‘ಕಿತ್ತೂರು ಹುಲಿ ಸಂಗೊಳ್ಳಿ ರಾಯಣ್ಣ’ ಕೃತಿ ಪರಿಚಯ

ಖ್ಯಾತ ಕಾದಂಬರಿಕಾರರಾದ ಡಾ. ಲಕ್ಷ್ಮಣ ಕೌಂಟೆ ಅವರ ‘ಕಿತ್ತೂರು ಹುಲಿ ಸಂಗೊಳ್ಳಿ ರಾಯಣ್ಣ’ ಕೃತಿಯ ಕುರಿತು ಪತ್ತೇದಾರಿ ಕಾದಂಬರಿಗಾರ್ತಿ ಹೆಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕಿತ್ತೂರು ಹುಲಿ ಸಂಗೊಳ್ಳಿ ರಾಯಣ್ಣ
ಲೇಖಕರು : ಡಾ. ಲಕ್ಷ್ಮಣ ಕೌಂಟೆ
ಪ್ರಕಾಶನ : ವೀರಲೋಕ ಪ್ರತಿಷ್ಠಾನ
ಪುಟಗಳು: 444
ಬೆಲೆ : 575/-
ಮೊಬೈಲ್ ಸಂಖ್ಯೆ : 7022122121 / 8861212172

ಡಾ. ಲಕ್ಷ್ಮಣ ಕೌಂಟೆ ಅವರ “ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ” ಎಂಬ ಐತಿಹಾಸಿಕ ಕಾದಂಬರಿಯನ್ನು ಓದಿದ ಬಳಿಕ ನನ್ನಲ್ಲಿ ನಮ್ಮ ರಾಜ್ಯದ ಇತಿಹಾಸವನ್ನು ಅರಿತುಕೊಳ್ಳಲು ಬಹಳ ಸ್ಫೂರ್ತಿಯನ್ನು ಹುಟ್ಟುಹಾಕಿದ ಕಾರಣ ಅವರ ಮತ್ತೊಂದು ಐತಿಹಾಸಿಕ “ಕಿತ್ತೂರು ಹುಲಿ ಸಂಗೊಳ್ಳಿ ರಾಯಣ್ಣ” ಎಂಬ ಕಾದಂಬರಿಯನ್ನು ಓದುವ ಕೌತುಕತೆ ನನ್ನಲ್ಲಿ ಹೆಚ್ಚಿತು. ಐತಿಹಾಸಿಕ ಚರಿತೆಗಳನ್ನು ಜನರಿಗೆ ಪರಿಚಯಿಸುವುದರಲ್ಲಿ ಪ್ರಖ್ಯಾತರಾದ ಡಾ. ಲಕ್ಷ್ಮಣ ಕೌಂಟೆ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಅಂದು ಏಕಾಂತದಲ್ಲಿ ಚೆನ್ನಮ್ಮಳ ಮನಸ್ಸು ಸಾವನ್ನು ಅಪೇಕ್ಷಿಸುತ್ತಿತ್ತು….. ಕಣ್ಣು ಮುಚ್ಚಿ ಕುಳಿತ ಅವಳ ಕಣ್ಣುಗಳು ಅರಸ ಕಿತ್ತೂರು ದೇಸಾಯಿಯವರು ಕಟ್ಟಿಸಿದ್ದ ಮನಮೋಹಕ ಅರಮನೆಯ ವಿಶೇಷ ವಿನ್ಯಾಸಗಳು ಸ್ಮರಣೆಗೆ ಬಂದವು. ಅರಸನ ಕೈಹಿಡಿದು ನಸುನಕ್ಕು ಅರಮನೆಯೊಳಗೆ ಹೆಜ್ಜೆಯಿಟ್ಟ ಚೆನ್ನಮ್ಮ ಒಂದೆರೆಡು ದಿನಗಳು ಒಡೆಯರ ತೊಳ್ ತೆಕ್ಕೆಯಲ್ಲಿ ಕಂಡ ಸಂತಸದ ಕ್ಷಣಗಳನ್ನು ಮೆಲಕುಹಾಕುತ್ತಿದ್ದ ಅವಳ ಮನಸ್ಸು ತನ್ನ ಕಣ್ಣ ಮುಂದೆಯೇ ಮೃತ ಪಟ್ಟಿದ್ದ ತನ್ನ ದೊರೆಯ ಹಾಗೂ ಮೂರು ಮಕ್ಕಳ ಮರಣವನ್ನು ನೆನೆದು ಮೌನವಹಿಸಿತ್ತು. ಅಮಟೂರು ಬಾಳಪ್ಪನಿಂದ ನನ್ನ ಜೀವ ಉಳಿಯಿತು ಎಂದು ನೆನೆದು ಮುಂದೇನಾಗುವುದೋ! ಎಂಬ ಉದ್ವೇಗಕ್ಕೆ ಒಳಗಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮಳನ್ನು ಬ್ರಿಟಿಷ್ ಅಧಿಕಾರಿಗಳು ವಿಲಿಯಂ ಚಾಪ್ಲಿನ್ ನನ ಆದೇಶದ ಮೇರೆಗೆ ಅರಮನೆಯಲ್ಲಿ ಕೂಡಿ ಹಾಕಿದರು.

ಕಿತ್ತೂರು ಕದನದಲ್ಲಿ ಕಿತ್ತೂರು ಕೋಟೆ ಬ್ರಿಟಿಷರ ವಶವಾಯಿತು. ಕಿತ್ತೂರಿನ ಪ್ರಮುಖರು ಬಂಧನಕ್ಕೆ ಒಳಪಟ್ಟು ಕಾರಾಗೃಹದಲ್ಲಿ ಬಂಧಿತರಾದರು. ತನ್ನಿಬ್ಬರು ಸೊಸೆಯರೊಂದಿಗೆ ಕಾರಾಗೃಹದಲ್ಲಿದ್ದ ಚೆನ್ನಮ್ಮ ನಿದ್ರೆಯಿಲ್ಲದೆ ಚಿಂತಿತಳಾಗಿದ್ದಳು. ತನ್ನ ರಾಜವೈಭೋಗಗಳನ್ನು ತೊರೆದಳು. ಅಮಟೂರು ಬಾಳಪ್ಪ, ಗುರುಸಿದ್ದ, ವೀರಪ್ಪ ಹಾಗೂ ತನ್ನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣನನ್ನು ನೆನೆದು ಕಣ್ಣೀರಿಟ್ಟಳು. ಕಿತ್ತೂರಿನ ಕಲ್ಮಠದ ಸ್ವಾಮಿಗಳು ತಮ್ಮ ಶಿಷ್ಯರನ್ನು ಕಳುಹಿಸಿ ಚೆನ್ನಮ್ಮಳಿಗೆ ಸಾಂತ್ವನ ಹೇಳುತ್ತಿದ್ದರು. ಅವರ ಮರಣದ ನಂತರ ಗುರುಸಿದ್ದ ಸ್ವಾಮಿಗಳು ಚೆನ್ನಮ್ಮಳನ್ನು ನೋಡಲು ಬರುತ್ತಿದ್ದರು. ದಿನಗಳು ಉರುಳುತ್ತಿದವು.

ಧಾರವಾಡದ ಕಾರಾಗೃಹದಲ್ಲಿದ್ದ ಸಂಗೊಳ್ಳಿ ರಾಯಣ್ಣ ಒಂದು ವರುಷದ ನಂತರ ಬಿಡುಗಡೆಯನ್ನು ಪಡೆದನು. ರಾಯಣ್ಣನನ್ನು ಯಾರು ಗುರುತಿಸಲಾಗದಷ್ಟು ದಟ್ಟನೆ ಕೂದಲು, ಉದ್ದ ಗಡ್ಡ ಬೆಳೆದಿದ್ದು ಅವನ ದೇಹ ಕೃಶವಾಗಿತ್ತು. ರಾಯಣ್ಣನು ಧಾರವಾಡದಿಂದ ನೇರ ಕಿತ್ತೂರಿನ ದೇಸಾಯಿಯವರ ವಾಡೆಗೆ ಬಂದನು. ಅಲ್ಲಿಯ ಪರಿಸ್ಥಿತಿಯನ್ನು ನೋಡಿ ರಾಯಣ್ಣನ ರಕ್ತ ಕುದಿಯಿತು. ಸಿಪಾಯಿಯ ಮಾತಿನ ಮೇರೆಗೆ ರಾಯಣ್ಣನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕಲ್ಮಠವನ್ನು ಪ್ರವೇಶಿಸಿ, ಕೋಟೆಯಲ್ಲಿ ಬಿದಿದ್ದ ಕಲ್ಲಿನ ಮೇಲೆ ಕುಳಿತು, ತಾನು ಕುಸ್ತಿಯ ಕಣದಲ್ಲಿ ಗೆದ್ದು ಸಿರಿದೇವಿ ನೆಲೆಯಾದ ಧಾನ್ಯಗಳ ದೊಡ್ಡ ಕಣಜವಾಗಿದ್ದ ಕಿತ್ತೂರಿನ ಸಂಸ್ಥಾನದ ಸೇನೆಯಲ್ಲಿ ಸೇರಿಕೊಂಡದ್ದು, ಅಲ್ಲಿಯ ಹೆಂಗೆಳೆಯರು ಸಂತಸದಿ ಓಡಾಡುವಾಗ ಹೊಮ್ಮುತ್ತಿದ್ದ ಅವರ ಬಳೆಗಳ ಕಿಣಿ ಕಿಣಿ ನಾದದ ವೈಭೋಗದ ಜೀವನದ ನೆನಪಾಗಿ ಅವನಿಗೆ ದುಃಖ ಉಮ್ಮಳಿಸಿತು. ಕತ್ತಲು ಆವರಿಸಿದ ಕಾರಣ ರಾಯಣ್ಣ ಅಲ್ಲೇ ಇದ್ದ ಮಠದ ಗುರುಸಿದ್ಧರನ್ನು ಭೇಟಿ ಮಾಡಿದನು. ಅವರ ಮಾರ್ಗದರ್ಶನ ಪಡೆದ ಸಂಗೊಳ್ಳಿ ರಾಯಣ್ಣ ಮಡಿವಾಳ ದೇವರನ್ನು ಸ್ಮರಿಸಿದನು. ಇಲ್ಲಿ ಲೇಖಕರು ಮಡಿವಾಳ ಸ್ವಾಮಿಯ ಬಗ್ಗೆ ಅನೇಕ ಮಾಹಿತಿಗಳನ್ನು ತಿಳಿಸಿದ್ದಾರೆ.

ಮಡಿವಾಳ ದೇವರ ಸ್ಮರಣೆಯಿಂದ ಹೊರಬಂದ ರಾಯಣ್ಣ ಸಂಗೊಳ್ಳಿಯನ್ನು ಪ್ರವೇಶಿಸುತ್ತಾನೆ. ಅವನ ವೇಷವನ್ನು ನೋಡಿದವರು ಅವನನ್ನು ಗುರುತಿಸದೆ ಅಪರಿಚಿತನಂತೆ ಕಂಡರು. ರಾಯಣ್ಣ ನಸುನಗುತ್ತ ತನ್ನ ಮನೆಯತ್ತ ಹೋಗಿ ‘ಅವ್ವಾ’ ಎಂದು ಕೂಗಿದಾಗ ಆ ಧ್ವನಿಯನ್ನು ಕೇಳಿದ ತಾಯಿ ಕೆಂಚವ್ವಳು ಬಾಗಿಲ ಬಳಿ ನಿಂತಿದ್ದವನನ್ನು ಕಂಡು ಗದ್ಗದ ಧ್ವನಿಯಲ್ಲಿ… “ಬಂದೆಯಾ ನನ್ನ ಕಂದ ರಾಯಾ? ” ಎಂದು ಗುರಿತಿಸಿದ ತಾಯಿ ತನ್ನ ಗಂಡನ ಸಾವಿನ ವಿಷಯವನ್ನು ಮಗನಿಗೆ ತಿಳಿಸಿದಳು. ರಾಯಣ್ಣ ಕೆಲವು ಕಾಲ ಮೌನ ವಹಿಸಿದ. ದುಃಖದಿಂದ ಅವನ ಕಣ್ಣಾಲಿಗಳು ತುಂಬಿ ಬಂದವು.

ಮಗನನ್ನು ಸಂತೈಸಿದ ಕೆಂಚವ್ವ ಸಂಗೊಳ್ಳಿಯ ಕುಲಕರ್ಣಿ ಬಾಳಣ್ಣ ಎಂಬುವನು ಕಿತ್ತೂರು ಸಂಸ್ಥಾನದವರು ಕೊಟ್ಟಿದ್ದ ಜಮೀನನ್ನು ವಶಮಾಡಿಕೊಂಡಿದ್ದಾನೆ ಎಂಬ ವಿಷಯವನ್ನು ತಿಳಿಸಿ, ಮಗನನ್ನು ಅಲ್ಲೇ ಇದ್ದು ಒಕ್ಕಲುತನ ಮಾಡಿ ಮುಂದೆ ಹೆಂಡತಿಯೊಂದಿಗೆ ಸಂಸಾರ ನಡೆಸುವಂತೆ ಹೇಳಿದಳು. ತಾಯಿಯ ಮಾತಿಗೆ ರಾಯಣ್ಣ ತಲೆ ಆಡಿಸಿದನು.

ಕಿತ್ತೂರು ಸಂಸ್ಥಾನ ಪತನಗೊಂಡು ಬ್ರಿಟಿಷರ ಆಡಳಿತ ಬಂದ ನಂತರ ಸಂಗೊಳ್ಳಿ ಕುಲಕರ್ಣಿ ಬಾಳಣ್ಣನಿಗೆ ಅಧಿಕಾರದ ಅಮಲು ಹೆಚ್ಚಿ, ತಾನೆ ಸಂಗೊಳ್ಳಿಯ ರಾಜನಂತೆ ನಡೆದುಕೊಳ್ಳುತ್ತಿದ್ದನು. ತನ್ನ ಜಮೀನಿನ ವಿಷಯದ ಬಗ್ಗೆ ಮಾತನಾಡುವ ಸಲುವಾಗಿ ಸಂಗೊಳ್ಳಿ ರಾಯಣ್ಣನು, ಕುಲಕರ್ಣಿ ಬಾಳಣ್ಣನನ್ನು ಭೇಟಿಯಾದನು. ರಾಯಣ್ಣನನ್ನು ನೋಡಿ ಬೆಚ್ಚಿಬಿದ್ದ ಕುಲಕರ್ಣಿಯೊಂದಿಗೆ ಜಮೀನಿನ ವಿಷಯ ಪ್ರಸ್ತಾಪಿಸಿದ ರಾಯಣ್ಣ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಹೊರಟು ಬಂದನು. ಕಿತ್ತೂರು ಸೈನ್ಯದ ಯೋಧರಾಗಿ ಸೇವೆ ಸಲ್ಲಿಸಿದ್ದ ಗೆಳೆಯರಿಗೆ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿದು ಅವನನ್ನು ಭೇಟಿ ಮಾಡಿದರು. ಎಲ್ಲರೂ ಅವನೊಂದಿಗೆ ಸಮಾಲೋಚನೆ ನಡೆಸಿ ಮುಂದೇನು? ಎನ್ನುವ ಪ್ರಶ್ನೆಗೆ ಉತ್ತರ ಪಡೆಯುತ್ತಿದ್ದರು.

ತಾಯಿ ಕೆಂಚವ್ವನ ಮಾತಿನಂತೆ ಸಂಗೊಳ್ಳಿ ರಾಯಣ್ಣ ತನ್ನ ಪತ್ನಿ ನಿಂಗವ್ವನ ಜೊತೆ ಬಾಳ್ವೆಯನ್ನು ನಡೆಸಲು ಬೆಳವಡಿಗೆ ಹೋಗಿ ನಿಂಗವ್ವನನ್ನು ಕರೆದು ತಂದನು. ಕೆಲವೇ ದಿನಗಳಲ್ಲಿ ಕಿತ್ತೂರಿನ ಮೇಲೆ ಮತ್ತೆ ಯುದ್ಧದ ಕಾರ್ಮೋಡ ಕವಿಯಿತು. ರಾಯಣ್ಣ ಯುದ್ಧದ ಭೂಮಿಯತ್ತ ನಡೆದರೆ ಅವನ ಪತ್ನಿ ತನ್ನ ತವರಿನ ದಾರಿ ಹಿಡಿದಳು.

ಇಂಗ್ಲಿಷರ ಏಜೆಂಟ್ ಆಗಿದ್ದ ಕುಲಕರ್ಣಿ ಬಾಳಣ್ಣನ ಕುತಂತ್ರದಿಂದ ರಾಯಣ್ಣ ಬಂಧನಕ್ಕೂಳಗಾದನು ಹಾಗೂ ರಾಣಿ ಚೆನ್ನಮ್ಮಳು ಬೈಲುಹೊಂಗದಲದ ವಾಡೆಯಲ್ಲಿ ಗೃಹ ಬಂಧಿಯಾಗಿದ್ದಳು.

ಈ ಮಧ್ಯೆ 1829 ಫೆಬ್ರವರಿ 2 ನೇ ತಾರೀಕಿನಂದು ಕಿತ್ತೂರು ರಾಣಿ ಚೆನ್ನಮ್ಮಆರೋಗ್ಯದ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿದಳು. ಕಿತ್ತೂರಿನ ಸಂಸ್ಥಾನದ ವಾರಸುದಾರರಾಗಿ ಉಳಿದಿದ್ದ ದಿವಂಗತ ದೇಸಾಯಿ ಶಿವಲಿಂಗರುದ್ರಸರ್ಜನ ಮಡದಿ ರಾಣಿ ವೀರಮ್ಮ ಹಾಗೂ ಸಾವಾಯಿ ಮಲ್ಲಸರ್ಜರನ್ನು ಮುಗಿಸುವ ಸಂಚು ರೂಪುಗೊಂಡಿತು. ಈ ಎಲ್ಲಾ ನೋವಿನ ಬೆಳವಣಿಗೆಯಿಂದಾಗಿ ನೊಂದ ವೀರಮ್ಮ ಮರಣ ಹೊಂದಿದಳು.

ಸರದಾರ ವೀರಪ್ಪ, ಸಂಗೊಳ್ಳಿ ರಾಯಣ್ಣ, ಬಿದನೂರು ಗಂಗಾಧರ, ಅಮಟೂರು ಚನ್ನಬಸಪ್ಪ, ಅಮಟೂರು ಸೈದನವರ, ಬಾಳಾಸಾಬ, ಬೆಳವಾಡಿ ಎಲ್ಲನಾಯಕ, ಒಕ್ಕುಂದದ ರುದ್ರನಾಯಕ, ದೇಗಾoವಿಯ ಇಮಾಮಸಾಬ ಮೊದಲಾದವರು ಸಭೆ ಸೇರಿ ಆಂಗ್ಲರ ವಿರುದ್ಧ ಹೊರಾಟ ಮಾಡುವ ವಿಷಯಗಳ ಬಗ್ಗೆ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಪ್ರಯತ್ನಿಸಿದರು.

ಸಂಗೊಳ್ಳಿ ರಾಯನಾಯಕ ಕಿತ್ತೂರು ಸಂಸ್ಥಾನವನ್ನು ಆಂಗ್ಲರಿಂದ ಪುನಃ ಪಡೆಯಲು ಸೈನ್ಯವನ್ನು ಕೂಡಿಸುತ್ತಿದ್ದಾನೆ ಎಂಬ ಸುದ್ದಿ ದೇಶಭಕ್ತರ ಗಮನ ಸೆಳೆಯಿತು……

ಮುಂದೇನಾಯಿತು… ಎಲ್ಲರೂ ಪುಸ್ತಕ ಕೊಂಡು ಓದಿ ಪ್ರೋತ್ಸಾಹಿಸಿ. ದೇಶಕ್ಕಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಮಹಾಪುರುಷರ ಕಥೆಗಳನ್ನು ಓದಿ ದೇಶಸೇವೆಯಲ್ಲಿ ಮುಂದಾಗಲು ನಮ್ಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುವ ಜವಾಬ್ದಾರಿಯು ನಮ್ಮೆಲ್ಲರದ್ದು.

ಟಿಪ್ಪು ಸುಲ್ತಾನ್ ನನ ನಂತರ ಮರಾಠಾ ಪೇಶ್ವೇಗಳ ಅಧೀನದಲ್ಲಿ ನರಳಿದ ಕಿತ್ತೂರು ಸಂಸ್ಥಾನವು ನಂತರದ ದಿನಗಳಲ್ಲಿ ಬ್ರಿಟಿಷರೊಂದಿಗೆ ಹೋರಾಡಿ, ಹೋರಾಡಿ ಪತನ ಗೊಂಡಿದ್ದ ಕಿತ್ತೂರು ಸಂಸ್ಥಾನವನ್ನು ಸಂಗೊಳ್ಳಿ ರಾಯಣ್ಣನ ಜೊತೆ ಕೈಜೋಡಿಸಿ ಸಂಸ್ಥಾನವನ್ನು ಪುನರ್ ಸ್ಥಾಪಿಸಲು ನಿಸ್ವಾರ್ಥದಿಂದ ಸಹಾಯ ಮಾಡಿದವರ ಬಗ್ಗೆ ತಿಳಿದು ಆಪಾರ ಗೌರವ ಮೂಡಿತು. ನಮ್ಮವರೇ ನಮಗೆ ದ್ರೋಹ ಬಗೆದ ಸನ್ನಿವೇಶಗಳನ್ನು ನೆನೆದು ರಕ್ತ ಕುದಿಯುವಂತೆ ಮಾಡಿತು.

ಆ ದಿನ 1831, ಜನವರಿ 26. ಎಲ್ಲೆಲ್ಲೂ ಭೀತ ಕಂಗಳಲ್ಲಿ ನಿಂತ ಜನರ ಬಿಸಿಯುಸಿರ ಶಬ್ಧ ಕೇಳಿಸುತ್ತಿತ್ತು. ಸಂಗೊಳ್ಳಿ ರಾಯಣ್ಣನು ತನ್ನ ತಾಯಿ ಕೆಂಚವ್ವಳನ್ನು ಸಮಾಧಾನ ಪಡಿಸುತ್ತಾ.
“ಅವ್ವಾ, ಇಂದು ನಾನು ಚೆನ್ನಮ್ಮಾಜಿಯ ಸೇವೆಗಾಗಿ ಸ್ವರ್ಗಕ್ಕೆ ಹೋಗುತ್ತಿದ್ದೇನೆ. ಮುಂದಿನ ಜನ್ಮವಿದ್ದರೆ ಮತ್ತೆ ನಿನ್ನ ಉದರದೊಳಗೆ ಹುಟ್ಟಿ ಬಂದು ನಿನ್ನ ಸೇವೆ ಮಾಡುವೆ, ಕಿತ್ತೂರಿನ ಸಂಸ್ಥಾನದ ಸೇವೆಯನ್ನು ಮಾಡುವೆ” ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ರಾಯಣ್ಣ ಸಹಿತ ಹದಿನಾಲ್ಕು ವೀರರ ಕುತ್ತಿಗೆಗಳನ್ನು ನೇಣು ಹಾಕಿದರು.

ಶವಗಳು ಮೂರು ದಿನಗಳ ಕಾಲ ನೇಣುಗಂಬದಲ್ಲಿ ಆಲುಗಾಡಿದವು. ನಾಲ್ಕನೇ ದಿನ ಸಮಾಧಿ ಮಾಡಲಾಯಿತು. ಜನರೆಲ್ಲರೂ ಮೂಕವಾಗಿ ರೋಧಿಸುತ್ತಿದ್ದರು. ಅಮಟೂರು ಚೆನ್ನಬಸಪ್ಪ ಯಾರೂ ಇಲ್ಲದ ಸಮಯ ನೋಡಿ ರಾಯಣ್ಣನ ಸಮಾಧಿಯ ಮೇಲೆ ಆಲದ ಟೊoಗೆಯೊಂದನ್ನು ನೆಡಿಸಿ ನಿತ್ಯ ನೀರು ಹಾಕುತ್ತ ಟೊoಗೆ ಚಿಗುರುವಂತೆ ಮಾಡಿದನು.

ಕಥೆಯ ಅನೇಕ ದೃಶ್ಯಗಳು ಓದುಗರ ಹೃದಯದಲ್ಲಿ ದೇಶಭಕ್ತಿಯ ಕಾರಂಜಿಯನ್ನು ಮೂಡಿಸುತ್ತದೆ. ಇಂತಹ ಐತಿಹಾಸಿಕ ಕಾದಂಬರಿಯ ಮೂಲಕ ನಮ್ಮ ವೀರ ಯೋಧರ ಪರಾಕ್ರಮ, ಧೈರ್ಯ, ತ್ಯಾಗಮಯ ಜೀವನದ ಘಟನೆಗಳನ್ನು ಓದಿ ಅರಿತ ನನಗೆ ಒಂದು ದೇಶವನ್ನು ಸುಭದ್ರವಾಗಿ ಕಟ್ಟಲು ಅದೆಷ್ಟು ಕಷ್ಟಗಳು ಸೃಷ್ಟಿಗೊಳ್ಳುತವೆ ಎಂದು ತಿಳಿದು ಬಹಳ ದುಃಖವನ್ನು ಅನುಭವಿಸಿದೆನು.

ತಮ್ಮ ಸರ್ವಸ್ವವನ್ನು ನಾಡಿನ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಸಂಗೊಳ್ಳಿ ರಾಯಣ್ಣನಂತಹ ವೀರ ಗಾಥೆಗಳನ್ನು ಕನ್ನಡ ನಾಡಿನಲ್ಲಿ ಹುಟ್ಟಿದವರೆಲ್ಲರೂ ಓದಲೇ ಬೇಕು ಎಂಬುದು ನನ್ನ ಆಸೆ.

ಕೊನೆಯದಾಗಿ ನಾನು ಒಂದು ಕೃತಿಯ ವಿಮರ್ಶೆಮಾಡುವ ಯಾವುದೇ ಪದವಿ ಹಾಗೂ ಅರ್ಹತೆಯನ್ನು ಪಡೆದಿಲ್ಲ. ಓದು ನನ್ನ ಹವ್ಯಾಸ. ಓದಿದ ನಂತರ ನಾನು ಗ್ರಹಿಸಿದ ವಿಷಯಗಳನ್ನು ಬರೆಯುತ್ತೇನೆ. ತಪ್ಪುಗಳಿದ್ದಲ್ಲಿ ಕ್ಷಮಿಸಿ.


  • ಹೆಚ್ ವಿ ಮೀನಾ – ಪತ್ತೇದಾರಿ ಕಾರದಂಬರಿಗಾರ್ತಿ, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW