ಕೋಟೆ ಆಂಜನೇಯ ದೇವಸ್ಥಾನ

ಸುಮಾರು ೫೦೦ ವರ್ಷ ಪುರಾತನ ಅನಂದಪುರಂ ಕೋಟೆ ಆಂಜನೇಯ. ಕೋಟೆಯಲ್ಲಿ ನಿಧಿ ಸಿಕ್ಕಿದ ಜನಪದ ಕಥೆಯೂ ಇದೆ.ಕೋಟೆ ಆಂಜನೇಯ ದೇವಸ್ಥಾನದ ಕುರಿತು ಅರುಣ್ ಪ್ರಸಾದ್ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಆನಂದಪುರಂ ಕೆಳದಿ ಅರಸರ ಕೋಟೆಯ ಕೋಟೆ ಆಂಜನೇಯ ದೇವಸ್ಥಾನ ಸುಮಾರು 500 ವಷ೯ದಷ್ಟು ಪುರಾತನ ಇರಬಹುದು. 1938 ರಲ್ಲಿ ಶಿವಮೊಗ್ಗ ತಾಳಗುಪ್ಪ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಿಸುವಾಗ ಈ ಐತಿಹಾಸಿಕ ಕೋಟೆ ಸಂರಕ್ಷಿಸದೆ ಕೋಟೆ ಮಧ್ಯೆ ಸೀಳಿಕೊಂಡು ರೈಲು ಮಾರ್ಗ ನಿರ್ಮಿಸಿದ ಉದ್ದೇಶ ದುರಂತವೇ ರಾಜ ವೆಂಕಟಪ್ಪ ನಾಯಕರು ಈ ಕೋಟೆ (ಆಗ ಯಡೇಹಳ್ಳಿ ಕೋಟೆ ಅಂತ ಈ ಪ್ರದೇಶದ ಮೂಲ ಹೆಸರು) ಮತ್ತು ಹರತಾಳು ಪ್ರದೇಶ ಕಿರಾತಕರಿಂದ (ಚಿತ್ರದುರ್ಗದ ನಾಯಕರು ಇರಬಹುದು) ವಶಪಡಿಸಿಕೊಂಡು ಅಭಿವೃದ್ದಿ ಮಾಡಿದ ಇತಿಹಾಸದ ದಾಖಲೆಗಳು ಲಭ್ಯವಿದೆ.

ರಾಜ ವೆಂಕಟಪ್ಪ ನಾಯಕರಲ್ಲಿ ಮಹಾರಾಷ್ಟ್ರದ ರತ್ನಗಿರಿ ಮತ್ತು ಗೋವಾದಿಂದ ಪೋಚು೯ಗೀಸರ ಮತಾಂತರ ಪ್ರಯತ್ನಕ್ಕೆ ವಿರೋಧಿಸಿ ವಿಜಯನಗರ ಸಾಮ್ರಾಜ್ಯದಲ್ಲಿ ಆಸರೆ ಕೇಳಿ ಬಂದ ಕೋಟೆಕಾರರು (ರಾಮ ಕ್ಷತ್ರಿಯರು) ವಿಜಯನಗರದಿಂದ ಕೆಳದಿ ಅರಸರಲ್ಲಿಗೆ ಬರುತ್ತಾರೆ.

ಪ್ರಮುಖ ಕೆಲಸ ಕೋಟೆ ನಿರ್ಮಾಣ, ಟಂಕಸಾಲೆ ನಿರ್ವಹಣೆ, ದೇವಾಲಯ ನಿರ್ಮಿಸಿ ನಿರಂತರ ಪೂಜಾ ಕಾಯ೯ ವ್ಯವಸ್ಥೆ, ರಾಜರ ದರ್ಬಾರಿನ ಸುವ್ಯವಸ್ಥೆ, ಸೈನಿಕರ ತರಬೇತಿಯಲ್ಲಿ ಅವರು ಎತ್ತಿದ ಕೈ. ದೂರದ ಆಯೋಧ್ಯೆಯ ವಿರುದ್ದ ಮಹಾರಾಷ್ಟ್ರದ ವಿಜಯ ದುರ್ಗದ ಅರಸ ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಯುದ್ದ ಮಾಡಿ ಆಯೋಧ್ಯ ವಶಪಡಿಸಿಕೊಳ್ಳಲು ಹೋಗಿ ಭರತನಿಂದ ಸೋತಾಗ ಮಹಾರಾಷ್ಟ್ರದ ವಿಜಯ ದುಗ೯ದ ಕೋಟೆ ಆಯೋಧ್ಯ ಅರಸರ ವಶ ಆಗಿ ಅದನ್ನು ನಿರ್ವಹಿಸಲು ಆಯೋಧ್ಯದಿಂದ ಬಂದ ಸೈನ್ಯದ ತುಕಡಿಗೆ ಸ್ಥಳಿಯರು ರಾಮ ಕ್ಷತ್ರಿಯ ಎಂದು ಕರೆದರು. ಕೆಳದಿ ಸಂಸ್ಥಾನದ ಎಲ್ಲಾ ಕೋಟೆಗಳನ್ನು ನವೀಕರಿಸುತ್ತಾರೆ, ಹೊಸ ಕೋಟೆಗಳನ್ನು ಸ್ಥಳಿಯವಾಗಿ ಸಿಗುವ ಜಂಬಿಟ್ಟಿಗೆ ಕಲ್ಲಿನಿಂದ ಸುಂದರವಾಗಿ ನಿರ್ಮಿಸುತ್ತಾರೆ.

ಕೋಟೆಯ ಸುತ್ತಾ ಆಳದ ನೀರಿನ ಕಂದಕ, ಬಲವಾದ ಮುಖ್ಯದ್ವಾರ ದಾಟಿದಾಗಲೇ ಕೋಟೆಯ ರಕ್ಷಣೆಗಾಗಿ ಆಂಜನೇಯನ ವಿಗ್ರಹದ ಗುಡಿ ನಿರ್ಮಿಸುತ್ತಿದ್ದರು. ರೈಲು ಮಾರ್ಗ ಆನಂದಪುರಂ ಕೋಟೆ ಸೀಳಿ ನಿಮಿ೯ಸಿದ್ದರಿಂದ ಪುರಾತನ ಕೋಟೆ ಆಂಜನೇಯ ದೇವಾಲಯಕ್ಕೆ ದಾರಿಯೂ ಇಲ್ಲ, ರೈಲು ಹಳಿ ದಾಟಿ ಈ ದೇವಾಲಯಕ್ಕೆ ಭಕ್ತರು ಹೋಗಬೇಕಾಗಿದೆ.

ಕೋಟೆ ಒಳಗೆ ಕೆಳದಿ ರಾಜರು ತಾಂಡವೇಶ್ವರ ದೇವಾಲಯ ಕೂಡ ನಿರ್ಮಿಸಿರುತ್ತಾರೆ ಆದರೆ ಅದರ ಕುರುಹು ಇಲ್ಲಿಲ್ಲ. ಆನಂದಪುರಂನ ಆಯ್ಯಂಗಾರ್ ಕುಟುಂಬದ ಮುಖ್ಯಸ್ಥರು ಪಶು ಸಂಗೋಪನೆ ಮಾಡಿಕೊಂಡಿದ್ದಾಗ ನಿಧಿ ಸಿಕ್ಕಿತ್ತು ಎಂಬ ವದಂತಿಗಳಿತ್ತು, ಕೋಟೆ ಆಂಜನೇಯ ಅಯ್ಯಂಗಾರರ ಪೂರ್ವಿಕರ ಹತ್ತಿರ ನೇರ ಸಂಭಾಷಿಸುತ್ತಿದ್ದ ಎಂಬ ದಾಮಿ೯ಕ ನಂಬಿಕೆಯ ಕಥೆಯೂ ಇದೆ. ಇದಕ್ಕೆ ಪೂರಕ ಎನ್ನುವಂತೆ ಆನಂದಪುರಂನ ಭೂ ಮಾಲೀಕರು, ಇನಾಂದಾರರು, ಕೊಡುಗೆ ದಾನಿಗಳು, ಆನಂದಪುರಂನಲ್ಲಿ ಆಸ್ಪತ್ರೆ, ಪಶು ವೈದ್ಯ ಚಿಕಿತ್ಸಾಲಯ, ಶಾಲೆ ಇತ್ಯಾದಿ ನಿರ್ಮಿಸಿದ ರಾಮಕೃಷ್ಣಯ್ಯಂಗಾರ್ ರು ಕೋಟೆ ಆಂಜನೇಯನ ನಿತ್ಯ ಪೂಜೆ, ಆಂಜನೇಯ ಜಯಂತಿ ಮತ್ತು ನವರಾತ್ರಿಯಲ್ಲಿ 9 ದಿನ ಈ ಕುಟು೦ಬದವರು ಉಪವಾಸದಿಂದ ಸುಂದರ ಕಾ೦ಡ. ರಾಮಾಯಣ ಪರಾಯಣ ಮಾಡಿಸಿ ಕೋಟೆ ಆಂಜನೇಯ ದೇವರಿಗೆ ನೈವೇದ್ಯ ಮಾಡಿಸಿ ಊರವರಿಗೆ ಅನ್ನ ಸಂತರ್ಪಣೆಯನ್ನು ಆಗಿನ ಅವರ ರಾಮಕೃಷ್ಣಯ್ಯಂಗಾರ್ ಅಕ್ಕಿ ಗಿರಣಿ (ಈಗಿನ ಸಂತೋಷ್ ರೈಸ್ ಮಿಲ್ ) ಒಳಗಿನ ಅವರ ಮನೆಯಲ್ಲಿ ವ್ಯವಸ್ಥೆ ಮಾಡುತ್ತಿದ್ದರು, ಇದು ಅವರ ಪುತ್ರ ವೆಂಕಟಾಚಲಯ್ಯಂಗಾರ್ ಕಾಲದವರೆಗೆ ಮುಂದುವರಿದಿತ್ತು.

ಕೋಟೆಯ ನಿಧಿಯ ಇನ್ನೊಂದು ಕಥೆ ಕೂಡ ಜನರ ಬಾಯಲ್ಲಿ ಅನೇಕ ವರ್ಷ ಹರಿದಾಡಿತ್ತು ಸತ್ಯವೋ ಮಿತ್ಯವೋ ಗೊತ್ತಿಲ್ಲ ಅದೇನೆಂದರೆ ಈ ರೈಲು ಮಾರ್ಗದ ಕಾಮಗಾರಿ ಕೋಟೆ ಭಾಗದಲ್ಲಿ ಶೆಟ್ಟರೊಬ್ಬರು ವಹಿಸಿಕೊಂಡಿದ್ದರು, ಕೋಟೆ ರೈಲು ಮಾರ್ಗ ಇಬ್ಬಾಗ ಮಾಡುವಾಗ ದೊಡ್ಡ ನಿದಿ ಸಿಕ್ಕಿತು ನಂತರ ಅವರ ನಿರ್ಮಾಣ ಸಂಸ್ಥೆ ದೇಶದಲ್ಲೇ ದೊಡ್ಡ ಸಂಸ್ಥೆ ಆಯಿತು ಅಂತ. 1950-60 ರ ಅವಧಿಯಲ್ಲಿ ಶಿವಮೊಗ್ಗದ ಸಕ್ಕರೆ ಕಾರ್ಖಾನೆಯಲ್ಲಿ ದೊಡ್ಡ ಉದ್ಯೋಗಿ ಆಗಿ ನಂತರ ಉಗಾಂಡದ ಸಕ್ಕರೆ ಕಾರ್ಖಾನೆಯಲ್ಲಿ (ಹಿಂದಿ ಚಲನ ಚಿತ್ರ ನಟಿ ಮಮ್ತಾಜ್ ಪತಿಯದ್ದು) ಅನೇಕ ವರ್ಷ ಕೆಲಸ ನಿರ್ವಹಿಸಿದವರು ಕೋಟೆ ಆಂಜನೇಯ ದೇವಸ್ಥಾನ ನವೀಕರಣ ಮತ್ತು ಸುತ್ತಲೂ ಪಗಾರ ನಿಮಾ೯ಣ ಮಾಡಿದ್ದರು ಹಾಲಿ ರೈಲ್ವೆ ಇಲಾಖೆಯ ನಿವೃತ್ತರಾದ ರೈಲ್ವೇ ಚಂದ್ರಣ್ಣರ ಸಂಬಂದಿಗಳು.

ಸದರಿ ಕೋಟೆ ಆಂಜನೇಯ ದೇವಾಲಯದ ಬಹು ಭಾಗ ಬ್ರಾಡ್ ಗೇಜ್ ಕಾಮಗಾರಿಯಿಂದ ಒತ್ತುವರಿ ಆಗಿದೆ, ಉಗಾಂಡದ ಭಕ್ತರು ನಿಮಿ೯ಸಿದ ಪಗಾರ ಪೂರ್ಣ ರೈಲು ಮಾರ್ಗದ ಕಾಮಗಾರಿಗಾಗಿ ತೆಗೆದಿದ್ದಾರೆ, ಗರ್ಭಗುಡಿ ಕೂಡ ಶಿಥಿಲವಾಗಿದ್ದರಿಂದ ಸ್ಥಳಿಯ ಈ ದೇವಾಲಯದ ಭಕ್ತರು ಕೋಟೆ ಆಂಜನೇಯ ದೇವರ ಪರಮ ಭಕ್ತ ಮತ್ತು ಈ ದೇವರ ಹೆಸರಿನಲ್ಲೇ ಮಾರುತಿ ಇಂಡಸ್ಟ್ರೀಸ್ ಫ್ಯಾಕ್ಟರಿ ನಡೆಸುತ್ತಿರುವ ಪೂವಪ್ಪರ ಅಧ್ಯಕ್ಷತೆಯಲ್ಲಿ 17 ಜನರ ಟ್ರಸ್ಟ್ ಒಂದನ್ನು ರಚಿಸಿ ದೇವಾಲಯ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ವೆಂಕಟಾಚಲ ಅಯ್ಯಂಗಾರರ ಜೊತೆ 25 ವರ್ಷ ಸತತ ವಿಲೇಜ್ ಪಂಚಾಯಿತಿ ಸದಸ್ಯರಾಗಿದ್ದ ಜೋಗಿ ಹನುಮ೦ತಪ್ಪರ ಪುತ್ರ ನಾರಾಯಣ ಜೋಗಿ, ಈ ಭಾಗದಿಂದ ನಿರಂತರವಾಗಿ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆ ಆಗುತ್ತಿರುವ ಗುರುರಾಜ್, ಖ್ಯಾತ ವಿದ್ಯುತ್ ಗುತ್ತಿಗೆದಾರ ಶಿವಲಿಂಗಾಚಾರ್ ಸಹೋದರ ವಿಜೇಂದ್ರ, ಆನಂದಪುರಂನ ಹಿರಿಯ ಸಮಾಜ ಸುಧಾರಕಿಯವರಾದ ಶ್ರೀಮತಿ ಕೆರಿಯಮ್ಮರ ಪುತ್ರ ಲೋಕೇಶ್‌, ಕನ್ನಡ ಸಂಘದ ರಾಜೇಂದ್ರ ಗೌಡರು, ಲಕ್ಷ್ಮೀಷ್ ಮತ್ತು ಅನೇಕರು ಮುಂದಾಗಿದ್ದಾರೆ.

ಹಿಂದೆ ರಾಜ ವೆಂಕಟಪ್ಪ ನಾಯಕ ರಂಗೋಲಿ ಪ್ರವೀಣೆ ಸುಂದರಿ ಚಂಪಕಾಳೊಂದಿಗೆ ಮದುವೆ ಆಗಿ ಈ ಕೋಟೆಯಲ್ಲಿದ್ದದ್ದು ನಂತರ ಲೋಕನಿಂದೆಗಾಗಿ ಚಂಪಕ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಚಂಪಕಾಳ ಸ್ಮರಣಾಥ೯ ಚಂಪಕಾ ಸರಸ್ಸು (ಜನರ ಬಾಯಲ್ಲಿ ಮಹಂತನ ಮಠ) ನಿರ್ಮಿಸಿದರು.

ರಾಣಿ ಚಂಪಕಳ ನೆನಪಿಗಾಗಿಯೇ ಕೆಳದಿ ಅರಸರಾದ ವೆಂಕಟಪ್ಪ ನಾಯಕರು ಈ ಪ್ರದೇಶದ ಹಳೇ ಹೆಸರು ಯಡೇಹಳ್ಳಿ ಕೋಟೆ ಎಂಬುದನ್ನು ಬದಲಿಸಿ ಆನಂದಪುರಂ ಎಂದು ಪುನರ್ ನಾಮಕರಣ ಮಾಡಿದರು 500 ವರ್ಷದ ಪುರಾತನ ಆನಂದಪುರಂ ಕೋಟೆ ಆಂಜನೇಯ ದೇವಾಲಯಕ್ಕೆ ಅಪಾರ ಭಕ್ತರು ಇದ್ದಾರೆ. ಊರಿನ ಇತಿಹಾಸಕ್ಕಾಗಿಯೂ ಈ ದೇವಾಲಯ ಸಂರಕ್ಷಿಸುವ ಕೆಲಸ ಆಗಬೇಕಾಗಿದೆ.


  • ಅರುಣ್ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading