕದಲ್ಲಿ ಕುಳಿತುಕೊಂಡಾಗ ಯಾರೋ ನಿಮ್ಮನ್ನು ಕರೆಯುತ್ತಿದ್ದಾರೆ ಎಂಬ ಒರಟಾದ ಧ್ವನಿ ಬಂತು. ಕಣ್ಣೀರು ಒರೆಸಿಕೊಂಡ ಕೆಂಪಿ ಮೌನವಾಗಿ ಎದ್ದು ಧ್ವನಿ ಬಂದತ್ತ ಹೋಗುತ್ತಾಳೆ. ಹಾಗೆಲ್ಲ ಅಲ್ಲಿ ಹೋಗಬಾರದು ಇಲ್ಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂಬ ಮಾತಿಗೆ ಮೌನವಾಗಿ ತಲೆ ಅಲ್ಲಾಡಿಸಿದಳು. ಕಿಟಕಿಯಿಂದಲೇ ದೂರದ ಮಂಠಪದೊಳಗೆ ನಡೆಯುತ್ತಿದ್ದ ಕಮಲಿ ಮದುವೆಯನ್ನು ಕಣ್ತುಂಬಿಕೊಂಡಿದ್ದಳು ಕೆಂಪಮ್ಮ.
ಕಮಲಿ ಗಂಡನೊಡನೆ ಮನೆಗೆ ಬಂದಾಗ ಕೆಂಪಿಯನ್ನು ಮಾತಾಡಿಸಲೇ ಇಲ್ಲವಂತೆ. ತನ್ನ ಗಂಡನಿಗೆ ಸಾಕಿ ಬೆಳೆಸಿದ ಕೆಂಪಜ್ಜಿಯನ್ನು ಪರಿಚಯಿಸಲೇ ಇಲ್ಲ, ಅಮೇರಿಕಾದ ಸಂಸ್ಕøತಿಯನ್ನೇ ಕಲಿತ ತನ್ನ ಗಂಡನಿಗೆ ಈ ವಿಚಿತ್ರ ವೇಷದ ಅಜ್ಜಿಯನ್ನು ಪರಿಚಯಿಸುವುದು ಕಮಲಿಗೆ ಅಸಹ್ಯವೆನಿಸಿತ್ತು. ತಿಂಗಳು ಕಳೆಯುವುದರಲ್ಲಿಯೇ ಕಮಲಿ ಗಂಡನೊಡನೆ ಅಮೇರಿಕಾಕ್ಕೆ ಹೋದಳು ಎನ್ನುವ ಸುದ್ಧಿಯೂ ಕೆಂಪಿಗೆ ಯಾರೋ ಹೇಳಿದರು. ಅಮೇರಿಕಾಕ್ಕೆ ಹೋಗುವಾಗಲಾದರೂ ತನಗೊಂದೇ ಒಂದು ಮಾತೂ ಹೇಳಲೇ ಇಲ್ಲವಲ್ಲ ಎನ್ನುವ ಕೊರಗು ಕೆಂಪಿಗೆ ನಿತ್ಯ ಕಾಡುತ್ತಿತ್ತು. ಕಮಲಿಯನ್ನೇ ಯೋಚಿಸುತ್ತಾ ಕಣ್ಣೀರು ಹಾಕುತ್ತಿದ್ದಳು ಕೆಂಪಿ.
ಎರಡು ವರ್ಷ ಅಮೇರಿಕಾದಲ್ಲಿದ್ದ ಕಮಲಿ ಊರಿಗೆ ಬರುತ್ತಾಳೆ. ಬಂದಾಗ ಇನ್ನೂ ಬದಲಾಗಿದ್ದಳು. ಅಲ್ಲಿಯ ಭಾಷೆ, ಸಂಸ್ಕøತಿ, ಉಡುಗೆ ಎಲ್ಲವೂ ಕೆಂಪಮ್ಮನಿಗದು ಇನ್ನೂ ವಿಚಿತ್ರವಾಗಿ ಕಾಣ್ತಾ ಇತ್ತು. ಗತ್ತು, ಗಾಂಭೀರ್ಯ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಕಮಲಿಯ ಕಾರುಬಾರಿತ್ತು. ಆಕೆ ನಡೆದಾಡುವ, ಮಾತಾಡುವ, ತಿರಸ್ಕಾರದಿಂದ ನೋಡುವ ರೀತಿ ಕೆಂಪಜ್ಜಿಗೆ ಬೇಸರವಾಗುತ್ತಿತ್ತು. ಅಮೇರಿಕಾದಿಂದ ಬಂದಾಗಲೂ ಅಜ್ಜೀ ಹೇಗಿದ್ದೀರಿ ಎಂಬ ಮಾತೂ ಕೇಳಲಿಲ್ಲ, ಕಣ್ಣೆತ್ತಿಯೂ ನೋಡಿಲ್ಲವಲ್ಲಾ ಎನ್ನುವ ನೋವು ಕೆಂಪಿಗೆ. ತನ್ನ ಮುದ್ದು ಕಮಲಿಗೆ ಅವಳಂತೆಯೇ ಇರುವ ಚೆಂದದ ಮಗು ಹುಟ್ಟಿದರೆ ತಾನೇ ಬಾಣಂತನ ಮಾಡಬೇಕು ಇದೆಲ್ಲಾ ಕೆಂಪಜ್ಜಿಯ ಕನಸು. ಕಮಲಿಗೆ ಮಗು ಹುಟ್ಟಿದರೆ ಮುಟ್ಟಬಾರದು, ಎತ್ತಿಕೊಳ್ಳಬಾರದು ಎಂದು ತನ್ನನ್ನು ಅಸಹ್ಯದಿಂದ ನೋಡುವ ಬುದ್ದಿ ತನ್ನ ಕಮಲಿಗೆ ಬಾರದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಳು ಕೆಂಪಮ್ಮ.
ಇದ್ದಕ್ಕಿದ್ದಂತೆ ಒಂದು ದಿನ ಮನೆಯೊಳಗೆ ಜೋರಾದ ಅಳು ಕೇಳಿಸುತ್ತಿತ್ತು. ಕಮಲಿಯ ಬೊಬ್ಬೆ ಕೇಳಿದ ಕೆಂಪಿ ಗಾಬರಿಯಿಂದ ಮನೆಯೊಳಗೆ ಓಡುತ್ತಾಳೆ. ಏನಾಯ್ತು ಮಗಾ ಎನ್ನುತ್ತಾ ಕೆಂಪಜ್ಜಿ ತಾನೂ ಕಣ್ಣೀರು ಸುರಿಸುತ್ತಾ ಕಮಲಿಯ ಮುಖ ನೋಡುತ್ತಾಳೆ. ಕಮಲಿಯ ಗಂಡ ಅಪಘಾತದಲ್ಲಿ ಸತ್ತು ಹೋದನಂತೆ ಸತ್ತ ದೇಹ ವಿಮಾನದಲ್ಲಿ ಬರ್ತಾ ಇದೆಯಂತೆ ಎಂಬ ಸುದ್ದಿ ಕೆಂಪಿಗೆ ಊಹಿಸಲಾಗದ ಸಂಗತಿ. ಅಜ್ಜಿಯನ್ನು ನೋಡಿದ ಕಮಲಿ ಅಳುತ್ತಲೇ ಬಿಕ್ಕಿದ್ದಳು. “ನಿಮ್ಮಂತೆ ನಾನೂ ಆಗಿಬಿಟ್ಟೆ ಅಜ್ಜೀ, ನಿಮ್ಮಂತೆ ನನ್ನನ್ನೂ ಮಾಡ್ತಾರೆ ಅಜ್ಜೀ,” ಎಂದು ಎದೆ ಬಡಿದುಕೊಳ್ಳುತ್ತಾ ನಡುಗುತ್ತಾ ಅಳುತ್ತಿದ್ದಳು. ಕಮಲಿಯ ಅಪ್ಪ ಅಮ್ಮ ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಿಮ್ಮಂತೆ ಬೋಳು ತಲೆ, ಹಣೆ, ಕೆಂಪು ಸೀರೆ ಇವೆಲ್ಲವೂ ನನಗೀಗ ಮಾಡ್ತಾರೆ ಅಜ್ಜೀ. . ಎಂದು ಕಮಲಿ ಅಳುತ್ತಾ ಬಿದ್ದು ಬಿದ್ದು ಉರುಳಾಡುತ್ತಾಳೆ. ಕೆಂಪಜ್ಜಿಯಂತೂ ಕಣ್ಣೀರು ಸುರಿಸುತ್ತಾ ಅಳಬೇಡ ಕಂದಾ ಎನ್ನುತ್ತಾ ಮುಖಕ್ಕೆ ನೀರು ಚಿಮುಕಿಸುತ್ತಾ ತಲೆ ನೇವರಿಸುತ್ತಾಳೆ. ತನ್ನ ತೊಡೆ ಮೇಲೆ ಕಮಲಿಯ ತಲೆಯನ್ನು ಮಲಗಿಸಿ ತಟ್ಟುತ್ತಾ ಧೈರ್ಯ ಹೇಳುತ್ತಾಳೆ. ಕಮಲಿಯ ಅಳು, ವೇದನೆ, ಚೀರಾಟ ನೋಡಿದ ಕೆಂಪಜ್ಜಿಗೆ ದಿಕ್ಕೇ ತೋಚದಂತಾಗುತ್ತದೆ. ಖುಷಿ ಖುಷಿಯಲ್ಲಿದ್ದ ಕಮಲಿಯನ್ನು ಕೆಂಪು ಸೀರೆಯಲ್ಲಿ ಕೆಂಪಮ್ಮನಿಗೆ ಯೋಚಿಸಲೂ ಆಗದು. ಅಷ್ಟರಲ್ಲಿ ಕಮಲಿಯ ಗಂಡನ ಮೃತ ದೇಹ ಮನೆಗೆ ಸಮೀಪಿಸುತ್ತಿದೆ ಎನ್ನುವ ಸುದ್ಧಿ ಕೇಳಿ ಎಲ್ಲರೂ ಗರಬಡಿದವರಂತಾಗುತ್ತಾರೆ. ನಾನು ಪಟ್ಟ ಪಾಡು ಕಮಲಿಗೆÉ ಆಗಬಾರದು ನಾನೀಗ ಆಕೆ ಜೊತೆ ನಿಲ್ಲಬೇಕು ಎಂದುಕೊಳ್ಳುತ್ತಾಳೆ ಕೆಂಪಜ್ಜಿ. ತನ್ನ ಕಮಲಿಗಾಗಿಯೇ ಒಂದು ದೃಢ ನಿರ್ಧಾರಕ್ಕೆ ಬರುತ್ತಾಳೆ. “ದೇವರೇ ಗಂಡ ಸತ್ತಾಗ ಕರಿಮಣಿ ಕಿತ್ತು, ಬಳೆ ಒಡೆದು, ಮೂಗುತಿ ತೆಗೆದು, ಕಾಲ್ಗೆಜ್ಜೆ ಕತ್ತರಿಸಿ, ತಲೆ ಬೋಳ್ಸಿ, ಹುಂಡ್ ಅಳ್ಸಿ ಈ ದರಿದ್ರ ಕೆಂಪು ಸೀರೆ ಉಡ್ಸಿ ಮೂಲೆಯಲ್ ಕೂರ್ಸುದ್ ಬ್ಯಾಡ, ಈ ನರ್ಕ ನನ್ ಕಾಲಕ್ಕೇ ನಿಂತು ಹೋಗಲಿ” ಎಂದು ಕೆಂಪಿ ಗೋಳಿಡುತ್ತಾಳೆ. ಎಲ್ಲಿಂದ ಈ ಧೈರ್ಯ ಬಂತೋ ಆಕೆಗೇ ತಿಳಿಯದು. ನೋಡು ಮಗಾ ಧೈರ್ಯವಾಗಿರು ನಾನಿದ್ದೇನೆ, ನಾನು ಹೇಳಿದಂತೆಯೇ ನೀನು ಮಾಡಬೇಕು ಎನ್ನುತ್ತಾಳೆ ಕೆಂಪಮ್ಮ. ಕಣ್ಣೀರು ಹರಿಸುತ್ತಾ ಕಮಲಿ ಅಜ್ಜಿಯ ಮುಖ ನೋಡುತ್ತಾಳೆ. ಕಮಲಿಯ ಕಣ್ಣೀರು ಕೆಂಪಜ್ಜಿಯ ಸೀರೆ ಮೇಲೆ ಹರಿದು ಒದ್ದೆಯಾಗಿತ್ತು.“ ನೋಡು ಮಗಾ ಕುತ್ತಿಗೆಯ ಕರಿಮಣಿ ತೆಗೆಯದಿರು, ಕಿವಿಯೋಲೆ, ಬಳೆ, ಗೆಜ್ಜೆ ಯಾರಿಗೂ ಮುಟ್ಟಲು ಬಿಡದಿರು, ತಲೆಕೂದಲು ಬೋಳಿಸಲು ಬಿಡಬೇಡ, ಹಣೆಯ ಬೊಟ್ಟು ತೆಗೆಯದಿರು,
ಕೆಂಪು ಸೀರೆ ಉಡಿಸಲು ಬಿಡಲೇಬೇಡ, ನಾನೇ ನಿನ್ನೊಂದಿಗೆ ನಿಲ್ಲುತ್ತೇನೆ ಮಗಾ ಎನ್ನುವಾಗಲೇ ಗೋಡೆಯಲ್ಲಿದ್ದ ಹಲ್ಲಿ ಲೊಚಗುಟ್ಟಿತು. ಕೊಟ್ಟಿಗೆಯ ಹಸುಗಳು ಅಂಬಾ ಎಂದವು. ಅಂಗಳದಲ್ಲಿದ್ದ ನಾಯಿ ಆಕಾಶದೆಡೆಗೆ ಸೊಡ್ಡು ಮಾಡಿ ಜೋರಾಗಿ ಊಳಿಡುತ್ತಿತ್ತು. ಮನೆಯವರು ಸುಮ್ಮನಿರೋಲ್ಲ ಅಜ್ಜೀ. . ಇವರೆಲ್ಲಾ ನನ್ನನ್ನು ನಿನ್ನಂತೆ ಮಾಡಿಬಿಡ್ತಾರೆ ಅಜ್ಜೀ ಎಂದು ಬಿಕ್ಕಿ ಬಿಕ್ಕಿ ಅತ್ತಳು ಕಮಲಿ. ಮಗಾ ನನ್ನ ಪ್ರಾಣ ಹೋದರೂ ಹೋಗಲಿ, ನಿನ್ನನ್ನು ನನ್ನಂತೆ ಮಾಡಲು ಬಿಡುವುದಿಲ್ಲ. ಈ ಅನಿಷ್ಟ, ಅಪಶಕುನದ ಕೆಂಪು ಸೀರೆಯನ್ನು ಉಡಿಸುವ ಪದ್ಧತಿ ನನ್ನ ಕಾಲಕ್ಕೇ ನಿಂತು ಹೋಗಲೇಬೇಕು ಎನ್ನುತ್ತಾಳೆ. ನೀನು ಧೈರ್ಯಗೆಡಬೇಡ ನಾನು ಹೇಳಿದಂತೆ ಮಾಡು ಎನ್ನುತ್ತಾಳೆ. ಅಜ್ಜಿ ನನ್ನೊಂದಿಗಿರುವುದೇ ನನಗೆ ದೊಡ್ಡ ಶಕ್ತಿ ಎಂದು ಕಮಲಿ ನಿರ್ಧರಿಸುತ್ತಾಳೆ. ಅಜ್ಜಿಯನ್ನು ತಬ್ಬಿಕೊಂಡು ಅಳುತ್ತಾ ಕಾಲಿಗೆ ನಮಸ್ಕರಿಸುತ್ತಾಳೆ. ಕೆಂಪಜ್ಜಿಯ ಮಾತುಗಳು ಕಮಲಿಯ ಅತ್ತೆ-ಮಾವಂದಿರಿಗೆ ಅಪ್ಪ-ಅಮ್ಮನಿಗೆ ಎಲ್ಲರಿಗೂ ಸರಿಯೆನಿಸುತ್ತದೆ. ಕೆಂಪಿ ಕಮಲಿ ಜೊತೆ ಕೊನೆತನಕ ನಿಂತಳು. ದಿನಗಳೆದಂತೆ ಕಮಲಿಗೆ ಅಜ್ಜಿಯೇ ಸರ್ವಸ್ವವಾದಳು. ತನಗೆ ಜೀವ ಕೊಟ್ಟ ಕೆಂಪಜ್ಜಿ ಎಂದರೆ ಪ್ರಾಣವೆಂಬಂತಾಯಿತು. ಕಮಲಿಯ ಪಾಲಿಗೆ ಕೆಂಪಜ್ಜಿಯೇ ದೇವರಾದಳು.
ಆ ದಿನ ಕಮಲಿ ಕೆಂಪಜ್ಜಿಯನ್ನು ಕೈಹಿಡಿದು ನಡೆಸುತ್ತಾ ಬಾರಜ್ಜೀ ಎನ್ನುತ್ತಾ ಕಾರಲ್ಲಿ ಕೂರಿಸಿಕೊಂಡು ಅಂಗಡಿಗೆ ಹೋದಳು. ಬಣ್ಣದ ಸೀರೆ ಖರೀದಿಸಿದ ಕೆಂಪಮ್ಮ ಕಮಲಿಗೆ ಉಡಿಸುತ್ತಾಳೆ. ಬಳೆ ಅಂಗಡಿಯಲ್ಲಿ ಬಳೆ ತೊಡಿಸುತ್ತಾಳೆ, ಕಣಿಗಿಲೆ ಗಿಡದ ಹೂವು ಕೊಯ್ದು ಕಮಲಿಯ ತಲೆಗೆ ಮುಡಿಸುತ್ತಾಳೆ. ಕಮಲಿ ಅಜ್ಜಿಯೊಂದಿಗೆ ಕಾಲ ಕಳೆಯುತ್ತಾ ನೋವನ್ನು ಮರೆಯುತ್ತಿದ್ದಳು. ಸಮಾರಂಭವೊಂದಕ್ಕೆ ಕಮಲಿ ಅಜ್ಜಿಯ ಕೈಹಿಡಿದು ವೇದಿಕೆಯ ಮುಂದಿರುವ ಕುರ್ಚಿಯಲ್ಲಿ ಕುಳ್ಳಿರಿಸಿದಳು. ಈ ಸಮಾರಂಭಕ್ಕೆ ನಾನೂ ಹೋಗಿದ್ದೆ. ಕೆಂಪಮ್ಮ ಮತ್ತು ಕಮಲಿಯನ್ನು ನೋಡಿ ನನಗಾದ ಸಂತಸ ಹೇಳತೀರದು. ಸಮಾರಂಭದ ಮಹಿಳಾ ಅಧ್ಯಕ್ಷರ ಭಾಷಣದ ಸೊಲ್ಲನ್ನು ಕೇಳಿ ಭಾವುಕಳಾದೆ.
ನಾಕ್ ಜನ ನೆರೆದಲ್ಲಿ ನೀಕಿ ಕಂಡವಳಲ್ಲ,
ಯಾಕೆನ್ನ ಇಲ್ಲಿ ಕರೆಸೀರಿ
ಯಾಕೆನ್ನ ಇಲ್ಲಿ ಕರೆಸೀರಿ ನಿಮ್ಮಂತ
ಶೋಕೀನರ್ ಕಂಡು ಬೆರಗಾದೆ”
ಇದ್ದಕ್ಕಿದ್ದಂತೆ ವೇದಿಕೆಯಲ್ಲಿಯೇ ಹಾಡು ಕಟ್ಟಿದ ಅದ್ಭುತ ಪ್ರತಿಭೆ ಉಳ್ಳೂರು ಮೂಕಜ್ಜಿ(ಆಶು ಕವಯಿತ್ರಿ ಉಳ್ಳೂರು ಮೂಕಾಂಬಿಕಾ ಅಮ್ಮ, ಉಡುಪಿ ಜಿಲ್ಲೆ) ಯವರನ್ನು ಕಂಡ ನನ್ನ ಕಣ್ಣುಗಳು ಹನಿಗೂಡಿದವು. ತನ್ನ ಬದುಕಿನ ಪಾಡನ್ನು ಆಶು ಕವಯಿತ್ರಿ ಹಾಡಾಗಿ ಹೇಳಿದ್ದು ಹೀಗೆ.
ಹತ್ತು ವರುಷಕೆ ಮದುವೆ ಮಾಡಿದರು ಎನಗೆ
ಅತ್ತೆ ಮೃತ್ಯುವಿನಂತೆ ಹೊಡೆಯುತಿಹರೆನಗೆ
ಮತ್ತೆ ಹದಿನೈದು ವರುಷಕೆ ಬಸುರಿಯಾಗೆ
ಹೆತ್ತ ಶಿಶು ಗಂಡು ಮಗು ಅದು ಕೆಟ್ಟ ಗಳಿಗೆ
ಎಂಟು ತಿಂಗಳು ಮಗುವಿಗಾಗುತ್ತ ಬಂತು
ಕಂಟಕವು ದಿನ ದಿನಕೆ ಹೆಚ್ಚುತಿರಲಿಂತು
ಸೊಂಟ ನೋವ್ ಜ್ವರವೇರಿ ಪತಿಗಳಿವು ಬಂತು
ಒಂಟಿ ಬಾಳಾದೆನಗೆ ವೈಧವ್ಯ ಬಂತು
ಗೊಡ್ಡು ಪುರೋಹಿತರು ನುಡಿದರಿಂತೆಂದು
ಅಡ್ಡಿ ಮಾಡದೆ ಬೋಳು ತಲೆ ಮಾಡಿರೆಂದು
ದುಡ್ಡಿನಾಸೆಗೆ ಕ್ಷೌರಿಕನು ಓಡಿ ಬಂದು
ಬಡ್ಡು ಕೂಪಿನೊಳು ತಲೆಬೋಳಿಸಿದನಂದು
“ಇಲ್ಲಿ ಯಾರೂ ಮುಖ್ಯರೂ ಅಲ್ಲ, ಯಾರೂ ಅಮುಖ್ಯರೂ ಅಲ್ಲ”ಎನ್ನುವ ಕವಿಯೊಬ್ಬರ ಸೊಲ್ಲು ಮತ್ತೆ ಮತ್ತೆ ಮರುಚಿಂತಿಸುವಂತಾಯಿತು. ಕೆಂಪು ಸೀರೆಯ ರಂಗಿನ ರಂಗು ಗಗಕ್ಕೇರುತ್ತಿತ್ತು. ಕತ್ತಲಾಯಿತೆಂಬ ಭಯದಿಂದ ಮನೆಯತ್ತ ಹೆಜ್ಜೆ ಹಾಕಿದೆ.
- ಡಾ.ಭಾರತಿ ಮರವಂತೆ – ರಂಗೋಲಿ ಕಲಾವಿದರು, ಉಪನ್ಯಾಸಕರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕೃತರು , ಉಡುಪಿ ಜಿಲ್ಲೆ
