ಶಿಶುಪಾಲನೆ ಕೇರಳ ಸಾಧನೆ : ರಾಘವೇಂದ್ರ ಪಿ. ಅಪರಂಜಿ

ಕೇರಳ ರಾಜ್ಯ ಉಚಿತ ಆರೋಗ್ಯ ಸೇವೆ, ‘ಹೃದಯಂ’ ಯೋಜನೆ, ನವಜಾತ ಶಿಶುವಿನ ತೀವ್ರ ನಿಗಾ ಘಟಕಗಳು, ಆಸ್ಪತ್ರೆ ವ್ಯವಸ್ಥೆ, ಮಹಿಳಾ ಸಾಕ್ಷರತೆ ಪ್ರಮಾಣ, ಗ್ರಾಮ-ನಗರ ವ್ಯತ್ಯಾಸವಿಲ್ಲದೇ ಎಲ್ಲರಿಗೂ ಸಮಾನ ಆರೈಕೆ ಒದಗಿಸಿರುವುದು ಈ ಯಶಸ್ಸಿಗೆ ದಾರಿಯಾಗಿದೆ. ಇನ್ನಷ್ಟು ಮಾಹಿತಿಯನ್ನು ರಾಘವೇಂದ್ರ ಪಿ. ಅಪರಂಜಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

– ೧೦೦೦ ಮಕ್ಕಳಿಗೆ ಕೇವಲ ೫ ಮಕ್ಕಳು ಮಾತ್ರ ಮರಣ
– ಕರ್ನಾಟಕದಲ್ಲಿ ಶಿಶುಗಳ ಸಾವಿನ ಪ್ರಮಾಣ ೧೭!
*
ಕೇರಳ ರಾಜ್ಯ ಒಂದು ಸಾವಿರ ಜನಗಳಿಗೆ ಕೇವಲ ಐದು ಶಿಶು ಮರಣ ಪ್ರಮಾಣ ದಾಖಲಿಸಿ ಅಮೆರಿಕಾದ ೫.೬ ಪ್ರಮಾಣಕ್ಕಿಂತ ಕಡಿಮೆ ಮಾಡಿ ಸಾಧನೆ ತೋರಿಸಿದೆ. ಉಚಿತ ಆರೋಗ್ಯ ಸೇವೆ, ‘ಹೃದಯಂ’ ಯೋಜನೆ, ನವಜಾತ ಶಿಶುವಿನ ತೀವ್ರ ನಿಗಾ ಘಟಕಗಳು, ಆಸ್ಪತ್ರೆ ವ್ಯವಸ್ಥೆ, ಮಹಿಳಾ ಸಾಕ್ಷರತೆ ಪ್ರಮಾಣ, ಗ್ರಾಮ-ನಗರ ವ್ಯತ್ಯಾಸವಿಲ್ಲದೇ ಎಲ್ಲರಿಗೂ ಸಮಾನ ಆರೈಕೆ ಒದಗಿಸಿರುವುದು ಈ ಯಶಸ್ಸಿಗೆ ದಾರಿಯಾಗಿದೆ. ಭಾರತದ ಸರಾಸರಿ ಇನ್ನೂ ೨೫ ಇದ್ದರೂ ಕೇರಳ ಶಿಶು ಆರೋಗ್ಯದಲ್ಲಿ ಜಗತ್ತಿಗೆ ಮಾದರಿಯಾಗಿದೆ.
*
ಶಿಶು ಮರಣ ಪ್ರಮಾಣ ಎಂದರೇನು?

ಒಂದು ಸಾವಿರ ಶಿಶುಗಳು ಜನನವಾದಲ್ಲಿ ಒಂದು ವರ್ಷದೊಳಗೆ ಮರಣ ಹೊಂದುವ ಮಕ್ಕಳ ಸಂಖ್ಯೆಯನ್ನು ಸೂಚಿಸುವ ಒಂದು ಪ್ರಮುಖ ಪ್ರಮಾಣವಾಗಿದೆ. ಇದು ಒಂದು ದೇಶ ಅಥವಾ ರಾಜ್ಯದ ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಅಳೆಯುವ ಮಾನದಂಡವೂ ಹೌದು. ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶಿಶು ಮರಣ ದೊಡ್ಡ ಸವಾಲಾಗಿದೆ. ದೇಶದಲ್ಲಿ ಶಿಶು ಮರಣ ಪ್ರಮಾಣ ೨೩ರಿಂದ ೨೫ರಷ್ಟಿದೆ.

*
ಶಿಶು ಮರಣ ಏಕೆ ಸಂಭವಿಸುತ್ತವೆ?
ಅಪೌಷ್ಟಿಕತೆ:
೫ ವರ್ಷದೊಳಗಿನ ಮಕ್ಕಳಲ್ಲಿ ಈ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಿಣಿಯರು, ಶಿಶುಗಳಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

ಅವಽಪೂರ್ವ ಜನನ-ಕಡಿಮೆ ತೂಕ:
ಅವಽಪೂರ್ವ ಜನಿಸುವ ಶಿಶುಗಳು, ಕಡಿಮೆ ತೂಕ ಹೊಂದಿದ ಮಕ್ಕಳಿಗೆ ಉಸಿರಾಟದ ತೊಂದರೆ ಆಗುವುದು, ನ್ಯುಮೋನಿಯಾ ಇನ್ನಿತರೆ ಸೋಂಕು ತಗುಲುವಿಕೆಯಿಂದ ಶಿಶುಗಳ ಮರಣ ಪ್ರಮಾಣ ಹೆಚ್ಚುತ್ತದೆ.

ಸೋಂಕು-ರೋಗಗಳು:
ಸೆಪ್ಸಿಸ್, ನ್ಯುಮೋನಿಯಾ, ಅತಿಸಾರ ಹಾಗೂ ಅಶುದ್ಧ ಕುಡಿಯುವ ನೀರು, ಅನೈರ್ಮಲ್ಯದ ಸಮಸ್ಯೆಯೂ ಕಾರಣವಾಗಿದೆ.

ವೈದ್ಯಕೀಯ ಸೌಲಭ್ಯ ಕೊರತೆ:
ತರಬೇತಿ ಪಡೆದ ವೈದ್ಯರು, ನರ್ಸ್‌ಗಳ ಕೊರತೆ, ಸಕಾಲಿಕ ಚಿಕಿತ್ಸೆ ದೊರಕದೆ ಇರುವುದು, ಉತ್ತಮ ವೈದ್ಯಕೀಯ ಸೌಲಭ್ಯ ಸಿಗದಿರುವುದು ಶಿಶು ಮರಣಕ್ಕೆ ಕಾರಣವಾಗಿದೆ.

ಶೈಕ್ಷಣಿಕ-ಜಾಗೃತಿ ಕೊರತೆ:
ಗರ್ಭಿಣಿಯರಿಗೆ, ತಾಯಂದಿರಿಗೆ ಪೌಷ್ಟಿಕತೆ, ನೈರ್ಮಲ್ಯ, ಶಿಶು ಆರೈಕೆ ಕುರಿತು ಸೂಕ್ತ ಮಾಹಿತಿ ಇಲ್ಲದೇ ಇರುವುದು. ಮೂಢನಂಬಿಕೆಯೂ ಇದಕ್ಕೆ ಮುಖ್ಯ ಕಾರಣ.

*
ಕೇರಳದಲ್ಲಿ ಶಿಶು ಮರಣ ಪ್ರಮಾಣ :
ಕೇರಳದ ಆರ್ಥಿಕ ಮತ್ತು ಅಂಕಿ-ಅಂಶಗಳ ಇಲಾಖೆ ಪ್ರಕಾರ ಶಿಶು ಮರಣ ಪ್ರಮಾಣ ೨೦೧೦ರಲ್ಲಿ ೭.೪೨ರಷ್ಟಿತ್ತು. ೨೦೧೨ರಲ್ಲಿ ೮.೨ಕ್ಕೆ ಏರಿತ್ತು. ಅಂದಿನಿಂದ ಆರೋಗ್ಯ ಕ್ಷೇತ್ರದಲ್ಲಿ ತೆಗೆದುಕೊಳ್ಳಲಾದ ಕ್ರಮಗಳಿಂದ ೨೦೨೨ರಲ್ಲಿ ಈ ಪ್ರಮಾಣ ೫.೬ ಇಳಿಯಿತು. ಈಗ ೫ಕ್ಕೆ ಇಳಿದಿದೆ. ದೇಶಕ್ಕೆ ಹೋಲಿಸಿದರೆ ಸರಾಸರಿ ಪ್ರಮಾಣ ಕೇರಳದಲ್ಲಿ ಐದು ಪಟ್ಟು ಕಡಿಮೆ ಆಗಿದೆ.
*
ಅಮೆರಿಕಕ್ಕಿಂತ ಕೇರಳದಲ್ಲಿ ಕಡಿಮೆ :
ಅತಿ ಶ್ರೀಮಂತ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಅಮೆರಿಕಕ್ಕಿಂತ ಕೇರಳದಲ್ಲೇ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಭಾರತದ ಒಂದು ಪುಟ್ಟ ರಾಜ್ಯ ‘ವಿಕಸಿತ ದೇಶ’ಕ್ಕಿಂತ ಅತ್ಯುತ್ತಮ ಸಾಧನೆ ಮಾಡಿದ್ದು ಸಣ್ಣದೇನಲ್ಲ. ಕೇರಳದ ಜನಸಂಖ್ಯೆ, ಆರ್ಥಿಕ ಸಂಪತ್ತು, ಮೂಲ ಸೌಕರ್‍ಯಗಳಲ್ಲಿ ಅಮೆರಿಕಕ್ಕಿಂತ ದೊಡ್ಡ ವ್ಯತ್ಯಾಸವಿದ್ದರೂ ಆರೋಗ್ಯ ಸೇವೆ, ಸಾರ್ವಜನಿಕ ಜಾಗೃತಿ, ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಕೇರಳದಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದೆ. ಅಮೆರಿಕದಲ್ಲಿ ೨೦೨೧ರಲ್ಲಿ ೫.೪೪, ೨೦೨೨ರಲ್ಲಿ ೫.೬ರಷ್ಟು ಶಿಶು ಮರಣ ಪ್ರಮಾಣವಿತ್ತು.
*
೧೫ ವರ್ಷಗಳ ಶ್ರಮದ -ಲ :
ಕೇರಳ ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಆಕಸ್ಮಿಕವಾಗಿ ಯಶಸ್ಸು ಸಾಽಸಲಿಲ್ಲ. ೨೦೧೦ರಲ್ಲಿ ಶಿಶು ಮರಣ ಪ್ರಮಾಣ ೭.೪ರಷ್ಟಿತ್ತು. ೨೦೧೨ರಲ್ಲಿ ಈ ಅಂಕಿ ಅಂಶ ೮.೨ಕ್ಕೆ ಏರಿತ್ತು. ೨೦೦೫-೦೬ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ (ಎನ್‌ಎಫ್‌ಎಚ್‌ಎಸ್) ಕೇರಳದಲ್ಲಿ ಪ್ರತಿ ಒಂದು ಸಾವಿರ ಶಿಶುಗಳಿಗೆ ೧೫ ಶಿಶುಗಳು ಮೃತಪಡುತ್ತಿದ್ದವು. ೨೦೦೯ರಲ್ಲಿ ಈ ಸಂಖ್ಯೆ ೧೨ಕ್ಕೆ ಇಳಿದಿತ್ತು. ೨೦೧೫-೧೬ರ ವರದಿ ಪ್ರಕಾರ ಈ ಸಂಖ್ಯೆ ೬ಕ್ಕೆ ತಲುಪಿತ್ತು. ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್) ಪ್ರಕಾರ ೨೦೨೧ರಲ್ಲಿ ೬ಕ್ಕೆ ಇಳಿದಿತ್ತು. ೨೦೨೨ರಿಂದ ಈಚೆಗೆ ೫ಕ್ಕೆ ಇಳಿದಿದೆ. ಇದು ಸಾರ್ವಜನಿಕ ಆರೋಗ್ಯ ಮಾದರಿಯ ಸ್ಥಿರತೆ ಮತ್ತು ಸಮಗ್ರತೆಗೆ ಸಾಕ್ಷಿಯಾಗಿದೆ.
*
ಭಾರತದ ಶಿಶು ಮರಣ ಪ್ರಮಾಣ ೩೯: 
ದೇಶದ ಇತರೆ ರಾಜ್ಯಗಳಿಗೆ ಐಎಂಆರ್ ದರ ಹೋಲಿಸಿದಾಗ ಕೇರಳದ ಯಶಸ್ಸು ಎದ್ದು ಕಾಣುತ್ತದೆ. ಭಾರತದ ರಾಷ್ಟ್ರೀಯ ಶಿಶು ಮರಣ ಪ್ರಮಾಣ ಸರಾಸರಿ ೧೮ರಿಂದ ೨೫ ಆಗಿದ್ದರೆ ಕೇರಳದ ಪ್ರಸ್ತುತ ಐಎಂಆರ್ ೫ ಆಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ೫ ಪಟ್ಟು ಕಡಿಮೆಯಾಗಿದೆ. ಭಾರತದ ಒಟ್ಟಾರೆ ಐಎಂಆರ್ ೨೦೧೪ರಲ್ಲಿ ೩೯ರಿಂದ ೨೦೨೦ರಲ್ಲಿ ೨೮ಕ್ಕೆ ಇಳಿದಿದ್ದರೂ ಕೇರಳದ ಐಎಂಆರ್ ಕಡಿತದ ವೇಗ ಗಮನಾರ್ಹವಾಗಿದೆ.
*
ಪ್ರಾದೇಶಿಕ ಅಸಮಾನತೆ ಕೊರತೆ :
ಕೇರಳದ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಭಾರತದ ಇತರೆ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದ ಶಿಶು ಮರಣ ಪ್ರಮಾಣ ಸರಾಸರಿ ೨೮ ಆಗಿದ್ದರೆ, ನಗರ ಪ್ರದೇಶಗಳಲ್ಲಿ ೧೯ ಇದೆ. ಆದರೆ ಕೇರಳದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶ ಎರಡರಲ್ಲೂ ಐಎಂಆರ್ ೫ಕ್ಕಿಂತ ಕಡಿಮೆ ಇದೆ. ಈ ಅಂಕಿ ಅಂಶ ಗಮನಿಸಿದರೆ ಆರೋಗ್ಯ ಸೇವೆಗಳು ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂತರಗಳಿಲ್ಲದೇ ಎಲ್ಲರಿಗೂ ಸಮಾನವಾಗಿ ಲಭ್ಯವಾಗಿದೆ ಎಂಬುದು ಗಮನಾರ್ಹ.
*
ಯಶಸ್ಸಿಗೆ ಕಾರಣಗಳೇನು? :
ಕೇರಳದ ಈ ಯಶಸ್ಸು ಆಕಸ್ಮಿಕವಾಗಿದ್ದಲ್ಲ. ಪ್ರಗತಿಪರ ಆರೋಗ್ಯ ನೀತಿಗಳು, ಸಾಮಾಜಿಕ ನಿರ್ಧಾರಗಳು, ಸಮುದಾಯದ ಪಾಲ್ಗೊಳ್ಳುವಿಕೆ ಯಶಸ್ಸಿನ ಗುಟ್ಟು. ಕೇರಳದಲ್ಲಿ ಹೆರಿಗೆಗಳು ಬಹುತೇಕವಾಗಿ ಗ್ರಾಮೀಣದಲ್ಲಿ ಶೇ.೯೬, ನಗರದಲ್ಲಿ ಶೇ.೯೯ರಷ್ಟು ಆಸ್ಪತ್ರೆಗಳಲ್ಲೇ ನಡೆಯುತ್ತವೆ. ಇಲ್ಲಿ ತರಬೇತಿ ಪಡೆದ ಸಿಬ್ಬಂದಿ, ಆಸ್ಪತ್ರೆಯಲ್ಲಿ ಅಗತ್ಯ ಉಪಕರಣ, ತುರ್ತು ಸಂದರ್ಭದಲ್ಲಿ ಕೈಗೊಳ್ಳುವ ಮಹತ್ವದ ನಿರ್ಣಯಗಳು, ಸರ್ಕಾರದ ನವಜಾತ ಶಿಶು ಆಸ್ಪತ್ರೆಗಳಲ್ಲಿ ಅನಾರೋಗ್ಯ ಪೀಡಿತ ಶಿಶು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದ್ದು, ನರ್ಸ್‌ಗಳಿಗೆ ಗುಣಮಟ್ಟದ ತರಬೇತಿ ನೀಡಿ ಶಿಶು ಮರಣ ಪ್ರಮಾಣ ಕಡಿಮೆ ಮಾಡಲಾಗಿದೆ.

*
ಕೈ ಹಿಡಿದ ಹೃದಯಂ, ಮಾತೃಯಾನಂ ಯೋಜನೆ :
ಕೇರಳದ ಐಎಂಆರ್ ೧೨ರಿಂದ ೧೫ ಸ್ಥಿರವಾಗಿದ್ದಾಗ ಆರೋಗ್ಯ ಇಲಾಖೆ ಸಾವಿನ ಕಾರಣ ಕುರಿತು ಆಡಿಟ್ ನಡೆಸಿತು. ಹೆಚ್ಚಿನ ಶಿಶುಗಳು ಅಕಾಲಿಕ ಜನನ, ಜನ್ಮಜಾತ ವೈಪರೀತ್ಯದಿಂದ ಮೃತಪಡುತ್ತಿರುವುದು ಕಂಡುಬಂದಿತು. ಈ ಸಮಸ್ಯೆ ಬಗೆಹರಿಸಲು ಅಲ್ಲಿನ ಸರ್ಕಾರ ‘ಹೃದಯಂ’ ಯೋಜನೆ ಆರಂಭಿಸಿತು. ಇದು ಜನ್ಮಜಾತ ಹೃದಯ ಕಾಯಿಲೆಗಳ ಶಂಕಿತ ಪ್ರಕರಣಗಳನ್ನು ಪತ್ತೆ ಹಚ್ಚುವ ವೆಬ್ ಆಧಾರಿತ ನೋಂದಣಿ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ವೈದ್ಯರು ಪ್ರಕರಣ ಸೇರಿಸಬಹುದು. ಆಗ ೨೪ ಗಂಟೆಯೊಳಗೆ ಅದನ್ನು ತುರ್ತು ಸ್ಥಿತಿಗೆ ವರ್ಗೀಕರಿಸಲಾಗುತ್ತದೆ. ಅಲ್ಲದೆ ‘ಮಾತೃಯಾನಂ’ ಯೋಜನೆಯೂ ಶಿಶುಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

*

ಆರೋಗ್ಯ ವ್ಯವಸ್ಥೆಯಲ್ಲಿ ಭದ್ರ ತಳಹದಿ

ಕೇರಳದಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಆಶಾ ಕಾರ್‍ಯಕರ್ತೆಯರು ಆರೋಗ್ಯ ವ್ಯವಸ್ಥೆಯ ತಳಹದಿ ಆಗಿದ್ದಾರೆ. ಇವರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯದ ನಡುವೆ ಸೇತುವೆಯಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಈ ಕಾರ್‍ಯಕರ್ತೆಯರು ರೋಗಗಳು, ಸಾವಿನ ಕುರಿತು ಮಾಹಿತಿ ಸಂಗ್ರಹಿಸುತ್ತಾರೆ. ಹೆರಿಗೆ ಸುಗಮಕ್ಕೆ ಕ್ರಮ ಕೈಗೊಳ್ಳುತ್ತಾರೆ. ಸಮುದಾಯಕ್ಕೆ ಭಾವನಾತ್ಮಕ ಬೆಂಬಲ ನೀಡುತ್ತಾರೆ. ಕಡಿಮೆ ವೇತನ, ಅಸಮರ್ಪಕ ಸೌಲಭ್ಯಗಳ ಹೊರತಾಗಿಯೂ ಸಮರ್ಥವಾಗಿ ಕಾರ್‍ಯ ನಿರ್ವಹಿಸುತ್ತಾರೆ. ಆರೋಗ್ಯ ಕಾರ್‍ಯಕರ್ತೆಯರು ಆಯಾ ಸಮುದಾಯದ ಮುಖಂಡರೊಂದಿಗೆ ಸಂವಾದ, ಚರ್ಚೆ ನಡೆಸುತ್ತಾರೆ. ಮನೆ-ಮನೆಗೆ ಭೇಟಿ ನೀಡಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವ ಸುರಕ್ಷತೆ ಕುರಿತು ಮನವರಿಕೆ ಮಾಡುತ್ತಿದ್ದಾರೆ. ಕೊಲ್ಲಂ ಜಿಲ್ಲೆಯ ಪುನಲೂರ್ ತಾಲೂಕೊಂದರಲ್ಲೇ ಸುಮಾರು ಹತ್ತು ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ!

*
ಕೇರಳ ಮಾದರಿ ಇತರೆ ರಾಜ್ಯ ಅನ್ವಯಿಸಬಹುದೇ? :
ಕೇರಳದ ಆರೋಗ್ಯ ಸಾಧನೆ ಕೇವಲ ನೀತಿಗಳ ಫಲಿತಾಂಶವಲ್ಲ. ಇದು ರಾಜಕೀಯ ಇಚ್ಛಾಶಕ್ತಿ, ಉನ್ನತಮಟ್ಟದ ಮಹಿಳಾ ಸಾಕ್ಷರತೆ, ಐತಿಹಾಸಿಕ ಸಾಮಾಜಿಕ ಚಳವಳಿ, ಸಮುದಾಯದ ಬಲವಾದ ಮನೋಭಾವ ಕಾರಣವಾಗಿದೆ. ಈ ಮಾದರಿಯನ್ನು ಎಲ್ಲ ರಾಜ್ಯಗಳಲ್ಲೂ ನೇರವಾಗಿ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ. ನೀತಿ ಆಯೋಗದ ಪ್ರಕಾರ ಆರೋಗ್ಯ ಸೂಚ್ಯಂಕದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಈ ಹಿನ್ನೆಲೆ ಗಮನಿಸಿದರೆ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉಳಿದ ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮ ಫಲಿತಾಂಶ ಕಾಣಲು ಸಾಧ್ಯ.

*
ಲಕ್ಷದ್ವೀಪದಲ್ಲಿ ಅತಿ ಹೆಚ್ಚು ೨೬ :
ಲಕ್ಷದ್ವೀಪ-೨೬, ದಾದರ ಮತ್ತು ನಗರ ಹವೇಲಿ, ದಮನ್-೨೬, ತ್ರಿಪುರಾ-೨೫, ಸಿಕ್ಕಿಂ-೨೫, ನಾಗಾಲ್ಯಾಂಡ್-೨೫, ಮಿಜೋರಾಂ-೨೫, ಮೇಘಾಲಯ-೨೫, ಮಣಿಪುರ-೨೫, ಬಿಹಾರ-೨೫, ಆಸ್ಸಾಂ-೨೪ ಶಿಶು ಮರಣ ಪ್ರಮಾಣ ಇದೆ. ದಕ್ಷಿಣ ಭಾರತದಲ್ಲಿ ಕೇರಳ-೫, ತಮಿಳುನಾಡು-೧೩, ಆಂಧ್ರ-೨೦, ತೆಲಂಗಾಣ-೧೯ ಇದೆ.

*
ಶಿಶು ಮರಣ ಪ್ರಮಾಣ ಹೆಚ್ಚಿರುವ ದೇಶಗಳು :
೨೦೨೪ರ ವರದಿ ಪ್ರಕಾರ ನೈಜೀರಿಯಾ-೬೪.೩, ಮಾಲಿ-೫೭.೪, ಸೋಮಾರಿಯಾ-೮೩.೬, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ೮೦.೫, ಛಾಡ್-೬೨.೫, ದಕ್ಷಿಣ ಸೊಡಾನ್-೬೦.೧, ಬುರ್ಕಿನಾ ಪಾಸೋ-೪೭.೦, ಪಾಕಿಸ್ತಾನ-೫೧.೫, ಯಮನ್-೪೪.೬ ಶಿಶು ಮರಣ ಪ್ರಮಾಣ ಇದೆ.
*
ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ ೧೭ :
೨೦೨೧ರಲ್ಲಿ ೧೭, ೨೦೨೨ರಲ್ಲಿ ೧೫, ೨೦೨೩ರಲ್ಲಿ ೧೪, ೨೦೨೪-೨೫ರಲ್ಲಿ ೧೭ ಶಿಶು ಮರಣ ಪ್ರಮಾಣ ಕಂಡು ಬಂದಿದೆ. ಇದರ ಇಳಿಕೆಗೆ ಕರ್ನಾಟಕದಲ್ಲೂ ಸಮುದಾಯದ ಪಾಲ್ಗೊಳ್ಳುವಿಕೆ, ರಾಜಕೀಯ ಇಚ್ಛಾಶಕ್ತಿ, ನಗರ-ಗ್ರಾಮೀಣ ನಡುವಿನ ಅಂತರ ಕಡಿಮೆ ಮಾಡುವುದು, ಆಸ್ಪತ್ರೆಗಳ ಸುಧಾರಣೆ, ಮೂಢನಂಬಿಕೆಗೆ ಕಡಿವಾಣ, ಅರಣ್ಯ, ಗುಡ್ಡಗಾಡು ಪ್ರದೇಶಗಳಲ್ಲೂ ಚಿಕಿತ್ಸೆ ಸಮರ್ಪಕವಾಗಿ ದೊರಕುವಂತೆ ಮಾಡುವುದು ಅತ್ಯವಶ್ಯಕ.


  • ರಾಘವೇಂದ್ರ ಪಿ. ಅಪರಂಜಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW