ತುಂಬಿ ಹರಿವ ನನ್ನ ಕಂಗಳಲ್ಲಿ ನನ್ನ ರಾಧಾ ಮಸುಕು ಮಸುಕಾಗಿ ಕಾಣುತ್ತಿದ್ದಳು. ಯಾರಿದು ರಾಧಾ? ಅವಳು ಎಲ್ಲಿ ಹೋದಳು…ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಅಂದು ನನ್ನ ರಾಧಾ ಆಸ್ಪತ್ರೆಯ ಬೆಡ್ ಮೇಲೆ ಈ ಪ್ರಪಂಚದ ಅರಿವಿಲ್ಲದೇ ಮಲಗಿದ್ಲು. ತಲೆ ಚಕ್ರ ಬಂದು ಕೊಟ್ಟಿಗೆಯ ಅಟ್ಟದಿಂದ ಕೆಳಗೆ ಬಿದ್ದದಷ್ಟೇ, ತಲೆಗೆ ತುಂಬಾ ಏಟು ಬಿದ್ದು ಜ್ಞಾನ ತಪ್ಪಿತ್ತು. ಹಾಗೇ ಆಸ್ಪತ್ರೆಗೆ ಸೇರಿಸಿದ್ವಿ. ಡಾಕ್ಟರ್ ಪ್ಲೀಸ್… ಹೇಗಾದರೂ ನನ್ನ ಹೆಂಡತಿಯನ್ನು ಉಳಿಸಿ ಕೊಡಿ. ವಯಸ್ಸಿನಲ್ಲಿ ಹಿರಿಯನಾದರೂ ನಿಮಗೆ ಕೈ ಮುಗಿವೆ. ತುಂಬಾ ದಯನೀಯವಾಗಿ ಬೇಡಿಕೊಂಡೆ ಡಾಕ್ಟರ್ ಹತ್ತಿರ. ಮಗ – ಸೊಸೆ ಕೂಡ ಎಷ್ಟೇ ದುಡ್ಡು ಖರ್ಚು ಆಗಲಿ. ಅವರನ್ನು ಉಳಿಸಿಕೊಡಿ. ಕೈಮುಗಿದು ಬೇಡಿಕೊಳ್ಳುತ್ತಿದ್ದರು.
‘ಮೊದಲೇ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಅವರೇನು ಯಂತ್ರವಾ? ವಯಸ್ಸು ಆಗ್ತಾ ಆಗ್ತಾ ನಮ್ಮೊಳಗಿನ ಮಷಿನ್ಗಳೂ ಸವೆಯುತ್ತವೆ ಅಲ್ವಾ? ನಾನೇನು ದೇವರಾ… ನನ್ನ ಪ್ರಯತ್ನ ನಾನು ಮಾಡ್ತೀನಿ. ಉಳಿದದ್ದು ಭಗವಂತನ ಇಚ್ಛೆ. ಅವನನ್ನು ಬೇಡಿಕೊಳ್ಳಿ’… ಎಂದು ಡಾಕ್ಟರ್ ಖಡಾಖಂಡಿತವಾಗಿ ಹೇಳಿ ಐಸಿಯು ಗೆ ತೆರಳಿದರು..
ನಾವೆಲ್ಲರೂ ರಾಧಾಳಿಗಾಗಿ ಮನದಲ್ಲಿ ಬೇಡುತ್ತಾ ನಿಂತೆವು ಅಸಹಾಯಕರಾಗಿ. ಒಂದು ಗಂಟೆ ಬಳಿಕ ಡಾಕ್ಟರ್ ಹೊರ ಬಂದರು. ಹೇಗಿದ್ದಾಳೆ ರಾಧಾ ಎಂದು ಅವಸರದಲ್ಲಿ ಕೇಳಿದೆ. ‘ಸ್ವಾರಿ, ರಮೇಶ್… ನಿಮ್ಮ ರಾಧಾನ ಉಳಿಸಿಕೊಳ್ಳಲಾಗಲೇ ಇಲ್ಲ. ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿದ್ವಿ. ಆದರೆ ಆಗಲಿಲ್ಲ. ವೆರಿ ಸ್ವಾರಿ… ಎಂದು ಹೇಳಿ ಹೊರ ನಡೆದರು ಡಾಕ್ಟರ್. ನನಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ.
ನನ್ನ ರಾಧಾನ ನಾನು ಕಳೆದುಕೊಂಡು ಅನಾಥವಾಗಿ ಬಿಟ್ಟೆ. ಅವಳು ಬದುಕಿದ್ದಾಗ ಒಂದೇ ಒಂದು ದಿನ ಅನ್ಯೂನ್ಯವಾಗಿ ನಡೆದುಕೊಳ್ಳಲಿಲ್ಲ. ಪ್ರೀತಿ ತೋರಿಸಲಿಲ್ಲ…ಈಗ ಅವಳ ಪ್ರೀತಿ, ಕಾಳಜಿ ಎಲ್ಲಾ ಅರ್ಥ ಆಗ್ತಿದೆ. ಈಗ ತುಂಬಾ ಪ್ರೀತಿಸಬೇಕು ಅನಿಸ್ತಿದೆ. ಆದರೆ ಅವಳೇ ಇಲ್ಲ. ಇದೂ ಒಂದು ಬದುಕು ನನ್ನದು. ಅವಳ ಪೋಟೋ ನೋಡಿದಾಗೆಲ್ಲ ಕಣ್ಣೀರು ಖೋಡಿಯಾಗಿ ಹರಿಯುತ್ತದೆ..
ನನ್ನ ಬಿಟ್ಟು ನಡೆದೆಯಾ ರಾಧಾ, ನೀ ಹೋಗುವೆ ಎಂದು ನನಗೆ ಅರಿವು ಮೂಡಿದ್ದರೆ ನಾನೂ ಬರ್ತಿದ್ದೆನಲ್ಲ ನಿನ್ನ ಜೊತೆಯಲ್ಲಿ… ಹೆಂಡತಿ ರಾಧಾಳ ಪೋಟೋ ನೋಡಿದಾಗೆಲ್ಲ, ನನ್ನೊಳಗೆ ಒಂದು ತರಹ ಅಪರಾಧಿ ಪ್ರಜ್ಞೆ ಕಾಡಿ,ದುಃಖ ಇಮ್ಮಡಿಯಾಗುತ್ತಿತ್ತು..
ನನ್ನ ರಾಧಾ ನನ್ನ ಕೈ ಹಿಡಿದು ನನ್ನ ಮಡದಿಯಾಗಿ ಬಂದಾಗ ಅವಳಿಗೆ ಕೇವಲ ಹದಿನೇಳು ವರ್ಷ ಮಾತ್ರ. ಈಗಿನ ಹುಡುಗಿಯರಿಗೆ ಹೋಲಿಸಿದರೆ,ಆಗಷ್ಟೇ ಕಾಲೇಜು ಸೇರಿ,ಬಣ್ಣ ಬಣ್ಣದ ಕನಸು ಕಾಣುತ್ತಾ,ಅಪ್ಪ, ಅಮ್ಮನ ಮುದ್ದಿನ ಮಗಳಾಗಿ ತಂಟೆ ಮಾಡುತ್ತಾ,ಮುದ್ದು ಮುದ್ದಾಗಿ ಬಾಳುವ ಕಿಶೋರಿಯರ ವಯಸ್ಸು. ಆದರೆ ನನ್ನ ರಾಧಾ ಹಾಗಲ್ಲ, ಘನ ಗಂಭೀರೆ..ಅಷ್ಟೇ ಮುಗ್ಧೆ.ಅವಳ ವಯಸ್ಸಿನ ಹೆಣ್ಣು ಮಕ್ಕಳಿಗೆ ಇಂದಿನಷ್ಟು ಸ್ವಾತಂತ್ರ್ಯ ಕೂಡ ಇರಲಿಲ್ಲ.. ಅಪ್ಪ ಅಂದರೆ ಮಾರು ದೂರ..ಆಗ ಬೆರಳೆಣಿಕೆಯಷ್ಟು ಮಂದಿ ಹೆಣ್ಣು ಮಕ್ಕಳು ಮಾತ್ರ,ಕಾಲೇಜು ಮುಖ ನೋಡುತ್ತಿದ್ದುದು.ಹತ್ತನೆ ತರಗತಿಯೇ ಕೊನೆ..ನನ್ನ ರಾಧಾ,ಓದಿನಲ್ಲಿ ಬುದ್ಧಿವಂತಳಾದರೂ,ಅಪ್ಪನ ಮಾತಿಗೆ ಬೆಲೆ ಕೊಟ್ಟು ಮನೆಕೆಲಸ ಕಲಿಯುತ್ತಾ ಮನೆಯಲ್ಲೇ ಉಳಿದಳು.
ಅಪ್ಪ, ಅಮ್ಮ ನೋಡಿದ ಹುಡುಗನಿಗೇ ಕೊರಳು ನೀಡಿ,ನನ್ನ ಮಡದಿಯಾಗಿ ನನ್ನ ಮನೆ ಬೆಳಗಲು ಬಂದಳು. ಕೂಡು ಕುಟುಂಬ ನಮ್ಮದು.ಅಷ್ಟು ಪುಟ್ಟ ವಯಸ್ಸಿಗೆ ಮನೆಯ ಹಿರಿ ಸೊಸೆಯಾಗಿ ಬಂದವಳು ನನ್ನ ರಾಧಾ. ಅವಳ ವಯಸ್ಸಿಗಿಂತ ಅವಳ ಜವಾಬ್ದಾರಿಯೇ ತುಂಬಾ ದೊಡ್ಡದಾಗಿತ್ತು. ಮನೆಗೆಲಸ, ಬಂಧು, ಬಳಗ, ಅತ್ತೆ, ಮಾವ, ಆಳು ಕಾಳು..ಅಬ್ಬಾ!!ಅದೆಷ್ಟು ಅಚ್ಚುಕಟ್ಟಾಗಿ ಕೆಲಸ ಕಲಿತಳೆಂದರೆ ಅವಳಿಲ್ಲದೇ ಅರೆ ಘಳಿಗೆ ಈ ಮನೆ ಸಹಿಸಿಕೊಳ್ಳಲಾರದಷ್ಟು ಎಲ್ಲರಿಗೂ ಅವಳೆಂದರೆ ಅಚ್ಚುಮೆಚ್ಚು.
ಆದರೆ, ನಾನು ಅವಳ ಗಂಡನಾಗಿ ಅವಳ ಆಸೆ ಆಕಾಂಕ್ಷೆಯನ್ನು ಗಮನಿಸಿಕೊಳ್ಳಲೇ ಇಲ್ಲ.. ಏನು ಬೇಕು? ಏನು ಬೇಡ? ಒಮ್ಮೊಮ್ಮೆ ನನಗೇ ಅನಿಸುತ್ತದೆ. ನಾನೊಬ್ಬ ನಾಲಾಯಕ್ ಗಂಡ ಅಂತ. ತವರಿಗೂ ಹೋಗುತ್ತಿರಲಿಲ್ಲ ನನ್ನ ರಾಧಾ. ತಾನಿಲ್ಲದೇ ಈ ಮನೆಯಲ್ಲಿ ಏನೂ ನಡೆಯದು ಎಂಬ ಕಾರಣಕ್ಕೆ. ಜ್ವರ ಬರಲಿ ಅನಾರೋಗ್ಯದಿಂದ ಬಳಲಿದರೂ ಒಂದು ದಿನ ಮಲಗಿದವಳಲ್ಲ. ಎಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋದಳು..ಸಾಯುವ ಘಳಿಗೆಯಲ್ಲೂ ದನಗಳಿಗೆ ಮೇವು, ನೀರು, ಆಳುಕಾಳುಗಳಿಗೆ ಊಟೋಪಚಾರ ಅಬ್ಬಾ!!ಎಂತ ದೈತ್ಯ ಶಕ್ತಿ ನೀನು ರಾಧಾ.
ನೀನು ಮರಳಿ ಬಾರದ ಲೋಕಕ್ಕೆ ಪಯಣಿಸುವ ತನಕವೂ ಅರೆಘಳಿಗೆ ಕೂತದ್ದು ನಾ ನೋಡಲಿಲ್ಲ. ಹೋಗುವ ದಿನದ ಕೆಲಸವನ್ನೂ ಪೂರ್ಣ ಮುಗಿಸಿಯೇ ಹೋದೆಯಲ್ಲ. ಕೊನೆಯಿಲ್ಲದ ಪಯಣವಿದು…ಈ ಜೀವನ…ನಿನ್ನ ಆತ್ಮ,ಒಳ್ಳೆಯ ಮನಸ್ಸು ಇರುವ ಮನೆಯಲ್ಲಿ ಹುಟ್ಟಲಿ…ನೀ ಬೆಳೆದು ದೊಡ್ಡವಳಾದ ಮೇಲೆ, ನನಗಿಂತಲೂ,ಪ್ರೀತಿಸಿ,ನಿನ್ನ ರಾಣಿಯ ತರಹ ನೋಡಿಕೊಳ್ಳುವ ಮನಸ್ಸೇ ದೊರಕಲಿ ನಿನಗೆ.ಈ ಜನುಮದಲ್ಲಂತೂ,ನಿನಗೆ ಸಾಸಿವೆಕಾಳಿನಷ್ಟು ವಿಶ್ರಾಂತಿ ದೊರಕಲಿಲ್ಲ. ಮುಂದಿನ ಜನುಮದಲ್ಲಾದರೂ ನಿನ್ನ ಬೇಕು, ಬೇಡಗಳ ಗಮನಿಸಿ, ಮುದ್ದು ಮಾಡಿ, ರಮಿಸುವ ಮನ ನಿನಗೆ ದೊರಕಲಿ ರಾಧಾ.
ಅಡುಗೆ ಮನೆಯಿಂದ, ತಮ್ಮನ ಹೆಂಡತಿಯ ಏರು ಧ್ವನಿ ಕೇಳುತ್ತಿತ್ತು. ಎಲ್ಲರೂ ಕೂತು ತಿನ್ನುವವರೇ..ಕೆಲಸ ಮಾಡುವವರು ಯಾರೂ ಇಲ್ಲ. ನಾನೇನು ಇಲ್ಲಿ ಆಳಾ…ನನಗೂ ಸುಸ್ತಾಗುತ್ತೆ. ಏನೇನೋ ಗೊಣಗಾಟಗಳು. ಒಳಗಿನ ಕೂಗು ಕೇಳಿ ಮತ್ತೆ ನನ್ನ ರಾಧಾಳ ನೋಡಿದೆ. ನನ್ನ ರಾಧಾ ಒಂದು ದಿನವೂ ಇಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡಿರಲಿಲ್ಲ. ಅವಳ ಬೆಲೆ ಈಗ ಅರಿವಾಗಿತ್ತು ನನಗೆ. ಕೊನೆಯಿಲ್ಲದ ಪಯಣವಿದು ಎಂದು ಬೇಗ ಹೊರಟೇ ಬಿಟ್ಟೆಯಲ್ಲ ರಾಧಾ. ಮನದಲ್ಲಿ ಅಂದು ಕೊಳ್ಳುತ್ತಿರುವಾಗಲೇ ತಮ್ಮ ಹೆಂಡಿತಿಗೆ ಹೇಳುತ್ತಿದ್ದ. ಅತ್ತಿಗೆ ಇರುವತನಕ ಈ ಮನೆ ಪ್ರಶಾಂತವಾಗಿತ್ತು. ಎಷ್ಟು ಚಂದ ತೂಗಿಸಿಕೊಂಡು ಹೋಗುತ್ತಿದ್ದಳು ಅಂತ. ತುಂಬಿ ಹರಿವ ನನ್ನ ಕಂಗಳಲ್ಲಿ ನನ್ನ ರಾಧಾ ಮಸುಕು ಮಸುಕಾಗಿ ಕಾಣುತ್ತಿದ್ದಳು…
- ಶೋಭಾ ನಾರಾಯಣ ಹೆಗಡೆ
