ಬದುಕಿರೋವರೆಗೂ ದ್ವೇಷ, ಅಸೂಯೆ, ನಾನೊಬ್ಬನೇ ಬೆಳೆಯಬೇಕು ಎನ್ನುವ ಸ್ವಾರ್ಥವನ್ನು ಬಿಟ್ಟು, ನಿಮ್ಮಿಂದ ಒಬ್ಬನಿಗೆ ಕೆಲಸ ಕೊಡೋಕೆ ಸಾಧ್ಯವಾದರೆ ಕೆಲಸ ಕೊಡಿ. ಅವನ ಬಾಳಿಗೆ ನೀವೇ ನಂದಾ ದೀಪವಾಗಿ ಎನ್ನುತ್ತಾ ನನ್ನ ‘ಬದುಕು ಅಂದ್ರೆ ಹೀಗೇನೆ ಭಾಗ೨ ನ್ನು ತಪ್ಪದೆ ಮುಂದೆ ಓದಿ…
ಸೋಫಾದವನು ಬರತ್ತಾನೋ… ಇಲ್ವೋ… ಅನ್ನೋ ಭಯದಲ್ಲಿ ಬಾಲ ಸುಟ್ಟ ಬೆಕ್ಕಿನಂತೆ ಮನೆ ಒಳಗೆ ಹೊರಗೆ ಓಡಾಡುತ್ತಿದ್ದೆ. ಗೇಟಿನ ಬಳಿ ಬಂದು ಇಣುಕಿ ನೋಡೋದು, ಒಳಕ್ಕೆ ಹೋಗಿ ಕೂಡೋದು ಇದೆ ಕೆಲಸವಾಗಿತ್ತು. ಈ ತರ ನಾನು ಯಾರಿಗೂ ಕಾಯ್ದಿರಲಿಲ್ಲ. ಅದರಲ್ಲೂ ಪಾಪದ ನನ್ನ ಗಂಡನಿಗೂ ಇಲ್ಲ. ಯಾರೋ ದಾರಿಹೋಕನಿಗೆ ಕಾಯೋ ಪರಿಸ್ಥಿತಿ ಬಂತಲ್ಲಾ ಅಂತ ನನ್ನನ್ನು ನಾನು ಬೈದುಕೊಂಡೆ. ದುಡ್ಡು ಹೋಯ್ತಲ್ಲಾ ಅನ್ನೋ ನೋವಿಗೆ ಕಣ್ಣಿಂದ ನೀರು ಧುಮ್ಮಿಕಿ ಬರಬೇಕು, ಆಗ ದೇವರಿಗೂ ನನ್ನ ಪರದಾಟ ಅರ್ಥವಾಯಿತೇನೋ ದೂರದಲ್ಲಿ ಸೋಫಾದವನು ತನ್ನ ಆಕ್ಟಿವ್ ಗಾಡಿಯಲ್ಲಿ ಬರುವುದು ಕಾಣಿಸಿತು. ಅವನನ್ನು ನೋಡುತ್ತಿದ್ದಂತೆ ನನ್ನ ಸಂತೋಷಕ್ಕೆ ಪಾರವೇ ಇಲ್ಲದೆ ಅವನನ್ನು ಆದರದಿಂದ ಮನೆ ಒಳಗೆ ಸ್ವಾಗತಿಸಿದೆ.
‘ಮೇಡಂ…ರಸ್ತೆಯಲ್ಲಿ ಗಾಡಿ ಕೆಟ್ಟು ಹೋಗಿತ್ತು. ಹಾಗಾಗಿ ಲೇಟ್ ಆಯ್ತು’… ಅಂತ ನಾನು ಪ್ರಶ್ನೆ ಕೇಳೋ ಮೊದಲೇ ಉತ್ತರ ಕೊಟ್ಟ. ‘ಸರಿ… ನಿಮ್ಮ ಕೆಲಸ ಶುರು ಮಾಡ್ಕೊಳ್ಳಿ’…. ಅಂತ ಅವನ ಮುಂದೆ ಖುರ್ಚಿ ಹಾಕೊಂಡು ಅಲ್ಲೇ ಲ್ಯಾಪ್ ಟಾಪ್ ಹಿಡ್ಕೊಂಡು ಕೂತೆ. ಒಳಗೆ ಕೂತ್ರೆ ಮನೆ ಸಾಮಾನು ಅವನ ಬ್ಯಾಗ್ ಸೇರಿದ್ರೆ ಅನ್ನೋ ಭಯಕ್ಕೆ ಅವನ ಮುಂದೆ ಕೂತೋಳು ಅಲ್ಲಾಡಲಿಲ್ಲ.
ಅವನು ಖುಷಿಯಿಂದ ಕೆಲಸ ಶುರು ಮಾಡಿದ. ಕೆಲಸದ ಮಧ್ಯೆ ಮಧ್ಯೆ ನಮ್ಮಿಬ್ಬರ ಮಾತು ಶುರುವಾಯಿತು. ‘ಮೂಲತಃ ಎಲ್ಲಿಯವನು?’… ಎಂದು ಕೇಳಿದ್ದಕ್ಕೆ ‘ತಮಿಳುನಾಡು ಮೇಡಂ, ನಮ್ಮ ಅಪ್ಪನೂ ಇದೆ ಕೆಲಸ. ನಾವು ಚಿಕ್ಕೋರಿದಾಗ್ಲೇ ನಮ್ಮಪ್ಪ ಬೆಂಗಳೂರು ಬಂದು ಬಿಟ್ರು. ಹಾಗಾಗಿ ಈಗ ನಾನು ಅಪ್ಪಟ ಕನ್ನಡಿಗ ಮೇಡಂ’ ಅಂತ ನಗುತ್ತಾ ಹೇಳಿದ. ಕನ್ನಡದವನು ಅಂದ್ರೆ ನಮ್ಮನ್ನ ಕೇಳ್ಬೇಕಾ?!…ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತೆ. ಹಾಗೆ ನಮ್ಮ ಮಾತು ಮುಂದುವರೆಯಿತು ‘ಎಷ್ಟು ಜನ ಮಕ್ಕಳು?… ಏನ್ ಓದತ್ತಾ ಇದ್ದಾರೆ’… ಅಂತ ಅವನ ಅವನ ಕಷ್ಟ ಸುಖ ಕೇಳಿದೆ. ‘ಮೊದಲನೆಯವನಿಗೆ ಏಳು ವರ್ಷ, ಎರಡನೆಯವನಿಗೆ ಐದು ವರ್ಷ, ಮೂರವನೆಯನಿಗೆ ಈಗ ಒಂದು ವರ್ಷ. ಮೂರು ಗಂಡು ಮಕ್ಕಳೇ …ಮೇಡಂ. ನಂಗೆ ತಂಗಿ ಮೇಲೆ ಬಾಳ ಪ್ರೀತಿ ಇತ್ತು. ಮದುವೆ ಮಾಡಿ ಕೊಟ್ಟ ಮೇಲೆ ನಂಗೊಂದು ಹೆಣ್ಣು ಆಗ್ಲಿ ಅಂತ ತುಂಬಾ ಆಸೆಯಿಂದ ಮೂರು ಮಕ್ಕಳು ಮಾಡ್ಕೊಂಡೆ…ಆದ್ರೆ ಏನ್ ಮಾಡೋದು ದೇವರು ಕಣ್ಣು ತೆರೆಯಲಿಲ್ಲ. ಮೂರೂ ಗಂಡು ಕೊಟ್ಟ’… ಅಂತ ಹಲ್ಲು ಗಿಂಜಿದ. ‘ನಾಲ್ಕನೆಯದು ಹೆಣ್ಣು ಮಗು ಆಗ್ತಿತ್ತೋ ಏನೋ… ನೋಡ್ಬೇಕಿತ್ತು… ಅಂತ ಅವನ ಆಸೆಗೆ ನಾನು ಸ್ವಲ್ಪ ರೆಕ್ಕೆ ಪುಕ್ಕ ಕಟ್ಟಿದೆ. ಅದಕ್ಕೆ ಅವನು ‘ಅದೇ… ಅನ್ಕೊಂಡೆ ಮೇಡಂ… ಆದ್ರೆ ನಮ್ಮತ್ತೆ ಬಿಡ್ಲಿಲ್ಲ. ಅದು ಗಂಡು ಆದ್ರೆ ಏನ್ ಮಾಡ್ತಿಯಾ?… ಅಂತ ಜೋರ್ ಮಾಡಿ ಹೆಂಡತಿಗೆ ಎಳ್ಕೊಂಡು ಹೋಗಿ ಆಪರೇಷನ್ ಮಾಡಿಸಿದ್ರು ಮೇಡಂ’… ಅಂದ. ಅವನ ಮಾತಿನಲ್ಲಿ ಕಪಟತನವಿರಲಿಲ್ಲ, ಮುಗ್ದತೆ ಇತ್ತು, ಕುಟುಂಬದ ಮೇಲೆ ಕಾಳಜಿ ಕಾಣಿಸಿತು.
‘ನಿಮ್ದು, ಅಂಗಡಿ ಇಲ್ವಲ್ಲಾ… ಜನ ನಿಮ್ಮನ್ನ ನಂಬಿ ಕೆಲಸ ಕೊಡ್ತಾರಾ?… ವ್ಯಾಪಾರ ಆಗುತ್ತಾ’… ಅಂತ ಕೇಳಿದೆ. ‘ಏನೋ ನಿಮ್ಮಂತವರು ನಂಬಿ ಕೆಲಸ ಕೊಡ್ತಾರೆ ಮೇಡಂ. ಕೆಲವೊಬ್ಬರು ನನ್ನ ಹೊಲಿಗೆ ಮಿಷಿನ್ ಅವರ ಮನೆಯಲ್ಲಿಯೇ ಇಟ್ಟಿ ಹೋಗ್ತೀನಿ ಅಂದ್ರು ನಂಬೋಲ್ಲ. ಹೊಲಿಗೆ ಮಿಷಿನ್ ನನಗೆ ಅನ್ನ ಹಾಕೋದು. ಮೋಸ ಮಾಡಿ ಏನು ಸಿಗೋಲ್ಲ… ಅಂಗಡಿ ಹಾಕೋಕೆ ಬಂಡವಾಳ ಇಲ್ಲಾ… ತಿಂಗಳು ತಿಂಗಳು ಬಾಡಿಗೆ, ಕರೆಂಟ್ ಬಿಲ್ ಕಟ್ಟಬೇಕು. ವ್ಯಾಪಾರ ಒಮ್ಮೆ ಆದ್ರೆ ಇನ್ನೊಮ್ಮೆ ಆಗೋಲ್ಲ, ಅದಕ್ಕೆ ಅಂಗಡಿ ಮಾಡಿಲ್ಲ’… ಅಂತ ತನ್ನ ಕಷ್ಟ ಹೇಳಿಕೊಂಡ.
ಅವನ ಕಷ್ಟ ಕೇಳಿದ್ಮೇಲೆ, ನಾವು ನಮ್ಮ ಮಕ್ಕಳಿಗೆ ಪಿಜ್ಜಾ, ಬರ್ಗರ್ ಅಂತ ಹಾಳು ಮುಳು ತಿಂಡಿಗೆ ಎಷ್ಟೆಲ್ಲ ಖರ್ಚು ಮಾಡ್ತೀವಿ. online ಲ್ಲಿ ಬಟ್ಟೆ ಅಂತ ಆರ್ಡರ್ ಮಾಡಿ ಸರಿಹೋಗಿಲ್ಲ ಅಂತ ಉಪಯೋಗಿಸದೆ ಬಿಸಾಗ್ತೀವಿ. ಅದೇ ನಾವು ಒಬ್ಬನಿಗೆ ನಂಬಿ ಕೆಲಸ ಕೊಟ್ರೆ ಅವನ ಕುಟುಂಬ ಒಂದು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತೆ ಅಲ್ವಾ ಅಂತ ನನ್ನ ಮನಸ್ಸು ನನಗೆ ತಿವಿದು ಬುದ್ದಿ ಹೇಳಿತು.
ಅವನನ್ನು ನಂಬಿದಕ್ಕೆ ನಾನು ಮೋಸ ಹೋಗಲಿಲ್ಲ. ಅವನು ಹೇಳಿದಂತೆ ಎರಡು ದಿನದಲ್ಲಿ ಸೋಫಾ ರೆಡಿ ಮಾಡಿಕೊಟ್ಟ ಎನ್ನುವ ಸಂತಸ. ಅವನ ಕೆಲಸ ಅವನ ಶ್ರದ್ದೆ ನೋಡಿ ಪದ್ದಣ್ಣ ಫುಲ್ ಖುಷಿಯಾಗಿ “ನೋಡು ದೇವಿ …ನಿನ್ನ ಬರ್ತ್ ಡೇ ಗೆ ಈ ಸೋಫಾ ಗಿಫ್ಟ್ ಕೊಟ್ಟಿದೀನಿ, ಬರ್ತ್ ಡೇ ಗೆ ಗಿಫ್ಟ್ ಏನು ಕೊಟ್ಟಿಲ್ಲ ಅಂತ ಎಲ್ಲರು ಮುಂದು ಹೇಳ್ಕೊಂಡು ಬರಬೇಡ ” ಅಂದ. ಎಲ್ಲರೂ ಬರ್ತ್ ಡೇ ಗೆ ಹೆಂಡತಿಗೆ ಬಟ್ಟೆ, ಬಂಗಾರ ಅಂತ ಕೊಡಿಸಿದ್ದು ಕೇಳಿದ್ದೆ, ನೋಡಿದ್ದೇ. ಆದರೆ ಈ ತರ ಹೆಂಡತಿಗೆ ಸೋಫಾ ಗಿಫ್ಟ್ ಕೊಟ್ಟ ಮೊದಲ ಗಂಡ ಅಂದ್ರೆ ನನ್ನ ಪದ್ದಣ್ಣನೇ ಇರಬೇಕು. ಹೊಸ ಸೋಫಾ ಗಿಫ್ಟ್ ಆಗಿ ಸಿಕ್ಕ ಖುಷಿಗೆ ಸೋಫಾ ಮೇಲೆ ಪದ್ದಣ್ಣ, ಮಕ್ಕಳಿಗೆ ಕೂಡೋಕೆ ಬಿಡೋಲ್ಲ ಅಂತ ಕರಾರು ಹಾಕಿದೆ. ಯಾಕೆಂದರೆ ಅದು ನನ್ನ ಗಿಫ್ಟ್ ಅಲ್ವಾ.
ಇನ್ನೂ ಅಕ್ಕಾ ಪಕ್ಕದವರು, ನನ್ನ ಸ್ನೇಹಿತರು ಸೋಫಾ ನೋಡಿದ್ಮೇಲೆ ಅವನಿಗೆ ತಮ್ಮ ಮನೆಯ ಸೋಫಾ ಕೆಲಸ ಕೊಟ್ಟಿದ್ದಾರೆ. ಕೆಲಸ ಸಿಕ್ಕ ಸಂತೋಷದಲ್ಲಿ ಅವನ ಮುಖ ಅರಳಿತು. ಅದನ್ನು ನೋಡಿದಾಗ ನನಗೆ ಅನಿಸಿದ್ದು ದುಡಿಯುವ ಕೈಗಳಿಗೆ ಭಿಕ್ಷೆ ಅಲ್ಲ, ಕೆಲಸ ಬೇಕು ಅಷ್ಟೇ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಕಟ್ಟಿ ಕೊಳ್ಳಲು ಒಂದು ಅವಕಾಶ ಎಲ್ಲರೂ ಕೊಟ್ಟಿ ನೋಡೋಣ. ಹಾಗಂತ ನನ್ನ ಸಮಯದಲ್ಲೂ ಬಂಡ ಧೈರ್ಯ ಕೈ ಹಿಡಿಯೋಲ್ಲ ಅಂತ ಗೊತ್ತು. ನಿಮ್ಮ ಜಾಗ್ರತೆಯಲ್ಲಿ ನೀವು ಇರಿ…ಆಗೊಮ್ಮೆ ಈಗೊಮ್ಮೆ ಜನರನ್ನು ನಂಬಿ, ಯಾರಿಗೆ ಗೊತ್ತು ಅವನ ಮನೆಯ ನಂದಾ ದೀಪವಾಗಿ ಅವನ ಮನೆ ನೀವು ಬೆಳಗಬಹುದು.
ಅದೇ ತರ ಪ್ರೀತಿ, ವಿಶ್ವಾಸ ನಿಂತಿರುವುದು ನಂಬಿಕೆ ಮೇಲೆ. ಆ ನಂಬಿಕೆ ಮುರಿಯುವ ಪ್ರಯತ್ನ ಯಾರು ಮಾಡಬೇಡಿ ಎಂದು ಹೇಳುತ್ತಾ ದುಡಿಯುವ ಕೈಗಳಿಗೆ ಶುಭವಾಗಲಿ …ಅಂದಹಾಗೆ ಹಳೆ ಸೋಫಾವನ್ನು ಹೊಸ ಸೋಫಾವನ್ನಾಗಿ ಮಾಡಿ ಕೊಟ್ಟ ಆ ಹುಡುಗನ ಹೆಸರು ರಾಜೇಶ್.
- ಶಾಲಿನಿ ಹೂಲಿ ಪ್ರದೀಪ್