‘ಖಾಲಿ ಹಾಳೆ’ ಪುಸ್ತಕ ಪರಿಚಯ – ಡಾ. ಲಕ್ಷ್ಮಣ ಕೌಂಟೆ

ಲೇಖಕಿ ಗೀತಾ ಜಿ. ಹೆಗಡೆ ಕಲ್ಮನೆಯವರ ಚೊಚ್ಚಲ ಕೃತಿ ‘ಖಾಲಿ ಹಾಳೆ’ ಪುಸ್ತಕದ ಕುರಿತು ಕವಿಗಳಾದ ಡಾ.ಲಕ್ಷ್ಮಣ ಕೌಂಟೆ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಖಾಲಿ ಹಾಳೆ
ಲೇಖಕರು : ಗೀತಾ ಜಿ. ಹೆಗಡೆ ಕಲ್ಮನೆ
ಬೆಲೆ : ೧೬೦.೦೦
ಖರೀದಿಗಾಗಿ : ೯೯೧೬೪೮೭೭೮೬

ಶ್ರೀಮತಿ ಗೀತಾ ಜಿ. ಹೆಗಡೆ ಕಲ್ಮನೆಯವರ ಪ್ರಥಮ ಕೃತಿ ‘ಮನಸೇ ನೀನೇಕೆ ಹೀಗೆ’ ಲೇಖನಗಳ ಸಂಗ್ರಹಕ್ಕೆ ಪರಿಚಯಾತ್ಮಕ ಲೇಖನವೊಂದನ್ನು ಬರೆದು ಇದೇ ವೇದಿಕೆಯಲ್ಲಿ ಪೋಷ್ಟ್ ಮಾಡಿದ್ದೆ. ಅವರ ಇನ್ನೊಂದು ಕಥಾಸಂಕಲನ ಕೃತಿ ‘ಖಾಲಿ ಹಾಳೆ’ ಈಚೆಗೆ ನನ್ನ ಕೈ ಸೇರಿತು. ಅವರೇ ಈ ಕೃತಿಯನ್ನು ಗೌರವ ಪ್ರತಿಯಾಗಿ ನನಗೆ ಅಂಚೆ ಮೂಲಕ ಕಳುಹಿಸಿದ್ದರು. ಇದೇ ಅಗಷ್ಟ್ ಮೊದಲ ವಾರದಲ್ಲಿ ನನ್ನ ಕೈ ಸೇರಿದ್ದು, ಅಭಿಪ್ರಾಯ ಬರೆದು ಇಲ್ಲಿ ಪ್ರಕಟಿಸಲು ಸ್ವಲ್ಪ ವಿಳಂಬವಾಯಿತು. ನನಗೆ ಯಾರೇ ಪುಸ್ತಕ ಕಳುಹಿಸಿದರೂ ಕೂಡಲೇ ಓದುವುದು ಮತ್ತು ಮುಂದಿನ ಒಂದೆರಡು ದಿನಗಳಲ್ಲಿಯೇ ಆ ಕುರಿತು ಬರೆಯುವುದು ನಾನು ರೂಢಿಸಿಕೊಂಡು ಬಂದ ಪದ್ಧತಿ. ಈ ಕೃತಿಗೆ ಬರೆಯಲ್ಪಟ್ಟ ಮುನ್ನುಡಿಯ ಆರಂಭದಲ್ಲಿ ಅದನ್ನು ಬರೆದವರು ಸುಮಾರು ಒಂದು ವರ್ಷ ಕಾಲ ಮೂಲ ಪ್ರತಿಯನ್ನು ಇರಿಸಿಕೊಂಡು ಆ ಮೇಲೆ ಅದನ್ನು ಬರೆದು ಕೊಟ್ಟಿರುವುದನ್ನು ಓದಿ ಈ ಕೃತಿಗೆ ನಾಲ್ಕು ಮಾತುಗಳನ್ನು ಬರೆಯಲು ತುಸು ಹೆಚ್ಚು ಅವಧಿ ತಗೆದುಕೊಂಡರೂ ನಡೆಯುತ್ತದೆ ಎಂದು ಅಂದುಕೊಂಡೆ. ಆದರೇ ಬರೆಯ ಬೇಕಾದ ‘ಭಾರ’ವನ್ನು ಇರಿಸಿಕೊಂಡರೆ ಮುಂದೆ ಬರೆಯ ಬೇಕಿರುವ ನನ್ನ ಕೃತಿಯ ಗತಿ ಏನು ಅಂತ ಕಲ್ಮನೆ ಮೇಡಂ ಅವರ ಈ ಕೃತಿಯ ಕುರಿತು ಬರೆಯಲು ಉದ್ದೇಶಿಸಿದೆ.

‘ಖಾಲಿ ಹಾಳೆ’ಯಲ್ಲಿ ಇಪ್ಪತ್ತು ಕಥೆಗಳನ್ನು ಸಂಕಲಿಸಲಾಗಿದೆ. ಕೆಲವು ಕಿರಿಯ ಕತೆಗಳೂ, ಇನ್ನು ಕೆಲವು ಅಲ್ಪ ದೀರ್ಘ ಕತೆಗಳು ಇಲ್ಲಿವೆ. ಎಲ್ಲ ಇಂದಿನ ಜಾಯಮಾನದ ಕಥೆಗಳೆ. ವಾಸ್ತವಕ್ಕೆ ಕಲ್ಪನೆಯನ್ನು ಸೇರಿಸಿ ಎಲ್ಲ ಕಥೆಗಳ ಕಥೆಯನ್ನು ಸುಖಾಂತ್ಯಗೊಳಿಸಿ ಬರೆದವುಗಳೇ. ಲೇಖಕಿ ತಮ್ಮ ‘ನನ್ನ ಮಾತು’ ವಿನಲ್ಲಿ ಈ ಸುಖಾಂತ್ಯಕ್ಕೆ ಕಾರಣವನ್ನು ಹೇಳಿದ್ದಾರೆ. ‘ಕಥೆ ಬರೆಯುವಾಗಲೆಲ್ಲ ನನ್ನ ಮಗಳಿಂದ ಒಂದೇ ಆಶಯ, ಕಥೆ ಸುಖಾಂತ್ಯದಲ್ಲಿ ಮುಕ್ತಾಯವಾಗಬೇಕು. ಓದುಗರಿಗೆ ನಿರಾಶೆ ಮಾಡಬೇಡ. ಅವಳ ಈ ಹಠಕ್ಕೆ ಮಣಿದೋ ಏನೋ, ಬರೆದ ಕಥೆಗಳಲ್ಲಿ ಕೆಲವು ಹೇಗೋ ಸುಖಾಂತ್ಯ ಕಾಣುತ್ತಿದ್ದವು.’ ಹೀಗೆ ಅವರು ಇಲ್ಲಿ ತೋಡಿಕೊಂಡಿದ್ದಾರೆ. ಆದರೂ ಈ ಸಂಕಲನದ ಮೊದಲ ಕಥೆ ‘ಅವಳು’ ಕಥೆಯಲ್ಲಿ ಕಥಾನಾಯಕಿ ನಿರಾಶೆಯಲ್ಲಿಯೇ ವ್ಯಕ್ತವಾಗುತ್ತಾಳೆ. ನನಗೆ ಈ ಕಥೆ ಓದುತ್ತಿದ್ದಂತೆ ನನಗೆ ತತಕ್ಷಣ ನೆನಪಿಗೆ ಬಂದದ್ದು ೩೫-೩೬ ವರ್ಷಗಳ ಹಿಂದೆ ನಾನು ಓದಿದ್ದ ಖ್ಯಾತ ಬರಹಗಾರ ಯಶವಂತ ಚಿತ್ತಾಲರ ಕಥಾಸಂಕಲನದಲ್ಲಿನ ‘ಖಾಲಿ ಕೋಣೆ’ ಕಥೆ. ಅಲ್ಲೋರ್ವ ಮದುವೆಯ ನಿರೀಕ್ಷೆಯಲ್ಲಿಯೇ ನಿತ್ಯ ನಿಟ್ಟುಸಿರು ಬಿಡುತ್ತಿರುವ ಅವಿವಾಹಿತೆಗೆ ಮನೆಗೆ ಬಂದ ಅವಳ ತಂದೆ ಹೇಳುತ್ತಾನೆ : ‘ಅಂತೂ ನಮ್ಮ ಖಾಲಿ ಕೋಣೆಗೆ ಒಬ್ಬರು ಬ್ಯಾಂಕಿನ ಹುಡುಗ ಬಾಡಿಗೆಗೆ ಬರಲು ಒಪ್ಪಿಕೊಂಡಿದ್ದಾನೆ. ಬರಲಿರುವ ಒಂದನೇ ತಾರೀಖಿಗೇ ಬರಲಿದ್ದಾನೆ. ಕೋಣೆ ಸ್ವಚ್ಛ ಮಾಡಿಡು. ಅವನು ಅವಿವಾಹಿತ. ಒಂದೇ ಕೋಣೆ ಅವನಿಗೆ ಬೇಕಿತ್ತಂತೆ. ಅದು ನಮ್ಮಲ್ಲಿದ್ದದ್ದು ಯಾರೋ ಹೇಳಿದ್ದರಂತೆ.’

ಹುಡುಗಿ ಕೋಣೆ ಗುಡಿಸುತ್ತಲೇ ಕನಸು ಕಾಣುತ್ತಾಳೆ, ಕಲ್ಪಿಸಿಕೊಳ್ಳುತ್ತಾಳೆ. ನಮ್ಮಿಬ್ಬರ ಮಧ್ಯ ಪ್ರೀತಿ ಉಂಟಾಗಬೇಕು, ವಿವಾಹವಾಗಬೇಕು. ಇಬ್ಬರೂ ಸುಖವಾಗಿ ಸಂಸಾರ ಮಾಡುತ್ತಿರವೇಕು’ ಮುಂತಾಗಿ. ದಿನಗಳೆಯುತ್ತವೆ. ಒಂದನೇ ತಾರೀಖೂ ಬರುತ್ತದೆ. ಆ ಯುವಕ ಬಾಡಿಗೆ ಕೋಣೆಗೆ ಬರುವುದೇ ಇಲ್ಲ! ಅವಳಪ್ಪ ಮನೆಗೆ ಬಂದು ಅವಳಿಗೆ ಹೇಳುತ್ತಾನೆ : ‘ಬಾಡಿಗೆಗೆ ಬರಬೇಕಾದ ಹುಡುಗ ಅಪಘಾತವೊಂದರಲ್ಲಿ ಸತ್ತ’ ಎಂದು!!

ಆ ಅವಿವಾಹಿತೆಯ ಮನಸ್ಸು ಅಳಲುತ್ತದೆ, ಬಳಲುತ್ತದೆ. ಖೋಲಿಯೂ ಖಾಲಿಯಾಗಿಯೇ ಉಳಿಯುವಂತೆ ಮತ್ತೆ ಅವಳ ಮನಸ್ಸು ಖಾಲಿಯಾಗಿಯೇ ಉಳಿಯುತ್ತದೆ. ಇದೊಂದು ಖಾಲಿ ಕೋಣೆ ಖಾಲಿ ಮನಸ್ಸನ್ನು ಸಂಕೇತಿಸುವ ಕಥೆ. ಈ ಕಥಾಸಂಕಲನದ ಮೊದಲ ಕಥೆ ‘ಅವಳು’ ಮಳೆಯಲ್ಲಿ ತೋಯಿಸಿಕೊಂಡು ಕಚೇರಿಯಿಂದ ಮನೆಗೆ ತೆರಳುತ್ತಾಳೆ. ಆಕೆ ಈ ಪೂರ್ವದಲ್ಲಿ ಓರ್ವನನ್ನು ಪ್ರೀತಿಸಿದ್ದು ಅವನ ಮುಂದೆ ತನ್ನ ಮನದಾಸೆಯನ್ನು ವ್ಯಕ್ತ ಪಡಿಸದೆ ಬಹುಕಾಲ ವ್ಯಯಿಸಿರುತ್ತಾಳೆ. ಅವನೋ ಬೇರೊಬ್ಬಳನ್ನು ಕಟ್ಟಿಕೊಂಡು ಸಂಸಾರದಲ್ಲಿ ನಿರತನಾಗಿರುತ್ತಾನೆ.

ತೋಯಿಸಿಕೊಂಡು ಮನೆಗೆ ಬಂದ ಅವಳಿಗೋ ವಿಪರೀತ ಜ್ವರ. ಒದ್ದೆ ವಸ್ತ್ರಗಳನ್ನು ಬದಲಿಸಿ ಹಾಸುಗೆಯ ಮೇಲೆ ಬಿದ್ದುಕೊಳ್ಳುತ್ತಾಳೆ. ಕನಸಿನಲ್ಲಿ ಅವನು ಬರುತ್ತಾನೆ, ಅದೂ ಕಾಡಿನ ದಾರಿಯಲ್ಲಿ. ಆಕೆಯನ್ನು ಮನೆಗೆ ಕರೆದುಕೊಂಡು ಮೂರು ದಿನ ಇರಿಸಿಕೊಂಡು ‘ನಾ ಕರೆದಾಗ ಹೊರಟು ಬರಬೇಕು, ನಿನ್ನ ಮನೆಯವರು ಒಪ್ಪಲಿ, ಬಿಡಲಿ ನಿನ್ನನ್ನು ವಿವಾಹವಾಗುತ್ತೇನೆ’ ಎನ್ನುತ್ತಾನೆ. ಅವಳು ಅವನಿಂದ ಬೀಳ್ಕೊಂಡು ಹೊರಗೆ ಬರುವಷ್ಟರಲ್ಲಿಯೇ ಅವನ ಪತ್ನಿ ಮತ್ತು ಮಗು ಆಟೋದಿಂದ ಕೆಳಗಿಳಿಯುತ್ತಾರೆ. ಈಕೆಗೆ ತಟ್ಟನೆ ಎಚ್ಚರಾಗುತ್ತದೆ. ಅವಳಿಗೆ ತಾನು ಕಂಡಿದ್ದು ಕನಸು ಎನ್ನುವುದು ಅರಿವಿಗೆ ಬರುತ್ತದೆ. ‘ತನಗೆ ಸಿಗದ ಸಂಸಾರ ಅವನಾದರೂ ಅನುಭವಿಸುತ್ತಿರುವನಲ್ಲ’ ಎಂದು ನಿಟ್ಟುಸಿರುಬಿಡುತ್ತಾಳೆ.
ಇದು ಇಲ್ಲಿನ ಕಥೆ!!

ಈ ಕಥಾ ಸಂಕಲನದಲ್ಲಿ ಹಲವು ಉತ್ತಮ ಕಥೆಗಳಿವೆ. ಅವುಗಳ ಸ್ವಾರಸ್ಯವನ್ನು ಓದಿಯೇ ಅನುಭವಿಸಬೇಕು.


  • ಡಾ. ಲಕ್ಷ್ಮಣ ಕೌಂಟೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW