ವಿಜಯ ನಗರ ಜಿಲ್ಲೆಯ ಡಾ.ಕೃಷ್ಣವೇಣಿ. ಆರ್.ಗೌಡ ಅವರು ರಚಿಸಿರುವ ‘ಕಿಚ್ಚಿನ ಬಲೆ’ ಕವನವನ್ನು ತಪ್ಪದೆ ಮುಂದೆ ಓದಿ…
ಸುಟ್ಟಿದೆ ಎದೆಯ ಬೆಂಕಿ
ಕಿಚ್ಚು ಹಾಯುವ ಮಗ್ಗದ ಸೇತು
ಬಿಗಿ ಬಿಗಿದು ಅಯ್ಯೋ ಅಯ್ಯೋ
ಎನ್ನುವ ಕೂಗು ಕೇಳುತಿದೆ….
ಬಂದ ಭುವಿಯ ಕನಸ ಕಡಲಿಗೆ
ಕೆಂಡ ಹಾರದ ಸ್ವಾಗತ?..
ಹಾದಿಯುದ್ಧಕ್ಕೂ ಕರಿಯ ಕಂಬಿಯ ಕಲ್ಲು…..
ಗುಟ್ಟು ಬಿಡದ ವಿಷದ ಕಂಠ
ಭಾವನೆಯ ಕಿವುಚುತಿದೆ
ಹೇಳಲಾಗದ ರಾಗಕೆ ತಾಳ
ನೆಲದಿ ಸೋತು ಸಪ್ಪೆಯಾಗಿದೆ….
ಹರಿಧ್ವರ್ಣದ ನಡುವೆಯೂ
ಕಾಂತಿಯ ಎರಚದೆ ಮೂಡಣದರಮನೆ ಅಳುಕುತಿದೆ….
ಅನುರಾಗದ ಆಲಾಪನೆ
ಮಾಣಿಕರ್ಣಿಕದ ದಡದಲಿ
ಬೂದಿಯಾಯಿತೇ?…
ಮೂಳೆ ಮಾಂಸದ ತಣಿಕೆಗೆ
ತಣ್ಣೀರುಬಾವಿ ಕೈ ಹಾಸಿ ಕರೆಯುತಿದೆ
ಬತ್ತು ಹೋಗಿದೆ ಬಿತ್ತುವ ತವಕ
ಪೈರ ಮಣ್ಣಲಿ ಕಣ್ಮರೆಯಾಗಿದೆ….
ಶಶಿ ಮೈ ಮರೆಯುವ ಮುನ್ನ
ಇಹದ ಆವೇದನೆ
ಹಾರಿ ಹೋಗಲಿ
ಶಾಂತಿಯ ಸಂದೇಶ
ಎಲ್ಲೆಡೆ ಮೊಳಗಲಿ…
- ಡಾ.ಕೃಷ್ಣವೇಣಿ. ಆರ್. ಗೌಡ – ವಿಜಯ ನಗರ ಜಿಲ್ಲೆ
